Saturday, January 2, 2021

ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬೂಟಾ ಸಿಂಗ್ ನಿಧನ

 ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬೂಟಾ ಸಿಂಗ್ ನಿಧನ

ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬೂಟಾ ಸಿಂಗ್ ಅವರು 2021 ಜನವರಿ 02ರ ಶನಿವಾರ ಬೆಳಿಗ್ಗೆ ನಗರದ ಏಮ್ಸ್‌ನಲ್ಲಿ ನಿಧನರಾದರು. ಅವರಿಗೆ ೮೬ ವರ್ಷ ವಯಸ್ಸಾಗಿತ್ತು.

ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಳೆದ ವರ್ಷ ಅಕ್ಟೋಬರಿನಿಂದ ಕೋಮಾ ಸ್ಥಿತಿಯಲ್ಲಿದ್ದರು. ಅವರನ್ನು ಮಿದುಳಿನ ರಕ್ತಸ್ರಾವಕ್ಕಾಗಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ (ಏಮ್ಸ್) ದಾಖಲಿಸಲಾಗಿತ್ತು.

ಬೂಟಾ ಸಿಂಗ್ ಅವರು ಎಂಟು ಬಾರಿ ಸಂಸದರಾಗಿದ್ದರು ಮತ್ತು ಬಿಹಾರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

೧೯೩೪ರ ಮಾರ್ಚ್ ೨೧ರಂದು ಪಂಜಾಬಿನ ಜಲಂಧರ್ ಜಿಲ್ಲೆಯಲ್ಲಿ ಜನಿಸಿದ ಸಿಂಗ್ ಎಂಟು ಬಾರಿ ಲೋಕಸಭಾ ಸಂಸದರಾಗಿದ್ದರು. ಅವರು ರಾಜಸ್ಥಾನದ ಜಲೋರ್ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ೧೯೬೨ ರಲ್ಲಿ ಮೊದಲಿಗೆ ಸಂಸತ್ತಿನ ಕೆಳಮನೆಗೆ ಆಯ್ಕೆಯಾಗಿದ್ದರು.

ಸಿಂಗ್ ಹಿಂದೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಯೊಂದಿಗೆ ಸಂಬಂಧ ಹೊಂದಿದ್ದರು, ಆದರೆ ನಂತರ ೧೯೬೦ ದಶಕದ ಆರಂಭದಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿದ್ದ ಅವರು ೧೯೭೩-೭೪ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹರಿಜನ ಕೋಶದ ಸಂಚಾಲಕರಾಗಿದ್ದರು. ೧೯೭೮ ರಲ್ಲಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರು.

ಸಿಂಗ್ ೧೯೭೪ ರಲ್ಲಿ ಕೇಂದ್ರ ಉಪ ಮಂತ್ರಿ, ರೈಲ್ವೆ ಮತ್ತು ೧೯೭೬ ರಲ್ಲಿ ವಾಣಿಜ್ಯ ಉಪ ಮಂತ್ರಿಯಾದರು. ೧೯೮೦ ರಲ್ಲಿ ಅವರು ಕೇಂದ್ರದ ಹಡಗು ಮತ್ತು ಸಾರಿಗೆ ಸಹಾಯಕ ಸಚಿವರಾದರು ಮತ್ತು ೧೯೮೨ ರಲ್ಲಿ ಅವರಿಗೆ ಕ್ರೀಡಾ (ಸ್ವತಂತ್ರ ಶುಲ್ಕ) ಖಾತೆಯನ್ನು ನೀಡಲಾಯಿತು. ೧೯೮೩ರಲ್ಲಿ ಬೂಟಾಸಿಂಗ್ ಅವರಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಸಂಸದೀಯ ವ್ಯವಹಾರಗಳು, ಕ್ರೀಡೆ ಮತ್ತು ವಸತಿ ಖಾತಾ ಸಂಪುಟ ಸಚಿವರಾಗಿ ಬಡ್ತಿ ನೀಡಿದರು. ೧೯೮೪ ರಲ್ಲಿ ಅವರನ್ನು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರನ್ನಾಗಿ ಮತ್ತು ೧೯೮೬ ರಲ್ಲಿ ರಾಜೀವ್ ಗಾಂಧಿ ಸಂಪುಟದಲ್ಲಿ ಕೇಂದ್ರ ಗೃಹ ಸಚಿವರನ್ನಾಗಿ ಮಾಡಲಾಯಿತು.

ಪಿ.ವಿ.ನರಸಿಂಹ ರಾವ್ ಅವರ ನೇತೃತ್ವದಲ್ಲಿ, ಸಿಂಗ್ ೧೯೯೫ ರಿಂದ ೧೯೯೬ ರವರೆಗೆ ಕೇಂದ್ರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾಗಿದ್ದರು. ಅವರನ್ನು ೨೦೦೭ ರಲ್ಲಿ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್‌ಸಿಎಸ್‌ಸಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ೨೦೧೦ರವರೆಗೆ ಅವರು ಹುದ್ದೆಯನ್ನು ಹೊಂದಿದ್ದರು.

೧೯೮೪ ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಂತರ ದೇಶ ಮತ್ತು ವಿದೇಶಗಳಲ್ಲಿ, ವಿಶೇಷವಾಗಿ ಶ್ರೀ ಅಕಾಲ್ ತಖ್ತ್‌ನಲ್ಲಿ ಅನೇಕ ಗುರುದ್ವಾರಗಳನ್ನು ನಿರ್ಮಿಸಲು ಮತ್ತು ಪುನರ್ನಿರ್ಮಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ೧೯೮೪ರ ನವೆಂಬರಿನ  ಸಿಖ್ ವಿರೋಧಿ ಗಲಭೆಯ ನಂತರ ದೆಹಲಿಯಲ್ಲಿ ಅನೇಕ ಗುರುದ್ವಾರಗಳ ಪುನರ್ನಿರ್ಮಾಣದಲ್ಲಿ ಅವರು ಭಾಗಿಯಾಗಿದ್ದರು. ೧೯೭೮ ರಲ್ಲಿ ಪಕ್ಷ ವಿಭಜನೆಯಾದ ನಂತರ ಕಾಂUಸ್ಸಿನ ಹೊಸ ಚುನಾವಣಾ ಚಿಹ್ನೆ "ಕೈ" ಆಯ್ಕೆ ಮಾಡುವಲ್ಲಿ ಸಿಂಗ್ ತೊಡಗಿಸಿಕೊಂಡಿದ್ದರು.

ಆಪರೇಷನ್ ಬ್ಲೂ ಸ್ಟಾರ್ ಸಮಯದಲ್ಲಿ ಅವರು ಇಂದಿರಾ ಗಾಂಧಿಯವರೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದರು ಮತ್ತು ಸಚಿವರಾಗಿ ಸೇನೆಯ ಕಾರ್ಯಾಚರಣೆಯ ನಂತರ ಪಂಜಾಬಿನ ಅಮೃತಸರದಲ್ಲಿ ಸ್ವರ್ಣಮಂದಿರದ ಪುನರ್ನಿರ್ಮಾಣವನ್ನು ನೋಡಿಕೊಂಡರು. ೧೯೮೨ ರಲ್ಲಿ ಭಾರತದಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದರು.

ಹಲವು ವಿವಾದಗಳನ್ನೂ ಸಿಂಗ್ ಎಳೆದುಹಾಕಿಕೊಂಡಿದ್ದರು. ೧೯೯೮ ರಲ್ಲಿ, ಸಂವಹನ ಸಚಿವರಾಗಿದ್ದಾಗ ಜೆಎಂಎಂ ಲಂಚ ಪ್ರಕರಣದಲ್ಲಿ ದೋಷಾರೋಪಣೆಗೆ ಗುರಿಯಾಗಿ ಸಿಂಗ್ ಅವರು ರಾಜೀನಾಮೆ ನೀಡಬೇಕಾಯಿತು. ೨೦೦೫ ರಲ್ಲಿ ಬಿಹಾರ ರಾಜ್ಯಪಾಲರಾಗಿ, ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಅವರು ಮಾಡಿದ್ದ ಶಿಫಾರಸಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಟೀಕಿಸಿತ್ತು, ನಂತರ ಅವರು ರಾಜೀನಾಮೆ ನೀಡಿದ್ದರು.

ಸಿಂಗ್ ಅರು ಪುತ್ರಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

 ಗಣ್ಯರ ಸಂತಾಪ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿರಿಯ ಕಾಂಗ್ರೆಸ್ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

"ಬೂಟಾ ಸಿಂಗ್ ಅವರ ನಿಧದಿಂದ ದೇಶವು ಶ್ರೀಮಂತ ಆಡಳಿತಾತ್ಮಕ ಅನುಭವ ಹೊಂದಿರುವ ಸಂಸದೀಯ ಪಟು ಒಬ್ಬರನ್ನು ಕಳೆದುಕೊಂಡಿದೆ. ತುಳಿತಕ್ಕೊಳಗಾದ ಮತ್ತು ಬದಿಗೊತ್ತಲ್ಪಟ್ಟವರ ಹಿತಕ್ಕಾಗಿ ದುಡಿಯುವುದರಲ್ಲಿ ಅವರು ಮುಂಚೂಣಿಯಲ್ಲಿ ಇರುತ್ತಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುವೆ ಎಂದು ಕೋವಿಂದ್ ಟ್ವೀಟ್ ಮಾಡಿದರು.

ಬೂಟಾ ಸಿಂಗ್ ಜಿ ಅವರ ನಿಧನದ ಬಗ್ಗೆ ತಿಳಿದು ದುಃಖಿತನಾದೆ. ಅವರು ಸಮರ್ಥ ಆಡಳಿತಗಾರ ಮತ್ತು ಸಂಸದರಾಗಿದ್ದರು. ಕುಟುಂಬ ಸದಸ್ಯರಿಗೆ ನನ್ನ ಹೃತ್ಪೂರ್ವಕ ಸಂತಾಪ. ಓಂ ಶಾಂತಿ!’ ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದರು.

"ಬೂಟಾ ಸಿಂಗ್ ಜಿ ಅವರು ಅನುಭವಿ ಆಡಳಿತಗಾರರಾಗಿದ್ದರು ಮತ್ತು ಬಡವರ ಮತ್ತು ದೀನ ದಲಿತರ ಕಲ್ಯಾಣಕ್ಕಾಗಿ ಪರಿಣಾಮಕಾರಿ ಧ್ವನಿಯಾಗಿದ್ದರು. ಅವರು ನಿಧನದಿಂದ ಬೇಸರವಾಯಿತು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಎಂದು ಪ್ರಧಾನಿ ಮೋದಿ ಟ್ವೀಟಿನಲ್ಲಿ ಬರೆದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಬೂಟಾಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

No comments:

Advertisement