Friday, August 8, 2008

Wonder Spring Talaparige..! ಸಿಹಿನೀರ ಬುಗ್ಗೆ ತಲಪರಿಗೆ..!

Wonder Spring Talaparige..!

Many people don't know about these springs. But you may not believe these Wonder Springs of about 400 square foot dimension provides water for about 200 acres of land. This spring is known as 'Talaparige', a conventional system of storing water in Tumkur, Kolar and Chitradurga Districts. Ganadhalu Shrikanta has provided some information about Talaparige, which is just like Madaka's in Dakshina Kannada District. A movement to save these 'Talaparige' has been started in Tumkur District and a book on Talaparige would be released on Sunday 10th of August 2008 at Madhugiri.


ಬೆಟ್ಟದ ತಪ್ಪಲಲ್ಲಿ ಚಿಮ್ಮುವ

ಸಿಹಿನೀರ ಬುಗ್ಗೆ

ತಲಪರಿಗೆ

ಕಟ್ಟ, ಮದಕಗಳು ಕರಾವಳಿ, ಮಲೆನಾಡಿನ ಪಾರಂಪರಿಕ ಜಲನಿಧಿಗಳು. ಹಾಗೇ `ತಲಪರಿಗೆ' ಬಯಲು ಸೀಮೆಯ ಜಲನಿಧಿ. ಕೆರೆ, ಕಟ್ಟೆ, ಹೊಳೆ, ಹಳ್ಳಗಳು ಬತ್ತಿದಾಗ ಜೀವ ತಳೆವ ಜಲ ಸೆಲೆಗಳು. ಅಳಿವಿನಂಚಿನಲ್ಲಿರುವ ಈ ಜಲ ನಿಧಿಗಳನ್ನು ಪುನರುಜ್ಜೀವನಗೊಳಿಸಲು ಸಮುದಾಯ ಹಾಗೂ ಸಂಸ್ಥೆಗಳು ಈಗ ಮುಂದಾಗಿವೆ.

ಲೇಖನ : ಗಾಣಧಾಳು ಶ್ರೀಕಂಠ
ಚಿತ್ರಗಳು: ಮಲ್ಲಿಕಾರ್ಜುನ ಹೊಸಪಾಳ್ಯ, ಭೂಷಣ್ ಮಿಡಿಗೇಶಿ


`ತಲಪರಿಗೆ'- ಬಯಲು ಸೀಮೆಯಲ್ಲಿ ಕೆರೆ ಕುಂಟೆಗಳು ಬತ್ತಿದಾಗ ರೈತರಿಗೆ ಆಸರೆಯಾಗುವ ಜಲನಿಧಿ. ತುಮಕೂರು, ಕೋಲಾರ, ಚಿತ್ರದುರ್ಗ ಜಿಲ್ಲೆಗಳ ಗ್ರಾಮೀಣ ಜನರಿಗೆ ತಲಪರಿಗೆ ಪರಿಚಿತ ಹೆಸರು. ಬೆಟ್ಟದ ಮೇಲೆ ಸುರಿದ ಮಳೆ ನೀರು ಹನಿಹನಿಯಾಗಿ ಭೂಮಿ ಸೇರಿ, ನಂತರ ಭೂಪದರದೊಳಕ್ಕೆ ಸೇರುತ್ತಾ ತೊಸಕಲು ಭೂಮಿಯಲ್ಲಿ (ಉಸುಕು ಮಣ್ಣು/ಮರಳಿನ ಪ್ರದೇಶದಲ್ಲಿ) ನೀರಿನ ಬುಗ್ಗೆಯಾಗಿ ಉಕ್ಕುತ್ತವೆ. ಜಲ ಉಕ್ಕುವ ಸ್ಥಳದಲ್ಲಿ ತೋಡುವ ಗುಂಡಿಯೇ `ತಲಪರಿಗೆ'.


ಕೆರೆಯಲ್ಲಿ ನೀರು ಬತ್ತಿಹೋದ ಮೇಲೆ ತಲಪರಿಗೆಗಳಲ್ಲಿ ನೀರು ಉಕ್ಕಲಾರಂಭಿಸುತ್ತದೆ. ಕೆರೆ ನೀರಿಗೆ ಪರ್ಯಾಯ ಎನಿಸುವ ಈ ತಲಪರಿಗೆಗಳು ಬೆಟ್ಟದ ತಪ್ಪಲು, ಕೆರೆ ಅಂಗಳ ಮತ್ತು ಕೆರೆಯ ಕ್ಯಾಚ್ ಮೆಂಟ್ ಪ್ರದೇಶ (ಜಲಾನಯನ ಪ್ರದೇಶ) ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ ಇರುತ್ತವೆ. ಸಾಮಾನ್ಯವಾಗಿ ಕೆರೆ ಅಂಗಳದಲ್ಲಿರುವ ತಲಪರಿಗೆಗಳ ಸಂಖ್ಯೆ ಹೆಚ್ಚು. ತುಮಕೂರು ಜಿಲ್ಲೆಯ ಕೊರಟಗೆರೆ, ಪಾವಗಡ, ಮಧುಗಿರಿ ಹಾಗೂ ಕುಣಿಗಲ್ ತಾಲ್ಲೂಕುಗಳ ಬೆಟ್ಟದ ಬುಡದಲ್ಲಿರುವ ಗ್ರಾಮಗಳಲ್ಲಿ ಈಗಲೂ ತಲಪರಿಗೆಗಳಿವೆ. ಒಂದು ಮಾಹಿತಿ ಪ್ರಕಾರ ಪಾವಗಡ ತಾಲ್ಲೂಕಿನಲ್ಲಿದ್ದ 360 ಕೆರೆಗಳಲ್ಲೂ ತಲಪರಿಗೆಗಳು ಇದ್ದವಂತೆ!

ದುರಸ್ತಿಯಿಂದಲೇ ಆರಂಭ : ಬೇಸಿಗೆಯಲ್ಲಿ ತಲಪರಿಗೆಗಳು ರೈತರ ನೆರವಿಗೆ ಧಾವಿಸುತ್ತವೆ. ಕೆರೆ ಬತ್ತಿದ ಬೆನ್ನಲ್ಲೇ ತಲಪರಿಗೆಯ ದುರಸ್ತಿಗೆ ಜನರು ಮುಂದಾಗುತ್ತಾರೆ. ಶಿವರಾತ್ರಿ ಆಸು-ಪಾಸಿನಲ್ಲಿ ತಲಪರಿಗೆ ದುರಸ್ತಿ ಆರಂಭ. ಜನರೆಲ್ಲ ಸೇರಿ ಸಲಿಕೆ, ಗುದ್ದಲಿ ಹಿಡಿದು ಶ್ರಮದಾನದ ಮಾಡಿ ತಲಪರಿಗೆಯ ಹೂಳು ತೆಗೆಯುತ್ತಾರೆ. ಇದು ಮೊದಲ ಹೆಜ್ಜೆ. ಹೂಳು ತೆಗೆದಂತೆ ಗುಂಡಿಯಲ್ಲಿ `ಜಲದ ಕಣ್ಣು'ಗಳು ತೆರೆದುಕೊಳ್ಳುತ್ತವೆ. ನೀರು ಗುಂಡಿಯಲ್ಲಿ ಶೇಖರಣೆಯಾಗುತ್ತದೆ. ಈ ನೀರನ್ನು ಆಗಾಗ ಖಾಲಿ ಮಾಡುತ್ತಿದ್ದರೆ ಮಾತ್ರ ಹೊಸ ನೀರು ಸಂಗ್ರಹವಾಗುತ್ತದೆ. ಇಲ್ಲವಾದರೆ `ಜಲದ ಕಣ್ಣು'ಗಳು ಮುಚ್ಚಿಹೋಗಿ ನೀರಿನ ಒರತೆ ನಿಲ್ಲುತ್ತದೆ. ಇದೇ ತಲಪರಿಗೆಯ ವಿಶೇಷ.

ಕೊರಟಗೆರೆ ತಾಲ್ಲೂಕು ಅಕ್ಕಿ ರಾಂಪುರದಲ್ಲಿರುವ ತಲಪರಿಗೆಯೊಂದರಲ್ಲಿ ಬಹಳ ವರ್ಷಗಳ ನೀರು ತೆಗೆಯದ ಪರಿಣಾಮ ಜಲದ ಕಣ್ಣು ಮುಚ್ಚಿ ಹೋಗಿ ಪಾಚಿಕಟ್ಟಿಕೊಂಡಿದೆ. ತಲಪರಿಗೆಗಳ ನಿರ್ವಹಣೆ ಆಯಾ ಹಳ್ಳಿಯ `ಗಮಕಾರ' ಕುಟುಂಬಕ್ಕೆ ಸೇರಿದ್ದು. ಊರಿಗೊಂದು ನೀರಗಂಟಿ ಕುಟುಂಬ ಇದ್ದ ಹಾಗೆ ಗಮಕಾರ ಕುಟುಂಬಗಳಿವೆ. ಗಮಕಾರನ ನಿರ್ದೇಶನದಂತೆ ತಲಪರಿಗೆಗೆ ಸಂಬಂಧಪಟ್ಟ ಕೆಲಸ- ಕಾರ್ಯಗಳು ನಡೆಯುತ್ತವೆ.

ಸುಸ್ಥಿರತೆಯ ಪ್ರತೀಕ: ತಲಪರಿಗೆ ರೈತ ಸಂಸ್ಕೃತಿಯ ಪ್ರತೀಕ. ಮಾತ್ರವಲ್ಲ, ಜಲ ಸುಸ್ಥಿರತೆಯ ದ್ಯೋತಕ. ಆದ್ದರಿಂದಲೇ ರೈತರು ಪ್ರತಿ ವರ್ಷ ತಲಪರಿಗೆ ಸ್ವಚ್ಛಗೊಳಿಸುತ್ತಾರೆ, ಗಂಗಮ್ಮನ ಪೂಜೆ ಮಾಡುತ್ತಾರೆ. ರೈತರ ಪ್ರಕಾರ, ಕೆರೆ ಬತ್ತಿದಾಗ, ಸುತ್ತಲಿನ ಕೊಳವೆಬಾವಿಗಳು ಸ್ತಬ್ಧವಾದರೂ ಕೆರೆ ಅಂಗಳದಲ್ಲಿನ ತಲಪರಿಗೆಗಳಲ್ಲಿ ನೀರಿನ ಒರತೆ ಇರುತ್ತದೆ. `ಕಳೆದ ವರ್ಷ ಈ ಭಾಗದ ಕೊಳವೆ ಬಾವಿಗಳು ಬತ್ತಿದಾಗಲೂ ತಲಪರಿಗೆಗಳು ಬರಿದಾಗಲಿಲ್ಲ. ಆದ್ದರಿಂದಲೇ ಇವು ಜಲ ಸುಸ್ಥಿರತೆಯ ಪ್ರತೀಕ' ಎನ್ನುತ್ತಾರೆ ಜಲಸಂವರ್ಧನಾ ಸಂಘದ ಸಂವಹನ ತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ.

`ಎರಡು ದಶಕಗಳ ಹಿಂದೆ ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕುಗಳ ಕೆರೆ ಆಸುಪಾಸಿನಲ್ಲಿ ತಲಪರಿಗೆಗಳಿದ್ದವು. ಕೊಳವೆ ಬಾವಿಗಳ ಅಬ್ಬರದಲ್ಲಿ ಅವು ಕಣ್ಮರೆಯಾದವು' ಎಂದು ಪತ್ರಕರ್ತ ಭೂಷಣ್ ಮಿಡಿಗೇಶಿ ಹೇಳುತ್ತಾರೆ. `ಮಧುಗಿರಿ ತಾಲ್ಲೂಕಿನ ಸಿದ್ದಾಪುರದಲ್ಲಿ ಈಗಲೂ ಆರು ತಲಪರಿಗೆಗಳಿವೆ. ಎರಡು ಅಚ್ಚುಕಟ್ಟು ಪ್ರದೇಶದಲ್ಲಿ, ಉಳಿದವು ಕೆರೆ ಅಂಗಳದಲ್ಲಿವೆ. ಚೋಳೇನಹಳ್ಳಿಯ ತಲಪರಿಗೆಗಳು ಇವತ್ತಿಗೂ ಚಾಲ್ತಿಯಲ್ಲಿವೆ.

ಕೊರಟಗೆರೆ ತಾಲ್ಲೂಕಿನ ರಾಯವಾರ ಗ್ರಾಮಸ್ಥರು ತಲಪರಿಗೆ ನೀರಿನಿಂದಲೇ ಬೇಸಿಗೆಯ ಬೆಳೆ ತೆಗೆಯುತ್ತಿದ್ದರಂತೆ. ಇದರಲ್ಲಿ ಕೆರೆ ಕಾಲುವೆಯಲ್ಲಿ ಹರಿಯುವಷ್ಟು ನೀರು ಹರಿಯುತ್ತಿತ್ತು. ಇದರ ರಿಪೇರಿ, ಉಸ್ತುವಾರಿ ರೈತರದೇ ಆಗಿತ್ತು. ಆದರೆ ಕೆಲ ವರ್ಷಗಳಿಂದೀಚೆಗೆ ಬರಗಾಲದಿಂದಾಗಿ ತಲಪರಿಗೆಯಲ್ಲಿ ನೀರು ಕಡಿಮೆಯಾಯಿತು. ತಲಪರಿಗೆ ದುರಸ್ತಿ ಮಾಡದಿರುವುದೇ ಈ ಸ್ಥಿತಿಗೆ ಕಾರಣ. ಈಗ ತಲಪರಿಗೆ ಇದೆ. ಅದರ ಕಾಲುವೆ ತುಂಬಾ ಕಳೆ ಬೆಳೆದಿದೆ.

ಮಧುಗಿರಿ ಸಮೀಪ ನಮ್ಮದು 16 ಎಕರೆ ಭೂಮಿ ಇದೆ. ಎರಡು ತಲಪರಿಗೆಗಳ ನೀರು ಬಳಸಿಕೊಂಡು ಭತ್ತ, ರಾಗಿ ಬೆಳೆಯುತ್ತಿದ್ದೆವು. ತಲಪರಿಗೆಗಳು ಭರ್ತಿಯಾದರೆ ವರ್ಷಕ್ಕೆ ಎರಡು ಬೆಳೆ ತೆಗೀತಿದ್ವಿ. ಈಗ ಮೇಲ್ಭಾಗದವರು ತಲಪರಿಗೆ ಒತ್ತುವರಿ ಮಾಡಿಕೊಂಡು ಮೋಟರ್ ಬಳಸಿ ನೀರು ಹೊಡಿಯುತ್ತಿದ್ದಾರೆ.
ತಲಪರಿಗೆ ಸುತ್ತ ಕೊಳವೆ ಬಾವಿ ನಿರ್ಮಿಸಿದ್ದರಿಂದ ಬರಿದಾಗಿದೆ. ತಲಪರಿಗೆ ಬಿಡಿಸಿಕೊಡಿ ಎಂದು ಅಧಿಕಾರಿಗಳಿಗೂ ದೂರು ಕೊಟ್ಟಿದ್ದೇವೆ ಎನ್ನುತ್ತಾರೆ ನಿವೃತ್ತ ಸಹಾಯಕ ಅಭಿಯಂತರ ಬೈರಣ್ಣ. ತಲಪರಿಗೆ ಉಳಿಸಿಕೊಳ್ಳುವ ಹೋರಾಟವನ್ನು ಅವರು ಮಾಡುತ್ತಿದ್ದಾರೆ.

ಜೆ ಎಸ್ ವೈ ಎಸ್ ಯತ್ನ: ಈ ತಾಲ್ಲೂಕುಗಳಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಕೆರೆ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಜೆ ಎಸ್ ವೈ ಎಸ್ ಸಂಸ್ಥೆ ಕೆರೆ ಹೂಳೆತ್ತುವ ಜೊತೆಗೆ ತಲಪರಿಗೆಗಳ ಪುನರುಜ್ಜೀವನಕ್ಕೆ ಕೈ ಹಾಕಿದೆ. ಯೋಜನೆಯಲ್ಲಿ ತಲಪರಿಗೆ ವಿಷಯ ಕಡ್ಡಾಯವಲ್ಲದಿದ್ದರೂ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಹೊಸಪಾಳ್ಯ, ಭೂಷಣ್ ಮಿಡಿಗೇಶಿ ಮತ್ತು ನರಸಿಂಹಲು ಬಾಬು ಅವರ ವೈಯಕ್ತಿಕ ಆಸಕ್ತಿ ಮೇರೆಗೆ ಕಳೆದೆರಡು ವರ್ಷಗಳಲ್ಲಿ 20 ತಲಪರಿಗೆಗಳು ಪುನಶ್ಚೇತನಗೊಂಡಿವೆ. ತಲಪರಿಗೆ ಉಳಿಸುವ ಕಾರ್ಯ `ಆಂದೋಲನ' ರೂಪ ಪಡೆದುಕೊಂಡಿದೆ.

ತಲಪರಿಗೆ ಉಳಿಸಿ: ಅಲ್ಲಲ್ಲಿ ಮುಚ್ಚಿ ಹೋಗಿರುವ ತಲಪರಿಗೆಗಳಿಗೆ ಜೀವ ತುಂಬುವ ಕೆಲಸ ಆಗಬೇಕಾಗಿದೆ. ಹಿರಿಯ ರೈತರು ತಲಪರಿಗೆಯ ಮಹತ್ವವನ್ನು ಕಿರಿಯರಿಗೆ ತಿಳಿಸುವುದು ಕಡ್ಡಾಯ. ಈ ನಿಟ್ಟಿನಲ್ಲಿ ಜೆ ಎಸ್ ವೈ ಎಸ್ ಜೊತೆಗೆ ಸರ್ಕಾರ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು, ಸ್ಥಳೀಯ ಜನರು ಕೈ ಜೋಡಿಸಬೇಕಿದೆ. ತಲಪರಿಗೆಗಳಿದ್ದರೂ ಅವನ್ನು ಬಳಸಿಕೊಳ್ಳದ ಕಾರಣ, ಈ ಮೂರು ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಶುದ್ಧ ನೀರಿಗೆ ಜನರು ಹಣ ತೆರಬೇಕಾದ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಲ್ಲಿ ಸಿಹಿ ನೀರು ಕೊಡುವ ಹಾಗೂ ಸಮುದಾಯದ ಕೈಗೆಟಕುವ ತಲಪರಿಗೆಯಂಥ ಪಾರಂಪರಿಕ ಜಲ ನಿಧಿಗಳನ್ನು ಪುನಶ್ಚೇತನಗೊಳಿಸುವುದು ಸೂಕ್ತವಾಗಿದೆ.

ಪುಸ್ತಕ ಅನಾವರಣ, ವಿಚಾರ ಸಂಕಿರಣ

`ತಲಪರಿಗೆ ಉಳಿಸಿ' ಆಂದೋಲನದ ಹಾದಿ ಈಗ ಪುಸ್ತಕ ರೂಪ ಪಡೆಯುತ್ತಿದೆ. ಈ ಮೂವರು ಯುವಕರು ನಾಲ್ಕು ತಾಲ್ಲೂಕುಗಳಲ್ಲಿ ಸುತ್ತಾಡಿ ತಲಪರಿಗೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿ, ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ತಲಪರಿಗೆ ಬಳಕೆದಾರರು, ಅದನ್ನು ನಿರ್ವಹಿಸುವ ಗಮಕಾರರು, ರೈತರ ಅನುಭವಗಳನ್ನು ಈ ಪುಸ್ತಕದಲ್ಲಿ ಸೇರಿಸಿದ್ದಾರೆ. ಇದೇ ಆಗಸ್ಟ್ 10ರಂದು ಮಧುಗಿರಿಯಲ್ಲಿ ಪುಸ್ತಕ ಅನಾವರಣಗೊಳ್ಳಲಿದೆ. ಅಂದು ತಲಪರಿಗೆ ಕುರಿತ ವಿಚಾರ ಸಂಕಿರಣ, ರೈತರೊಂದಿಗೆ ಸಂವಾದ ಕೂಡ ಇದೆ. ಮಾಧ್ಯಮ ಗೆಳೆಯರು, ಆಸಕ್ತ ಬರಹಗಾರರು, ಜಲ ಚಿಂತಕರು, ರೈತರು, ಸರ್ಕಾರದ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಸಕ್ತರು ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು: 93421 84855 ಅಥವಾ ಇ-ಮೈಲ್ ಮೂಲಕ : talaparige@gmail.com ಈ ವಿಳಾಸಕ್ಕೆ ಸಂಪರ್ಕಿಸಬಹುದು.

ಸೌಜನ್ಯ: 'ಪ್ರಜಾವಾಣಿ'

No comments:

Advertisement