ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್ ಭರವಸೆ
ಬೆಂಗಳೂರು: ಡಿಜಿಟಲ್ ಪರಿವರ್ತನೆಯ ಮೂಲಕ ಗ್ರಾಮ
ಪಂಚಾಯತಿಗಳ ಸಾಮರ್ಥ್ಯ ವೃದ್ಧಿಗಾಗಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ಎನ್‌ಎಲ್‌ಟಿ- ನ್ಯಾವಿಗೇಟೆಡ್
ಲರ್ನಿಂಗ್ ಟೆಕ್ನಾಲಜಿ) ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಯೋಜನೆಗೆ ಬೆಂಬಲ ವ್ಯಕ್ತ
ಪಡಿಸಿರುವ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಯೋಜನೆಯನ್ನು ಸರ್ಕಾರದ ಮುಂದಿನ ಮುಂಗಡ
ಪತ್ರದಲ್ಲಿ ಅಳವಡಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.
ನಗರದ ಅರಮನೆ ಮೈದಾನದ ಕೆ.ಸಿ. ಕ್ಲಬ್ ಆವರಣದಲ್ಲಿ
ಕೃಷಿ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘ ʼಅಗ್ರಿ ಬೆಸ್ಟ್ ಕ್ಲಬ್-75ʼ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು
ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ ಡಿ ಪಿಆರ್) ಸಚಿವರ ಜೊತೆಗೆ ಮಾತನಾಡುವುದಾಗಿ
ಭರವಸೆ ನೀಡಿದರು.
ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಪೂರ್ಣ
ಸ್ವರಾಜ್ ಫೌಂಡೇಶನ್ ಸಂಸ್ಥಾಪಕ ಹಾಗೂ ನಿರ್ವಾಹಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್ ಅವರು ಗ್ರಾಮೀಣ
ಪ್ರದೇಶಗಳಲ್ಲಿ ಡಿಜಿಟಲ್ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಎನ್ ಎಲ್ ಟಿ ಮತ್ತು
ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ನೀಡಿದ ಪ್ರಾತ್ಯಕ್ಷಿಕೆಯನ್ನು ಸಚಿವರು ಮೆಚ್ಚಿಕೊಂಡರು.
ಇಂತಹ ಉಪಕ್ರಮಗಳು ಗ್ರಾಮೀಣ ಸಮುದಾಯಗಳಲ್ಲಿ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ನುಡಿದರು. ಕೃಷಿ ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘವು ಈ ವಿಚಾರಗಳನ್ನು ತನ್ನ ಕಾರ್ಯಕ್ಷೇತ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ
ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಪರಿವರ್ತನೆಯ ಮೂಲಕ ಸಾಮರ್ಥ್ಯ ವೃದ್ಧಿಗಾಗಿ ಸೀಮಾತೀತ ತಂತ್ರಜ್ಞಾನಗಳನ್ನು
ಬಳಸುವ ನಿಟ್ಟಿನಲ್ಲಿ ಸಂಪೂರ್ಣ ಸ್ವರಾಜ್ ಫೌಂಡೇಶನ್ ಕೈಗೊಂಡಿರುವ ಉಪಕ್ರಮಗಳನ್ನು ಡಾ. ಶಂಕರ ಪ್ರಸಾದ್
ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಗ್ರಾಮ ಪಂಚಾಯಿತಿಯಂತಹ ಬುಡ ಮಟ್ಟದ ಸಂಸ್ಥೆಗಳನ್ನು ಬಲ ಪಡಿಸುವುದು, ಬಡತನ, ಸ್ವಚ್ಛತೆ, ಶುದ್ಧ ನೀರು, ನೈರ್ಮಲ್ಯ, ಆಹಾರ ಭದ್ರತೆ, ಆರೋಗ್ಯ ಮತ್ತು ಶಿಕ್ಷಣದಂತಹ ಸ್ಥಳೀಯ ವಿಷಯಗಳನ್ನು ಡಿಜಿಟಲ್ ಪರಿವರ್ತನೆಯ ಮೂಲಕ ನಿಭಾಯಿಸಬಹುದಾದ ಬಗೆಯ ಬಗ್ಗೆ ಅವರು ವಿವರ ನೀಡಿದರು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಸಾಧನೆಗೂ ಈ ತಂತ್ರಜ್ಞಾನಗಳ ಬಳಕೆಯ ಕುರಿತು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾತಂತ್ರದ
ಪುನಸ್ಥಾಪನೆ ಹಾಗೂ ಭ್ರಷ್ಟಾಚಾರದ ಚಕ್ರವ್ಯೂಹ ಕುರಿತ
ಪುಸ್ತಕಗಳನ್ನೂ ಅವರು ಸಚಿವರಿಗೆ ಅರ್ಪಿಸಿದರು.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅಗ್ರಿ ಬೆಸ್ಟ್ ಕ್ಲಬ್-75ರ ಸ್ವರ್ಣ ಮಹೋತ್ಸವವನ್ನು 2025ರಲ್ಲಿ ಆಚರಿಸುವ ಬಗ್ಗೆ ಸದಸ್ಯರು ಚರ್ಚಿಸಿದರು. ಸಂಘದ ಅಧ್ಯಕ್ಷ ಕೆ. ಎನ್. ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇವುಗಳನ್ನೂ ಓದಿರಿ:
No comments:
Post a Comment