ಇಂದಿನ ಇತಿಹಾಸ
ಮೇ 14
ಎಡ್ವರ್ಡ್ ಜೆನ್ನರ್ ಹಾಲು ಮಾರಾಟಗಾರ್ತಿಯೊಬ್ಬಳ ಕೈಗೆ ತಗುಲಿದ್ದ ದನದ ಸಿಡುಬಿನ ಕೀವನ್ನು ತೆಗೆದು 8 ವರ್ಷದ ಆರೋಗ್ಯಶಾಲಿ ಬಾಲಕ ಜೇಮ್ಸ್ ಫಿಪ್ಸ್ ನ ಕೈಗೆ ಸೇರಿಸಿದ. ಫಿಪ್ಸ್ ನಲ್ಲಿ ಸಿಡುಬಿನ ದುಷ್ಪರಿಣಾಮ ಕಾಣಲಿಲ್ಲ. ಆರು ವಾರಗಳ ನಂತರ ಸಿಡುಬು ಪೀಡಿತ ವ್ಯಕ್ತಿಯೊಬ್ಬನ ಕೀವನ್ನು ಜೆನ್ನರ್ ಅದೇ ಬಾಲಕನಿಗೆ ಸೇರಿಸಿದ. ಬಾಲಕನಿಗೆ ಸಿಡುಬು ತಟ್ಟಲಿಲ್ಲ.. ಜೆನ್ನರನ ಈ ಪ್ರಯೋಗ `ಲಸಿಕೆಯ' (ವ್ಯಾಕ್ಸಿನೇಷನ್) ಹುಟ್ಟಿಗೆ ನಾಂದಿಯಾಯಿತು.
2007: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಆಂಧ್ರಪ್ರದೇಶ ಮೂಲದ ಮುತ್ಯಾಲರಾಜ ರೇವು ಅವರು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ ಸಿ) ನಡೆಸಿದ 2006ರ ನಾಗರಿಕ ಸೇವಾ (ಮುಖ್ಯ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು.
2007: ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿದರು.
2007: ರಸ್ತೆ ಅಪಘಾತದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ 27 ಮಂದಿ ಸಜೀವವಾಗಿ ದಹನಗೊಂಡ ಘಟನೆ ಆನಂದ್ ಬಳಿ ಘಟಿಸಿತು. ವಡೋದರ ಜಿಲ್ಲೆಯ ಮೆಹಸಾನದಿಂದ ರಮೇಶರಕ್ಕೆ ಹೊರಟಿದ್ದ ಸಿಎನ್ಜಿ ಬಸ್ ಎಲ್ಪಿಜಿ ಟ್ಯಾಂಕರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರಂತ ಸಂಭವಿಸಿತು.
2007: ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ನೆರೆದುಗುಂಡ ಬಳಿ ವ್ಯಾನ್ ಮತ್ತು ಟ್ರಕ್ ಪರಸ್ಪರ ಡಿಕ್ಕಿಯಾಗಿ ಕನಿಷ್ಠ 18 ಜನ ಮೃತರಾದರು.
2007: ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಅಮಾನತು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಫಲೆಕ್ ಶೇರ್ ಪೀಠಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಬಳಿಕ ಮುಖ್ಯನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಅವರು 14 ಸದಸ್ಯರ ಪೂರ್ಣಪೀಠವನ್ನು ಮರುಸ್ಥಾಪಿಸಿದರು.
2006: ಖ್ಯಾತ ಪಿಟೀಲುವಾದಕ ಲಾಲ್ಗುಡಿ ಜಯರಾಮನ್ ಅವರಿಗೆ ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿಯು 2006ನೇ ಸಾಲಿನ `ಎಸ್.ವಿ. ನಾರಾಯಣಸ್ವಾಮಿ ರಾವ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಗೌರವಿಸಿತು. 68ನೇ ರಾಮನವಮಿ ಸಂಗೀತೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು.
2006: ಅಸ್ಸಾಂ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ತರುಣ್ ಗೊಗೋಯ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅಸ್ಸಾಂ ರಾಜ್ಯ ರಚನೆಯಾದ ಬಳಿಕ ಗೊಗೋಯ್ ಈಗ 16ನೇ ಅವಧಿಯ ಮುಖ್ಯಮಂತ್ರಿ.
2006: ಅಮೆರಿಕದ ಮಾಂಟ್ ಗೊಮೆರಿ ಕೌಂಟಿಯ ಮುಂಚೂಣಿಯ ಹೈಸ್ಕೂಲುಗಳಲ್ಲಿ ಒಂದಾದ ಮೇರಿಲ್ಯಾಂಡಿನ ಬೆಥೆಸ್ಡಾ ಚೆವಿ ಚೇಸ್ ಹೈಸ್ಕೂಲಿನಲ್ಲಿ (ಬಿಸಿಸಿ) ಕಲಿಯುತ್ತಿರುವ ಭಾರತೀಯ ಮೂಲದ ಹರೆಯದ ವಿದ್ಯಾರ್ಥಿನಿ ಶ್ರೀಮತಿ ಶ್ರೀಧರ್ ಅವರನ್ನು ಹೈಸ್ಕೂಲ್ ತಾನು ಪ್ರಕಟಿಸುತ್ತಿರುವ `ಟಟ್ಲೇರ್' ಪತ್ರಿಕೆಯ ಆನ್ ಲೈನ್ ಆವೃತ್ತಿಯ ಮುಖ್ಯ ಸಂಪಾದಕಿಯನ್ನಾಗಿ ನೇಮಕ ಮಾಡಿತು. ಈ ವಿದ್ಯಾರ್ಥಿನಿ ಈ ವೃತ್ತ ಪತ್ರಿಕೆಯ ಸಿಬ್ಬಂದಿ ಬರಹಗಾರ್ತಿಯಾಗಿದ್ದಾರೆ.
2006: ಕೇಂದ್ರ ದೆಹಲಿಯ ರಾಜಾಜಿ ಮಾರ್ಗದಲ್ಲಿ ನಿವೇಶನ ಮಂಜೂರಾದ ಎಂಟು ವರ್ಷಗಳ ಒಳಗಾಗಿ ನಿರ್ಮಾಣಗೊಂಡಿರುವ ಡಿಆರ್ ಡಿಓ ಕೇಂದ್ರ ಕಚೇರಿಯನ್ನು ಪ್ರಧಾನಿ ಡಾ. ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದು ಕೆಂಪು ಮರಳುಕಲ್ಲಿನ ಸುಂದರ ಕಟ್ಟಡ. ರಾಷ್ಟ್ರಪತಿ ಭವನ, ನಾರ್ಥ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಸಂಸತ್ ಕಟ್ಟಡಗಳು ಇರುವ ಸುಂದರ ಪ್ರದೇಶಕ್ಕೆ ಈ ಡಿಆರ್ ಡಿಓ ಕೇಂದ್ರ ಕಚೇರಿ ಇನ್ನಷ್ಟು ಶೋಭೆ ನೀಡಿತು. ಎ.ಪಿ.ಜೆ. ಅಬ್ದುಲ್ ಕಲಾಂ, ವಿ.ಕೆ. ಅತ್ರೆ ಮತ್ತು ಎಂ. ನಟರಾಜನ್ ಈ ಮೂವರು ಕಳೆದ 8 ವರ್ಷಗಳಲ್ಲಿ ಈ ಯೋಜನೆಯ ಜಾರಿಗೆ ಶ್ರಮವಹಿಸಿದ ಪ್ರಮುಖರು.
1973: ಸಿ. ಹೊನ್ನಪ್ಪ ಹುಟ್ಟಿದ ದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಅತ್ಯುತ್ತಮ ಕಬಡ್ಡಿ ಆಟಗಾರರಲ್ಲಿ ಇವರು ಒಬ್ಬರು. ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.
1973: ತನ್ನ ಪ್ರಪ್ರಥಮ `ಸ್ಕೈಲ್ಯಾಬ್-1' ಮಾನವ ಸಹಿತ ಅಂತರಿಕ್ಷ ನಿಲ್ದಾಣವನ್ನು ಅಮೆರಿಕ ಅಂತರಿಕ್ಷಕ್ಕೆ ಉಡಾವಣೆ ಮಾಡಿತು. 34,981 ಪ್ರದಕ್ಷಿಣೆಗಳ ಬಳಿಕ 1979ರ ಜುಲೈ 11ರಂದು ಅದು ಉರಿದು ಸಮುದ್ರಕ್ಕೆ ಬಿತ್ತು.
1963: ಕಲಾವಿದೆ ರತ್ನ ಸುಪ್ರಿಯ ರಾಮಮೋಹನ್ ಜನನ.
1956: ಕಲಾವಿದ ಎಂ.ಜಿ. ವೆಂಕಟರಾಘವನ್ ಜನನ.
1955: ಕಲಾವಿದೆ ಎಂ.ಕೆ. ಜಯಶ್ರೀ ಜನನ.
1948: ಇಸ್ರೇಲಿನ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಡೇವಿಡ್ ಬೆನ್-ಗ್ಯುರಿಯನ್ ಹೊಸ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯನ್ನು ಸಂಜೆ 4 ಗಂಟೆಗೆ ಮಾಡಿದರು.
1934: ಖ್ಯಾತ ಸಂಗೀತಗಾರ ಎಚ್. ಕೆ. ನಾರಾಯಣ ಅವರು ಸಂಗೀತಗಾರ ಕೇಶವಯ್ಯ- ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.
1924: ಕಲಾವಿದ ಮಾಧವರಾವ್ ಕೆ.ಬಿ. ಜನನ.
1923: ಭಾರತದ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಜನ್ಮ ದಿನ.
1796: ಎಡ್ವರ್ಡ್ ಜೆನ್ನರ್ ಹಾಲು ಮಾರಾಟಗಾರ್ತಿಯೊಬ್ಬಳ ಕೈಗೆ ತಗುಲಿದ್ದ ದನದ ಸಿಡುಬಿನ ಕೀವನ್ನು ತೆಗೆದು 8 ವರ್ಷದ ಆರೋಗ್ಯಶಾಲಿ ಬಾಲಕ ಜೇಮ್ಸ್ ಫಿಪ್ಸ್ ನ ಕೈಗೆ ಸೇರಿಸಿದ. ಫಿಪ್ಸ್ ನಲ್ಲಿ ಸಿಡುಬಿನ ದುಷ್ಪರಿಣಾಮ ಕಾಣಲಿಲ್ಲ. ಆರು ವಾರಗಳ ನಂತರ ಸಿಡುಬು ಪೀಡಿತ ವ್ಯಕ್ತಿಯೊಬ್ಬನ ಕೀವನ್ನು ಜೆನ್ನರ್ ಅದೇ ಬಾಲಕನಿಗೆ ಸೇರಿಸಿದ. ಬಾಲಕನಿಗೆ ಸಿಡುಬು ತಟ್ಟಲಿಲ್ಲ.. ಜೆನ್ನರನ ಈ ಪ್ರಯೋಗ `ಲಸಿಕೆಯ' (ವ್ಯಾಕ್ಸಿನೇಷನ್) ಹುಟ್ಟಿಗೆ ನಾಂದಿಯಾಯಿತು.
1643: ಫ್ರಾನ್ಸಿನ ದೊರೆ 8ನೇ ಲೂಯಿ ಮೃತನಾದ್ದದರಿಂದ ಆತನ 4 ವರ್ಷ ವಯಸ್ಸಿನ ಮಗ 9ನೇ ಲೂಯಿ ಫ್ರಾನ್ಸಿನ ರಾಜನಾದ. 9ನೇ ಲೂಯಿ 72 ವರ್ಷಗಳ ಕಾಲ ರಾಜ್ಯಭಾರ ನಡೆಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment