Monday, January 4, 2010

ಇಂದಿನ ಇತಿಹಾಸ History Today ಡಿಸೆಂಬರ್ 07

ಇಂದಿನ ಇತಿಹಾಸ

ಡಿಸೆಂಬರ್  0 7
2014:  ಬೆಂಗಳೂರು: ಪ್ರತಿಕೂಲ ಹವಾಮಾನದ ಕಾರಣ ಎರಡು ಬಾರಿ ಮುಂದೂಡಿಕೆಯಾಗಿದ್ದ ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-16ನ್ನು ಏರಿಯನ್ 5 ರಾಕೆಟ್ ಮೂಲಕ ಈದಿನ ನಸುಕಿನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ವಿಜ್ಞಾನಿಗಳು ಇನ್ನೊಂದು ವಿಕ್ರಮ ಸಾಧಿಸಿದರು. ಫ್ರೆಂಚ್ ಗಯಾನಾದ ಕೌರು ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮೂಲಕ ಈ ಕಾರ್ಯಾಚರಣೆಯನ್ನು ಸುಸೂತ್ರವಾಗಿ ನೆರವೇರಿಸಲಾಯಿತು. ನಸುಕಿನ ವೇಳೆ ಭಾರತೀಯ ಕಾಲಮಾನ 2.10 ಗಂಟೆಗೆ ಜಿಸ್ಯಾಟ್-16 ಉಪಗ್ರಹವನ್ನು ಹೊತ್ತ ಐರೋಪ್ಯ ರಾಕೆಟ್​ನ್ನು ಉಡಾವಣೆ ಮಾಡಲಾಯಿತು. ಯಾವುದೇ ತೊಡಕುರಹಿತ ಪಯಣದ ಮೂಲಕ ಅದನ್ನು ಬಾಹ್ಯಾಕಾಶದಲ್ಲಿ ನಿಗದಿತ ಕಕ್ಷೆಗೆ ಸೇರಿಸಲಾಯಿತು. ಈ ಉಪಗ್ರಹವು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿತು. ಜಿಸ್ಯಾಟ್-16 ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಕೂರಿಸಲಾಗಿದೆ. ಏರಿಯನ್ ರಾಕೆಟ್​ನಲ್ಲಿ ಎಸ್​ಎಸ್​ಎಲ್ (ಸ್ಪೇಸ್ ಸಿಸ್ಟಮ್ಸ್/ಲೋರಲ್) ನಿರ್ಮಿಸಿದ ಡೈರೆಕ್ಟ್​ವಿ-14 ಉಪಗ್ರಹ ಕೂಡಾ ಪಯಣಿಸಿತು. ಈ ಉಪಗ್ರಹವು ಅಮೆರಿಕದಾದ್ಯಂತ ಮನೆ ಮನೆಗೆ ಟೆಲಿವಿಷನ್ ಸವಲತ್ತು ಕಲ್ಪಿಸುವ ಡೈರೆಕ್ಟ್​ವಿ-14ಕ್ಕೆ ಅನುಕೂಲ ಕಲ್ಪಿಸುವುದು. ಏರಿಯನ್ ರಾಕೆಟ್​ನ 63ನೇ ಯಶಸ್ವೀ ಉಡಾವಣಾ ಯೋಜನೆಯಿದು. 'ಏರಿಯನ್ 5 ಡೈರೆಕ್ಟ್​ವಿ-14 ಮತ್ತು ಜಿಸ್ಯಾಟ್-16 ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವ ಇತ್ತೀಚಿನ ಯೋಜನೆಯಲ್ಲಿ ಯಶಸ್ವಿಯಾಗಿದೆ' ಎಂದು ಏರಿಯನ್ ಸ್ಪೇಸ್ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿತು. 3,181 ಕಿ.ಗ್ರಾಂ. ತೂಕದ ಜಿಸ್ಯಾಟ್-16 ಒಟ್ಟು 48 ಸಂಪರ್ಕ ಟ್ರಾನ್ಸ್​ಪಾಂಡರ್​ಗಳನ್ನು ಒಯ್ದಿದ್ದು ಇದು ಈವರೆಗೆ ಇಸ್ರೋ ಅಭಿವೃದ್ಧಿ ಪಡಿಸಿದ ಅತಿದೊಡ್ಡ ಸಂಪರ್ಕ ಉಪಗ್ರಹವಾಗಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ ಎಂದು ಉಡಾವಣೆಯಾದ ಸ್ವಲ್ಪ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೆಂಗಳೂರು ಕೇಂದ್ರ ಕಚೇರಿ ತಿಳಿಸಿತು.. ಕರ್ನಾಟಕದ ಹಾಸನದಲ್ಲಿ ಇರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಜಿಸ್ಯಾಟ್-16ರ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಇಸ್ರೋ ತಿಳಿಸಿತು.

2014: ಚೆನ್ನೈ: 50ಸಾವಿರ ಸ್ವಯಂ ಸೇವಕರು ಭಾರತ ಧ್ವಜವನ್ನು ಮಾನವ ಸರಪಳಿ ಮೂಲಕ ನಿರ್ವಿುಸುವ ಮೂಲಕ ನೂತನ ವಿಶ್ವದಾಖಲೆ ಬರೆದರು. ಹಿಂದೆ ಪಾಕಿಸ್ತಾನದಲ್ಲಿ ಅತಿ ದೊಡ್ಡ ಮಾನವ ಧ್ವಜ ನಿರ್ವಿುಸಿ ದಾಖಲೆ ನಿರ್ವಿುಸಲಾಗಿತ್ತು. ಚೆನ್ನೈನ ವೈಎಂಸಿಎ ಕ್ರೀಡಾಂಗಣದಲ್ಲಿ 50ಸಾವಿರ ಜನರು ತ್ರಿವರ್ಣದ ಬಟ್ಟೆ ಧರಿಸಿ ಭಾರತದ ಧ್ವಜವನ್ನು ನಿರ್ವಿುಸಿದರು. ಪಾಕಿಸ್ತಾನದ ಲಾಹೋರ್​ನಲ್ಲಿ ಈ ಹಿಂದೆ 28,957 ಜನರು ಪಾಕಿಸ್ತಾನ ಧ್ವಜವನ್ನು ನಿರ್ವಿುಸಿ ದಾಖಲೆ ಬರೆದಿದ್ದರು. ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2014: ಬೆಳಗಾವಿ: ಕರ್ನಾಟಕದ ಬೆಳಗಾವಿಯಿಂದ ಸುಮಾರು 100 ಕಿ.ಮೀ. ದೂರದ ರಾಯಭಾಗ ತಾಲೂಕಿನ ಮಾಕಳಿ ಗ್ರಾಮದಲ್ಲಿ ಟಂ ಟಂ ಒಂದು ಬಾವಿಗೆ ಬಿದ್ದ ಪರಿಣಾಮವಾಗಿ 5 ವರ್ಷದ ಒಬ್ಬ ಬಾಲಕಿ ಮೃತಳಾಗಿ ಇತರ 6 ಮಂದಿ ಗಾಯಗೊಂಡ ಘಟನೆ ಘಟಿಸಿತು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿತು. ನತದೃಷ್ಟ ಟಂಟಂ ವಾಹನದಲ್ಲಿ ಇದ್ದ ಪ್ರಯಾಣಿಕರು ಸವದತ್ತಿ ಯಲ್ಲಮ್ಮ ಜಾತ್ರೆ ಮುಗಿಸಿಕೊಂಡು ತಮ್ಮ ಊರಾದ ಮಾವಿನಹೊಂಡಕ್ಕೆ ವಾಪಸ್ ಹೊರಟಿದ್ದರು. ಮಾಕಳಿ ಗ್ರಾಮದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿತ್ತು ಎಂದು ಹೇಳಲಾಯಿತು. ಸುದ್ದಿ ತಿಳಿದ ತತ್​ಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನವನ್ನು ಬಾವಿಯಿಂದ ಮೇಲೆತ್ತಿದರು. ಆದರೆ ಅಷ್ಟರಲ್ಲಾಗಲೇ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಗಾಯಾಳುಗಳೆಲ್ಲರನ್ನೂ ಹಾರೋಗೇರಿ ಆಸ್ಪತ್ರೆಗೆ ದಾಖಲಿಸಲಾಯಿತು.
.
2014: ನವದೆಹಲಿ: ವಿಶ್ವಸಂಸ್ಥೆಯು ಶೀಘ್ರದಲ್ಲೇ ಜೂನ್ 21ನೇ ದಿನಾಂಕವನ್ನು ವಿಶ್ವ ಯೋಗ ದಿನ ಎಂಬುದಾಗಿ ಘೋಷಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ನವದೆಹಲಿಯಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪವನ್ನು ಅನುಸರಿಸಿ ವಿಶ್ವಸಂಸ್ಥೆ ಈ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಮೂರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗವನ್ನು 'ವಿಶ್ವ ಯೋಗ ದಿನ'ವಾಗಿ ಆಚರಿಸಬೇಕು ಎಂದು ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದರು.
2014: ಬೆಳಗಾವಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೈದಿಯೊಬ್ಬ ಬೆಳಗಾವಿಯ ಹಿಂಡಲಗಾ ಸೆರೆಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಿಸಿತು. 'ನಂಜಪ್ಪ ಶಿವನಂಜಪ್ಪ ಎಂಬ ಕೈದಿಗೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆತ ಹಿಂದಿನ ರಾತ್ರಿ ಹಿಂಡಲಗಾ ಕೇಂದ್ರೀಯ ಸೆರೆಮನೆಯ 7ನೇ ನಂಬರ್ ಬ್ಯಾರಕ್ ಬಳಿ ಶೌಚಾಲಯದಲ್ಲಿ ಸ್ವತಃ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಎಸ್. ರವಿ ತಿಳಿಸಿದರು.

2014: ಲೆಗಾಝ್ಪಿ, ಫಿಲಿಪ್ಪೈನ್ಸ್: ಹಗುಪಿಟ್ ಚಂಡಮಾರುತವು ಈದಿನ ವೇಳೆಗೆ ದುರ್ಬಲಗೊಂಡಿದ್ದು, ಅದಕ್ಕೆ ಮುನ್ನ ಫಿಲಿಪ್ಪೈನ್ಸ್​ನ ಕರಾವಳಿ ಪ್ರಾಂತಗಳಲ್ಲಿ ಸಹಸ್ರಾರು ಮರಗಳನ್ನು ಉರುಳಿಸಿದ್ದಲ್ಲದೆ, 6,50,000 ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿತು. ಜೊತೆಗೆ ಇಡೀ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಿತು.. ಏನಿದ್ದರೂ ಈದಿನದ ಹೊತ್ತಿಗೆ ಚಂಡಮಾರುತ ದುರ್ಬಲಗೊಂಡು ಸಾಗಿದ್ದರಿಂದ ಫಿಲಿಪ್ಪೈನ್ ಕಳೆದ ವರ್ಷದ ಕರಾಳ ದುರಂತ ಪರಿಸ್ಥಿತಿಯ ಪುನರಾವರ್ತನೆಯ ಭೀತಿಯಿಂದ ಪಾರಾಯಿತು. ಹಾನಿಗೊಂಡಿರುವ ಗುಡಿಸಲು, ಅಬ್ಬರ ರಹಿತ ಪ್ರವಾಹದ ನೀರು, ಹಾರಿಹೋಗಿರುವ ಟಿನ್ ಛಾವಣಿಗಳು ಇಡೀ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಂಡು ಬಂದವು. ಆದರೆ, ಹಗುಪಿಟ್ ಚಂಡಮಾರುತ ಅಪ್ಪಳಿಸಿದ ಪೂರ್ವ ಸಮರ್ ಮತ್ತು ಇತರ ದ್ವೀಪಪ್ರಾಂತ್ಯಗಳಲ್ಲಿ ಸಾವು ನೋವು ಹಾಗೂ ಭಾರಿ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿ ಬರಲಿಲ್ಲ. ಗರಿಷ್ಠ ಗಂಟೆಗೆ 140 ಕಿ.ಮೀ. (87ಮೈಲು) ವೇಗದಲ್ಲಿ ಗಾಳಿ ಬೀಸಿತು. ಇದು ಚಂಡಮಾರುತದ ಗರಿಷ್ಠ ವೇಗಕ್ಕಿಂತ ತುಂಬಾ ಕಡಿಮೆ ಎಂದು ಹೇಳಲಾಯಿತು.
2014: ಕೋಲ್ಕತ: ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಭಾರತೀಯ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದುದಕ್ಕಾಗಿ 56 ಮಂದಿ ಮೀನುಗಾರರ ಜೊತೆಗೆ ಎರಡು ಬಾಂಗ್ಲಾದೇಶೀ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಕೋಲ್ಕತದಲ್ಲಿ ತಿಳಿಸಿದರು. 'ಅಲ್ಹಾರ್ ಮಲಿಕ್-2' ಮತ್ತು 'ಅನೊವರ' ದೋಣಿಗಳನ್ನು ಭಾರತದ ಕರಾವಳಿ ಕಾವಲುಪಡೆಯ ನೌಕೆ ಸುಚೇತಾ ಕೃಪಲಾನಿ ವಶಕ್ಕೆ ತೆಗೆದುಕೊಂಡಿತು. ಉಭಯ ದೋಣಿಗಳಲ್ಲಿ ಇದ್ದ ತಲಾ 28 ಮಂದಿ ಮೀನುಗಾರರನ್ನೂ ಸಾಗರ ದ್ವೀಪದಿಂದ ಆಗ್ನೇಯಕ್ಕೆ 63 ನಾಟಿಕಲ್ ಮೈಲು ದೂರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದರು. ತಲಾ 1200 ಕಿ.ಗ್ರಾಂ. ಮತ್ತು 1000 ಕಿ.ಗ್ರಾಂ. ಮೀನು ಇದ್ದ ದೋಣಿಗಳನ್ನು ಫಿರೋಜ್​ಗಂಜ್ ಮರೀನ್ ಪೊಲೀಸರ ವಶಕ್ಕೆ ಮುಂದಿನ ಕ್ರಮಕ್ಕಾಗಿ ನೀಡಲಾಯಿತು.. 'ಮೀನುಗಾರರು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಬಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ದೋಣಿಗಳು ಡಿಸೆಂಬರ್ 4ರಂದು ಅಲ್ಲಿಂದ ಹೊರಟಿದ್ದವು. ಒಂದು ವಾರದಲ್ಲಿ ಅವು ವಾಪಸಾಗುವ ನಿರೀಕ್ಷೆ ಇತ್ತು' ಎಂದು ಕರಾವಳಿ ಕಾವಲು ಪಡೆಯ ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್ ಡಿ.ಆರ್. ಶರ್ಮಾ ನುಡಿದರು. ಅಕ್ರಮ ಮೀನುಗಾರಿಕೆಗಾಗಿ ಅಕ್ಟೋಬರ್​ನಿಂದ ಒಟ್ಟು 106 ಬಾಂಗ್ಲಾದೇಶಿ ಮೀನುಗಾರರನ್ನು ಬಂಧಿಸಿತ್ತು.

2014: ರಾಂಚಿ: ಕಾಶ್ಮೀರದಲ್ಲಿ ಉಗ್ರಗಾಮಿಗಳು ಮೆರೆದ ಅಟ್ಟಹಾಸದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಂಪೂರ್ಣ ಸೇನಾ ಗೌರವದೊಂದಿಗೆ ಈದಿನ ರಾಂಚಿಯಲ್ಲಿ ನೆರವೇರಿಸಲಾಯಿತು. ರಾಜ್ಯದ ಹಲವಾರು ಸ್ಥಳಗಳಿಂದ ದೊಡ್ಡ ಪ್ರಮಾಣದಲ್ಲಿ ಆಗಮಿಸಿದ ಜನರ ಸಮೂಹ ಹುತಾತ್ಮ ಯೋಧನಿಗೆ ಹೂವಿನ ಮಳೆಗರೆಯಿತು. ನೂರಾರು ಮಂದಿ ಬೈಕ್ ಸವಾರರು ಪಾರ್ಥಿವ ಶರೀರವನ್ನು ಹಿಂಬಾಲಿಸಿದರು. ರಾಜ್ಯಪಾಲ ಸೈಯದ್ ಅಹಮದ್, ಮುಖ್ಯಮಂತ್ರಿ ಹೇಮಂತ ಸೊರೇನ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜಯಂತ ಸಿನ್ಹ, ಸೇನೆ ಹಾಗೂ ಪೊಲೀಸ್ ಇಲಾಖೆಯ ಹಲವಾರು ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
2014: ದುಬೈ: ಪಾಕಿಸ್ತಾನದ ಬೌಲರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿ ನಿಯಮಬಾಹಿರವಾಗಿರುವುದನ್ನು ಖಚಿತಗೊಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತತ್ ಕ್ಷಣದಿಂದಲೇ ಅವರನ್ನು ಅಮಾನತು ಮಾಡಿತು. ಪರಿಣಾಮ ಐಸಿಸಿ ಅಮಾನತು ತೆರವು ಮಾಡುವ ತನಕ ಹಫೀಜ್ ಐಸಿಸಿ ಮಾನ್ಯತೆಯ ಯಾವುದೇ ಪಂದ್ಯಗಳಲ್ಲಿ ಬೌಲಿಂಗ್ ಮಾಡುವಂತಿಲ್ಲ. ಒಂದೊಮ್ಮೆ ಬೌಲಿಂಗ್ ಮಾಡಬೇಕೆಂದರೂ ಬೌಲಿಂಗ್ ಶೈಲಿಯನ್ನು ತಿದ್ದಿಕೊಂಡು ಐಸಿಸಿಯಿಂದ ಗ್ರೀನ್​ಸಿಗ್ನಲ್ ಪಡೆದುಕೊಳ್ಳಬೇಕು. ಅಮಾನತು ಕ್ರಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಐಸಿಸಿ ಪ್ರಕಟಿಸಿತು. ಬೌಲಿಂಗ್ ಶೈಲಿ ಅನುಮಾನಾಸ್ಪದ ವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಐಸಿಸಿ ಹಫೀಜ್ ಬೌಲಿಂಗ್ ಶೈಲಿಯನ್ನು ಪರೀಕ್ಷೆಗೊಳಪಡಿಸಿದಾಗ ನಿಯಮಬಾಹಿರವಾಗಿರುವುದು ಸಾಬೀತಾಗಿತ್ತು. ಕಳೆದ ತಿಂಗಳು ಅಬುಧಾಬಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಹಫೀಜ್ ಬೌಲಿಂಗ್ ಶೈಲಿಯ ಬಗ್ಗೆ ದೂರು ನೀಡಲಾಗಿತ್ತು. ಬಳಿಕ ನಂ.24ರಂದು ಇಂಗ್ಲೆಂಡ್​ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಪರ್ಫಾರ್ಮೆನ್ಸ್ ಸೆಂಟರ್​ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.

2014: ಚೆನ್ನೈ: ದೇಹದಲ್ಲಿರುವ ವಿವಿಧ ರೋಗಗಳ ಪತ್ತೆಗೆ ಸಾಮಾನ್ಯವಾಗಿ ವಿವಿಧ ರೀತಿಯ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಆದರೆ, ನಾಲಗೆಯಿಂದ ದೇಹದ ಕಾಯಿಲೆಗಳನ್ನು ಗುರುತಿಸುವ ವಿನೂತನ ಪದ್ಧತಿಯೊಂದನ್ನು ಚೆನ್ನೈಯ ಎಂಜಿನಿಯರಿಂಗ್ ಕಾಲೇಜೊಂದರ ಸಹಾಯದಿಂದ ನ್ಯೂರಲ್ ನೆಟ್ವರ್ಕ್ ವ್ಯವಸ್ಥೆಯನ್ನ ರೂಪಿಸಲಾಗಿದ್ದು, ನಾಲಗೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ವ್ಯಕ್ತಿಯ ಕೆಲ ರೋಗಗಳನ್ನು ಪತ್ತೆ ಹಚ್ಚಬಹುದು. ವ್ಯಕ್ತಿಯ ನಾಲಗೆಯಲ್ಲಿರುವ ವಿವಿಧ ರೀತಿಯ ವ್ಯತ್ಯಾಸಗಳು ವಿವಿಧ ರೋಗಗಳಿಗೆ ಸೂಚಕವಾಗಿರುತ್ತವೆ. ಉದಾಹರಣೆಗೆ, ನಾಲಗೆಯ ಬಣ್ಣದಲ್ಲಿ ಬದಲಾವಣೆ, ನಾಲಗೆ ತೀರಾ ಮೃದುವಾಗಿರುವುದು, ಬೊಬ್ಬೆಯಾಗಿರುವುದು ಇತ್ಯಾದಿ ಸಂಗತಿಗಳು ವಿವಿಧ ರೋಗಗಳನ್ನು ಸೂಚಿಸುತ್ತವೆ. ನಾಲಗೆಯ ಡಿಜಿಟಲ್ ಫೋಟೋದ ಸಹಾಯದಿಂದ ಹಾಗೂ ರೋಗಿಯ ರೋಗಲಕ್ಷಣಗಳ ಸುಳಿವಿಂದ ತಜ್ಞರು ರೋಗವನ್ನು ಪತ್ತೆಹಚ್ಚಬಹುದು. ಕಣ್ಣಿನಲ್ಲಿನ ವ್ಯತ್ಯಾಸಗಳ ಮೂಲಕವೂ ಒಂದಷ್ಟು ರೋಗವನ್ನು ಪತ್ತೆ ಮಾಡಬಹುದು. ಈ ವ್ಯವಸ್ಥೆಯಿಂದ ಸದ್ಯಕ್ಕೆ 14ಕ್ಕೂ ಹೆಚ್ಚು ರೋಗಗಳನ್ನು ಗುರುತಿಸಬಹುದು.

2014: ನವದೆಹಲಿ: ಕಪ್ಪು ಹಣ ಕುರಿತು ಪ್ರಬಲ ಸಾಕ್ಷಿ ಇರದ ಹೊರತು ಮಾಹಿತಿ ಕೇಳಿಕೊಂಡು ಬರಬೇಡಿ ಎಂದು ಸ್ವಿಟ್ಜರ್ಲೆಂಡ್ ಭಾರತಕ್ಕೆ ಹೇಳಿತು.. ಕಪ್ಪುಹಣ ಕುರಿತಂತೆ ಎಲ್ಲ ಭಾರತೀಯರ ಮಾಹಿತಿ ನೀಡುವಂತೆ ಭಾರತದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ಉಲ್ಟಾ ಹೊಡೆದ ಸ್ವಿಟ್ಜರ್ಲೆಂಡ್ ಸರ್ಕಾರ ಆದಾಯ ತೆರಿಗೆ ಅಕ್ರಮದಲ್ಲಿ ಖಾತೆದಾರ ಪಾಲ್ಗೊಂಡಿರುವ ಕುರಿತು ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಭಾರತಕ್ಕೆ ಮಾಹಿತಿ ನೀಡುತ್ತೇವೆ. ಇಲ್ಲವಾದರೆ ಈ ಬಗ್ಗೆ ಮಾತನಾಡಲು ಬರಬೇಡಿ ಎಂದು ಹೇಳಿತು. ಸ್ವಿಸ್ ಸರ್ಕಾರ ರಾಯಭಾರಿ ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಅವರು, ಗತಕಾಲದ ವಿಚಾರಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನಾವು ನೀಡಿದ ಭರವಸೆಯಂತೆ ಸಾಕ್ಷ್ಯಾಧಾರಗಳನ್ನು ನೀಡಿದರೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು. ಅಂತೆಯೇ ಈ ಹಿಂದೆ ಸ್ವಿಸ್‌ನಲ್ಲಿ ಖಾತೆ ತೆರೆದಿರುವ ಎಲ್ಲ ಖಾತೆದಾರರೂ ತೆರಿಗೆ ವಂಚಕರು ಎಂದು ಹೇಳಲು ಸಾಧ್ಯವಿಲ್ಲ. ಖಾತೆದಾರರ ಖಾತೆಯ ವಿವರಗಳನ್ನು ಗೌಪ್ಯವಾಗಿಡುವುದು ನಮ್ಮ ಕರ್ತವ್ಯ. ಹೀಗಾಗಿಯೇ ನಾವು ಪ್ರಬಲ ಸಾಕ್ಷ್ಯ ನೀಡದ ಹೊರತು ಖಾತೆ ವಿವರಗಳನ್ನು ನೀಡುವುದಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ನೇರವಾಗಿ ಹೇಳಿದರು. ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಅಭಿನಂದಿಸುತ್ತೇವೆ. ಭಾರತ ಸರ್ಕಾರದೊಂದಿಗೆ ನಾವು ಅತ್ಯುತ್ತಮವಾದ ಸಂಪರ್ಕ ಹೊಂದಿದ್ದೇವೆ. ಅಂತೆಯೇ ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಭಾರತ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಗತಕಾಲದ ವಿಚಾರಗಳನ್ನು ನಾವು ಮತ್ತೆ ಪುನರ್ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಹೇಳಿದರು.


2008: ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಕುಸಿಯಲ್ಪಟ್ಟ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಹಲವು 'ಪರಿಹಾರ ಪ್ಯಾಕೇಜ್'ಗಳನ್ನು ಪ್ರಕಟಿಸಿತು. ಮುಖ್ಯವಾಗಿ ಬೇಡಿಕೆ ಹೆಚ್ಚಿಸಲು ಸಂಬಂಧಪಟ್ಟ ಎಲ್ಲ ವಾಣಿಜ್ಯ ರಂಗಗಳಲ್ಲೂ ತೆರಿಗೆ ಕಡಿತ, ರಫ್ತು, ಗೃಹ ನಿರ್ಮಾಣ, ಜವಳಿ ಹಾಗೂ ಮೂಲಭೂತ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹಧನ ಮಂಜೂರು ಇತ್ಯಾದಿ ಇವುಗಳಲ್ಲಿ ಸೇರಿವೆ.

2008: ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟಾಜ್ಞೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವುದಾಗಿ ಪ್ರಕಟಿಸಿದರು. ಕೃಷ್ಣಾ ನದಿಯಿಂದ ವಿಜಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ವಿಜಾಪುರ ತಾಲ್ಲೂಕು ತಿಕೋಟಾದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. 'ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ದೇಶದ ಮೊದಲ ಯೋಜನೆಯ ಅನುಷ್ಠಾನಕ್ಕೆ ನಮ್ಮ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸಾಧ್ಯವಿರುವೆಡೆ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸುತ್ತೇವೆ. ಕಡಿಮೆ ಖರ್ಚಿನ ಈ ಯೋಜನೆಯಿಂದ ಹೆಚ್ಚು ಪ್ರದೇಶಕ್ಕೆ ನೀರಾವರಿಯಾಗಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮೀನುಗಾರಿಕೆಯಿಂದ ಒಂದು ಕೆರೆಯಿಂದ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯವೂ ಬರುತ್ತದೆ' ಎಂದರು.

2008: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಶಸ್ತ್ರಸಜ್ಜಿತ ನಕ್ಸಲರ ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅಕ್ಷರಪಾಲು ಎಂಬಲ್ಲಿ ಸಂಭವಿಸಿತು. ಮೃತ ವ್ಯಕ್ತಿಯನ್ನು ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಕೃಷಿಕ ಕೇಶವ ಯಡಿಯಾಳ (63) ಎಂದು ಗುರುತಿಸಲಾಯಿತು. ಸಂಜೆ ಸುಮಾರು 6.30ರಿಂದ 7ರ ಮಧ್ಯೆ ಕೇಶವ ಅವರನ್ನು ಮನೆಯಿಂದ ಹೊರಕ್ಕೆ ಎಳೆದು ತಂದ ನಕ್ಸಲ್ ತಂಡ, ಮನೆಯ ಎದುರಿನ ಮರವೊಂದಕ್ಕೆ ಕಟ್ಟಿಹಾಕಿ ಈ ದುಷ್ಕೃತ್ಯ ಎಸಗಿತು. ತಡೆಯಲು ಬಂದ ಅವರ ಪತ್ನಿ ಕಾಂತಿಮತಿ ಮಗ ಉಪೇಂದ್ರ ಅವರ ಮೇಲೂ ನಕ್ಸಲರು ಹಲ್ಲೆ ನಡೆಸಿ ಗಾಯಗೊಳಿಸಿದರು. ನಂತರ ಕೇಶವ ಅವರ ಜೀಪಿಗೆ ಕಿಚ್ಚಿಟ್ಟ ನಕ್ಸಲರು, ಪರಿಸರದಲ್ಲಿ ಕರಪತ್ರಗಳನ್ನು ಎಸೆದು ಪರಾರಿಯಾದರು.

2008: ಒಂದು ತಿಂಗಳಿನಿಂದ ಕಚೇರಿಗೆ ಗೈರು ಹಾಜರಾಗಿದ್ದ ಹರಿಯಾಣದ ಉಪಮುಖ್ಯಮಂತ್ರಿ ಚಂದರ್ ಮೋಹನ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಮುಸಲ್ಮಾನ ಧರ್ಮಕ್ಕೆ ಮತಾಂತರ ಹೊಂದಿ ತಾವು ಎರಡನೇ ಮದುವೆಯಾಗಿರುವುದಾಗಿ ಚಂದರ್ ಮೋಹನ್ ಹಿಂದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲಿ ಅವರನ್ನು ಸಂಪುಟದಿಂದ ತೆಗೆದುಹಾಕಲಾಯಿತು. 50 ದಿನಗಳಿಂದ ಅವರು ಸಂಪುಟ ಸಭೆಗೆ ಹಾಜರಾಗಿರಲಿಲ್ಲ.

2008: ಕಾಲ್‌ಸೆಂಟರ್ ಉದ್ಯೋಗಿಗಳು ಸೇರಿದಂತೆ ಬದಲಾಗುವ ಪಾಳಿಗಳಲ್ಲಿ ಕೆಲಸ ಮಾಡುವವರು ಮಧುಮೇಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು. ವ್ಯಕ್ತಿಯೊಬ್ಬನ ಸಕ್ಕರೆಯ ಮಟ್ಟ ಆತನ ದೇಹದ ಗತಿ ಹಾಗೂ ನಿದ್ರಾ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬುದನ್ನು ನೂತನ ಸಂಶೋಧನೆಯೊಂದು ಪತ್ತೆ ಹಚ್ಚಿತು. ಮಧುಮೇಹ ಹಾಗೂ ರಕ್ತ ಸಕ್ಕರೆಯ ಮಟ್ಟವನ್ನು ನಿದ್ರಾ ಸಮಸ್ಯೆಗೆ ಪರಿಹಾರ ಹುಡುಕುವ ಮೂಲಕ ಸ್ವಲ್ಪ ಮಟ್ಟಿಗೆ ಬಗೆಹರಿಸಲು ಸಾಧ್ಯ ಎಂಬುದು ಇದರಿಂದ ತಿಳಿದು ಬಂದಿತು. 'ಪಾಳಿಗಳಲ್ಲಿ ದುಡಿಯುವ ಮಂದಿ ಬಹುಬೇಗನೇ ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಗುರಿಯಾಗುವುದಕ್ಕೆ ಒತ್ತಡ ಕಾರಣ ಎಂದು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಇದಕ್ಕೆ ಬದಲಾಗುವ ದೇಹದ ಗತಿ ಕಾರಣವಾಗಿರುವ ಸಾಧ್ಯತೆ ಅಧಿಕ' ಎಂದು ಸಂಶೋಧಕರಲ್ಲಿ ಒಬ್ಬರಾದ ಫಿಲಿಪ್ ಫ್ರೋಗ್ಯುಯೆಲ್ ಸುದ್ದಿಸಂಸ್ಥೆಗೆ ನೀಡಿರುವ ಇ- ಮೇಲ್ ಸಂದರ್ಶನದಲ್ಲಿ ಎಚ್ಚರಿಸಿದರು.

2007: ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ. `ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು, ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ರಕ್ಷಿಸಬೇಕು ಎಂಬ ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಸಂಕೇತವಾಗಿ ಈ ಚಿತ್ರ ನಿಲ್ಲುತ್ತದೆ. ಹನ್ನೊಂದು ವರ್ಷ ಇಂಗ್ಲೆಂಡಿನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಏಳು ವರ್ಷಗಳಿಂದ ಹವ್ಯಾಸಿ ಚಲನಚಿತ್ರ ನಿರ್ಮಾಪಕಿಯಾಗಿರುವ ಜಯಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ ಕೂಡ ಆಗಿದ್ದಾರೆ.

2007: ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಕಸಿ ಮಾಡಲಾಯಿತು. `ಲ್ಯಾಪ್ರೊಸ್ಕೋಪಿ' ಎಂದರೆ ಶರೀರದಲ್ಲಿ ಚಿಕ್ಕ ರಂಧ್ರ ಕೊರೆದು, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ. ಅರ್ಧ ಇಂಚೂ ಇಲ್ಲದ ಚಿಕ್ಕ ಉಪಕರಣವನ್ನು ರಂಧ್ರದ ಮೂಲಕ ಹಾಯಿಸಿ, ರಕ್ತನಾಳಗಳನ್ನು ಬಿಡಿಸಿ ಕಿಡ್ನಿಯನ್ನು ತೆಗೆಯಲಾಗುತ್ತದೆ. ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಟಿ.ಮನೋಹರ್ ಅವರು ಈ ವಿಧಾನವನ್ನು ಬಳಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಈದಿನ ಪ್ರಕಟಿಸಿತು. ಸಾಮಾನ್ಯವಾಗಿ, ತೆರೆದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ತೆಗೆದು ಅವಶ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ಕ್ಲಿಷ್ಟಕರವಾದ ಕಾರಣ ಕಿಡ್ನಿ ದಾನಕ್ಕೆ ಹೆಚ್ಚಿನವರು ಹಿಂದೇಟು ಹಾಕುತ್ತಿದ್ದರು. ಈಗ ಈ ಹೊಸ ವಿಧಾನ ಮೂತ್ರಪಿಂಡ ರೋಗಿಗಳಿಗೆ ಆಶಾಕಿರಣವಾಗಿದ್ದು, ರಾಜ್ಯದ ಮಟ್ಟಿಗೆ ಇದು ಅಪರೂಪದ ಸಾಧನೆ ಎಂದು ಎನ್ನಲಾಗಿದೆ. ಈ ವಿಧಾನದಲ್ಲಿ ಉದರದ ಭಿತ್ತಿಯ ಮೂಲಕ ಪುಟ್ಟ ನಳಿಕೆಯನ್ನು ಹಾಯಿಸಲಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಚಲನೆಗೆ ಅನುಕೂಲವಾಗುತ್ತದೆ. ಲ್ಯಾಪ್ರೊಸ್ಕೋಪ್ ಜತೆಗೆ ಹೊಂದಿಕೊಂಡಿರುವ ವಿಡಿಯೋ ಕ್ಯಾಮೆರಾದ ಮೂಲಕ ಉದರದೊಳಗೆ ನಡೆಯುವ ಚಟುವಟಿಕೆಗಳನ್ನು ಪರದೆಯಲ್ಲಿ ವೀಕ್ಷಿಸಬಹುದು. ಹೊಟ್ಟೆಯ ಇನ್ನೊಂದು ಬದಿ ಮಾಡಲಾಗಿರುವ ಎರಡೂವರೆ ಇಂಚಿನ ತೂತಿನ ಮೂಲಕ ಕಿಡ್ನಿಯನ್ನು ತೆಗೆಯಲಾಗುತ್ತದೆ. ಈ ವಿಧಾನದಲ್ಲಿ ಕಿಡ್ನಿಯ ದಾನಿ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಸಾಕು. ಒಂದೆರಡು ವಾರಗಳಲ್ಲಿಯೇ ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದು ಆಸ್ಪತ್ರೆಯ ವಿವರಣೆ.

2007: ಕಂಪ್ಯೂಟರ್ ಕಲಿಕೆಗೆ, ಕಾರ್ಯನಿರ್ವಹಣೆಗೆ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ, ಇಂಗ್ಲಿಷ್ ಗಂಧಗಾಳಿಯಿಲ್ಲದ ಭಾರತೀಯರು ಕಂಪ್ಯೂಟರಿನಲ್ಲಿ ಕೆಲಸ ಮಾಡಬಲ್ಲ ಸಾಫ್ಟವೇರನ್ನು ಇಸ್ರೇಲಿ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯೊಂದು ಸಿದ್ಧಪಡಿಸಿತು. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಿ-ಡಾಕ್ (ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ) ಹಾಗೂ ಇಸ್ರೇಲಿನ `ಎಫ್ ಟಿ ಕೆ ಟೆಕ್ನಾಲಜೀಸ್' ಜೊತೆಯಾಗಿ ಈ ಹೊಸ ಸಾಫ್ಟವೇರ್ ಸಿದ್ಧಪಡಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವಿನಲ್ಲಿ ಈದಿನ ಈ ಸಾಫ್ಟವೇರನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು. ಸಾಫ್ಟವೇರಿನ ಮೊದಲ ಪ್ರತಿಯನ್ನು ಇಸ್ರೇಲಿನಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕುಮಾರ್ ಸಿಂಗ್ ಅವರಿಗೆ ನೀಡಲಾಯಿತು. ಭಾರತದಲ್ಲಿ ಇಂಗ್ಲಿಷ್ ತಿಳಿದವರು ಕೇವಲ ಶೇ 10 ಜನ ಮಾತ್ರ. ಉಳಿದ ಶೇ 90 ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಮುಟ್ಟಿಸಲು ಈ ಸಾಫ್ಟವೇರ್ ನೆರವಾಗಲಿದೆ ಎಂಬುದು `ಎಫ್ ಟಿ ಕೆ ಟೆಕ್ನಾಲಜೀಸ್' ಮುಖ್ಯಸ್ಥ ಹಾರೆಲ್ ಕೊಹೆನ್ ಅಭಿಪ್ರಾಯ. ಈ ಹೊಸ ಸಾಫ್ಟವೇರ್ 3,000 ರೂಪಾಯಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಹಾಗೂ ಪಂಜಾಬಿ ಭಾಷೆಯ ಜನ ಈ ಸಾಫ್ಟವೇರ್ ಬಳಸಬಹುದು. 2009ರ ಹೊತ್ತಿಗೆ ಭಾರತದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ಎಲ್ಲ ಭಾಷೆಗಳಲ್ಲೂ ಈ ಸಾಫ್ಟವೇರ್ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

2007: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು 64 ಆರೋಪಿಗಳಿಗೆ ಶಿಕ್ಷೆ ವಿಧಿಸಿತು. 24 ಆರೋಪಿಗಳಿಗೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ರಾಂಚಿಯಲ್ಲಿ ತೀರ್ಪು ನೀಡಿತು. ಉಳಿದ ಆರೋಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 53 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥವಾದವು.

2007: ಇರಾಕಿನ ದಯಾಲ್ ಪ್ರಾಂತ್ಯದ ಮುಕದ್ದಿಯಾ ಅಲ್ ಖೈದಾ ಸಂಘಟನೆ ವಿರುದ್ಧ ರಚಿಸಲಾದ ಜಾಗೃತ ಗುಂಪಿನ ಕಚೇರಿಯ ಮೇಲೆ ಆತ್ಮಾಹುತಿ ದಳದ ಮಹಿಳೆಯೊಬ್ಬಳು ದಾಳಿ ನಡೆಸಿದ್ದರಿಂದ 16 ಮಂದಿ ಮೃತರಾಗಿ, 27 ಜನ ಗಾಯಗೊಂಡರು. ಕಚೇರಿಗೆ ಬಂದ ಆತ್ಮಾಹುತಿ ದಳದ ಈ ಮಹಿಳೆ ತನ್ನ ಕೋಟಿನಲ್ಲಿ ಇಟ್ಟಿದ್ದ ಬಾಂಬನ್ನು ಸ್ಪೋಟಿಸಿದಳು.

2007: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯ ಬಿ. ಆರ್. ವಿ. ಪೆರೇಡ್ ಮೈದಾನದಿಂದ ಎತ್ತರಿಸಿದ (ಎಲಿವೆಟೆಡ್) ರೈಲುಮಾರ್ಗ ನಿರ್ಮಿಸುವುದರಿಂದ ಎಂ.ಜಿ.ರಸ್ತೆಯಲ್ಲಿ ಆಗುವ ಸಂಚಾರ ದಟ್ಟಣೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರವು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿತು.

2006: ಉತ್ತರಾಂಚಲವನ್ನು ಉತ್ತರ ಖಂಡ ಎಂಬುದಾಗಿ ಪುನರ್ ನಾಮಕರಣ ಮಾಡುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆ ಡಿಸೆಂಬರ್ 5ರಂದು ಒಪ್ಪಿಗೆ ನೀಡಿತ್ತು. ಲೋಕಸಭೆ ಈದಿನ ಮಸೂದೆಗೆ ಅಂಗೀಕಾರ ನೀಡಿತು.

2006: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ಪ್ರತಿಮೆಯನ್ನು ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ನೇತಾರರಾಗಿದ್ದ ಭೂಪೇಶ್ ಗುಪ್ತಾ ಪ್ರತಿಮೆಯನ್ನೂ ಇದೇ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು.

2006: ಕರ್ನಾಟಕದಲ್ಲಿ ವಿಧಾನಸಭೆಗೆ ಈವರೆಗೆ ನಡೆದ ಮರು ಚುನಾವಣೆಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ (257 ಮತಗಳು) ಗೆಲುವು ಸಾಧಿಸಿದ ಕೀರ್ತಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭಾಜನರಾದರು. ಪ್ರತಿಷ್ಠಿತ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಜೆಡಿಎಸ್ ನ ಶಿವಬಸಪ್ಪ ಅವರನ್ನು ಸಿದ್ದರಾಮಯ್ಯ ಪರಾಭವಗೊಳಿಸಿದರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 24,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದುದು ಒಂದು ದಾಖಲೆಯಾಗಿತ್ತು.

2005: ಚೀನಾದ ತಂಗ್ಷಾನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 74 ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡರು. ಸುಮಾರು 30 ಮಂದಿ ಕಣ್ಮರೆಯಾದರು.

1981: ನ್ಯಾಟೋ ಕೂಟದ ಸದಸ್ಯನಾಗಿ ಸ್ಪೇನ್ ದೇಶವು ಸೇರ್ಪಡೆಗೊಂಡಿತು.

1980: ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು.

1955: ಬ್ರಿಟನ್ನಿನ ಲೇಬರ್ ಪಾರ್ಟಿ ನಾಯಕತ್ವಕ್ಕೆ ಕ್ಲೆಮೆಂಟ್ ಅಟ್ಲಿ ರಾಜೀನಾಮೆ ನೀಡಿದರು. ಕಳೆದ 20 ವರ್ಷಗಳಿಂದ ಅಟ್ಲಿ ಲೇಬರ್ ಪಾರ್ಟಿಯ ನಾಯಕರಾಗಿದ್ದರು.

1946: ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಜನನ.

1945: ಸಾಹಿತಿ, ಚಿತ್ರ ಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್. ಆಚಾರ್ಯ (ಆರ್ಯ) ಅವರು ಪಿ. ವಿಠಲಾಚಾರ್ಯ- ರುಕ್ಮಿಣಿ ದಂಪತಿಯ ಮಗನಾಗಿ ಉಡುಪಿಯಲ್ಲಿ ಜನಿಸಿದರು.

1941: ಜಪಾನಿನ ಯುದ್ಧ ವಿಮಾನಗಳು ಪರ್ಲ್ ಬಂದರಿನಲ್ಲಿ ಅಮೆರಿಕಾದ ಪೆಸಿಫಿಕ್ ಪಡೆ ಮೇಲೆ ದಾಳಿ ನಡೆಸಿದವು. ಈ ಕೃತ್ಯವು ಎರಡನೇ ವಿಶ್ವಸಮರಕ್ಕೆ ಪ್ರವೇಶಿಸಲು ಅಮೆರಿಕಾಕ್ಕೆ ಪ್ರೇರಣೆ ನೀಡಿತು.

1937: ಸರ್ ರೋಗರ್ ಲ್ಯೂಮ್ ಲೇ ಅವರು ಅಧಿಕೃತವಾಗಿ ಬಾಂಬೆಯಲ್ಲಿ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಮ್ಮನ್ನು ಉದ್ಘಾಟಿಸಿದರು. (ಲಾರ್ಡ್ ಬ್ರಾಬೋರ್ನ್ ಅವರು ಈ ವೇಳೆಗೆ ಮುಂಬೈ ಬಿಟ್ಟಿದ್ದರು. ಹಾಗೂ ಬಂಗಾಳದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಹೆಸರಿನಲ್ಲೇ ಈ ಸ್ಟೇಡಿಯಮ್ಮನ್ನು ಸ್ಥಾಪಿಸಲಾಯಿತು).

1935: ಸಾಹಿತಿ ಇಂದಿರಾಕೃಷ್ಣ ಜನನ.

1856: ಈಶ್ವರಚಂದ್ರ ವಿದ್ಯಾಸಾಗರ ಅವರು ಮೊತ್ತ ಮೊದಲ ವಿಧವಾ ಪುನರ್ ವಿವಾಹವನ್ನು ಏರ್ಪಡಿಸಿದರು. ಬಾಲವಿಧವೆ ಕಾಳಿಮತಿ ದೇವಿ ಮತ್ತು ಸಿರಿಸ್ ಚಂದ್ರ ವಿದ್ಯಾರತ್ನ ಅವರ ಮದುವೆ ನಡೆಯಿತು. (1856ರ ಹಿಂದು ಪುನರ್ ವಿವಾಹ ಕಾಯ್ದೆಯ ಅಡಿಯಲ್ಲಿಹಿಂದು ವಿಧವೆಯರ ಮರು ಮದುವೆಗೆ ಅವಕಾಶ ಕಲ್ಪಿಸುವ ಕಾನೂನನ್ನು ಲಾರ್ಡ್ ಕ್ಯಾನಿಂಗ್ 1856ರ ಜುಲೈ ತಿಂಗಳಲ್ಲಿ ಜಾರಿಗೆ ತಂದಿದ್ದ.).

1783: ವಿಲಿಯಂ ಪಿಟ್ ಅವರು ಬ್ರಿಟನ್ನಿನ ಪ್ರಧಾನಿಯಾದರು. 24 ವರ್ಷ ವಯಸ್ಸಿನ ಅವರು ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

1782: ಮುಸ್ಲಿಂ ದೊರೆ ಮೈಸೂರಿನ ಹೈದರಾಲಿ ಚಿತ್ತೂರು ಸಮೀಪದ ಶಿಬಿರವೊಂದರಲ್ಲಿ ಅಸು ನೀಗಿದ. ಫಿರಂಗಿ ಹಾಗೂ ಬಯೋನೆಟ್ಟುಗಳನ್ನು ಹೊಂದಿದ ಮೊತ್ತ ಮೊದಲ ಭಾರತೀಯ ಸೇನಾಪಡೆ ಕಟ್ಟಿದ ಹೆಗ್ಗಳಿಕೆ ಈತನದು.

No comments:

Advertisement