Saturday, January 2, 2010

'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ


'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ

ಪುತ್ತೂರಿನ 'ಅಡಿಕೆ ಪತ್ರಿಕೆ' ಬಳಗದ ನಾ. ಕಾರಂತ ಪೆರಾಜೆ ಸುಂದರ ಬ್ಲೋಗ್ ಒಂದನ್ನು ಬರೆಯುತ್ತಿದ್ದಾರೆ. ಅವರ 'ಹಸಿರು ಮಾತು' ಡೊಡ್ಡ ಪತ್ರಿಕೆಗಳು ಮಾಡಬೇಕಾದ ಕೆ
ಲಸವನ್ನು ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದುಡಿಯುತ್ತಾ ಕೃಷಿ ಕ್ಷೇತ್ರದಲ್ಲಿ, ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಶ್ರೀಪಡ್ರೆಯಂತಹವರಿಗೆ ಪ್ರಶಸ್ತಿ ಬಂದ ವಿಚಾರ ಈ ಬ್ಲೋಗ್ ಮೂಲಕವೇ ನನಗೆ ಗೊತ್ತಾಯಿತು ಎನ್ನುವುದು ಹೆಮ್ಮೆಯ ವಿಚಾರ.

ಈ ಸುದ್ದಿ ಪ್ರಕಟಿಸಿದ ನಾ. ಕಾರಂತ ಪೆರಾಜೆ ಅವರಿಗೆ ವಂದನೆಗಳನ್ನೂ ಹಾಗೆಯೇ 'ವಿಲ್ ಗ್ರೋ' ಪ್ರಶಸ್ತಿ ಪಡೆದ 'ಶ್ರೀಪಡ್ರೆ' ಹಾಗೂ ಅವರಿಗೂ ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್ ಅವರಿಗೆ ಅಭಿನಂದನೆಗಳನ್ನೂ ಈ ಮೂಲಕ ವ್ಯಕ್ತ ಪಡಿಸಿತ್ತಿದ್ದೇನೆ.

-ನೆತ್ರಕೆರೆ ಉದಯಶಂಕರ

'ಹಸಿರು ಮಾತು' ವರದಿ ಇಲ್ಲಿದೆ ನೋಡಿ:

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.

ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ
ನುಡಿಚಿತ್ರ್ರ ಬರೆಯುತ್ತಾರೆ.

ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

(ಚಿತ್ರದಲ್ಲಿ - ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್)

ರಾಜ್ಯ ಸರಕಾರವು ಕಳೆದ ಮೂರು ವರುಷಗಳ 'ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪ್ರಶಸ್ತಿ'ಗಳನ್ನು ಪ್ರಕಟಿಸಿದೆ. ಪ್ರಶಸ್ತಿಯು ತಲಾ ಐವತ್ತು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯ ಸಂಪಾದಕ ಈಶ್ವರ ದೈತೋಟ (2007), ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೆಶಕ ಸಿ.ಯು.ಬೆಳ್ಳಕ್ಕಿ (2008), ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು (2009).

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಸಹಜ ಸಮೃದ್ಧದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್ (2007), ಹಿರಿಯ ಪತ್ರಕರ್ತ ಟಿ.ಆರ್. ಅನಂತರಾಮ (2008), ವಿಜಯಕರ್ನಾಟಕದ ಮುಖ್ಯ ಉಪಸಂಪಾದಕ ರಾಧಾಕೃಷ್ಣ ಎಸ್.ಭಡ್ತಿ (2009)

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷರಾಗಿದ್ದ ಆಯ್ಕೆ ಸಮಿತಿಯಲ್ಲಿ - ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಡಾ.ಎಚ್.ಆರ್.ಕೃಷ್ಣಮೂರ್ತಿ, ದು.ಗು.ಲಕ್ಷ್ಮಣ - ಸದಸ್ಯರು.

ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು.

No comments:

Advertisement