Thursday, October 2, 2008

ಇಂದಿನ ಇತಿಹಾಸ History Today ಅಕ್ಟೋಬರ್ 02

ಇಂದಿನ ಇತಿಹಾಸ

ಅಕ್ಟೋಬರ್ 2

ಇಂದು ಅಂತಾರಾಷ್ಟ್ರೀಯ ಅಹಿಂಸಾ ದಿನ. ಮಹಾತ್ಮ ಗಾಂಧಿ ಜನ್ಮದಿನ. ಭಾರತದ `ರಾಷ್ಟ್ರಪಿತ' ಗೌರವಕ್ಕೆ ಪಾತ್ರರಾದ ಮೋಹನದಾಸ ಕರಮಚಂದ್ ಗಾಂಧಿ (1869-1948) ಅವರು ಈದಿನ ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದರು. ಗಾಂಧೀಜಿ ಅವರು ಪ್ರತಿಪಾದಿಸಿದ ಶಾಂತಿ ಮತ್ತು ಭ್ರಾತೃತ್ವದ ತತ್ವಕ್ಕೆ ಗೌರವ ನೀಡುವ ಸಲುವಾಗಿ 191 ಸದಸ್ಯ ಬಲದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಅಕ್ಟೋಬರ್ 2ನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಆಚರಿಸುವ ನಿರ್ಣಯವನ್ನು 2007ರ ಜೂನ್ 17ರಂದು ಸರ್ವಾನುನುಮತದಿಂದ ಅಂಗೀಕರಿಸಿತು. ಭಾರತದ ಇನ್ನೊಬ್ಬ ಮುತ್ಸದ್ಧಿ ಲಾಲ್ ಬಹಾದುರ್ ಶಾಸ್ತ್ರಿ (1904-1966) ಅವರು ಹುಟ್ಟಿದ್ದು ಕೂಡಾ ಇದೇ ದಿನ. ಜವಾಹರಲಾಲ್ ನೆಹರೂ ಬಳಿಕ 1964ರಿಂದ 1966ರವರೆಗೆ ಭಾರತದ ಪ್ರಧಾನಿಯಾಗಿದ್ದ ಶಾಸ್ತ್ರಿ, 1965ರ ಭಾರತ ಪಾಕ್ ಸಮರಕಾಲದಲ್ಲಿ ರಾಷ್ಟ್ರಕ್ಕೆ `ಜೈ ಜವಾನ್ ಜೈ ಕಿಸಾನ್' ಘೋಷಣೆ ನೀಡಿದ ಧುರೀಣ.

2007: ಅಧಿಕಾರ ಹಸ್ತಾಂತರಕ್ಕೆ ಒತ್ತಡ ಹೇರುವ ಸಲುವಾಗಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಸಚಿವರು ಈದಿನ ರಾತ್ರಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು. ಈ ಬೆಳವಣಿಗೆಯಿಂದಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ತಾರಕಕ್ಕೆ ಏರಿತು. ಯಡಿಯೂರಪ್ಪ ನಿವಾಸದಲ್ಲಿ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಕೂಡಲೇ ಬಿಜೆಪಿ ಸಚಿವರೆಲ್ಲರೂ ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ಕ್ಕೆ ತೆರಳಿದರು. ಅಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರು ಮೂರು ಪುಟಗಳ ಪತ್ರದ ಜೊತೆಗೆ ಸಚಿವರ ರಾಜೀನಾಮೆ ಪತ್ರಗಳನ್ನು ಕುಮಾರಸ್ವಾಮಿ ಅವರಿಗೆ ಸಲ್ಲಿಸಿದರು. ಇಪ್ಪತ್ತು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆದ ಒಪ್ಪಂದವನ್ನು ನೆನಪಿಸಿದ ಸದಾನಂದಗೌಡರು, `ಒಪ್ಪಂದದಂತೆ  ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಪತ್ರ ಮತ್ತು ಯಡಿಯೂರಪ್ಪನವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಆ ಮೂಲಕ ಅಧಿಕಾರ ಹಸ್ತಾಂತರ ಸುಗಮವಾಗಿ ಜರುಗಲು ಅನುವು ಮಾಡಿಕೊಡಬೇಕು' ಎಂದು ಕೋರಿದರು.

2007: ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯ ಮಹಾ ಅಧಿವೇಶನವು ವಿಶ್ವ ಅಹಿಂಸಾದಿನವನ್ನಾಗಿ ಆಚರಿಸಿತು. ಈ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜಾಗತಿಕ ನಿಶ್ಯಸ್ತ್ರೀಕರಣದ ಕನಸನ್ನು ಸಾಕಾರಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ವಿಫಲವಾಗಿದೆ. ಕೆಲವು ರಾಷ್ಟ್ರಗಳಿಂದಾಗಿ ಇಡೀ ಜಗತ್ತಿಗೆ ಭಯೋತ್ಪಾದನೆ ಹರಡುತ್ತಿದೆ ಎಂದು ಹೇಳಿದರು.

2007: ಪಾಕಿಸ್ಥಾನದ ಗುಪ್ತಚರ ಇಲಾಖೆ ಐ ಎಸ್ ಐ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಶ್ಫಾಕ್ ಪರ್ವೇಜ್ ಕಿಯಾನಿ ಅವರನ್ನು ಪಾಕಿಸ್ಥಾನ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಹೊಸ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥರ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಅಧ್ಯಕ್ಷ ಪರ್ವೇಜ್ ಮುಷರಫ್ ಘೋಷಿಸಿದ್ದು, ನಂತರ ಅಶ್ಫಾಕ್ ಪರ್ವೇಜ್ ಕಿಯಾನಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವರು.

2007: ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪಶ್ಚಿಮ ತೀರದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.4ರಷ್ಟಿದ್ದ ಈ ಭೂಕಂಪದ ಕೇಂದ್ರ, ಕರಾವಳಿ ಪಟ್ಟಣ ಬೆಂಗಕುಲುವಿನಿಂದ 160 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ 20 ಕಿ.ಮೀ. ಆಳದಲ್ಲಿತ್ತು.

2007: ಮಹಾತ್ಮ ಗಾಂಧಿ ಅವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಭಾರತವು 138ನೇ ಗಾಂಧಿ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ `ನೊಬೆಲ್ ಪ್ರತಿಷ್ಠಾನ' ಖೇದ ವ್ಯಕ್ತಪಡಿಸಿತು. ಗಾಂಧಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಒಟ್ಟು ಐದು ಬಾರಿ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ `ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ- ಪೂರ್ಣ ಪ್ರಮಾಣದಲ್ಲಿ ಮಾನವೀಯ ಸಂಕಷ್ಟಗಳ ಪರಿಹಾರದ ಕಾರ್ಯಕರ್ತರೂ ಅಲ್ಲ' ಎಂದು ಆಯ್ಕೆ ಸಮಿತಿ ಅಭಿಪ್ರಾಯ ಪಟ್ಟು ಪ್ರಸ್ತಾಪವನ್ನು ತಳ್ಳಿ ಹಾಕಿತ್ತು. ಇಷ್ಟು ವರ್ಷ ಕಳೆದ ನಂತರ ನೊಬೆಲ್ ಸಮಿತಿಗೆ ತನ್ನ ತಪ್ಪಿನ ಅರಿವಾಗಿದೆ. `ಗಾಂಧಿಗೆ ನೊಬೆಲ್ ಪ್ರಶಸ್ತಿ ನಿರಾಕರಿಸಿದ್ದು ತಪ್ಪು' ಎಂದು ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನದ ಕಾರ್ಯ ನಿರ್ವಾಹಕ ನಿರ್ದೇಶಕ ಮೈಕೆಲ್ ಸೊಲಾಮ್ ಖಾಸಗಿ ವಾಹಿನಿಯೊಂದರಲ್ಲಿ ಒಪ್ಪಿಕೊಂಡರು. ಮಹಾತ್ಮ ಗಾಂಧಿ ಅವರು 1937, 1938, 1939, 1947 ಮತ್ತು ಸಾಯುವುದಕ್ಕೇ ಕೆಲವೇ ದಿನ ಮೊದಲು ಅಂದರೆ ಜನವರಿ 1948ರಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. 1948ರಲ್ಲಿ `ಪ್ರಶಸ್ತಿ ಗಳಿಸುವ ಅರ್ಹರು ಯಾರೂ ಇಲ್ಲ' ಎಂದು ತೀರ್ಮಾನಿಸಿದ್ದ ಸಮಿತಿ ಯಾರಿಗೂ ಪ್ರಶಸ್ತಿ ನೀಡಿರಲಿಲ್ಲ. ನೊಬೆಲ್ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಇಲ್ಲದಿರುವುದು ಪ್ರಮುಖ ಕೊರೆತೆಯೇ ಆಗಿದೆ. ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಗಾಂಧಿ ಇರಲೇಬೇಕಿತ್ತು. ಅವರಿಲ್ಲದೆ ಬಹು ದೊಡ್ಡ ಶೂನ್ಯ ಆವರಿಸಿದೆ. ಕ್ಷಮಿಸಲಾರದ ತಪ್ಪು ಇದು ಎಂದು ನೊಬೆಲ್ ವಸ್ತು ಸಂಗ್ರಹಾಲಯದ ಕ್ಯುರೇಟರ್ ಡಾ. ಆಂಡರ್ಸ್ ಬರನಿ ಹೇಳಿದರು.

2007: ವಾಷಿಂಗ್ಟನ್ನಿನ  ಸಾಗರೋತ್ತರ ವ್ಯವಹಾರ ಸಚಿವಾಲಯವು ತನ್ನ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಾಷಿಂಗ್ಟನ್ನಿನಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ (ಸಿಡಿಒ)ಭಾರತೀಯ ರಾಯಭಾರಿ ಕಚೇರಿಯಲ್ಲಿ ಏಳು ವರ್ಷಗಳ ಕಾಲ ಸಮುದಾಯ ವ್ಯವಹಾರಗಳ ವಿಭಾಗದಲ್ಲಿ ಕೆಲಸ ಮಾಡಿರುವ ಕನ್ನಡತಿ ಆರತಿ ಕೃಷ್ಣ ಅವರನ್ನು ನೇಮಿಸಿರುವುದಾಗಿ ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಪ್ರಕಟಿಸಿದರು.

 2006: ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಅಮೆರಿಕದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಆಂಡ್ರ್ಯೂ ಜೆಡ್. ಫೈರ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಕ್ರೆಗ್ ಸಿ.ಮೆಲ್ಲೋ ಅವರು ಆಯ್ಕೆಯಾದರು. ವೈರಸ್ಸಿನಿಂದ ಹಬ್ಬುವ ಕಾಯಿಲೆಗಳ ವಿರುದ್ಧ ದೇಹದಲ್ಲಿನ ಆರ್ ಎನ್ ಎ ವಹಿಸುವ ಮಹತ್ವದ ಪಾತ್ರವನ್ನು ಆವಿಷ್ಕರಿಸಿರುವುದಕ್ಕಾಗಿ ಇವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ತಮ್ಮ ಸಂಶೋಧನಾ ಪ್ರಬಂಧವನ್ನು ಫೈರ್ ಮತ್ತು ಮೆಲ್ಲೋ 1998ರಲ್ಲೇ ಸವಿವರವಾಗಿ ಪ್ರಕಟಿಸಿದ್ದರು. ಈ ಜೋಡಿಯಲ್ಲಿ ಫೈರ್ ಅವರಿಗೆ ಈಗ ಇನ್ನೂ ಕೇವಲ 47 ವರ್ಷವಾಗಿದ್ದರೆ, ಮೆಲ್ಲೋ ಇನ್ನೂ ಒಂದು ವರ್ಷ ಚಿಕ್ಕವರು.

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ 29-9-2006ರಂದು ನೆಲಕ್ಕೆ ಅಪ್ಪಳಿಸಿದ ಬ್ರೆಜಿಲ್ ಜೆಟ್ ವಿಮಾನದಲ್ಲಿದ್ದ 115 ಜನರ ಪೈಕಿ ಯಾರೊಬ್ಬರೂ ಈವರಗೆ ಬದುಕಿ ಉಳಿದಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಪ್ರಕಟಿಸಿದರು. ಬ್ರೆಜಿಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತಫೋರ್ಟ್ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು. 

2006: ಬಹು ನಿರೀಕ್ಷಿತ ಮೆಟ್ರೊ ರೈಲು ಯೋಜನೆಯ ಕಾಮಗಾರಿ ಬೆಂಗಳೂರಿನಲ್ಲಿ ವಿಜಯದಶಮಿಯ ದಿನವಾದ ಈದಿನ ಮಹಾತ್ಮ ಗಾಂಧಿ ರಸೆಯಲ್ಲಿ ಆರಂಭಗೊಂಡಿತು. ಪೂಜೆ ನಡೆಸಿ ನಂತರ ಕಾಮಗಾರಿಗೆ ಚಾಲನೆ ನೀಡಲಾಯಿತು.

2006: ಮೈಸೂರಿನ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್- ಶ್ರೀ ಸಂಸ್ಥಾನ ಗೋಕರ್ಣವು ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಭಾರತೀಯ ಗೋವು ತಳಿ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ರೂಪಿಸಿದ `ಕಾಮದುಘಾ' ಭಾಗವಾಗಿ ಏರ್ಪಡಿಸಿದ್ದ ಗೋ ಸಂಸತ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಂಡು ರಾಮಚಂದ್ರಾಪುರ ಮಠದ ಗೋವು ತಳಿ ಸಂರಕ್ಷಣಾ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಗೋವು ತಳಿ ಸಂರಕ್ಷಣೆಗಾಗಿ 2.70 ಕೋಟಿ ರೂಪಾಯಿಗಳನ್ನು ಸಮ್ಮಿಶ್ರ ಸರ್ಕಾರವು ಮುಂಗಡಪತ್ರದಲ್ಲಿ ತೆಗೆದಿರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

2006: ನಿವೃತ್ತ ಸೇನಾ ದಂಡನಾಯಕ ಸರಯೂದ್ ಚಲನೊಂಟ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಸೆಪ್ಟೆಂಬರ್ 19ರಂದು ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ಪ್ರಧಾನಿ ತಕ್ ಸಿನ್ ಶಿನವಾತ್ರ ಅವರನ್ನು ಪದಚ್ಯುತಗೊಳಿಸಲಾಗಿತ್ತು.

1985: ಚಿತ್ರ ನಟ ರಾಕ್ ಹಡ್ಸನ್ ಅವರು ಕ್ಯಾಲಿಫೋರ್ನಿಯಾದ ಬೆವೆರ್ಲಿ ಹಿಲ್ಸಿನಲ್ಲಿ ತಮ್ಮ 59ನೇ ವಯಸಿನಲ್ಲಿ ಏಡ್ಸ್ ರೋಗದ ಪರಿಣಾಮವಾಗಿ ಮೃತರಾದರು. ಈ ರೋಗಕ್ಕೆ ಬಲಿಯಾದ ಮೊತ್ತ ಮೊದಲ ಗಣ್ಯ ವ್ಯಕ್ತಿ ಇವರು.

1967: ತುರ್ ಗುಡ್ ಮಾರ್ಷಲ್ ಅವರು ಅಮೆರಿಕದ ಸುಪ್ರೀಂ ಕೋರ್ಟಿನ ಅಸೋಸಿಯೇಟ್ ಜಸ್ಟೀಸ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರದ ಉನ್ನತ ಕೋರ್ಟ್ ಹುದ್ದೆಗೆ ನೇಮಕ ಗೊಂಡ ಮೊದಲ ಆಫ್ರಿಕನ್-ಅಮೆರಿಕನ್ ಎಂಬ ಹೆಗ್ಗಳಿಕೆ ಇವರದಾಯಿತು.

1950: ಚಾರ್ಲ್ಸ್ ಎಂ ಶುಜ್ ಅವರು ರಚಿಸಿದ ಕಾಮಿಕ್ ಸ್ಟ್ರಿಪ್ `ಪೀನಟ್ಸ್' ಮೊತ್ತ ಮೊದಲ ಬಾರಿಗೆ ಒಂಭತ್ತು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಯಿತು.

1946: ಭಾರತದ ಖ್ಯಾತ ಚಿತ್ರನಟಿ ಆಶಾ ಪರೇಖ್ ಜನ್ಮದಿನ.

No comments:

Advertisement