ಇಂದಿನ ಇತಿಹಾಸ
ಸೆಪ್ಟೆಂಬರ್ 26
ಭಾರತೀಯ ಪ್ರಕೃತಿ ಚಿತ್ರಗಳ ನಿರ್ಮಾಪಕ, ಮೂರು ಬಾರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೈಕ್ ಪಾಂಡೆ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿಯು 1ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಕೀನ್ಯಾದಲ್ಲಿ ಹುಟ್ಟಿದ ಪಾಂಡೆ, ಬ್ರಿಟನ್ ಹಾಗೂ ಅಮೆರಿಕದಲ್ಲಿ ತರಬೇತಿ ಪಡೆದು ತಮ್ಮ ವೃತ್ತಿ ಬದುಕನ್ನು ಭಾರತದಲ್ಲಿ ಆರಂಭಿಸಿದ್ದರು.
2007: ಎಲ್ಲ ನ್ಯಾಯಾಲಯಗಳು ಮತ್ತು ಟ್ರಿಬ್ಯೂನಲ್ಲುಗಳ ನ್ಯಾಯಾಂಗ ಕಲಾಪಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನು ಮೀರಿದವುಗಳು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಮಹತ್ವದ ತೀರ್ಪು ನೀಡಿತು. ನ್ಯಾಯಾಂಗ ಸಂಸ್ಥೆಯು ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ನ್ಯಾಯಾಂಗ ಕಲಾಪದ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯ ಬಳಕೆಗೆ ಆಯೋಗ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ನೇತೃತ್ವದ ಆಯೋಗದ ಪೂರ್ಣಪೀಠವು ತನ್ನ 22 ಪುಟಗಳ ತೀರ್ಪಿನಲ್ಲಿ ಹೇಳಿತು. ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ ರಾಕೇಶ್ ಕುಮಾರ ಗುಪ್ತ ಅವರ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಈ ತೀರ್ಪು ನೀಡಿತು. ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯೂನಲ್ಲಿನಿಂದ (ಐಟಿಎಟಿ) ಎಸ್ಕಾರ್ಟ್ಸ್ ಲಿಮಿಟೆಡ್ಡಿನ ಆದಾಯ ತೆರಿಗೆ ಅಂದಾಜಿಗೆ ಸಂಬಂಧಿಸಿದಂತೆ ಟ್ರಿಬ್ಯೂನಲ್ ಸದಸ್ಯರ ಕಲಾಪದ ಮಾಹಿತಿ ಕೊಡಿಸುವಂತೆ ರಾಕೇಶ್ ಕುಮಾರ ಗುಪ್ತ ಕೋರಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ತಪಾಸಣೆ ನಡೆಸಬೇಕು ಎಂದೂ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.
2007: ಭಾರತೀಯ ಪ್ರಕೃತಿ ಚಿತ್ರಗಳ ನಿರ್ಮಾಪಕ, ಮೂರು ಬಾರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೈಕ್ ಪಾಂಡೆ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿಯು 1ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಕೀನ್ಯಾದಲ್ಲಿ ಹುಟ್ಟಿದ ಪಾಂಡೆ, ಬ್ರಿಟನ್ ಹಾಗೂ ಅಮೆರಿಕದಲ್ಲಿ ತರಬೇತಿ ಪಡೆದು ತಮ್ಮ ವೃತ್ತಿ ಬದುಕನ್ನು ಭಾರತದಲ್ಲಿ ಆರಂಭಿಸಿದ್ದರು. ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಇವರು ನಿರ್ಮಿಸಿದ ಚಿತ್ರ ಮತ್ತು ಧಾರಾವಾಹಿಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ.
2007: 70 ದಶ ಲಕ್ಷ ವರ್ಷದ ವಿಶ್ವದಲ್ಲೇ ಅತಿ ಹಳೆಯದಾದ ಹಾವಿನ ಪಳೆಯುಳಿಕೆಯೊಂದನ್ನು ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ವಿಜ್ಞಾನಿಗಳು ಪತ್ತೆ ಮಾಡಿದರು.
2007: ಮ್ಯಾನ್ಮಾರಿನಲ್ಲಿ (ಹಿಂದಿನ ಬರ್ಮಾ) ದಶಕಗಳಿಂದ ಅಧಿಕಾರವನ್ನು ಅಕ್ರಮವಾಗಿ ಕೇಂದ್ರೀಕರಣ ಮಾಡಿಕೊಂಡ ಸೇನಾಡಳಿತದ ವಿರುದ್ಧ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಚಳವಳಿ ಆರಂಭವಾಗಿದ್ದು, ಪ್ರತಿಭಟನೆ ನಡೆಸಿದ ಬಿಕ್ಕುಗಳ ನೇತೃತ್ವದ ಗುಂಪನ್ನು ಚದುರಿಸಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ನೂರಾರು ಬಿಕ್ಕುಗಳನ್ನು ಬಂಧಿಸಲಾಯಿತು.
2007: ದಕ್ಷಿಣ ವಿಯೆಟ್ನಾಮಿನ ಕ್ಯಾನ್ ಥೋ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಕಾರಣ 60 ಕೆಲಸಗಾರರು ಮೃತರಾಗಿ ಇತರ 100 ಮಂದಿ ಕಣ್ಮರೆಯಾದರು. ಜಪಾನ್ ನೆರವಿನೊಂದಿಗೆ ಈ ಸೇತುವೆಯನ್ನು ಹ್ಯೂ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಬೆಳಗ್ಗೆ 8 ಗಂಟೆಗೆ ಸೇತುವೆ ಕುಸಿದಾಗ ಸ್ಥಳದಲ್ಲಿ ಸುಮಾರು 250 ಮಂದಿ ಕೆಲಸ ಮಾಡುತ್ತಿದ್ದರು.
2007: ಕರ್ನಾಟಕ ಮುಖ್ಯಮಂತ್ರಿಯ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಹಾಕಿ ಗೆದ್ದ ತಂಡದಲ್ಲಿದ್ದ ರಾಜ್ಯದ ಮೂವರು ಹಾಕಿ ಆಟಗಾರರಿಗೆ ತಲಾ ಎರಡು ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು. ವಿಶ್ವಕಪ್ ಗೆದ್ದು ತಂದರೆ ಹಾಕಿ ಆಟಗಾರರನ್ನು ಗೌರವಿಸಲಾಗುವುದು ಎಂದು ಇದಕ್ಕೆ ಮುನ್ನ ಕುಮಾರಸ್ವಾಮಿ ಕಟುವಾಗಿ ಹೇಳಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಗ್ಗಾಮುಗ್ಗಾ ಬಹುಮಾನ ಪ್ರಕಟಿಸಿದವು, ಆದರೆ ಭಾರತ ಹಾಕಿ ತಂಡ ವಿಶ್ವಕಪ್ ಗೆದ್ದಾಗ ಕ್ಯಾರೇ ಎನ್ನಲಿಲ್ಲ ಎಂದು ದೂರಿದ ಹಾಕಿ ಆಟಗಾರರು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿದ್ದರು.
2007: ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ 20 ವಿಶ್ವಕಪ್ ಟೂರ್ನಿಯಲ್ಲಿ ಕಿರೀಟ ಜಯಿಸಿ ಐತಿಹಾಸಿಕ ಸಾಧನೆಗೈದು ಭಾರತೀಯ ಕ್ರಿಕೆಟಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಮುಂಬೈ ನಗರ ಅದ್ದೂರಿಯ ಸ್ವಾಗತ ನೀಡಿತು.
2007: ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ದಾಖಲೆ ಪ್ರಮಾಣದಲ್ಲಿ ಮುಂದುವರಿದು ಇನ್ನೊಂದು ಮಜಲು ತಲುಪಿತು. ಕೇವಲ ಆರು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು ಮತ್ತೆ ಒಂದು ಸಾವಿರ ಅಂಶಗಳಷ್ಟು ಹೆಚ್ಚಳ ಸಾಧಿಸಿ, ದಿನದ ಗರಿಷ್ಠ ಮಟ್ಟ 17 ಸಾವಿರ ಅಂಶಗಳ ಗಡಿ ದಾಟಿ ಹೊಸ ದಾಖಲೆ ಬರೆಯಿತು. ಇದರಿಂದ ಷೇರು ಹೂಡಿಕೆದಾರರಿಗೆ ಕೇವಲ 6 ದಿನಗಳಲ್ಲಿ ರೂ 2 ಲಕ್ಷ ಕೋಟಿಗಳಷ್ಟು ಲಾಭವಾಯಿತು. ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯವೂ ರೂ 51,19,729 ಕೋಟಿಗಳಷ್ಟಾಯಿತು.
2007: ವಿಶ್ವಾದ್ಯಂತ ಪ್ರಾಮಾಣಿಕತೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾರತ ಪ್ರಸಕ್ತ ವರ್ಷ 72 ನೇ ಸ್ಥಾನ ಪಡೆದಿದೆ ಎಂದು ಪಾರದರ್ಶಕತೆ ಕುರಿತ ಅಂತಾರಾಷ್ಟ್ರೀಯ ಸಮಿತಿ (ಟಿಐ) ಪ್ರಕಟಿಸಿತು. ಪ್ರಾಮಾಣಿಕತೆ ಪಟ್ಟಿಯಲ್ಲಿ 2006ರಲ್ಲಿ ಭಾರತ 70 ನೇ ಸ್ಥಾನದಲ್ಲಿ ಇತ್ತು. ಆದರೆ ಈ ವರ್ಷ ಶೇ 3.5 ರಷ್ಟು ಸುಧಾರಿಸಿದೆ ಎಂದು ಟಿಐ ವರದಿ ತಿಳಿಸಿತು. ಚೀನಾ, ಮೆಕ್ಸಿಕೊ, ಮೊರಾಕ್ಕೊ ಹಾಗೂ ಪೆರು ದೇಶಗಳೂ 72 ನೇ ಸ್ಥಾನ ಗಳಿಸಿವೆ. ಡೆನ್ಮಾರ್ಕ್, ಫಿನ್ಲ್ಯಾಂಡ್ ಹಾಗೂ ನ್ಯೂಜಿಲ್ಯಾಂಡ್ ದೇಶಗಳಲ್ಲಿ ಭ್ರಷ್ಟಾಚಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ವರದಿ ಹೇಳಿತು.
2007: `ಒಸಾಮಾ ಬಿನ್ ಲಾಡೆನ್ ಕುರಿತಂತೆ ಇತ್ತೀಚೆಗೆ ಬಿಡುಗಡೆಯಾದ `ವೀಡಿಯೋದಲ್ಲಿದ್ದ ವ್ಯಕ್ತಿ ನನ್ನ ತಂದೆಯಲ್ಲ' ಎಂದು ಆತನ ನಾಲ್ಕನೇ ಪುತ್ರ ಒಮರ್ ಲಾಡೆನ್ ಲಂಡನ್ನಿನಲ್ಲಿ ಸ್ಪಷ್ಟಪಡಿಸಿದ. ಬ್ರಿಟನ್ನಿನಲ್ಲಿ ವಾಸವಾಗಿರುವ 27 ವರ್ಷದ ಒಮರ್ 51 ವರ್ಷದ ತನ್ನ ಬ್ರಿಟಿಷ್ ಪತ್ನಿ ಜೇನ್ ಫೆಲಿಕ್ಸ್ ಬ್ರೌನ್ ಗೆ ಈ ವಿಷಯ ತಿಳಿಸಿದ್ದಾನೆ ಎಂದು `ನ್ಯೂಸ್ ಆಫ್ ದಿ ವರ್ಲ್ಡ್' ಪತ್ರಿಕೆ ವರದಿ ಮಾಡಿತು. ವೀಡಿಯೋದಲ್ಲಿರುವ ವ್ಯಕ್ತಿ ನನ್ನ ತಂದೆಯಲ್ಲ. ಆತ ನಕಲಿ ಲಾಡೆನ್ ಎಂದು ವೀಡಿಯೋವನ್ನು ಐದಾರು ಬಾರಿ ವೀಕ್ಷಿಸಿದ ಬಳಿಕ ಒಮರ್ ತಿಳಿಸಿರುವುದಾಗಿ ಪತ್ನಿ ಜೇನ್ ಫೆಲಿಕ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ಹೇಳಿತು. ಒಮರನಿಂದ ತನಗೆ ಸೆಪ್ಟೆಂಬರ್ 15ರಂದು ವಿಚ್ಛೇದನ ದೊರೆತಿರುವುದಾಗಿ ಹೇಳಿರುವ ಜೇನ್, ಅಂದೇ ನಮ್ಮ ವಿವಾಹ ವಾರ್ಷಿಕೋತ್ಸವ ಇದ್ದುದು ದುರಂತ ಎಂದು ಪ್ರತಿಕ್ರಿಯಿಸಿರುವುದಾಗಿ ಪತ್ರಿಕೆ ಪ್ರಕಟಿಸಿದೆ.
2007: ಸಾಗರದಾಚೆಯ ಉದ್ದಿಮೆ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆ ಮುಂದುವರಿಸಿದ ಬೆಂಗಳೂರು ಮೂಲದ ಮದ್ಯದ ದೊರೆ ವಿಜಯ್ ಮಲ್ಯ ಅವರು, ಅಮೆರಿಕದ ಜೆಟ್ ತಯಾರಿಕಾ ಖಾಸಗಿ ಸಂಸ್ಥೆ ಎಪಿಕ್ ನ ಶೇ. 50ರಷ್ಟು ಷೇರುಗಳನ್ನು ರೂ 480 ಕೋಟಿಗಳಿಗೆ ಖರೀದಿಸಿದರು. ಯುಬಿ ಗ್ರೂಪ್ ಮುಖ್ಯಸ್ಥರಾಗಿರುವ ವಿಜಯ್ ಮಲ್ಯ, ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಈ ಕಂಪೆನಿಯ ಶೇ 50 ರಷ್ಟು ಷೇರು ಖರೀದಿಸಿದರು.
2006: 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಬಾರಾಮುಲ್ಲಾ ನಿವಾಸಿ ಮೊಹಮ್ಮದ್ ಅಫ್ಜಲನನ್ನು ಅಕ್ಟೋಬರ್ 20ರಂದು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೆ ಏರಿಸಬೇಕು ಎಂದು ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ರವೀಂದರ್ ಕೌರ್ ಆಜ್ಞಾಪಿಸಿದರು. ಕೌರ್ ಅವರು ದಾಳಿ ನಡೆದ ಸುಮಾರು ಐದು ವರ್ಷಗಳ ಬಳಿಕ ಮರಣದಂಡನೆ ಜಾರಿ ವಾರಂಟ್ ಹೊರಡಿಸಿದರು. 2002ರ ಡಿಸೆಂಬರ್ 18ರಂದು ವಿಶೇಷ ಪೋಟಾ ನ್ಯಾಯಾಲಯವು ಅಫ್ಜಲನಿಗೆ ಮರಣದಂಡನೆ ವಿಧಿಸಿತ್ತು. ದೆಹಲಿ ಹೈಕೋಟರ್್ ದೃಢಪಡಿಸಿದ್ದ ಈ ಮರಣದಂಡನೆ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ 2005ರ ಆಗಸ್ಟ್ 4ರಂದು ಎತ್ತಿ ಹಿಡಿದಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರನ್ನು 1989ರ ಜನವರಿ 6ರಂದು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಇಲ್ಲಿ ಜಾರಿಯಾಗಿದ್ದ ಕೊನೆಯ ಮರಣದಂಡನೆ ಪ್ರಕರಣ ಇದು.
2006: ಜಪಾನಿನ ನೂತನ ಪ್ರಧಾನ ಮಂತ್ರಿಯಾಗಿ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ನಾಯಕ ಶಿಂಜೊ ಅಬೆ (52) ಆಯ್ಕೆಯಾದರು. ವಾರದ ಹಿಂದೆಯಷ್ಟೇ ಆಡಳಿತಾರೂಢ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಅಬೆ ಅವರು ಎರಡನೇ ವಿಶ್ವ ಸಮರದ ಬಳಿಕ ಜಪಾನಿನ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದು ವಿಶ್ವ ಸಮರದ ಬಳಿಕ ಜನಿಸಿದವರು.
2006: ಅವಳಿ ಸಹೋದರಿಯರಾದ ಪ್ಯಾಟ್ ಗುಡಿನಾಸ್ ಮತ್ತು ಶಿರ್ಲೆ ಮೆಕ್ ಗುಯಿರಿ ತಾವು ಹುಟ್ಟಿದ 71 ವರ್ಷಗಳ ಬಳಿಕ ಮಿಲ್ ವೌಕಿಯಲ್ಲಿ ಮೊತ್ತ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಇದರೊಂದಿಗೆ ಪ್ಯಾಟ್ ಗುಡಿನಾಸ್ ಳ ಎಂಟು ವರ್ಷಗಳ ಯತ್ನ ಫಲಿಸಿತು. ಆಸ್ಟಿನಿನ ಟೆಕ್ಸಾಸ್ ಬಳಿ ವಾಸವಿದ್ದ ಶಿರ್ಲೆ ಸುದೀರ್ಘ ಕಾಲದ ಬಳಿಕ ಭೇಟಿಯಾದ ಪ್ಯಾಟ್ ಳನ್ನು ಅಪ್ಪಿಕೊಂಡು ಚುಂಬಿಸಿ `ಇಷ್ಟೊಂದು ವರ್ಷಗಳ ಕಾಲ ನಾನು ಈಕೆಯನ್ನು ಕಳೆದುಕೊಂಡು ಬಿಟ್ಟಿದ್ದ' ಎಂದು ಬಿಕ್ಕಳಿಸಿದಳು. ವಿವಾಹಿತ ಪುರುಷನೊಬ್ಬನಿಗೆ ಆಪ್ತಳಾಗಿದ್ದ ಮಹಿಳೆಗೆ ಈ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಇವರಿಬ್ಬರನ್ನೂ ಬೇರ್ಪಡಿಸಿ ಮಿಲ್ ವೌಕಿಯ ದಕ್ಷಿಣ ಭಾಗದ ಸೈಂಟ್ ಜೋಸೆಫ್ ಅನಾಥಾಲಯದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸಲಾಗಿತ್ತು. ಆ ಬಳಿಕ ಅವರನ್ನು ಬೇರೆ ಬೇರೆ ವ್ಯಕ್ತಿಗಳು ದತ್ತು ಪಡೆದು ಸಾಕಿದ್ದರು. ಬೆಳೆಯುವ ವೇಳೆಯಲ್ಲಿ ಅವರಿಗೆ ಅವರಿಬ್ಬರು ಅವಳಿಗಳು ಎಂದು ತಿಳಿಸಲಾಗಿತ್ತು. ಆದರೆ ಹೆಸರು ಗೊತ್ತಿರಲಿಲ್ಲ.
2006: ಲಂಡನ್ನಿನ ಜ್ಯಾಕ್ ನೀಲ್ ಎಂಬ ಮೂರು ವರ್ಷದ ಬಾಲಕನೊಬ್ಬ ತಾಯಿಯ ಕಂಪ್ಯೂಟರ್ ಬಳಸಿ ಇಂಟರ್ನೆಟ್ ಇಬೇ ಹರಾಜು ಸೈಟಿನ ಮೂಲಕ ನಡೆದ ಹರಾಜಿನಲ್ಲಿ 9000 ಪೌಂಡುಗಳಿಗೆ ಕಾರು ಖರೀದಿಸಿದ. ಪಿಂಕ್ ನಿಸ್ಸಾನ್ ಫಿಗರೊ ವೆಬ್ ಸೈಟಿನಿಂದ ಹರಾಜು ಗೆದ್ದುದಕ್ಕಾಗಿ ಅಭಿನಂದನೆಗಳ ಸಂದೇಶ ಬಂದಾಗ ಮೂರು ವರ್ಷದ ಪೋರ ಪುತ್ರನ ಪ್ರತಾಪ ತಂದೆ ತಾಯಿಯರ ಗಮನಕ್ಕೆ ಬಂತು. ಬಾಲಕನ ತಾಯಿ ಮಾರಾಟಗಾರನಿಗೆ ದೂರವಾಣಿ ಮೂಲಕ ಆದ ತಪ್ಪನ್ನು ವಿವರಿಸಿದಾಗ ಅದೃಷ್ಟವಶಾತ್ ಆತ ಮರು ಜಾಹೀರಾತು ನೀಡಲು ಒಪ್ಪಿಕೊಂಡ.
1991: ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು ಅರಿಝೋನಾದ ಒರೇಕಲ್ಲಿನಲ್ಲಿ `ಬಯೋಸ್ಫಿಯರ್-2' ಹೆಸರಿನ ಕೋಶದೊಳಗೆ ಎರಡು ವರ್ಷಗಳ ವಾಸ ಆರಂಭಿಸಿದರು. ಕೃತಕ ಜೀವಗೋಲದಲ್ಲಿ ಬದುಕುವ ಬಗೆಯನ್ನು ತೋರಿಸುವ ಜೀವಂತ ಉದಾಹರಣೆಯನ್ನು ಒದಗಿಸುವುದು ಇದರು ಉದ್ದೇಶವಾಗಿತ್ತು.
1981: ಸುವಾದ ಸೌತ್ ಫೆಸಿಫಿಕ್ ವಿಶ್ವವಿದ್ಯಾನಿಲಯವು ಫಿಜಿ ರಾಷ್ಟ್ರೀಯ ಜಿಮ್ನಾಸಿಯಂ ಸಮಾರಂಭದಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಪುರಸ್ಕರಿಸಿತು.
1959: ಶ್ರೀಲಂಕಾ ಪ್ರಧಾನಿ ಸೋಲೋಮನ್ ಬಂಡಾರನಾಯಿಕೆ ಅವರು ಗುಂಡೇಟಿನ ಪರಿಣಾಮವಾಗಿ ಮೃತರಾದರು. ಹಿಂದಿನ ದಿನವಷ್ಟೇ ಸೋಲೋಮನ್ ಅವರ ಮೇಲೆ ಅತೃಪ್ತ ಬೌದ್ಧ ಬಿಕ್ಷು ತಲ್ದುವೆ ಸೊಮರಮ ಗುಂಡು ಹಾರಿಸಿದ್ದರು.
1950: ವಿಶ್ವಸಂಸ್ಥೆ ಪಡೆಗಳು ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ನ್ನು ಉತ್ತರ ಕೊರಿಯನ್ನರಿಂದ ಮರುವಶ ಪಡಿಸಿಕೊಂಡವು.
1931: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್ (1931-83) ಜನ್ಮದಿನ.
1928: ನಂಜೇಗೌಡ ಹಾರೋಹಳ್ಳಿ ಜನನ.
1926: ಸಾಹಿತಿ ಶ್ರೀನಿವಾಸ ತೋಫಖಾನೆ ಜನನ.
1924: ಮಹಾತ್ಮಾ ಗಾಂಧಿಯವರು ದೆಹಲಿಯಲ್ಲಿ `ದಿ ಹಿಂದುಸ್ತಾನ್ ಟೈಮ್ಸ್' ಪತ್ರಿಕೆಯನ್ನು ಉದ್ಘಾಟಿಸಿದರು. ಮಹಾತ್ಮಾ ಗಾಂಧಿಯವರು ಮಗ ದೇವದಾಸ್ ಗಾಂಧಿ ಅವರು 1937ರಿಂದ 1957ರವರೆಗೆ 20 ವರ್ಷಗಳ ಕಾಲ ಈ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು.
1923: ಭಾರತೀಯ ಚಿತ್ರನಟ, ನಿರ್ದೇಶಕ ದೇವ್ ಆನಂದ್ ಜನ್ಮದಿನ.
1904: ರಂಗಭೂಮಿಗೆ ಹೊಸ ದಿಕ್ಕು ತೋರಿದ ಶ್ರೀರಂಗ ಕಾವ್ಯನಾಮದ ರಂಗಾಚಾರ್ಯ ಅವರು ವಾಸುದೇವಾಚಾರ್ಯ- ರಮಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು.
1902: ಜೀನ್ಸ್ ಪ್ಯಾಂಟುಗಳ ಸಂಶೋಧಕ ಹಾಗೂ ಉತ್ಪಾದಕ ಬವೇರಿಯಾ ಮೂಲದ ಲೆವಿ ಸ್ಟ್ರಾಸ್ ತನ್ನ 73ನೇ ವಯಸಿನಲ್ಲಿ ಮೃತನಾದ. ಮೊದಲಿಗೆ ದೊರಗು ಕ್ಯಾನ್ವಾಸಿನಿಂದ ಟೆಂಟ್ ಹಾಗೂ ವ್ಯಾಗನ್ ಹೊದಿಕೆಗಳನ್ನು ಮಾಡುವ ಯೋಜನೆ ಹೊಂದಿದ್ದ ಈತ ಶ್ರಮದ ದುಡಿಮೆಗಾರರಿಗಾಗಿ ದೊರಗು ಕ್ಯಾನ್ವಾಸಿನಿಂದ ದೀರ್ಘಾವಧಿ ಬಾಳುವ ಪ್ಯಾಂಟುಗಳನ್ನು ಉತ್ಪಾದಿಸಿದರೆ ಹೆಚ್ಚಿನ ಮಾರುಕಟ್ಟೆ ದೊರೆಯಬಹುದೆಂಬ ಸುಳಿವು ಹತ್ತಿ ಅದನ್ನು ಜಾರಿಗೊಳಿಸಿದ. ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಈತನ ಪ್ಯಾಂಟುಗಳು ಬಿಸಿ ಬಿಸಿಯಾಗಿ ಮಾರಾಟವಾದವು. ಲೆವಿ ಸ್ಟ್ರಾಸ್ ಫ್ಯಾಕ್ಟರಿ ತೆರೆದು ಈ ಪ್ಯಾಂಟುಗಳನ್ನು ಇನ್ನಷ್ಟು ಸುಧಾರಿಸಿದ. ಫ್ರಾನ್ಸಿನಲ್ಲಿ ದೊರಕುತ್ತಿದ್ದ ಜೀನ್ಸ್ ಎಂಬ ವಸ್ತುವನ್ನು ಅದಕ್ಕೆ ಬಳಸಿದ. ಇದರಿಂದಾಗಿ ಇವುಗಳಿಗೆ `ಜೀನ್ಸ್' ಎಂಬ ಹೆಸರು ಬಂತು.
1820: ಬಂಗಾಳಿ ಸಾಹಿತಿ ಈಶ್ವರಚಂದ್ರ ವಿದ್ಯಾಸಾಗರ್ (1820-91) ಜನ್ಮದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment