Showing posts with label Science. Show all posts
Showing posts with label Science. Show all posts

Monday, September 7, 2026

ಹಳೆಯ ಡೀಸೆಲ್ ಲಾರಿಗಳಿಗೆ ಹೊಸ ಜೀವ: ಐಐಟಿ-ದೆಹಲಿಯ ಕ್ರಾಂತಿಕಾರಿ ಸಂಶೋಧನೆ

 ಹಳೆಯ ಡೀಸೆಲ್ ಲಾರಿಗಳಿಗೆ ಹೊಸ ಜೀವ..

 ಐಐಟಿ-ದೆಹಲಿಯ ಕ್ರಾಂತಿಕಾರಿ ಸಂಶೋಧನೆ
ರಾಮಣ್ಣನಿಗೆ ತನ್ನ ಹಳೆಯ ಟ್ರಕ್ ಎಂದರೆ ಪ್ರಾಣಕ್ಕಿಂತ ಹೆಚ್ಚು. ಕಳೆದ ಹದಿನೈದು ವರ್ಷಗಳಿಂದ ಈ ಲಾರಿಯೇ ಆತನ ಕುಟುಂಬದ ಏಕೈಕ ಆಧಾರ. ದೇಶದ ಮೂಲೆ ಮೂಲೆಗೆ ಸರಕು ಸಾಗಿಸಿ ಬರುವ ಈ ವಾಹನವೇ ಆತನ ಬದುಕಿನ ಗಾಲಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಮಗಳು ಮತ್ತು ಬಿಎಸ್-ವಿಐ (BS-VI) ಕಟ್ಟುನಿಟ್ಟಿನ ಮಾನದಂಡಗಳು ರಾಮಣ್ಣನಿಗೆ ಕಣ್ಣೀರನ್ನು ತಂದಿದ್ದವು.

ಹಳೆಯ ಲಾರಿಯನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಲು ಲಕ್ಷಾಂತರ ರೂಪಾಯಿ ಬೇಕು; ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಬಡ ಲಾರಿ ಮಾಲೀಕನಾದ ಆತನಿಗೆ ಅಸಾಧ್ಯದ ಮಾತು. ಹಳೆಯ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸುವ ಸರ್ಕಾರದ ನಿಯಮಗಳು ರಾಮಣ್ಣನಂತಹ ಸಣ್ಣ ಮಾಲೀಕರ ನಿದ್ದೆಗೆಡಿಸಿದ್ದವು.

ಭಾರತದ ರಸ್ತೆಗಳಲ್ಲಿ 15 ವರ್ಷಗಳಿಗಿಂತ ಹಳೆಯದಾದ 4 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ಇದರಲ್ಲಿ ಲಕ್ಷಾಂತರ ಹಳೆಯ ಡೀಸೆಲ್ ಲಾರಿಗಳು ಮತ್ತು ಬಸ್‌ಗಳು ಸೇರಿವೆ. ಇಷ್ಟೊಂದು ದೈತ್ಯ ಸಂಖ್ಯೆಯ ವಾಹನಗಳನ್ನು ಏಕಾಏಕಿ ರಸ್ತೆಯಿಂದ ತೆಗೆದುಹಾಕುವುದು ಆರ್ಥಿಕವಾಗಿ ಹಾಗೂ ವ್ಯವಸ್ಥಾತ್ಮಕವಾಗಿ ಅಸಾಧ್ಯವಾದ ಸಂಗತಿ. ಈ ದೈತ್ಯ ಸಮಸ್ಯೆಗೆ ಐಐಟಿ-ದೆಹಲಿಯ ತಜ್ಞರು ಮ್ಯಾಜಿಕ್‌ನಂತೆ ಕೆಲಸ ಮಾಡುವ ಕಡಿಮೆ ವೆಚ್ಚದ ಪರಿಹಾರವನ್ನು ಈಗ ಕಂಡುಹಿಡಿದಿದ್ದಾರೆ.

ಐಐಟಿ-ದೆಹಲಿಯ ರಿಟ್ರೋಫಿಟ್ ತಂತ್ರಜ್ಞಾನ ಮತ್ತು ಅದರ ಕಾರ್ಯವಿಧಾನ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಕಟಿಸಿರುವಂತೆ, ಐಐಟಿ-ದೆಹಲಿ ಅಭಿವೃದ್ಧಿಪಡಿಸಿರುವ ಕೇವಲ ₹4,000 ರಿಂದ ₹5,000 ವೆಚ್ಚದ ರಿಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್ (RECD) ಎಂಬ ನೂತನ ಸಾಧನವು ಹಳೆಯ ಡೀಸೆಲ್ ವಾಹನಗಳ ಕಥೆಯನ್ನೇ ಬದಲಾಯಿಸಲು ಸಜ್ಜಾಗಿದೆ.

ಇದು ವಾಹನದ ಒಳಭಾಗದ ಎಂಜಿನನ್ನು ಬದಲಾಯಿಸುವ ದೊಡ್ಡ ಪ್ರಕ್ರಿಯೆಯಲ್ಲ, ಬದಲಿಗೆ ಹೊರಸೂಸುವಿಕೆಯನ್ನು ನಿಯಂತ್ರಿಸುವ ಒಂದು ಸುಲಭ ಉಪಾಯ. ವಾಹನದ ಸೈಲೆನ್ಸರ್ ಅಥವಾ ನಿರ್ಗಮನ ವ್ಯವಸ್ಥೆಗೆ (ಎಕ್ಸಾಸ್ಟ್ ಸಿಸ್ಟಮ್‌) ಈ ವಿಶೇಷ ಸಾಧನವನ್ನು ಅಳವಡಿಸಲಾಗುತ್ತದೆ. ಇದರೊಳಗೆ ಇಂಧನ ಆಕ್ಸಿಡೀಕರಣ ವೇಗವರ್ಧಕಗಳು ಮತ್ತು ಅತ್ಯಾಧುನಿಕ ಫಿಲ್ಟರುಗಳಿರುತ್ತವೆ. ಎಂಜಿನ್ನಿನಿಂದ ಹೊರಬರುವ ವಿಷಪೂರಿತ ಹೊಗೆಯು ಈ ಸಾಧನದ ಮೂಲಕ ಹಾಯ್ದುಹೋಗುವಾಗ, ಅಲ್ಲಿರುವ ಕಣಗಳು ಮತ್ತು ಅನಿಲಗಳು ಶುದ್ಧೀಕರಿಸಲ್ಪಡುತ್ತವೆ. ಇದರಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಹೊಗೆಯು ಅತ್ಯಂತ ನುಣ್ಣಗೆ ಮತ್ತು ಮಾಲಿನ್ಯರಹಿತವಾಗಿರುತ್ತದೆ.

ವಾಹನಗಳ ರಂಗಕ್ಕೆ ಇದು ಹೊಸದು. ಆದರೆ, ಇದರ ಮೂಲ ತತ್ವವು ಭಾರತದಲ್ಲಿ ಈಗಾಗಲೇ ಡೀಸೆಲ್ ಜನರೇಟರ್‌ಗಳಲ್ಲಿ (DG Sets) ವಾಯುಮಾಲಿನ್ಯ ನಿಯಂತ್ರಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಅನುಮೋದನೆಯೊಂದಿಗೆ ಯಶಸ್ವಿಯಾಗಿ ಬಳಕೆಯಲ್ಲಿದೆ. ಈಗ ಇದೇ ತಂತ್ರಜ್ಞಾನವನ್ನು ಪರಿಷ್ಕರಿಸಿ ವಾಹನಗಳಿಗೂ ವಿಸ್ತರಿಸಲಾಗುತ್ತಿದೆ.

ವೆಚ್ಚದ ಅಂದಾಜು ತುಲನೆ: ಹೊಸ ವಾಹನ vs ರಿಟ್ರೋಫಿಟ್

  • ಹೊಸ ವಾಹನ ಖರೀದಿ ಮತ್ತು ಗುಜರಿ ಪ್ರಕ್ರಿಯೆ: ಒಂದು ಹಳೆಯ ವಾಣಿಜ್ಯ ಲಾರಿ ಅಥವಾ ಬಸ್ಸನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ವಾಹನ ಖರೀದಿಸಲು ಕನಿಷ್ಠ ₹15 ರಿಂದ ₹30 ಲಕ್ಷಕ್ಕೂ ಹೆಚ್ಚು ಬೇಕಾಗುತ್ತದೆ. ಸಾಲ ಮಾಡಿ ಬದುಕು ನಡೆಸುವ ಲಾರಿ ಮಾಲೀಕರಿಗೆ ಇದು ಅಸಾಧ್ಯವಾದ ಹೊರೆ.
  • ರಿಟ್ರೋಫಿಟ್ ತಂತ್ರಜ್ಞಾನದ ವೆಚ್ಚ: ಇದಕ್ಕೆ ತದ್ವಿರುದ್ಧವಾಗಿ, ಎಂಜಿನ್ ಬದಲಾಯಿಸದೆ ಕೇವಲ ₹4,000 ರಿಂದ ₹5,000 ವೆಚ್ಚದಲ್ಲಿ ಸೈಲೆನ್ಸರಿಗೆ ಈ ಸಾಧನವನ್ನು ಅಳವಡಿಸುವುದರಿಂದ ವಾಹನವನ್ನು ಪರಿಸರಸ್ನೇಹಿಯಾಗಿ ನವೀಕರಿಸಬಹುದು.

ಈ ತಂತ್ರಜ್ಞಾನ ತರುವ ಕ್ರಾಂತಿಕಾರಿ ಬದಲಾವಣೆಗಳು

  • ಮಾಲಿನ್ಯಕ್ಕೆ ನೇರ ಕಡಿವಾಣ: ಹಳೆಯ ಬಿಎಸ್-Ⅲ ಮತ್ತು ಬಿಎಸ್-Ⅳ ವಾಹನಗಳಿಂದ ಹೊರಹೊಮ್ಮುವ ಹಾನಿಕಾರಕ ಕಣಗಳನ್ನು (PM) ಶೇಕಡಾ 90ರಷ್ಟು ಹಾಗೂ ಸಾರಜನಕ ಆಕ್ಸೈಡನ್ನು (NOx) ಶೇಕಡಾ 60ರಷ್ಟು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ.
  • ಬಿಎಸ್-VI (BS-VI) ಮಟ್ಟದ ಗುಣಮಟ್ಟ: ಲಕ್ಷಾಂತರ ರೂಪಾಯಿ ಖರ್ಚು ಮಾಡದೆಯೇ, ಪರೀಕ್ಷೆಗಳಿಂದ ಸಾಬೀತಾದಂತೆ ಹಳೆಯ ವಾಹನಗಳ ಹೊಗೆಯ ಗುಣಮಟ್ಟವನ್ನು ಅತ್ಯಾಧುನಿಕ ಬಿಎಸ್-VI ಮಟ್ಟಕ್ಕೆ ತರಬಹುದು.
  • ಸಣ್ಣ ಮಾಲೀಕರಿಗೆ ರಕ್ಷಣೆ: ಬಡ ಮತ್ತು ಮಧ್ಯಮ ವರ್ಗದ ಸಾರಿಗೆ ಉದ್ಯಮಿಗಳನ್ನು ಆರ್ಥಿಕ ದಿವಾಳಿತನದಿಂದ ಪಾರು ಮಾಡಿ, ರಾಮಣ್ಣನಂತಹ ಅಸಂಖ್ಯಾತ ಚಾಲಕರ ಬದುಕಿನ ಗಾಲಿಗಳು ನಿಲ್ಲದಂತೆ ಕಾಪಾಡುತ್ತದೆ.
  • ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆ: ಹಳೆಯ ವಾಹನಗಳು ಗುಜರಿಗೆ ಸೇರುವವರೆಗೆ ಕಾಯದೆ, ಇರುವ ವಾಹನಗಳನ್ನೇ ಕೆಲವೇ ಗಂಟೆಗಳಲ್ಲಿ ಪರಿಸರಸ್ನೇಹಿಯಾಗಿ ಪರಿವರ್ತಿಸುವ ಇದು ವಾಯುಮಾಲಿನ್ಯ ನಿಯಂತ್ರಣ ಕ್ಷೇತ್ರದಲ್ಲಿ ಒಂದು ದೊಡ್ಡ ಆಶಾಕಿರಣ ಎಂದರೆ ತಪ್ಪಲ್ಲ.

-ನೆತ್ರಕೆರೆ ಉದಯಶಂಕರ

(ವಿವಿಧ ಮೂಲಗಳಿಂದ)

Tuesday, September 2, 2025

ಇರುವೆ ಕಡಿತದ ರಹಸ್ಯ..!

 ಇರುವೆ ಕಡಿತದ ರಹಸ್ಯ..!

ಇರುವೆಗಳು ಕಚ್ಚಿದಾಗ ಚರ್ಮದ ಮೇಲೆ ಉರಿಯ ಅನುಭವ ಆಗುತ್ತದೆ. ಇದಕ್ಕೆ ಕಾರಣವೇನು?
ವಾಸ್ತವವಾಗಿ ಇರುವೆಗಳು ಕಚ್ಚುತ್ತವೆಯೇ ಅಥವಾ ಚರ್ಮದ ಮೇಲೆ ಆಸಿಡ್‌ ಬಿಡುತ್ತವೆಯೇ?

ಇರುವೆ ಕಚ್ಚಿದಾಗ ಚರ್ಮದ ಮೇಲೆ ಉರಿಯುವ ಅನುಭವ ಆಗುವುದು ಸಹಜ. ಇದಕ್ಕೆ ಪ್ರಮುಖ ಕಾರಣ ಇರುವೆಗಳು ಚರ್ಮದ ಮೇಲೆ ಒಂದು ರೀತಿಯ ಆಮ್ಲವನ್ನು (ಆಸಿಡ್‌) ಬಿಡುವುದು.

ಇರುವೆಗಳು ಕಚ್ಚಿದಾಗ ಆಗುವುದೇನು?

ವಾಸ್ತವವಾಗಿ ಇರುವೆಗಳು ನಮ್ಮನ್ನು ಕಚ್ಚುತ್ತವೆ ಮತ್ತು ಕಚ್ಚಿದ ಕೂಡಲೇ ತಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಫಾರ್ಮಿಕ್ ಆಸಿಡ್ (Formic Acid) ಎಂಬ ಆಮ್ಲವನ್ನು ಚರ್ಮದ ಮೇಲೆ ಚುಚ್ಚುತ್ತವೆ.

ಈ ಪ್ರಕ್ರಿಯೆಯನ್ನು ಹೀಗೆ ವಿವರಿಸಬಹುದು:

  1. ಕಚ್ಚುವಿಕೆ: ಮೊದಲಿಗೆ ಇರುವೆ ತನ್ನ ಬಾಯಿಯ ಭಾಗದಿಂದ (mandibles) ನಿಮ್ಮ ಚರ್ಮವನ್ನು ಹಿಡಿಯುತ್ತದೆ ಅಥವಾ ಕಚ್ಚುತ್ತದೆ.
  2. ಆಸಿಡ್ ಚುಚ್ಚುವುದು: ನಂತರ, ಇರುವೆ ತನ್ನ ಹಿಂಭಾಗದಲ್ಲಿರುವ ಒಂದು ಸಣ್ಣ ಕುಟುಕಿನ (stinger) ಮೂಲಕ ಫಾರ್ಮಿಕ್ ಆಸಿಡ್ ಅನ್ನು ಚರ್ಮದ ಒಳಗೆ ಸೇರಿಸುತ್ತದೆ.

ಈ ಫಾರ್ಮಿಕ್ ಆಸಿಡ್ ನಮ್ಮ ಚರ್ಮದ ಜೀವಕೋಶಗಳನ್ನು ಕೆರಳಿಸುತ್ತದೆ (irritates). ಇದರಿಂದಾಗಿ ನಾವು ಆ ಜಾಗದಲ್ಲಿ ತೀವ್ರವಾದ ಉರಿ, ನೋವು ಮತ್ತು ಕೆಲವೊಮ್ಮೆ ತುರಿಕೆಯನ್ನು ಅನುಭವಿಸುತ್ತೇವೆ. ಇದೇ ಕಾರಣಕ್ಕೆ ಇರುವೆ ಕಚ್ಚಿದಾಗ ಆ ಜಾಗ ಕೆಂಪಾಗುತ್ತದೆ ಮತ್ತು ಉಬ್ಬಿದಂತೆ ಕಾಣುತ್ತದೆ.

ಹಾಗಾಗಿ, ಇರುವೆ ಕೇವಲ ಕಚ್ಚುವುದಲ್ಲ, ಕಚ್ಚಿದ ಕೂಡಲೇ ತಮ್ಮ ರಕ್ಷಣಾತ್ಮಕ ಅಸ್ತ್ರವಾದ ಫಾರ್ಮಿಕ್ ಆಸಿಡ್ ಅನ್ನು ಚರ್ಮದ ಮೇಲೆ ಬಿಡುವುದರಿಂದ ನೋವು ಮತ್ತು ಉರಿ ಉಂಟಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದ ಸ್ವಾರಸ್ಯಕರ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

Sunday, April 27, 2025

ಗೊತ್ತಾ ನಿಮಗೆ ಮೋರ್ಸ್‌ ಕೋಡ್?

 ಗೊತ್ತಾ ನಿಮಗೆ ಮೋರ್ಸ್‌ ಕೋಡ್?

ಟಕ್‌ ಟಕ್‌ ಟಕ್‌ ಟಕ್‌ ಟಕ್‌ ಎಂಬ ಧ್ವನಿ ಸಂಜ್ಞೆಯ ಮೂಲಕ ಸಂದೇಶ ಅಥವಾ ಮಾಹಿತಿ ರವಾನಿಸುವ ವಿಧಾನವನ್ನು ಮೋರ್ಸ್‌ ಕೋಡ್‌ ಅಥವಾ ಮೋರ್ಸ್‌ ಸಂಜ್ಞೆ ಎಂದು ಕರೆಯುತ್ತೇವೆ. ಈ ಸಂಜ್ಞಾ ಭಾಷೆಯ ಸಂಶೋಧಕ ಸ್ಯಾಮ್ಯುಯೆಲ್‌ ಮೋರ್ಸ್.‌ ಅವರನ್ನು ಗೌರವಿಸಲು ಮತ್ತು ಈ ಸಂವಹನ ವಿಧಾನವನ್ನು ಸಂಭ್ರಮಿಸಲು ಏಪ್ರಿಲ್‌ 27ರ ದಿನಾಂಕವನ್ನು  ʼಮೋರ್ಸ್‌ ಕೋಡ್‌ ದಿನʼವಾಗಿ ಆಚರಿಸಲಾಗುತ್ತದೆ.

ಈಗಿನ ಮೊಬೈಲ್‌ ಯುಗದ ಯುವಕರು, ಬಾಲಕ, ಬಾಲಕಿಯರಿಗೆ ಇದು ತಮಾಷೆಯಾಗಿ ಕಾಣಬಹುದು. ಆದರೆ ಸುಮಾರು ನೂರೈವತ್ತು ವರ್ಷಗಳ ಹಿಂದೆ ಈ ಸಂವಹನ ಮಾಧ್ಯಮ ಕ್ರಾಂತಿಕಾರಿ ಸಂವಹನ ವಿಧಾನವಾಗಿ ಎಲ್ಲರ ಗಮನ ಸೆಳೆದಿತ್ತು. ಅಲ್ಲಿಯವರೆಗೆ ಸಂದೇಶಗಳನ್ನು ಕಳುಹಿಸಲು ವಾರಗಳೇ ಬೇಕಾಗುತ್ತಿದ್ದವು. ಆದರೆ ಸ್ಯಾಮ್ಯುಯೆಲ್‌ ಮೋರ್ಸ್ ಅವರು ಆಲ್ಫ್ರೆಡ್ ವೈಲ್ ಮತ್ತು ಜೋಸೆಫ್ ಹೆನ್ರಿ ಅವರ ಜೊತೆಗೂಡಿ 1836ರಲ್ಲಿ ವಿದ್ಯುತ್ ಟೆಲಿಗ್ರಾಫ್‌ ಮೂಲಕ ಸಂವಹನದಲ್ಲಿ ಕ್ರಾಂತಿಯನ್ನು ಉಂಟುಮಾಡಿದರು.

ಮೊದಲಿಗೆ, ಮೋರ್ಸ್ ಕೋಡ್ ಮೂಲಕ ಸಂಖ್ಯೆಗಳನ್ನು ಮಾತ್ರ ಸಂದೇಶವಾಗಿ ರವಾನಿಸಲಾಗುತ್ತಿತ್ತು. ಆದರೆ 1840 ರ ಹೊತ್ತಿಗೆ, ವೈಲ್ ಅದನ್ನು ಅಕ್ಷರಗಳು ಮತ್ತು ವಿಶೇಷ ಅಕ್ಷರಗಳನ್ನು ಸೇರಿಸಲು ಸಾಧ್ಯವಾಗುವಂತೆ ಪರಿಷ್ಕರಿಸಿದರು. ಕ್ರಮೇಣ ಇದರ ಬಳಕೆ ಹೆಚ್ಚಿತು. 1851ರಲ್ಲಿ ಐರೋಪ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯವಾಗಿ ವಿವಿಧ ಭಾಷೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ಮೋರ್ಸ್‌ ಕೋಡನ್ನು ಅಭಿವೃದ್ಧಿ ಪಡಿಸಿದವು. ಅದಕ್ಕೊಂದು ಜಾಗತಿಕ ಮಾನದಂಡವನ್ನು ರೂಪಿಸಿದವು.

ಇದಿಷ್ಟು ಮೋರ್ಸ್‌ ಕೋಡಿನ ಕಥೆ. ಈಗಲೂ ಈ ಟಕ್‌ ಟಕ್‌ ಟಕ್‌ ಟಕ್‌ ಸಂಜ್ಞಾ ಸಂವಹನವನ್ನು ಬಳಸಲು ಸಾಧ್ಯವಿದೆ. ಈಗ ಇದನ್ನು ಆನ್‌ ಲೈನ್‌ ಕೋರ್ಸುಗಳ ಮೂಲಕ ಕಲಿಯಬಹುದು. ಅಥವಾ ವಿಡಿಯೋಗಳ ಮೂಲಕವೂ ಕಲಿಯಬಹುದು.

ನೀವು ಮೋರ್ಸ್‌ ಸಂಜ್ಞೆ ಬಳಸುವ ಮೂಲಕ ಇತರರ ಗಮನ ಸೆಳೆಯಬಹುದು. ವಿನೋದಕ್ಕಾಗಿ ಮೋರ್ಸ್‌ ಸಂಜ್ಞಾ ಸಂದೇಶ ಕಳುಹಿಸಿ ಸ್ನೇಹಿತರನ್ನು ಚಕಿತಗೊಳಿಸಬಹುದು. ಆನ್‌ ಲೈನ್‌ ಪರಿಕರಗಳನ್ನು ಬಳಸಿ ಈ ಸಂಕೇತಗಳನ್ನು ಗಟ್ಟಿಯಾಗಿ ಹೇಳುವಂತೆ ಸವಾಲು ಹಾಕಬಹುದು.

ಕಲಿಯುವ ಮೂಲಕ ಇರಬಹುದು, ಸಂಜ್ಞೆಯನ್ನು ಬಿಡಿಸುವ ಮೂಲಕ ಇರಬಹುದು ಅಥವಾ ಈ ಸಂಜ್ಞಾ ಭಾಷೆಯನ್ನು ಪ್ರಯೋಗಿಸುವ ಮೂಲಕ ಇರಬಹುದು- ಹೀಗೇ ಯಾವುದೇ ರೀತಿಯಲ್ಲೂ ಇದನ್ನು ಬಳಸುವ ಮೂಲಕ ಒಂದೂವರೆ ಶತಕದ ಹಿಂದೆ ಇತಿಹಾಸ ಸೃಷ್ಟಿಸಿದ್ದ ಈ ಚಾರಿತ್ರಿಕ ಆವಿಷ್ಕಾರವನ್ನು ನೀವು ಮೆಚ್ಚಬಹುದು, ಪ್ರಶಂಸಿಸಬಹುದು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ.

Thursday, April 24, 2025

ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

 ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

ನಾನು ಹಬಲ್.‌ ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.

ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.

"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.

"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ -‌ ನಾನಲ್ಲ.”

ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.

ಮೇಲಿನಿಂದ ಬಲಕ್ಕೆ: ಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.

ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ  ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.

ಕೆಳಗಿನಿಂದ ಬಲಭಾಗಕ್ಕೆ: ಇದು NGC 5335 ನಕ್ಷತ್ರಪುಂಜ, ಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.

ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.


ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.

-ನೆತ್ರಕೆರೆ ಉದಯಶಂಕರ.

ಇವುಗಳನ್ನೂ ಓದಿ:

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress


Advertisement