Monday, March 8, 2010

ಇಂದಿನ ಇತಿಹಾಸ History Today ಮಾರ್ಚ್ 08


ಇಂದಿನ ಇತಿಹಾಸ

ಮಾರ್ಚ್ 08

ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಪೆಯರ್ ಗಾರ್ಡನ್ನಿನಲ್ಲಿ ನಡೆದ ಸ್ಪರ್ಧೆಯಲ್ಲಿ 15 ಸುತ್ತುಗಳಲ್ಲಿ ಜೋ ಫ್ರೇಜಿಯರ್ ಅವರು ಮಹಮ್ಮದ್ ಅಲಿಯನ್ನು ಪರಾಭವಗೊಳಿಸಿ ಜಗತ್ತಿನ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

2009: ಎಲ್‌ಟಿಟಿಇಯ ಕೊನೆಯ ಭದ್ರನೆಲೆಯಾದ ಮುಲೈತ್ತೀವು ಪ್ರದೇಶ ಸ್ವಾಧೀನಪಡಿಸಿಕೊಳ್ಳಲು ಲಂಕಾಪಡೆ ನಡೆಸಿದ ಹೋರಾಟ ನಿರ್ಣಾಯಕ ಘಟ್ಟ ತಲುಪಿತು. ಕೆಲವು ದಿನಗಳಿಂದ ಇಲ್ಲಿ ಸೇನೆ ಹಾಗೂ ಬಂಡುಕೋರರ ನಡುವೆ ಮತ್ತೆ ಆರಂಭಗೊಂಡ ಕಾಳಗದಲ್ಲಿ 100ಕ್ಕೂ ಅಧಿಕ ಎಲ್‌ಟಿಟಿಇ ಉಗ್ರರು ಮೃತಪಟ್ಟಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿತು. ಲಂಕಾಪಡೆಯು ಮುಲೈತ್ತೀವುನಿಂದ 50 ಚದರ ಕಿ.ಮೀ ಗಿಂತಲೂ ಕಡಿಮೆ ಅಂತರದಲ್ಲಿದ್ದು ಸೇನೆಯನ್ನು ಹಿಮ್ಮೆಟ್ಟಿಸುವ ಬಂಡುಕೋರರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು. ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವವರಲ್ಲಿ 30 ಬಂಡುಕೋರರ ದೇಹಗಳು ದೊರೆಕಿವೆ ಎಂದು ಪ್ರಕಟಿಸಲಾಯಿತು.

2008: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಿದರು. ಹಲವು ದಿನಗಳಿಂದ ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಳ್ಳದೆ, ಅತಂತ್ರರಾಗಿದ್ದ ಪ್ರಕಾಶ್ ಮತ್ತು ಅವರ ಬಣದ ಮುಖಂಡರು ಕಾಂಗ್ರೆಸ್ ಸೇರುವುದರ ಮೂಲಕ, ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಕ್ಕೂ ತೆರೆ ಎಳೆದರು. ಎರಡು ಅಥವಾ ಮೂರು ದಿನದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದ ಪ್ರಕಾಶ್ ಅವರು ತರಾತುರಿಯಲ್ಲಿ ಈದಿನ ಮಧ್ಯಾಹ್ನವೇ ಬೆಂಬಲಿಗರ ಜತೆ ಕಾಂಗ್ರೆಸ್ ಸೇರಿದ್ದು ವಿಶೇಷವಾಗಿತ್ತು.

2008: ನಾಗರಹೊಳೆ ವನ್ಯಜೀವಿ ವಿಭಾಗದ ಆನೆಚೌಕೂರು ಮತ್ತಿಗೋಡು ಅರಣ್ಯ ಹಾಗೂ ಕುಶಾಲನಗರ ಸಮೀಪದ ಆನೆಕಾಡು ಮೀಸಲು ಅರಣ್ಯಕ್ಕೆ ಬಿದ್ದ ಬೆಂಕಿ ಈದಿನವೂ ಧಗಿಧಗಿಸಿ ಉರಿಯಿತು. ವೀರನಹೊಸಳ್ಳಿ ವಲಯದ ಕೆಲವು ಭಾಗದಲ್ಲಿ ಕಾಡಿಗೆ ಬೆಂಕಿ ತಗಲಿತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೂ ಬೆಂಕಿ ಕಾಣಿಸಿಕೊಂಡಿತು.

2008: ಮೇಘಾಲಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪೈಪೋಟಿ ಹೊಸ ತಿರುವು ಪಡೆದುಕೊಂಡಿತು. 60ಸದಸ್ಯ ಬಲದ ವಿಧಾನ ಸಭೆಯಲ್ಲಿ ಒಟ್ಟು 31 ಮಂದಿ `ಮೇಘಾಲಯ ಪ್ರಗತಿ ಪರ ಮೈತ್ರಿಕೂಟ' ಎಂಬ ಹೆಸರಿನಲ್ಲಿ ರಾಜ್ಯಪಾಲ ಎಸ್ ಎಸ್ ಸಿದ್ದು ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಯುಡಿಪಿಯ ಅಧ್ಯಕ್ಷ ಡೊಂಕುಪಾರ್ ರಾಯ್ ನೇತೃತ್ವದಲ್ಲಿ ಈ ಶಾಸಕರು ರಾಜ್ಯಪಾಲರ ಎದುರು ಹಾಜರಾದರು.

2008: `ಹಿಮೋಗ್ಲೋಬಿನ್ ಕೊರತೆ'ಯ ರೋಗವು ಅಷ್ಟೇನೂ ಸುದ್ದಿಯಲ್ಲಿ ಇಲ್ಲದೇ ಇದ್ದರೂ ಭಾರತದಲ್ಲಿ ಹೃದಯ ಬೇನೆ ಮತ್ತು ಕ್ಯಾನ್ಸರಿನಷ್ಟೇ ವ್ಯಾಪಕವಾಗಿದೆ. ರಕ್ತಕ್ಕೆ ಕೆಂಪುವರ್ಣ ಕೊಡುವ ಅಥವಾ ದೇಹದೊಳಗೆ ಅತಿ ಅಗತ್ಯವಾದ ಕೆಂಪು ರಕ್ತಕಣಗಳಾದ ಹಿಮೋಗ್ಲೋಬಿನ್ ಕೊರತೆಯ ರೋಗವು ವಂಶಪಾರಂಪರ್ಯವಾಗಿ ಬರುವುದೇ ಹೆಚ್ಚು. ಈ ರೋಗದಿಂದ ಪ್ರಸಕ್ತ ದೇಶದಲ್ಲಿ 3.7 ಕೋಟಿ ಮಂದಿ ಬಳಲುತ್ತಿದ್ದಾರೆ. ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಪ್ರಾಧ್ಯಾಪಕ ಐ ಸಿ ವರ್ಮ ಪ್ರಕಾರ `ಪಶ್ಚಿಮ ಬಂಗಾಳದ ದಕ್ಷಿಣ 24ನೇ ಪರಗಣ ಜಿಲ್ಲೆಯೊಂದರಲ್ಲಿಯೇ ಒಂದು ಅಧ್ಯಯನದ ಪ್ರಕಾರ ಸುಮಾರು ಶೇಕಡಾ 13.7ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.

2008: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸುವ ಏರ್ ಇಂಡಿಯಾ ವಿಮಾನವೊಂದು ಈದಿನ ಚೆನ್ನೈಯಿಂದ ಕೊಲಂಬೊಗೆ ತೆರಳಿತು. ಕ್ಯಾಪ್ಟನ್ ಎಂ.ದೀಪಾ ಮತ್ತು ಫ್ಲೈಟ್ ಆಫೀಸರ್ ಎನ್. ಆರ್. ವೇದಾ ಬಕಾವತಿ ಹಾಗೂ ಇತರ ಮಹಿಳಾ ಸಿಬ್ಬಂದಿಯನ್ನು ಈ ವಿಮಾನವು ಒಳಗೊಂಡಿತ್ತು ಎಂದು ನ್ಯಾಷನಲ್ ಅವಿಯೇಷನ್ ಕಂಪೆನಿಯ ಪ್ರಕಟಣೆ ತಿಳಿಸಿತು. ಗಗನಸಖಿಯರು, ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ಪ್ರಯಾಣಿಕರನ್ನು ಕೊಲಂಬೊದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗುಲಾಬಿ ಹೂವಿನೊಂದಿಗೆ ಸ್ವಾಗತಿಸಲಾಯಿತು.

2008: ತಾನು ಪಾಕಿಸ್ಥಾನದಲ್ಲಿ ಗೂಢಚರ್ಯೆ ನಡೆಸುತ್ತಿದ್ದೆ ಎಂಬ ಅರ್ಥ ಬರುವಂತೆ ಪ್ರಕಟವಾದ ತಮ್ಮ ಕುರಿತಾದ ಸುದ್ದಿಗಳು ತಿರುಚಿ ಬರೆಯಲ್ಪಟ್ಟಿವೆ ಎಂದು ಪಾಕಿಸ್ಥಾನದಲ್ಲಿ 35ವರ್ಷಗಳ ಜೈಲುವಾಸದ ನಂತರ ಬಿಡುಗಡೆಗೊಂಡು ಭಾರತಕ್ಕೆ ಬಂದ ಕಾಶ್ಮೀರ ಸಿಂಗ್ ಸ್ಪಷ್ಟ ಪಡಿಸಿದರು. ನಾನು ಭಾರತದ ಗೂಢಚಾರಿಯಲ್ಲ ಎಂದು ಕಳೆದ 35 ವರ್ಷಗಳ ಕಾಲ ಪಾಕಿಸ್ಥಾನ ಜೈಲಿನಲ್ಲಿ ಹೇಳುತ್ತಾ ಬಂದಿದ್ದ ಕಾಶ್ಮೀರ ಸಿಂಗ್ ತಾನು ಪಾಕಿಸ್ಥಾನದಲ್ಲಿ ಗೂಢಚರ್ಯೆ ನಡೆಸಲಿಕ್ಕಾಗಿಯೇ ಭಾರತ ಸರ್ಕಾರದಿಂದ ಮಾಸಿಕ 400 ರೂಪಾಯಿಗಳ ವೇತನ ಪಡೆಯುತ್ತಿದ್ದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

2008: ಸುಮಾರು 65 ವರ್ಷದ ವೃದ್ಧೆಯ ಅಂಡಾಶಯದಲ್ಲಿ (ಓವರಿ) ಬೆಳೆದಿದ್ದ 26 ಕೆಜಿ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ರಾಯಚೂರಿನ ನವೋದಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು ಯಶಸ್ವಿಯಾಯಿತು. ನವೋದಯ ಆಸ್ಪತ್ರೆ ಆರಂಭಗೊಂಡ ಬಳಿಕ ಇಷ್ಟೊಂದು ದೊಡ್ಡ ಗಡ್ಡೆಗೆ ಶಸ್ತ್ರಚಿಕಿತ್ಸೆ ನಡೆದಿರಲಿಲ್ಲ. ಇದೊಂದು ವಿಶೇಷ ಪ್ರಕರಣವಾಗಿದ್ದು, ಒಂದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ಸು ಕಂಡಿದ್ದೇವೆ ಎಂದು ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಶಸ್ತ್ರ ಚಿಕಿತ್ಸಾ ತಜ್ಞ ಡಾ ವೀರೇಶ ಹಿರೇಮಠ ತಿಳಿಸಿದರು. ಶಸ್ತ್ರಚಿಕಿತ್ಸೆಗೊಳಗಾದ ವೃದ್ಧೆ ಸಿಂಧನೂರ ಸಮೀಪದ ಬಾಲಾ ಕ್ಯಾಂಪ್ ನಿವಾಸಿ ಮರಿಯಮ್ಮ. ಮಾರ್ಚ್ 6ಂದು ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು.

2008: ತ್ರಿಪುರ ವಿಧಾನಸಭೆಗೆ ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷವು ಬಹುಮತ ಗಳಿಸಿತು. ಈ ಪಕ್ಷದ ಮಾಣಿಕ್ ಸರ್ಕಾರ್ ಸತತ ಮೂರನೇ ಬಾರಿಗೆ ಈ ಪುಟ್ಟ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲು ಸಜ್ಜಾದರು.

2008: ಜಾಗತಿಕ ಚೆಸ್ ಕ್ರೀಡೆಯಲ್ಲಿ ತನ್ನ ಪ್ರಭುತ್ವ ಏನೆಂಬುದನ್ನು ಮತ್ತೊಮ್ಮೆ ಪ್ರಚುರಪಡಿಸಿದ ಭಾರತದ ವಿಶ್ವನಾಥನ್ ಆನಂದ್ ಸ್ಪೇನಿನ ಲಿನಾರೆಸಿನಲ್ಲಿ ಕೊನೆಗೊಂಡ ಮೊರೆಲಿಯಾ- ಲಿನಾರೆಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ಅಂತಿಮ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಬಲ್ಗೇರಿಯದ ವೆಸೆಲಿನ್ ಟೊಪಲೊವ್ ಜೊತೆ ಡ್ರಾ ಸಾಧಿಸಿದರು. ಇದರೊಂದಿಗೆ ಸಾಧ್ಯವಿರುವ 14 ಪಾಯಿಂಟುಗಳಲ್ಲಿ 8.5 ಪಾಯಿಂಟ್ ಗಿಟ್ಟಿಸಿಕೊಂಡ ಭಾರತದ ಗ್ರ್ಯಾಂಡ್ ಮಾಸ್ಟರ್ ಅಗ್ರಸ್ಥಾನ ಪಡೆದುಕೊಂಡರು. ಕಳೆದ ವರ್ಷವೂ ಇಲ್ಲಿ ಪ್ರಶಸ್ತಿ ಆನಂದ್ ಪಾಲಾಗಿತ್ತು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹೊರ ಬಿದ್ದ ಒಂದು ತಿಂಗಳ ಬಳಿಕ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ವಿಶೇಷ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತು.

2007: ಎಲ್ಲಿಯವರೆಗೆ ಒಂದು ರಾಜ್ಯದಲ್ಲಿ ಅಧ್ಯಯನ ಮಾಡುವಿರೋ ಅಲ್ಲಿಯವರೆಗೆ ಆ ರಾಜ್ಯದ ಭಾಷೆ ಕಲಿಯುವುದು ಕಡ್ಡಾಯ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು. ರಾಜ್ಯದಲ್ಲಿ ಸಿ ಬಿ ಎಸ್ ಇ ಅಥವಾ ಐ ಸಿ ಎಸ್ ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡುವ ಹೊರದೇಶ ಅಥವಾ ಹೊರರಾಜ್ಯಗಳ ವಿದ್ಯಾರ್ಥಿಗಳು ಒಂದು ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ರಾಜ್ಯ ಸರ್ಕಾರ 2006ರ ಮೇ 25ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿತು.

2007: ಉತ್ತರಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೇಜರ್ ಬಿ.ಸಿ. ಖಂಡೂರಿ ಡೆಹ್ರಾಡೂನಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

2007: ತನ್ನ ಕಲಾಪವನ್ನು ಸ್ಥಗಿತಗೊಳಿಸಿರುವ ನ್ಯಾಯಮೂರ್ತಿ ಯು.ಎಲ್. ಭಟ್ ಆಯೋಗವನ್ನು ರದ್ದು ಪಡಿಸಿದ ರಾಜ್ಯ ಸರ್ಕಾರವು ಗಣಿ ಲಂಚ ಹಾಗೂ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಿತು.

2006: ಮೂವತ್ತೆರಡು ವರ್ಷಗಳ ಹಿಂದೆ (1974ರಲ್ಲಿ) ಸ್ವಾತಂತ್ರ್ಯ ಹೋರಾಟಗಾರ ಸಿ.ಎಚ್. ನಾರಾಯಣರಾವ್ ಅವರ ಕುಟುಂಬದಿಂದ ಮೂರು ಎಕರೆ ಜಮೀನು ವಶಪಡಿಸಿಕೊಂಡ ಬಿಡಿಎ ಅದಕ್ಕೆ ಪರಿಹಾರವಾಗಿ ಪಾವತಿ ಮಾಡಬೇಕಾಗಿದ್ದ 3.4 ಲಕ್ಷ ರೂಪಾಯಿಗಳನ್ನು ಕೊಡದೆ ಸತಾಯಿಸಿ ಕಡೆಗೂ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ಹೈಕೋರ್ಟಿಗೆ ಈದಿನ ಪ್ರಮಾಣಪತ್ರ ಸಲ್ಲಿಸಿತು. 1974ರಲ್ಲಿ ಆಗಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯು ಈಗಿನ ನಂದಿನಿ ಬಡಾವಣೆ ನಿರ್ಮಾಣ ಸಲುವಾಗಿ ಈ ಭೂಮಿಯನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರ ಪಡೆಯಲು ಹೈಕೋರ್ಟ್ ಕಟ್ಟೆ ಏರಿದ್ದ ನಾರಾಯಣರಾವ್ 1993ರಲ್ಲಿ ನಿಧನರಾಗಿದ್ದರು. 1994ರಲ್ಲಿ ಪರಿಹಾರ ಪಾವತಿಗೆ ಹೈಕೋರ್ಟ್ ಸೂಚಿಸಿತ್ತು. ಹಣ ಪಾವತಿ ಆಗದೇ ಹೋದಾಗ ರಾವ್ ಅವರ ಮಕ್ಕಳಾದ ಎಚ್. ಎನ್. ಸುರೇಶ, ಸುನಂದಾ, ಸುಕನ್ಯಾ, ಮತ್ತು ಸೊಸೆ ಕೃಷ್ಣಾ ಗಲಗಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.

2006: ಗುಜರಾತಿನ ಬೆಸ್ಟ್ ಬೇಕರಿ ನರಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಜಹೀರಾ ಶೇಖ್ ಅವರಿಗೆ ಪ್ರತಿಕೂಲ ಸಾಕ್ಷ್ಯ ನೀಡ್ದಿದಕ್ಕಾಗಿ ಸುಪ್ರೀಂಕೋರ್ಟ್ ಛಿಮಾರಿ ಹಾಕಿ ಒಂದು ವರ್ಷದ ಸೆರೆಮನೆವಾಸ ಮತ್ತು 50,000 ರೂಪಾಯಿಗಳ ದಂಡ ವಿಧಿಸಿತು.

1999: ನ್ಯೂಯಾರ್ಕ್ ಯಾಂಕೀಸ್ ಬೇಸ್ ಬಾಲ್ ತಾರೆ ಜೋ ಡಿಮ್ಯಾಗ್ಗಿಯೊ ಅವರು ಫ್ಲಾರಿಡಾದ ಹಾಲಿವುಡ್ಡಿನಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು.

1971: ನ್ಯೂಯಾರ್ಕ್ ನಗರದ ಮ್ಯಾಡಿಸನ್ ಸ್ಪೆಯರ್ ಗಾರ್ಡನ್ನಿನಲ್ಲಿ ನಡೆದ ಸ್ಪರ್ಧೆಯಲ್ಲಿ 15 ಸುತ್ತುಗಳಲ್ಲಿ ಜೋ ಫ್ರೇಜಿಯರ್ ಅವರು ಮಹಮ್ಮದ್ ಅಲಿಯನ್ನು ಪರಾಭವಗೊಳಿಸಿ ಜಗತ್ತಿನ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1961: ಲಂಡನ್ ಫಿಲ್ ಹಾರ್ಮೊನಿಕ್ ಆರ್ಕೆಸ್ಟ್ರಾದ ಸ್ಥಾಪಕ ಸರ್ ಥಾಮಸ್ ಬೀಚಮ್ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು.

1948: ಸಾಗರೋತ್ತರ ಸೇವೆಗಾಗಿ ಏರ್ ಇಂಡಿಯಾ ಇಂಟರ್ನ್ಯಾಷನಲ್ ನ್ನು ಸ್ಥಾಪಿಸಲಾಯಿತು.

1936: ಹಿರಿಯ ವೃತ್ತಿ ರಂಗಭೂಮಿ ಕಲಾವಿದ ಎನ್. ಎಸ್. ಜೋಶಿ ಅವರು ಶಿವಭಟ್ಟ ಜೋಶಿ- ಅಂಬಾಬಾಯಿ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಚಿಲ್ಲೂರ ಬಡ್ನಿಯಲ್ಲಿ ಜನಿಸಿದರು.

1930: ಅಮೆರಿಕಾದ 27ನೇ ಅಧ್ಯಕ್ಷ ವಿಲಿಯಂ ಹೊವರ್ಡ್ ಟಫ್ಟ್ ವಾಷಿಂಗನ್ನಿನಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ಮೃತರಾದರು.

1879: ಒಟ್ಟೊ ಹಾನ್ (1879-1968) ಹುಟ್ಟಿದ ದಿನ. ನೊಬೆಲ್ ಪ್ರಶಸ್ತಿ ವಿಜೇತನಾದ ಈ ಜರ್ಮನ್ ರಾಸಾಯನಿಕ ತಜ್ಞ ರೇಡಿಯೋ ರಾಸಾಯನಿಕ ತಜ್ಞ ಫ್ರಿಟ್ಜ್ ಸ್ಟ್ರಾಸ್ಮನ್ ಜೊತೆಗೆ ಪರಮಾಣು ವಿದಳನ ಸಂಶೋಧನೆಗಾಗಿ ಖ್ಯಾತಿ ಪಡೆದಿದ್ದಾರೆ.

1874: ಅಮೆರಿಕಾದ 13ನೇ ಅಧ್ಯಕ್ಷ ಮಿಲ್ಲಾರ್ಡ್ ಫಿಲ್ಮೋರ್ ನ್ಯೂಯಾರ್ಕಿನ ಬಫೆಲೋದಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು.

1787: ಕಾರ್ಲ್ ಫರ್ಡಿನಾಂಡ್ ವೊನ್ ಗ್ರಾಫ್ (1787-1840) ಹುಟ್ಟಿದರು. ಜರ್ಮನ್ ಶಸ್ತ್ರಚಿಕಿತ್ಸಕನಾದ ಈತ ಆಧುನಿಕ ಪ್ಲಾಸ್ಟಿಕ್ ಸರ್ಜರಿ ಸೃಷ್ಟಿಯಲ್ಲಿ ನೆರವು ನೀಡಿದ ವ್ಯಕ್ತಿ.

1702: ಇಂಗ್ಲೆಂಡಿನ ದೊರೆ ಮೂರನೇ ವಿಲಿಯಂ ಮೃತನಾದುದನ್ನು ಅನುಸರಿಸಿ ರಾಣಿ ಅನ್ನೆ ಸಿಂಹಾಸನ ಏರಿದಳು.

No comments:

Advertisement