
ಸೂರ್ಯ ನಮಸ್ಕಾರ 'ಯಜ್ಞ'...!
ಕಲ್ಯಾಣ ನಗರದ ಸಿ.ಎಂ.ಆರ್. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಫೆಬ್ರುವರಿ 17ರ ಭಾನುವಾರ ಮುಂಜಾನೆ 6.30 ಗಂಟೆಗೆ 'ನೂರೆಂಟು ಸೂರ್ಯ ನಮಸ್ಕಾರ'ಕ್ಕಾಗಿ ನೂರಾರು ಮಂದಿ ಸಜ್ಜಾಗುತ್ತಿದ್ದಾರೆ. ಇದು ಆರೋಗ್ಯವೃದ್ಧಿಗಾಗಿ. ನೀವೂ ಪಾಲ್ಗೊಳ್ಳಬಹುದು.
ನೆತ್ರಕೆರೆ ಉದಯಶಂಕರ
ಬಸ್ಸಿನಲ್ಲಿ ಹೋದರೂ ಅಷ್ಟೇ, ಸ್ಕೂಟರ್ - ಬೈಕಿನಲ್ಲಿ ಹೋದರೂ ಅಷ್ಟೆ. ಗಮ್ಯ ಮುಟ್ಟುವಷ್ಟರಲ್ಲಿ ಸೊಂಟನೋವು, ಸುಸ್ತು. ಸಾಕಪ್ಪಾ ಸಾಕು ಎಂಬ ಅನುಭವ. ಹದಗೆಟ್ಟ ರಸ್ತೆ, ಟ್ರಾಫಿಕ್ ಜಾಮ್, ಧೂಳು, ಹೊಗೆ- ನಿಮ್ಮನ್ನು ಇಂತಹ ಪರಿಸ್ಥಿತಿಗೆ ತಂದು ಬಿಡುತ್ತದೆ.
ಕೈತುಂಬ ಸಂಬಳ ತರುವ ಐಟಿ, ಬಿಟಿ ಉದ್ಯೋಗವಾದರೂ ಅಷ್ಟೆ. ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಎದ್ದು ಬರುತ್ತಿದ್ದಂತೆಯೇ ಬೆನ್ನು ನೋವು- ಭುಜ ನೋವು!
ಕೆಲಸ ಮುಗಿಸಿ ಬಂದರೂ ಸುಸ್ತು, ರಸ್ತೆಯಲ್ಲಿ ಸಂಚರಿಸಿ ಬಂದರೂ ಸುಸ್ತು. ಬೆನ್ನುನೋವು, ಭುಜ ನೋವು ಜೊತೆಗೆ ಅಸ್ತಮಾ, ರಕ್ತದೊತ್ತಡದಂತಹ ತೊಂದರೆಗಳ ಉಪಟಳ.
ನಮ್ಮ ಜೀವನ ವಿಧಾನ, ಫಾಸ್ಟ್ ಫುಡ್ ಸಂಸ್ಕೃತಿಗಳಿಂದಲೂ ಹಲವಾರು ಬಗೆಯ ರೋಗಗಳಿಗೆ ಆಹ್ವಾನ..!
ಹಾಗೆಂದು ಇವೆಲ್ಲವುಗಳನ್ನು ಬಿಟ್ಟು ಬದುಕುವ ಹಾಗೂ ಇಲ್ಲ. ಇವುಗಳಿಗೆ ಪರಿಹಾರವಾದರೂ ಏನು?
ನೆತ್ತಿಯನ್ನು ನಿತ್ಯ ಸುಡುತ್ತಾನಲ್ಲ ಸೂರ್ಯ - ಅವನೇ ಪರಿಹಾರ ಎನ್ನುತ್ತದೆ ಬೆಂಗಳೂರು ಎಚ್.ಬಿ.ಆರ್. ಬಡಾವಣೆಯ ಸತ್ಸಂಗ ಫೌಂಡೇಷನ್. ಆ ಸೂರ್ಯನಿಗೆ ನಿತ್ಯ ನಮಸ್ಕಾರ ಮಾಡಿ- ನಿಮ್ಮ ಹತ್ತಾರು ರೋಗ, ಸಮಸ್ಯೆಗಳಿಗೆ ಪರಿಹಾರ ತಾನಾಗಿಯೇ ಲಭಿಸುತ್ತದೆ ಎಂಬುದು ಫೌಂಡೇಷನ್ ಭರವಸೆ.
ಅದಕ್ಕಾಗಿಯೇ ಸತ್ಸಂಗ ಫೌಂಡೇಷನ್ ಪ್ರತಿವರ್ಷವೂ 'ಸೂರ್ಯ ನಮಸ್ಕಾರ ಶಿಬಿರ'ವನ್ನು ಸಂಘಟಿಸುತ್ತಿದೆ. ಈ ವರ್ಷವೂ ಫೆಬ್ರುವರಿ 17ರ ಭಾನುವಾರ ಮೂರನೇ ವರ್ಷದ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಶಿಬಿರ ನಡೆಯಲಿದೆ ಕಲ್ಯಾಣ ನಗರದ ಎಚ್ಆರ್ಬಿಆರ್ ಬಡಾವಣೆಯ ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ.
'ಸೂರ್ಯ ನಮಸ್ಕಾರ' ಅತ್ಯಂತ ಸರಳವಾದ ವ್ಯಾಯಾಮ. ಒಟ್ಟು ಹನ್ನೆರಡು ಸರಳ ಭಂಗಿಗಳಲ್ಲಿ ಈ ನಮಸ್ಕಾರ ಕ್ರಿಯೆಯನ್ನು ಮಾಡಲಾಗುತ್ತದೆ. ವಾಸ್ತವವಾಗಿ ಇರುವುದು ಏಳು ಭಂಗಿಗಳು ಮಾತ್ರ. ಉಳಿದ ಐದು ಭಂಗಿಗಳು ಮೊದಲ ಐದು ಭಂಗಿಗಳ ಪುನರಾವರ್ತನೆ ಅಷ್ಟೆ. ಒಂದು ನಮಸ್ಕಾರದಲ್ಲಿ ಹಲವಾರು ಯೋಗಾಸನಗಳೂ ಸೇರಿರುವುದು ಸೂರ್ಯ ನಮಸ್ಕಾರದ ವಿಶೇಷ.
ಸೂರ್ಯ ನಮಸ್ಕಾರ ಮಾಡಲು ಯಾವ ಕಷ್ಟವೂ ಇಲ್ಲ, ಇದು ಮಹಾನ್ ಕಸರತ್ತೂ ಅಲ್ಲ. ಇದನ್ನು ಮಾಡಲು ಹೆಚ್ಚಿನ ಜಾಗದ ಅಗತ್ಯವೂ ಇಲ್ಲ.
ಸೂರ್ಯನನ್ನು ಆರಾಧಿಸುವ ಮಂತ್ರಗಳ ಸಹಿತವಾಗಿ ಈ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಲಾಭಗಳು ಮಾತ್ರ ಅಪಾರ. ಬೆನ್ನು ಹುರಿಯ ಸಡಿಲಾಗುವಿಕೆ, ಬೆನ್ನು ನೋವು ನಿವಾರಣೆ, ಮಾಂಸಖಂಡಗಳ ಸಡಿಲಾಗುವಿಕೆ, ಮಾನಸಿಕ ತಳಮಳ, ದೇಹದ ಸಂತುಲನೆ ಇತ್ಯಾದಿ ಲಾಭ ಲಭ್ಯ. ರಕ್ತ ಪರಿಚಲನೆ, ಜೀರ್ಣ ಪದ್ಧತಿ, ರಾತ್ರಿಯ ನಿದ್ದೆ ಉತ್ತಮಗೊಳ್ಳುತ್ತದೆ. ಹೀಗಾಗಿ ಸರ್ವತೋಮುಖ ಆರೋಗ್ಯ ವೃದ್ಧಿ.
ನಮ್ಮ ಪ್ರಸ್ತುತ ವೈದ್ಯಕೀಯ ವಿಧಾನದಲ್ಲಿ ರೋಗಬಂದ ಮೇಲೆ ನಿರ್ದಿಷ್ಟ ರೋಗ ಪತ್ತೆ ಹಚ್ಚಿ ಗುಣಪಡಿಸುವ ಔಷಧಿ ನೀಡುತ್ತೇವೆ. ಆದರೆ ನಮ್ಮ ಋಷಿಗಳು ಪ್ರಕೃತಿಯ ಮೇಲೆ ವಿಶ್ವಾಸದಿಂದ, ಸೂರ್ಯನನ್ನೇ ಆಧಾರವಾಗಿ ಇಟ್ಟುಕೊಂಡು ಆರೋಗ್ಯ ಪಡೆಯುವ ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಸೂರ್ಯ ನಮಸ್ಕಾರ ಅವುಗಳಲ್ಲಿ ಒಂದು.
ರೋಗ ಬಂದ ಮೇಲೆ ಔಷಧಿಗಾಗಿ ಓಡುವ ಬದಲು ನಿತ್ಯ ಸೂರ್ಯ ನಮಸ್ಕಾರ ಮಾಡಿ ಅನಾರೋಗ್ಯ ಬರದಂತೆ ತಡೆಗಟ್ಟುವುದು ಉತ್ತಮ ಎನ್ನುತ್ತದೆ ಸತ್ಸಂಗ ಫೌಂಡೇಷನ್.
ಈ ಹಿನ್ನೆಲೆಯಲ್ಲಿಯೇ ಸೂರ್ಯ ನಮಸ್ಕಾರವನ್ನು ಜನಪ್ರಿಯಗೊಳಿಸಲು '108 ಸೂರ್ಯ ನಮಸ್ಕಾರ' ಮಾಡುವ 'ಸೂರ್ಯ ನಮಸ್ಕಾರ- ಸೂರ್ಯ ಯಜ್ಞ' ಕಾರ್ಯಕ್ರಮ ಸಂಘಟಿಸುತ್ತಿದೆ.
ಹತ್ತು ವರ್ಷ ಮೇಲ್ಪಟ್ಟ ಯಾರು ಬೇಕಾದರೂ ಈ ಸೂರ್ಯ ನಮಸ್ಕಾರ ಯಜ್ಞದಲ್ಲಿ ಪಾಲ್ಗೊಳ್ಳಬಹುದು. ರಕ್ತದ ಒತ್ತಡ, ಮಧುಮೇಹ, ಹೃದಯ ತೊಂದರೆ ಮತ್ತು ಬೆನ್ನು ನೋವು ಇರುವವರು ವೈದ್ಯರ ಸಲಹೆ ಪಡೆದು ಪಾಲ್ಗೊಳ್ಳಬಹುದು. ಪಾಲ್ಗೊಳ್ಳುವ ಎಲ್ಲರೂ ಜಮಖಾನ ತರಬೇಕು, ಪುರುಷರು ಬಿಳಿಯ ಪೈಜಾಮ, ಅಂಗಿ, ಮಹಿಳೆಯರು ಬಿಳಿಯ ಚೂಡಿದಾರ್ ಧರಿಸಬೇಕು. ಉಪಾಹಾರದ ಚಿಂತೆ ಬೇಡ - ಅದನ್ನು ಫೌಂಡೇಷನ್ ಒದಗಿಸುತ್ತದೆ. ಶುಲ್ಕ: ಕೇವಲ 20 ರೂಪಾಯಿ.
ಬೆಳಗ್ಗೆ 6.30ಕ್ಕೆ ಸೂರ್ಯ ನಮಸ್ಕಾರ ಆರಂಭವಾಗುತ್ತದೆ. ಜೊತೆಗೆ ಸೂರ್ಯ ಯಜ್ಞ, ಶತ ನಾಮಾವಳಿಯೂ ಇರುತ್ತದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ ಆಸಕ್ತರಿಗೆ ನಾಗವಾರದ ಆಯುಶ್ರೀ ಆಯುರ್ವೇದ ಮತ್ತು ಯೋಗಕೇಂದ್ರ, ಎಚ್ ಬಿ ಆರ್ ಬಡಾವಣೆಯ ಆಯುರ್ವೇದ ಕುಟೀರ, ಕಾಚರಕನಹಳ್ಳಿಯ ಶ್ರೀರಾಮ ಯೋಗ ಕೇಂದ್ರಗಳಲ್ಲಿ ಪ್ರತಿದಿನ ಮುಂಜಾನೆ 6.30ರಿಂದ 7.30ರವರೆಗೆ ನಿತ್ಯ ತರಬೇತಿ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇಲ್ಲಿ ಕಲಿತ ಸೂರ್ಯ ನಮಸ್ಕಾರವನ್ನು ಮುಂದೆ ಪ್ರತಿದಿನ ಮನೆಯಲ್ಲೇ ಮಾಡಬಹುದು.
ನೋಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಘಟಕರಾದ ಡಾ. ಶ್ಯಾಮ ಪ್ರಸಾದ್ (25443636), ಡಾ. ರಾಜಾರಾಮ ಪ್ರಸಾದ್ (9448429885), ಸೀತಾರಾಮ (9945188081), ಸೌಮ್ಯ (9880649762), ಜಗನ್ನಾಥ (25448633), ಕೋದಂಡರಾಮ್ (9845206895) ಇವರನ್ನು ಸಂಪರ್ಕಿಸಬಹುದು.
(ಕೃಪೆ: ಪ್ರಜಾವಾಣಿ)
No comments:
Post a Comment