ಬೆಂಗಳೂರಿಗೆ ಬಂತು ʼಕಸ ಸುರಿಯುವ ಹಬ್ಬʼ!
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ
ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ. ಹೀಗೆ ಕಸ
ಎಸೆಯಬಾರದೆಂದು ಎಷ್ಟು ಜಾಗೃತಿ ಮೂಡಿಸಿದರೂ ವ್ಯರ್ಥ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ)
ಕಸ ವಿಲೇವಾರಿ ವಾಹನಗಳು ಬಂದು ಕಸ ಎತ್ತಿಕೊಂಡು ಹೋದ ಮರುಕ್ಷಣದಲ್ಲೇ ಅಲೊಂದಷ್ಟು ಕಸದ ಚೀಲಗಳು ಬಂದು
ಬಿದ್ದು ಬಿಡುತ್ತವೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಯ ಸಮಯ. ಎಂದಿನಂತೆ ವ್ಯಕ್ತಿಯೊಬ್ಬ
ಕಸದ ಚೀಲ ಹಿಡಿದುಕೊಂಡು ಕಸ ಎಸೆಯಲೆಂದು ಬಂದಿದ್ದ. ಅದೇ ಹೊತ್ತಿಗೆ ಜಿಬಿಎ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಯ
ಜೊತೆಗೆ ಮಾರ್ಷಲ್ ಗಳು ಪ್ರತ್ಯಕ್ಷ. ಪ್ರತಿದಿನ ಬೆಳಗ್ಗೆ 9 ಗಂಟೆಯ ಒಳಗೆ ಕಸದ ಗಾಡಿ ಬರುತ್ತದೆ.
ಅದಕ್ಕೆ ಕಸ ಕೊಡುವ ಬದಲು ಹೀಗೆ ಬಂದು ಕಸ ಎಸೆಯುತ್ತೀರಲ್ಲ? ಏಕೆ? ಎಂಬ ಪ್ರಶ್ನೆಗಳ ಸುರಿಮಳೆ ಅವರಿಂದ
ಕಸ ಎಸೆಯುವ ವ್ಯಕ್ತಿಗೆ.
ಆತ ಮಾತನಾಡಲಿಲ್ಲ. ʼಬನ್ನಿ ನಿಮ್ಮ ಮನೆಗೇ ಬರುತ್ತೇವೆʼ ಅಂತ ಹೇಳಿ ಅವರೆಲ್ಲ ಆತನ ಮನೆಯ
ಎದುರಿಗೇ ಬಂದರು. ಅವರ ಜೊತೆಗೆ ಕಸ ತುಂಬಿದ ಗಾಡಿ ಕೂಡಾ. ಆತ ನೋಡ ನೋಡುತ್ತಿದ್ದಂತೆಯೇ ಮನೆಯ ಮುಂದೆ
ಗಾಡಿಯಲ್ಲಿದ್ದ ಕಸ ಸುರಿದರು. ನೋಡಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಇದೇ ಗತಿ. ನಿಮ್ಮ
ಮನೆ ಮುಂದೆಯೇ ಬಂದು ಕಸ ಸುರಿಯುತ್ತೇವೆ. ಜೊತೆಗೆ ದಂಡ ಕೂಡಾ.
ಸ್ವಲ್ಪ ಹೊತ್ತಿನ ಬಳಿಕ ಜಿಬಿಎ ಸಿಬ್ಬಂದಿಯೇ ಆ ಕಸವನ್ನು ತೆಗೆದರು. ಇಂತಹ ಘಟನೆ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಮಾತ್ರವೇ ಅಲ್ಲ. ಬೆಂಗಳೂರಿನಾದ್ಯಂತ ಹಲವಡೆಗಳಲ್ಲಿ 2025 ಅಕ್ಟೋಬರ್ 30ರ ಗುರುವಾರ ನಡೆಯಿತು. ಇದಕ್ಕೆ ʼಕಸ ಸುರಿಯುವ ಹಬ್ಬʼ ಎಂದೇ ಕರೆಯಲಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಗ್ರೇಟರ್
ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಬದಲಾದ ಬಳಿಕ ಘನ ತ್ಯಾಜ್ಯ ನಿರ್ವಹಣೆಯ ಹೊಣೆಯನ್ನು
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಇದಕ್ಕೆ ವಹಿಸಲಾಗಿದೆ.
ಜನರಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಅಭ್ಯಾಸದ ವಿರುದ್ಧ ಜಾಗೃತಿ ಮೂಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು
ಎಂಬ ಕಾರಣಕ್ಕಾಗಿಯೇ ಜಿಬಿಎ ಜೊತೆಗೆ ಬಿಎಸ್ ಡಬ್ಲ್ಯೂಎಂಎಲ್ ಸೇರಿಕೊಂಡೇ ಈ ʼಕಸ ಸುರಿಯುವ ಹಬ್ಬʼವನ್ನು ಸಂಘಟಿಸಿತ್ತು.
ಬೆಂಗಳೂರಿನ ಹಲವೆಡೆಗಳಲ್ಲಿ ಹಲವಾರು ಮಂದಿ ಕಸ ಎಸೆಯುವವರಿಗೆ
ಈದಿನ ಈ ಆಘಾತ ತಟ್ಟಿತು. ಪುನರಾವರ್ತಿತ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಸಾರ್ವಜನಿಕ ಪ್ರದೇಶಗಳಲ್ಲಿ,
ರಸ್ತೆಗಳಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲೇಂದೇ ಇಂತಹ ಕಠಿಣ ಉಪಕ್ರಮ ಕೈಗೊಳ್ಳಲು ಬೆಂಗಳೂರು
ಘನತ್ಯಾಜ್ಯ ನಿರ್ವಹಣೆ ನಿಯಮಿತ ನಿರ್ಧರಿಸಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಹೇಳಿದ್ದಾರೆ.
ಈ ಉಪಕ್ರಮದ ಪ್ರಕಾರ, ನಗರ
ಮಾರ್ಷಲ್‌ಗಳು ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯುವವರ ವಿಡಿಯೋಗಳನ್ನು ರೆಕಾರ್ಡ್
ಮಾಡುತ್ತಾರೆ. ಗುರುತಿಸಿದ ನಂತರ, ಅಪರಾಧಿಗಳ ಮನೆಗಳನ್ನು ಪತ್ತೆಹಚ್ಚಿ, ಟ್ರಕ್
ಲೋಡ್‌ನಷ್ಟು ಕಸವನ್ನು ಅವರ ಮನೆ ಬಾಗಿಲಿಗೆ ಸುರಿಯಲಾಗುತ್ತದೆ.
ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡು, ಪದೇ
ಪದೇ ತಪ್ಪೆಸಗುವವರ ಹೆಸರುಗಳನ್ನು ಬಹಿರಂಗಪಡಿಸಿ ಅವರು ನಾಚಿಕೆ ಪಡುವಂತೆ ಮಾಡಲಾಗುತ್ತದೆ.
"ಮಾರ್ಷಲ್‌ಗಳು
ಈಗಾಗಲೇ ಅಂತಹ ಉಲ್ಲಂಘನೆಗಳನ್ನು ದಾಖಲಿಸಲು ಸಿದ್ಧರಾಗಿದ್ದಾರೆ. ಕಸವನ್ನು ಸುರಿದ ಕೆಲವೇ ಗಂಟೆಗಳ
ನಂತರ ಅದನ್ನು ತೆರವುಗೊಳಿಸಲಾಗುತ್ತದೆ, ಆದರೆ ಅಪರಾಧಿಗಳಿಗೆ 2,000 ರೂಪಾಯಿಯಿಂದ 10,000 ರೂಪಾಯಿವರೆಗೆ ದಂಡ
ವಿಧಿಸಲಾಗುತ್ತದೆ. ಯಾವುದೇ ವಾದಗಳಿಗೆ ಅವಕಾಶವಿರುವುದಿಲ್ಲ, ನಾವು ಅವರಿಗೆ ವಿಡಿಯೋ
ಸಾಕ್ಷ್ಯವನ್ನು ತೋರಿಸುತ್ತೇವೆ"
ಎನ್ನುತ್ತಾರೆ ಕರೀಗೌಡ.
"ಬೆಂಗಳೂರನ್ನು ಸ್ವಚ್ಛವಾಗಿಡಲು ನಾವು ನಿರ್ಧರಿಸಿದ್ದೇವೆ, ಇನ್ನು ಮುಂದೆ ಕಸ ಎಸೆಯುವವರ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಇರುತ್ತದೆ" ಎಂದೂ ಅವರು ಎಚ್ಚರಿಸಿದ್ದಾರೆ.
ಶ್ರಿ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದ ಕಸ ಸುರಿಯುವ ಹಬ್ಬದ
ವಿಡಿಯೋ ಇಲ್ಲಿದೆ. ಇದರೊಂದಿಗೆ ಇನ್ ಸ್ಟಾಗ್ರಾಮ್ ನಲ್ಲಿ ಬೆಂಗಳೂರು ಬ್ರೊ ಪ್ರಕಟಿಸಿದ ವಿಡಿಯೋ
ಕೂಡಾ ಇಲ್ಲಿದೆ.
ʼಕಸ ಸುರಿಯುವ ಹಬ್ಬʼ ಉಪಕ್ರಮ ಬೆಂಗಳೂರಿನಲ್ಲಿ ಸ್ವಚ್ಛತೆ ಬಯಸುವ ನಾಗರಿಕರಿಗೆಲ್ಲ
ಖುಷಿಯನ್ನು ಕೊಟ್ಟಿದೆ. ಬಹುತೇಕ ಮಂದಿ ಇದನ್ನು ಮೆಚ್ಚಿದ್ದಾರೆ. ಹಾಗೆಯೇ ಇದು ಕೇವಲ ಪ್ರಚಾರದ ಪರಿಯಾಗದಿರಲಿ,
ನಿತ್ಯಾನುಷ್ಠಾನದ ಉಪಕ್ರಮವಾಗಲಿ ಎಂದು ಹಾರೈಸಿದ್ದಾರೆ.


No comments:
Post a Comment