ಇಂದಿನ ಇತಿಹಾಸ
ಜನವರಿ 29
ಖ್ಯಾತ ಚಿತ್ರನಟ ಶಂಕರ್‌ನಾಗ್ ಸಾವಿಗೆ ಸಂಬಂಧಿಸಿದಂತೆ, ಅವರ ಕುಟುಂಬ ವರ್ಗಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್, ಆದೇಶ ಹೊರಡಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ 25 ಲಕ್ಷ ರೂಪಾಯಿಗಳನ್ನು 26,80,155 ರೂಪಾಯಿಗೆ ಹೆಚ್ಚಿಸಲು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿತು.
2009: ಲಂಚ ತೆಗೆದಕೊಂಡ ಪ್ರಕರಣವೊಂದರಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಶಾಸಕರ ಭವನದ ಕೊಠಡಿಯಲ್ಲೇ ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಈದಿನ ಮಧ್ಯಾಹ್ನ ಬಂಧಿಸಲಾಯಿತು. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರನ್ನು ಪಕ್ಷದಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ತಿಳಿಸಿದರು. ಅಂಡರ್‌ಸನ್ ಪೇಟೆಯ ಹುಸೇನ್ ಮೊಯಿನ್ ಫರೂಕ್ ಎಂಬವರು ನೀಡಿದ್ದ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಅಲ್ಲಿನ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಬ್ ಇನ್ಸ್‌ಪೆಕ್ಟರ್ ಪಾಷಾ ವಿರುದ್ಧವೂ ಈ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಯಿತು.
2009: ಎಲ್‌ಟಿಟಿಇ ನೆಲೆಗಳನ್ನು ಒಂದೊಂದಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ಸೇನೆ ಈದಿನ ವಿಸುವಮಡು ಪಟ್ಟಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಇದು ಎಲ್‌ಟಿಟಿಗಳ ಪಾಲಿನ ಫಿರಂಗಿಗಳ ಉಗ್ರಾಣ ಸ್ಥಾನವಾಗಿದ್ದು ಈ ಪ್ರದೇಶದಲ್ಲಿ 35 ಅಡಿ ಉದ್ದದ ಸಬ್‌ಮೆರಿನ್ ತರಹದ ಜಲಾಂತರ್ಗಾಮಿ ನೌಕೆಯನ್ನು ವಶಪಡಿಸಿಕೊಳ್ಳಲಾಯಿತು.. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಎಲ್‌ಟಿಟಿಇ ಪಡೆಗಳ ಜೊತೆ ಸೇನೆ ತೀವ್ರ ಕಾಳಗ ನಡೆಸಿತು. ವಿಸುವಮಡು ಎಲ್‌ಟಿಟಿಇ ಪಡೆಗಳ ಪಾಲಿಗೆ ಭದ್ರ ಆಶ್ರಯ ಸ್ಥಾನವಾಗಿತ್ತು. ಈಗ ಇದೂ ಕೂಡಾ ಸೇನೆಯ ವಶಕ್ಕೆ ಸರಿಯಿತು.
2009: ಖ್ಯಾತ ಚಿತ್ರನಟ ಶಂಕರ್‌ನಾಗ್ ಸಾವಿಗೆ ಸಂಬಂಧಿಸಿದಂತೆ, ಅವರ ಕುಟುಂಬ ವರ್ಗಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್, ಆದೇಶ ಹೊರಡಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ 25 ಲಕ್ಷ ರೂಪಾಯಿಗಳನ್ನು 26,80,155 ರೂಪಾಯಿಗೆ ಹೆಚ್ಚಿಸಲು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿತು. ಈ ಪರಿಹಾರದ ಮೊತ್ತವನ್ನು ಘಟನೆ ನಡೆದ ದಿನದಿಂದ ಶೇ 6ರ ಬಡ್ಡಿದರ ಸೇರಿಸಿ ನೀಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದರು. ಶಂಕರ್‌ನಾಗ್ ಅವರು, ದಾವಣಗೆರೆ ಜಿಲ್ಲೆಯ ಅರುಗೋಡು ಗ್ರಾಮದ ಬಳಿ 1990ರ ಸೆ.30ರಂದು ನಡೆದ ಅಪಘಾತದಲ್ಲಿ ಮೃತರಾಗಿದ್ದರು. 'ಜೋಕುಮಾರಸ್ವಾಮಿ' ಚಿತ್ರದ ನಿರ್ಮಾಪಕರಾಗಿದ್ದ ಶಂಕರ್‌ನಾಗ್ ಅವರು ಇದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಆ ಮಾರ್ಗವಾಗಿ ತಮ್ಮ ಪತ್ನಿ ಅರುಂಧತಿ ಹಾಗೂ ಪುತ್ರಿ ಕಾವ್ಯಾ ಜೊತೆ ಕಾರಿನಲ್ಲಿ ಪಯಣಿಸುತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅರುಂಧತಿ ಹಾಗೂ ಕಾವ್ಯಾ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಶಂಕರ್‌ನಾಗ್ ಅವರ ಮರಣಕ್ಕೆ ಪರಿಹಾರ ಕೋರಿ ಅರುಂಧತಿ ಹಾಗೂ ಕಾವ್ಯಾ ಅವರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿಯು ಅವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಈ ಪರಿಹಾರವನ್ನು ಹೆಚ್ಚಿಸುವಂತೆ ಕೋರಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಶಂಕರ್‌ನಾಗ್ ಅವರ ಆದಾಯ, ಖರ್ಚು-ವೆಚ್ಚ ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಪೀಠ, ಪರಿಹಾರದ ಹಣವನ್ನು 1.80 ಲಕ್ಷ ರೂಪಾಯಿ ಹೆಚ್ಚಿಸಿತು.
2009: ರಾಷ್ಟ್ರದ ನೂತನ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಸರ್ಕಾರ ಸಿದ್ಧಪಡಿಸಿದ 819 ಶತಕೋಟಿ ಡಾಲರ್ (40 ಲಕ್ಷ ಕೋಟಿ ರೂ.) ಆರ್ಥಿಕ ನೆರವಿನ ಪ್ಯಾಕೇಜಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಒಪ್ಪಿಗೆ ಸೂಚಿಸಿತು. ಡೆಮಾಕ್ರೆಟಿಕ್ ಪಕ್ಷದ ಬಹುಮತವಿರುವ ಜನಪ್ರತಿನಿಧಿ ಸಭೆ, ಒಬಾಮ ಅಧ್ಯಕ್ಷರಾದ ನಂತರದಲ್ಲಿ ಮಂಡಿಸಿದ ಪ್ರಥಮ-ಮಹತ್ವದ ಆರ್ಥಿಕ ಉತ್ತೇಜನ ಕ್ರಮ ಯೋಜನೆಗೆ ಹಸಿರು ನಿಶಾನೆ ತೋರಿತು. ಅಧ್ಯಕ್ಷ ಒಬಾಮ ಮಂಡಿಸಿದ ಪ್ಯಾಕೇಜಿನಲ್ಲಿ 'ತುರ್ತು ವೆಚ್ಚ ಕ್ರಮ ಹಾಗೂ ತೆರಿಗೆ ರಿಯಾಯಿತಿ' ಸೌಲಭ್ಯ ಅಡಕವಾಗಿದ್ದವು. ನಾಗರಿಕರು, ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು 275 ಶತಕೋಟಿ ಡಾಲರಿನ ತಾತ್ಕಾಲಿಕ ತೆರಿಗೆ ರಿಯಾಯಿತಿ ಕಲ್ಪಿಸಲಾಗಿತ್ತು. ಉದ್ಯೋಗ ಕಡಿತದ ಭೀತಿಯಲ್ಲಿರುವ ಅಮೆರಿಕನ್ನರ 'ಒತ್ತಡ' ಕಡಿಮೆ ಮಾಡಲು ಒಬಾಮ ಆಡಳಿತ 544 ಶತಕೋಟಿ ಡಾಲರ್ ಮೂಲಕ 'ನೌಕರಿ ಸೃಷ್ಟಿ'ಯ ಹೊಸ ಯೋಜನೆ ಸಿದ್ಧಪಡಿಸಿತ್ತು. ಆರೋಗ್ಯ ಅಭಿವೃದ್ಧಿ ಕ್ಷೇತ್ರ, ಬಡವರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ನೆರವು, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಈ ಹಣ ವಿನಿಯೋಜಿಸಲು ಯೋಜಿಸಲಾಗಿತ್ತು.
2008: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧ ಆಸ್ಟ್ರೇಲಿಯಾ ತಂಡದವರು ಮಾಡಿದ್ದ ಜನಾಂಗೀಯ ನಿಂದನೆ ಆರೋಪ ಸಾಬೀತಾಗಲಿಲ್ಲ. ಹೀಗಾಗಿ ಅವರ ಮೇಲೆ ಹೇರಲಾಗಿದ್ದ ಮೂರು ಪಂದ್ಯಗಳ ನಿಷೇಧ ಶಿಕ್ಷೆ ರದ್ದಾಯಿತು. ಆದರೆ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆತಿಥೇಯ ತಂಡದ ಆಂಡ್ರ್ಯೂ ಸೈಮಂಡ್ಸ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದ `ಭಜ್ಜಿ' ಮೇಲೆ ಪಂದ್ಯ ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಯಿತು. ಅಡಿಲೇಡಿನಲ್ಲಿ ನಡೆದ ಮೇಲ್ಮನವಿ ವಿಚಾರಣೆ ಕಾಲದಲ್ಲಿ ಟೀಮ್ ಇಂಡಿಯಾ ಮ್ಯಾನೇಜರ್ ಎಂ.ವಿ. ಶ್ರೀಧರ್ ಜೊತೆಗೆ ಹರಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಹಾಜರಿದ್ದರು. (`ಭಜ್ಜಿ' ಜನಾಂಗೀಯ ನಿಂದನೆ `ಪ್ರಹಸನ'ದ ಘಟನಾವಳಿಗಳು: * ಜನವರಿ 4: ಆಕ್ಷೇಪಾರ್ಹ ವರ್ತನೆ ಹಾಗೂ ಜನಾಂಗೀಯ ನಿಂದನೆ ದೂರು. * ಜ.5: ವಿಚಾರಣೆ ಮುಂದೂಡಿದ ಐಸಿಸಿ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್. * ಜ.6: ಮ್ಯಾಚ್ ರೆಫರಿಯಿಂದ `ಭಜ್ಜಿ'ಗೆ ಮೂರು ಪಂದ್ಯಗಳ ನಿಷೇಧ ಶಿಕ್ಷೆ. * ಜ.7: ತೀರ್ಪು ಬದಲಿಸುವುದಿಲ್ಲ-ಪ್ರಾಕ್ಟರ್ ಸ್ಪಷ್ಟನೆ; ಬಿಸಿಸಿಐಯಿಂದ ಮೇಲ್ಮನವಿ. * ಜ.8: ಪ್ರವಾಸ ರದ್ದು ಬೆದರಿಕೆ ತಾತ್ಕಾಲಿಕವಾಗಿ ಕೈಬಿಟ್ಟ ಬಿಸಿಸಿಐ. * ಜ.9: ಐಸಿಸಿಯಿಂದ ಮೇಲ್ಮನವಿ ಆಯುಕ್ತರ ನೇಮಕ. * ಜ.10: ಸೈಮಂಡ್ಸ್ ಕೆಣಕಿದ್ದೇ ಹರಭಜನ್ ಪ್ರತ್ತ್ಯುತ್ತರ ನೀಡಲು ಕಾರಣ: ಭಾರತದ ವಾದ. * ಜ.11: ಪ್ರವಾಸ ರದ್ದು ತೀರ್ಮಾನದ ಅಧಿಕಾರ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರಿಗೆ. * ಜ.12: ಸರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪವಾರ್ ಹೇಳಿಕೆ. * ಜ.13: ಕುಂಬ್ಳೆ ಹಾಗೂ ಪಾಂಟಿಂಗ್ ನಡುವೆ ಸಂಧಾನಕ್ಕೆ ರಂಜನ್ ಮದುಗಲೆ ಮಧ್ಯಸ್ಥಿಕೆ. * ಜ.14: ಟೆಸ್ಟ್ ಸರಣಿಯ ನಂತರ ಮೇಲ್ಮನವಿ ವಿಚಾರಣೆಗೆ ಪ್ರಸ್ತಾವ. * ಜ.25: ಆಸ್ಟ್ರೇಲಿಯಾದವರ ವಾದವನ್ನು ಪರಾಮರ್ಶಿಸದೆ ಒಪ್ಪಿಕೊಂಡ ಪ್ರಾಕ್ಟರ್ ವಿರುದ್ಧ ಕಿಡಿ. * ಜ.26: ಸಿಡ್ನಿ ಟೆಸ್ಟಿನಲ್ಲಿ ಮ್ಯಾಚ್ ರೆಫರಿಗೆ ಭಾರಿ ಸವಾಲು: ಪ್ರಾಕ್ಟರ್ ಅಭಿಪ್ರಾಯ. * ಜ.28: ಹೊಸ ಸಾಕ್ಷಿ ಪರಿಗಣಿಸುವ ನಿರ್ಧಾರಕ್ಕೆ ಬಿಸಿಸಿಐ ಆಕ್ಷೇಪ. * ಜ. 29: ಮೇಲ್ಮನವಿ ವಿಚಾರಣೆ ನಂತರ ಜನಾಂಗೀಯ ನಿಂದನೆ ಆರೋಪ ತಿರಸ್ಕೃತ.)
2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು. ಬೆಳಗ್ಗೆ ಸುಮಾರು 11ಗಂಟೆಗೆ ಆಟವಾಡುವ ವೇಳೆ, ತೆರೆದ ಕೊಳವೆ ಬಾವಿಗೆ ಬಿದ್ದ ಕಾಂಬಳೆಯನ್ನು ಸಂಜೆ 7.30ಕ್ಕೆ ಹಗ್ಗದ ಸಹಾಯದಿಂದ ಹೊರತರಲಾಯಿತು.
2008: ಜೀವ್ ಮಿಲ್ಕಾಸಿಂಗ್ ಅವರನ್ನು ಹಿಂದಿಕ್ಕಿದ ಜ್ಯೋತಿ ರಾಂಧವ ಭಾರತದ ನಂಬರ್ 1 ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು. ಈದಿನ ನವದೆಹಲಿಯಲ್ಲಿ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಂಧವ 84ನೇ ಸ್ಥಾನ ಪಡೆದರೆ, ಜೀವ್ 86ನೇ ಸ್ಥಾನ ತಮ್ಮದಾಗಿಸಿಕೊಂಡರು. ಯುರೋಪಿಯನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಂಧವ ಕತಾರ್ ಮಾಸ್ಟರ್ಸಿನಲ್ಲಿ ಜಂಟಿ ಏಳನೇ ಸ್ಥಾನ ಪಡೆದಿದ್ದರು.
2008: ಕಾಂಗ್ರೆಸ್ ಮುಖಂಡ ಎಚ್. ವಿಶ್ವನಾಥ್ ಅವರ ಆತ್ಮಕಥನ `ಹಳ್ಳಿ ಹಕ್ಕಿಯ ಹಾಡು' ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಮೈಸೂರು ಪತ್ರಕರ್ತರ ಸಂಘದಲ್ಲಿ ಬಿಡುಗಡೆಯಾಯಿತು. ಹಿಂದಿನ ದಿನ ಸಮಾರಂಭದಲ್ಲಿ ಗದ್ದಲ ನಡೆದು ಪುಸ್ತಕ ಬಿಡುಗಡೆ ತಡೆ ಹಿಡಿಯಲ್ಪಟ್ಟಿತ್ತು.
2008: ಸೇತುಸಮುದ್ರಂ ವಿವಾದದ ಬಳಿಕ ರಾಮೇಶ್ವರಂನ ಪುರಾತನ ಸ್ಥಳಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಅವರನ್ನು ಸೇತುವೆ ಸಮೀಪ ಕೊಂಡೊಯ್ಯುವುದು ವ್ಯವಹಾರದ ರೂಪ ಪಡೆಯಿತು. ಸೂಕ್ತ ಅನುಮತಿಯಿಲ್ಲದೆ ಯಾತ್ರಾರ್ಥಿಗಳನ್ನು ಹೊತ್ತು ರಾಮೇಶ್ವರಂ ಸೇತುವೆಗೆ ಆಗಮಿಸಿದ ನಾಲ್ಕು ಮೀನುಗಾರಿಕೆ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡರು.
2008: ವಿಶ್ವದ ಅತ್ಯಂತ ಶ್ರೀಮಂತ ಹತ್ತು ಉದ್ಯಮಿಗಳ ಪಟ್ಟಿಯಲ್ಲಿ ಕರ್ನಾಟಕದವರಾದ ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಗಿಟ್ಟಿಸಿದರು. ಅಮೆರಿಕದ ಪ್ರಸಿದ್ಧ ವಾಣಿಜ್ಯ ನಿಯತಕಾಲಿಕ ಫೋಬ್ಸ್ ತಯಾರಿಸಿದ ಈ ಪಟ್ಟಿಯಲ್ಲಿ ಭಾರತೀಯ ಮುಂಚೂಣಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರಾದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಅಂಬಾನಿ ಸೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಹಾಗೂ ಐಟಿ ಉದ್ಯಮಿ ಅಜೀಮ್ ಪ್ರೇಮ್ ಜಿ ಸೇರಿದರು.
2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕುಲಪತಿ ರಜತ್ ಕಾಂತ ರೇ ಅವರು ಅತ್ಯುನ್ನತ ಪದವಿಯಾದ ದೇಶಿಕೋತ್ತಮ (ಡಿ.ಲಿಟ್) ಪದವಿಯನ್ನು ಪ್ರದಾನ ಮಾಡಿದರು. ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಹೊಂದಿರುವ ರಾವ್ ಅವರು 34 ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೆ ಪಾತ್ರರಾಗಿದ್ದಾರೆ.
2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
2006: ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ 2.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು ಸಾವಿರಾರು ಹಿಂದೂ ಮತ್ತು ಇತರ ಧರ್ಮೀಯರ ಸಂಭ್ರಮೋತ್ಸಾಹದ ಮಧ್ಯೆ ಅನಾವರಣಗೊಳಿಸಲಾಯಿತು. ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದ ಹೊರಭಾಗದಲ್ಲಿ ಭಾರತೀಯ ವಾಸ್ತುಶಿಲ್ಪಿಗಳು ಕೆತ್ತನೆ ಮಾಡಿರುವ ಈ ವಿಗ್ರಹದ ಎತ್ತರ 42.7 ಮೀಟರುಗಳು. ಇದನ್ನು ನಿರ್ಮಿಸಲು 250 ಟನ್ ಉಕ್ಕು ಹಾಗೂ 300 ಲೀಟರ್ ಚಿನ್ನದ ದ್ರಾವಣ ಬಳಸಲಾಗಿದ್ದು, 15 ಮಂದಿ ಭಾರತೀಯ ಶಿಲ್ಪಿಗಳು ಸತತ 3 ವರ್ಷಕಾಲ ಶ್ರಮಿಸಿದರು. ಈ ಪ್ರತಿಮೆಗೆ ಹೆಲಿಕಾಪ್ಟರುಗಳಿಂದ ಪುಷ್ಪಾರ್ಪಣೆ ಮಾಡಲಾಯಿತು. ಈ ಪ್ರತಿಮೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.
2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಅವರು ಈ ಬಾರಿ ಮಾತ್ರ ಪ್ರಶಸ್ತಿಯನ್ನು ಆನಂದ್ ವಸಿಲಿನ್ ಟೊಪಲೊವ್ ಅವರ ಜೊತೆಗೆ ಹಂಚಿಕೊಳ್ಳಬೇಕಾಯಿತು.
2006: ಪೋಲೆಂಡಿನ ಕಟೋವೈಸ್ ನಗರದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆಯ ಸಂದರ್ಭದಲ್ಲಿ ಪ್ರದರ್ಶನ ಕಟ್ಟಡ ಒಂದರ ಛಾವಣಿ ಕುಸಿದು ಕನಿಷ್ಠ 65 ಮಂದಿ ಮೃತರಾಗಿ 160ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಕರಾಚಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಪಠಾಣ್ ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.
1970: ಕಲಾವಿದ ಮಧು ಪ್ಯಾಟಿ ಜನನ.
1955: ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಪ್ರಹ್ಲಾದ್- ಪ್ರೇಮಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1954: ಕಲಾವಿದ ಮೋಹನ ಸೋನ ಜನನ.
1930: ಕಲಾವಿದ ಕೆ.ಜೆ. ರಾವ್ ಜನನ.
1886: ಮೊತ್ತ ಮೊದಲ `ಪೆಟ್ರೋಲಿನಿಂದ ಚಲಿಸುವ ವಾಹನ'ಕ್ಕೆ ಕಾರ್ಲ್ ಬೆಂಝ್ ಪೇಟೆಂಟ್ ಪಡೆದ. ಮೂರು ಚಕ್ರದ ವಾಹನ ಮೂಲ `ಬೆಂಝ್ ಕಾರು' 1885ರಲ್ಲೇ ಮೊದಲ ಬಾರಿಗೆ ಚಲಿಸಿದ್ದರೂ ಅದರ ವಿನ್ಯಾಸಕ್ಕೆ 1886ರ ವರೆಗೂ ಪೇಟೆಂಟ್ ಲಭಿಸಿರಲಿಲ್ಲ.
1866: ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ರೊಮೈನ್ ರೋಲ್ಲಂಡ್(1866-1944) ಹುಟ್ಟಿದ. ಈತ ಮಹಾತ್ಮಾ ಗಾಂಧಿ ಹಾಗೂ ರಾಮಕೃಷ್ಣ ಪರಮಹಂಸ ಅವರ ಜೀವನಚರಿತ್ರೆಗಳನ್ನೂ ಬರೆದ ವ್ಯಕ್ತಿ.
1856: ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವ `ವಿಕ್ಟೋರಿಯಾ ಕ್ರಾಸ್' ರಾಣಿ ವಿಕ್ಟೋರಿಯಾ ಅವರಿಂದ ಆರಂಭಗೊಂಡಿತು.
1820: ಮೂರನೇ ಜಾರ್ಜ್ ವಿಂಡ್ಸರ್ ಕ್ಯಾಸಲಿನಲ್ಲಿ 81ನೇ ವಯಸ್ಸಿನಲ್ಲಿ ನಿಧನನಾದ. 59 ವರ್ಷಗಳ ಕಾಲ ಬ್ರಿಟನ್ನನ್ನು ಆಳಿದ ಈತ ದೀರ್ಘಕಾಲ ಆಡಳಿತ ನಡೆಸಿದ ಬ್ರಿಟಿಷ್ ದೊರೆ.
1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ (1803-1863) ಹುಟ್ಟಿದ. ಈತ 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ.
1780: ಭಾರತದ ಮೊತ್ತ ಮೊದಲ ಪತ್ರಿಕೆ `ಹಿಕ್ಕೀಸ್ ಬೆಂಗಾಲ್ ಗಝೆಟ್' ಅಥವಾ `ಕಲ್ಕತ್ತಾ ಜನರಲ್ ಅಡ್ವರ್ ಟೈಸರ್' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ) ಇಂಗ್ಲಿಷಿನಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರಿಂದ ಪ್ರಕಟಿತವಾಯಿತು. `ಹಿಕ್ಕೀಸ್ ಬೆಂಗಾಲ್ ಗಝೆಟ್' ನಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.
No comments:
Post a Comment