Sunday, March 14, 2010

ಇಂದಿನ ಇತಿಹಾಸ History Today ಫೆಬ್ರುವರಿ 08

ಇಂದಿನ ಇತಿಹಾಸ

ಫೆಬ್ರುವರಿ 08

ಜನಪ್ರಿಯ ಟಿವಿ ಧಾರಾವಾಹಿ ಕೊಹಿನೂರ್ ಖ್ಯಾತಿಯ ನಟಿ ಕುಲ್ಜಿತ್ ರಾಂಧವಾ (30) ಜುಹು ಪ್ರದೇಶದ ತಮ್ಮ ಅಪಾರ್ಟ್ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

2009: ಹಿರಿಯ ವೈದ್ಯರ ಸಲಹೆಯನ್ನು ಧಿಕ್ಕರಿಸಿ ಚುಚ್ಚುಮದ್ದು ನೀಡುವ ಮೂಲಕ ರೋಗಿಯ ಸಾವಿಗೆ ಕಾರಣರಾಗಿದ್ದ ಭಾರತೀಯ ಮೂಲದ ವೈದ್ಯೆಗೆ ಲಂಡನ್ ನ್ಯಾಯಾಲಯ ಆರು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾ ರಾಮನಾಥ್ (40) 1998ರ ಜುಲೈ ತಿಂಗಳಲ್ಲಿ ಸ್ಟಾಫರ್ಡ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿ ಪೆಟ್ರೀಷಿಯ ಲೀಟನ್ ಎಂಬಾಕೆಯ ಸಾವಿಗೆ ಕಾರಣರಾಗಿದ್ದರು. ಪ್ರಿಯಾ ಚುಚ್ಚುಮದ್ದು ನೀಡುತ್ತಿದ್ದಂತೆಯೇ ಲೀಟನ್‌ಗೆ ಹೃದಯಸ್ತಂಭನವಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿದ್ದ ಆಕೆಗೆ ಚುಚ್ಚುಮದ್ದು ನೀಡುವುದಕ್ಕೆ ಮೂವರು ಹಿರಿಯ ವೈದ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರಿಯಾ ಇಂತಹ ಕ್ರಮಕ್ಕೆ ಮುಂದಾಗುವ ಮುನ್ನ ಅರಿವಳಿಕೆ ತಜ್ಞರ ಸಲಹೆಯನ್ನೂ ಪಡೆದಿರಲಿಲ್ಲ. ನಂತರ ಅಮೆರಿಕದಲ್ಲಿ ನೆಲೆಸಿದ್ದ ಆಕೆ ತಮ್ಮ ವಿರುದ್ಧ ಆರೋಪ ಎದುರಿಸುವ ಸಲುವಾಗಿ ಕಳೆದ ಫೆಬ್ರುವರಿ ತಿಂಗಳಿನಲ್ಲಿ ಬ್ರಿಟನ್ನಿಗೆ ಹಿಂದಿರುಗಿದ್ದರು.

2009: ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾಳ್ಗಿಚ್ಚಿಗೆ 65 ಮಂದಿ ಬಲಿಯಾದರು. ಆ ಪ್ರದೇಶದಲ್ಲಿ ಸುಮಾರು 640 ಮನೆಗಳು ಸಂಪೂರ್ಣ ನಾಶವಾದವು ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿತು. ಹಿಂದೆ 1983ರಲ್ಲಿ ಸಂಭವಿಸಿದ ಇದೇ ರೀತಿಯ ದುರಂತದಲ್ಲಿ 45ಮಂದಿ ಸಾವನ್ನಪ್ಪಿದ್ದರು.

2009: ಮುಂಬೈ ದಾಳಿಗೆ ಸಂಬಂಧಿಸಿದಂತೆ ಭಾರತದ ವಶದಲ್ಲಿರುವ ಉಗ್ರ ಅಜ್ಮಲ್ ಕಸಾಬ್ ಸೇರಿದಂತೆ ಇತರೆ ನಾಲ್ವರು ಪಾಕಿಸ್ಥಾನಿ ಪ್ರಜೆಗಳ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಪಾಕ್ ಸರ್ಕಾರ ಪ್ರಕಟಿಸಿತು. ಇದೇ ವೇಳೆಗೆ, ಮುಂಬೈ ಮೇಲೆ ನಡೆದ ಈ ದಾಳಿಗಳ ಪೂರ್ವ ಯೋಜನೆ ಪಾಕ್ ಅಥವಾ ಭಾರತದಲ್ಲಿ ನಡೆದಿಲ್ಲ. ಬದಲಿಗೆ ಯುರೋಪ್ ಖಂಡದಲ್ಲಿ ನಡೆದಿದೆ ಎಂದು ಪಾಕಿಸ್ಥಾನದ ಗೃಹ ಸಚಿವಾಲಯ ತಿಳಿಸಿರುವುದಾಗಿ ಜಿಯೊ ದೂರದರ್ಶನ ಚಾನೆಲ್ ವರದಿ ಮಾಡಿತು.

2008: 1984ರ ಐತಿಹಾಸಿಕ ಭಾರತ-ರಷ್ಯಾ ಜಂಟಿ ಬಾಹ್ಯಾಕಾಶ ಯಾನದಲ್ಲಿ ಪ್ರಯಾಣಿಸಿದ್ದ ಭಾರತದ ರಾಕೇಶ್ ಶರ್ಮಾ ಹಾಗೂ ರಷ್ಯಾದ ಅಂತೋಲಿ ಬೊರೋಜೊವೊಯ್ ಅವರು 24 ವರ್ಷಗಳ ನಂತರ ಫೆಬ್ರುವರಿ 7ರಂದು ನವದೆಹಲಿಯಲ್ಲಿ ಮುಖಾಮುಖಿಯಾದರು. ರಾಜಧಾನಿಯಲ್ಲಿ ನಡೆದ 18ನೇ ವಿಶ್ವ ಪುಸ್ತಕ ಮೇಳದಲ್ಲಿ ಮಕ್ಕಳಿಗೆ ಬಾಹ್ಯಾಕಾಶ ಕುರಿತು ಪಾಠ ಹೇಳಲು ಹಾಗೂ ತರಬೇತಿ ನೀಡಲು ಇವರಿಬ್ಬರೂ ದೆಹಲಿಗೆ ಆಗಮಿಸಿದರು. `ಇದೊಂದು ಭಾವನಾತ್ಮಕ ಕ್ಷಣ. 24 ವರ್ಷಗಳಲ್ಲಿ ಅಂತೋಲಿ ಅವರೊಂದಿಗೆ ಯಾವುದೇ ಸಂಪರ್ಕವನ್ನೂ ತಾನು ಇಟ್ಟುಕೊಂಡಿರಲಿಲ್ಲ. ಇಷ್ಟೊಂದು ಸಮಯ ಕಳೆದುಹೋದರೂ ನಮ್ಮಿಬ್ಬರ ನಡುವೆ ಯಾವುದೇ ಬದಲಾವಣೆಯಾಗಿಲ್ಲ' ಎಂದು ಶರ್ಮಾ ಭಾವುಕರಾಗಿ ನುಡಿದರು. `ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ' ಎಂದು ಅಂತೋಲಿ ಹೇಳಿದರು. ಬಾಹ್ಯಾಕಾಶ ಯಾನದ ನಂತರ ಭಾರತಕ್ಕೆ ಬಂದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿಯಾಗಿದ್ದೆ ಎಂದೂ ಅವರು ಸ್ಮರಿಸಿದರು.

2008: ಶಿಕ್ಷಣ ತಜ್ಞ ಪ್ರೊ. ಬಿ. ಷೇಕ್ ಅಲಿ, ವಿಜ್ಞಾನ ಲೇಖಕ ಜಿ.ಟಿ. ನಾರಾಯಣರಾವ್, ಸಾಹಿತಿ ಕೋ. ಚೆನ್ನಬಸಪ್ಪ ಅವರಿಗೆ ಮೈಸೂರಿನಲ್ಲಿ ನಡೆದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ 8ನೇ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಖ್ಯಾತ ಹಿಂದೂಸ್ಥಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರ ಅನುಪಸ್ಥಿತಿಯಲ್ಲಿ ಅವರಿಗೂ ಗೌರವ ಡಿ.ಲಿಟ್ ಪದವಿಯನ್ನು ದೃಢಪಡಿಸಲಾಯಿತು.

2008: ಖ್ಯಾತ ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಗಾಯಕ ಎಚ್. ಕೆ.ನಾರಾಯಣ (74) ಅವರು ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ನಾರಾಯಣ ಅವರು ತಮ್ಮ ಆರನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದರು. 1953ರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕಾಗಿ ಮೈಸೂರಿಗೆ ಬಂದ ಅವರು 1954ರಲ್ಲಿ ಆಕಾಶವಾಣಿ ಕೇಂದ್ರದಲ್ಲಿ ಕಲಾವಿದರಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದರು. 1962 ರಲ್ಲಿ ಕಥಕ್ ನೃತ್ಯ ಕಲಾವಿದೆ ಕಾಂತಾ ಅವರನ್ನು ವಿವಾಹವಾದರು. ಅವರಿಬ್ಬರ ಪುತ್ರಿಯರಾದ ಮಂಜು ಮತ್ತು ಚಂದ್ರಿಕಾ ಅವರು ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 1984-85ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, 1987-88ರ ರಾಜ್ಯೋತ್ಸವ ಪ್ರಶಸ್ತಿ ಮತ್ತು 2000ರ ಸಂತ ಶಿಶುನಾಳ ಶರೀಫ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

2008: ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಕಡಲತೀರದಲ್ಲಿ ಆಮೆಯೊಂದಕ್ಕೆ ಚಲನವಲನವನ್ನು ಗ್ರಹಿಸುವ ಉಪಗ್ರಹ ಉಪಕರಣವನ್ನು ಅಳವಡಿಸಿ ಜುಲೈ 25, 2003ರಲ್ಲಿ ಸಮುದ್ರಕ್ಕೆ ಬಿಡಲಾಗಿತ್ತು. ಈ ಆಮೆಯು ಆಹಾರವನ್ನು ಅರಸುತ್ತಾ 20,000 ಕಿ.ಮೀ. ಕ್ರಮಿಸಿ ಈದಿನ ಅಮೆರಿಕವನ್ನು ತಲುಪಿತು. ಈ ಸಂಶೋಧನೆಯಿಂದ ಅಳಿವಿನಂಚಿನಲ್ಲಿ ಇರುವ ಆಮೆಗಳನ್ನು ರಕ್ಷಿಸುವ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ಸಿಗಲು ಸಾಧ್ಯ ಎಂಬುದು ಸಂಶೋಧಕರ ನಂಬಿಕೆ.

2008: ಸಿಮೆಂಟ್ ಕಾರ್ಖಾನೆ ಸೇರಿದಂತೆ ಒಟ್ಟು ಐದು ಖಾಸಗಿ ಕಂಪೆನಿಗಳಿಗೆ ಸುಮಾರು 1,344 ಎಕರೆ ಕೃಷಿ ಭೂಮಿ ಖರೀದಿಸಲು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಕಾರ್ಯಕಾರಿ ಸಮಿತಿ ಅನುಮತಿ ನೀಡಿತು. ಭೂ ಸುಧಾರಣಾ ಕಾಯ್ದೆಯ ವಿಧಿಗಳ, ಕಂಪೆನಿಗಳಿಗೆ ರೈತರಿಂದ ನೇರವಾಗಿ ಭೂಮಿ ಖರೀದಿಸಲು ಅವಕಾಶ ಇದ್ದು, ಅದರ ಪ್ರಕಾರ ಈ ಒಪ್ಪಿಗೆ ನೀಡಲಾಗಿದೆ ಎಂದು ಕಾರ್ಯಕಾರಿ ಸಮಿತಿಯ ಸಭೆ ನಂತರ ರಾಜ್ಯಪಾಲರ ಸಲಹೆಗಾರ ಎಸ್. ಕೃಷ್ಣಕುಮಾರ್ ಪ್ರಕಟಿಸಿದರು. ಇದರಲ್ಲಿ ಸರ್ಕಾರ ಭೂಸ್ವಾಧೀನ ಮಾಡುವುದಿಲ್ಲ, ಬದಲಿಗೆ ಕಂಪೆನಿಯೇ ನೇರವಾಗಿ ರೈತರಿಂದ ಜಮೀನು ಖರೀದಿಸುವುದು ಅವರು ವಿವರಿಸಿದರು.

2008: ಉತ್ತರ ಕನ್ನಡ ಜಿಲ್ಲೆಯ ಗಡಿಭಾಗ ಕ್ಯಾಸಲ್ ರಾಕ್ ಮತ್ತು ಗೋವಾದ ದೂಧಸಾಗರ ನಡುವಿನ ಒಂಬತ್ತು ರೈಲ್ವೆ ಸುರಂಗ ಮಾರ್ಗಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಶಂಕಿತ ಉಗ್ರಗಾಮಿ ಮೊಹಮ್ಮದ್ ಆಸೀಫ್ ಒಪ್ಪಿಕೊಂಡ. ದೂಧಸಾಗರ, ಕ್ಯಾಸಲ್ ರಾಕ್ ಹಾಗೂ ಉಳವಿ ಪ್ರದೇಶದಲ್ಲೂ ಈತ ಕಾರ್ಯಾಚರಣೆ ನಡೆಸಿದ್ದ ಎಂಬ ಮಾಹಿತಿಯ ಆಧಾರದಲ್ಲಿ ಸಿಓಡಿ ಪೊಲೀಸರು ಈ ಪ್ರದೇಶಕ್ಕೆ ತೆರಳಿ ಉಗ್ರರು ಉಳಿಸಿರಬಹುದಾದ ಸಾಕ್ಷ್ಯಗಳಿಗಾಗಿ ಜಾಲಾಡಿದರು. ಸುರಂಗ ಮಾರ್ಗವನ್ನು ಸ್ಫೋಟಿಸಲು ಅದ್ನಾನ್ ನೇತೃತ್ವದಲ್ಲಿ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಅಸೀಫ್ ಬಹಿರಂಗ ಪಡಿಸಿದ್ದಾನೆ ಎಂದು ಸಿಓಡಿ ಮೂಲಗಳು ಹೇಳಿದವು.

2008: ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಜಿ.ಎಸ್. ಭಟ್ ಅವರನ್ನು ಬೀದರಿನಲ್ಲಿರುವ ಕರ್ನಾಟಕ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು.

2008: ಅರಬ್ಬೀ ಸಮುದ್ರದಲ್ಲಿ ಜಾಸ್ತಿಯಾದ ಬಿರುಗಾಳಿಯ ತೀವ್ರತೆ ಪರಿಣಾಮವಾಗಿ ಕಾರವಾರ ಸಮೀಪದ ದೇವಭಾಗ ಕರಾವಳಿ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಆರು ಜನ ಮೀನುಗಾರರ ಪೈಕಿ ಮೂವರು ಮೀನುಗಾರರು ಸಮುದ್ರಪಾಲಾದ ಘಟನೆ ಸಂಭವಿಸಿತು. ಸಮುದ್ರಪಾಲಾದ ಮೀನುಗಾರರನ್ನು ಸತೀಶ್ ಮಹಾಬಲೇಶ್ವರ ಕಿರ್ಲೋಸ್ಕರ್ (40), ಪ್ರವೀಣ ಪ್ರೇಮನಾಥ್ ಕಿರ್ಲೋಸ್ಕರ್ (24) ಹಾಗೂ ಪ್ರವೇಶ ರಾಮದಾಸ್ ಕೇಳಸ್ಕರ್(28) ಎಂದು ಗುರುತಿಸಲಾಯಿತು. ಅವರನ್ನು ಒಯ್ಯುತ್ತಿದ್ದ `ನರಸಿಂಹ ಪ್ರಸಾದ್' ಎಂಬ ಹೆಸರಿನ ದೋಣಿಯೂ ಸಮುದ್ರದಲ್ಲಿ ಮುಳುಗಿತು. ಸಮುದ್ರದಲ್ಲಿ ಈಜುತ್ತಾ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಇತರ ಮೂವರು ಮೀನುಗಾರರಾದ ಗೌರೀಶ್ ಅರುಣ ಕಿರ್ಲೋಸ್ಕರ್, ಹರೀಶ್ ದತ್ತಾ ಗಿರಬ್, ಮಂಗೇಶ್ ಪ್ರಕಾಶ್ ಕಿರ್ಲೋಸ್ಕರ್ ಅವರನ್ನು ಮಲ್ಪೆಯ 'ಮಕರಂದ' ಹೆಸರಿನ ದೋಣಿಯ ಸಿಬ್ಬಂದಿ ಗಮನಿಸಿ ರಕ್ಷಿಸಿದರು.

2008: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ತಮಗಿರುವ ಕ್ಷಮಾದಾನದ ಅಧಿಕಾರವನ್ನು ಸ್ವಚ್ಛಂದವಾಗಿ, ಅಸಂವಿಧಾನಿಕವಾಗಿ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯ ಪೀಠವು ಆಂಧ್ರಪ್ರದೇಶ ಸರ್ಕಾರದ ಕೈದಿಗಳ ಬಿಡುಗಡೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಈ ನಿರ್ದೇಶನ ನೀಡಿತು. 2007ರಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಲವು ಕೈದಿಗಳಿಗೆ ಆಂಧ್ರಪ್ರದೇಶ ರಾಜ್ಯಪಾಲರು ಕ್ಷಮಾದಾನ ನೀಡಿದ್ದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು.

2007: ಟಾಟಾ ಉದ್ಯಮ ಸಮೂಹದ ಒಡೆಯ, 69 ವರ್ಷದ ರತನ್ ಟಾಟಾ ಅವರು ಸ್ವತಃ ಅಮೆರಿಕ ವಾಯುಪಡೆಯ ಪ್ರತಿಷ್ಠಿತ ಎಫ್-16 ಯುದ್ಧ ವಿಮಾನವನ್ನು ಚಾಲನೆ ಮಾಡಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ -2007 ಉತ್ಸವದಲ್ಲಿ ಹೊಸ ದಾಖಲೆ ಬರೆದರು. ಈ ಮೂಲಕ ಎಫ್- 16 ಚಾಲನೆ ಮಾಡಿದ ಪ್ರಪ್ರಥಮ ಭಾರತೀಯ ಪ್ರಜೆ ಎಂಬ ಕೀರ್ತಿಗೆ ಅವರು ಭಾಜನರಾದರು. ಟಾಟಾ ಅವರು ಟೆಸ್ಟ್ ಪೈಲಟ್ ಪಾಲ್ ಹಟೆನ್ ಡಾರ್ಫ್ ಜೊತೆಗೆ ಇಬ್ಬರೇ ಕುಳಿತುಕೊಳ್ಳಬಹುದಾದ ಲಾಕ್ಹೀಡ್ ಮಾರ್ಟಿನ್ ಕಂಪೆನಿ ಯುದ್ಧ ವಿಮಾನದಲ್ಲಿ ಭೂಮಿಯಿಂದ 18,000 ಅಡಿ ಎತ್ತರದಲ್ಲಿ ಗರಿಷ್ಠ 1625 ಕಿ.ಮೀ. ವೇಗದೊಂದಿಗೆ ಚಾಲನೆ ಮಾಡಿದರು. ಈ ಎಫ್-16 ವಿಮಾನವನ್ನು ಅಮೆರಿಕದ ಪೈಲಟ್ ಗಳು ಫಾಲ್ಕನ್ (ಗಿಡುಗ) ಎಂದು ಕರೆಯುತ್ತಾರೆ. ಇದು ಏಕೈಕ ಬೃಹತ್ ಟರ್ಬೊಜೆಟ್ ಎಂಜಿನ್ ಹೊಂದಿದ್ದು, ವಿಮಾನದ ಒಟ್ಟು ತೂಕಕ್ಕಿಂತ ಹಲವಾರು ಪಟ್ಟು ಹೆಚ್ಚು ತಳ್ಳು ಸಾಮರ್ಥ್ಯ (ಥ್ರಸ್ಟ್) ಪಡೆದಿದೆ. ಹೀಗಾಗಿ ಈ ವಿಮಾನ ನೆಲಕ್ಕೆ ಲಂಬವಾಗಿ ರಾಕೆಟಿನಂತೆ ಮೇಲೇರಬಲ್ಲುದು ಮತ್ತು 16,875 ಕೆ.ಜಿ. ತೂಕದೊಂದಿಗೆ ಸಲೀಸಾಗಿ ಹಾರಬಲ್ಲುದು.

2007: `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಿಂದಾಗಿ ಇಂಗ್ಲೆಂಡಿನಲ್ಲಿ ಮನೆಮಾತಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಭಾರತದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಲು `ಶಿಲ್ಪಾಶೆಟ್ಟಿ ಪ್ರತಿಷ್ಠಾನ' ಸ್ಥಾಪಿಸುವುದಾಗಿ ಲಂಡನ್ನಿನಲ್ಲಿ ಪ್ರಕಟಿಸಿದರು. ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿ ಮಾಡಿದ ಬಳಿಕ ಶಿಲ್ಪಾಶೆಟ್ಟಿ ಈ ವಿಚಾರ ಬಹಿರಂಗಪಡಿಸಿದರು.

2007: ವೆಸ್ಟ್ ಇಂಡೀಸ್ನ ಕ್ರಿಕೆಟಿಗ ಮಾರ್ಲೊನ್ ಸ್ಯಾಮ್ಯುಯೆಲ್ ಅವರು ಬುಕ್ಕಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಮಾತುಕತೆಗೆ ಸಂಬಂಧಿಸಿದಂತೆ ನಾಗಪುರ ಪೊಲೀಸರು ನೀಡಿರುವ ವರದಿ ತಮಗೆ ತಲುಪಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ತಿಳಿಸಿತು.

2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿತು.

2006: ರಿಲಯನ್ಸ್ ಮಾಲೀಕತ್ವದ ಕುರಿತು ಇಬ್ಬರೂ ಸಹೋದರರ ನಡುವಣ ವಿವಾದ ಬಗೆ ಹರಿಸುವ ಉದ್ದೇಶದಿಂದ ಮುಖೇಶ್ ಅಂಬಾನಿ ಗುಂಪು ಬಿಟ್ಟುಕೊಟ್ಟಿದ್ದ ನಾಲ್ಕು ಕಂಪೆನಿಗಳ ಅಧ್ಯಕ್ಷರಾಗಿ ಅನಿಲ್ ಅಂಬಾನಿ ಅಧಿಕಾರ ವಹಿಸಿಕೊಂಡರು.

2006: ಖ್ಯಾತ ಪಿಟೀಲುವಾದಕ ದಿವಂಗತ ಪಿಟೀಲು ಕೃಷ್ಣರಾವ್ ಅವರ ಪುತ್ರ ಬಿ. ವಾಸುದೇವರಾವ್ (82) ಮಂಗಳೂರಿನಲ್ಲಿ ನಿಧನರಾದರು. ಐದು ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿರುವ ರಾವ್ ಅವರ ಶಿಷ್ಯರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಖ್ಯಾತಿ ಪಡೆದಿದ್ದಾರೆ.

2006: ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 1,025 ವರ್ಷಗಳಿಂದ ತಲೆ ಎತ್ತಿ ನಿಂತಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಸಹಸ್ರಮಾನದ ಮೊದಲ ಅಭಿಷೇಕ ಸಹಸ್ರಾರು ಮಂದಿ ಭಕ್ತ ಸಮೂಹದ ನಡುವೆ ಆರಂಭಗೊಂಡಿತು. ಮೊದಲ ಕಲಶದ ಅಭಿಷೇಕ ಭಾಗ್ಯ ರಾಜಸ್ಥಾನ ರಾಜ್ಯದ ಅಜಮೇರ್ ಬಳಿಯ ಕಿಷನ್ ಗಢ ಊರಿನ ಅಶೋಕ ಪಾಟ್ನಿ ಅವರದಾಯಿತು. ಈ ಕಲಶವನ್ನು ಅವರು ಹರಾಜಿನಲ್ಲಿ 1.08 ಕೋಟಿ ರೂಪಾಯಿ ನೀಡಿ ಖರೀದಿಸಿದರು.

2006: ಜನಪ್ರಿಯ ಟಿವಿ ಧಾರಾವಾಹಿ ಕೊಹಿನೂರ್ ಖ್ಯಾತಿಯ ನಟಿ ಕುಲ್ಜಿತ್ ರಾಂಧವಾ (30) ಜುಹು ಪ್ರದೇಶದ ತಮ್ಮ ಅಪಾರ್ಟ್ಮೆಂಟಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.

2006: ಬೆಂಗಳೂರು ಮೂಲದ ಗುರುಟೀಕ್ ಇನ್ವೆಸ್ಟ್ಮೆಂಟ್ಸ್ (ಮೈಸೂರು) ಸಂಸ್ಥೆಯನ್ನು ಮುಚ್ಚುವಂತೆ ಸೆಬಿ ಆದೇಶ ನೀಡಿತು.
1999: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕೃಷ್ಣಸ್ವಾಮಿ ಸುಂದರ್ ಜಿ ನವದೆಹಲಿಯಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ಮೃತರಾದರು.

1994: ಅಹಮದಾಬಾದಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕೆಯ ಹಷನ್ ತಿಲಕರತ್ನೆ ಅವರ ವಿಕೆಟ್ ಉರುಳಿಸುವ ಮೂಲಕ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ಟೆಸ್ಟ್ ಕ್ರಿಕೆಟಿನಲ್ಲಿ 431 ವಿಕೆಟ್ ಗಳಿಸಿ ದಾಖಲೆ ಸ್ಥಾಪಿಸಿದ್ದ ಸರ್ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯನ್ನು ಮುರಿದರು.

1972: ಕಲಾವಿದ ಸೈಯದ್ ಅಸಫ್ ಅಲಿ ಜನನ.

1963: ಭಾರತೀಯ ಕ್ರಿಕೆಟ್ ಆಟಗಾರ ಮಹಮ್ಮದ್ ಅಜರುದ್ದೀನ್ ಹುಟ್ಟಿದ ದಿನ. ಏಕದಿನ ಕ್ರಿಕೆಟಿನಲ್ಲಿ 9000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

1952: ಕಲಾವಿದ ಶಿವರಾಮು ಕೆ. ಜನನ.

1934: ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಎಚ್. ಆರ್. ಲೀಲಾವತಿ ಅವರು ಎಚ್. ರಾಮಣ್ಣ- ಜಯಲಕ್ಷ್ಮಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1924: ಭಾರತೀಯ ಉದ್ಯಮಿ ವಿಠ್ಠಲ್ ಮಲ್ಯ (1924-1983) ಹುಟ್ಟಿದರು.

1921: ರಾಜಾಜ್ಞೆ ಮೂಲಕ ಭಾರತದಲ್ಲಿ `ಚೇಂಬರ್ ಆಫ್ ಪ್ರಿನ್ಸಸ್' (ರಾಜಕುಮಾರರ ಒಕ್ಕೂಟ) ಸ್ಥಾಪಿಸಲಾಯಿತು. ವೈಸ್ ರಾಯ್ ಅಧ್ಯಕ್ಷರಾಗಿದ್ದ ಈ ಒಕ್ಕೂಟದಲ್ಲಿ 120 ಸದಸ್ಯರಿದ್ದರು. ಸದಸ್ಯರ ಪೈಕಿ 108 ಮಂದಿ ಸಾಮಂತ ರಾಜರು ಹಾಗೂ 12 ಮಂದಿ 127 ಸಾಮಂತೇತರ ರಾಜ್ಯಗಳಿಂದ ಚುನಾಯಿತರಾದ ಪ್ರತಿನಿಧಿಗಳಾಗಿದ್ದರು.

1920: `ಸಿಹಿ ಹುಡುಗಿ' (ಸ್ವೀಟರ್ ಗರ್ಲ್) ಎಂದೇ ಖ್ಯಾತಳಾಗಿದ್ದ ಅಮೆರಿಕಾದ ಚಿತ್ರನಟಿ ಲಾರಾ ಟರ್ನರ್ (1920-1995) ಹುಟ್ಟಿದ ದಿನ.

1897: ಭಾರತದ ರಾಷ್ಟ್ರಪತಿಯಾಗಿದ್ದ ಝಕೀರ್ ಹುಸೇನ್ (1897-1969) ಹುಟ್ಟಿದ ದಿನ.

1872: ಅಂಡಮಾನ್ ದ್ವೀಪದಲ್ಲಿ ಕೈದಿಯೊಬ್ಬನಿಂದ ಭಾರತದ ಗವರ್ನರ್ ಜನರಲ್ ಮೇಯೋ ಹತ್ಯೆ ನಡೆಯಿತು.

1665: ಬ್ರಿಟಿಷರು ಬಾಂಬೆಯನ್ನು (ಈಗಿನ ಮುಂಬೈ) ತಮ್ಮ ವಶಕ್ಕೆ ತೆಗೆದುಕೊಂಡರು. ಬಾಂಬೆ ಮತ್ತು ಸಮೀಪದ ಇತರ ಆರು ದ್ವೀಪಗಳನ್ನು ತನ್ನ ಪತ್ನಿ ಬ್ರಗಾಂಝಾದ ಕ್ಯಾಥರೀನಳಿಂದ ಬಂದ ವರದಕ್ಷಿಣೆಯ ಭಾಗವಾಗಿ ಎರಡನೇ ಚಾರ್ಲ್ಸ್ಗೆ ನೀಡಲಾಯಿತು. 1668ರಲ್ಲಿ ಅದನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಹಸ್ತಾಂತರಿಸಲಾಯಿತು.

No comments:

Advertisement