Monday, May 11, 2026

ತಾರಾ ಎಂಬ ಎಲೆಮರೆಯ ಕುಸುಮ

 ತಾರಾ ಎಂಬ ಎಲೆಮರೆಯ ಕುಸುಮ

ಮೊನ್ನೆ ಮೊನ್ನೆ ಗಿರಿನಗರದ ಶ್ರೀ ಮಹಾಗಣಪತಿಯ ಜಾತ್ರೆಯ ಆರಂಭದ ದಿನ. ನನ್ನ ಅತ್ತೆಯವರಿಗೆ ಸ್ವಲ್ಪ ಮೈ ಹುಶಾರಿಲ್ಲ ಎಂದು ಗಿರಿನಗರದ ಆಸ್ಪತ್ರೆಗೆ ದಾಖಲಿಸಿದ್ದೆವು. ಅದರ ಮರುದಿನ ಮಧ್ಯಾಹ್ನ ವೈದ್ಯರ ಸಲಹೆಯಂತೆ ಒಂದಷ್ಟು ಔಷಧಗಳನ್ನು ತರಲೆಂದು ಮೇಲಿನ ಮಹಡಿಯಿಂದ ಕೆಳಕ್ಕೆ ಇಳಿದು ಬರುತ್ತಿದ್ದೆವು.

ನೆಲ ಮಹಡಿಯಲ್ಲಿ ಲಿಫ್ಟಿನ ಎದುರಲ್ಲೇ ಆಕೆ ಗಾಲಿ ಕುರ್ಚಿಯಲ್ಲಿ ಕುಳಿತಿದ್ದಳು. ಅಚ್ಚರಿಯಾಯಿತು. ʼಏನಮ್ಮ ಇದು? ಏಕೆ ಇಲ್ಲಿ?ʼ ಅಂತ ಪ್ರಶ್ನೆ ಮಾಡಿದೆ. ʼಏನೋಪ್ಪ. ನಿನ್ನೆ ರಾತ್ರಿಯಿಂದಲೂ ಒಂದೇ ಸಮನೆ ವಾಂತಿ ಭೇದೀಪ್ಪ. ಏನ್‌ ಕಥೇನೋ ಗೊತ್ತಿಲ್ಲʼ ಅಂದಳು ಆಕೆ. ಮುಖದಲ್ಲಿ ಎಂದಿನತೆಯೇ ನಗು ಇತ್ತು, ಆದರೆ ಅದು ಕ್ಷೀಣವಾಗಿತ್ತು. ಬಳಲಿಕೆಯ ಚಿಹ್ನೆ ಎದ್ದು ಕಾಣುತ್ತಿತ್ತು. ಅಷ್ಟರಲ್ಲಿ ನರ್ಸ್‌ ಆಕೆಯನ್ನು ಮಹಡಿಗೆ ಕರೆದೊಯ್ದಳು.

ಒಂದು ಕ್ಷಣ. ಮನಸ್ಸು ನೆನಪಿನ ಆಳಕ್ಕೆ ಸರಿಯಿತು..

ನಮ್ಮ ನಿವೇಶನಗಳ ಹೋರಾಟ ಉತ್ತುಂಗದಲ್ಲಿದ್ದ ಸಮಯ. ಪ್ರಕರಣ ಹೈಕೋರ್ಟಿನಲ್ಲಿತ್ತು. ಅದಕ್ಕೂ ಮುನ್ನ ಕರ್ನಾಟಕ ಮೇಲ್ಮನವಿ ಟ್ರಿಬ್ಯೂನಲ್ಲಿನಲ್ಲಿ ತೀರ್ಪು ನಮಗೆ ವಿರುದ್ಧವಾಗಿತ್ತು. ಆ ತೀರ್ಪಿನಲ್ಲಿ ನ್ಯಾಯಾಧೀಶರು, ನಮ್ಮೆದುರು ಬಂದಿದ್ದ ಈಕೆಯ ಹೆಸರನ್ನೇ ಉಲ್ಲೇಖಿಸಿದ್ದರು. ತಪ್ಪು ಕಲ್ಪನೆಯಿಂದ ಇದ್ದಿರಬಹುದು. ಆದರೆ ಆ ಪ್ರಕರಣದಲ್ಲಿ ಇದ್ದದ್ದು ಈಕೆಯಲ್ಲ. ಪ್ರಕರಣದಲ್ಲಿ ಇದ್ದದ್ದು ಅದೇ ಹೆಸರಿನ ಬೇರೊಬ್ಬ ಮಹಿಳೆ.

ಹೈಕೋರ್ಟಿನಲ್ಲಿ ಇದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಸುದೀರ್ಘ ವಾದ ವಿವಾದಗಳ ಬಳಿಕ ನ್ಯಾಯಮೂರ್ತಿಗಳು ಕೆಳಗಿನ ನ್ಯಾಯಾಲಯದ ತೀರ್ಪು ಹಾಗೂ ಅದಕ್ಕೂ ಕೆಳಗಿನ ಎಸಿಯವರ (ಅಸಿಸ್ಟೆಂಟ್‌ ಕಮೀಷನರ್)‌ ಆದೇಶವನ್ನು ರದ್ದು ಪಡಿಸಿದರು. ಆದರೆ… ಪ್ರಕರಣವನ್ನು ಮತ್ತೆ ಮರುವಿಚಾರಣೆಗೆಂದು ಕೆಳಗಿನ ಕೋರ್ಟಿಗೇ ವಾಪಸ್‌ ಕಳಿಸಿ ಆದೇಶ ಮಾಡಿದ್ದರು.

ಈ ತೀರ್ಪು ನಾವು ಅಪೇಕ್ಷಿದ್ದಲ್ಲ. ನಮಗೆ ನ್ಯಾಯಬೇಕಿತ್ತು. ದಶಕಗಳ ಹೋರಾಟದ ಈ ಪ್ರಕರಣಕ್ಕೆ ಒಂದು ಅಂತಿಮತೆ ಬೇಕಿತ್ತು.. ನೂರಾರು ಮಂದಿ ನಿವೇಶನದಾರರಿಗೆ ನೆಮ್ಮದಿ ಬೇಕಿತ್ತು. ಆದರೆ ನಿವೇಶನ ನೀಡಿದ್ದ ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ಹಾಗೂ ನಮ್ಮ ಪರ ವಾದಿಸುತ್ತಿದ್ದ ವಕೀಲರ ಹೊಂದಾಣಿಕೆಯ ನಿಲುವಿನ ಪರಿಣಾಮವಾಗಿ ನ್ಯಾಯಾಲಯದಿಂದ ಈ ತೀರ್ಪು ಬಂದಿತ್ತು. ಅದನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ.

ಆ ಕ್ಷಣ ಅಯೋಮಯವಾಗಿತ್ತು. ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ತಾನು ಗೆದ್ದೆನೆಂದು ಬೀಗುತ್ತಿತ್ತು.

ಆ ಕ್ಷಣದಲ್ಲಿ ನಮ್ಮ ನೆರವಿಗೆ ಬಂದಿದ್ದುದು ಇದೇ ಮಹಿಳೆ. ಈಕೆ ನೇರವಾಗಿ ಹಿರಿಯ ಅನುಭವೀ ವಕೀಲರಾಗಿದ್ದ ಸುಬ್ರಹ್ಮಣ್ಯ ಜೋಯಿಸರ ಬಳಿಗೆ ಹೋಗಿದ್ದಳು. ಅವರ ಬಳಿ ನಮ್ಮ ಕಥೆ ಹೇಳಿದ್ದರು. ಇಂತಹ ಹೊತ್ತಿನಲ್ಲಿ ಏನು ಮಾಡಬಹುದು ಎಂದು ಅವರನ್ನು ಕೇಳಿದ್ದಳು.

ಅವರು ಸಮಾಧಾನದಿಂದ ʼಮತ್ತೆ ಕೆಳಕ್ಕೆ ಹೋಗುವುದು ಸರಿಯಲ್ಲ. ಏನಿದ್ದರೂ ನ್ಯಾಯಾಲಯಗಳ ಹೋರಾಟದಲ್ಲಿ ಮೇಲಕ್ಕೆ ಹೋಗುವುದು ಉತ್ತಮ. ನನ್ನನ್ನು ಬೇಟಿಯಾಗುವಂತೆ ಅವರಿಗೆ ಹೇಳುʼ ಎಂದು ಹೇಳಿ ಈಕೆಯನ್ನು ನಮ್ಮ ಬಳಿಗೆ ಕಳುಹಿಸಿದ್ದರು.

ಬಳಿಕ ನಾವು ಸುಬ್ರಹ್ಮಣ್ಯ ಜೋಯಿಸರನ್ನು ಬೇಟಿ ಮಾಡಿದ್ದೆವು. ʼಭೂ ವಿವಾದಗಳಲ್ಲಿ ಅತ್ಯಂತ ಅನುಭವ ಇರುವ ಒಬ್ಬ ಹಿರಿಯ ವಕೀಲರಿದ್ದಾರೆ. ಕೃಷ್ಣಭಟ್‌ ಅಂತ ಅವರನ್ನು ಭೇಟಿ ಮಾಡಿʼ ಎಂದು ಸಲಹೆ ಮಾಡಿದ್ದರು.ವಯೋವೃದ್ಧ  ಕೃಷ್ಣಭಟ್‌ ಅವರನ್ನು ಭೇಟಿ ಮಾಡಿದಾಗ ಪ್ರಕರಣವನ್ನು ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಒಯ್ಯಲು ಅವರು ಒಪ್ಪಿದರು.

ವಿಭಾಗೀಯ ಪೀಠದಲ್ಲಿ ತಮ್ಮ ವಾಕ್ಚಾತುರ್ಯದಿಂದ ಪೀಠದ ಮನ ಒಲಿಸಿದರು. ಪ್ರಕರಣವನ್ನು ಮತ್ತೆ ಹಿಂದಕ್ಕೆ ಕಳುಹಿಸುವಂತೆ ಆಜ್ಞಾಪಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ರದ್ದು ಪಡಿಸಿ, ಹೈಕೋರ್ಟ್‌ ಏಕ ಸದಸ್ಯ ಪೀಠವೇ ಪ್ರಕರಣದ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು ಎಂದು ವಿಭಾಗೀಯ ಪೀಠ ತೀರ್ಪು ನೀಡಿತು.

ಬಳಿಕ ಹಲವಾರು ವರ್ಷಗಳ ವಿಚಾರಣೆಯ ಬಳಿಕ ಏಕಸದಸ್ಯ ಪೀಠವೇ ಈ ಪ್ರಕರಣಕ್ಕೆ ಮುಕ್ತಾಯ ಹಾಡಿತು.

ಈ ನಿವೇಶನದಾರರಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಈ ಮಹಿಳೆಗೆ ಎಷ್ಟಿತ್ತು ಎಂದರೆ, ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ತನ್ನ ಮಗನ ಜೊತೆಗೆ ತಾನೂ ಬಂದು ಕುಳಿತುಕೊಂಡು ನ್ಯಾಯಾಲಯದ ಕಲಾಪ ವೀಕ್ಷಿಸುತ್ತಿದ್ದಳು. ಬರಲು ಸಾಧ್ಯವಾಗದಿದ್ದರೆ ಅದೇ ದಿನ ಸಂಜೆ ಫೋನ್‌ ಮೂಲಕ ವಿಚಾರಿಸಿಕೊಳ್ಳುತ್ತಿದ್ದಳು.

ಗಿರಿಯನ್ನು ಒಂದು ಸುಸಜ್ಜಿತ ನಗರವನ್ನಾಗಿ ಮಾಡುವಲ್ಲಿ ತನ್ನ ಅಪ್ಪನಿಗೆ ಇದ್ದ ಕಾಳಜಿಯ ಗುಣಗಳೇ ಈಕೆಯಲ್ಲೂ ಮೂಡಿ ಬಂದಿದ್ದವು. ದಶಕಗಳ ಹಿಂದಿನ ಆ ದಿನಗಳಲ್ಲಿ ಈಕೆಯ ಅಪ್ಪ, ಕೇವಲ ಕುರುಚಲು ಗಿಡಗಳಿದ್ದ ಗಿರಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಅವುಗಳ ನೀರನ್ನು ಬಾವಿಯೊಂದರಲ್ಲಿ ಸಂಗ್ರಹಿಸಿ, ಟ್ಯಾಂಕಿಗೆ ಏರಿಸಿ ಕಟ್ಟಿದ ಸುಸಜ್ಜಿತ ಬಡಾವಣೆಗೆ ನೀರು ಒದಗಿಸಲು ಪಟ್ಟಿದ್ದ ಕಷ್ಟ, ರಾತ್ರಿ ಹಗಲೆನ್ನದೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾ ಆ ನಗರದ ಐದು ಹಂತಗಳನ್ನು ನಿರ್ಮಿಸಿದ್ದ ಶ್ರಮ ಎಷ್ಟೆಂಬುದು ಆ ಕೆಲಸಗಳನ್ನು ಕಂಡಿದ್ದವರಿಗಷ್ಟೇ ಗೊತ್ತು. ಅವರು ನೆಟ್ಟಿದ್ದ ಮರಗಳೇ ಇಂದೂ ಈ ಪ್ರದೇಶದಲ್ಲಿ ತಂಪಾದ ನೆರಳನ್ನು ಕೊಡುತ್ತಿರುವುದು.

ಅದನ್ನೆಲ್ಲ ಕಂಡಿದ್ದ ಈಕೆ, ತನ್ನಪ್ಪ ನಿರ್ಮಿಸಿದ್ದ ಈ ನಗರಗಳಲ್ಲಿ ವಾಸವಾಗಿರಲು ಬಯಸಿದವರಿಗೆ ನೆಮ್ಮದಿ ಬಯಸಿ, ಅದೇ ಕಾಳಜಿಯೊಂದಿಗೆ ಎಲೆಮರೆಯ ಕಾಯಿಯಂತೆ ತನ್ನ ಕಾರ್ಯ ನಿರ್ವಹಿಸಿದ್ದುದು ಬಹುಮಂದಿಗೆ ಗೊತ್ತಿರಲಾರದು. ನಗರ ಕಟ್ಟುವಲ್ಲಿ ಅಪ್ಪನಿಗಿದ್ದ ದೂರದೃಷ್ಟಿ ಈಕೆಯಲ್ಲೂ ಮೈಗೂಡಿತ್ತು. ನಿವಾಸಿಗಳ ಆ ಹೋರಾಟದ ಕಥೆ ಏನೆಂಬುದು ನಮ್ಮ ʼಚಕ್ರವ್ಯೂಹʼ ಪುಸ್ತಕದಲ್ಲಿ ಇದೆ. ಆಸಕ್ತರು ಕ್ಲಿಕ್‌ ಮಾಡಿ ನೋಡಬಹುದು, ಕೊಳ್ಳಬಹುದು.

ಕೆಲ ಸಮಯದ ಹಿಂದೆ ಪತಿಯೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ, ಬಿಪಿ ಇಳಿದು ಕುಸಿದು ಬಿದ್ದ ಪತಿಯನ್ನು ಸ್ವತಃ ರಿಕ್ಷಾಕ್ಕೆ ಏರಿಸಿಕೊಂಡು ಆಸ್ಪತ್ರೆಗೆ ಓಡಿ ಬಂದಿದ್ದಳು. ಆಕೆಯ ಪ್ರಸಂಗಾವಧಾನತೆಯ ಪರಿಣಾಮವಾಗಿ ಪತಿಗೆ ಪುನರ್‌ ಜನ್ಮ ಸಿಕ್ಕಿದಂತಾಗಿತ್ತು.

ಮನೆ, ತೋಟದ ಎರಡರ ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದ ಈಕೆ ತನ್ನ ತೋಟದಿಂದಲೇ ತಂದು ತಯಾರಿಸುತ್ತಿದ್ದ ಅಪ್ಪೆ ಮಿಡಿಯ ಉಪ್ಪಿನಕಾಯಿ ಎಂದರೆ ಅಸುಪಾಸಿನವರಿಗೆಲ್ಲ ಅಚ್ಚು ಮೆಚ್ಚು. ನನ್ನ ಮಗ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತಾನೇ ಊಟ ತಿಂಡಿ ತಯಾರಿಸಿ ಅವನಿಗೆ ಕಳುಹಿಸಿ ಕೊಡುತ್ತಿದ್ದಳು.

ಅಂದ ಹಾಗೆ, ಈಕೆ ಗಾಲಿ ಕುರ್ಚಿಯಲ್ಲಿ ಕಂಡ ಕಥೆ ಹೇಳ ಹೊರಟಿದ್ದೆನಲ್ಲ. ಹೌದು. ಅಂದು ಆಸ್ಪತ್ರೆಯಲ್ಲಿ ಗಾಲಿ ಕುರ್ಚಿಯಲ್ಲಿ ಕಂಡಿದ್ದ ಆಕೆ ಆ ದಿನ ಇಡೀ ಅದೇ ಆಸ್ಪತ್ರೆಯಲ್ಲಿ ಇದ್ದಳು. ಬಳಿಕ ಆರೋಗ್ಯ ಇನ್ನಷ್ಟು ಹದಗೆಟ್ಟಿತು ಎಂದು ಬೇರೊಂದು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದರು.

ಆರನೇ ದಿನ ೨೦೨೬ ಏಪ್ರಿಲ್‌ ೨೮ರ ಮಂಗಳವಾರದ ದಿನ, ʼಇಲ್ಲಿರುವುದು ಸುಮ್ಮನೇ, ಅಲ್ಲಿ ಇಹುದು ನಮ್ಮನೆʼ ಎಂದು ಈಕೆ, ಪತಿ, ತಮ್ಮಂದಿರು, ಪುತ್ರ, ಸೊಸೆ, ಮೊಮ್ಮಗನನ್ನು ಬಿಟ್ಟು ತಾರಾಲೋಕಕ್ಕೆ ಪಯಣ ಬೆಳೆಸಿದ್ದಳು- ಮಲಗಿದ್ದ ವ್ಯಕ್ತಿ ಚಾಪೆಯಿಂದ ಎದ್ದು ನಡೆದುಹೋದ ಹಾಗೆ, ಈಗಲೂ ನಂಬಲೂ ಸಾಧ್ಯವಾಗದ ರೀತಿ!.

ಈಕೆಯ ಹೆಸರು ಹೇಳಲಿಲ್ಲವಲ್ಲ? ಈಕೆಯ ಹೆಸರು ಬಿ.ಕೆ. ತಾರಾ. ಅಂತಿಮ ನಮನಗಳು ತಾರಾ.

-ನೆತ್ರಕೆರೆ ಉದಯಶಂಕರ

No comments:

Advertisement