ನಮೂದು ದರ ಒಂದು,
ಮಾರುವ ದರ ಇನ್ನೊಂದು..!
ಮಾರುವ ದರ ಇನ್ನೊಂದು..!
ಹೆಚ್ಚುವರಿಯಾಗಿ ಪಡೆದ 10 ರೂಪಾಯಿ ಮತ್ತು 250 ರೂಪಾಯಿಗಳ ಖಟ್ಲೆ ವೆಚ್ಚದ ಜೊತೆಗೆ 10,000 ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸುವುದರಿಂದ 'ಅಪ್ರಾಮಾಣಿಕ ವ್ಯಾಪಾರ' ಪುನರಾವರ್ತಿಸದಂತೆ ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.
ನೆತ್ರಕೆರೆ ಉದಯಶಂಕರ
ಯಾವುದೇ ಒಂದು ವಸ್ತುವಿನ ಪೊಟ್ಟಣದಲ್ಲಿ ನಮೂದಾಗಿರುವ ದರ ಒಂದು, ಅಂಗಡಿಯಾತ ತೆಗೆದುಕೊಳ್ಳುವ ದರ ಇನ್ನೊಂದು ಆಗಿದ್ದರೆ ಅದು ಅಪ್ರಾಮಾಣಿಕ ವ್ಯಾಪಾರ ಅನಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಗ್ರಾಹಕನಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ ನ್ಯಾಯ ಒದಗಿಸುತ್ತದೆಯೇ?
ಹೌದು. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕನಿಗೆ ನ್ಯಾಯ ಒದಗಿಸಿದೆ.
ಈ ಪ್ರಕರಣದ ಅರ್ಜಿದಾರ: ಬಾಗಲಕೋಟೆ ಜಿಲ್ಲೆಯ ಇಳ್ಕಲ್ ಎಪಿಎಂಸಿ ಯಾರ್ಡ್ ಸಮೀಪದ ನಿವಾಸಿ ಮಲ್ಲಿಕಾರ್ಜುನ ಬಿ. ಕೋರಿ. ಪ್ರತಿವಾದಿ: ಕಾರ್ಗೊ ಟಾರ್ಪಾಲಿನ್ ಇಂಡಸ್ಟ್ರೀಸ್, ಜೆ.ಸಿ. ರಸ್ತೆ, ಬೆಂಗಳೂರು.
ಅರ್ಜಿದಾರ ಮಲ್ಲಿಕಾರ್ಜುನ ಬಿ. ಕೋರಿ ಅವರು 2006ರ ಜನವರಿ 20ರಂದು ಪ್ರತಿವಾದಿ ಕಾರ್ಗೊ ಟಾರ್ಪಾಲಿನ್ ಇಂಡಸ್ಟ್ರಿಯಿಂದ 112 ರೂಪಾಯಿ ಪಾವತಿ ಮಾಡಿ 'ಡಕ್ ಬ್ಯಾಕ್ ಬೇಬಿ ಶೀಟ್' ಖರೀದಿಸಿದರು.
ಅರ್ಜಿದಾರರ ಪ್ರಕಾರ ಈ ಡಕ್ ಬ್ಯಾಕ್ ಬೇಬಿ ಶೀಟಿನ 'ಗರಿಷ್ಠ ಬಿಡಿ ಮಾರಾಟ ದರ' 90 ರೂಪಾಯಿ ಮಾತ್ರ. ಆದರೆ ಪ್ರತಿವಾದಿ ತಮ್ಮಿಂದ 112 ರೂಪಾಯಿ ವಸೂಲಿ ಮಾಡಿದರು. ಉತ್ಪಾದಕರೇ ಗರಿಷ್ಠ ಬಿಡಿ ಮಾರಾಟ ದರ' ನಿಗದಿ ಪಡಿಸಿದ್ದಾಗ ಮಾರಾಟದ ಏಜೆಂಟ್ ಅದಕ್ಕಿಂತ ಹೆಚ್ಚಿನ ದರ ಪಡೆಯುವುದು ಸಲ್ಲದು ಎಂಬುದು ಅವರ ವಾದ.
ಈ ಪ್ರಕರಣದಲ್ಲಿ ಪ್ರತಿವಾದಿಯು ನಮೂದಿತ ಬೆಲೆಗಿಂತ ಹೆಚ್ಚು ಹಣ ಪಡೆದದ್ದು ಅಪ್ರಾಮಾಣಿಕ ವ್ಯಾಪಾರ ಆಗುತ್ತದೆ ಎಂದು ದೂರಿದ ಅರ್ಜಿದಾರರು ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಪ್ರತಿವಾದಿಯು ನಮೂದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಪಡೆದ 10 ರೂಪಾಯಿಗಳನ್ನು ಅರ್ಜಿದಾರರಿಗೆ ಹಿಂದಿರುಗಿಸಬೇಕು. ಮತ್ತು 250 ರೂಪಾಯಿಗಳ ಖಟ್ಲೆ ವೆಚ್ಚವನ್ನು ನೀಡಬೇಕು ಎಂದು ಪ್ರತಿವಾದಿ ಸಂಸ್ಥೆಗೆ ಆಜ್ಞಾಪಿಸಿತು. ಆದರೆ ಯಾವುದೇ ಪರಿಹಾರ ನೀಡಲು ಆದೇಶ ನೀಡಲಿಲ್ಲ.
ಆದರೆ ಅರ್ಜಿದಾರ ಮಲ್ಲಿಕಾರ್ಜುನ ಕೋರಿ ಅವರಿಗೆ ಈ ತೀರ್ಪಿನಿಂದ ಸಮಾಧಾನ ಆಗಲಿಲ್ಲ. ಅವರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರು.
ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಎಂ. ಶಾಮಭಟ್ ಅವರನ್ನು ಒಳಗೊಂಡ ಪೀಠವು ಮೇಲ್ಮನವಿಯ ವಿಚಾರಣೆ ನಡೆಸಿ ಅರ್ಜಿದಾರರ ಹಾಗೂ ಪ್ರತಿವಾದಿಯ ವಕೀಲ ಆರ್. ನರೇಂದ್ರ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಗಳನ್ನು ಪರಿಶೀಲಿಸಿತು.
ಪ್ರತಿವಾದಿಯು ಪೊಟ್ಟಣದಲ್ಲಿ ನಮೂದಿಸಲಾಗಿದ್ದ ದರಕ್ಕಿಂತ 10 ರೂಪಾಯಿಗಳಷ್ಟು ಹೆಚ್ಚು ಹಣ ಪಡೆದದ್ದು ಸ್ಪಷ್ಟವಾಗಿ ಅಪ್ರಾಮಾಣಿಕ ವ್ಯಾಪಾರ ಆಗುತ್ತದೆ ಎಂದು ಅಭಿಪ್ರಾಯಪಟ್ಟ ರಾಜ್ಯ ಗ್ರಾಹಕ ನ್ಯಾಯಾಲಯವು ಜಿಲ್ಲಾ ಗ್ರಾಹಕ ನ್ಯಾಯಾಲಯವು ಹೆಚ್ಚುವರಿಯಾಗಿ ಪಡೆದ ಹಣವನ್ನು ಮತ್ತು ಖಟ್ಲೆ ವೆಚ್ಚವನ್ನು ಪಾವತಿ ಮಾಡಲು ಆದೇಶಿಸಿರುವುದು ಸಮರ್ಪಕವಾಗಿಯೇ ಇದೆ. ಆದರೆ ಯಾವುದೇ ಪರಿಹಾರ ನೀಡಿಲ್ಲ. ಅಪ್ರಾಮಾಣಿಕ ವ್ಯಾಪಾರ ನಡೆಸಿದ್ದಕ್ಕೆ ದಂಡ ವಿಧಿಸದೇ ಇದ್ದರೆ ಪ್ರತಿವಾದಿಯು ಮತ್ತೆ ಮತ್ತೆ ಇಂತಹ ಕೃತ್ಯಕ್ಕೆ ಇಳಿಯಬಹುದು ಎಂದು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ 10,000 ರೂಪಾಯಿಗಳ ಪರಿಹಾರ ನೀಡಲು ಆದೇಶಿಸುವುದುರಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಭವಿಷ್ಯದಲ್ಲಿ ಇಂತಹ ಅಪ್ರಾಮಾಣಿಕ ವ್ಯಾಪಾರದಲ್ಲಿ ತೊಡಗದಂತೆ ಎಚ್ಚರಿಕೆಯ ಸಂದೇಶವೂ ಆಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.
ಹೀಗಾಗಿ ಹೆಚ್ಚುವರಿಯಾಗಿ ಪಡೆದ 10 ರೂಪಾಯಿಗಳನ್ನು 250 ರೂಪಾಯಿಗಳ ಖಟ್ಲೆವೆಚ್ಚದ ಜೊತೆಗೆ ಹಿಂದಿರುಗಿಸಬೇಕು ಎಂಬ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದು ಸ್ಪಲ್ಪ ಪರಿಷ್ಕರಿಸಿದ ರಾಜ್ಯ ಗ್ರಾಹಕ ನ್ಯಾಯಾಲಯವು ಇದರ ಜೊತೆಗೆ 10,000 ರೂಪಾಯಿಗಳ ಪರಿಹಾರವನ್ನು ಶೇಕಡಾ 6ರ ಬಡ್ಡಿ ಸಹಿತವಾಗಿ ಅರ್ಜಿದಾರರಿಗೆ ಪಾವತಿ ಮಾಡಬೇಕು ಎಂದು ಪ್ರತಿವಾದಿಗೆ ಆಜ್ಞಾಪಿಸಿತು.
No comments:
Post a Comment