Tuesday, February 16, 2010

ಇಂದಿನ ಇತಿಹಾಸ History Today ಜನವರಿ 16

ಇಂದಿನ ಇತಿಹಾಸ

ಜನವರಿ 16

ಖ್ಯಾತ ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ ನಿಧನರಾದರು. ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನ ಪಾತ್ರ ವಹಿಸಿ ದಾಖಲೆ ನಿರ್ಮಿಸಿದ್ದರು.

2009: ಹಿಂದುಳಿದ ಪ್ರದೇಶವಾದ ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಅನುವಾಗುವಂತೆ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಹಾಗೂ ಬೆಂಗಳೂರಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ.) ಘಟಕ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಪುನಃ ಒತ್ತಾಯಿಸಿತು. 'ಕುಂದಾನಗರ' ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು 50 ನಿಮಿಷಗಳ ತಮ್ಮ ಸುದೀರ್ಘ ಭಾಷಣದಲ್ಲಿ ಈ ಸಲುವಾಗಿ ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಅಗತ್ಯವನ್ನು ಒತ್ತಿಹೇಳಿದರು. ರಾಜ್ಯಪಾಲರು ಇತ್ತ ಕನ್ನಡದಲ್ಲಿ ಶುಭಾಶಯ ಕೋರಿ, ಉತ್ತರ ಕರ್ನಾಟಕ ಮತ್ತು ಗಡಿ ಪ್ರದೇಶಗಳ ಅಭಿವೃದಿಟಗೆ ಸರ್ಕಾರ ಬದ್ಧ ಎಂದು ಸಾರಿದ ಹೊತ್ತಿಗೇ ಅಧಿವೇಶನ ಸ್ಥಳದ ಹೊರಗೆ ಟಿಳಕವಾಡಿಯ ಲೇಲೆ ಮೈದಾನ ಬಳಿ 'ಗಡಿ ಸಮಾವೇಶ'ಕ್ಕೆಂದು ಜಮಾಯಿಸಿದ ಎಂ.ಇ.ಎಸ್. ಕಾರ್ಯಕರ್ತರನ್ನು ಕಾಕತಾಳೀಯ ಎಂಬಂತೆ ಪೊಲೀಸರು ವಶಕ್ಕೆ ತೆಗೆದುಕೊಂಡರು.

2009: ಅಮೆರಿಕ ಏರ್‌ವೇಸ್‌ನ ವಿಮಾನವೊಂದು ನದಿಗೆ ಬಿದ್ದಿತು. ಆದರೆ ಅದರೊಳಗಿದ್ದ 148 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರಾದರು. ಏರ್ ಬಸ್- 320 ಹೆಸರಿನ ದೇಶೀಯ ವಿಮಾನ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ನಿಮಿಷಗಳಲ್ಲಿ ಸಮೀಪದ ಹಡ್ಸನ್ ನದಿಗೆ ಅಪ್ಪಳಿಸಿತು. ನದಿಯಲ್ಲಿದ್ದ ಪ್ರವಾಸಿ ದೋಣಿಗಳು ಮತ್ತು ಪರಿಹಾರ ಕಾರ್ಯಕರ್ತರು ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಶೀತ ಗಾಳಿಯಿಂದ ಪಾರಾಗಲು ಉಣ್ಣೆಯ ವಸ್ತ್ರ ಧರಿಸಿ, ಬೆಚ್ಚನೆಯ ವಿಮಾನದೊಳಗೆ ಕುಳಿತು ಹಿತವಾದ ಪಯಣ ಆರಂಭಿಸಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರಾದರೂ, ಕೇವಲ 6 ಡಿಗ್ರಿ ಸೆಲ್ಷಿಯಸ್ ತಾಪಮಾನದಿಂದ ಹಿಮಗಟ್ಟಿದ್ದ ನೀರಿನಲ್ಲಿ ಥರಗುಟ್ಟಿಹೋದರು. ಈ ಅಪಘಾತ ಎಲ್ಲರಿಗೂ ಆಘಾತ ಉಂಟು ಮಾಡಿತು.

2009: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವುದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು ಹಾಗೂ ಎಲ್ಲಾ ನಾಗರಿಕರಿಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ದೇಶದ ಎಲ್ಲಾ ನಾಗರಿಕರ ನೋಂದಣಿ ಮಾಡಲು ಹಾಗೂ ಗುರುತಿನ ಚೀಟಿ ವಿತರಿಸಲು ರಾಷ್ಟ್ರೀಯ ನೋಂದಣಿ ಪ್ರಾಧಿಕಾರವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ಪಿ. ಸದಾಶಿವಂ ಮತ್ತು ಜೆ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

2009: ಕನ್ನಡ ಸಾಹಿತ್ಯದ ಸೃಜನೇತರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರನ್ನು 2008ನೇ ಸಾಲಿನ 'ಪಂಪ ಪ್ರಶಸ್ತಿ'ಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿತು. ಪ್ರಶಸ್ತಿಯು 1 ಲಕ್ಷ ರೂಪಾಯಿ ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ.

2008: ಆಗ್ನೇಯ ಶ್ರೀಲಂಕಾದ ಬುಟಾಲಾದಲ್ಲಿ ಶಂಕಿತ ಎಲ್ ಟಿ ಟಿ ಇ ಭಯೋತ್ಪಾದಕರು ಬಸ್ಸೊಂದನ್ನು ಸ್ಫೋಟಿಸಿದ್ದರಿಂದ 26ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 64 ಮಂದಿಗೆ ತೀವ್ರ ಸ್ವರೂಪದ ಗಾಯಗಳಾದವು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅದೇ ಪ್ರದೇಶದಲ್ಲಿ ಇನ್ನೊಂದು ಬಾಂಬ್ ಕೂಡ ಸ್ಫೋಟಗೊಂಡು ಮೂವರು ಯೋಧರಿಗೆ ಗಾಯಗಳಾಗಿ ಸೇನಾ ವಾಹನ ಜಖಂಗೊಂಡಿತು.

2008: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಸಚಿವ ಸಂಪುಟದ ಸದಸ್ಯರಾದ ವಿಶ್ವಜಿತ್ ರಾಣೆ (ಪಕ್ಷೇತರ), ಫ್ರಾನ್ಸಿಸ್ಕೊ ಉರುಫ್ ಮಿಕ್ಕಿ ಪಾಥೆಕೊ ಮತ್ತು ಜೋಸ್ ಫಿಲಿಪ್ (ಇಬ್ಬರೂ ಎನ್ ಸಿ ಪಿ) ಅವರು ರಾಜ್ಯಪಾಲ ಎಸ್. ಸಿ. ಜಮೀರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಗೋವಾ ಸಮ್ಮಿಶ್ರ ಸರ್ಕಾರ ಪತನದೆಡೆಗೆ ಸಾಗಿತು.

2008: ಚೀನಾದ ಸಿಸಿಟಿವಿ-9 ವಾಹಿನಿಗೆ ಭಾರತದಲ್ಲಿ ಡೌನ್ ಲೋಡ್ ಮಾಡಲು ಅನುಮತಿ ನೀಡಲಾಯಿತು. ಇದರಂತೆ ಝೀ ಟಿವಿ ಪ್ರಸಾರಕ್ಕೆ ಚೀನಾ ಒಪ್ಪಿದೆ ಎಂದು ಕೇಂದ್ರದ ವಾರ್ತಾ ಹಾಗೂ ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿದವು.

2008: ಆಫ್ಘಾನಿಸ್ಥಾನದ ಗಡಿಯಲ್ಲಿರುವ ದಕ್ಷಿಣ ವಜೀರಸ್ಥಾನ ಬುಡಕಟ್ಟು ಪ್ರದೇಶದಲ್ಲಿ ಪಾಕಿಸ್ಥಾನಿ ಭದ್ರತಾ ದಳದ ವಶದಲ್ಲಿದ್ದ ಕೋಟೆಯೊಂದನ್ನು ತಾಲಿಬಾನ್ ಉಗ್ರಗಾಮಿಗಳು ವಶ ಪಡಿಸಿಕೊಂಡರು. ಈ ದಾಳಿ ಸಂದರ್ಭದಲ್ಲಿ ಸುಮಾರು 47 ಪಾಕ್ ಯೋಧರು ಸಾವನ್ನಪ್ಪಿದರು. ಉಗ್ರಗಾಮಿಗಳ ದಾಳಿಗೆ ತತ್ತರಿಸಿ ಹಲವಾರು ಯೋಧರು ಸ್ಥಳದಿಂದಲೇ ಪರಾರಿಯಾದರು.

2007: ಜರ್ಮನ್ ಚಾನ್ಸಲರ್ ಆಂಗೇಲಾ ಮರ್ಕೆಲ್ ಅವರ ಮಿತ್ರ ಕನ್ಸರ್ ವೇಟಿವ್ ಪಕ್ಷದ ಹ್ಯಾನ್ಸ್-ಗೆರ್ಟ್ ಪೋಟ್ರಿಂಗ್ ಅವರು ಯುರೋಪಿಯನ್ ಪಾರ್ಲಿಮೆಂಟಿನ ಅಧ್ಯಕ್ಷರಾಗಿ ಆಯ್ಕೆಯಾದರು.

2007: ಖ್ಯಾತ ಹಾಲಿವುಡ್ ನಟ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶನದ `ಲೆಟರ್ಸ್ ಫ್ರಮ್ ಇವೊ ಜಿಮಾ' ಚಲನಚಿತ್ರ ಗೋಲ್ಡನ್ ಗ್ಲೋಬ್ ಶ್ರೇಷ್ಠ ವಿದೇಶಿ ಚಿತ್ರ ಎಂಬ ಪ್ರಶಸ್ತಿ ಪಡೆಯಿತು. ಜಪಾನಿ ಭಾಷೆಯಲ್ಲಿರುವ ಈ ಚಿತ್ರ ಎರಡನೇ ಜಾಗತಿಕ ಸಮರದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಮೆಲ್ ಗಿಬ್ಸನ್ ಅವರ `ಅಪೊಕಲಿಪ್ಟೊ', ಪೆಡ್ರೊ ಅಲ್ಮೊದೊವರ್ ಅವರ `ವೊಲ್ವರ್' ಚಿತ್ರಗಳು ಈಸ್ಟ್ ವುಡ್ ಚಿತ್ರಕ್ಕೆ ಪ್ರಬಲ ಪೈಪೋಟಿ ಒಡ್ಡ್ದಿದವು.

2007: ದ ಟೈಮ್ಸ್ ಆಫ್ ಇಂಡಿಯಾ ದೈನಿಕದ ಕನ್ನಡ ಆವೃತ್ತಿ 'ದ ಟೈಮ್ಸ್ ಆಫ್ ಇಂಡಿಯಾ ಕನ್ನಡ' ಮಾರುಕಟ್ಟೆಗೆ ಪ್ರವೇಶ.

2007: ಲಂಡನ್ನಿನ ಚಾನೆಲ್ 4ರ ರಿಯಾಲಿಟಿ ಶೋ `ಬಿಗ್ ಬ್ರದರ್' ನಲ್ಲಿ ಅವಕಾಶ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾರತೀಯಳೆಂಬ ಕಾರಣಕ್ಕಾಗಿ ಇತರ ಸ್ಪರ್ಧಿಗಳಿಂದ ಜನಾಂಗೀಯ ನಿಂದೆ ಹಾಗೂ ಅವಹೇಳನಕ್ಕೆ ಗುರಿಯಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದ ನಿರ್ಮಾಪಕರು ಈ ಪ್ರಕರಣದ ತನಿಖೆಗೆ ಆದೇಶಿಸಿದರು.

2007: ಚೀನಾ ಕ್ರಾಂತಿಯಲ್ಲಿ ಪಾಲ್ಗೊಂಡು 1949ರಲ್ಲಿ ಮಾವೋ ಝೆಡೊಂಗ್ ಜೊತೆಗೆ ಅಧಿಕಾರಕ್ಕೆ ಏರಿದ್ದ ಹಿರಿಯ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರಾದ ಬೊ ಯಿಬೊ (98) ಬೀಜಿಂಗ್ ಆಸ್ಪತ್ರೆಯೊಂದರಲ್ಲಿ ನಿಧನರಾದರು.

2007: ವಿಶ್ವ ಆರ್ಥಿಕ ವೇದಿಕೆಯ (ವರ್ಲ್ಡ್ ಎಕನಾಮಿಕ್ ಫೋರಂ) ಪ್ರಕಟಿಸುವ ಪ್ರಸಕ್ತ ಸಾಲಿನ ಜಾಗತಿಕ ಯುವ ನಾಯಕರ ಪಟ್ಟಿಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ಜನಾಗ್ರಹ ಸಂಸ್ಥೆಯ ಸಂಸ್ಥಾಪಕ ರಮೇಶ ರಾಮನಾಥನ್, ಸಂಸದರಾದ ಓಮರ್ ಅಬ್ದುಲ್ಲ, ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್, ಮ್ಯಾಗ್ಸೆಸೆ ವಿಜೇತ ಅರವಿಂದ್ ಕೇಜ್ರಿವಾಲ ಸ್ಥಾನ ಪಡೆದರು.

2007: ಕರ್ನಾಟಕ ರಾಜ್ಯ ಬರಹಗಾರರ ಮತ್ತು ಪ್ರಕಾಶಕರ ಸಂಘದ 2006ನೇ ಸಾಲಿನ ವರ್ಷದ `ಉತ್ತಮ ಲೇಖಕ' ಪ್ರಶಸ್ತಿಗೆ ಡಾ. ನಲ್ಲೂರು ಪ್ರಸಾದ್ ಹಾಗೂ ಉತ್ತರ ಪ್ರಕಾಶಕ ಪ್ರಶಸ್ತಿಗೆ ಧಾರವಾಡ ಮನೋಹರ ಗ್ರಂಥ ಮಾಲೆಯ ಡಾ. ರಮಾಕಾಂತ ಜೋಶಿ ಆಯ್ಕೆಯಾದರು.

2006: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಸದಸ್ಯರನ್ನು ಸಂಸತ್ತಿನಿಂದ ಉಚ್ಚಾಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು. ಬಹುಜನ ಸಮಾಜ ಪಕ್ಷದ ಸಂಸದ ರಾಜಾ ರಾಂ ಪಾಲ್ ಸಂಸತ್ತಿನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು.

2006: ಮಿಷೆಲ್ ಬಾಸೆಲೆಟ್ ಚಿಲಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು. ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಅಧ್ಯಕ್ಷ ಸ್ಥಾನವೊಂದಕ್ಕೆ ಆಯ್ಕೆಯಾಗಿರುವ ಎರಡನೆಯ ಮಹಿಳೆ.

2006: ಆಫ್ಘಾನಿಸ್ಥಾನದಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕೆನಡಾದ ಹಿರಿಯ ರಾಜತಂತ್ರಜ್ಞ ಗಿನ್ ಬೆರ್ರಿ ಅಸು ನೀಗಿದರು.

1997: ಕಾರ್ಮಿಕ ಧುರೀಣ ದತ್ತಾ ಸಾಮಂತ್ ಅವರನ್ನು ಮುಂಬೈಯಲ್ಲಿ ಗುಂಡಿಕ್ಕಿ ಕೊಲೆಗೈಯಲಾಯಿತು.

1989: ಖ್ಯಾತ ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ ನಿಧನರಾದರು. ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನ ಪಾತ್ರ ವಹಿಸಿ ದಾಖಲೆ ನಿರ್ಮಿಸಿದ್ದರು.

1979: ಇರಾನಿನ ಶಹಾ ಮೊಹಮ್ಮದ್ ರೇಝಾ ಶಹಾ ಪಹ್ಲವಿ ಇರಾನ್ ತ್ಯಜಿಸಿದರು. ಅಯತ್ಲೊಲ ಖೊಮೇನಿ ಇರಾನಿನ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡರು.

1963: ಕಲಾವಿದೆ ಪುಷ್ಪಲತಾ ಚಂದ್ರಹಾಸ ಜನನ.

1955: ಪುಣೆಯ ಖಡಕವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಆರಂಭಗೊಂಡಿತು.ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರು 1949ರ ಅಕ್ಟೋಬರ್ 6ರಂದು ಶಿಲಾನ್ಯಾಸ ನೆರವೇರಿಸಿದ್ದರು.

1946: ಸೂತ್ರಧಾರ ನಾಟಕ ತಂಡದ ಸ್ಥಾಪಕ ಸದಸ್ಯ `ಸೂತ್ರಧಾರ ರಾಮಯ್ಯ' ಅವರು ವೆಂಕಟೇಶಯ್ಯ- ಮಂಗಳಮ್ಮ ದಂಪತಿಯ ಮಗನಾಗಿ ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು.

1936: ಅಮೆರಿಕಾದ ರೇಸ್ ಟ್ರ್ಯಾಕಿನಲ್ಲಿ ಮೊತ್ತ ಮೊದಲ ಫೊಟೋ ಫಿನಿಶ್ ಕ್ಯಾಮರಾವನ್ನು ಅಳವಡಿಸಲಾಯಿತು. ಫ್ಲಾರಿಡಾದಲ್ಲಿ ಕುದುರೆಗಳ ಓಟ ಗಮನಿಸಿಲು `ಎಲೆಕ್ಟ್ರಿಕ್ ಕಣ್ಣು' ಬಳಸಲಾಯಿತು.

1935: ಭಾರತದ ಚಿತ್ರನಟ, ರಂಗನಟ, ಟಿವಿ ನಟ ಕಬೀರ್ ಬೇಡಿ ಹುಟ್ಟಿದ ದಿನ.

1924: ಕಲಾವಿದ ಬಸವ ಪ್ರಭು ನಿಂಗಪ್ಪ ಈಟಿ ಜನನ.

1901: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ (1842-1901) ನಿಧನರಾದರು.

1547: ರಷ್ಯಾದ ತ್ಸಾರ್ ದೊರೆಯಾಗಿ ಇವಾನ್ ನ ಸಿಂಹಾಸನಾರೋಹಣ ನಡೆಯಿತು. `ತ್ಸಾರ್' (Czar) ಎಂಬುದಾಗಿ ಹೆಸರು ಇಟ್ಟುಕೊಂಡ ಮೊದಲ ರಷ್ಯಾದ ಆಡಳಿತಗಾರ ಈತ.

No comments:

Advertisement