ಇಂದಿನ ಇತಿಹಾಸ
ಅಕ್ಟೋಬರ್ 24
ಇಂದು ವಿಶ್ವಸಂಸ್ಥೆ ದಿನ. 1947ರಲ್ಲಿ ವಿಶ್ವ ಸಂಸ್ಥೆಯು ಅಕ್ಟೋಬರ್ 24ರ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು 1945ರಲ್ಲಿ ಈ ದಿನ ವಿಶ್ವಸಂಸ್ಥೆ ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದದ್ದರಿಂದ ಈ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಆಚರಿಸಲು ಆಯ್ಕೆ ಮಾಡಲಾಯಿತು. (ವಿಶ್ವಸಂಸ್ಥೆ ಚಾರ್ಟರನ್ನು 1945ರ ಜೂನ್ 26ರಂದು ಸರ್ವಾನುಮತದಿಂದ
ಅಂಗೀಕರಿಸಲಾಗಿತ್ತು.)
2007: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 20ರಂದು ಹೊತ್ತಿಕೊಂಡ ಕಾಳ್ಗಿಚ್ಚಿನ ಜ್ವಾಲೆಗಳನ್ನು ಹತೋಟಿಗೆ ತರಲು ಸ್ಥಳೀಯ ಆಡಳಿತ ನಾಲ್ಕನೇ ದಿನವೂ ವಿಫಲವಾಗಿ, 5 ಲಕ್ಷ ಜನ ಸಾನ್ ಡಿಯಾಗೊ ಪ್ರಾಂತ್ಯವನ್ನು ತೊರೆದರು. ಕಾಳ್ಗಿಚ್ಚು ಉಗ್ರ ಸ್ವರೂಪ ತಾಳಿ, 1,220 ಚದರ ಕಿ.ಮೀ. ದೂರಕ್ಕೆ ವ್ಯಾಪಿಸಿತು. ಅಗ್ನಿ ಪ್ರತಾಪ ಸಾನ್ ಡಿಯಾಗೊ ಪ್ರದೇಶದಲ್ಲಿ ಹೆಚ್ಚಾಗಿತ್ತು. ಪರ್ವತದ ಮೇಲಿರುವ ಸಾನ್ ಡಿಯಾಗೊ ಪಟ್ಟಣವನ್ನು ಅಗ್ನಿಯ ಜ್ವಾಲೆಗಳಿಂದ ರಕ್ಷಿಸಲು 10,000ದಷ್ಟ ಅಗ್ನಿಶಾಮಕ ಸಿಬ್ಬಂದಿ ಅಹೋರಾತ್ರಿ ಶ್ರಮಿಸಿದರು. ಕಾಳ್ಗಿಚ್ಚಿಗೆ ಐವರು ಬಲಿಯಾಗಿ 36 ಜನ ಗಾಯಗೊಂಡರು. 1500ಕ್ಕೂ ಹೆಚ್ಚು ಮನೆಗಳು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ರಸ್ತೆಯ ಮೇಲೆಲ್ಲ ಬೂದಿ, ಪಟ್ಟಣದ ತುಂಬೆಲ್ಲ ಕಪ್ಪು ಹೊಗೆ ಆವರಿಸಿತು. ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನರನ್ನು ಸ್ಥಳಾಂತರಗೊಳಿಸಿದ ಮೊದಲ ಘಟನೆ ಇದು. 2005ರ ಕತ್ರಿನಾ ಚಂಡಮಾರುತದ ನಂತರ ಅಮೆರಿಕದಲ್ಲಿ ಸಂಭವಿಸಿದ ಬಹುದೊಡ್ಡ ನೈಸರ್ಗಿಕ ವಿಕೋಪ ಇದು. ಕತ್ರಿನಾ ಚಂಡಮಾರುತ ಅಪಾರ ಪ್ರಮಾಣದ ನಾಶಕ್ಕೆ ಕಾರಣವಾಗಿತ್ತು.
2007: ಬಾಬರಿ ಮಸೀದಿ ಧ್ವಂಸ ನಂತರ ದೇಶದ ವಿವಿಧೆಡೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಾನ್ಪುರದ ಸ್ಥಳೀಯ ನ್ಯಾಯಾಲಯವೊಂದು 15 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಶಿಕ್ಷೆಗೆ ಗುರಿಯಾದ ಆರೋಪಿಗಳು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವಾದ ಮೇಲೆ ನಡೆದ ಕೋಮು ಗಲಭೆಯಲ್ಲಿ ಭಾಗವಹಿಸಿ ಹತ್ಯಾಕಾಂಡ ಮಾಡಿದ್ದರು ಎನ್ನಲಾಗಿತ್ತು. ಈ ಘಟನೆಯಲ್ಲಿ 11 ಮಂದಿ ಮೃತರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ಎಂ. ಹಾಸೆಬ್ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
2007: ಭಾರತೀಯ ಜನತಾ ಪಕ್ಷದ ಮುಖಂಡ ಎಲ್. ಕೆ .ಅಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಅಲ್-ಉಮ್ಮಾ ಸಂಘಟನೆಯ ಅಧ್ಯಕ್ಷ ಎಸ್. ಎ. ಬಾಷಾ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಡ್ವಾಣಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿ ಈ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಸ್ಫೋಟದಲ್ಲಿ 58 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸ್ಫೋಟ ಸಲುವಾಗಿ ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಬಾಷಾ ಮತ್ತು ಅನ್ಸಾರಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ನ್ಯಾಯಾಧೀಶ ಕೆ. ಉತ್ತರಾಪತಿ ಅವರು ಈ ಪ್ರಕರಣದ 70 ಜನ ಅಪರಾಧಿಗಳಲ್ಲಿ 35 ಮಂದಿಗೆ ಶಿಕ್ಷೆ ಪ್ರಕಟಿಸಿದರು.
2007: ಕವಯಿತ್ರಿ ಮಧುಮಿತಾ ಶುಕ್ಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಮಾಜವಾದಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಅಮರಮಣಿ ತ್ರಿಪಾಠಿ, ಅವರ ಪತ್ನಿ ಮಧುಮಣಿ ಹಾಗೂ ಇತರ ಇಬ್ಬರಿಗೆ ಡೆಹ್ರಾಡೂನಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಮರಮಣಿ ಸೋದರ ಸಂಬಂಧಿ ರೋಹಿತ್ ಚತುರ್ವೇದಿ ಹಾಗೂ ಸುಪಾರಿ ಹಂತಕ ಸಂತೋಷ ರೈ ಅವರು ಕೂಡಾ ಜೀವಾವಧಿ ಶಿಕ್ಷೆಗೀಡಾದರು. ಸಾಕ್ಷ್ಯಾಧಾರದ ಕೊರತೆಯಿಂದ ರೈ ಸಹಚರ ರಾಕೇಶ್ ಪಾಂಡೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಸಮಾಜವಾದಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಅಮರಮಣಿ ತ್ರಿಪಾಠಿ ಅವರು ಕವಯಿತ್ರಿ ಮಧುಮಿತಾ ಅವರೊಂದಿಗೆ ಸಂಬಂಧವಿರಿಸಿಕೊಂಡದ್ದಕ್ಕೆ ತ್ರಿಪಾಠಿ ಅವರ ಪತ್ನಿ ಮಧುಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕವಯಿತ್ರಿಯ ಹತ್ಯೆಗಾಗಿ ಸಂತೋಷ ರೈಗೆ ಅವರು ಸುಪಾರಿ ನೀಡಿದ್ದರು. ಏಳು ತಿಂಗಳ ಗರ್ಭಿಣಿ ಮಧುಮಿತಾ ಶವ ನಂತರ 2003ರ ಮೇ 9ರಂದು ಲಖನೌ ನಿವಾಸದಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ ಆರೋಪಿಗಳಿಗೆ ಮರಣ ದಂಡನೆ ವಿಧಿಸುವಂತೆ ವಾದಿಸಿತ್ತು. ಆದರೆ ಪ್ರಕರಣ ತೀರ ಅಪರೂಪದ್ದಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಎಲ್ಲ ನಾಲ್ವರೂ ಆಪಾದಿತರಿಗೆ ತಲಾ ರೂ 50,000 ದಂಡವನ್ನೂ ವಿಧಿಸಲಾಯಿತು.
2007: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಐದು ಪ್ರಭೇದದ ಕೀಟಗಳು ಸೇರಿದಂತೆ ಒಂದು ಸಿಹಿ ನೀರಿನ `ಕ್ಯಾಟ್ ಫಿಷ್' ಹೊಸದಾಗಿ ಪತ್ತೆಯಾಗಿವೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಭೇದಗಳು ಬೆಳಕಿಗೆ ಬಂದವು. ಪಶ್ಚಿಮ ಘಟ್ಟದ ಪರ್ವತಗಳ ನಡುವೆ ಹರಿಯುವ ನದಿ ಹಾಗೂ ಅವುಗಳ ತಪ್ಪಲಿನಲ್ಲಿ ಈ ಹೊಸ ಪ್ರಭೇದಗಳು ಕಂಡು ಬಂದವು. ಉದ್ಯಾನದ ಮುಡುಬಾ ಪ್ರದೇಶದಲ್ಲಿ ಹರಿಯುವ ತುಂಗಾ ನದಿಯಲ್ಲಿ ಹೊಸ ಬಗೆಯ `ಕ್ಯಾಟ್ ಫಿಷ್' ದೊರೆತಿದ್ದು, ಇದಕ್ಕೆ `ಗ್ಲೈಪಟೋಥ್ರಾಕ್ಸ್ ಕುದುರೆಮುಖ್ ಜೆನ್ಸಿಸ್' ಎಂದು ನಾಮಕರಣ ಮಾಡಲಾಗಿದೆ ಎಂದು ಭಾರತ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ತಿಳಿಸಿದರು. ರಾಜ್ಯ ಅರಣ್ಯ ಇಲಾಖೆ ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ `ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬಿಳಿಗಿರಿ ರಂಗನಬೆಟ್ಟದಲ್ಲಿರುವ ವನ್ಯಜೀವಿಗಳ' ಕುರಿತ ಸಮೀಕ್ಷಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿವರ ಬಹಿರಂಗಪಡಿಸಿದರು. ಹೊಸ ಸಂಶೋಧನೆಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿ ಪ್ರಭೇದದ ಸಂಖ್ಯೆ 522ಕ್ಕೆ ಏರಿದಂತಾಯಿತು.
2007: ಬಾಹ್ಯಾಕಾಶದಲ್ಲಿ ಗರ್ಭ ಧರಿಸಿದ ಮೊತ್ತಮೊದಲ ಜಿರಲೆಯೊಂದು ಮರಿಗಳನ್ನು ಹಾಕಿದ್ದು ರಷ್ಯಾ ವಿಜ್ಞಾನಿಗಳಲ್ಲಿ ಸಂಭ್ರಮವನ್ನು ಉಂಟು ಮಾಡಿತು. 2007ರ ಸೆಪ್ಟೆಂಬರ್ 14ರಂದು ಬಾಹ್ಯಾಕಾಶಕ್ಕೆ ಉಡಾಯಿಸಿದ್ದ ಫೊಟಾನ್-ಎಂ ಜೈವಿಕ ಉಪಗ್ರಹದಲ್ಲಿ ಜಿರಲೆಗಳನ್ನು ಕಳುಹಿಸಲಾಗಿತ್ತು. ಈ ಉಪಗ್ರಹ ಸೆಪ್ಟೆಂಬರ್ 26ರಂದು ಭೂಮಿಗೆ ಮರಳಿತ್ತು. ಬಾಹ್ಯಾಕಾಶದ ಗುರುತ್ವರಹಿತ ಸ್ಥಿತಿಯಲ್ಲಿ ಗರ್ಭ ಧರಿಸಿದ 33 ಜಿರಲೆಗಳು ನಮ್ಮ ಬಳಿ ಇವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಅಟ್ಯಾಕ್ಶಿನ್ ಹೇಳಿದರು. ಹೊಸದಾಗಿ ಹುಟ್ಟಿದ ಜಿರಲೆ ಮರಿಗಳು ಚೆನ್ನಾಗಿ ತಿನ್ನುತ್ತಿವೆ. ಆದರೆ, ಗುರುತ್ವರಹಿತ ಸ್ಥಿತಿ ಅವುಗಳ ಚರ್ಮದ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದ್ದು ಅವುಗಳ ಹೊರಮೈ ಬಹುಬೇಗ ಕಪ್ಪಗಾಗಿದೆ ಎಂದು ಅವರು ತಿಳಿಸಿದರು. ಜಿರಲೆ ಮರಿಗಳು ಹುಟ್ಟಿದಾಗ ತಿಳಿ ವರ್ಣದಲ್ಲಿದ್ದು, ಕ್ರಮೇಣ ದಟ್ಟ ಬಣ್ಣಕ್ಕೆ ತಿರುಗುತ್ತವೆ.
2007: ದೇಶದ ಬಾಹ್ಯಾಕಾಶ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ ಚೀನಾವು, ಚಂದ್ರ ಕಕ್ಷೆಯಲ್ಲಿ ಸುತ್ತುವ `ಚಾಂಗ್-1' ಉಪಗ್ರಹವನ್ನು ಕ್ಸಿಚಾಂಗ್ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಸಂಜೆ 6.05 ಗಂಟೆಗೆ ಗಗನಕ್ಕೆ ಹಾರಿಸಿತು. ಉಪಗ್ರಹವನ್ನು 'ಲಾಂಗ್ ಮಾರ್ಚ್ 3ಎ' ವಾಹಕದ ರಾಕೆಟ್ ಮೂಲಕ ಹಾರಿ ಬಿಡಲಾಯಿತು. ಚೀನಾದ ಪೌರಾಣಿಕ ದೇವತೆಯಾದ `ಚಾಂಗ್' ಹೆಸರನ್ನು ಉಪಗ್ರಹಕ್ಕೆ ನೀಡಲಾಗಿದೆ.
2007: ವಿವಾದಿತ ಸೇತು ಸಮುದ್ರಂ ಯೋಜನೆಯನ್ನು ತಜ್ಞರ ಸಮಿತಿ ಪುನರ್ರಚಿಸಿ, ಪರಿಶೀಲಿಸುವಂತೆ ಕೋರಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. `ಸಮಿತಿಯಲ್ಲಿ ಕೋರ್ಟ್ ಶಾಮೀಲಾಗಲು ಸಾಧ್ಯವಿಲ್ಲ. ತಜ್ಞರ ಸಮಿತಿಯನ್ನು ಕೋರ್ಟ್ ನಿಯೋಜಿಸಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿತು. `ಸೇತು ಸಮುದ್ರಂ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿ ನೀಡುತ್ತಿಲ್ಲ' ಎಂದು ಆರೋಪಿಸಿ ಸ್ವಾಮಿ ಅರ್ಜಿ ಸಲ್ಲಿಸಿದ್ದರು.
2007: ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 13ನೇ ಶತಮಾನದ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ವಿಶ್ವ ದಾಖಲೆ ಬೆಲೆಗೆ (2,320,917 ಅಮೆರಿಕನ್ ಡಾಲರ್) ಮಾರಾಟವಾಯಿತು. ಇಸ್ಲಾಮ್ ಮತ್ತು ಭಾರತೀಯ ಕಲೆಗಳ ಹರಾಜು ನಡೆಯುತ್ತಿದ್ದ ಸಂದರ್ಭದಲ್ಲಿ 250,000 ರಿಂದ 300,000 ಪೌಂಡುಗಳಿಗೆ ಮಾರಾಟವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿದ ಬೆಲೆ ಅದಕ್ಕೆ ಬಂತು. ಇಲ್ಲಿ ಮಾರಾಟವಾದ ಕೃತಿ, ಕಲಾಕೃತಿಗಳಿಂದ 5.9 ದಶಲಕ್ಷ ಪೌಂಡ್ ಸಂಗ್ರಹವಾಯಿತು. ಈ ಕುರಾನನ್ನು ಸಂಪೂರ್ಣವಾಗಿ ಚಿನ್ನದಿಂದ ಬರೆಯಲಾಗಿದ್ದು, ಬೆಳ್ಳಿಯ ಅಕ್ಷರಗಳ ಅಡಿಟಿಪ್ಪಣಿ ಇದೆ. ಈ ಗ್ರಂಥ ಎಲ್ಲಾ ಇಸ್ಲಾಮೀ ಗ್ರಂಥಗಳ ಮಾರಾಟ ಬೆಲೆಯ ದಾಖಲೆಯನ್ನೂ ಮುರಿಯಿತು.
2006: ಅಮೆರಿಕದ ಪ್ರತಿಷ್ಠಿತ ಎನ್ರಾನ್ ಕಂಪನಿಗೆ ವ್ಯಾಪಕ ವಂಚನೆ ಮಾಡಿ, ದಿವಾಳಿಯಾಗಲು ಸಂಚು ರೂಪಿಸಿದ ಆರೋಪದ ಮೇಲೆ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಜೆಫ್ರಿ ಕೆ. ಸಿಲ್ಲಿಂಗ್ ಅವರಿಗೆ ಅವರಿಗೆ ಹ್ಯೂಸ್ಟನ್ನಿನಲ್ಲಿ ನ್ಯಾಯಾಧೀಶ ಸೈಮನ್ ಟಿ. ಲೇಕ್ ಥರ್ಡ್ ಅವರು 24 ವರ್ಷ ಮತ್ತು ನಾಲ್ಕು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿದರು. ಈವರೆಗೆ ಅತಿ ದೀರ್ಘಾವಧಿಯ ಜೈಲುಶಿಕ್ಷೆಗೆ ಒಳಗಾದವರಲ್ಲಿ ವರ್ಲ್ಡ್ಡ್ ಕಾಮ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯ ನಿರ್ವಾಹಕ ಬರ್ನಾರ್ಡ್ ಜೆ. ಎಬ್ಬರ್ಸ್ ಅವರು ಪ್ರಮುಖರಾಗಿದ್ದು ಇವರಿಗೆ ಕಳೆದ ವರ್ಷ 11 ಶತಕೋಟಿ ಡಾಲರುಗಳ ವಂಚನೆ ಪ್ರಕರಣದಲ್ಲಿ ಕಂಪನಿ ಸಂಪೂರ್ಣವಾಗಿ ಕುಸಿಯಲು ಕಾರಣರಾದ ಆರೋಪದ ಮೇಲೆ 25 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. 52 ವರ್ಷದ ಜೆಫ್ರಿ ಸಿಲ್ಲಿಂಗ್ ಅವರಿಗೆ ಇದು ಇನ್ನು ಬಹುತೇಕ ಜೀವಾವಧಿ ಶಿಕ್ಷೆಯಾಗಿದೆ. ಇವರು ಒಂದೇ ದಶಕದಲ್ಲಿ ಸಾಮಾನ್ಯ ಪೈಪ್ ಲೈನ್ ಕಂಪನಿಯಾಗಿದ್ದ ಎನ್ರಾನನ್ನು ವಿದ್ಯುತ್ ವ್ಯಾಪಾರ ಕಂಪನಿಯಾಗಿ ಮಾರ್ಪಡಿಸಿದರು. ಕಂಪೆನಿಯಲ್ಲಿ ಜೆಫ್ರಿ ಸಿಲ್ಲಿಂಗ್ ಅವರು ಅಪಾರ ಸಾಲ ಮತ್ತು ಹಣಕಾಸಿನ ಸೋರಿಕೆಗೆ ಅವಕಾಶ ನೀಡಿದ ಪರಿಣಾಮ ಅಂತಿಮವಾಗಿ ದಿವಾಳಿಯಾಯಿತು. ಒಂದು ಕಾಲದಲ್ಲಿ ದೇಶದ ಏಳನೇ ಅತಿ ದೊಡ್ಡ ಕಂಪೆನಿಯಾಗಿದ್ದ ಎನ್ರಾನಿನಲ್ಲಿ ಷೇರು ಮತ್ತು ನಿವೃತ್ತಿ ಉಳಿತಾಯದಲ್ಲಿ ಶತಕೋಟಿಗಟ್ಟಲೆ ಡಾಲರ್ ತೊಡಗಿಸಿ, ಕಳೆದುಕೊಂಡ ಷೇರುದಾರರು ಅತಿ ಸಂಕಷ್ಟಕ್ಕೆ ಸಿಲುಕಿದರು.
2006: ಖ್ಯಾತ ವೈದ್ಯ ವಿಜ್ಞಾನಿ ಡಾ. ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ (ಡಾ. ಸ.ಜ. ನಾಗಲೋಟಿಮಠ) (66) (20-7-1940ರಿಂದ 24-10-2006) ಅಲ್ಪ ಕಾಲದ ಅಸ್ವಸ್ಥತೆಯ ಬಳಿಕ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನರಗುಂದ ತಾಲ್ಲೂಕು ಶಿರೋಳದ ಜಂಬಯ್ಯ ಅವರ ಮಗನಾಗಿ ಗದುಗಿನಲ್ಲಿ 20-7-1940ರಲ್ಲಿ ಜನಿಸಿದರು. ಬಡತನದಲ್ಲೇ ವಿದ್ಯಾಭ್ಯಾಸ ಮಾಡಿ ಮುಂದಕ್ಕೆ ಬಂದ ನಾಗಲೋಟಿಮಠ ಅಖಿಲ ಭಾರತ ಮೈಕ್ರೊ ಬಯಾಲಜಿ ಮತ್ತು ಪೆಥಾಲಜಿ ಸಂಸ್ಥೆ ಖಜಾಂಚಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷ, ಹುಬ್ಬಳ್ಳಿ ಕಿಮ್ಸ್ ನ ಪ್ರಥಮ ನಿರ್ದೇಶಕ, ಜೀವನಾಡಿ ವೈದ್ಯಕೀಯ ಮಾಸಿಕದ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಬೆಳಗಾಗಿ ಪೆಥಾಲಜಿ ಮ್ಯೂಸಿಯಂ, ವಿಜಾಪುರ ವೈದ್ಯಕೀಯ ಕಾಲೇಜಿನ ದೇಹದ ಹರಳುಗಳ ಮ್ಯೂಸಿಯಂ ಸ್ಥಾಪಿಸಿದವರು. ಇಂಗ್ಲಿಷಿನಲ್ಲಿ 14, ಕನ್ನಡದಲ್ಲಿ 41 ಗ್ರಂಥಗಳನ್ನು ರಚಿಸಿದ ಅವರು ಡಾ. ಬಿ.ಸಿ. ರಾಯ್, ಹರಿ ಓಂ, ಡಾ. ಬಿ.ಕೆ. ಆಯ್ಕಟ್ ಸೇರಿದಂತೆ 12 ರಾಷ್ಟ್ರೀಯ ಪ್ರಶಸ್ತಿಗಳು, ಚಾಲುಕ್ಯ, ಡಾ. ಹಳಕಟ್ಟಿ, ಕುವೆಂಪು, ಮ್ಲಲಿಕಾರ್ಜುನ ಮನ್ಸೂರ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 22 ಪ್ರಶಸ್ತಿ ಪುರಸ್ಕೃತರು.
2006: ಪಾಲೆಸ್ಟೈನಿ ದಂಗೆಕೋರರಿಂದ ಅಪಹರಣಕ್ಕೊಳಗಾಗಿದ್ದ ಸ್ಪೇನ್ ಮೂಲದ ಎಪಿ ಛಾಯಾಗ್ರಾಹಕ ಎಮಿಲಿಯೊ ಮೊರೆನಟ್ಟಿ (37) ಅವರನ್ನು ಈದಿನ ರಾತ್ರಿ ತಡವಾಗಿ ಬಿಡುಗಡೆ ಮಾಡಲಾಯಿತು. ಎಮಿಲಿಯೊ ಮೊರೆನಟ್ಟಿ ಅವರು ಎಪಿ ಸುದ್ದಿ ಸಂಸ್ಥೆಯ ಜೆರುಸಲೇಂ ಬ್ಯೂರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು 23-10-2006ರ ರಾತ್ರಿ ಬಂದೂಕು ತೋರಿಸಿ ಬೆದರಿಸಿ ಗಾಜಾದಿಂದ ಅವರನ್ನು ಅಪಹರಿಸಿದ್ದರು.
2000: ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಮ್ ಕೇಸರಿ ನಿಧನ.
1984: ಭಾರತದ ಮೊತ್ತ ಮೊದಲ ಭೂಗತ ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆ `ದಿ ಮೆಟ್ರೋ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಉದ್ಘಾಟನೆಗೊಂಡಿತು. ಎಸ್ ಪ್ಲನೇಡಿನಿಂದ ಭವಾನಿಪುರದವರೆಗಿನ 3.4 ಕಿ.ಮೀ. ವ್ಯಾಪ್ತಿಯಲ್ಲಿ ಅದು ಭಾಗಶಃ ಸೇವೆ ಒದಗಿಸಿತು. ಡಮ್ ಡಮ್ಮಿನಿಂದ ಟೋಲಿಗಂಜ್ ವರೆಗಿನ 16.45 ಕಿ.ಮೀ. ದೂರದ ಪೂರ್ಣಮಾರ್ಗವು ಹಂತ ಹಂತಗಳಲ್ಲಿ 1995ರ ಸೆಪ್ಟೆಂಬರ್ 27ರ ವೇಳೆಗೆ ಪೂರ್ಣಗೊಂಡಿತು.
1968: ಸಾಹಿತಿ ಡಾ. ವಿನಯಾ ಜನನ.
1964: ಉತ್ತರ ರೊಡೇಸಿಯಾವು `ರಿಪಬ್ಲಿಕ್ ಆಫ್ ಝಾಂಬಿಯಾ' ಆಗಿ ಪರಿವರ್ತನೆಗೊಂಡಿತು. ಕೆನ್ನೆತ್ ಕೌಂಡಾ ಅದರ ಪ್ರಥಮ ಅಧ್ಯಕ್ಷರಾದರು.
1956: ಭಾರತ ಸರ್ಕಾರದ ಅಧಿಕೃತ ಕಾರ್ಯಗಳಿಗಾಗಿ ಈಗ ಅನುಸರಿಸುತ್ತಿರುವ ಗ್ರೆಗೋರಿಯನ್ ಪಂಚಾಂಗದ ಜೊತೆಗೆ ಶಾಲಿವಾಹನ ಶಕೆಯಂತೆ ಭಾರತೀಯ ಪಂಚಾಂಗವನ್ನೂ 1957ರ ಮಾರ್ಚ್ 20ರಿಂದ (ಸ್ರತ್ರ ಪ್ರಥಮ ಶಾಲಿವಾಹನ ಶಕೆ 1879) ಅಧಿಕೃತ ಕಾರ್ಯಗಳಿಗಾಗಿ ಅನುಸರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿತು..
1951: ಸಾಹಿತಿ ಯು.ವಿ. ತಾರಿಣಿರಾವ್ ಜನನ.
1949: `ಅಭಿಯಾನ' ಪ್ರತಿಷ್ಠಾನದ ಮೂಲಕ ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದ ಕಥೆ, ಕಾದಂಬರಿಗಾರ್ತಿ ಶಾರದಾ ಭಟ್ ಅವರು ಕೆ. ವಿಠಲ ಭಟ್- ಕಾವೇರಿಯಮ್ಮ ದಂಪತಿಯ ಮಗಳಾಗಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಜನಿಸಿದರು.
1939: ಡ್ಯುಪಾಂಟ್'್ಸ ವಿಲ್ಲ್ಮಿಂಗ್ ಟನ್ನಿನ ದೆಲವಾರೆ ನೈಲಾನ್ ಫ್ಯಾಕ್ಟರಿಯ್ಲಲಿ ನೌಕರರಿಗೆ ನೈಲಾನ್ ದಾಸ್ತಾನು ಮಾರಾಟ ಮಾಡುವ ಮೂಲಕ ಅಮೆರಿಕದಲ್ಲಿ ನೈಲಾನ್ ಮಾರಾಟ ಆರಂಭವಾಯಿತು. ಡ್ಯುಪಾಂಟ್ ತನ್ನ ನೈಲಾನ್ ಉತ್ಪನ್ನವನ್ನು ವಾಣಿಜ್ಯೀಕರಣ ಮಾಡುವ ಮೂಲಕ 1938ರಲ್ಲಿ ಲವಣ ಸಂಪನ್ಮೂಲಗಳಿಂದ ನಿರ್ಮಿಸಲಾದ ಈ ಪ್ರಥಮ ಮಾನವ ನಿರ್ಮಿತ ಫೈಬರ್ ಉತ್ಪನ್ನದಲ್ಲಿ ಕ್ರಾಂತಿ ಆರಂಭವಾಯಿತು.
1930: ಸಾಹಿತಿ ಹಾಲಾಡಿ ಮಾರುತಿರಾವ್ ಜನನ.
1904: ಖ್ಯಾತ ಉದ್ಯಮಿ ಲಾಲ್ ಚಂದ್ ಹೀರಾಚಂದ್ ಜನನ.
1881: ಖ್ಯಾತ ಕಲಾವಿದ ಪಾಬ್ಲೋ ಪಿಕಾಸೋ ಜನ್ಮದಿನ.
1851: ಯುರೇನಸ್ ಗ್ರಹದ ಏರಿಯಲ್ ಮತ್ತು ಅಂಬ್ರಿಯಲ್ ಉಪಗ್ರಹಗಳನ್ನು ವಿಲಿಯಂ ಲಾಸ್ಸೆಲ್ ಪತ್ತೆ ಹಚ್ಚಿದ. `ಏರಿಯಲ್' ಅಂದರೆ ಷೇಕ್ಸ್ ಪೀಯರ್ನ ನಾಟಕ `ದಿ ಟೆಂಪೆಸ್ಟ್' ನಲ್ಲಿ ಬರುವ ದಿಗ್ಬಂಧಿತ `ದೆವ್ವ'. `ಅಂಬ್ರಿಯಲ್' ಹೆಸರು ಅಲೆಗ್ಸಾಂಡರ್ ಪೋಪ್ ನ `ದಿ ರೇಪ್ ಆಫ್ ದಿ ಲಾಕ್'ನಿಂದ ಬಂದಿದೆ.
1827: ವೈಸ್ ರಾಯ್ ಲಾರ್ಡ್ ರಿಪ್ಪನ್ ಜನನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment