Friday, March 12, 2010

ಇಂದಿನ ಇತಿಹಾಸ History Today ಮಾರ್ಚ್ 12

ಇಂದಿನ ಇತಿಹಾಸ

ಮಾರ್ಚ್ ೧೨

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಸಸ್ಯ ಹಾಗೂ ಪಕ್ಷಿ ಇತ್ತೀಚೆಗೆ ಗೋಚರಿಸಿ ಪರಿಸರಾಸಕ್ತರ ಗಮನ ಸೆಳೆಯಿತು. ಡ್ರಾಸೆರಾ ಎಂಬ ಕೀಟಾಹಾರಿ ಸಸ್ಯ ಚಾರ್ಮಾಡಿ ಘಟ್ಟ ಪ್ರದೇಶದಲ್ಲಿ ಕಂಡು ಬಂದಿತು.

2009: ಬೆಂಗಳೂರಿಗೆ ಸುಮಾರು 50 ಕಿ.ಮೀ ದೂರದ ದಾಬಸ್‌ಪೇಟೆ ಬಳಿಯ ಬಿಪಿಎಲ್ ಕಾರ್ಖಾನೆಗೆ ಸೇರಿದ ಮಹಾತ್ಮಗಾಂಧಿ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಸಮ್ಮುಖದಲ್ಲಿ ತೃತೀಯ ರಂಗಕ್ಕೆ ಅಧಿಕೃತ ಚಾಲನೆ ದೊರಕಿತು. ಎಡಪಕ್ಷಗಳ ಮುಖಂಡರಾದ ಪ್ರಕಾಶ್ ಕಾರಟ್, ಎ.ಬಿ.ಬರ್ಧನ್, ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತೆಲುಗುದೇಶಂನ ಚಂದ್ರಬಾಬು ನಾಯ್ಡು, ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ, ತೆಲಂಗಾಣ ರಾಷ್ಟ್ರೀಯ ಸಮಿತಿಯ ತಾರಕ ರಾಮರಾವ್, ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಡಾ.ಮೈತ್ರೇಯನ್, ಹರಿಯಾಣದ ಜನಹಿತ ಕಾಂಗ್ರೆಸ್ ಕುಲದೀಪ್ ಬಿಷ್ಣೋಯಿ, ಫಾರ್ವಡ್ ಬಾಕ್ಲ್ ಜಿ.ಆರ್.ಶಿವಶಂಕರ್ ಸಹ ಉಪಸ್ಥಿತರಿದ್ದರು.

2009: ತಮ್ಮ ಜೀವಕ್ಕೇ ಅಪಾಯ ಇದ್ದಾಗ ಅಂತಹ ಅಪಾಯ ಒಡ್ಡಿದವರನ್ನು ಆತ್ಮರಕ್ಷಣೆಗಾಗಿ ಕೊಲ್ಲುವುದು ತಪ್ಪಾಗುವುದಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ಎಚ್. ಎಸ್. ಬೇಡಿ ಅವರಿದ್ದ ಪೀಠ ತೀರ್ಪು ನೀಡಿ, 30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಂದ ಇಬ್ಬರನ್ನು ದೋಷಮುಕ್ತಗೊಳಿಸಿತು. ಎದುರಿಗಿರುವ ವ್ಯಕ್ತಿ ಅವನನ್ನು / ಅವಳನ್ನು ಕೊಲ್ಲುವುದು ಅಥವಾ ತೀವ್ರ ಗಾಯಗೊಳಿಸಿ ಕೊಲ್ಲಲು ಪ್ರಯತ್ನಿಸುವುದು ನಿಶ್ಚಿತ ಎಂಬುದು ಸ್ಪಷ್ಟವಾದರೆ, ಉದ್ದೇಶಿತ ವ್ಯಕ್ತಿ ಅಂತಹ ದಾಳಿಗೆ ಮುಂದಾಗದಿದ್ದರೂ ಎದುರಿಗಿರುವ ವ್ಯಕ್ತಿಯನ್ನು ಆತ್ಮರಕ್ಷಣೆಗಾಗಿ ಕೊಲ್ಲುವುದು ತಪ್ಪಲ್ಲ ಎಂದು ಪೀಠ ಹೇಳಿತು. 1979 ಜನವರಿ 27ರಂದು ಮೀರತ್ತಿನಲ್ಲಿ ನಡೆದ ಲಖಿ ರಾಮ್ ಎಂಬವರ ಕೊಲೆಗೆ ಸಂಬಂಧಿಸಿದಂತೆ ಗಜಯ್ ಸಿಂಗ್ ಮತ್ತು ರಾಜ್ಪಾಲ್ ಸಿಂಗ್ ಎಂಬವರನ್ನು ದೋಷಮುಕ್ತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

2009: ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಸಸ್ಯ ಹಾಗೂ ಪಕ್ಷಿ ಇತ್ತೀಚೆಗೆ ಗೋಚರಿಸಿ ಪರಿಸರಾಸಕ್ತರ ಗಮನ ಸೆಳೆಯಿತು. ಡ್ರಾಸೆರಾ ಎಂಬ ಕೀಟಾಹಾರಿ ಸಸ್ಯ ಚಾರ್ಮಾಡಿ ಘಟ್ಟ ಪ್ರದೇಶದಲ್ಲಿ ಕಂಡು ಬಂದಿತು. ನೋಡಲು ಅತ್ಯಾಕರ್ಷಕವಾದ ಸಸ್ಯ ತನ್ನ ಮೇಲಿರುವ ಲೋಳೆಯಂಥ ಸಿಹಿ ಪದಾರ್ಥದಿಂದ ಕೀಟಗಳನ್ನು ಆಕರ್ಷಿಸಿ ಸ್ವಾಹಾ ಮಾಡುತ್ತದೆ.

2009: ಬಾಹ್ಯಾಕಾಶಕ್ಕೆ ತೆರಳಬೇಕಾಗಿದ್ದ 'ಡಿಸ್ಕವರಿ' ನೌಕೆಯ ಉಡಾವಣೆಯನ್ನು ನಾಸಾ ಕೊನೆ ಗಳಿಗೆಯಲ್ಲಿ ರದ್ದುಪಡಿಸಿತು. ನೌಕೆ ಹಾಗೂ ಅದರ ಹೊರಗಿನ ಇಂಧನ ಟ್ಯಾಂಕ್ ನಡುವಿನ ಕೊಳವೆಯಲ್ಲಿ ಇಂಧನ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನೌಕೆ ಉಡಾವಣೆಗೆ ಕೆಲವೇ ಗಂಟೆಗಳ ಮೊದಲು ನಾಸಾ ಉಡಾವಣೆಯನ್ನು ರದ್ದುಗೊಳಿಸಿತು.

2009: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ ವಿಶ್ವದ 15 ರಾಷ್ಟ್ರಗಳಲ್ಲಿ ನಡೆಸಿದ ಅಂತಾರಾಷ್ಟ್ರೀಯ ಶಾಲಾ ಮೌಲ್ಯಮಾಪನ ಪರೀಕ್ಷೆಯಲ್ಲಿ ಸ್ಥಳೀಯ ಚಂದನ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಆರ್. ರಮಿತಾ ತೋರಿದ ಕಂಪ್ಯೂಟರ್ ಜಾಣ್ಮೆಗೆ ಬಂಗಾರದ ಪದಕ ದೊರಕಿತು. 2650 ಶಾಲೆಗಳ ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಕಂಪ್ಯೂಟರ್ ಜಾಣ್ಮೆ ಪರೀಕ್ಷೆಗೆ ಕುಳಿತಿದ್ದರು. ಪೈಕಿ ವಿವಿಧ ತರಗತಿ ವಿಭಾಗದಲ್ಲಿ ಪ್ರಪಂಚದ 80 ಜನ ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದಿದ್ದು ರಮಿತಾ ಕೂಡ ಅವರಲ್ಲಿ ಒಬ್ಬಳಾಗಿದ್ದಾಳೆ.

2009: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರ ಮೇಲೆ ಪತ್ರಿಕಾಗೋಷ್ಠಿಯಲ್ಲಿ ಬೂಟು ಎಸೆದು ಅವಮಾನಗೊಳಿಸಿ ಜಗದ್ವಿಖ್ಯಾತನಾಗಿದ್ದ ಇರಾಕಿ ಪತ್ರಕರ್ತನಿಗೆ ಬಾಗ್ದಾದ್ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ದೂರದರ್ಶನ ಮಾಧ್ಯಮದ ವರದಿಗಾರ ಆರೋಪಿ ಮುಂತಾಜೇರ್ ಅಲ್ ಜೈದಿಯ (30) ವಿಚಾರಣೆ ಪೂರ್ಣಗೊಳಿಸಿದ ಇರಾಕಿನ ಕೇಂದ್ರ ಕ್ರಿಮಿನಲ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ ಎಂದು ಆರೋಪಿ ಪರ ವಕೀಲ ಯಾಹಿಯಾ ಅತ್ತಾಬ್ಬಿ ಸುದ್ದಿಗಾರರಿಗೆ ತಿಳಿಸಿದರು. ತೀರ್ಪನ್ನು ತಾವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿಯೂ ಅವರು ಹೇಳಿದರು. ಕಳೆದ ವರ್ಷ ಡಿಸೆಂಬರ್ 14ರಂದು ಬುಶ್ ಇಲ್ಲಿಗೆ ಆಗಮಿಸಿದ್ದಾಗ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜೈದಿ ಅವರತ್ತ ಬೂಟು ಎಸೆದಿದ್ದರು.

2008: ಬೆಂಗಳೂರು ಮತ್ತು ಹೈದರಾಬಾದಿನ ಹಾಲಿ ವಿಮಾನ ನಿಲ್ದಾಣಗಳ ಮುಚ್ಚುವಿಕೆಯನ್ನು ವಿರೋಧಿಸಿ ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಯೂನಿಯನ್ ಕರೆಯ ಮೇರೆಗೆ ದೇಶಾದ್ಯಂತ ಅನಿರ್ದಿಷ್ಟಾವಧಿಯ `ಅಸಹಕಾರ' ಚಳವಳಿ ಆರಂಭಗೊಂಡಿತು. ಆದರೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಸರ್ಕಾರವು ದೇಶದ 21 ಪ್ರಮುಖ ನಿಲ್ದಾಣಗಳಲ್ಲಿ 479 ವಾಯುಪಡೆ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ವಿವಿಧ ಸ್ಥಳಗಳಲ್ಲಿ ವಿಮಾನ ಹಾರಾಟ ಮತ್ತು ವಿಮಾನ ನಿಲ್ದಾಣ ಸೇವೆಗಳಲ್ಲಿ ಹೆಚ್ಚಿನ ತೊಂದರೆ ಉಂಟಾಗಲಿಲ್ಲ. ಮುಷ್ಕರ ವಿರುದ್ಧ ಬಳಸಲಾಗಿರುವ `ಎಸ್ಮಾ'ವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಎಡಪಕ್ಷಗಳು ಲೋಕಸಭೆಯಲ್ಲಿ ಕಲಾಪ ಸ್ಥಗಿತಗೊಳಿಸಿದವು.

2008: ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಕಾರ್ಯಾರಂಭ ಮಾಡಿದ ಮೇಲೂ ಹಳೆಯ ವಿಮಾನನಿಲ್ದಾಣಗಳನ್ನು ಮುಚ್ಚುವುದಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿತು.

2008: ಜೈನರ ಪ್ರಸಿದ್ಧ ಕ್ಷೇತ್ರ ತುಮಕೂರು ತಾಲ್ಲೂಕಿನ ಪಂಡಿತನಹಳ್ಳಿಯ ಶ್ರೀ ಕ್ಷೇತ್ರ ಮಂಧರಗಿರಿಯಲ್ಲಿ ಏಕಶಿಲೆಯಲ್ಲಿ ಕೆತ್ತಲಾದ 21 ಅಡಿ ಎತ್ತರದ ಚಂದ್ರಪ್ರಭ ತೀರ್ಥಂಕರರ ಮೂರ್ತಿಯ ಪ್ರತಿಷ್ಠಾಪನಾ ಸಮಾರಂಭ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. ಮುನಿಶ್ರೀ ಪ್ರಮುಖ ಸಾಗರ್ ಜಿ ಮಹಾರಾಜ್ ಅವರು ಪ್ರತಿಷ್ಠಾಪನೆಗೊಂಡ ಮೂರ್ತಿಗೆ ಧಾರ್ಮಿಕ ಪೂಜಾ ವಿಧಿಗಳನ್ನು ಪೂರೈಸಿದರು.

2008: ನಾಗಾಲ್ಯಾಂಡಿನ ನೂತನ ಮುಖ್ಯಮಂತ್ರಿ ನೈಫಿಯು ರಿಯೊ ಮತ್ತು ಇತರ 11 ಮಂದಿ ಸಚಿವರನ್ನು ಒಳಗೊಂಡ ನೂತನ ಸರ್ಕಾರ ಕೊಹಿಮಾದಲ್ಲಿ ಅಧಿಕಾರ ಸ್ವೀಕರಿಸಿತು. ನಾಗಾಲ್ಯಾಂಡ್ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿರುವ (ಡಿಎಎನ್) ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟಿನ (ಎನ್ ಪಿ ಎಫ್) 8, ಎನ್ ಸಿ ಪಿ ಮತ್ತು ಬಿಜೆಪಿಯ ತಲಾ ಒಬ್ಬರು ಹಾಗೂ ಒಬ್ಬರು ಪಕ್ಷೇತರ ಶಾಸಕರು ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಕೆ. ಶಂಕರನಾರಾಯಣನ್ ಅವರು ಪ್ರಮಾಣವಚನ ಬೋಧಿಸಿದರು.

2008: ಆಸ್ಟ್ರೇಲಿಯಾದಲ್ಲಿ 17 ಜನರ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ವೈದ್ಯ ಜಯಂತ್ ಪಟೇಲ್ ಅವರನ್ನು ಅಮೆರಿಕದ ಓರೆಗಾನ್ ರಾಜ್ಯದಲ್ಲಿನ ಅವರ ಮನೆಯಲ್ಲಿ ಎಫ್ ಬಿ ಅಧಿಕಾರಿಗಳು ಬಂಧಿಸಿದರು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ ಬುಂಡಬರ್ಗ್ ಬೇಸ್ ಆಸ್ಪತ್ರೆಯಲ್ಲಿ 2003ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದ ಪಟೇಲ್ (57), 2005ರಲ್ಲಿ ರೋಗಿಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡ ನಂತರ ಅಮೆರಿಕಕ್ಕೆ ತಪ್ಪಿಸಿಕೊಂಡು ಹೋಗಿದ್ದರು. ಪಟೇಲ್ ವಿರುದ್ಧ 3 ಹತ್ಯೆ, 3 ದೇಹಗಳಿಗೆ ಹಾನಿ ಉಂಟು ಮಾಡಿದ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ 2 ಪ್ರಕರಣಗಳು, 5 ವಂಚನೆ ಪ್ರಕರಣಗಳು ಸೇರಿ ಇತರ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಓರೆಗಾನ್ ಸರ್ಕಾರಿ ವಕೀಲರು ತಿಳಿಸಿದರು. ಆಸ್ಟ್ರೇಲಿಯಾ ಮಾಧ್ಯಮಗಳಿಂದ ಡಾ. ಡೆತ್ ಎಂದು ಅನ್ವರ್ಥ ನಾಮ ಪಡೆದ ಪಟೇಲ್ ಅವರು ಗುಜರಾತಿನ ಜಾಮ್ ನಗರದವರು. 1977ರಲ್ಲಿ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ ಹಾಗೂ ಓರೆಗಾನಿನಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಕೆಲದಿನಗಳಲ್ಲಿಯೇ ಇವರ ಮೇಲೆ ವೈದ್ಯ ವೃತ್ತಿ ನಡೆಸದಂತೆ ನಿಷೇಧ ಹೇರಲಾಯಿತು. ಇದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಪಯಣ ಬೆಳೆಸಿದ್ದರು. ಕ್ವೀನ್ಸ್ ಲ್ಯಾಂಡ್ ಅಟಾರ್ನಿ ಜನರಲ್ ಇಲಾಖೆ ಪ್ರಕಾರ ತಲೆಮರೆಸಿಕೊಂಡಿದ್ದ ಜಯಂತ್ ಪತ್ತೆಗಾಗಿ ಆಸ್ಟ್ರೇಲಿಯಾ ಸರ್ಕಾರ 2006-07ರಲ್ಲಿ 5,61,000 ಡಾಲರ್ ಹಾಗೂ 2007-08ರಲ್ಲಿ 6,90,000 ಡಾಲರ್ ಹೀಗೆ ಒಟ್ಟು 12,51,000 ಡಾಲರ್ ವೆಚ್ಚ ಮಾಡಿದೆ. ಆದರೆ ಡಾ. ಜಯಂತ್ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಮಾಡಿರುವುದು ಅಪಪ್ರಚಾರ ಎಂಬುದು ಜಯಂತ್ ಸ್ನೇಹಿತರ ಹೇಳಿಕೆ.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಸಹ-ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧದ ವಂಚನೆ ಪ್ರಕರಣವೊಂದರಿಂದ ಖುಲಾಸೆಯಾದರು. ಇಸ್ಲಾಮಾಬಾದಿನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಜರ್ದಾರಿ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿತು, ಆದರೆ ಸಂಬಂಧದ ಅಂತಿಮ ತೀರ್ಪನ್ನು ಕಾದಿರಿಸಿತು. ಹಿಂದಿನವಾರವಷ್ಟೇ ರಾವಲ್ಪಿಂಡಿ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಜರ್ದಾರಿ ವಿರುದ್ಧದ ಐದು ಪ್ರಕರಣಗಳನ್ನು ಕೈಬಿಟ್ಟಿತ್ತು.

2008: ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ ಕದಿರ್ ಗಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಟಿ ಟಿ ನಾಯಕ ವಿ. ಫ್ರಭಾಕರನ್ ಮತ್ತು ಇತರ ನಾಲ್ವರ ವಿರುದ್ಧ ಕೊಲಂಬೋ ಹೈಕೋರ್ಟಿನಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪ್ರಭಾಕರನ್ ಜೊತೆಗೆ ಎಲ್ ಟಿ ಟಿ ಗುಪ್ತದಳದ ನಾಯಕ ಪೊಟ್ಟು ಅಮ್ಮನ್ ಮತ್ತು ಇತರ ಮೂವರು ಕಾರ್ಯಕರ್ತರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಲಾಯಿತು. 2005 . 12ರಂದು ಕದಿರ್ ಗಮಾರ್ ಗುಂಡಿನ ದಾಳಿಯಲ್ಲಿ ಹತರಾಗಿದ್ದರು.

2007: ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಮನೆಯಲ್ಲಿನ ಕಂಪ್ಯೂಟರ್ ಹಾಗೂ ಅಂತರ್ಜಾಲದ ಮೂಲಕ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ಕಾಯ್ದಿರಿಸುವ ಹೈಟೆಕ್ `ಅವತಾರ್' (ಎನಿ ವೇರ್ ಎನಿ ಟೈಮ್ ಅಡ್ವಾನ್ಸ್ ರಿಸರ್ವೇಷನ್) ಯೋಜನೆಗೆ ಸಾರಿಗೆ ಸಚಿವ ಎನ್. ಚಲುವರಾಯಸ್ವಾಮಿ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮನೆಯಲ್ಲೇ ಮೌಸ್ ಕ್ಲಿಕ್ ಮಾಡುವ ಮೂಲಕ ಕಂಪ್ಯೂಟರಿನಿಂದಲೇ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ ಯೋಜನೆಯನ್ವಯ ಟಿಕೆಟ್ ಮುಂಗಡ ಕಾಯ್ದಿರಿಸಬಹುದು.

2007: ಇಸ್ರೋ ನಿರ್ಮಿತ ಭಾರಿ ತೂಕದ ಇನ್ಸಾಟ್ 4 ಬಿ ಉಪಗ್ರಹವನ್ನು ಫ್ರೆಂಚ್ ಗಯಾನಾದ ಕೌರುವಿನಿಂದ ಏರಿಯನ್ 5 ರಾಕೆಟ್ ಮೂಲಕ ಈದಿನ ಮುಂಜಾನೆ ಗಗನಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇನ್ಸಾಟ್ ಸರಣಿಯ ಎರಡನೇ ಉಪಗ್ರಹವಾದ ಇನ್ಸಾಟ್ 4 ಬಿ ಅಧಿಕ ಶಕ್ತಿಯ 12 ಕೆಯು ಬ್ರ್ಯಾಂಡ್ ಹಾಗೂ 12 ಸಿ. ಬ್ರ್ಯಾಂಡ್ ಟ್ರಾನ್ಸ್ ಪಾಂಡರುಗಳನ್ನು ಹೊಂದಿದೆ. ಉಪಗ್ರಹದಿಂದ ಮನೆಗೆ ನೇರ ಪ್ರಸಾರ (ಡಿಟಿಎಚ್), ಟಿ.ವಿ. ಸೇವೆ, ಹಾಗೂ ಸಂಪರ್ಕಕ್ಕೆ ಅನುಕೂಲವಾಗಲಿದೆ.

2006: ತಮಿಳುನಾಡಿನ ಖ್ಯಾತ ನಟಿ, ಗಾಯಕಿ ಸುಂದರಬಾಯಿ (83) ನಿಧನರಾದರು. ಮೂಲತಃ ತಂಜಾವೂರಿನವರಾದ ಸುಂದರಬಾಯಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. ತಮಿಳುನಾಡು ಸರ್ಕಾರನೀಡುವ ಕಲೈ ಮಾಮನಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

2006: ಏಕದಿನಗಳ ಪಂದ್ಯಗಳ ಇತಿಹಾಸದಲ್ಲಿ ಎಂದೂ ದಾಟಲಾಗದ 400 ಮಾಯಾ ಸಂಖ್ಯೆಯನ್ನು ಮುರಿದು 50 ಓವರುಗಳಲ್ಲಿ ಆಸ್ಟ್ರೇಲಿಯಾ ಎಸೆದ ವಿಶ್ವದಾಖಲೆಯ 434 ರನ್ನುಗಳ ಸವಾಲನ್ನು ಧೀರೋಧಾತ್ತವಾಗಿ ಎದುರಿಸಿ, 9 ವಿಕೆಟ್ ನಷ್ಟಕ್ಕೆ 438 ರನ್ ಗಳಿಕೆಯೊಂದಿಗೆ ವಿಶ್ವದಾಖಲೆ ಸ್ಥಾಪನೆಯ ಉತ್ತರ ನೀಡುವ ಮೂಲಕ ಮೂಲಕ ದಕ್ಷಿಣ ಆಫ್ರಿಕವು 3-2 ಅಂತರದಲ್ಲಿ ಐದು ಪಂದ್ಯಗಳ ಸರಣಿ ಗೆದ್ದುಕೊಂಡಿತು. 1996 ವಿಶ್ವ ಕಪ್ ಕ್ರಿಕೆಟಿನಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 398 ರನ್ ಗಳಿಸಿದ್ದು ಏಕದಿನ ಪಂದ್ಯಗಳಲ್ಲಿ ಅತ್ಯಧಿಕ ಮೊತ್ತವಾಗಿತ್ತು.

2006: ಅತ್ಯಧಿಕ ಲಿಮ್ಕಾ ದಾಖಲೆ ಮಾಡಿ ಮೂರು ಬಾರಿ ಗಿನ್ನೆಸ್ ದಾಖಲೆ ಸೃಷ್ಟಿಸಿರುವ ಗುಜರಾತಿನ ಸೂರತ್ ನಗರದ ಫಿಟ್ನೆಸ್ ಗುರು ಆರ್ಜೀಸ್ ಕ್ಲಬ್ ಎಕ್ಸೆಲ್ ನಿರ್ದೇಶಕ ಕನ್ನಡಿಗ ರಾಜ್ ಅಶೋಕ ಶೆಟ್ಟಿ ಅವರು ಸೂರತ್ ನಗರದ 140ರಿಂದ 180 ಕೆ.ಜಿ. ತೂಕದ ಐವತ್ತು ಸ್ಥೂಲಕಾಯದವರಿಗೆ ಕೇವಲ 6 ತಿಂಗಳ ಅವದಿಯಲ್ಲಿ 50ರಿಂದ 60 ಕೆ.ಜಿ.ಗಳಷ್ಟು ತೂಕ ಇಳಿಸಿ ಮತ್ತೆ ಲಿಮ್ಕಾ ರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾದರು.

2006: ನ್ಯಾಯಾಧೀಶರಿಗೆ ಮೈಲಾರ್ಡ್ ಎಂದು ಸಂಬೋಧಿಸುವುದನ್ನು ನಿಲ್ಲಿಸಿ ಗೌರವಾನ್ವಿತ ನ್ಯಾಯಾಲಯ ಅಥವಾ ಸರ್ ಪದ ಬಳಕೆಯ ತೀರ್ಮಾನವನ್ನು ರಾಜ್ಯ ವಕೀಲರ ಸಂಘದ ಸಭೆ ಕೈಗೊಂಡಿತು. ಅಖಿಲ ಭಾರತ ವಕೀಲರ ಸಂಘವೂ ಇಂತಹ ತೀರ್ಮಾನ ಕೈಗೊಂಡಿದ್ದು, ಎಲ್ಲ ಸಂಘಗಳ ಅಭಿಪ್ರಾಯದ ಬಳಿಕ ಅಂತಿಮ ತೀರ್ಮಾನ ಆಗುವುದು. ನ್ಯಾಯಾಧೀಶರನ್ನು ಮೈಲಾರ್ಡ್ ಎಂದು ಸಂಬೋಧಿಸುವ ಸಂಪ್ರದಾಯ ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಇದನ್ನು ವಕೀಲರ ಸಂಘ ನಿರ್ಧರಿಸಬೇಕು ಎಂದು ಹೇಳಿತ್ತು. ರಾಜ್ಯದಲ್ಲಿ 1976ರಲ್ಲೇ ಬಗ್ಗೆ ತೀರ್ಮಾನವಾಗಿತ್ತು. ಆದರೆ ನ್ಯಾಯವಾದಿಯೊಬ್ಬರು ತುಂಬಿದ ನ್ಯಾಯಾಲಯದಲ್ಲಿ ಮೈ ಲಾರ್ಡ್ ನಿಮ್ಮನ್ನು ಮೈಲಾರ್ಡ್ ಎಂದು ಸಂಬೋಧಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಬಿದ್ದಿತ್ತು.

2006: ಹದಿನೇಳು ವರ್ಷಗಳ ಹಿಂದೆ 1989ರಲ್ಲಿ ನಡೆದ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ ಮಹಮ್ಮದ್ ಸಯೀದ್ ಪುತ್ರಿ ರುಬಿಯಾ ಸಯೀದ್ ಅವರ ವಿವಾದಾತ್ಮಕ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳ ಪೈಕಿ 6 ಜನರ ವಿರುದ್ಧ ಜಮ್ಮು ಕಾಶ್ಮೀರದ ವಿಶೇಷ ಟಾಡಾ ಮತ್ತು ಪೋಟಾ ನ್ಯಾಯಾಲಯ ಜಾಮೀನುರಹಿತ ಬಂಧನ ಆದೇಶಗಳನ್ನು ಹೊರಡಿಸಿತು. ಜಮ್ಮುವಿನ ಟಾಡಾ/ಪೋಟಾ ವಿಶೇಷ ನ್ಯಾಯಾಲಯದ ಅಧ್ಯಕ್ಷ ಎನ್. ಡಿ. ವಾನಿ ಅವರು ಜಾವೇದ್ ಮೀರ್, ಮಹಮ್ಮದ್ ರಫೀಕ್ ಪಹ್ಲೂ, ವಜಾಹತ್ ಶಬೀರ್, ಮೆಹ್ರಾಜ್-ಉದ್- ದಿನ್, ಇಕ್ಬಾಲ್ ಬಂಡು ಮತ್ತು ಯಾಕೂಬ್ ಪಂಡಿತ್ ಅವರ ವಿರುದ್ಧ ಬಂಧನ ವಾರಂಟ್ಗಳನ್ನು ಹೊರಡಿಸಿದರು. ರುಬಿಯಾ ಬಿಡುಗಡೆ ಸಲುವಾಗಿ ಆಗಿನ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಜೆ. ಕೆ. ಎಲ್. ಎಫ್ ಉಪ ದಂಡನಾಯಕ ಅಬ್ದುಲ್ ಹಮೀದ್ ಷೇಕ್ ಸೇರಿದಂತೆ ಐವರು ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತ್ತು.

2006: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ `ಗರ್ವ್ - ಪ್ರೈಡ್ ಅಂಡ್ ಆನರ್' ಚಿತ್ರದಲ್ಲಿ ನಟಿಸಿದ್ದಕ್ಕಾಗಿ ತನಗೆ ಬರಬೇಕಾಗಿದ್ದ 26.42 ಲಕ್ಷ ರೂಪಾಯಿಗಳ ಸಂಭಾವನೆ ವಸೂಲಿಗಾಗಿ ಚಿತ್ರ ನಟ ಸಲ್ಮಾನ್ ಖಾನ್ ಸಿನೆವಿಸ್ಟಾಸ್ ಲಿಮಿಟೆಡ್ಡಿನ ನಿರ್ದೇಶಕರಾದ ಸುನಿಲ್ ಮೆಹ್ತಾ ಮತ್ತು ಪ್ರೇಮ್ ಕಿಷನ್ ವಿರುದ್ಧ ಮುಂಬೈಯ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ 8 ಕ್ರಿಮಿನಲ್ ಮೊಕ್ದದಮೆಗಳನ್ನು ದಾಖಲಿಸಿದರು. `ಗರ್ವ್ ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕನಟನ ಪಾತ್ರ ವಹಿಸಿದ್ದರು. ಅವರಿಗೆ 26.42 ಲಕ್ಷ ರೂಪಾಯಿ ಸಂಭಾವನೆಯ ಭರವಸೆ ನೀಡಲಾಗಿತ್ತು. ಸಂಬಂಧ 8 ಚೆಕ್ಕುಗಳನ್ನುನೀಡಲಾಗಿತ್ತು. ಆದರೆ ಅವೆಲ್ಲವೂ ಬ್ಯಾಂಕಿನಲ್ಲಿ ತಿರಸ್ಕೃತಗೊಂಡಿದ್ದವು. ಸಂಬಂಧ ಕಳುಹಿಸಿದ ನೋಟಿಸಿಗೆ ಉತ್ತರ ಬಾರದೇ ಹೋದಾಗ ಸಲ್ಮಾನ್ ಖಾನ್ ನ್ಯಾಯಾಲಯದ ಮೆಟ್ಟಲೇರಿದರು.

1993: ಇಪ್ಪತ್ತೊಂಬತ್ತು ಮಹಡಿಗಳ ಮುಂಬೈ ಷೇರು ವಿನಿಮಯ ಕಟ್ಟಡ ಮತ್ತು ಏರ್ ಇಂಡಿಯಾ ಕಟ್ಟಡ ಸೇರಿದಂತೆ ಮುಂಬೈಯಲ್ಲಿ ಹಲವೆಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು. ಸ್ಫೋಟಗಳಲ್ಲಿ 317 ಜನ ಮೃತರಾಗಿ 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈಯಲ್ಲಿ ಸ್ಫೋಟಗಳಿಂದಾಗಿ 250 ಮಿಲಿಯನ್ ಡಾಲರುಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತು.

1954: ನವದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು.

1949: ಚಿತ್ರಕಲಾವಿದ, ಕಲಾ ಸಂಘಟಕ, ಕಲಾಶಿಕ್ಷಕರಾದ ಗಣೇಶ ಸೋಮಯಾಜಿ ಅವರು ಬಿ. ಸುಬ್ರಾಯ ಸೋಮಯಾಜಿ- ಶಾರದಮ್ಮ ದಂಪತಿಯ ಮಗನಾಗಿ ಬಂಟ್ವಾಳದಲ್ಲಿ ಜನಿಸಿದರು.

1932: ಕಲಾವಿದ ಈಶ್ವರಪ್ಪ ಶಾಸ್ತ್ರಿ ಜಿ.ಆರ್. ಜನನ.

1930: ಮಹಾತ್ಮಾ ಗಾಂಧಿಯವರು ಉಪ್ಪು ಉತ್ಪಾದನಯಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಬ್ರಿಟಿಷ್ ಕಾನೂನು ಉಲ್ಲಂಘಿಸಲು 240 ಮೈಲು ದೂರದ `ದಾಂಡಿಯಾತ್ರೆ' ಪ್ರತಿಭಟನೆಗೆ ಚಾಲನೆ ನೀಡಿದರು.

1925: ಚೀನಾದ ಕುವೋಮಿಂಟಾಂಗ್ನ (ನ್ಯಾಷನಲಿಸ್ಟ್ ಪಾರ್ಟಿ) ಕ್ರಾಂತಿಕಾರಿ ನಾಯಕ ಸನ್ ಯಾತ್-ಸೆನ್ ಅವರು ಪೆಕಿಂಗಿನಲ್ಲಿ ತಮ್ಮ 58ನೇ ವಯಸಿನಲ್ಲಿ ಮೃತರಾದರು. ಆಧುನಿಕ ಚೀನಾದ ಜನಕ ಎಂದೇ ಇವರು ಖ್ಯಾತರಾಗಿದ್ದಾರೆ.

1888: ಕಲಾವಿದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಜನನ.

1868: ಅಡಾಲ್ಫ್ ಸೈಮನ್ ಓಚ್ಸ್ (1868-1935) ಹುಟ್ಟಿದ ದಿನ. ಅಮೆರಿಕನ್ ಪ್ರಕಾಶಕನಾದ ಈತ `ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯನ್ನು ವಿಶ್ವದ ಪ್ರತಿಷ್ಠಿತ ಸುದ್ದಿ ಪತ್ರಿಕೆಗಳಲ್ಲಿ ಒಂದನ್ನಾಗಿ ಬೆಳೆಸಿದ.

1864: ಡಬ್ಲ್ಯೂ ಎಚ್ ಆರ್ ರಿವರ್ಸ್ (1864-1922) ಹುಟ್ಟಿದ ದಿನ. ಇಂಗ್ಲಿಷ್ ವೈದ್ಯಕೀಯ ಮನಃಶಾಸ್ತ್ರಜ್ಞನಾದ ಈತ ಭಾರತದ ತೋಡರ ಕುರಿತ ಅಧ್ಯಯನಕ್ಕಾಗಿ ಖ್ಯಾತಿ ಪಡೆದ.

1832: ಚಾರ್ಲ್ಸ್ ಕನ್ಹಿಂಗ್ಹ್ಯಾಮ್ ಬಾಯ್ಕಾಟ್ (1832-1897) ಹುಟ್ಟಿದ ದಿನ. ಬ್ರಿಟಿಷ್ ಸೇನಾಕ್ಯಾಪ್ಟನ್ ಆದ ಈತನ ಹೆಸರಿನಿಂದಲೇ `ಬಾಯ್ಕಾಟ್' (ಬಹಿಷ್ಕಾರ) ಶಬ್ದ ಹುಟ್ಟಿಕೊಂಡಿತು.

1831: ಕ್ಲೆಮೆಂಟ್ ಸ್ಟುಡ್ ಬೇಕರ್ (1831-1901) ಹುಟ್ಟಿದ ದಿನ. ಅಮೆರಿಕದ ವ್ಯಕ್ತಿ ಕುದುರೆ ಎಳೆಯುವ ವಾಹನಗಳ ಬಹುದೊಡ್ಡ ಉತ್ಪಾದಕನಾಗಿ ಜಾಗತಿಕ ಖ್ಯಾತಿ ಪಡೆದ. ಮುಂದೆ ಆಟೋಮೊಬೈಲುಗಳ ಉತ್ಪಾದನೆಯಲ್ಲೂ ಮುಂಚೂಣಿಯ ನಾಯಕನಾಗಿ ಬೆಳೆದ.
(
ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement