Sunday, March 21, 2010

ಇಂದಿನ ಇತಿಹಾಸ History Today ಫೆಬ್ರುವರಿ 14

ಇಂದಿನ ಇತಿಹಾಸ

ಫೆಬ್ರುವರಿ 14

ಡಕಾಯಿತ ರಾಣಿ ಫೂಲನ್ ದೇವಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ 20 ಮಂದಿ ಠಾಕೂರರನ್ನು ಗುಂಡಿಟ್ಟು ಕೊಂದಳು. ತನ್ನ ಪ್ರಿಯಕರ ವಿಕ್ರಮ್ ಮಲ್ಹನನ್ನು ಕೊಂದದ್ದಕ್ಕೆ ಸೇಡಿನ ಕ್ರಮವಾಗಿ ವ್ಯಾಲಂಟೈನ್ ದಿನವಾದ ಇದೇ ದಿನ ಫೂಲನ್ ದೇವಿ ಎಸಗಿದ ಈ ಕೃತ್ಯ ಅಮೆರಿಕಾದ `ವ್ಯಾಲಂಟೈನ್ ದಿನದ ಹತ್ಯಾಂಕಾಂಡ'ದಷ್ಟೇ ಖ್ಯಾತಿ ಗಳಿಸಿತು.

ಇಂದು ವ್ಯಾಲಂಟೈನ್ ದಿನ.

2009: ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಬರಾಕ್ ಒಬಾಮ ಆಡಳಿತದ ಬಹು ನಿರೀಕ್ಷೆಯ 'ಆರ್ಥಿಕ ಉತ್ತೇಜಕ' ಕ್ರಮಕ್ಕೆ ದೇಶದ ಸಂಸತ್ತಿನ ಅನುಮತಿ ದೊರೆಕಿತಾದರೂ ಇದು ಭಾರತದ ಪಾಲಿಗೆ ಭಾರಿ ಹೊಡೆತವಾಗಿ ಪರಿಣಮಿಸಿತು. ಈ ಯೋಜನೆಯಂತೆ ಸರ್ಕಾರದ ಸಹಾಯ ಪಡೆಯುವ ಕಂಪೆನಿಗಳು ಇನ್ನು ಮುಂದೆ ಅಮೆರಿಕದ ನುರಿತ ಕೆಲಸಗಾರರನ್ನು ಬದಲಿಸಿ ಅವರ ಸ್ಥಾನಕ್ಕೆ ಭಾರತ ಅಥವಾ ಇತರ ದೇಶಗಳ ಉದ್ಯೋಗಿಗಳನ್ನು ನುರಿತ ನೌಕರರ ವೀಸಾ (ಎಚ್1-ಬಿ) ಅಡಿಯಲ್ಲಿ ನೇಮಕ ಮಾಡಿಕೊಳ್ಳುವಂತಿಲ್ಲ. ಎರಡು ವರ್ಷಗಳ ಹಿಂದೆ ಎಚ್1-ಬಿ ವೀಸಾವನ್ನು ವರ್ಷಕ್ಕೆ 65 ಸಾವಿರಕ್ಕೆ ಮಿತಿಗೊಳಿಸಿದ ಬಳಿಕ ಈ ವೀಸಾ ನೀಡಿಕೆಯನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಭಾರತ ಮತ್ತು ಇತರ ದೇಶಗಳಿಂದ ಕೇಳಿ ಬರುತ್ತಲೇ ಇತ್ತು. ಇದೇ ಸಂದರ್ಭದಲ್ಲಿ ಈ ಆಘಾತಕಾರಿ ಬೆಳವಣಿಗೆ ನಡೆಯಿತು. ಆದರೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವವರಿಗೆ ಮಾತ್ರ ಈ ತೊಂದರೆ ಕಾಡುವುದು. ಭಾರತದಿಂದ ಹೊರಗುತ್ತಿಗೆ ಪಡೆಯಲು ನೂತನ ಕ್ರಮದಿಂದ ತೊಡಕಾಗದು ಎಂದು ಪರಿಣಿತರು ಅಂದಾಜಿಸಿದರು.

2009: ಸಂಕಷ್ಟದಲ್ಲಿರುವ ಅಮೆರಿಕದ ಆರ್ಥಿಕ ವ್ಯವಸ್ಥೆ ಸುಧಾರಣೆಗಾಗಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ರೂಪಿಸಿದ 787 ಶತಕೋಟಿ ಡಾಲರ್ (38.56 ಲಕ್ಷ ಕೋಟಿ ರೂಪಾಯಿ) ಮೊತ್ತದ ಉತ್ತೇಜನ ಪ್ಯಾಕೇಜ್‌ಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿತು. ಇದರೊಂದಿಗೆ ಅಧ್ಯಕ್ಷ ಒಬಾಮ ಈ ನಿಟ್ಟಿನ ತಮ್ಮ ಮೊದಲ ಯತ್ನದಲ್ಲಿ ಯಶಸ್ವಿಯಾದರು. 'ಅಮೆರಿಕನ್ ಎಕಾನಮಿ ರಿಕವರಿ ಅಂಡ್ ರಿಇನ್ವೆಸ್ಟ್‌ಮೆಂಟ್ ಆಕ್ಟ್' ಮಸೂದೆಗೆ ಅಮೆರಿಕನ್ ಕಾಂಗ್ರೆಸ್ ಸದನ 60-30 ಮತಗಳಿಂದ ಅನುಮೋದನೆ ನೀಡಿತು. ಇದಕ್ಕೂ ಮುನ್ನ ಜನಪ್ರತಿನಿಧಿಗಳ ಸಭೆ (ಹೌಸ್ ಅಫ್ ರೆಪ್ರೆಸೆಂಟಿಟೀವ್ಸ್) ಇದೇ ಬಗೆಯ ಮಸೂದೆಗೆ 246-183 ಮತಗಳ ಅಂತರದಲ್ಲಿ ಒಪ್ಪಿಗೆ ನೀಡಿತ್ತು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಪಡೆದಿರುವ ಈ ಬೃಹತ್ ಹಣಕಾಸು ನೆರವಿನ ಪ್ಯಾಕೇಜ್ ಮಸೂದೆ ಅಧ್ಯಕ್ಷ ಒಬಾಮ ಅಂಕಿತದೊಂದಿಗೆ ಜಾರಿಗೆ ಬರುವುದು.

2009: ಪಾಕಿಸ್ಥಾನವು ತಾನೊಂದು ರಾಷ್ಟ್ರವಾಗಿ ಉಳಿಯುವ ನಿಟ್ಟಿನಲ್ಲಿ ತನ್ನ ನೆಲದಲ್ಲಿ ವ್ಯಾಪಕವಾಗಿ ಬೇರುಬಿಟ್ಟಿರುವ ತಾಲಿಬಾನ್‌ಗಳ ವಿರುದ್ಧ ಸಮರ ನಿರತವಾಗಿದೆ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿದರು. 'ಪಾಕಿಸ್ಥಾನದ ಪ್ರಭುತ್ವವನ್ನು ಆಪೋಷನ ತೆಗೆದುಕೊಳ್ಳುವುದೇ ತಾಲಿಬಾನಿಗಳ ಅಂತಿಮ ಗುರಿ. ನಾವು ಬದುಕುವ ವಿಧಾನವನ್ನೇ ಬದಲಾಯಿಸುವ ಉದ್ದೇಶ ಅವರದ್ದು. ಹೀಗಾಗಿ ಸೇನಾ ಬಲ ಬಳಸಿ ಅವರನ್ನು ಹಿಮ್ಮೆಟ್ಟಿಸುವುದು ಅನಿವಾರ್ಯ' ಎಂದು ಅಮೆರಿಕದ ಟಿ.ವಿ. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದರು. ಆಘ್ಘಾನಿಸ್ಥಾನದ ಗಡಿಯಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಸೇನೆಯು ಸರ್ಕಾರದ ಜೊತೆ ಇದೆ. ಒಂದು ವೇಳೆ ಸೇನೆಯ ಬೆಂಬಲ ಇಲ್ಲದಿದ್ದರೆ ಈ ವೇಳೆಗೆ ಸರ್ಕಾರವನ್ನೇ ಉಗ್ರರು ಕಿತ್ತು ಎಸೆದಾಗಿರುತ್ತಿತ್ತು ಎಂದೂ ಅವರು ಹೇಳಿದರು.

2009: ಬಿಜಿನೆಸ್ ಮ್ಯಾಗಜಿನ್ ಫೋಬ್ಸ್ ಬಿಡುಗಡೆ ಮಾಡಿದ ವಿಶ್ವದ ಪ್ರಭಾವಿ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಅನಿವಾಸಿ ಭಾರತೀಯ ಲಕ್ಮಿ ಮಿತ್ತಲ್ ಹಾಗೂ ಭಾರತದ ದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಸ್ಥಾನ ಪಡೆದರು. ಪಟ್ಟಿಯಲ್ಲಿ ಲಕ್ಷ್ಮಿ ಮಿತ್ತಲ್ 3ನೇ ಸ್ಥಾನ ಪಡೆದರು. ಇಂಗ್ಲೆಂಡ್ ಚುನಾವಣೆ ವೇಳೆ ಮಿತ್ತಲ್ ಹಿಂಬಾಲಕರ ನಿಲುವು ಪ್ರಭಾವ ಬೀರಲಿದೆ ಎಂದು ಪತ್ರಿಕೆ ವಿಶ್ಲೇಷಿಸಿತು. 7ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ಅವರ ಆರ್‌ಐಎಲ್ ಭಾರತದ ಅತೀ ದೊಡ್ಡ ತೈಲ ಕಂಪೆನಿ. ಮುಖೇಶ್ ಪೆಟ್ರೋಲಿಯಂ, ಎಲ್‌ಪಿಜಿ, ಪೆಟ್ರೋಕೆಮಿಕಲ್ಸ್, ಜವಳಿ ಘಟಕ ಮತ್ತು ಮುಂಬೈಯಲ್ಲಿ 2 ಶತಕೋಟಿ ಡಾಲರ್ ಮೌಲ್ಯದ ಮನೆ ಒಡೆಯ ಎಂದು ವಿವರಿಸಿತು.

2008: 58ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿದ್ಧಾರ್ಥ ಸಿನ್ಹಾ ನಿರ್ದೇಶನದ ಭಾರತೀಯ ಸಾಕ್ಷ್ಯಚಿತ್ರ `ಉಡೆಧ್ ಬನ್'ಗೆ ರಜತ ಪದಕ ಪ್ರಶಸ್ತಿ ಲಭಿಸಿತು. ಚಲನಚಿತ್ರೋತ್ಸವದ ಮುಖ್ಯ ಕಾರ್ಯಕ್ರಮವೆಂದೇ ಬಿಂಬಿತವಾದ `ಸಾಕ್ಷ್ಯಚಿತ್ರಗಳ ವಿಭಾಗದಲ್ಲಿ' ಈ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಈ ವಿಭಾಗದಲ್ಲಿ ಪ್ರದರ್ಶನಗೊಂಡ ಸಾಕ್ಷ್ಯಚಿತ್ರಗಳಲ್ಲಿ ಹನ್ನೊಂದು ಉತ್ತಮ ಸಾಕ್ಷ್ಯ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಅವುಗಳಲ್ಲಿ ಮತ್ತೊಬ್ಬ ಭಾರತೀಯ ನಿರ್ದೇಶಕ ಉಮೇಶ್ ಕುಲಕರ್ಣಿ ನಿರ್ದೇಶನದ `ತ್ರೀ ಆಫ್ ಅಸ್' ಚಿತ್ರ ಕೂಡ ಸೇರಿತು. ರಜತ ಪದಕಕ್ಕೆ ಆಯ್ಕೆಯಾದ 21 ನಿಮಿಷದ, ಮಾತಿಲ್ಲದ `ಉಡೆಧ್ ಬನ್' ಸಾಕ್ಷ್ಯ ಚಿತ್ರದಲ್ಲಿ ಹದಿಹರೆಯದ ಯುವಕನೊಬ್ಬನ ಜೀವನ ಕ್ರಮವನ್ನು ಪ್ರದರ್ಶಿಸುವ ಕಥಾ ಹಂದರವಿದೆ. ಆ ಯುವಕ ತನ್ನ ಕುಟುಂಬ ಹಾಗೂ ಶಾಲೆಯಿಂದ ಎದುರಿಸುವ ಕಷ್ಟಗಳು ಹಾಗೂ ಅವುಗಳನ್ನು ಬಗೆಹರಿಸಿಕೊಳ್ಳುವ ವಿಧಾನಗಳನ್ನು ಈ ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಆಧುನಿಕ ನಿರೂಪಣೆ ಮೂಲಕ ಚಿತ್ರ ಮತ್ತು ಶಬ್ದದ ನಡುವೆ ಸಾಮರಸ್ಯ ಕಲ್ಪಿಸಿ, ಪದಗಳಿಗಿಂತ ಇವೆರಡಕ್ಕೇ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ವಿಶೇಷವಾಗಿದೆ. ಈ ವಿಶೇಷಕ್ಕಾಗಿಯೇ ಉಡೆಧ್ ಬನ್ ಚಿತ್ರಕ್ಕೆ ರಜತ ಪದಕ ಲಭಿಸಿತು' ಎಂದು ಅಂತಾರಾಷ್ಟ್ರೀಯ ಚಿತ್ರೋತ್ಸವದ ತ್ರಿಸದಸ್ಯರ ತೀರ್ಪುಗಾರರ ಸಮಿತಿ ಹೇಳಿತು.

2008: ಕಾರ್ಮಿಕ ಮಹಿಳೆಯ ಹೆರಿಗೆ ಭತ್ಯೆಯನ್ನು ಈಗಿರುವ 250 ರೂಪಾಯಿಗಳಿಂದ ಒಂದು ಸಾವಿರ ರೂಪಾಯಿಗಳಿಗೆ ಏರಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. 1961ರ ಹೆರಿಗೆ ಭತ್ಯೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿತು.

2008: ಜಾರ್ಖಂಡಿನ ಜೆಎಂಎಂ ಸಂಸದ ಸುನೀಲ್ ಮಹತೊ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ನಕ್ಸಲನೊಬ್ಬ ಸೇರಿದಂತೆ ಒಟ್ಟು ಏಳು ಮಂದಿ ನಕ್ಸಲೀಯರನ್ನು ಪೊಲೀಸರು ಎನ್ ಕೌಂಟರಿನಲ್ಲಿ ಹತ್ಯೆ ಮಾಡಿದರು. ಒರಿಸ್ಸಾದ ಗಡಿಪ್ರದೇಶ ಫುಲ್ ಜೊರಿನ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು ಮತ್ತು ಪೊಲೀಸರು ನಡುವೆ ನಡೆದ ಈ ಘರ್ಷಣೆಯಲ್ಲಿ ಹತ್ಯೆಯಾಗಿರುವವರಲ್ಲಿ ಇಬ್ಬರು ಮಹಿಳೆಯರು. 2007ರ ಮಾರ್ಚ್ 4ರಂದು ಬಘುರಿಯಾದಲ್ಲಿ ಸಂಸದ ಸುನೀಲ್ ಮಹತೊ ಅವರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾಗಿಯಾಗಿದ್ದ ವಿಕಾಸ್ ಎಂಬುವವನನ್ನು ಪೊಲೀಸರು ಘರ್ಷಣೆಯಲ್ಲಿ ಹತ್ಯೆ ಮಾಡಿದರು.

2008: ಸಿಪಿಎಂ ಶಾಸಕ ಅಜಿತ್ ಸರ್ಕಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು, ಆರ್ ಜೆ ಡಿಯ ವಿವಾದಾತ್ಮಕ ನಾಯಕ ಪಪ್ಪು ಯಾದವ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಾಲ್ಕನೇ ಅವಧಿಗೆ ಲೋಕಸಭಾ ಸದಸ್ಯರಾದ 40 ವರ್ಷದ ಪಪ್ಪು ಯಾದವ್ ಅವರನ್ನು ದೆಹಲಿಯ ತಿಹಾರ್ ಜೈಲಿನಿಂದ ಕರೆತಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿ. ಎಂ. ಶ್ರೀವಾಸ್ತವ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೂಡಲೇ ಕುಸಿದು ಕಣ್ಣೀರಿಟ್ಟ ಪಪ್ಪು ಯಾದವ್ ತಮ್ಮ ಮೇಲೆ ದಯೆ ತೋರುವಂತೆ ವಿನಂತಿಸಿದರು. ಕೊಲೆ, ಅಪಹರಣ, ಸುಲಿಗೆ ಸೇರಿ 45 ಪ್ರಕರಣಗಳಲ್ಲಿ ಪಪ್ಪು ಯಾದವ್ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕ ರಾಜನ್ ತಿವಾರಿ, ಕುಖ್ಯಾತ ರೌಡಿ ಅನಿಲ್ ಯಾದವ್ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2008: ರಾಜ್ಯಸಭೆಯ ಮಾಜಿ ಸದಸ್ಯೆ ಡಾ.ಪಿ. ಸೆಲ್ವಿದಾಸ್, ಮಾಜಿ ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಾಹಿತಿ ಸಾರಾ ಅಬೂಬಕ್ಕರ್ ಸೇರಿದಂತೆ ಐವರಿಗೆ ಗೌರವ ಡಾಕ್ಟರೇಟ್ ನೀಡಲು ಮಂಗಳೂರು ವಿಶ್ವವಿದ್ಯಾಲಯವು ತೀರ್ಮಾನಿಸಿದೆ ಎಂದು ಕುಲಪತಿ ಪ್ರೊ. ಕೆ.ಎಂ. ಕಾವೇರಿಯಪ್ಪ ಪ್ರಕಟಿಸಿದರು.

2007: ಕಾವೇರಿ ನ್ಯಾಯಮಂಡಳಿಯ ತೀರ್ಪಿನಿಂದ ಕರ್ನಾಟಕಕ್ಕೆ ಆದ ಅನ್ಯಾಯವನ್ನು ಪ್ರತಿಭಟಿಸಿ ಕಾವೇರಿ ಅಚ್ಚುಕಟ್ಟು ಪ್ರದೇಶವಾದ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯ, ಕೇಂದ್ರ ವಾರ್ತಾ ಖಾತೆ ರಾಜ್ಯ ಸಚಿವ ಅಂಬರೀಷ್ ಅವರು ಸಚಿವ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ 'ಈ ರಾಜೀನಾಮೆ ಸ್ವೀಕರಿಸುವ ಮಾದರಿಯಲ್ಲಿ ಇಲ್ಲ' ಎಂದು ಸ್ಪೀಕರ್ ಕಚೇರಿ ಹೇಳಿತು.

2007: ಮಡಗಾಂವಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಆರನೇ ಆಟಗಾರನ ಗೌರವಕ್ಕೆ ಪಾತ್ರರಾದರು.

2007: ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಾದ ಟಿ.ಬಿ. ಸೊಲಬಕ್ಕನವರ, ಕೆ.ಟಿ. ಶಿವಪ್ರಸಾದ ಹಾಗೂ ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 2006ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿತು.

2006: ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಮೂರು ತಿಂಗಳ ಒಳಗಾಗಿ ಈ ಸಂಬಂಧ ಈಗಿನ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆಯೂ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೂಚಿಸಿತು. ನೋಂದಣಿ ಇಲ್ಲದ ವಿವಾಹಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಮನ್ನಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2006: ಮಂಗಳೂರಿನ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣಾ ಸಮಿತಿಯು 2006ನೇ ಸಾಲಿನ ಪ್ರೊ. ಎಸ್. ವಿ.ಪಿ. ಸಂಸ್ಮರಣಾ ಪ್ರಶಸ್ತಿಯನ್ನು ಮೈಸೂರಿನ ಸಿಪಿಕೆ ಎಂದೇ ಪರಿಚಿತರಾದ ಪ್ರೊ. ಸಿ.ಪಿ. ಕೃಷ್ಣ ಕುಮಾರ್ ಅವರಿಗೆ ನೀಡಲು ತೀರ್ಮಾನಿಸಿತು.

2006: ಬೆಂಗಳೂರಿನ ಉದ್ಯೋಗಿ ಅಭಿಲಾಷ್ ಮತ್ತು ಲಕ್ಷ್ಮಿ ಎಂಬ ಯುವಜೋಡಿ, ಪುದುಚೆರಿಯಿಂದ ಸಮುದ್ರದ ಮಧ್ಯಕ್ಕೆ ಹಡಗಿನಲ್ಲಿ ಸಾಗಿ ಅಲ್ಲೇ ಗೆಳೆಯರು, ನೌಕಾ ಸಿಬ್ಬಂದಿ ಸಮ್ಮುಖದಲ್ಲಿ ಮದುವೆಯಾಗುವ ಮೂಲಕ ಪ್ರೇಮಿಗಳ ದಿನವನ್ನು ವಿನೂತನವಾಗಿ ಆಚರಿಸಿತು. ಹಡಗಿನಲ್ಲೇ ಅರ್ಚಕರು ಸೇರಿದಂತೆ ಮದುವೆಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು.

2006: ಪ್ರಜಾತಾಂತ್ರಿಕ ನಾಯಕರಾದ ನೊಬೆಲ್ ಪ್ರಶಸ್ತಿ ವಿಜೇತ ಅಂಗ್ ಸಾನ್ ಸೂ ಕೀ ಅವರ ಸಹಾಯಕ ಟಿನ್ ಓ ಅವರ ಯಂಗೂನ್ ಗೃಹಬಂಧನದ ಅವಧಿಯನ್ನು ಇನ್ನೂ 12 ತಿಂಗಳುಗಳ ಅವಧಿಗೆ ವಿಸ್ತರಿಸಿ ಮ್ಯಾನ್ಮಾರಿನ ಆಡಳಿತವು ಆದೇಶ ಹೊರಡಿಸಿತು. 2003ರ ಮೇ ತಿಂಗಳಿನಲ್ಲಿ ಅಂಗ್ ಸಾನ್ ಸೂ ಕಿ ಬಂಧನದ ಸಂದರ್ಭದಲ್ಲೇ ಟಿನ್ ಓ ಅವರನ್ನೂ ಬಂಧಿಸಲಾಗಿತ್ತು. ಮೊದಲಿಗೆ ವಾಯುವ್ಯ ಮ್ಯಾನ್ಮಾರಿನ ಕಾಲೇ ಸೆರೆಮನೆಯಲ್ಲಿ ಇರಿಸಿ ನಂತರ 2004ರ ಫೆಬ್ರುವರಿಯಲ್ಲಿ ಅವರನ್ನು ಯಂಗೂನ್ ಗೆ ತಂದು ಗೃಹಬಂಧನದಲ್ಲಿ ಇರಿಸಲಾಗಿತ್ತು.

2000: ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಸೆನ್ಸೆಕ್ಸ್ 6150.69 ಪಾಯಿಂಟಿಗೆ ತಲುಪಿತು. ಇದು ಭಾರತೀಯ ಷೇರು ವಿನಿಮಯ ಕೇಂದ್ರಗಳ ಇತಿಹಾಸದಲ್ಲಿ ಆದ ಗರಿಷ್ಠ ಏರಿಕೆಯಾಗಿತ್ತು.

1989: ಇರಾನಿನ ಖೊಮೇನಿ ಭಾರತೀಯ ಸಂಜಾತ ಬ್ರಿಟಿಷ್ ಸಾಹಿತಿ ಸಲ್ಮಾನ್ ರಷ್ದಿ ಅವರಿಗೆ `ಸಟಾನಿಕ್ ವರ್ಸಸ್' ಪುಸ್ತಕ ಬರೆದುದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿ ಫತ್ವಾ ಹೊರಡಿಸಿದ. ಈ ಫತ್ವಾವನ್ನು 1998ರಲ್ಲಿ ಹಿಂತೆಗೆದುಕೊಳ್ಳಲಾಯಿತು.

1981: ಡಕಾಯಿತ ರಾಣಿ ಫೂಲನ್ ದೇವಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ 20 ಮಂದಿ ಠಾಕೂರರನ್ನು ಗುಂಡಿಟ್ಟು ಕೊಂದಳು. ತನ್ನ ಪ್ರಿಯಕರ ವಿಕ್ರಮ್ ಮಲ್ಹನನ್ನು ಕೊಂದದ್ದಕ್ಕೆ ಸೇಡಿನ ಕ್ರಮವಾಗಿ ವ್ಯಾಲಂಟೈನ್ ದಿನವಾದ ಇದೇ ದಿನ ಫೂಲನ್ ದೇವಿ ಎಸಗಿದ ಈ ಕೃತ್ಯ ಅಮೆರಿಕಾದ `ವ್ಯಾಲಂಟೈನ್ ದಿನದ ಹತ್ಯಾಂಕಾಂಡ'ದಷ್ಟೇ ಖ್ಯಾತಿ ಗಳಿಸಿತು.

1957: ತನ್ನ ಪ್ರಥಮ ಮೆಟಾಟನ್ ಬಾಂಬ್ ತಯಾರಿಕೆಯನ್ನು ಬ್ರಿಟನ್ ಬಹುತೇಕ ಪೂರೈಸಿದೆ ಎಂದು ಬ್ರಿಟನ್ನಿನ ರಕ್ಷಣಾ ಸಚಿವ ಡಂಕನ್ ಸ್ಯಾಂಡಿಸ್ ಪ್ರಕಟಿಸಿದರು. ಈ ಬಾಂಬಿಗೆ 14 ಟನ್ ಆಸ್ಫೋಟಕಗಳ ಶಕ್ತಿ ಇದೆ.

1944: ಸಂಗೀತ ಕಲಾವಿದ ಎಚ್. ಎಂ. ಮಹೇಶ್ (ಸಂಗೀತಾ ಮಹೇಶ್) ಅವರು ಎಚ್. ಎಂ. ನಾರಾಯಣಭಟ್ - ವೆಂಕಟೇಶ್ವರಿ ದಂಪತಿಯ ಮಗನಾಗಿ ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಡಾ. ರಾಜಕುಮಾರ್ ಅವರೊಂದಿಗೆ ವಾರ ಬಂತಮ್ಮಾ, ಮಂತ್ರಾಲಯಕೆ ಹೋಗೋಣ, ಅಯ್ಯಪ್ಪ ಸ್ವಾಮಿ ಮುಂತಾದ ಭಕ್ತಿಗೀತೆಗಳ ಧ್ವನಿ ಮುದ್ರಣ. ಪಿ.ಬಿ.ಎಸ್. ಜಾನಕಿ ಅವರ ಗಜಮುಖನೆ ಗಣಪತಿಯೇ, ಭಾದ್ರಪದ ಶುಕ್ಲದಾ ಚೌತಿಯಂದು, ಬಿ.ಕೆ. ಸುಮಿತ್ರಾ ಅವರ ಉಡುಪಿಯದು , ಕಂಗಳ ಮುಂದೆ ಮುಂತಾದ ಜನಪ್ರಿಯ ಭಕ್ತಿಗೀತೆಗಳ ತಯಾರಿ. 1980ರಲ್ಲಿ ಸಂಗೀತಾ ಸಂಸ್ಥೆ ಸ್ಥಾಪನೆ. ಭಕ್ತಿಗೀತೆ, ಜನಪದ ಗೀತೆ, ಭಾವಗೀತೆ, ಶಾಸ್ತ್ರೀಯ ಸಂಗೀತ, ಷರೀಫ್ ಸಾಹೇಬರ ಹಾಡು, ಯಕ್ಷಗಾನ, ಹರಿಕಥೆಗಳ ಧ್ವನಿಮುದ್ರಣ ಹಾಗೂ ಸಿಡಿ ಬಿಡುಗಡೆ ಮಾಡಿರುವ ಮಹೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

1929: ಪೊಲೀಸರಂತೆ ವೇಷ ಧರಿಸಿ ಅಲ್ ಕ್ಯಾಪೋನ್ ತಂಡದ ಸದಸ್ಯರು ಜಾರ್ಜ್ `ಬಗ್ಸ್; ಮೋರನ್ ತಂಡದ 7 ಜನರನ್ನು ಷಿಕಾಗೋ ನಗರದ ಗ್ಯಾರೇಜ್ ಒಂದರಲ್ಲಿ ಕೊಂದು ಹಾಕಿದರು. ಈ ಘಟನೆ `ವ್ಯಾಲಂಟೈನ್ ದಿನದ ಹತ್ಯಾಕಾಂಡ' ಎಂದೇ ಖ್ಯಾತಿ ಪಡೆಯಿತು.

1919: ಕಲಾವಿದ ಸಿ.ಆರ್. ಸುಂದರರಾವ್ ಜನನ.

1908: ಕಲಾವಿದ ಕೆ.ಎ. ಚಿಟ್ಟಿ ಜನನ.

1900: ಕಲಾವಿದ ಎಚ್. ಎಸ್. ಇನಾಮತಿ ಜನನ.

1779: ಹದಿನೆಂಟನೇ ಶತಮಾನದ ಖ್ಯಾತ ಸಂಶೋಧಕ ಕ್ಯಾಪ್ಟನ್ ಜೇಮ್ಸ್ ಕುಕ್ ಪಾಲಿನೇಷಿಯಾದ ನಿವಾಸಿಗಳ ಜೊತೆ ಸಂಭವಿಸಿದ ಘರ್ಷಣೆಯಲ್ಲಿ ಮೃತನಾದ. ಶಾಂತ ಸಾಗರದಲ್ಲಿ ಈತ ನಡೆಸಿದ ಯಾನಗಳು ಅಪಾರ ಖ್ಯಾತಿ ಪಡೆದಿವೆ.

1483: ಚಕ್ರವರ್ತಿ ಬಾಬರ್ (1483-1530) ಹುಟ್ಟಿದ. ಈತ ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಿದ ವ್ಯಕ್ತಿ.

No comments:

Advertisement