ಇಂದಿನ ಇತಿಹಾಸ
ಅಕ್ಟೋಬರ್ 13
ಭಾರತೀಯ ಚಿತ್ರರಂಗದ ಇಬ್ಬರು ಖ್ಯಾತ ಸಹೋದರರ ಹುಟ್ಟಿದ ಹಾಗೂ ಮರಣದ ದಿನ ಇದು. 1911ರಲ್ಲಿ ಈ ದಿನ ಖ್ಯಾತ ಚಿತ್ರ ನಟ ಅಶೋಕ ಕುಮಾರ್ ಹುಟ್ಟಿದರು. ಆಗ ಅವರಿಗೆ ಇಡಲಾಗಿದ್ದ ಹೆಸರು ಕುಮುದ್ ಲಾಲ್ ಕುಂಜಿಲಾಲ್ ಗಂಗೂಲಿ. 1987ರಲ್ಲಿ ಇದೇ ದಿನ ಅವರ ಸಹೋದರ ಖ್ಯಾತ ಹಿನ್ನೆಲೆ ಗಾಯಕ ನಟ, ಕಿಶೋರ ಕುಮಾರ್ ತಮ್ಮ 58ನೇ ವಯಸ್ಸಿನಲ್ಲಿ ಮೃತರಾದರು.
2007: ಮರ್ಕ್ ಅಂಡ್ ಕಂಪೆನಿ ನೂತನವಾಗಿ ತಯಾರಿಸಿದ ಏಡ್ಸ್ ಚಿಕಿತ್ಸಾ ಔಷಧಕ್ಕೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿತು. ಇನ್ನು ಎರಡು ವಾರಗಳಲ್ಲಿ ಈ ಔಷಧ ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇತರ ಔಷಧಗಳಿಗೆ ಹೋಲಿಸಿದರೆ ಇದು ಏಡ್ಸ್ ವೈರಾಣು ಪ್ರಸರಣ ತಡೆಗೆ ಅತ್ಯಂತ ಸುರಕ್ಷಿತ ಎಂದು ಕಂಪೆನಿ ಹೇಳಿತು.
2007: ಹದಿನಾರು ವರ್ಷಗಳ ಹಿಂದೆ ಮುಚ್ಚಲು ತೀರ್ಮಾನಿಸಲಾಗಿದ್ದ ಸರ್ಕಾರಿ ಸ್ವಾಮ್ಯದ ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್ಡಿನ (ಕೆಪಿಎಲ್) 81 ಉದ್ಯೋಗಿಗಳು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್ಡಿಸಿಎಲ್) ಸೇವೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್ ಈ ಸುದೀರ್ಘ ವಿವಾದಕ್ಕೆ ತೆರೆ ಎಳೆಯಿತು. ಕೆಪಿಎಲ್ ಮುಚ್ಚಲು ಅಧಿಕೃತ ಸಮ್ಮತಿ ನೀಡಿದ ನ್ಯಾಯಮೂರ್ತಿ ಎಸ್.ಬಿ. ಸಿನ್ಹ ಹಾಗೂ ಹರಿಜಿತ್ ಬೇಡಿ ಅವರನ್ನು ಒಳಗೊಂಡ ಪೀಠವು, 1947 ರ ಕೈಗಾರಿಕಾ ವಿವಾದ ಕಾಯ್ದೆ ಅನ್ವಯ ಅದರ ಉದ್ಯೋಗಿಗಳು ಕೇವಲ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿತು. ಕರ್ನಾಟಕ ಸರ್ಕಾರಕ್ಕೂ ಯಾವುದೇ ಹಂತದಲ್ಲಿ ನಿರ್ದಿಷ್ಟ ನಿಲುವು ತಳೆಯದೇ ಇದ್ದುದಕ್ಕಾಗಿ ಕೋರ್ಟ್ ಛೀಮಾರಿ ಹಾಕಿತು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಹರಿಹರ ಪಾಲಿಫೈಬರ್ಸ್ ಜಂಟಿ ಸಹಯೋಗದಲ್ಲಿ ಕರ್ನಾಟಕ ಪಲ್ಪ್ ವುಡ್ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಆದರೆ ಆರಂಭದಿಂದಲೇ ನಿರಂತರ ನಷ್ಟ ಅನುಭವಿಸುತ್ತಲೇ ಬಂದ ಕಾರಣ 1991ರ ಅ. 24 ರಂದು ಇದನ್ನು ಮುಚ್ಚಲು ಮತ್ತು ಇದರಲ್ಲಿನ 81 ಸಿಬ್ಬಂದಿಯನ್ನು ಅರಣ್ಯ ಅಭಿವೃದ್ಧಿ ನಿಗಮದಲ್ಲಿ ವಿಲೀನಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಈ ಹಂತದಲ್ಲಿ ತಮ್ಮನ್ನು ಮಾತೃ ಸಂಸ್ಥೆಗೆ ಸೇರಿಸಿಕೊಳ್ಳಬೇಕೆಂದು ಕೋರಿ ಕಂಪೆನಿಯ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಇದನ್ನು ತಳ್ಳಿ ಹಾಕಿತು. ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ವ್ಯಾಪ್ತಿಗೂ ಒಳಪಡುವುದಿಲ್ಲ ಎಂದೂ ಸ್ಪಷ್ಟಪಡಿಸಿತು.
2007: ಅಧಿಕಾರ ಹಸ್ತಾಂತರ ವಿಚಾರದಲ್ಲಿನ `ರಾಜಕೀಯ ಆಟ'ದಿಂದ ಬೇಸತ್ತು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಜನತಾದಳ (ಎಸ್) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದವರ ಸಂಖ್ಯೆ ಮೂರಕ್ಕೆ ಏರಿತು. ಈ ಮೊದಲು ಮಾಜಿ ಸಂಸದ ವಿಜಯ ಸಂಕೇಶ್ವರ, ಶಾಸಕ ಮಹಿಮ ಪಟೇಲ್ ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
2007: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ನಾಯಕನಟಿಯಾಗಿ ಮಾಡಿ ವಿವಾದಕ್ಕೆ ಕಾರಣವಾದ `ಚೆಲುವಿನ ಚಿತ್ತಾರ' ಚಲನಚಿತ್ರ ಹೈಕೋರ್ಟ್ ಮೆಟ್ಟಿಲೇರಿತು. ಇದೇ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗವು ಕಳೆದ 21ರಂದು ತಮಗೆ ನೀಡಿರುವ ನೋಟಿಸನ್ನು ರದ್ದು ಮಾಡುವಂತೆ ಕೋರಿ ಚಿತ್ರದ ನಿರ್ದೇಶಕ ಎಸ್.ನಾರಾಯಣ್ ನ್ಯಾಯಾಲಯದ ಮೊರೆ ಹೋದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಅಮೂಲ್ಯಳನ್ನು ನಾಯಕನಟಿಯನ್ನಾಗಿ ಮಾಡಿದ್ದು ನಿಯಮ ಬಾಹಿರ ಎಂಬುದು ಆಯೋಗದ ಆರೋಪ. ಶಾಲೆಯ ಸಮವಸ್ತ್ರ ಧರಿಸಿ, ಆಕೆಗಿಂತ ಎರಡು ಪಟ್ಟು ವಯಸ್ಸಾಗಿರುವ ಹೀರೋ ಗಣೇಶ್ ಜೊತೆ ಸುತ್ತಾಡುವುದನ್ನು ಚಿತ್ರದಲ್ಲಿ ತೋರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಯೋಗ, ಈ ಬಗ್ಗೆ ಕಾರಣ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿತು. ಇದೇ ಆರೋಪದ ಸಂಬಂಧ ನಾರಾಯಣ್ ವಿರುದ್ಧ ಎನ್. ವಿ.ವೆಂಕಟರಮಣಯ್ಯ ಹಾಗೂ ಇತರರು ಕೂಡ ದೂರು ದಾಖಲಿಸಿದ್ದು, ಇದನ್ನು ಕೂಡಾ ರದ್ದುಪಡಿಸುವಂತೆ ನಾರಾಯಣ್ ಹೈಕೋರ್ಟಿನ ಮೊರೆ ಹೊಕ್ಕಿದ್ದರು.
2006: ಕಡು ಬಡವರ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳನ್ನು ಹೆಚ್ಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಮಹಮ್ಮದ್ ಯೂನಸ್ ಮತ್ತು ಅವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಓಸ್ಲೋದಲ್ಲಿ ಪ್ರಕಟಿಸಲಾಯಿತು. ಚಿಕ್ಕ ಪ್ರಮಾಣದ ಸಾಲ ಪದ್ಧತಿಯಂತಹ ಹೊಸ ಹೊಸ ರೀತಿಯ ಆರ್ಥಿಕ ಕಾರ್ಯಕ್ರಮಗಳ ಮೂಲಕ ತಮ್ಮ ತಾಯ್ನಾಡಿನಲ್ಲಿ ತಳಹಂತದಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಡೆಸಿದ ಯತ್ನಗಳಿಗಾಗಿ ಈ ಪುರಸ್ಕಾರ ನೀಡಲಾಯಿತು.
2006: ಅಭಿವೃದ್ಧಿಶೀಲ ರಾಷ್ಟ್ರಗಳ ಯುವ ಗಣಿತ ಶಾಸ್ತ್ರಜ್ಞರಿಗೆ ನೀಡಲಾಗುವ 2006ನೇ ಸಾಲಿನ ರಾಮಾನುಜನ್ ಪ್ರಶಸ್ತಿಗೆ ಬೆಂಗಳೂರು ಮೂಲದ ಪ್ರೊ. ರಾಮದೊರೈ ಸುಜಾತ ಆಯ್ಕೆಯಾದರು. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಸಂಸ್ಥೆಯಲ್ಲಿ ಸುಜಾತ ಅಂಕಗಣಿತದಲ್ಲಿ ಮಹತ್ವದ ಸಂಶೋಧನೆ ಮಾಡಿದ್ದರು.
2006: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಧ್ಯಾಹ್ನ 3.25ರಿಂದ 3.30ರ ಅವಧಿಯಲ್ಲಿ ಭೂಕಂಪ ಸಂಭವಿಸಿತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.2ರಷ್ಟು ಇತ್ತು.
1988: ಸಮಾಧಿ ಸಂದರ್ಭದಲ್ಲಿ ಕ್ರಿಸ್ತನಿಗೆ ಹೊದಿಸಿದ್ದು ಎನ್ನಲಾದ ಲಿನನ್ ಬಟ್ಟೆ `ಟುರಿನ್ ಶ್ರೌಡ್' ಖೋಟಾ ಎಂಬುದು ಪತ್ತೆಯಾಯಿತು. ಶತಮಾನಗಳಿಂದ ಈ ಬಟ್ಟೆ ಕ್ರಿಸ್ತನಿಗೆ ಸಮಾಧಿ ಕಾಲದಲ್ಲಿ ಹೊದಿಸಿದ್ದು ಎಂದು ಹೇಳುತ್ತಾ ಬರಲಾಗಿತ್ತು. ಈ ಬಗ್ಗೆ ಶಂಕೆ ವ್ಯಕ್ತ ಪಡಿಸುತ್ತಾ ಬಂದ ರೋಮನ್ ಕ್ಯಾಥೋಲಿಕ್ ಚರ್ಚ್ ವ್ಯಾಪಕ ಶೋಧಗಳ ಬಳಿಕ ಈ ಕುರಿತು ಪ್ರಕಟಿಸಲಾದ ತೀರ್ಮಾನಗಳನ್ನು ಅಂಗೀಕರಿಸಿತು.
1946: ಸಾಹಿತಿ ಎಸ್.ಬಿ. ಉತ್ನಾಳ್ ಜನನ.
1943: ಇಟಲಿಯು ಜರ್ಮನಿಯ ವಿರುದ್ಧ ಸಮರ ಸಾರಿತು. ಒಂದು ಕಾಲದಲ್ಲಿ ಜರ್ಮನಿ ಅದರ ಮಿತ್ರರಾಷ್ಟ್ರವಾಗಿತ್ತು.
1936: ಸಾಹಿತಿ ಪಿ.ವಿ. ಶಾಸ್ತ್ರಿ ಕಿಬ್ಬಳ್ಳಿ ಜನನ.
1928: ಖ್ಯಾತ ಸಾಹಿತಿ ಕೀರ್ತಿನಾಥ ಕುರ್ತಕೋಟಿ ಜನನ.
1925: ಬ್ರಿಟಿಷ್ ಕನ್ಸರ್ ವೇಟಿವ್ ರಾಜಕಾರಣಿ ಹಾಗೂ ಇಂಗ್ಲೆಂಡಿನ ಪ್ರಧಾನಿಯಾದ ಮಾರ್ಗರೆಟ್ ಥ್ಯಾಚರ್ ಜನ್ಮದಿನ. 1979-90ರ ಅವಧಿಯಲ್ಲಿ ಇಂಗ್ಲೆಂಡಿನ ಪ್ರಧಾನಿಯಾದ ಅವರು ಯುರೋಪಿನ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾದರು.
1911: ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ಎಂದೇ ಖ್ಯಾತರಾದ ಎಲಿಜಬೆತ್ ನೋಬೆಲ್ ನಿಧನರಾದರು. ಐರ್ಲೆಂಡಿನಲ್ಲಿ 1867ರ ಅಕ್ಟೋಬರ್ 20ರಂದು ಜನಿಸಿದ್ದ ಇವರು ಸ್ವಾಮಿ ವಿವೇಕಾನಂದರ ಅಪ್ಪಟ ಶಿಷ್ಯೆಯಾಗಿದ್ದರು.
1860: ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವ ವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಸಾಹಿತಿ ಎಚ್.ವಿ. ನಂಜುಂಡಯ್ಯ (13-10-1860ರಿಂದ 7-5-1920) ಅವರು ಸುಬ್ಬಯ್ಯ- ಅನ್ನಪೂರ್ಣಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.
1815: ನೆಪೋಲಿನ್ ನ ಸಹೋದರಿ ಕರೋಲಿನ್ ಳನ್ನು ಮದುವೆಯಾಗಿ ನೇಪಲ್ಸ್ ರಾಜನಾದ ಫ್ರೆಂಚ್ ಮಾರ್ಷಲ್ ಜಾಕಿಮ್ ಮುರಾತ್ ನನ್ನು ಸೇನಾ ವಿಚಾರಣೆ (ಕೋರ್ಟ್ ಮಾರ್ಷಲ್) ಬಳಿಕ ಮರಣದಂಡನೆಗೆ ಗುರಿಪಡಿಸಲಾಯಿತು.
1792: ಜಾರ್ಜ್ ವಾಷಿಂಗ್ಟನ್ ಅವರು ಶ್ವೇತಭವನಕ್ಕೆ (ವೈಟ್ ಹೌಸ್) ಮೂಲೆಗಲ್ಲು ಹಾಕಿದರು. ಅಧ್ಯಕ್ಷ ಆಡಮ್ಸ್ ಮತ್ತು ಆತನ ಪತ್ನಿ ಅಬಿಗೈಲ್ ಅವರು 1800ರಲ್ಲಿಪೂರ್ಣಗೊಂಡ ಕಟ್ಟಡದಲ್ಲಿ ವಾಸಿಸಿದ ಮೊದಲ ವ್ಯಕ್ತಿಗಳೆನಿಸಿದರು. 1809ರ ವೇಳೆಗೆ ಜನರು ಇದನ್ನು `ವೈಟ್ ಹೌಸ್' ಎಂದು ಕರೆಯದೊಡಗಿದರು. ಅಕ್ಕಪಕ್ಕದ ಕೆಂಪು ಇಟ್ಟಿಗೆಯ ಕಟ್ಟಡಗಳ ನಡುವೆ ಬಿಳಿ-ಕಂದು ಬಣ್ಣದ ಮರಳುಕಲ್ಲಿನ ಕಾರಣ ಈ ಕಟ್ಟಡ ಎ್ದದು ಕಾಣುತ್ತಿದ್ದುದು ಇದಕ್ಕೆ ಕಾರಣ. 1902ರಲ್ಲಿ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಈ ಕಟ್ಟಡಕ್ಕೆ `ವೈಟ್ ಹೌಸ್' ಎಂಬ ಹೆಸರನ್ನೇ ಅಧಿಕೃತಗೊಳಿಸಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment