Monday, November 30, 2020

ಹೊಸ ಕಾನೂನಿಂದ ಹಳೆ ವ್ಯವಸ್ಥೆ ರದ್ದಾಗದು: ಪ್ರಧಾನಿ ಮೋದಿ

 ಹೊಸ ಕಾನೂನಿಂದ ಹಳೆ ವ್ಯವಸ್ಥೆ ರದ್ದಾಗದು: ಪ್ರಧಾನಿ ಮೋದಿ

ಲಕ್ನೋ: ಹೊಸ ಕೃಷಿ ಕಾನೂನುಗಳ ವಿರುದ್ದದ ಪ್ರತಿಭಟನೆಯಾಗಿ ರಾಷ್ಟ್ರ ರಾಜಧಾನಿಗೆ ಹೋಗುವ ರಸ್ತೆಗಳನ್ನು ಕಡಿತಗೊಳಿಸುವುದಾಗಿ ರೈತ ಸಂಘಟನೆಗಳು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರೈತರ ಜೊತೆ ಚರ್ಚಿಸಲು ಕೃಷಿ ಸಚಿವರು ಮುಂದಾಗುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ 30ರ ಸೋಮವಾರ ಕೃಷಿ ಕಾನೂನುಗಳನ್ನು ಪ್ರಬಲವಾಗಿ ಪ್ರತಿಪಾದಿಸಿದರು.

ದೆಹಲಿ ಗಡಿಯಲ್ಲಿ ಶಿಬಿರ ಹೂಡಿರುವ ರೈತರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಷರತ್ತು ಬದ್ಧ ಮಾತುಕತೆ ಆರಂಭದ ಪ್ರಸ್ತಾಪ ನೀಡಿದ್ದಕ್ಕೆ ಸಿಟ್ಟಿಗೆದ್ದು ರಾಜಧಾನಿ ಘೇರಾವ್ ಬಗ್ಗೆ ಮಾತುಗಳನ್ನಾಡಿದ್ದಾರೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ, ಅಮಿತ್ ಶಾ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ.

ಕಾರ್ಪೊರೇಟ್ಗಳ ಅನುಕೂಲಕ್ಕಾಗಿ ಸರ್ಕಾರ ಹೊಸ ಕಾನೂನುಗಳನ್ನು ರೂಪಿಸುತ್ತಿದೆ ಎಂಬುದಾಗಿ  ಆರೋಪಿಸಿರುವ ರೈತರನ್ನು ತಲುಪುವ ಯತ್ನ ನಡೆಸಿದ ಪ್ರಧಾನಿ  ಮೋದಿ, "ದಶಕಗಳ ಸುಳ್ಳಿನಿಂದಾಗಿ ಕೃಷಿಕರ ಮನಸ್ಸಿನಲ್ಲಿ ಆತಂಕ ಉಂಟಾಗುತ್ತದೆ  ಎಂಬುದು ನನಗೆ ತಿಳಿದಿದೆ. ನಾವು ಮೋಸಗೊಳಿಸುವ ಉದ್ದೇಶದಿಂದ ಕೆಲಸ ಮಾಡುತ್ತಿಲ್ಲ. ನಮ್ಮ ಉದ್ದೇಶಗಳು ಗಂಗಾನದಿಯ ನೀರಿನಂತೆಯೇ ಪವಿತ್ರವಾಗಿವೆ ಎಂಬುದಾಗಿ ಗಂಗಾಮಾತೆಯ ದಡದಲ್ಲಿ ನಿಂತು ಹೇಳಲು ನಾನು ಇಚ್ಛಿಸುತ್ತೇನೆ ಎಂದು ಹೇಳಿದರು.

"ಹಿಂದಿನ ವ್ಯವಸ್ಥೆಯು ಉತ್ತಮವಾಗಿದೆ ಎಂದು ಯಾರಾದರೂ ಭಾವಿಸಿದರೆ, ಕಾನೂನು ಯಾರನ್ನಾದರೂ ಹೇಗೆ ತಡೆಯುತ್ತದೆ, ಭಾಯ್? ಎಂದು ಪ್ರಶ್ನಿಸಿದ ಪ್ರಧಾನಿ  ಹೊಸ ಮುಕ್ತ ಮಾರುಕಟ್ಟೆ ವ್ಯವಸ್ಥೆಯು ಸಾಂಪ್ರದಾಯಿಕ ಮಂಡಿಗಳು ಮತ್ತು ಸರ್ಕಾರವು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯ ಅಂತ್ಯ ಎಂದು ಅರ್ಥವಲ್ಲ ಎಂದು ಹೇಳುವ ಮೂಲಕ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ವಿರುದ್ಧ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಅವರು ರೈತರ ವಿರುದ್ಧ ತಂತ್ರಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದರು.

" ಐತಿಹಾಸಿಕ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ರೈತರನ್ನು ದಶಕಗಳಿಂದ ದಾರಿತಪ್ಪಿಸಿದ ಅದೇ ಜನರು ದಾರಿತಪ್ಪಿಸುತ್ತಿದ್ದಾರೆ" ಎಂದು ಅವರು ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಪ್ರಧಾನಿ ಹೇಳಿದರು.

ಕಾಯಿದೆಗಳನ್ನು ವಿರೋಧಿಸುವರು ಆತಂಕ ಮತ್ತು ಪ್ರತಿಭಟನೆಗಳನ್ನು ಪ್ರಚೋದಿಸುತ್ತಿದ್ದಾರೆ. ಅವರು ಸಮಾಜವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಮೋದಿ ನುಡಿದರು.

"ಇದೇ ಜನರು ಹಿಂದೆ ಎಂಎಸ್ಪಿ, ಸಾಲ ಮನ್ನಾ ಮತ್ತು ರಸಗೊಬ್ಬರ ಸಬ್ಸಿಡಿ ಹೆಸರಿನಲ್ಲಿ ರೈತರೊಂದಿಗೆ ತಂತ್ರಗಳನ್ನು ಆಡಿದ್ದಾರೆ" ಎಂದು ಅವರು ಹೇಳಿದರು, ರೈತರನ್ನು ಬಹಳ ಸಮಯದಿಂದ ಮೋಸ ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಈಗ ಪ್ರಯತ್ನಗಳು ನಡೆಯುತ್ತಿವೆ ಎಂದು ಮೋದಿ ಹೇಳಿದರು.

ಇದಕ್ಕೂ ಮೊದಲು ಅವರು ವಾರಣಾಸಿಯಿಂದ ಅಲಹಾಬಾದ್ವರೆಗಿನ ೭೩ ಕಿ.ಮೀ ಹೆದ್ದಾರಿಯ ಆರು ಪಥವನ್ನು ರಾಷ್ಟ್ರಕ್ಕೆ ಅರ್ಪಿಸಿದರು. "ಇಂದು, ಉತ್ತರಪ್ರದೇಶ ಎಕ್ಸ್ಪ್ರೆಸ್ ಪ್ರದೇಶ ಎಂದು ಮಾನ್ಯತೆ ಪಡೆಯುತ್ತಿದೆ. ಹಿಂದೆ ಇದ್ದ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ" ಎಂದು ರಾಜ್ಯದಲ್ಲಿ ಕೈಗೊಂಡ ಎಕ್ಸ್ಪ್ರೆಸ್ವೇ ಯೋಜನೆಗಳನ್ನು ಉಲ್ಲೇಖಿಸಿ ಅವರು ಹೇಳಿದರು,

೧೯೭೭ರಲ್ಲಿ ಅಂದಿನ ಜನತಾ ಪಕ್ಷ ಸರ್ಕಾರವು ಮಾಡಿದ್ದದ ನಿಯಮದ ಪ್ರಕಾರ, ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಸಮರ್ಥರಾಗಿದ್ದಾರೆ ಎಂಬುದಾಗಿ ಭಾನುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳುವ ಮೂಲಕ ರೈತರು ಕೃಷಿ ಕಾನೂನುಗಳ ಹೆಸರಿನಲ್ಲಿ "ಒನ್ ನೇಷನ್ ಒನ್ ಮಾರ್ಕೆಟ್ ತರುವ ಸರ್ಕಾರದ ಕ್ರಮವನ್ನು ಅಪಹಾಸ್ಯ ಮಾಡಿದ್ದರು.

"ಕಾರ್ಪೊರೇಟ್ಗಳನ್ನು ಸಂತೋಷವಾಗಿಡಲು, ಅವರು ಇದನ್ನು ಮಾಡಿದ್ದಾರೆ ... ಅವರಿಗೆ ಯಾವುದೇ ತರ್ಕವನ್ನು ಕಂಡುಹಿಡಿಯಲಾಗಲಿಲ್ಲ, ಆದ್ದರಿಂದ ಒಂದು ರಾಷ್ಟ್ರವನ್ನು ಒಂದು ಮಾರುಕಟ್ಟೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ ಎಂದು ರೈತ ಮುಖಂಡರು ಹೇಳಿದರು.

ಸುಧಾರಣೆಗಳು ರೈತರಿಗೆ ಹೊಸ ಆಯ್ಕೆಗಳು ಮತ್ತು ಸುರಕ್ಷತೆಗಳನ್ನು ನೀಡಿವೆ ಎಂದು ಪ್ರಧಾನಿ ತಮ್ಮ ತವರು ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದ ಭಾಷಣದಲ್ಲಿ ಹೇಳಿದರು.

ಕಾಯ್ದೆಗಳು ರೈತರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ದೊರಕಿಸಲಿವೆ ಎಂದು ಅವರು ನುಡಿದರು.

No comments:

Advertisement