Sunday, March 7, 2010

ಇಂದಿನ ಇತಿಹಾಸ History Today ಫೆಬ್ರುವರಿ 01

ಇಂದಿನ ಇತಿಹಾಸ

ಫೆಬ್ರುವರಿ 01


ಭಾರತದ ಟೆನಿಸ್ ಪ್ರೇಮಿಗಳಿಗೆ ಇದು ಸಂಭ್ರಮದ ದಿನ ಸಾನಿಯಾ ಮಿರ್ಜಾ.  ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್ನ ಮಿಶ್ರ ಡಬ್ಬಲ್ಸ್ ವಿಭಾಗದ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಭಾರತದ ಟೆನಿಸಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೊಂದಾಣಿಕೆಯ ಆಟವಾಡಿದ ಭಾರತದ ಜೋಡಿ 6-3, 6-1 ರಲ್ಲಿ ಫ್ರಾನ್ಸ್‌ನ ನಥಾಲಿ ಡೆಚಿ ಮತ್ತು ಇಸ್ರೇಲಿನ ರಾಂಡಿ ರಾಮ್ ಅವರನ್ನು ಮಣಿಸಿತು.

2016: ತಮಿಳುನಾಡಿನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಂ ಅವರು ಕೇಂದ್ರೀಯ ಪೊಲೀಸ್ ಪಡೆಗಳ ಮುಖ್ಯಸ್ಥೆಯಾಗಿ ನೇಮಕಗೊಂಡರು. ಇದರೊಂದಿಗೆ ಕೇಂದ್ರೀಯ ಪೊಲೀಸ್ ಪಡೆಗಳನ್ನು ಮುನ್ನಡೆಸುವ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅರ್ಚನಾ ಪಾತ್ರರಾದರು. ಅರ್ಚನಾ ಅವರು ಪ್ರಸ್ತುತ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ನಿರ್ದೇಶಕಿಯಾಗಿದ್ದು, ಅವರು ಸೌರಾಷ್ಟ್ರ ಗಡಿ ಭದ್ರತಾ ಪಡೆ (ಎಸ್ಎಸ್ ಬಿ)ಯ ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸೌರಾಷ್ಟ್ರ ಗಡಿ ಭದ್ರತಾ ಪಡೆಯು ನೇಪಾಳ ಮತ್ತು ಭೂತಾನ್ ಜೊತೆಗಿನ ಭಾರತದ ಗಡಿಯನ್ನು ರಕ್ಷಿಸುತ್ತದೆ.

2009: ಹುರುಳಿ ಎಂದರೆ ಕುದುರೆ ತಿನ್ನುವ ಆಹಾರ. ಬಡವರ ಪಾಲಿನ ಕಡಿಮೆ ಬೆಲೆಯ ಪದಾರ್ಥ. ಬೇಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಡುಗೆಗೆ ಸಿದ್ಧಗೊಳಿಸಲು ತುಂಬಾ ಕಾಲಾವಕಾಶಬೇಕು ಎಂಬುದು ಸಾಮಾನ್ಯ ಕಲ್ಪನೆ. ಆದರೆ ಹುರುಳಿಯಿಂದ ದಿಢೀರ್ ಸಿದ್ಧ ಆಹಾರ ತಯಾರಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಕೇಂದ್ರದ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ಪ್ರಕಟಿಸಿದರು. ಸಂಸ್ಕರಿಸಿದ ಹುರುಳಿಯಿಂದ ಕೇವಲ 15 ನಿಮಿಷದಲ್ಲೇ ರುಚಿಕಟ್ಟಾದ ಆಹಾರ ತಯಾರಿಸಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಹುರುಳಿ ಬಳಕೆಗೆ ಮುನ್ನ 24 ಗಂಟೆ ಮೊದಲೇ ನೀರಿನಲ್ಲಿ ನೆನೆಸಬೇಕು. ಬಳಿಕ ಅದನ್ನು ಬಟ್ಟೆಯಲ್ಲಿ ಕಟ್ಟಿ ಮೊಳಕೆಗೆ ಬಿಡಬೇಕು. ಆ ನಂತರವಷ್ಟೇ ಅದು ಉಪಯೋಗಕ್ಕೆ ಯೋಗ್ಯವಾಗುತ್ತದೆ. ಇದು ಹಳೆಯ ಕತೆ. ಆದರೆ 'ಇನ್‌ಸ್ಟಂಟ್ ಕುಕ್ಕಿಂಗ್'ಗೆ ಕಾಲಕ್ಕೆ ತಕ್ಕಂತೆ 5-10 ನಿಮಿಷ ನೀರಿನಲ್ಲಿ ಕುದಿಸಿದರೆ ಸಾಕು. ಹುರುಳಿ ಅಡುಗೆ ತಯಾರಿಕೆಗೆ ಸಿದ್ಧವಾಗುತ್ತದೆ. ಸಿಎಫ್‌ಟಿಆರ್‌ಐನ ಆಹಾರ ತಂತ್ರಜ್ಞಾನ ವಿಭಾಗ ಸಂಶೋಧನಾ ವಿಧಾನದಂತೆ ಮಾಮೂಲಿ ಹುರುಳಿಯನ್ನು 10ರಿಂದ 15 ನಿಮಿಷದಲ್ಲಿ ಅಡುಗೆ ಕಾರ್ಯಕ್ಕೆ ಪರಿವರ್ತಿಸಬಹುದು. ಹುರುಳಿಯನ್ನು ಬಹುತೇಕ ಸಾರು ಮಾಡಲು ಮಾತ್ರ ಬಳಸುವುದು ವಾಡಿಕೆಯ ಕ್ರಮ. ಆದರೆ ಈಗ ಅದರಿಂದ ರಾಗಿ ಅಂಬಲಿಯಂತೆ, ಹುರುಳಿ ಅಂಬಲಿ, ನಿತ್ಯ ಬಳಸುವ ಹಪ್ಪಳ, ಸೂಪು, ಚಾಟ್, ಪೌಡರ್ ತಯಾರಿಸಬಹುದು. ಜೊತೆಗೆ ಹುರುಳಿಯಿಂದ ಸಿಹಿ 'ಬೂಂದಿ'ಯನ್ನು ತಯಾರಿಸ್ಗಹುದು. ಆರೋಗ್ಯದ ದೃಷ್ಟಿಯಿಂದಲೂ ಹುರುಳಿ ಬಹು ಉಪಕಾರಿ. ದೀರ್ಘ ಕಾಲ ಕಾಡುವ ಮೂತ್ರಕೋಶ ಸಂಬಂಧಿಸಿ ಕಾಯಿಲೆಗಳಿಗೆ ಹುರುಳಿ ಬಳಕೆ ಉತ್ತಮ. ಮೂತ್ರಕೋಶ ತೊಂದರೆಯುಳ್ಳ ವ್ಯಕ್ತಿಗಳು ನಿತ್ಯ ಹುರುಳಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ ರೋಗ ಗುಣ ಪಡಿಸಿಕೊಳ್ಳಬಹುದು. ಹುರುಳಿ ಒಂದು ರೀತಿಯ ಗಟ್ಟಿ ಪದಾರ್ಥ, ನಿಧಾನವಾಗಿ ಜೀರ್ಣವಾಗುವಂತಹದು. ಹೀಗಾಗಿ ಕೊಲೆಸ್ಟ್ರಾಲ್, ಸಕ್ಕರೆ ಕಾಯಿಲೆಯ ನಿಯಂತ್ರಿಸುವ ಗುಣ ಹೊಂದಿದೆ ಎನ್ನುವುದು ವಿಜ್ಞಾನಿಗಳ ಅಭಿಮತ. ಹುರುಳಿ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಅದರ ಬಳಕೆ ವಿರಳ. ಆದರೆ, ಅದರಿಂದ ಆರೋಗ್ಯ ವೃದ್ಧಿಯಾಗುವ ಮತ್ತು ಆಧುನಿಕ ಜನತೆ ಬಯಸುವ 'ಈಸಿ ಕುಕ್ಕಿಂಗ್'ಗೆ ಪೂರಕವಾದ ವಿಧಾನವನ್ನು ತಾವು ರೂಪಿಸಿರುವುದಾಗಿ ಹೇಳುತ್ತಾರೆ ಸಿಎಫ್‌ಸಿಆರ್‌ಐ ಆಹಾರ ವಿಭಾಗದ (ಜಿಎಸ್‌ಟಿ) ಹಿರಿಯ ಸಂಶೋಧಕ ವಿ.ಎಂ. ಪ್ರತಾಪೆ. ಇದು ಕರ್ನಾಟಕದ ಮಟ್ಟಿಗೆ ಬಹಳ ಅಪರೂಪದ ಬೆಳೆ. ತಮಿಳುನಾಡು- ಕರ್ನಾಟಕ ಗಡಿ ಭಾಗದಲ್ಲಿ, ಮೈಸೂರು ಪ್ರಾಂತ್ಯ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದಲ್ಲಿ ಹಾಗೂ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಇಚ್ಛಿಸುವರು ದೂರವಾಣಿ 0821-2510843 ಸಂಪರ್ಕಿಸಬಹುದು.

2009: ಭಾರತದ ಟೆನಿಸ್ ಪ್ರೇಮಿಗಳಿಗೆ ಇದು ಸಂಭ್ರಮದ ದಿನ. ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್ನ ಮಿಶ್ರ ಡಬ್ಬಲ್ಸ್ ವಿಭಾಗದ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಭಾರತದ ಟೆನಿಸಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೊಂದಾಣಿಕೆಯ ಆಟವಾಡಿದ ಭಾರತದ ಜೋಡಿ 6-3, 6-1 ರಲ್ಲಿ ಫ್ರಾನ್ಸ್‌ನ ನಥಾಲಿ ಡೆಚಿ ಮತ್ತು ಇಸ್ರೇಲಿನ ರಾಂಡಿ ರಾಮ್ ಅವರನ್ನು ಮಣಿಸಿತು. ಶಕ್ತಿ ಹಾಗೂ ಯುಕ್ತಿಯನ್ನು ಅತ್ಯಂತ ಲಯಬದ್ಧ ರೀತಿಯಲ್ಲಿ ಅಳವಡಿಸಿಕೊಂಡು ಹೋರಾಡಿದ ಸಾನಿಯಾ- ಭೂಪತಿ ತಮ್ಮ ಆಟದಿಂದ ಅಭಿಮಾನಿಗಳ ಮನಸೂರೆಗೊಂಡರು. ಹಿಂದಿನ ದಿನ ಭಾರತದ ಯೂಕಿ ಭಾಂಬ್ರಿ ಅವರು ಇದೇ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದ ಕಿರೀಟ ಮುಡಿಗೇರಿಸಿದ್ದರು. ಹೀಗಾಗಿ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್ ಟೂರ್ನಿ ಭಾರತದ ಪಾಲಿಗೆ ಸಿಹಿಯಾಗಿ ಪರಿಣಮಿಸಿತು. ಈ ಸಾಧನೆಯ ಮೂಲಕ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಯನ್ನು ಸಾನಿಯಾ ತಮ್ಮದಾಗಿಸಿಕೊಂಡರು. ಮಹೇಶ್ ಭೂಪತಿ ಅವರಿಗೆ ಇದು ವೃತ್ತಿಜೀವನದ 11ನೇ ಗ್ರ್ಯಾಂಡ್‌ಸ್ಲಾಮ್ ಕಿರೀಟ. ಇದರಲ್ಲಿ ಏಳು ಮಿಶ್ರ ಡಬ್ಬಲ್ಸ್ ಮತ್ತು 4 ಪುರುಷರ ಡಬ್ಬಲ್ಸ್ ಪ್ರಶಸ್ತಿಗಳು. ಇವರಿಬ್ಬರು ಜೊತೆಯಾಗಿ ಪಡೆದ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಇದು. ಕಳೆದ ವರ್ಷ ಈ ಜೋಡಿ ಇಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

2009: ಸಚಿವರು ಹಾಗೂ ಅವರ ಸಂಬಂಧಿಗಳ ಆಸ್ತಿ ವಿವರವನ್ನು ಬಹಿರಂಗಪಡಿಸದೇ ಇರಲು ಪ್ರಧಾನಿ ಕಾರ್ಯಾಲಯ ನಿರ್ಧರಿಸಿದ್ದು, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿತು. ಸುಭಾಶ್ ಚಂದ್ರ ಅಗರವಾಲ್ ಎಂಬವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಈ ರೀತಿ ಉತ್ತರಿಸಿತು. ಆರ್‌ಟಿಐ ಕಾಯ್ದೆಯ 8ನೇ ಕಲಂ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ಹೇಳಿದ ಪ್ರಧಾನಿ ಕಾರ್ಯಾಲಯ, ಇದೇ ಕಾರಣಕ್ಕೆ ಈ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿತು. ಆರ್‌ಟಿಐ ಅರ್ಜಿಗಳಿಗೆ ಉತ್ತರಿಸಲು ಸಂಪುಟ ಸಚಿವಾಲಯಕ್ಕೆ ಎಲ್ಲ ಮಾಹಿತಿಗಳನ್ನು ನೀಡಿದ್ದ ಪ್ರಧಾನಿ ಕಾರ್ಯಾಲಯ, ಧಿಡೀರನೆ ನಿರ್ಧಾರ ಬದಲಿಸಿ ಮಾಹಿತಿ ನಿರಾಕರಿಸಿತು. ಅಗರವಾಲ್ ಕಳೆದ ವರ್ಷ ಆರ್‌ಟಿಐ ಅರ್ಜಿ ಸಲ್ಲಿಸಿ, ಎಲ್ಲ ಕೇಂದ್ರ ಸಚಿವರು ಹಾಗೂ ಅವರ ಸಂಬಂಧಿಗಳು ಎರಡು ವರ್ಷಗಳಲ್ಲಿ ಸಂಪಾದಿಸಿದ ಆಸ್ತಿ ವಿವರ ಬಹಿರಂಗಪಡಿಸುವಂತೆ ಕೇಳಿದ್ದರು. ಪ್ರಧಾನಿ ಕಾರ್ಯಾಲಯಕ್ಕೆ ಈ ಅರ್ಜಿ ರವಾನಿಸಲಾಗಿತ್ತು. 2008ರ ಮೇ 19ರಂದು ಪ್ರಧಾನಿ ಕಾರ್ಯಾಲಯ ಸಚಿವರ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ಸಂಪುಟ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ, ಅದರ ನಂತರ ಯಾರಿಂದಲೂ ನನಗೆ ಉತ್ತರ ಬರಲಿಲ್ಲ. ಕೇಂದ್ರ ಮಾಹಿತಿ ಆಯುಕ್ತರಿಗೂ ನಾನು ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆ. ಆರು ತಿಂಗಳ ನಂತರ ಡಿಸೆಂಬರ್ 17ರಂದು ಪ್ರಧಾನಿ ಕಾರ್ಯಾಲಯದಿಂದ ನನಗೆ ಪತ್ರ ಬಂತು. ಆರ್‌ಟಿಐ ಕಾಯ್ದೆ ಅಡಿ ಇದಕ್ಕೆ ವಿನಾಯತಿ ನೀಡಲಾಗಿದೆ ಎಂದು ನನಗೆ ತಿಳಿಸಲಾಯಿತು ಎಂದು ಅಗರವಾಲ್ ಹೇಳಿದರು.

2009: ಪಶ್ಚಿಮ ಕೀನ್ಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 111ಜನರು ಮೃತರಾಗಿ, ಇತರೆ 200 ಜನ ಗಂಭೀರವಾಗಿ ಗಾಯಗೊಂಡರು. ನೈರೋಬಿಯಿಂದ 150 ಕಿ.ಮೀ.ದೂರದ ಮೊಲೊ ಎಂಬಲ್ಲಿನ ಜೊಲ್ಲಿ ಫಾರ್ಮಿನಲ್ಲಿ ಈ ದುರ್ಘಟನೆ ನಡೆಯಿತು ಎಂದು ಪೊಲೀಸ್ ವಕ್ತಾರ ಎರಿಕ್ ಕಿರಿಯಾತೆ ಹೇಳಿದರು. ಟ್ಯಾಂಕರ್ ಅಪಘಾತಕ್ಕೀಡಾದ ಸಂದರ್ಭ ಅದರಿಂದ ಸುರಿಯುತ್ತಿದ್ದ ಪೆಟ್ರೋಲ್ ಸಂಗ್ರಹಿಸಲು ಸ್ಥಳೀಯರು ಮುಂದಾದರು. ಈ ವೇಳೆ ಬೆಂಕಿ ಹೊತ್ತಿಕೊಂಡದ್ದೇ ದುರ್ಘಟನೆಗೆ ಕಾರಣವಾಯಿತು.

2009: ಶ್ರೀಲಂಕಾ ಸರ್ಕಾರ ಘೋಷಿಸಿದ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮಕ್ಕೆ ಗೌರವ ಕೊಡದ ಎಲ್‌ಟಿಟಿಇ ಬಂಡುಕೋರರ ವಿರುದ್ಧ ಸೇನೆ ಈದಿನ ರಾತ್ರಿ ತೀವ್ರ ಕಾರ್ಯಾಚರಣೆ ನಡೆಸಿ, ಎರಡು ಪ್ರಮುಖ ಶಿಬಿರಗಳಿರುವ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಮುಖ್ಯವಾಗಿ ಆತ್ಮಾಹುತಿ ದಾಳಿಕೋರರ ದಳ ವಾಸ್ತವ್ಯ ಹೂಡುತ್ತಿದ್ದ ವಿಸುವಮಡು ಪ್ರದೇಶದಲ್ಲಿನ ಈ ಶಿಬಿರ ಪ್ರದೇಶಗಳ ಮೇಲೆ ಸೇನೆ ದಾಳಿ ಮಾಡಿ 12 ಬಂಡುಕೋರರನ್ನು ಕೊಂದು ಹಾಕಿತು. ಅಲ್ಲದೇ, ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು.

2009: ಕಾಡಿನಲ್ಲಿ ತಮ್ಮನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ಮಹಾರಾಷ್ಟ್ರ ಪೊಲೀಸರ ಗುಂಪಿನ ಮೇಲೆ ನಕ್ಸಲರು ಮನಸೋಇಚ್ಛೆ ಗುಂಡು ಹಾರಿಸಿ ಒಬ್ಬ ಯುವ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ 15 ಪೊಲೀಸರನ್ನು ಹತ್ಯೆ ಮಾಡಿದರು. ಗಡ್‌ಚಿರೋಲಿ ಜಿಲ್ಲೆಯ ಮರ್ಕೆಗಾಂವಿನಲ್ಲಿ ಈ ದಾರುಣ ಘಟನೆ ನಡೆಯಿತು.

2008: ಬೃಹತ್ ವಿದ್ಯುತ್ ಯೋಜನೆ ಕೈತಪ್ಪಿ ಹೋಗುವ ಸಾಧ್ಯತೆಗಳು ಇರುವುದರಿಂದ ಉತ್ತರಕನ್ನಡ ಜಿಲ್ಲೆಯ ತದಡಿಯ ಬದಲು ಬೇರೆ ಕಡೆ ವಿದ್ಯುತ್ ಸ್ಥಾವರ ಸ್ಥಾಪಿಸಬೇಕು ಎಂದು ಕೋರಿರುವ ತನ್ನ ಮೊದಲಿನ ನಿರ್ಧಾರವನ್ನು ಬದಲಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. 4000 ಮೆ. ವ್ಯಾ. ವಿದ್ಯುತ್ ಉತ್ಪಾದನಾ ಯೋಜನೆಗೆ ಈ ಮೊದಲು ತದಡಿಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸ್ಥಳೀಯರ ಹಾಗೂ ಪರಿಸರವಾದಿಗಳ ವಿರೋಧದಿಂದ ಈ ಯೋಜನೆಯನ್ನು ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ಬಳಿಯ ಘಟಪ್ರಭಾದಲ್ಲಿ ಆರಂಭಿಸಲು ನಿರ್ಧರಿಸಿ ಕೇಂದ್ರಕ್ಕೆ ತಿಳಿಸಿತ್ತು. ಆದರೆ ಕೇಂದ್ರ ಇಂಧನ ಖಾತೆಯು ಈ ವಿದ್ಯುತ್ ಯೋಜನೆಯನ್ನು ಕಡಲ ತೀರದ ಪ್ರದೇಶದಲ್ಲೇ ಆರಂಭಿಸಬೇಕು ಎಂದು ನಿರ್ಧರಿಸಿದ್ದರಿಂದ ಘಟಪ್ರಭಾದಲ್ಲಿ ಸ್ಥಾಪಿಸುವ ಕರ್ನಾಟಕ ರಾಜ್ಯದ ನಿರ್ಧಾರಕ್ಕೆ ಮಾನ್ಯತೆ ನೀಡಿರಲಿಲ್ಲ. ಈ ಮಧ್ಯೆ ಗುಜರಾತ್ ಮತ್ತು ತಮಿಳುನಾಡು ಸರ್ಕಾರಗಳು ಈ ಯೋಜನೆಯ ಬಗ್ಗೆ ಆಸಕ್ತಿ ತಳೆದಿದ್ದರಿಂದ ಕೇಂದ್ರ ಸರ್ಕಾರವು ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು.

2008: ಬೆನಜೀರ್ ಭುಟ್ಟೋ ಹತ್ಯೆಯ ಅರಾಜಕತೆಯಿಂದ ಪಾಕಿಸ್ಥಾನ ತತ್ತರಿಸದಿದ್ದಲ್ಲಿ ಉಡುಪಿಯ ಪರ್ಯಾಯ ಉತ್ಸವದಲ್ಲಿ ರಕ್ತದ ಓಕುಳಿ ಆಗುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತನಾದ ಶಂಕಿತ ಉಗ್ರಗಾಮಿ ರಿಯಾಜುದ್ದೀನ್ ನಾಸೀರ್ ದಾವಣಗೆರೆಯಲ್ಲಿ ಪೊಲೀಸ್ ವಿಚಾರಣೆ ಕಾಲದಲ್ಲಿ ಬಹಿರಂಗ ಪಡಿಸಿದ. ಉಡುಪಿಯ ಮಠ ಹಾಗೂ ಹೈದರಾಬಾದಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಸ್ಫೋಟಕ್ಕೆ ಸಂಚು ನಡೆಸಿದ್ದುದಾಗಿ ಆತ ಒಪ್ಪಿಕೊಂಡದ್ದನ್ನು ಪೊಲೀಸ್ ಮೂಲಗಳು ಬಹಿರಂಗ ಪಡಿಸಿದವು. ಪಾಕಿಸ್ಥಾನದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರದಿದ್ದಲ್ಲ್ಲಿ, ತಮಗೆ ನೇಪಾಳದ ಕಠ್ಮಂಡು ಮೂಲಕ ಸ್ಫೋಟಕಗಳು ಪೂರೈಕೆಯಾಗುತ್ತಿದ್ದವು. ಅವುಗಳನ್ನು ಪರ್ಯಾಯ ಉತ್ಸವದ ವೇಳೆ ಸ್ಫೋಟಿಸಲು ಅಗತ್ಯ ಯೋಜನೆ ರೂಪಿಸಲು ಪ್ರವಾಸಿಗನ ಸೋಗಿನಲ್ಲಿ ಈ ಹಿಂದೆ ಎರಡು ಬಾರಿ ಉಡುಪಿ ಹಾಗೂ ಮಂಗಳೂರಿಗೆ ತಾನು ಭೇಟಿ ನೀಡಿದ್ದುದಾಗಿ ಆತ ಒಪ್ಪಿಕೊಂಡ ಎಂದು ಪೊಲೀಸ್ ಮೂಲಗಳು ಹೇಳಿದವು.

2008: ಒಂದು ದಿನ ಹಿಂದೆ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿದ್ದ ರಾಜ್ಯ ಸರ್ಕಾರದ ಹತ್ತು ಹಿರಿಯ ಅಧಿಕಾರಿಗಳು ಒಟ್ಟು ಒಂದು ನೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದನ್ನು ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಬಹಿರಂಗ ಪಡಿಸಿದರು. ಈಗ ದಾಳಿಗೆ ಗುರಿಯಾದ ಎಲ್ಲ ಅಧಿಕಾರಿಗಳು ಒಟ್ಟಾರೆ ತಮ್ಮ ಸೇವಾ ಅವಧಿಯಲ್ಲಿ ರೂ 5.03 ಕೋಟಿ ಮೊತ್ತದ ಆದಾಯವನ್ನು ಸಂಬಳ ಮತ್ತು ಇತರ ಸೌಲಭ್ಯಗಳ ರೂಪದಲ್ಲಿ ಪಡೆದಿದ್ದಾರೆ. ಆದರೆ ಈ ಮೊತ್ತದ 20 ಪಟ್ಟಿಗಿಂತಲೂ ಹೆಚ್ಚು ಅಕ್ರಮ ಆಸ್ತಿ ದಾಳಿಯ ವೇಳೆ ಪತ್ತೆಯಾಗಿದೆ ಎಂದು ದಾಳಿಗೆ ತುತ್ತಾದ ಅಧಿಕಾರಿಗಳಿಂದ ವಶಪಡಿಸಿಕೊಳ್ಳಲಾದ ಆಸ್ತಿಪಾಸ್ತಿ ವಿವರ ನೀಡುತ್ತಾ ಲೋಕಾಯುಕ್ತರು ತಿಳಿಸಿದರು.

2008: ಇಂಟರ್ನೆಟ್ ಮಾಧ್ಯಮ ಸಂಸ್ಥೆ ಯಾಹೂ! ಇಂಕ್ ಅನ್ನು ಸಾಫ್ಟವೇರ್ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್ ಅಂದಾಜು 44.6 ಶತಕೋಟಿ ಡಾಲರುಗಳಿಗೆ ಖರೀದಿಸಲು ಮುಂದಾಯಿತು. ಅಂತರ್ಜಾಲ ಸೇವಾ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಮೈಕ್ರೊಸಾಫ್ಟ್ ಈ ಕ್ರಮಕ್ಕೆ ಮುಂದಾಯಿತು. ಬಿಲ್ ಗೇಟ್ಸ್ ಒಡೆತನದ ಮೈಕ್ರೊಸಾಫ್ಟ್, ಪ್ರತಿ ಷೇರಿಗೆ 31 ಡಾಲರ್ ಲೆಕ್ಕದಲ್ಲಿನ ಯಾಹೂ ಖರೀದಿ ಪ್ರಸ್ತಾವನೆಯು ನಗದು ಮತ್ತು ಷೇರು ಲೆಕ್ಕದಲ್ಲಿ ಅಂದಾಜು 44.6 ಶತಕೋಟಿ ಡಾಲರುಗಳಷ್ಟು ಆಗಲಿದೆ ಎಂದು ನ್ಯೂಯಾರ್ಕಿನಲ್ಲಿ ತಿಳಿಸಿತು.

2008: ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಮಧ್ಯಮ ಗತಿಯ ಖಂಡಾಂತರ ಕ್ಷಿಪಣಿ ಘೋರಿ (ಹತ್ಫಾ-5) ಪರೀಕ್ಷೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಸುಮಾರು 1,300 ಕಿ.ಮೀ ವರೆಗೆ ಗುರಿ ಇಡುವ ಸಾಮರ್ಥ್ಯ ಇದಕ್ಕಿದೆ. ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಷ್ಫಾಕ್ ಪರ್ವೇಜ್ ಕಯಾನಿ ಅವರು ಅಜ್ಞಾತ ಸ್ಥಳದಲ್ಲಿ ನಡೆದ ಈ ಪರೀಕ್ಷೆಯನ್ನು ಖುದ್ದು ವೀಕ್ಷಿಸಿದರು.

2008: ಬಾಗ್ದಾದಿನ ಜನನಿಬಿಡವಾದ ಎರಡು ಮಾರುಕಟ್ಟೆಗಳಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಕನಿಷ್ಠ 64 ಮಂದಿ ಮೃತರಾಗಿ 100 ಮಂದಿ ಗಾಯಗೊಂಡರು. ಅಲ್-ಘಜಲ್ ಪೇಟ್ ಮಾರುಕಟ್ಟೆಯಲ್ಲಿ ಮರದ ಪೆಟ್ಟಿಗೆಯೊಂದರಲ್ಲಿ ಬಾಂಬ್ ಅಡಗಿಸಿಟ್ಟು ಸ್ಫೋಟಿಸಿದರೆ, ಮತ್ತೊಂದು ಬಾಂಬನ್ನು ಪಕ್ಕದ ಅಲ್-ಜಡಿಡ ಮಾರುಕಟ್ಟೆಯ ರಸ್ತೆಯಲ್ಲಿ ಮಧ್ಯಾಹ್ನ ಸ್ಫೋಟಿಸಲಾಯಿತು.

2008: ಚೀನಾದ ವಾಂಗ್ ಎಂಬ ವೂಲಾಂಗ್ ಪ್ರಾಂತದ ಪ್ರತಿನಿಧಿಯೊಬ್ಬ ಲಂಚ ಪಡೆದ ಅಪರಾಧಕ್ಕಾಗಿ ಮರಣದಂಡನೆಗೆ ಗುರಿಯಾದ. ವೂಲಾಂಗ್ ಪ್ರಾಂತದ ರಾಜಧಾನಿ ನಾಂಜಿಂಗಿನ ಮೇಯರ್ ಆಗಿದ್ದ ಸಂದರ್ಭದಲ್ಲಿ (1995- 2006) ವಾಂಗ್ ಎರಡು ಕಂಪೆನಿಗಳಿಂದ 940 ಸಾವಿರ ಅಮೆರಿಕ ಡಾಲರ್ ಲಂಚವಾಗಿ ಪಡೆದುಕೊಂಡ ಆರೋಪವಿತ್ತು. ಆದರೆ ಈ ಮರಣದಂಡನೆಯನ್ನು ಎರಡು ವರ್ಷ ಕಾಲ ಮುಂದೂಡಲು ಅವಕಾಶವಿದೆ. ಶಿಕ್ಷೆಗೊಳಗಾದ ವಾಂಗ್ ನ ಸಂಬಂಧಿಗಳು 180 ಸಾವಿರ ಅಮೆರಿಕ ಡಾಲರುಗಳನ್ನು ಹಿಂದಿರುಗಿಸಿದ್ದು, ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯೇ ಎಂಬುದು ಬೆಳಕಿಗೆ ಬರಲಿಲ್ಲ.

2007: ಭಾರತೀಯ ಮೂಲದ ಖಗೋಳಯಾನಿ ಸುನೀತಾ ವಿಲಿಯಮ್ಸ್ ಅವರು ತಮ್ಮ ಒಂಬತ್ತು ದಿನಗಳ ಬಾಹ್ಯಾಕಾಶ ನಡಿಗೆ ಮೊದಲ ಹಂತದಲ್ಲಿನ ಮೂರು ನಡಿಗೆಯನ್ನು ಬೆಳಗ್ಗೆ 9.14ಕ್ಕೆ ಸಹವರ್ತಿಗಳಾದ ಕಮಾಂಡರ್ ಮೈಕೇಲ್ ಲೋಪೆಜ್ ಅಲೆಗ್ರಿಯಾ ಜೊತೆಗೆ ಆರಂಭಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗಿರುವ ಕಷ್ಟಕರವಾದ ಅಮೋನಿಯಾ ಕೋಲಿಂಗ್ ಲೈನ್ಸ್ ಹಾದಿಯಲ್ಲಿ ಸುನೀತಾ ಅವರು ನಡಿಗೆ ಶುರು ಮಾಡಿದರು.

2007: ಅತಿಸಾರವನ್ನು (ಡಯೇರಿಯಾ) ನಿಯಂತ್ರಿಸಲು ಉಪ್ಪು- ಸಕ್ಕರೆ ಮಿಶ್ರಿತ ನೀರು ಸೇವನೆ ಅತ್ಯಂತ ಪರಿಣಾಮಕಾರಿ ಕ್ರಮ ಎಂಬುದನ್ನು ಕಂಡು ಹಿಡಿದ ಕೋಲ್ಕತದ (ಹಿಂದಿನ ಕಲ್ಕತ್ತ) ಅನ್ವಯಿಕ ಅಧ್ಯಯನ ಸಂಸ್ಥೆಯ ವೈದ್ಯ ದಿಲೀಪ್ ಮಹಲಾನಬಿಸ್ ಮತ್ತು ಇತರ ಮೂವರು ತಜ್ಞರಿಗೆ 2006ನೇ ಸಾಲಿನ ಪ್ರತಿಷ್ಠಿತ `ಪ್ರಿನ್ಸ್ ಮಹಿಡಾಲ್' ಪ್ರಶಸ್ತಿ ಲಭಿಸಿತು. ಥಾಯ್ ರಾಜಮನೆತನದ ಗೌರವವಾದ 50 ಸಾವಿರ ಡಾಲರ್ ನಗದು ಮೊತ್ತದ ಈ ಪ್ರಶಸ್ತಿಯನ್ನು ದೊರೆ ಭೂಮಿಬಲ್ ಅತುಲ್ಯ ತೇಜ್ ಅವರು ಬ್ಯಾಂಕಾಕಿನಲ್ಲಿ ಪ್ರದಾನ ಮಾಡಿದರು.

2007: ನೇತಾಜಿ ಸುಭಾಶ ಚಂದ್ರ ಬೋಸ್ ಅವರ ಕಣ್ಮರೆ ಕುರಿತಂತೆ ತನ್ನ ಬಳಿ ಯಾವುದೇ ಮಾಹಿತಿಯೂ ಇಲ್ಲ ಎಂಬುದಾಗಿ ಭಾರತದ ಪ್ರತಿಷ್ಠಿತ ತನಿಖಾ ಸಂಸ್ಥೆಯ ಅಂಗವಾದ ಸಂಶೋಧನಾ ವಿಶ್ಲೇಷಣಾ ದಳ (ರೀಸರ್ಚ್ ಅನಾಲಿಸಿಸ್ ವಿಂಗ್ -ಆರ್ ಎ ಡಬ್ಲ್ಯೂ- ರಾ) ಇದೇ ಮೊತ್ತ ಮೊದಲ ಬಾರಿಗೆ ಒಪ್ಪಿಕೊಂಡಿತು. ಬೋಸ್ ಅವರ ಚಲನವಲನಗಳ ಬಗೆಗೆ ತನ್ನ ಬಳಿ ಯಾವ ಮಾಹಿತಿಯೂ ಇಲ್ಲ ಎಂಬುದಾಗಿ `ರಾ' `ಮಿಷನ್ ನೇತಾಜಿ' ಸಂಸ್ಥೆಗೆ ಬರೆದ ಪತ್ರದಲ್ಲಿ ಒಪ್ಪಿಕೊಂಡಿತು. ನೇತಾಜಿ ಕಣ್ಮರೆ ಬಗ್ಗೆ `ಮಿಷನ್ ನೇತಾಜಿ' ಸ್ವ ಇಚ್ಛೆಯಿಂದ ತನಿಖೆ ನಡೆಸುತ್ತಿದ್ದು, `ರಾ' ಬಳಿ ಇರುವ ಮಾಹಿತಿ ಕೊಡುವಂತೆ ಕೇಳಿತ್ತು.

2007: ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು ನೇರ ಪ್ರಸಾರವನ್ನು ದೂರದರ್ಶನ (ಡಿಡಿ) ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತು.

2006: ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಅಧುನೀಕರಣ ಹರಾಜು ಪ್ರಕ್ರಿಯೆಗೆ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆ ತನ್ನ ಸಮ್ಮತಿ ನೀಡಿತು. ಜಿಎಂಆರ್ ಫ್ರಾಪೋರ್ಟ್ ಮತ್ತು ಜಿವಿಕೆ -ದಕ್ಷಿಣ ಆಫ್ರಿಕಾ ಏರ್ ಪೋರ್ಟ್ಸ್ ಸಂಸ್ಥೆಗಳಿಗೆ ಆಧುನೀಕರಣ ಕೆಲಸವನ್ನು ವಹಿಸಲು ನಡೆದ ಆಯ್ಕೆಗೆ ಸರ್ಕಾರದ ಪೂರ್ಣ ಒಪ್ಪಿಗೆ ಲಭಿಸಿತು.

2006: ಭಾರತದ ವಿಶ್ವವಿಖ್ಯಾತ ಬ್ಯಾಟಿಂಗ್ ಸಾಮ್ರಾಜ್ಯವನ್ನು ಹೊಸಕಿ ಹಾಕಿದ ಪಾಕ್ ತಂಡ ಕರಾಚಿಯಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು 341 ರನ್ನುಗಳ ಭಾರಿ ಅಂತರದಿಂದ ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.

2005: ನೇಪಾಳದ ದೊರೆ ಜ್ಞಾನೇಂದ್ರ ಅವರು ಸರ್ಕಾರವನ್ನು ರದ್ದು ಪಡಿಸಿ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನಾಯಕತ್ವವು ಚುನಾವಣೆಗಳನ್ನು ನಡೆಸಲು ಮತ್ತು ಶಾಂತಿ ಸ್ಥಾಪನೆಗೆ ವಿಫಲವಾಗಿತ್ತು ಎಂಬ ಸಮರ್ಥನೆಯನ್ನು ಅವರು ನೀಡಿದರು.

2004: ಸೌದಿ ಅರೇಬಿಯಾದ ಮೆಕ್ಕಾ ಪಟ್ಟಣ ಸಮೀಪದ ಮೆನಾದಲ್ಲಿ ಸೇತುವೆ ಮೇಲೆ ಕಾಲ್ತುಳಿತ ಉಂಟಾಗಿ ಕನಿಷ್ಟ 251 ಮುಸ್ಲಿಂ ಹಜ್ ಯಾತ್ರಿಗಳು ಮೃತರಾದರು.

2003: ಹದಿನಾರು ದಿನಗಳ ಯಾನದ ಬಳಿಕ ಮರಳಿ ಭೂಕಕ್ಷೆ ಪ್ರವೇಶಿಸುವಾಗ ಟೆಕ್ಸಾಸ್ ಮೇಲ್ಭಾಗದಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾ ಸ್ಪೋಟಗೊಂಡಿತು. ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳು ಮೃತರಾದರು. ಅವರಲ್ಲಿ ಒಬ್ಬ ವ್ಯಕ್ತಿ ಇಸ್ರೇಲಿನ ಮೊತ್ತ ಮೊದಲ ಗಗನಯಾನಿ.

1989: ನಾರ್ವೆಯು ಗ್ರೊ ಹಾರ್ಲೆಮ್ ಬ್ರಂಟ್ ಲ್ಯಾಂಡ್ (Brundtland)
ಅವರನ್ನು ತನ್ನ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆ ಮಾಡಿತು.

1985: ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಹಮ್ಮದ್ ಅಜರುದ್ದೀನ್ ಅವರು 122 ರನ್ ಗಳಿಕೆಯೊಂದಿಗೆ ತನ್ನ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದರು.

1982: ಕರ್ನಾಟಕದಲ್ಲಿ 378 ವರ್ಷಗಳ ಬಳಿಕ ಧರ್ಮಸ್ಥಳದಲ್ಲಿ ಮತ್ತೊಂದು ಬಾಹುಬಲಿ (ಗೊಮ್ಮಟೇಶ್ವರ) ಪ್ರತಿಷ್ಠಾಪನೆ ನೆರವೇರಿತು. ಧರ್ಮಸ್ಥಳದ ಪಾಲಿಗೆ ಈದಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸುದಿನವಾಯಿತು.

1977: ಭಾರತದಲ್ಲಿ ಕರಾವಳಿ ಕಾವಲು ಪಡೆ (ಕೋಸ್ಟ್ ಗಾರ್ಡ್) ಸ್ಥಾಪನೆಗೊಂಡಿತು.

1977: ಭಾರತದಲ್ಲಿ ರೈಲು ಮ್ಯೂಸಿಯಂ ಸ್ಥಾಪನೆಗೊಂಡಿತು. ಈ ಮಾದರಿಯ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡದ್ದು ಇದೇ ಮೊದಲು.

1971: ಭಾರತದ ಕ್ರಿಕೆಟ್ ಆಟಗಾರ ಅಜಯ್ ಜಡೇಜಾ ಹುಟ್ಟಿದರು. ಇವರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಕೆಟಿನಿಂದ ನಿಷೇಧಕ್ಕೆ ಒಳಗಾದರು.

1964: ಭಾರತದಲ್ಲಿ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1940: ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ ಅವರು ಗುರುರಾಜ ಕುಂಡಂತಾಯ- ಸತ್ಯಭಾಮ ದಂಪತಿಯ ಮಗನಾಗಿ ಉಡುಪಿ ತಾಲ್ಲೂಕಿನ ಉಚ್ಚಿಲ ಗ್ರಾಮದಲ್ಲಿ ಈ ದಿನ ಹುಟ್ಟಿದರು. ಬಾಲ್ಯದಿಂದಲೂ ಹಳ್ಳಿ ನಾಟಕದಲ್ಲಿ ಆಸಕ್ತಿ. ನಾಟಕ ನೋಡಿ, ಆಡಿಸಿದರು. ನಟ ನಿರ್ದೇಶಕರಾಗಿ ಬೆಳೆದರು. 15ಕ್ಕೂ ಹೆಚ್ಚು ಏಕಾಂಕ ನಾಟಕ, ಉಪನ್ಯಾಸಗಳು, ಅನುವಾದಗಳು, ಭೂಮಿಗೀತ ಕಾವ್ಯ ಪ್ರವೇಶ, ಅಧ್ಯಯನ, ರಂಗ ಅಂತರಂಗ, ಚಿಂತನ ಇತ್ಯಾದಿ ವಿಮರ್ಶಾ ಗ್ರಂಥಗಳು ಸೇರಿ 40ಕ್ಕೂ ಹೆಚ್ಚು ಕೃತಿಗಳ ರಚನೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು.

1931: ರಷ್ಯದ ರಾಜಕಾರಣಿ, ಅಧ್ಯಕ್ಷ ಬೋರಿಸ್ ಯೆಲ್ಸಿನ್ ಹುಟ್ಟಿದರು. 1990ರಿಂದ ರಷ್ಯದ ಅಧ್ಯಕ್ಷರಾದ ಅವರು 1991ರಲ್ಲಿ ರಷ್ಯದ ಇತಿಹಾಸದಲ್ಲೇ ಮೊದಲ ಚುನಾಯಿತ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.

1930: `ದಿ ಟೈಮ್ಸ್' ತನ್ನ ಮೊದಲ ಕ್ರಾಸ್ ವರ್ಡನ್ನು ಪ್ರಕಟಿಸಿತು.

1929: ವೃತ್ತಿ ರಂಗಭೂಮಿಯ ಏಳಿಗೆಗಾಗಿ ಅಪಾರ ಕಾಳಜಿ ಹೊಂದಿದ್ದ ಕಂಠಿ ಹನುಮಂತರಾಯ ಅವರು ಬಸಪ್ಪ- ಬಸಲಿಂಗಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನ ನಾಗರಾಳದಲ್ಲಿ ಜನಿಸಿದರು.

1928: ಕಲಾವಿದೆ ರಾಧಾ ಸುಜೀರ ಜನನ.

1884: ಆಕ್ಸ್ ಫರ್ಡ್ ಡಿಕ್ಸನರಿಯ ಮೊದಲ ಆವೃತ್ತಿ ಪ್ರಕಟಗೊಂಡಿತು.

1881: ದೆಹಲಿಯಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜು ಸ್ಥಾಪನೆಗೊಂಡಿತು. ಆಗ ಇದ್ದದ್ದು ಮೂವರು ಶಿಕ್ಷಕರು ಮತ್ತು ಐವತ್ತು ವಿದ್ಯಾರ್ಥಿಗಳು ಮಾತ್ರ. 1891ರ ಡಿಸೆಂಬರ್ 8ರಂದು ಕಾಶ್ಮೀರಿ ಗೇಟಿನಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಸರ್ ಜೇಮ್ಸ್ ಲಯಾಲ್ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿದರು.

No comments:

Advertisement