Sunday, May 4, 2008

ಇಂದಿನ ಇತಿಹಾಸ History Today ಮೇ 4

ಇಂದಿನ ಇತಿಹಾಸ

ಮೇ 4

ಕಾಲಜ್ಞಾನಿ ನಾಸ್ಟ್ರಡಾಮಸ್ ತನ್ನ `ಸೆಂಚುರೀಸ್' ಕೃತಿಯನ್ನು ಪ್ರಕಟಿಸಿದ. ಈ ಕೃತಿ 350 ಚೌಪದಿಗಳನ್ನು ಒಳಗೊಂಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಈ ಗ್ರಂಥದ ಎರಡನೇ ಆವೃತ್ತಿಯನ್ನು ನಾಸ್ಟ್ರಡಾಮಸ್ ಎರಡನೇ ಹೆನ್ರಿಗೆ ಅರ್ಪಿಸಿದ. ಹೆನ್ರಿಯ ಸಾವಿನ ಬಗ್ಗೆ ಈ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದ.


2007: ಮಂಡ್ಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಅವರ `ತತ್ರಾಣಿ' ಕವನ ಸಂಕಲನಕ್ಕೆ 2007ರ ಸಾಲಿನ ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ ಲಭಿಸಿತು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರತಿವರ್ಷ ಒಬ್ಬ ಕವಿಗೆ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ಅಮೆರಿಕದ `ಟೈಮ್' ನಿಯತಕಾಲಿಕವು ಪ್ರಕಟಿಸಿದ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತೀಯರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಹಾಗೂ ಪೆಪ್ಸಿ ಕಂಪೆನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರ್ಪಡೆಯಾದರು. ಪಟ್ಟಿಯಲ್ಲಿ ಅಲ್ಖೈದಾ ನಾಯಕ ಬಿನ್ ಲಾಡೆನ್ ಹೆಸರಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೈಬಿಡಲಾಯಿತು.

2007: ಗೋಕಾಕ ನಗರ ಹೊರವಲಯದ ರಿದ್ದಿ-ಸಿದ್ದಿ ಕಾರ್ಖಾನೆಯ್ಲಲಿ ರಾತ್ರಿ ಬಾಯ್ಲರ್ ಸ್ಫೋಟಿಸಿದ ಪರಿಣಾಮವಾಗಿ ಇಬ್ಬರು ಮೃತರಾಗಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ವಿರೋಧಿಸಿ 89 ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ಸ್ಥಗಿತಗೊಳಿಸಲು ಮಂಡ್ಯ ಜಿಲ್ಲೆ ರೈತರು ತೀರ್ಮಾನಿಸಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ನವದೆಹಲಿಯ ಜಂತರ್- ಮಂತರ್ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದವು.

2007: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯ ಅಭಿವೃದ್ಧಿ ಸಲುವಾಗಿ ಬೆಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರವು `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿತು.

2007: ಭೂಮಿಯ ತಾಪ ಏರಿಕೆ ಹಾಗೂ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಒಮ್ಮತದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಬ್ಯಾಂಕಾಕಿನಲ್ಲಿ ನಡೆದ ವಿಶ್ವಸಂಸ್ಥೆ ಸಮ್ಮೇಳನ ನಿರ್ಧರಿಸಿತು. ವಿಶ್ವಸಂಸ್ಥೆಯು ಮುಂದಿಟ್ಟ ವರದಿಯನ್ನು 120ಕ್ಕೂ ಹೆಚ್ಚು ರಾಷ್ಟ್ರಗಳ 2000ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಒಪ್ಪಿಕೊಂಡರು.

2006: ದೇಶದ ಭರವಸೆಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ, ಬಿಜೆಪಿಯ ಸಂಘಟನಾ ಚತುರ ಮತ್ತು ಕಾರ್ಯತಂತ್ರ ನಿಪುಣ ಪ್ರಮೋದ ಮಹಾಜನ್ (56) ಅವರ ಅಂತ್ಯಕ್ರಿಯೆ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು.

2006: ಅಮೆರಿಕದಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2001 ಸೆಪ್ಟೆಂಬರ 11ರ ಭಯೋತ್ಪಾದನಾ ದಾಳಿಯ ಸಂಚುಕೋರ ಮೊರಾಕ್ಕೋ ಮೂಲದ ಅಲ್ಖೈದಾ ಸಂಘಟನೆಗೆ ಸೇರಿದ ಝಕ್ರಿಯಾಸ್ ಮೌಸಾವಿಗೆ ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಅಮೆರಿಕ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತನ್ನ 128ನೇ ಜನ್ಮದಿನವನ್ನು ಆಚರಿಸಿದರು. 1878ರಲ್ಲಿ ಜನಿಸಿದ ಈಕೆಗೆ 13 ಮಕ್ಕಳು, 60 ಮೊಮ್ಮಕ್ಕಳು. ಮಕ್ಕಳ ಪೈಕಿ ಬದುಕಿ ಉಳಿದವರು ಐವರು ಮಾತ್ರ.

2006: ಭಾರತದ ಗಗನಯಾನಿ ಕಲ್ಪನಾ ಚಾವ್ಲಾ ಅವರು ಗಗನಯಾನ ದುರಂತದಲ್ಲಿ ಮಡಿದ ಮೂರು ವರ್ಷಗಳ ಬಳಿಕ ಭಾರತೀಯ ಮೂಲದ ಇನ್ನೊಬ್ಬ ಅಮೆರಿಕನ್ ಮಹಿಳಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್)ಫ್ಲೈಟ್ ಎಂಜಿನಿಯರ್ ಆಗಿ ತನ್ನ ಚೊಚ್ಚಲ ಪಯಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಆದಾಯ ಮೂಲ ಮೀರಿದ ಆಸ್ತಿ, ಪಾಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಹಾಗೂ ಸಂಸತ್ ಸದಸ್ಯರಾಗಿರುವ ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ ಸೇರಿದ 6 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 24 ನಿವಾಸಗಳು ಹಾಗೂ ಇತರ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಚೌಟಾಲಾ ಮತ್ತು ಅವರ ಕುಟುಂಬಕ್ಕೆ ಸೇರಿದ 1467 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿದ್ದು, ಆದಾಯ ಮೂಲ ಮೀರಿದ ಆಸ್ತಿಪಾಸ್ತಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಪತ್ತೆಯಾದವು. ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಉತ್ತರಾಂಚಲ ಹಾಗೂ ಚಂಡೀಗಢದಲ್ಲಿರುವ ಚೌತಾಲಾ ಅವರ ನಿವಾಸ ಹಾಗೂ ತೋಟದ ಮನೆಗಳ ಮೇಲೆ ದಾಳಿ ನಡೆಯಿತು. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅವ್ಯವಹಾರದ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಸಿಬಿಐಗೆ ಅಕ್ರಮ ಆಸ್ತಿ ಕುರಿತು ಮಾಹಿತಿ ದೊರಕಿತ್ತು.

2006: ವೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ 1.50 ಕೋಟಿ ರೂಪಾಯಿ ಲಂಚವನ್ನು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರಿಗೆ ಪಾವತಿ ಮಾಡಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ ಡಿಟಿವಿ ವರದಿ ಮಾಡಿತು.

1935: ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಡಾ. ಸುಮತೀಂದ್ರ ನಾಡಿಗ್ ಅವರು ರಾಘವೇಂದ್ರರಾವ್- ಸುಬ್ಬಮ್ಮ ದಂಪತಿಯ ಮಗನಾಗಿ ಚಿಕ್ಕಮಗಳೂರು ಜ್ಲಿಲೆಯ ಕಳಸದಲ್ಲಿ ಈದಿನ ಜನಿಸಿದರು.

1913: ಭಾರತದ ಮೊತ್ತ ಮೊದಲ ಸಂಪೂರ್ಣ ದೇಸೀ ಚಲನಚಿತ್ರ `ರಾಜಾ ಹರಿಶ್ಚಂದ್ರ' ಮುಂಬೈಯ ಕೊರೊನೇಷನ್ ಸಿನಿಮಾದಲ್ಲಿ ಬಿಡುಗಡೆಯಾಯಿತು. ಭಾರತೀಯ ಚಿತ್ರೋದ್ಯಮದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ಈ ಚಿತ್ರವನ್ನು ನಿರ್ಮಿಸಿದವರು.

1854: ಭಾರತದ ಮೊತ್ತ ಮೊದಲ ಅಂಚೆಚೀಟಿಯನ್ನು ಕಲಕತಾದಲ್ಲಿ (ಇಂದಿನ ಕೊಲ್ಕತ್ತಾ) ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ `ಆಣೆ' ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಚಿತ್ರವನ್ನು ಮುದ್ರಿಸಲಾಗಿತ್ತು.

1799: ಮೈಸೂರಿನ ದೊರೆ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ಜೊತೆಗೆ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಅಸುನೀಗಿದರು. ಈ ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ನೇತೃತ್ವವನ್ನು ಲಾರ್ಡ್ ಮೋರಿಂಗ್ಟನ್ ವಹಿಸಿದ್ದ.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತನ್ನ `ಸೆಂಚುರೀಸ್' ಕೃತಿಯನ್ನು ಪ್ರಕಟಿಸಿದ. ಈ ಕೃತಿ 350 ಚೌಪದಿಗಳನ್ನು ಒಳಗೊಂಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಈ ಗ್ರಂಥದ ಎರಡನೇ ಆವೃತ್ತಿಯನ್ನು ನಾಸ್ಟ್ರಡಾಮಸ್ ಎರಡನೇ ಹೆನ್ರಿಗೆ ಅರ್ಪಿಸಿದ. ಹೆನ್ರಿಯ ಸಾವಿನ ಬಗ್ಗೆ ಈ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದ.

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement