Monday, April 26, 2010

ಇಂದಿನ ಇತಿಹಾಸ History Today ಏಪ್ರಿಲ್ 26

ಇಂದಿನ ಇತಿಹಾಸ

ಏಪ್ರಿಲ್ 26

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ನಗರದ ನಿವಾಸಿ ಹಿತೇಶ್ ಚೌಹಾನ್ ಎಂಬಾತ ಶೂ ಎಸೆದ ಘಟನೆ ಅಹಮದಾಬಾದಿನಲ್ಲಿ ಘಟಿಸಿತು. ಶೂ ಗುರಿ ತಪ್ಪಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇದಿಕೆಯ ಸ್ಥಳದಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿತು. ಇದೇ ವೇಳೆ ಮನಮೋಹನ ಸಿಂಗ್ ಅವರು ಶೂ ಎಸೆದ ಯುವಕನ ಮೇಲೆ ಯಾವುದೇ ಆರೋಪ ದಾಖಲಿಸದಂತೆ ಪೊಲೀಸರಿಗೆ ಸೂಚಿಸಿ, ಯುವಕನನ್ನು ಕ್ಷಮಿಸಿದರು.

2009: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರತ್ತ ಎಂಜಿನಿಯರಿಂಗ್ ವಿದ್ಯಾರ್ಥಿ ನಗರದ ನಿವಾಸಿ ಹಿತೇಶ್ ಚೌಹಾನ್ ಎಂಬಾತ ಶೂ ಎಸೆದ ಘಟನೆ ಅಹಮದಾಬಾದಿನಲ್ಲಿ ಘಟಿಸಿತು. ಶೂ ಗುರಿ ತಪ್ಪಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇದಿಕೆಯ ಸ್ಥಳದಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿತು. ಇದೇ ವೇಳೆ ಮನಮೋಹನ ಸಿಂಗ್ ಅವರು ಶೂ ಎಸೆದ ಯುವಕನ ಮೇಲೆ ಯಾವುದೇ ಆರೋಪ ದಾಖಲಿಸದಂತೆ ಪೊಲೀಸರಿಗೆ ಸೂಚಿಸಿ, ಯುವಕನನ್ನು ಕ್ಷಮಿಸಿದರು. ಅಹಮದಾಬಾದಿನ ಪಲ್ದಿ ಪ್ರದೇಶದಲ್ಲಿನ ಸಂಸ್ಕಾರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದರು.. ಈ ಸಂದರ್ಭದಲ್ಲಿ ಮಾಧ್ಯಮದವರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ಆಸನಗಳ 'ಪ್ರೆಸ್ ಗ್ಯಾಲರಿ' ಬಳಿ ಕುಳಿತಿದ್ದ ಸುಮಾರು 20 ವರ್ಷದ ಯುವಕ ತಾನು ತೊಟ್ಟಿದ್ದ ಬಿಳಿ ಬಣ್ಣದ ಸ್ನೀಕರ್ ಶೂ ಅನ್ನು ಪ್ರಧಾನಿ ಅವರತ್ತ ಎಸೆದ. ಇದರಿಂದ ಪ್ರಧಾನಿ ಕೆಲಕ್ಷಣ ಗಲಿಬಿಲಿಗೊಳಗಾದರು. ತಕ್ಷಣವೇ ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ ಅಂಗರಕ್ಷಕರು ಶೂ ಎಸೆದ ಯುವಕನ ಬಳಿ ಧಾವಿಸಿ ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

2009: 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಬಾಲ ನಟಿ ರುಬಿನಾ ಅಲಿಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ನಡೆದ ಪ್ರಕರಣದಲ್ಲಿ ತಂದೆ ರಫೀಕ್ ಖುರೇಷಿಯ ಪಾತ್ರವೇನೂ ಇಲ್ಲ ಎಂದು ಪೊಲೀಸರು ತಿಳಿಸಿದರು. ತನಿಖೆ ಪೂರ್ಣಗೊಂಡಿದ್ದು ಆತ ತಪ್ಪತಸ್ಥನಲ್ಲ ಎಂಬುದು ದೃಢಪಟ್ಟಿದೆ. ರುಬಿನಾಳ ಮಾರಾಟಕ್ಕೆ ಹಣ ವಿನಿಮಯ ಆಗಿಲ್ಲ. ರಫೀಕ್ ಮುಗ್ಧ ಎಂದು ಹಿರಿಯ ಪೊಲೀಸ್ ಅಧಿಕಾರಿ ರಹೀಂ ಶೇಖ್ ತಿಳಿಸಿದರು. ಬ್ರಿಟನ್ನಿನ ಟ್ಯಾಬ್ಲಾಯಿಡ್ ಪತ್ರಿಕೆಯ ಪತ್ರಕರ್ತರು ಸೌದಿ ಅರೇಬಿಯಾದ ನಕಲಿ ಶೇಖ್‌ ವೇಷದಲ್ಲಿ ತೆರಳಿ, ರುಬಿನಾಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಹಸ್ಯ ಕಾರ್ಯಾಚರಣೆ ನಡೆಸಿ, ರಫೀಕ್‌ಗೆ ದೊಡ್ಡ ಮೊತ್ತದ ಆಮಿಷ ಒಡ್ಡಿದ್ದರು. ಮಗಳನ್ನು ರೂ 1.8 ಕೋಟಿಗಳಿಗೆ ಮಾರಾಟ ಮಾಡಲು ರಫೀಕ್ ಮುಂದಾಗಿದ್ದ ಎಂದೂ ಪತ್ರಿಕೆ ವರದಿ ಮಾಡಿತ್ತು.

2009: ಮೆಟ್ರೊ ರೈಲು ನಿಲ್ದಾಣಕ್ಕೆ ಲಾಲ್‌ಬಾಗ್ ಭೂಮಿ ಬಳಕೆಯನ್ನು ಕೈಬಿಡಬೇಕು ಎಂಬ ಆಗ್ರಹ ಬೆಂಗಳೂರಿನಲ್ಲಿ ಈದಿನ ವ್ಯಾಪಕವಾಗಿ ವ್ಯಕ್ತಗೊಂಡಿತು. 'ಹಸಿರು ಉಸಿರು' ಸಂಘಟನೆ ನಗರದಲ್ಲಿ ಹಮ್ಮಿಕೊಂಡ್ದಿದ ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಂಡ ನೂರಾರು ಮಂದಿ ಪರಿಸರ ಪ್ರೇಮಿಗಳು, 'ಉಳಿಸಿ ಉಳಿಸಿ ಲಾಲ್‌ಬಾಗ್ ಉಳಿಸಿ', 'ಬದಲಿಸಿ ಬದಲಿಸಿ ಮೆಟ್ರೊ ಮಾರ್ಗ ಬದಲಿಸಿ' ಎಂದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಆ ಮೂಲಕ ಪರಿಸರ ನಾಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

2009: ಪ್ರಭಾಕರನ್ ಹಾಗೂ ಆತನ ಪುತ್ರ ಚಾರ್ಲ್ಸ್ ಅಂಟೋನಿಯ ಜನನ ಪ್ರಮಾಣ ಪತ್ರ, ಜನ್ಮಕುಂಡಲಿ ಮತ್ತು ಕುಟುಂಬದ ಸದಸ್ಯರೊಂದಿಗಿನ ಛಾಯಾಚಿತ್ರಗಳ ಆಲ್ಬಂಗಳನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತು. ಉತ್ತರದ ಯುದ್ಧಪೀಡಿತ ಪ್ರದೇಶ ಗಳಿಂದ ಈ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಯಿತು. ಈ ಮಧ್ಯೆ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್‌ಗೆ ಮಧುಮೇಹ ರೋಗವಿರುವುದರಿಂದ ಆತ ಅಂದುಕೊಂಡಷ್ಟು ಸುಲಭವಾಗಿ ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರ ಮಾರ್ಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಲಂಡನ್ ನ ದಿನಪತ್ರಿಕೆಯೊಂದು ವರದಿ ಮಾಡಿತು. ಆತ ಸೇನೆಗೆ ಶರಣಾಗುವ ಬದಲು ತನ್ನ ಕೊನೆಯ ಕ್ಷಣದವರೆಗೂ ಯುದ್ಧಭೂಮಿಯಲ್ಲೇ ಹೋರಾಟ ಮಾಡುತ್ತಾ ವೀರಮರಣವನ್ನು ಅಪ್ಪಬಹುದು ಎಂದು 'ದಿ ಸಂಡೆ ಟೆಲಿಗ್ರಾಫ್' ಪತ್ರಿಕೆ ಹೇಳಿತು.

2009: ಅನಿವಾಸಿ ಭಾರತೀಯ ಹಾಗೂ ಉಕ್ಕು ದೊರೆ ಶತಕೋಟ್ಯಧಿಪತಿ ಲಕ್ಷ್ಮೀ ಮಿತ್ತಲ್ ಅವರ ನಿವ್ವಳ ಆಸ್ತಿ ಕಳೆದ ಒಂದೇ ವರ್ಷದಲ್ಲಿ ಜಾಗತಿಕ ಹಿಂಜರಿತ ಹಿನ್ನೆಲೆಯಲ್ಲಿ ನಷ್ಟವಾಗಿರುವ ಪ್ರಮಾಣ 16.9 ಶತಕೋಟಿ ಪೌಂಡ್ (ಸುಮಾರು ರೂ.1,20,000 ಕೋಟಿ), ಈ ಮೊತ್ತ ಭಾರತದಲ್ಲಿನ ಅವರ ಎರಡು ಉದ್ದೇಶಿತ ಉಕ್ಕು ಘಟಕಗಳ ವೆಚ್ಚವನ್ನೂ ಮೀರಿಸಿದೆ. ಹೀಗಾಗಿ ಒಂದು ವರ್ಷದಲ್ಲಿ ಹೆಚ್ಚು ಸಂಪತ್ತು ಕಳೆದುಕೊಂಡ ವ್ಯಕ್ತಿ ಮಿತ್ತಲ್ ಎಂದು 'ಸಂಡೆ ಟೈಮ್ಸ್' ಬಣ್ಣಿಸಿತು. ಆದರೂ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ 2009ರ ಸಾಲಿನಲ್ಲೂ ಲಕ್ಷ್ಮಿ ಮಿತ್ತಲ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಪ್ರಕಾರ ಬ್ರಿಟಿಷ್ ಪ್ರಜೆಯಾಗಿ ಅಲ್ಲಿನ ನಿವಾಸಿಯಾಗಿರುವ ಮಿತ್ತಲ್ ಅವರ ಆಸ್ತಿ ಪ್ರಮಾಣ 10.8 ಶತಕೋಟಿ ಪೌಂಡ್‌ಗಳು (ಸುಮಾರು ರೂ 79,000 ಕೋಟಿ). ಸತತವಾಗಿ ಐದನೇ ವರ್ಷಕ್ಕೆ ಮಿತ್ತಲ್ ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಈಗಲೂ ಉಳಿಸಿಕೊಂಡಿದ್ದಾರೆ ಎಂದು ಪತ್ರಿಕೆ ಹೇಳಿತು.

2009: ದಕ್ಷಿಣಾ ಆಫ್ರಿಕಾದಲ್ಲಿ ನಡೆದ 4ನೇ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎಸಿ) ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾದರೂ, 400 ಸದಸ್ಯ ಬಲದ ಸಂಸತ್‌ನಲ್ಲಿ ನಿಚ್ಚಳ ಬಹುಮತ ಸಾಧಿಸಿತು. ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಹೊರಬಿದ್ದ ಫಲಿತಾಂಶದ ಪ್ರಕಾರ ಜೇಕಬ್ ಜುಮಾ ನೇತೃತ್ವದ ಎಎನ್‌ಸಿ ಪಕ್ಷವು ಸುಮಾರು ಶೇ 65 ಮತಗಳನ್ನು ಪಡೆದು ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಯಿತು. ವಿರೋಧ ಪಕ್ಷ ಡೆಮಾಕ್ರೆಟಿಕ್ ಅಲಯಾನ್ಸ್ ಶೇ 16ರಷ್ಟು ಮತ ಗಳಿಸಿತು. ಚುನಾವಣೆಯಲ್ಲಿ 23 ದಶಲಕ್ಷ ಮತದಾರರು ಮತ ಚಲಾಯಿಸಿದ್ದರು. ಒಟ್ಟು ಶೇ. 77.3 ರಷ್ಟು ಮತದಾನವಾಗಿತ್ತು.

2009: ಮಾಸ್ಕೋದಲ್ಲಿ 120 ಮೀಟರ್ ಉದ್ದದ, 400 ಕೆ.ಜಿ. ಭಾರದ ದೈತ್ಯ ಕಬಾಬ್ ತಯಾರಿಸಲಾಯಿತು. ಫ್ರೆಂಡ್‌ಶಿಪ್ ಟಿಕ್ಕಾ ಹೆಸರಿನಲ್ಲಿ ಈ ಕಬಾಬ್ ತಯಾರಿಸಿರುವುದು 80 ಮಂದಿ ಪಾಕ ಪ್ರವೀಣರು ಮತ್ತು 40 ಮಂದಿ ಸಹಾಯಕರು. ರಷ್ಯಾದವರೇ ತಯಾರಿಸಿದ್ದ 71.2 ಮೀಟರ್ ಉದ್ದದ ಕಬಾಬ್ ಈವರೆಗಿನ ಅತಿ ಉದ್ದದ ಕಬಾಬ್ ಎಂದು ದಾಖಲಾಗಿತ್ತು.
ಈಗ ಹೊಸ ಟಿಕ್ಕಾ ಹಳೆ ದಾಖಲೆಗಳನ್ನೆಲ್ಲ ಅಳಿಸಿಹಾಕಿತು.

2009: ಮುಂಬೈ ಇಂಡಿಯನ್ಸ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ನಾಯಕ ಆಡಂ ಗಿಲ್‌ಕ್ರಿಸ್ಟ್ ಅವರ ಮೇಲೆ 20 ಸಾವಿರ ಡಾಲರ್ ದಂಡ ವಿಧಿಸಲಾಯಿತು. ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಉಭಯ ತಂಡಗಳು ನಿಧಾನಗತಿ ಬೌಲಿಂಗ್ ಪ್ರದರ್ಶನ ನೀಡಿದ್ದರಿಂದ ನಾಯಕರ ಮೇಲೆ ದಂಡ ಹೇರಲಾಯಿತು. ಈ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದವರು 12 ರನ್‌ಗಳಿಂದ ಮುಂಬೈ ತಂಡವನ್ನು ಸೋಲಿಸಿದ್ದರು.

2009: ಆಭರಣ ತಯಾರಿಕಾ ಕ್ಷೇತ್ರದಲ್ಲಿ ವಿಶಿಷ್ಟ ವಿನ್ಯಾಸಗಳು ಮತ್ತು ಸಂಗ್ರಹಕ್ಕಾಗಿ ಹೆಸರಾದ ತನಿಷ್ಕ್ ಒಂದು ಸೆಂ.ಮೀ. ಸುತ್ತಳತೆಯ ಪೆಂಡೆಂಟ್‌ನಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ಬರೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದು ವಿಶ್ವದ ಅತ್ಯಂತ ಚಿಕ್ಕ ಗಾತ್ರದ ಭಗವದ್ಗೀತೆಯೂ ಎನಿಸಿತು. 1 ಸೆಂ.ಮೀ. ಸುತ್ತಳತೆಯ ಚಿಪ್‌ನಲ್ಲಿ 24 ಕ್ಯಾರೆಟ್ ಚಿನ್ನದಲ್ಲಿ ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳು (ಸುಮಾರು 700 ಶ್ಲೋಕಗಳು) ಮೂಡಿ ಬಂದಿವೆ. ಈ ಪದಕ ಧರಿಸಿಕೊಂಡರೆ ಅತ್ಯಂತ ಪವಿತ್ರ ಗ್ರಂಥವನ್ನು ಮೈಯಲ್ಲಿ ಧರಿಸಿಕೊಂಡ ಸಂತೃಪ್ತಿ. ಈ ನ್ಯಾನೊ ತಂತ್ರಜ್ಞಾನವನ್ನು ಆವಿಷ್ಕರಿಸಿದವರು ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಪ್ರೊಫೆಸರ್ ಪವನ್ ಸಿನ್ಹಾ. ಇವರು ಕಾಲು (1/4) ಸೆಂ.ಮೀ. ಸುತ್ತಳತೆಯ ಚಿಪ್‌ನಲ್ಲಿ ಬೈಬಲ್ ರಚಿಸಿ ಈಗಾಗಲೇ ಗಿನ್ನೆಸ್ ದಾಖಲೆ ಬರೆದವರು. ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಗವದ್ಗೀತೆಯ ಶ್ಲೋಕಗಳನ್ನೆಲ್ಲಾ ಪದಕದೊಳಗೆ ತುಂಬಿಸುವಲ್ಲಿ ಸಫಲರಾದರು. ಅವರ ಬಳಿಯಲ್ಲೇ ಇದರ ಪೇಟೆಂಟ್ ಇದೆ. ತನಿಷ್ಕ್ ಸಂಸ್ಥೆ ಅವರ ಸಹಯೋಗದೊಂದಿಗೆ ಆರು ಬಗೆಯ ಪೆಂಡೆಂಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬರಿಗಣ್ಣಿಗೆ ಸಂಸ್ಕೃತದ ಓಂ ಅಕ್ಷರ ಮಾತ್ರ ಕಾಣಿಸುತ್ತದೆ. 20 ಎಕ್ಸ್ ಮೈಕ್ರೊಸ್ಕೋಪ್‌ನಡಿಯಲ್ಲಿ ಸಂಸ್ಕೃತ ಲಿಪಿಯಲ್ಲಿ ಶ್ಲೋಕಗಳನ್ನು ಮೇಲಿನಿಂದ ಕೆಳಗೆ ಸಾಲು ಸಾಲಾಗಿ ಬರೆಯಲಾಗಿದ್ದರೆ, ಇದನ್ನು ಓದಲು 200 ಎಕ್ಸ್ ಮೈಕ್ರೊಸ್ಕೋಪ್‌ನ ಅಗತ್ಯವಿದೆ. ಪೆಂಡೆಂಟ್‌ನ ಬೆಲೆ 13 ರಿಂದ 15 ಸಾವಿರ ರೂಪಾಯಿ.

2008: ಸರ್ಕಾರದ ನಿಷೇಧವನ್ನು ಉಲ್ಲಂಘಿಸಿ ಗೋ ಹತ್ಯೆ ಮಾಡಿ ಅದರ ಮಾಂಸ ಸೇವಿಸುವುದು ಷರಿಯತ್ ಕಾನೂನು ಪ್ರಕಾರ ಅಕ್ರಮ ಎಂದು ಇಸ್ಲಾಂ ಧಾರ್ಮಿಕ ಮಂಡಳಿ ದಾರುಲ್ ಉಲೂಮ್ ಫತ್ವಾ ಹೊರಡಿಸಿತು. ಈ ಸಂಬಂಧ ಮುಜಾಫರ್ ನಗರ ಜಿಲ್ಲೆಯ ಮುಸ್ಲಿಂ ಧರ್ಮಗುರು ಹಾಜಿ ಮೊಹಮ್ಮದ್ ಇಸಾರ್ ಅವರು ಕೇಳಿದ ಪ್ರಶ್ನೆಗೆ ದಾರುಲ್ ಉಲೂಮ್ ಈ ಫತ್ವಾ ಹೊರಡಿಸಿತು.

2008: ಕರ್ನಾಟಕದಲ್ಲಿ ಮೇ 22ರಂದು ನಡೆಯಲಿರುವ ಮೂರನೇ ಹಂತದ 69 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಕ್ರಿಯೆಗೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಮೂಲಕ ಚಾಲನೆ ನೀಡಿತು. ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ, ಬಾಗಲಕೋಟೆ, ವಿಜಾಪುರ, ಗುಲ್ಬರ್ಗ, ಬೀದರ, ಗದಗ, ಧಾರವಾಡ ಮತ್ತು ಹಾವೇರಿ ಈ ಎಂಟು ಜಿಲ್ಲೆಗಳಲ್ಲಿ ಮೂರನೇ ಹಂತದ ಚುನಾವಣೆ ನಡೆಯುವುದು.

2008: ಜಮ್ಮು ಮತ್ತು ಕಾಶ್ಮೀರದ ನೂತನ ಕಿಶ್ತ್ ವಾರ್ ಜಿಲ್ಲೆಯಲ್ಲಿ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಲ್ಲಿನ 390 ಮೆ.ವಾ. ಸಾಮರ್ಥ್ಯದ ಜಲ ವಿದ್ಯುತ್ ಯೋಜನೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಕ್ಕೆ ಅರ್ಪಿಸಿದರು. 25 ವರ್ಷಗಳ ಹಿಂದೆ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಅಡಿಗಲ್ಲು ಹಾಕಿದ್ದ ಈ ಯೋಜನೆಯನ್ನು ಉದ್ಘಾಟಿಸಿದ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಅಪರಿಮಿತ ಜಲ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಇದು ಇನ್ನೊಂದು ಮೈಲುಗಲ್ಲು ಎಂದು ಬಣ್ಣಿಸಿದರು. ದುಲ್ ಹಸ್ತಿ ಜಲ ವಿದ್ಯುತ್ ಯೋಜನೆಯು, 1994ರಲ್ಲಿ ಕಾರ್ಯಾರಂಭ ಮಾಡಿದ 360 ಮೆ.ವಾ. ಸಾಮರ್ಥ್ಯದ ಸಲಾಲ್ ಯೋಜನೆಯ ಬಳಿಕ ಚೇನಾಬ್ ನದಿಯ ಮೇಲೆ ನಿರ್ಮಿಸಲಾದ ಎರಡನೆಯ ದೊಡ್ಡ ವಿದ್ಯುತ್ ಯೋಜನೆ. ಇನ್ನೆರಡು ಜಲ ವಿದ್ಯುತ್ ಯೋಜನೆಗಳಾದ 450 ಮೆ.ವಾ. ಸಾಮರ್ಥ್ಯದ ಬಗ್ಲಿಯಾರ್ ಜಲ ವಿದ್ಯುತ್ ಯೋಜನೆ ಮತ್ತು 600 ಮೆ.ವಾ. ಸಾಮರ್ಥ್ಯದ ಸವಾಲ್ ಕೋಟ್ ಜಲವಿದ್ಯುತ್ ಯೋಜನೆಗಳು ರಾಮಬನ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿವೆ.

2008: ಅತಿ ಪ್ರಮುಖರ ಮಕ್ಕಳು ನಡೆಸುವ ಅಪಘಾತ ಪ್ರಕರಣಗಳಿಗೆ ಇದು ಇನ್ನೊಂದು ಸೇರ್ಪಡೆ. ಉತ್ತರ ಪ್ರದೇಶ ಶಾಸಕಿ ಶಾದಬ್ ಫಾತಿಮಾ ಅವರ ಪುತ್ರ ಕಾಸಿಫ್ ಅಬ್ಬಾಸ್ ನಸುಕಿನ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಕಾರನ್ನು ಯದ್ವಾತದ್ವ ಓಡಿಸಿದ ಪರಿಣಾಮವಾಗಿ ಸಂಭವಿಸಿದ ಅಪಘಾತಗಳಲ್ಲಿ ಮೂವರು ಸತ್ತು ಇತರ 9 ಮಂದಿ ಗಾಯಗೊಂಡರು. 17ರ ಹರೆಯದ ಅಬ್ಬಾಸ್ ತನ್ನಮ್ಮನ ಕೆಂಪು ದೀಪದ ಕಾರನ್ನು ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ, ವಾಹನವು ಮೂವರ ಮೇಲೆ ಚಲಿಸಿ ಅವರೆಲ್ಲರೂ ಸ್ಥಳದಲ್ಲೇ ಅಸು ನೀಗಿದರು ಎಂದು ಪೊಲೀಸರು ತಿಳಿಸಿದರು.

2008: ದಶಕದ ಹಿಂದೆ ನಾಪತ್ತೆಯಾದ ನಿವೃತ್ತ ಉದ್ಯೋಗಿಯ ಪತ್ನಿಗೆ 50,000 ರೂಪಾಯಿಗಳ ಪರಿಹಾರ ನೀಡುವಂತೆ ಕಲ್ಕತ್ತಾ ಹೈಕೋರ್ಟ್ ಪೂರ್ವ ರೈಲ್ವೇಯ ಕೇಂದ್ರೀಯ ಆಸ್ಪತ್ರೆ ಅಧಿಕಾರಿಗಳಿಗೆ ಆದೇಶ ನೀಡಿತು.
ಕಣ್ಮರೆಯಾದ ವ್ಯಕ್ತಿಯ ಪತ್ತೆ ಬಗ್ಗೆ ನಿರ್ಲಕ್ಷ್ಯ ತಾಳಿದ ಬಿ.ಆರ್. ಸಿಂಗ್ ರೈಲ್ವೇ ಆಸ್ಪತ್ರೆಯ ಆಡಳಿತ ವರ್ಗದ ಅಸಡ್ಡೆಯ ಧೋರಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯದ ವಿಭಾಗೀಯ ಪೀಠವು ಪೊಲೀಸರ ಬಳಿ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ದಾಖಲಿಸಿ ಸುಮ್ಮನಾಗುವ ಮೂಲಕ ತಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿತು. ನ್ಯಾಯಮೂರ್ತಿ ಅಮೃತ್ ತಾಲೂಕ್ದರ್ ಮತ್ತು ಪಿ.ಎಸ್. ಬ್ಯಾನರ್ಜಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಭಾವಚಿತ್ರ ಸಹಿತವಾಗಿ ಪತ್ರಿಕೆಗಳು ಮತ್ತು ಟೆಲಿವಿಷನ್ನಿನಲ್ಲಿ ಜಾಹೀರಾತುಗಳನ್ನು ನೀಡುವಂತೆಯೂ ಕೋಲ್ಕತ ಪೊಲೀಸ್ ಮತ್ತು ಪಶ್ಚಿಮ ಬಂಗಾಳ ಪೊಲೀಸರಿಗೆ ನಿರ್ದೇಶಿಸಿತು. ನಂದ ಕುಮಾರ ಸರ್ಕಾರ್ ಎಂಬ ಪೂರ್ವ ರೈಲ್ವೇ ನೌಕರ 1993ರಲ್ಲಿ ನಿವೃತ್ತರಾಗಿದ್ದು, ರೈಲ್ವೇ ನಿಯಮಗಳ ಪ್ರಕಾರ ವೈದ್ಯಕೀಯ ಸವಲತ್ತುಗಳಿಗೆ ಅರ್ಹರಾಗಿದ್ದರು. 1999ರ ಸೆಪ್ಟೆಂಬರ್ 22ರಂದು ಅಸ್ವಸ್ಥರಾದಾಗ ಅವರನ್ನು ಬಿ.ಆರ್. ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 7ರಂದು ಸರ್ಕಾರ್ ಪತ್ನಿ ಶಂಕರಿ ಆಸ್ಪತ್ರೆಗೆ ಬಂದಾಗ ಆತನಿದ್ದ ಮಂಚ ಖಾಲಿಯಾಗಿತ್ತು. ಆಕೆ ತತ್ ಕ್ಷಣವೇ ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಳು. ಆದರೆ ಅಧಿಕಾರಿಗಳು ಸರ್ಕಾರ್ಗೆ ಏನಾಗಿದೆ ಎಂದು ವಿವರಿಸಲು ಸಮರ್ಥರಾಗಲಿಲ್ಲ. ಆ ಬಳಿಕ ತನ್ನ ಪತಿಯ ಪತ್ತೆಗಾಗಿ ಶಂಕರಿ ಅವರು ಕಂಬದಿಂದ ಕಂಬಕ್ಕೆ ಸುತ್ತಿದ್ದಲ್ಲದೆ, ಆಸ್ಪತ್ರೆಗೆ ಹಾಗೂ ರೈಲ್ವೇ ಅಧಿಕಾರಿಗಳಿಗೆ ಹಾಗೂ ನಗರ ಪೊಲೀಸರಿಗೆ ಲಿಖಿತ ಮನವಿಗಳನ್ನೂ ಸಲ್ಲಿಸಿದಳು ಎಂದು ಆಕೆಯ ವಕೀಲ ಇದ್ರಿಸ್ ಅಲಿ ಪ್ರತಿಪಾದಿಸಿದ್ದರು. ಪತಿಯ ಪತ್ತೆಗೆ ವಿಫಲಳಾದಾಗ ಆಕೆ ಹೈಕೋರ್ಟಿನಲ್ಲಿ `ಹೇಬಿಯಸ್ ಕಾರ್ಪಸ್' ಅರ್ಜಿ ಸಲ್ಲಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 15 ದಿನಗಳ ಒಳಗಾಗಿ ಪರಿಹಾರ ನೀಡುವಂತೆ ಬಿ.ಆರ್. ಸಿಂಗ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಿಗೆ ಆದೇಶಿಸಿತು.

2008: ಮೊಹಾಲಿಯಲ್ಲಿ ವೇಗಿ ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಆರೋಪಕ್ಕೆ ಒಳಗಾದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಷೋಕಾಸ್ ನೋಟಿಸ್ ಜಾರಿ ಮಾಡಿತು.

2008: ವಿಶ್ವ ವಿಖ್ಯಾತ ಇಸ್ಲಾಂ ವಿದ್ವಾಂಸ ಮೌಲಾನಾ ಅಂಜರ್ ಷಾ ಕಾಶ್ಮೀರಿ (81) ಅವರು ನವದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು. ಅಂಜರ್ ಷಾ ಅವರು ದಾರುಲ್ ಉಲೂಮ್ ದೇವಬಂದ್ನ ಇಸ್ಲಾಮಿಕ್ ನ್ಯಾಯ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದರು. `ಹದಿತ್', `ಫಿಕ್' ಮತ್ತು ಇಸ್ಲಾಮಿಕ್ ಕಾನೂನಿನ ಮೇಲೆ ಹಲವು ಪುಸ್ತಕಗಳನ್ನು ರಚಿಸಿದ್ದರು.

2008: ತಂದೆಯೊಬ್ಬ ತನ್ನ ಹದಿನಾಲ್ಕರ ಹರೆಯದ ಮಗಳ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ, ಪ್ರಕರಣ ಬೆಳಕಿಗೆ ಬಂದ ಮೇಲೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ ವಿಲಕ್ಷಣ ಘಟನೆಯೊಂದು ಒರಿಸ್ಸಾದ ಮಲ್ಕನ್ ಗಿರಿಗೆ 70 ಕಿ.ಮೀ. ದೂರದ ಕೂಡುಮುಲುಗುಮ ಗ್ರಾಮದಲ್ಲಿ ಹಿಂದಿನ ದಿನ ರಾತ್ರಿ ನಡೆಯಿತು. ಅತ್ಯಾಚಾರವೆಸಗಿದ ಆರೋಪದ ಮೇಲೆ ಭಗವಾನ್ ಡಕುವಾ (37) ಎಂಬುವನನ್ನು ಮಲ್ಕನ್ ಗಿರಿ ಪೊಲೀಸರು ಬಂಧಿಸಿದರು. ತನ್ನ ಮಗಳ ಬಗೆಗಿನ ಗಂಡನ ವರ್ತನೆಯನ್ನು ಗಮನಿಸಿದ ಪತ್ನಿ ವನಿತ, ಮಗಳನ್ನು ಪ್ರಶ್ನಿಸಿದಾಗ ಆಕೆ `ನಡೆದ ಘಟನೆ'ಯನ್ನು ಬಿಚ್ಚಿಟ್ಟಳು. ವಿಷಯ ತಿಳಿದ ಗ್ರಾಮದ ಮಹಿಳಾ ಸ್ವಸಹಾಯ ಗುಂಪಿನವರು ಮಧ್ಯಪ್ರವೇಶಿಸಿ ಗ್ರಾಮಸಭೆ ಮುಂದೆ ಅತ್ಯಾಚಾರದ ವಿಚಾರವನ್ನು ಮಂಡಿಸಿದರು. ಗ್ರಾಮಸಭೆಗೆ ಹಾಜರಾದ ಡಕುವಾನನ್ನು ಘಟನೆ ಬಗ್ಗೆ ಪ್ರಶ್ನಿಸಿದಾಗ, ಅತ್ಯಾಚಾರವೆಸಗಿದ ಮಗಳನ್ನೇ ಮದುವೆಯಾಗುವ ಬಯಕೆ ವ್ಯಕ್ತಪಡಿಸಿ, ಆಕೆಯನ್ನು ಎರಡನೇ ಪತ್ನಿಯನ್ನಾಗಿ ಸ್ವೀಕರಿಸುವುದಾಗಿ ಹೇಳಿದ. ಗ್ರಾಮಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರಿಗೆ ಮುಟ್ಟಿಸಿದರು. ಸ್ವಸಹಾಯ ಗುಂಪಿನ ನಾಯಕಿ ಬಾಲಮಣಿ ನಾಲಿ ಅವರ ಹೇಳಿಕೆ ಮೇರೆಗೆ ಪೊಲೀಸರು ಡಕುವಾನನ್ನು ಬಂಧಿಸಿದರು.

2008: ಹಿರಿಯ ವೃತ್ತಿ ರಂಗ ಕಲಾವಿದೆ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕಿ ಬಳ್ಳಾರಿಯ ಸುಭದ್ರಮ್ಮ ಮನ್ಸೂರು (69) ಅವರನ್ನು 2007ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಏಣಗಿ ಬಾಳಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿ ಸುಭದ್ರಮ್ಮ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿತು.

2008: ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಅಹಮದಾಬಾದಿನಲ್ಲಿ `ಬೌದ್ಧಿಕ ಆಸ್ತಿ ಹಕ್ಕು- ಕಾನೂನು ಹಾಗೂ ಪ್ರಯೋಗ' ಎಂಬ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬೌದ್ಧಿಕ ಆಸ್ತಿ ಹಕ್ಕು ಪರಿಣತರಾದ ಜತಿನ್ ತ್ರಿವೇದಿ ಹಾಗೂ ಜಿ.ಡಿ.ದೇವ್ ಅವರು ಬರೆದ ಈ ಕೃತಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಕಾನೂನಿನ ಬಗ್ಗೆ ಭಾರತದ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪಿನ ಕುರಿತ ವಿವರಣೆಗಳಿವೆ. ಹಣಕಾಸು ಸಚಿವಾಲಯದ ನೇರ ತೆರಿಗೆ ಸಲಹಾ ಸಮಿತಿಯ ಮಾಜಿ ಸದಸ್ಯ, ಸೆಬಿ ಸೆಕೆಂಡರಿ ಮಾರ್ಕೆಟ್ ಸಲಹಾ ಸಮಿತಿ ಸದಸ್ಯ ಚಿನ್ನುಭಾಯ್ ಶಾ ಈ ಕೃತಿ ಬಿಡುಗಡೆ ಮಾಡಿದರು.

2008: ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ರಾಕೇಶ್ ಸಿಂಗ್ ಅಲಿಯಾಸ್ ಪಪ್ಪು ಸಿಂಗ್ ಮತ್ತು ಇತರ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶ ಅಜಂಗಢದ ಜಹನ್ಗಂಜ್ ಪೊಲೀಸ್ ವೃತ್ತ ವ್ಯಾಪ್ತಿಯ ಶಂಶುದ್ದೀನ್ ಪುರದಲ್ಲಿ ಘಟಿಸಿತು.

2007: ಸೇಂಟ್ ಲೂಸಿಯಾದ ಗ್ರಾಸ್ ಐಲೆಟಿನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗಿ ಗ್ಲೆನ್ ಮೆಕ್ ಗ್ರಾ ಅವರು ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೂತನ ವಿಶ್ವಕಪ್ ದಾಖಲೆ ನಿರ್ಮಿಸಿದರು. ಒಂಬತ್ತನೇ ವಿಶ್ವಕಪ್ ಕ್ರಿಕೆಟಿನಲ್ಲಿ `ಶ್ರೇಷ್ಠ ಆಟಗಾರ' ಶ್ರೇಯ ಪಡೆದು ಮುಂಚೂಣಿಯಲ್ಲಿ ನಿಂತಿರುವ ಮೆಕ್ ಗ್ರಾ ಈ ಟೂರ್ನಿಯಲ್ಲಿ 25 ವಿಕೆಟ್ಗಳನ್ನು ಕಬಳಿಸಿ ವಿಶ್ವದಾಖಲೆ ಸ್ಥಾಪಿಸಿದರು. ಶ್ರೀಲಂಕೆಯ ಮುತ್ತಯ್ಯ ಮುರಳೀಧರನ್ (23) ಮತ್ತು ಆಸ್ಟ್ರೇಲಿಯಾದ ಇನ್ನೊಬ್ಬ ಬೌಲರ್ ಶಾನ್ ಟೈಟ್ (23) ಅವರು ಮೆಕ್ ಗ್ರಾ ಜೊತೆಗೆ ಪೈಪೋಟಿಯಲ್ಲಿ ಇರುವ ಇತರ ಪಟುಗಳು.

2007: ಬಹುಸಂಖ್ಯಾತ ಜನರನ್ನು ಕಾಡುವ ಮಧುಮೇಹ ರೋಗಕ್ಕೆ ಕಾರಣವಾಗುವ ವಂಶವಾಹಿಯನ್ನು (ಜೀನ್) ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳ ತಂಡವೊಂದು `ಜನರಲ್ ಸೈನ್ಸ್ ಅಂಡ್ ನೇಚರ್ ಜೆನೆಟಿಕ್ಸ್' ನಿಯತಕಾಲಿಕದಲ್ಲಿ ಪ್ರಕಟಿಸಿತು. ವಿಶ್ವದಲ್ಲಿ ಮಧುಮೇಹದಿಂದ ಬಳಲುತ್ತಿರುವ 20 ಕೋಟಿಗೂ ಅಧಿಕ ಮಂದಿಗೆ ಇದು ವರದಾನ ಆಗಬಲ್ಲುದು.

2007: ರಾಯಚೂರಿನ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ಕೊಳವೆ ಬಾವಿಯೊಳಕ್ಕೆ ಬಿದ್ದ ಸಂದೀಪ ಕಡೆಗೂ ಜೀವಂತವಾಗಿ ಮೇಲೆ ಬರಲಾಗದೆ ಕೊಳವೆ ಬಾವಿಯಲ್ಲೇ ಅಸು ನೀಗಿದ. ಸತತ 57 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಕೊನೆಗೂ ಫಲ ನೀಡಲಿಲ್ಲ.

2007: ಭಾರತದರ್ಶನ ಉಪನ್ಯಾಸ ಮಾಲಿಕೆಯಿಂದ ಖ್ಯಾತರಾಗಿದ್ದ ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕರ್ತ, ಅವಿವಾಹಿತ ವಿದ್ಯಾನಂದ ಶೆಣೈ (56) ಅವರು ಬೆಂಗಳೂರಿನಲ್ಲಿ ನಿಧನರಾದರು. ಶೃಂಗೇರಿ ಪುರಸಭೆಯ ಸದಸ್ಯರೂ ಆಗಿದ್ದ ವಿದ್ಯಾನಂದ ಶೆಣೈ ರಾಜ್ಯದಲ್ಲಿ ಭಾರತ ದರ್ಶನ ಉಪನ್ಯಾಸ ಮಾಲಿಕೆಯ ಮೂಲಕ 1100ಕ್ಕೂ ಅಧಿಕ ಉಪನ್ಯಾಸ ನೀಡಿದ್ದರು. ಅವರು ಹೊರತಂದಿದ್ದ `ಭಾರತ ದರ್ಶನ' ಧ್ವನಿಸುರುಳಿಯ 50,000 ಸೆಟ್ಗಳು ಮಾರಾಟವಾಗಿ ದಾಖಲೆ ನಿರ್ಮಾಣವಾಗಿತ್ತು.

2007: ಮಲೇಶ್ಯಾವು ಈದಿನ ಕ್ವಾಲಾಲಂಪುರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 45 ವರ್ಷದ ಥಂಕು ಮಿಜಾನ್ ಜೈನಲ್ ಅಬಿದಿನ್ ಅವರನ್ನು ತನ್ನ ನೂತನ ದೊರೆಯಾಗಿ ಘೋಷಿಸಿತು. ತೈಲ ಸಮೃದ್ಧ ತೆರೆಂಗ್ಗನು ರಾಜ್ಯದದವರಾದ ಥಂಕು ಮಿಜಾನ್ ಅವರು ಎರಡನೆಯ ಅತ್ಯಂತ ಕಿರಿಯ ದೊರೆಯಾಗಿದ್ದು ಹೊಸ ತಲೆಮಾರಿನ ಶ್ರದ್ಧಾವಂತ ಮುಸ್ಲಿಮ. ಮಲೇಶ್ಯಾದ ಸಂವಿಧಾನಬದ್ಧವಾದ ವಿಶಿಷ್ಠ ಸರದಿ ದೊರೆತನ ವ್ಯವಸ್ಥೆ ಪ್ರಕಾರ ಥಂಕು ಅವರು ಐದು ವರ್ಷ ಕಾಲ ರಾಜ್ಯಭಾರ ಮಾಡುವರು. ಮಲೇಶ್ಯಾವು ಒಂಬತ್ತು ಮಂದಿ ಸುಲ್ತಾನರನ್ನು ಹೊಂದಿದ್ದು ಪ್ರತಿಯೊಬ್ಬರೂ ಸರದಿಯಂತೆ ಐದು ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಾರೆ. ಆದರೆ ಈ ಸಲದ ಸುಲ್ತಾನರು ಅತ್ಯಂತ ಯುವ ತಲೆಮಾರಿನವರೂ ಶ್ರದ್ಧಾವಂತ ಮುಸ್ಲಿಮರೂ ಆಗಿರುವುದು ವಿಶೇಷ. 2.60 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮುಸ್ಲಿಮರನ್ನು ಹೊಂದಿರುವ ಮಲೇಶ್ಯಾ, ಆಧುನಿಕ ರಾಷ್ಟ್ರವಾಗ್ದಿದರೂ, 1980ರಿಂದ ಇಸ್ಲಾಮಿಕ್ ಸಂಪ್ರದಾಯ ಹೆಚ್ಚು ಬಲವಾಗಿ ಬೇರೂರಿದೆ.

2007: ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 81 ವರ್ಷದ ಸ್ವಾಮಿನಾಥನ್ ಅವರನ್ನು ಈ ತಿಂಗಳ ಆದಿಯಲ್ಲಿ ಮೇಲ್ಮನೆ ಸದಸ್ಯರಾಗಿ ನಾಮಕರಣ ಮಾಡಲಾಗಿತ್ತು. ಅವರು ಇಂಗ್ಲಿಷಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

2007: ಛತ್ರಪತಿ ಶಿವಾಜಿ ಕುರಿತ ವಿವಾದಾತ್ಮಕ `ಎ ಹಿಂದು ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ' ಪುಸ್ತಕದ ಮೇಲೆ ಮಹಾರಾಷ್ಟ್ರ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಮುಂಬೈ ಹೈಕೋರ್ಟ್ ತಳ್ಳಿ ಹಾಕಿತು. ಅಮೆರಿಕನ್ ಲೇಖಕ ಜೇಮ್ಸ್ ಲೈನ್ ಈ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಶಿವಾಜಿ ಬಗ್ಗೆ ಕೆಲವು ಟೀಕೆಗಳಿವೆ ಎಂಬ ಕಾರಣಕ್ಕಾಗಿ ಸರ್ಕಾರವು ಅದನ್ನು ನಿಷೇಧಿಸಿತ್ತು. ನ್ಯಾಯಮೂರ್ತಿ ಎಫ್. ಐ. ರೆಬೆಲ್ಲೋ, ನ್ಯಾಯಮೂರ್ತಿ ವಿ.ಕೆ. ತಾಹಿಲ್ ರಮಣಿ ಮತ್ತು ನ್ಯಾಯಮೂರ್ತಿ ಅಭಯ್ ಓಕ್ ಅವರನ್ನು ಒಳಗೊಂಡ ಪೂರ್ಣಪೀಠವು 2004ರಲ್ಲಿ ವಿಧಿಸಲಾದ ನಿಷೇಧವನ್ನು ತಳ್ಳಿಹಾಕಿ ತೀರ್ಪು ನೀಡಿತು.

2006: ಕೊಲಂಬೊ ಸೇನಾ ಮುಖ್ಯ ಕಚೇರಿ ಮೇಲೆ ಮಾನವಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಶ್ರೀಲಂಕಾ ವಾಯುಪಡೆಯು ಈಶಾನ್ಯ ಪ್ರದೇಶದ ತಮಿಳು ಬಂಡುಕೋರರ ಆಯ್ದ ನೆಲೆಗಳ ಮೇಲೆ ವಾಯುದಾಳಿ ಆರಂಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಪಿ. ವೆಂಕೋಬರಾವ್ (84) ಬೆಂಗಳೂರಿನ ಶ್ರೀರಾಮಪುರದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ಮಹಾತ್ಮ ಗಾಂಧೀಜಿ ಮತ್ತು ವಿನೋಬಾ ಭಾವೆ ಅವರ ಶಿಷ್ಯರಾಗಿ ಅವರ ಆಶ್ರಮಗಳಲ್ಲಿ ನೆಲೆಸಿದ್ದ ವೆಂಕೋಬರಾವ್ ಕ್ವಿಟ್ ಇಂಡಿಯಾ ಚಳವಳಿ, ವಿನೋಬಾ ಭಾವೆ ಅವರ ಭೂದಾನ ಯಾತ್ರೆಗಳಲ್ಲಿ ಪಾಲ್ಗೊಂಡ್ದಿದರು. ಜೀವನ ಚರಿತ್ರೆ, ಅನುವಾದ, ಕವನ ಪ್ರಾಕಾರಗಳಲ್ಲಿ 25 ಪುಸ್ತಕಗಳನ್ನು ರಚಿಸಿದ್ದು, ಅವರ 1200 ಪುಟಗಳ ಗಾಂಧಿ ಚರಿತ ಮಾನಸ ಗ್ರಂಥಕ್ಕೆ ದೇಜಗೌ ಟ್ರಸ್ಟ್ ವಿಶ್ವ ಮಾನವ ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ತಮ್ಮ 17ನೇ ವಯಸ್ಸಿನಲ್ಲಿ ಹೌ ಓಪಲ್ ಮೆಹ್ತಾ ಗಾಟ್ ಕಿಸ್ಸಡ್, ಗಾಟ್ ವೈಲ್ಡ್ ಅಂಡ್ ಗಾಟ್ ಎ ಲೈಫ್ ಕಾದಂಬರಿ ಬರೆದು ಅಪಾರ ಖ್ಯಾತಿಯ ಜೊತೆಗೇ ಕೃತಿ ಚೌರ್ಯದ ವಿವಾದದಲ್ಲಿಯೂ ಸಿಲುಕಿದ ಭಾರತೀಯ ಮೂಲದ ಹಾರ್ವರ್ಡ್ ಯುವತಿ ಹಾರ್ವರ್ಡ್ ವಿವಿ ವಿದ್ಯಾರ್ಥಿನಿ ಕಾವ್ಯ ವಿಶ್ವನಾಥನ್ ಅವರು ತಮ್ಮ ಕಾದಂಬರಿಯಲ್ಲಿ ಬೇರೆ ಕಾದಂಬರಿಯ ಕೆಲವೊಂದು ಬರಹಗಳನ್ನು ಬಳಸಿಕೊಂಡಿದ್ದಾಗಿ ಒಪ್ಪಿಕೊಂಡರು. ಓಪಲ್ ಮೆಹ್ತಾ ಪ್ರಕಟಿಸಿದ ಲಿಟಲ್ ಬ್ರೌನ್ ಕಂಪೆನಿಗೆ ಪತ್ರ ಬರೆದ ಇನ್ನೊಂದು ಪ್ರಕಾಶನ ಸಂಸ್ಥೆ ರ್ಯಾಂಡಮ್ ಹೌಸ್ ಓಪಲ್ ಮೆಹ್ತಾ ಹಾಗೂ ಅಮೆರಿಕದ ಬರಹಗಾರ ಮೆಗನ್ ಮ್ಯಾಕ್ ಕ್ಯಾಫರ್ಟಿ ಅವರ ಸ್ಲೊಪ್ಪಿ ಫರ್ಸ್ಟ್ ಮತ್ತು ಸೆಕೆಂಡ್ ಹೆಲ್ಪಿಂಗ್ ನಡುವೆ ಸಾಮ್ಯತೆ ಇದೆ ಎಂದು ಆಕ್ಷೇಪಿಸಿತ್ತು.

2006: ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ನೂತನ ಅಧ್ಯಕ್ಷರಾಗಿ ಪಾರ್ಥಿ ಭಟೋಲ್ ಆಯ್ಕೆಯಾದರು. 33 ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರು ಹಿಂದಿನ ತಿಂಗಳು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2006: ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆ. ಸೊರಾಬ್ಜಿ ಅವರು ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಚಾರಿಟಬಲ್ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆಯಾದರು

1992: ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ. ಗೋಕಾಕ್ ಅವರು ಈದಿನ ನಿಧನರಾದರು.

1986: ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ಜಗತ್ತಿನ ಅತಿಭೀಕರ ವಿಕಿರಣ ಸೋರಿಕೆ ದುರಂತ ಘಟಿಸಿತು. ಸ್ಥಾವರದ ರಿಯಾಕ್ಟರಿನಲ್ಲಿ ಸ್ಫೋಟ ಹಾಗೂ ಬೆಂಕಿ ಸಂಭವಿಸಿ ಸೋರಿಕೆಯಾದ ವಿಕಿರಣ ಪರಿಸರವನ್ನು ಸೇರಿ ಕನಿಷ್ಠ 31 ಮಂದಿ ತತ್ ಕ್ಷಣವೇ ಅಸುನೀಗಿದರು.

1955: ಕಲಾವಿದೆ ಜಯಶ್ರೀ ಅರವಿಂದ್ ಜನನ.

1954: ಕಲಾವಿದ ರವೀಂದ್ರ ಕುಮಾರ ವಿ. ಜನನ.

1946: ಭಾರತೀಯ ಕ್ರಿಕೆಟ್ ಅಂಪೈರ್ ವಿ.ಕೆ. ರಾಮಸ್ವಾಮಿ ಜನ್ಮದಿನ.

1937: ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಸಾಹಿತಿ, ಪ್ರಾಧ್ಯಾಪಕ ಸೂರ್ಯನಾಥ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಉಪೇಂದ್ರ ಕಾಮತ್- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕಾಮತ್ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿವಿಯ ಸಂಶೋಧನಾ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ.

1937: ಸ್ಪಾನಿಷ್ ಅಂತರ್ಯುದ್ಧದ ಸಂದರ್ಭದಲ್ಲಿ ಜರ್ಮನ್ ವಿಮಾನಗಳು ಗುಯೆರ್ನಿಕಾದ ಬಾಸ್ಕ್ ಟೌನ್ ಮೇಲೆ ದಾಳಿ ನಡೆಸಿದವು. ನಾಗರಿಕ ಪ್ರದೇಶದ ಮೇಲೆ ನಡೆದ ಮೊತ್ತ ಮೊದಲ ಬಾಂಬ್ ದಾಳಿ ಇದು. ಈ ದಾಳಿಯಿಂದ ಆದ ಜೀವಹಾನಿಯನ್ನು ಪಾಬ್ಲೊ ಪಿಕಾಸೋ ತನ್ನ `ಗುಯೆರ್ನಿಕಾ' ಗೋಡೆ ಚಿತ್ರಗಳಲ್ಲಿ ಚಿತ್ರಿಸಿದ್ದಾನೆ.

1931: ಕಲಾವಿದ ವಿ. ರಾಮಸ್ವಾಮಿ ಜನನ.

1927: ಕಲಾವಿದ ಶಿವಪ್ಪ ಎಚ್. ತರಲಘಟ್ಟಿ ಜನನ.

1920: ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ ಅವರು ತಮ್ಮ 32ನೇ ವಯಸ್ಸಿನಲ್ಲಿ ಕ್ಷಯ ರೋಗಕ್ಕೆ ತುತ್ತಾಗಿ ನಿಧನರಾದರು.

1887: ಮೈಸೂರಿನ ವೀಣಾವಾದನ ಝೇಂಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ವೀಣೆ ವೆಂಕಟಗಿರಿಯಪ್ಪ (26-4-1887ರಿಂದ 30-1-1952) ಅವರು ವೆಂಕಟರಾಮಯ್ಯ- ನರಸಮ್ಮ ದಂಪತಿಯ ಮಗನಾಗಿ ಹೆಗ್ಗಡದೇವನ ಕೋಟೆಯಲ್ಲಿ ಜನಿಸಿದರು. ತಾತ ದೊಡ್ಡ ಸುಬ್ಬರಾಯರಿಂದಲೇ ವೀಣೆ ಪಾಠ ಆರಂಭಿಸಿದ ವೆಂಕಟರಾಮಯ್ಯ ಮುಂದೆ ಮೈಸೂರು ಮಹಾರಾಜರ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಮಹಾರಾಜರ ಪ್ರೋತ್ಸಾಹದಿಂದ ಪಾಶ್ಚಾತ್ಯ ಸಂಗೀತ ಪಿಯಾನೋ, ಕೆರಮಿಮ್ ವಾದನ ಕಲೆಯನ್ನೂ ಕಲಿತು ವೀಣೆಯೊಂದಿಗೆ ಅವುಗಳಲ್ಲೂ ಪ್ರವೀಣರಾದರು.

1806: ಸ್ಕಾಟಿಷ್ ಮತಪ್ರಚಾರಕ ಅಲೆಗ್ಸಾಂಡರ್ ಡಫ್ (1806-78) ಹುಟ್ಟಿದ ದಿನ. ಈತ ಕಲಕತ್ತಾ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವಾದ.

No comments:

Advertisement