Friday, March 12, 2010

ನಾವೂ ನಿಮ್ಮ ಜೊತೆಗಿದ್ದೇವೆ...We too are with You...

ನಾವೂ ನಿಮ್ಮ ಜೊತೆಗಿದ್ದೇವೆ...

ಗುರುವಾರ 11 ಮಾರ್ಚ್ 2010ರಂದು 'ಪ್ರಜಾವಾಣಿ', 'ವಿಜಯ ಕರ್ನಾಟಕ' ಸೇರಿದಂತೆ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಗಮನಾರ್ಹ ಪತ್ರವೊಂದು ಪ್ರಕಟವಾಯಿತು. ಬಹುಶಃ ಪತ್ರಿಕೆಗಳು ಇಂತಹ ಮಹತ್ವದ ವಿಚಾರಕ್ಕೆ ಈ ರೀತಿಯಾಗಿ ಸ್ಪಂದಿಸಿ ಮಹತ್ವ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನಬಹುದು. ಅದಕ್ಕೂ ಹೆಚ್ಚಾಗಿ ಪತ್ರಿಕೆಗಳು ಮಾಡಲೇಬೇಕಾಗಿದ್ದ ಕೆಲಸ ಇದು.

ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಗಮನ ಸೆಳೆದು ಬರೆದ ಈ ಪತ್ರಕ್ಕೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಗಣ್ಯರು ಸಹಿ ಹಾಕಿದ್ದಾರೆ.

* ಡಾ. ಜಿ. ಎಸ್. ಶಿವರುದ್ರಪ್ಪ, ಕವಿ * ನ್ಯಾ. ಎಂ. ರಾಮಾ ಜೋಯಿಸ್, ರಾಜ್ಯಸಭಾ ಸದಸ್ಯರು * ಡಾ. ಚಂದ್ರಶೇಖರ ಕಂಬಾರ, ಸಾಹಿತಿ * ಡಾ. ರಾಜೀವ ತಾರಾನಾಥ, ಸಂಗೀತ ಗಾರರು * ಪ್ರೊ. ಬಿ.ಎಂ. ಕುಮಾರಸ್ವಾಮಿ, ರಾಷ್ಟ್ರೀಯ ಸಹ ಸಂಚಾಲಕರು, ಸ್ವದೇಶಿ ಜಾಗರಣ ಮಂಚ್ * ನಾಗೇಶ ಹೆಗಡೆ, ಪತ್ರಕರ್ತ * ಎ.ಎನ್. ಯೆಲ್ಲಪ್ಪ ರೆಡ್ಡಿ, ಅರಣ್ಯ ಅಧಿಕಾರಿ (ನಿವೃತ್ತ) *ಬರಗೂರು ರಾಮಚಂದ್ರಪ್ಪ, ಸಾಹಿತಿ *ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ವೊಂಬತ್‌ಕೆರೆ, ಅಧ್ಯಕ್ಷರು, ಮೈಸೂರು ಗ್ರಾಹಕರ ಪರಿಷತ್ * ವೈ.ಬಿ. ರಾಮಕೃಷ್ಣ, ಅಧ್ಯಕ್ಷರು, ಸಮಗ್ರ ವಿಕಾಸ * ಶಂಕರ ಶರ್ಮ, ವಿದ್ಯುತ್ ರಂಗದ ವಿಶ್ಲೇಷಕರು *ಜಿ. ಕೃಷ್ಣ ಪ್ರಸಾದ, ಸಹಜ ಸಮೃದ್ಧ ಸಾವಯವ ಕೃಷಿ ಸಮೂಹ *ಬೇಳೂರು ಸುದರ್ಶನ, ಫ್ರೀಲ್ಯಾನ್ಸ್ ಪತ್ರಕರ್ತ-

ಪತ್ರಕ್ಕೆ ಸಹಿ ಹಾಕಿದ ಎಲ್ಲ ಗಣ್ಯರ ಜೊತೆಗೆ ಕೇವಲ ಅವರಷ್ಟೇ ಅಲ್ಲ ಕರ್ನಾಟಕದ ರೈತರು ಸೇರಿದಂತೆ ಎಲ್ಲ ವರ್ಗಗಳ ಜನರೂ ಇದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಗಮನಿಸಬೇಕು.

ಮುಖ್ಯಮಂತ್ರಿಗಳೇ ಜನರ ದೂರುಗಳಿಗೆ ಸ್ಪಂದಿಸುವ ಗುಣ ತಮ್ಮದು ಎಂದು ಹಲವಾರು ಬಾರಿ ನೀವು ನಡವಳಿಕೆಗಳ ಮೂಲಕ ತೋರಿಸಿಕೊಟ್ಟಿದ್ದೀರಿ. ಇಂದು ವಿದ್ಯುತ್ತಿನ ಅಭಾವದಿಂದ ರೈತರಿಂದ ಹಿಡಿದು ಉದ್ಯಮಿಗಳವರೆಗೆ, ವಿದ್ಯಾರ್ಥಿಗಳಿಂದ ಹಿಡಿದು ವರ್ತಕರವರೆಗೆ ಎಲ್ಲ ವರ್ಗದ ಜನರೂ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ತಮಗೆ ಬರೆದ ಈ ಬಹಿರಂಗ ಪತ್ರ ಸಮಸ್ಯೆಯ ಚಿತ್ರ ತೆರೆದು ಇಡುವುದರ ಜೊತೆಗೆ ಮಾಡಬೇಕಾದ ಕಾರ್ಯದ ಬಗೆಗೂ ಬೆಳಕು ಚೆಲ್ಲಿದೆ. ಜೈವಿಕ ಇಂಧನ, ಸೌರಶಕ್ತಿ, ಪವನಶಕ್ತಿ, ಕಿರು ಇಂಧನ ಘಟಕಗಳ ಸ್ಥಾಪನೆಯಂತಹ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯದ ಬಗ್ಗೆ ಪತ್ರ ಬೊಟ್ಟು ಮಾಡಿದೆ.

ಇಲ್ಲಿ ಈ ಪತ್ರಗಳಿಗೆ ಮತ್ತೊಮ್ಮ ಕೊಂಡಿ (LINK) ಸಂಪರ್ಕ ನೀಡಿ, ತಮ್ಮ ಗಮನವನ್ನು ಪುನಃ ಸೆಳೆಯಲು ಪರ್ಯಾಯ ಯತ್ನಿಸುತ್ತಿದೆ. ಈ ಬಗ್ಗೆ ತಾವು ತತ್ ಕ್ಷಣವೇ ಕ್ರಿಯಾಶೀಲರಾಗಬೇಕಾಗಿ ಮನವಿ ಮಾಡುತ್ತದೆ.

No comments:

Advertisement