Friday, April 18, 2008

ಇಂದಿನ ಇತಿಹಾಸ History Today ಏಪ್ರಿಲ್ 18

ಇಂದಿನ ಇತಿಹಾಸ

ಏಪ್ರಿಲ್ 18

ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಚೀನಾದ ಬುಲೆಟ್ ರೈಲು ತನ್ನ ಮೊದಲ ಸಂಚಾರವನ್ನು ಬೀಜಿಂಗ್ ರೈಲು ನಿಲ್ದಾಣದಿಂದ ಆರಂಭಿಸಿತು.




2007: ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಚೀನಾದ ಬುಲೆಟ್ ರೈಲು ತನ್ನ ಮೊದಲ ಸಂಚಾರವನ್ನು ಬೀಜಿಂಗ್ ರೈಲು ನಿಲ್ದಾಣದಿಂದ ಆರಂಭಿಸಿತು.

2007: ಭಾರತದ ಮಹತ್ವಾಕಾಂಕ್ಷೆಯ ಹಗುರ ಸಾರಿಗೆ ವಿಮಾನ `ಸರಸ್' ತನ್ನ ಎರಡನೇ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಸ್ವದೇಶೀ ನಿರ್ಮಿತ ಮೊದಲ ನಾಗರಿಕ ವಿಮಾನ `ಸರಸ್' ನ್ನು ರಾಷ್ಟ್ರೀಯ ವಿಮಾನಾಂತರಿಕ್ಷ ಪ್ರಯೋಗಾಲಯ (ಎನ್ಎಎಲ್) ಅಭಿವೃದ್ಧಿ ಪಡಿಸಿದೆ.

2007: ಪತ್ನಿಯ ಹೆಸರಿನಲ್ಲಿ ಬೇರೊಬ್ಬ ಮಹಿಳೆಯನ್ನು ವಿದೇಶಕ್ಕೆ ಕರೆದೊಯ್ಯುತ್ತಿದ್ದ ಬಿಜೆಪಿ ಸಂಸದ ಗುಜರಾತಿನ ದಾಹೋದ ಕ್ಷೇತ್ರದ ಲೋಕಸಭೆ ಸದಸ್ಯ ವಿಶ್ವ ಹಿಂದೂ ಪರಿಷತ್ತಿನ ಪ್ರಭಾವಿ ಮುಖಂಡ ಬಾಬುಬಾಯಿ ಕಟಾರಾ, ಅವರ ಜೊತೆಗಿದ್ದ ಮಹಿಳೆ ಪರಮ್ ಜೀತ್ ಕೌರ್ ಮತ್ತು ಆಕೆಯ ಪುತ್ರನನ್ನು ವಲಸೆ ಅಧಿಕಾರಿಗಳು ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದರು.

2007: ವಿಜಯಾ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಪಿ. ಮಲ್ಯ ಅವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ 2006-07ರ ಸಾಲಿನ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಲಭಿಸಿತು.

2007: ಕೈಮಗ್ಗ ಉತ್ಪನ್ನಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಶ್ವಸಂಸ್ಥೆಯ ಪ್ರತಿಷ್ಠಿತ `ವಿಮೆನ್ ಟುಗೆದರ್ ಅವಾರ್ಡ್ -2007'ಗೆ ಆಯ್ಕೆಯಾದರು.

2007: ಅಮೆರಿಕದ ವರ್ಜೀನಿಯಾ ತಾಂತ್ರಿಕ ವಿಶ್ವ ವಿದ್ಯಾನಿಯಲದಲ್ಲಿ ನಡೆದ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ 33ಕ್ಕೆ ಏರಿತು. ಮುಂಬೈಯ ನಿವಾಸಿ ಕೃಷಿ ವಿಜ್ಞಾನ ಪ್ರಥಮ ವರ್ಷದ ವಿದ್ಯಾರ್ಥಿನಿ ಮಿನಾಲ್ ಪಂಚಲ್ ಅವರ ಶವವೂ ಪತ್ತೆಯಾಯಿತು.

2007: ಮುಂಬೈಯಲ್ಲಿ ವರ್ಣರಂಜಿತ ಸಂಗೀತ ಸಮಾರಂಭದೊಂದಿಗೆ ಬಾಲಿವುಡ್ನ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಮದುವೆಯ ಕ್ಷಣಗಣನೆ ಆರಂಭಗೊಂಡಿತು. ಹಿರಿಯ ಚಿತ್ರನಟ ಅಮಿತಾಭ್ ಬಚ್ಚನ್ ಅವರು ಸ್ವತಃ ಐಶ್ವರ್ಯ ರೈ ಅವರ ತಂದೆ ತಾಯಿಯರಾದ ಕೃಷ್ಣರಾಜ್ ಮತ್ತು ವೃಂದಾ ರೈ ಸೇರಿದಂತೆ ಅತಿಥಿಗಳನ್ನು `ಸಂಗೀತ' ಸಮಾರಂಭಕ್ಕೆ ಆಹ್ವಾನಿಸಿದರು.

2007: ಬಾಗ್ದಾದಿನಲ್ಲಿ ನಡೆದ ಭೀಕರ ಕಾರುಬಾಂಬ್ ಸರಣಿ ದಾಳಿಗಳಲ್ಲಿ ಒಟ್ಟು 172 ಜನ ಮೃತರಾದರು.

2007: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಹೋದರ ಪ್ರವೀಣ್ ಕೊಲೆ ಕೃತ್ಯ ನಡೆಯುವುದಕ್ಕೆ ಕೆಲವು ದಿನಗಳ ಮುನ್ನ ಕಳುಹಿಸಿದ್ದು ಎನ್ನಲಾದ ಬೆದರಿಕೆ ಸಂದೇಶದ ವಿವರಗಳನ್ನು ಒಳಗೊಂಡ ದೂರವಾಣಿ ಸಂದೇಶದ ಮಾಹಿತಿ ಸಹಿತವಾದ ಪೂರಕ ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲ್ಲಿಸಲಾಯಿತು. ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕ್ಕಮ್ ಅವರು 6 ಪುಟಗಳ ಪೂರಕ ದೋಷಾರೋಪ ಪಟ್ಟಿಯನ್ನು ರಿಲಯನ್ಸ್ ಇನ್ ಫೋಕಾಮ್ ಅಧಿಕಾರಿ ಜ್ಞಾನೇಂದ್ರ ಉಪಾಧ್ಯಾಯ ಅವರ ದೂರವಾಣಿ ಸಂದೇಶ ಸಂಬಂಧಿತ ಹೇಳಿಕೆ ಮತ್ತು ಪ್ರಮಾಣಪತ್ರ ಸಹಿತವಾಗಿ ಸಲ್ಲಿಸಿದರು.. ಸಂದೇಶವನ್ನು ಮೊಬೈಲ್ ನಂಬರ್ 9323960307ರಿಂದ (ಪ್ರವೀಣ್ ಮಾಲೀಕತ್ವ) ಮೊಬೈಲ್ ನಂಬರ್ 9811445454ಗೆ (ಪ್ರಮೋದ್ ಮಾಲೀಕತ್ವ) 2006ರ ಏಪ್ರಿಲ್ 15ರಂದು ಸಂಜೆ 4.39 ಗಂಟೆಗೆ ಕಳುಹಿಸಲಾಗಿದೆ ಎಂದು ಕಂಪ್ಯೂಟರ್ನಿಂದ ಪಡೆಯಲಾಗಿರುವ ದೂರವಾಣಿ ಸಂದೇಶ ಸಂಬಂಧಿತ ಹೇಳಿಕೆಯು ತಿಳಿಸಿತ್ತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಶ್ರೀಹರಿ ದಾವರೆ ಅವರ ಸಮ್ಮುಖದಲ್ಲಿ ಹಿಂದಿನ ದಿನ ಬಿಜೆಪಿ ನಾಯಕ ಗೋಪೀನಾಥ ಮುಂಡೆ ಅವರು ಗುರುತಿಸಿದ ದೂರವಾಣಿಯ ಇನ್ ಬಾಕ್ಸ್ನಿಂದ ಈ ಸಂದೇಶವನ್ನು ತೆಗೆಯಲಾಗಿದೆ. ಪದ್ಯರೂಪದ ಬೆದರಿಕೆಯೊಂದಿಗೆ ಪ್ರವೀಣ್ ಹೆಸರನ್ನು ಸಂದೇಶವು ಒಳಗೊಂಡಿದೆ.

2006: ಕರಾಚಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಪಾನ್ ಆಮ್ ವಿಮಾನದಲ್ಲಿ ಅಪಹರಣಕಾರರ ವಿರುದ್ಧ ಸೆಣಸಿ ಮಡಿದ ಗಗನ ಸಖಿ ಚಂಡೀಗಢದ ನೀರಜಾ ಭಾನೋಟ್ ಅವರಿಗೆ ಅಮೆರಿಕದ ಅತ್ಯುಚ್ಚ ಶೌರ್ಯ ಪ್ರಶಸ್ತಿ ಪ್ರಕಟಿಸಲಾಯಿತು.
2006: ಪತ್ರಿಕೋದ್ಯಮ ಶ್ರೇಷ್ಠತೆಗಾಗಿ ನೀಡಲಾಗುವ ನಾಲ್ಕು ಪುಲಿಟ್ಜರ್ ಪ್ರಶಸ್ತಿಗಳನ್ನು ನ್ಯೂಯಾರ್ಕಿನ ವಾಷಿಂಗ್ಟನ್ ಪೋಸ್ಟ್ ತನ್ನ ಮಡಿಲಿಗೆ ಹಾಕಿಕೊಂಡಿತು.

2006: ಹಿರಿಯ ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ನಟ ಶರದ್ ಅಲಿಯಾಸ್ ದಲ್ ಜೇಮ್ ನೀಸ್ (72) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಕೊಲ್ಹಾಪುರದಲ್ಲಿ ನಿಧನರಾದರು. ಶರದ್ ಅವರು 1950ರಿಂದ 1976ರವರೆಗೆ ಅನೇಕ ಚಲನಚಿತ್ರ ಮತ್ತು ನನಾಟಕಗಳಲ್ಲಿ ಅಭಿನಯಿಸಿದ್ದು, ಅವುಗಳಲ್ಲಿ `ಧಾನಾಜಿ ಶಾಂತಾಜಿ' ಚಿತ್ರ ಅತ್ಯಂತ ಪ್ರಸಿದ್ಧ. ನಾಟಕಗಳಲ್ಲಿ `ಸಂಗೀತ್ ಸೌಭದ್ರ' `ಜೈದೇವ್', `ಸ್ವಯಂವರ', `ಮೃಚ್ಛಕಟಿಕ', `ಮಹಾಶ್ವೇತಾ' ಪ್ರಮುಖವಾದುವು.

1930: ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ಭಾರತೀಯ ಕ್ರಾಂತಿಕಾರಿಗಳಿಂದ ದಾಳಿ ನಡೆಯಿತು. ಕ್ರಾಂತಿಕಾರಿ ಸೂರ್ಯ ಸೇನ್ ನೇತೃತದಲ್ಲಿ ಇಂಡಿಯನ್ ರಿಪಬ್ಲಿಕನ್ ಆರ್ಮಿಯ 62 ಮಂದಿ ಕ್ರಾಂತಿಕಾರಿಗಳು ಚಿತ್ತಗಾಂಗಿನಲ್ಲಿದ್ದ ಪೊಲೀಸ್ ಮತ್ತು ಬ್ರಿಟಿಷ್ ಪಡೆಗಳ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದರು. `ಚಿತ್ತಗಾಂಗ್ ಶಸ್ತ್ರಾಗಾರ ಮೇಲೆ ದಾಳಿ' ಎಂದೇ ಖ್ಯಾತಿ ಪಡೆದ ಈ ಘಟನೆ ಬ್ರಿಟಿಷರನ್ನು ಬೆಚ್ಚಿ ಬೀಳಿಸಿತು.

1926: ವೃತ್ತಿ ರಂಗಭೂಮಿಯ ಸಂಸ್ಥೆಗಳಿಗೆ ನಾಟಕ ರಚನೆ, ವಾದ್ಯ ಸಂಗೀತದ ನೆರವಿನ ಮೂಲಕ ರಂಗಭೂಮಿಗೆ 5 ದಶಕಗಳಿಂದ ಕಲಾಸೇವೆ ಮಾಡುತ್ತ ಬಂದ ಕೆ.ಎಲ್. ನಾಗರಾಜ ಶಾಸ್ತ್ರಿ ಅವರು ಲಕ್ಷ್ಮಿ ನರಸಿಂಹ ಶಾಸ್ತ್ರಿ- ಗೌರಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಜನಿಸಿದರು.

1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಗಲ್ಲಿಗೇರಿಸಲಾಯಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಕೊಲೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.

1859: ಭಾರತೀಯ ಕ್ರಾಂತಿಕಾರಿ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಶಿವಪುರಿಯಲ್ಲಿ ಗಲ್ಲಿಗೇರಿಸಿತು. ಅವರು 1857ರ ಮೊದಲ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲ್ಲ್ಲಿಒಬ್ಬರಾಗಿದ್ದರು.

1858: ಮಹರ್ಷಿ ಧೊಂಡೋ ಕೇಶವ ಕರ್ವೆ (1858-1962) ಜನ್ಮದಿನ. ಇವರು ಭಾರತೀಯ ಸಮಾಜ ಸುಧಾರಕರಾಗಿದ್ದು ಮಹಿಳಾ ಶಿಕ್ಷಣ ಹಾಗೂ ಹಿಂದು ವಿಧವೆಯರ ಮರುವಿವಾಹಕ್ಕೆ ಬೆಂಬಲ ನೀಡಿದರು. 100ನೇ ಜನ್ಮದಿನದ ಸಂದರ್ಭದಲ್ಲಿ ಅವರನ್ನು `ಭಾರತರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement