Friday, July 4, 2008

ಇಂದಿನ ಇತಿಹಾಸ History Today ಜುಲೈ 4

ಇಂದಿನ ಇತಿಹಾಸ

ಜುಲೈ 4

ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ತಾನದ ಭದ್ರತಾ ಪಡೆಗಳ ನಡುವೆ ನಡೆದ ಎರಡು ದಿನಗಳ ಗುಂಡಿನ ಚಕಮಕಿಯಲ್ಲಿ ವಿದ್ಯಾರ್ಥಿಗಳು ಮತ್ತು ಸೈನಿಕರೂ ಸೇರಿದಂತೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿತು.

2007: ಮಹಿಳೆಯೊಬ್ಬರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ವಿವಾದ ಸೃಷ್ಟಿಸಿದ್ದ ಬಾಲಕ ದಿಲೀಪನ್ ರಾಜ್ (16) ಬುಧವಾರ ತಿರುಚಿರಾಪಳ್ಳಿಯ ಬಾಲ ನ್ಯಾಯ ಮಂಡಳಿಯ ಎದುರು ಶರಣಾಗತನಾದ. ಹತ್ತನೇ ತರಗತಿ ವಿದ್ಯಾರ್ಥಿಯಾದ ಈತ ದಾಖಲೆಗಾಗಿ ತನ್ನ ವೈದ್ಯ ತಂದೆ ತಾಯಿಯ ನೆರವಿನಿಂದ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದ್ದ. ಆದರೆ ವೈದ್ಯಕೀಯ ಸಂಘ ಇದನ್ನು ಆಕ್ಷೇಪಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ದಿಲೀಪನ್ ನಾಪತ್ತೆಯಾಗಿದ್ದ. ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಈದಿನ ಮಧ್ಯಾಹ್ನ ಆತ ತನ್ನ ವಕೀಲರೊಂದಿಗೆ ಬಾಲ ನ್ಯಾಯ ಮಂಡಳಿ ಎದುರು ಹಾಜರಾದ.

2007: ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 4 ರಷ್ಟು ಮೀಸಲು ನೀಡಲು ಹೊಸದಾಗಿ ಸುಗ್ರೀವಾಜ್ಞೆ ಹೊರಡಿಸಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿತು. ರಾಜ್ಯ ಹಿಂದುಳಿದ ಆಯೋಗ ಮುಸ್ಲಿಂ ಸಮುದಾಯದ 15 ಪಂಗಡಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಆ ಪಂಗಡದ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ವೈ. ಎಸ್. ರಾಜಶೇಖರ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಈದಿನ ಇದನ್ನು ಅಂಗೀಕರಿಸಿತು. ಸರ್ಕಾರ ಈ ಹಿಂದೆ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ ನೀಡಿದ್ದನ್ನು ಹೈಕೋರ್ಟ್ ರದ್ದು ಮಾಡಿತ್ತು.

2007: ಪ್ಯಾಲಸ್ಟೈನಿನ ಇಸ್ಲಾಮಿಕ್ ಸೇನೆ ಮತ್ತು ಹಮಾಸ್ ಆಡಳಿತದ ನಡುವೆ ನಡೆದ ಮಾತುಕತೆಯ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಮಾರ್ಚ್ ತಿಂಗಳಲ್ಲಿ ಅಪಹರಣಗೊಂಡಿದ್ದ ಬಿಬಿಸಿ ವರದಿಗಾರ ಅಲಾನ್ ಜಾನ್ ಸ್ಟನ್ ಅವರನ್ನು ಗಾಜಾದಿಂದ ಬಿಡುಗಡೆ ಮಾಡಲಾಯಿತು. ಅಲಾನ್ ಅವರನ್ನು ಇಸ್ಲಾಮಿಕ್ ಸೇನೆಯು ಈದಿನ ಬೆಳಿಗ್ಗೆ ಹಮಾಸ್ ಆಡಳಿತಕ್ಕೆ ಒಪ್ಪಿಸಿತು. ನಂತರ ಹಮಾಸ್ ಆಡಳಿತ ಅವರನ್ನು ಬಂಧಮುಕ್ತರನ್ನಾಗಿ ಮಾಡಿತು. ಅಪಹರಣಕ್ಕೆ ಸಂಬಂಧಿಸಿ ಹಮಾಸ್ ಆಡಳಿತ ತನಗೆ ತೊಂದರೆ ನೀಡಿದರೆ ಜಾನ್ ಸ್ಟನ್ ಅವರನ್ನು ಹತ್ಯೆ ಮಾಡುವುದಾಗಿ ಇಸ್ಲಾಮಿಕ್ ಸೇನೆ ಬೆದರಿಕೆ ಹಾಕಿತ್ತು.

2007: ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಢಾಕಾದ ಭ್ರಷ್ಟಾಚಾರ ವಿರೋಧಿ ವಿಶೇಷ ನ್ಯಾಯಾಲಯವು ಬಾಂಗ್ಲಾದೇಶದ ಮಾಜಿ ನಾಗರಿಕ ವಿಮಾನಯಾನ ಸಚಿವ ಮಹಮ್ಮದ್ ನಾಸಿರುದ್ದೀನ್ ಅವರಿಗೆ 13 ವರ್ಷಗಳ ಸಜೆ ವಿಧಿಸಿತು. ನ್ಯಾಯಾಧೀಶ ಅಮರ್ ಕುಮಾರ್ ನಾಥ್ ಈ ತೀರ್ಪು ನೀಡಿದರು. ಮಾಜಿ ಸಚಿವ ಅಮಾನುಲ್ಲಾ ಅಮಾನ್ ಅವರಿಗೆ ಸಜೆ ವಿಧಿಸಿದ ನಂತರ ಅಕ್ರಮ ಸಂಪತ್ತು ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾದ ಮಾಜಿ ಸಚಿವರಲ್ಲಿ ನಾಸಿರುದ್ದೀನ್ ಎರಡನೆಯವರು. ಐದು ಲಕ್ಷ ಟಾಕಾ (ಬಾಂಗ್ಲಾ ನಾಣ್ಯ) ದಂಡ ವಿದಿಸಿದ್ದಲ್ಲದೆ, ಅಕ್ರಮ ಹಣ ಗಳಿಕೆಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ಹಿದಾಯತ್ ಉಲ್ಲಾನಿಗೂ ಮೂರು ವರ್ಷ ಸಜೆ ಹಾಗೂ ಒಂದು ಲಕ್ಷ ಟಾಕಾ ದಂಡವನ್ನೂ ನ್ಯಾಯಾಲಯ ವಿಧಿಸಿತು.

2007: ಇಸ್ಲಾಮಾಬಾದಿನ ಲಾಲ್ ಮಸೀದಿಯಲ್ಲಿ ಅಡಗಿದ ತೀವ್ರಗಾಮಿ ವಿದ್ಯಾರ್ಥಿಗಳು ಹಾಗೂ ಪಾಕಿಸ್ತಾನದ ಭದ್ರತಾ ಪಡೆಗಳ ನಡುವೆ ನಡೆದ ಎರಡು ದಿನಗಳ ಗುಂಡಿನ ಚಕಮಕಿಯಲ್ಲಿ ವಿದ್ಯಾರ್ಥಿಗಳು ಮತ್ತು ಸೈನಿಕರೂ ಸೇರಿದಂತೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿತು. ಸರ್ಕಾರದ ಆದೇಶದಂತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶರಣಾಗತರಾದರು.

2007: ಪರಿಶಿಷ್ಟ ಪಂಗಡಗಳಿಗೆ ಅನುಕೂಲವಾಗುವ ಕರ್ನಾಟಕದ ಮಹತ್ವಾಕಾಂಕ್ಷಿ `ಸುವರ್ಣ ಸಂಕಲ್ಪ' ಯೋಜನೆಗೆ ತುಮಕೂರು ಜಿಲ್ಲೆಯ ಬೆಳ್ಳಾವೆ ವಿಧಾನಸಭಾ ಕ್ಷೇತ್ರದ ಬುಳ್ಳಸಂದ್ರ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ತಮ್ಮದೇ ಆದ ಜಮೀನು ಹೊಂದಿರುವ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ವಿಶೇಷ ಕೇಂದ್ರೀಯ ಸಹಾಯಧನದಡಿ ತುಮಕೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮುಂಬರುವ 5- 6 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಯೋಜನೆ ಅನುಷ್ಠಾನಕ್ಕೆ ಬರುವುದು. ಬೈಫ್ ಸಂಸ್ಥೆಯು ಯೋಜನೆಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿ.

2006: ಗಿನ್ನೆಸ್ ದಾಖಲೆ ಪುಸ್ತಕದ ವೆಬ್ ಸೈಟಿನಲ್ಲಿ ಮ್ಯಾರಥಾನ್ ಉಪನ್ಯಾಸದ `ಗಿನ್ನೆಸ್ ದಾಖಲೆ'ಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಅಣ್ಣಯ್ಯ ರಮೇಶ್ ಅವರ ಹೆಸರು ದಾಖಲಾಯಿತು. ಅವರು 98 ಗಂಟೆ 30 ನಿಮಿಷಗಳ ಕಾಲ ನಿರಂತರ ಉಪನ್ಯಾಸ ನೀಡಿ `ಗಿನ್ನೆಸ್ ದಾಖಲೆ' ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದರು. ಮಾರ್ಚ್ 22ರಿಂದ 26ರವರೆಗೆ 98 ಗಂಟೆ, 32 ನಿಮಿಷ ಉಪನ್ಯಾಸ ನೀಡಿ ಗಿನ್ನೆಸ್ ಪುಸ್ತಕದ ದಾಖಲೆಗಾಗಿ ದಾಖಲೆ ಪತ್ರಗಳನ್ನು ಕಳುಹಿಸಿದ್ದರು. ಈ ಹಿಂದೆ ಆಂಧ್ರ ಪ್ರದೇಶದ ಶಿವಶಂಕರ್ ಹೆಸರಿನಲ್ಲಿ ಈ ದಾಖಲೆ (72 ಗಂಟೆ 9 ನಿಮಿಷ) ಇತ್ತು.

2006: ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥರು ದಿಢೀರ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಸುಯತೀಂದ್ರ ತೀರ್ಥರು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ 39ನೇ ಪೀಠಾಧಿಕಾರಿಯಾಗಿ ಪದಗ್ರಹಣ ಮಾಡಿದರು.

2006: ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮುಂಬೈ ತತ್ತರಿಸಿತು. ಮತ್ತೆ 7 ಮಂದಿ ಅಸು ನೀಗಿದರು.

1902: ಸ್ವಾಮಿ ವಿವೇಕಾನಂದ ಅವರು ಈ ದಿನ ನಿಧನರಾದರು.

1952: ಸುಶೀಲಾದೇವಿ ಆರ್. ರಾವ್ ಜನನ.

1936: ಎಂ.ಸಿ. ಅಂಟಿನ ಜನನ.

1930: ಸರೋಜಿನಿ ಶಿಂತ್ರಿ ಜನನ.

1927: ಗೀತಾ ಕುಲಕರ್ಣಿ ಜನನ.

1904: ಹಳ್ಳಿಯ ಬದುಕಿನ ಯಥಾವತ್ ಚಿತ್ರ ನೀಡುವುದರಲ್ಲಿ ನಿಸ್ಸೀಮರಾಗಿದ್ದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಶ್ರೀನಿವಾಸ ಅಯ್ಯಂಗಾರ್- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಗೊರೂರು 1991ರ ಸೆಪ್ಟೆಂಬರ್ 28ರಂದು ನಿಧನರಾದರು.

1904: ಖ್ಯಾತ ಸಾಹಿತಿ ಸಿದ್ದವನಹಳ್ಳಿ ಕೃಷ್ಣ ಶರ್ಮ ಜನನ.

1898: ಗುಲ್ಜಾರಿಲಾಲ್ ನಂದಾ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement