ಇಂದಿನ ಇತಿಹಾಸ
ನವೆಂಬರ್ 15
ಖ್ಯಾತ ಗಾಂಧಿವಾದಿ, ಸಮಾಜ ಸುಧಾರಕ ಆಚಾರ್ಯ ವಿನೋಬಾ ಭಾವೆ ಅವರು ವಾರ್ಧಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
2007: ಗುಲ್ಬರ್ಗ ನಗರದ ಪ್ರತಿಷ್ಠಿತ ಎಂ.ಆರ್. ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ, ಖ್ಯಾತ ವೈದ್ಯ ಸಾಹಿತಿಯೂ ಆಗಿರುವ ಡಾ.ಪಿ.ಎಸ್. ಶಂಕರ್ ಅವರಿಗೆ `ನ್ಯಾಶನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್' ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಘೋಷಿಸಿತು. 50 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆಯು ಎದೆ ರೋಗಗಳ ನಿದಾನ, ಶುಶ್ರೂಷೆಯಲ್ಲಿ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದ್ದು, 1999ರ ನಂತರ ಈ ಪ್ರಶಸ್ತಿಗೆ ಪಾತ್ರರಾದವರ ಪೈಕಿ ದೇಶದಲ್ಲೇ ಎರಡನೆಯವರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಡಾ. ಪಿ.ಎಸ್. ಶಂಕರ್ ಅವರು ಚೆಸ್ಟ್ ಸೊಸೈಟಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ದೆಹಲಿಯ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟಿನಲ್ಲಿ ಅಧ್ಯಯನ ನಡೆಸಿ, ನಂತರ ಕಾಮನ್ ವೆಲ್ತ್ ಮೆಡಿಕಲ್ ಫೆಲೋ ಆಗಿ ಲಂಡನ್ನಿನ ಬ್ರಾಮ್ ಟನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
2007: ಸೇವೆ ಕಾಯಂಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರ ಸಾವಿಗೆ ಕಾರಣರಾದ ನಗರದ ಬಿಪಿಎಲ್ ಎಂಜಿನಿಯರಿಂಗ್ ಲಿಮಿಟೆಡ್ ಕಾರ್ಮಿಕ ಸಂಘದ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. 1998ರಲ್ಲಿ ನಡೆದ ಈ ಘಟನೆಯಲ್ಲಿ ಶಿಕ್ಷೆಗೆ ಒಳಗಾದವರು ಕಂಪೆನಿಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿ, ಅದರ ಒಳಗಿದ್ದ ಸಿಬ್ಬಂದಿ ತಪ್ಪಿಸಿಕೊಂಡು ಹೋಗದಂತೆ ಮಾಡಿದ್ದರಿಂದಾಗಿ ಇಬ್ಬರು ಸಾವನ್ನಪ್ಪಿ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 49 ಆರೋಪಿಗಳ ಪೈಕಿ ಸೆಷನ್ಸ್ ಕೋರ್ಟಿನಿಂದ ಅಕ್ಟೋಬರ್ 13ರಂದು ಆರೋಪ ಮುಕ್ತಗೊಂಡಿದ್ದ ಸಿ.ಮಗೇಶ್, ಪಿ.ಎ.ಭರತ್ ಕುಮಾರ್, ಎಡ್ವಿನ್ ನೋಯಲ್, ಎಸ್.ಬಾಬು, ನಾಗರಾಜ್ (ಎಲ್ಲರೂ 20 ರಿಂದ 25 ವರ್ಷ ವಯಸ್ಸಿನವರು) ಅವರಿಗೆ ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್ ಹಾಗೂ ರವಿ ಬಿ.ನಾಯಕ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆ ವಿಧಿಸಿತು. ಈ ಆರೋಪಿಗಳನ್ನು ಖುಲಾಸೆ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಾನ್ಯ ಮಾಡಿತು. ಕೊಲೆಗೆ ಕಾರಣರಾದ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಆರ್. ಶ್ರೀನಿವಾಸ, ಕಾರ್ಯದರ್ಶಿ ಟಿ.ಕೆ.ಎಸ್.ಕುಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಎನ್.ವಿ.ರವಿ, ಆರ್.ರಮೇಶ್, ಧರಣೇಶ್ ಕುಮಾರ್, ಎಸ್.ಜಗದೀಶ ಹಾಗೂ ಶರತ್ಕುಮಾರ್ ಅವರಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪೀಠ ಊರ್ಜಿತಗೊಳಿಸಿತು.
2007: ಗ್ವಾಲಿಯರಿನಲ್ಲಿ ಪಾಕಿಸ್ಥಾನ ತಂಡದ ವಿರುದ್ಧದ ಇಂಡಿಯನ್ ಆಯಿಲ್ ಕಪ್ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವನ್ನು ಆರು ವಿಕೆಟ್ಟುಗಳ ಅಂತರದಿಂದ ಜಯಿಸಿದ ಭಾರತ ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು 3-1ರಿಂದ ತನ್ನದಾಗಿಸಿಕೊಂಡಿತು.
2006: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲು ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಲಂಡನ್ನಿನ ಅಂತಾರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅನುದಾನ ಸಂಸ್ಥೆಯು ವಿಶೇಷ ಪ್ರಮಾಣಪತ್ರ ನೀಡಿ ಗೌರವಿಸಿತು. ಈ ವಿಶೇಷ ಪ್ರಮಾಣಪತ್ರ ಪಡೆಯುತ್ತಿರುವ ಮೊದಲ ಭಾರತೀಯ ಹಾಗೂ ವಿಶ್ವದ 6ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬಚ್ಚನ್ ಪಾತ್ರರಾದರು. ಬಚ್ಚನ್ ಅವರು ಭಾರತದಲ್ಲಿ ಯುನಿಸೆಫ್ ಮತ್ತು ಪಲ್ಸ್ ಪೋಲಿಯೊ ಲಸಿಕೆ ನೀಡಿಕೆ ಕಾರ್ಯಕ್ರಮಗಳ ಪ್ರಚಾರದ ರಾಯಭಾರಿಯಾಗಿದ್ದಾರೆ.
2006: ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಎರಡು ದಶಕಗಳ ಹಿಂದಿನ ಬ್ಯಾಟಿಂಗ್ ಜೊತೆಯಾಟದ ವಿಶ್ವದಾಖಲೆಯನ್ನು ಹೈದರಾಬಾದ್ ಸೇಂಟ್ ಪೀಟರ್ಸ್ ಶಾಲೆಯ ಬಿ. ಮನೋಜ್ ಕುಮಾರ್ ಮತ್ತು ಮೊಹಮ್ಮದ್ ಶಾಯ್ ಬಾಜ್ ತಂಬಿ ಮುರಿದರು. ಸೇಂಟ್ ಪೀಟರ್ಸ್ ಶಾಲೆಯ ವಿರುದ್ಧ ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ನಡೆದ ಅಂತರಶಾಲಾ ಪಂದ್ಯದಲ್ಲಿ ಈ ಜೋಡಿ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 721 ರನ್ ಕಲೆ ಹಾಕಿತು. ಇದರಿಂದಾಗಿ 1987-88ರ ಸಾಲಿನಲ್ಲಿ ಸಚಿನ್ ಮತ್ತು ಕಾಂಬ್ಳಿ ಶಾರದಾಶ್ರಮ ಶಾಲೆಯ ಪರ ಮುರಿಯದ 3ನೇ ವಿಕೆಟ್ಟಿಗೆ ಸೇರಿಸಿದ್ದ 664 ರನ್ನುಗಳ ದಾಖಲೆಯನ್ನು ಈ ಜೋಡಿ ಮುರಿದಂತಾಯಿತು.
2005: ಬೆಂಗಳೂರಿನ ಪ್ರಾರ್ಥನಾ ಎಜುಕೇಷನ್ ಸೊಸೈಟಿ'ಯು 2004ರ ಸಾಲಿನ ಕಂಪ್ಯೂಟರ್ ಲಿಟರೆಸಿ ಎಕ್ಸಲೆನ್ಸ್ ಅವಾರ್ಡ್ ಫಾರ್ ಸ್ಕೂಲ್ಸ್' ಪ್ರಶಸ್ತಿಗೆ ಆಯ್ಕೆಯಾಯಿತು. ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರತಿವರ್ಷ ನೀಡುವ ಈ ಪ್ರಶಸ್ತಿಯ ಮೊತ್ತ 1.5 ಲಕ್ಷ ರೂಪಾಯಿಗಳು.
2002: ನೇಪಾಳದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಭದ್ರತಾಪಡೆಯ ಸಿಬ್ಬಂದಿ ಸೇರಿ 200 ಜನ ಮೃತರಾದರು.
1989: ಕರಾಚಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಹೆಜ್ಜೆ ಇರಿಸಿದ ಸಚಿನ್ ತೆಂಡೂಲ್ಕರ್ ಭಾರತದ ಪರವಾಗಿ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಅವರ ವಯಸ್ಸು: 16 ವರ್ಷ 205 ದಿನಗಳು. ಪಾಕಿಸ್ಥಾನದ ಬೌಲರ್ ವಖಾರ್ ಯೂನಸ್ ಅವರೂ ಇದೇ ಪಂದ್ಯದಲ್ಲಿ ಚೊಚ್ಚಲ ಹೆಜ್ಜೆ ಇರಿಸಿದರು.
1982: ಖ್ಯಾತ ಗಾಂಧಿವಾದಿ, ಸಮಾಜ ಸುಧಾರಕ ಆಚಾರ್ಯ ವಿನೋಬಾ ಭಾವೆ ಅವರು ವಾರ್ಧಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
1982: ಖ್ಯಾತ ಕವಿ, ಯುಗವಾಣಿ ಮಾಜಿ ಸಂಪಾದಕ ಎಸ್.ಎನ್. ಕಾಟ್ಕರ್ ನಿಧನ.
1965: ಕಝಖಸ್ಥಾನದ ಬೈಕನೂರಿನಿಂದ ಸೋವಿಯತ್ ಗಗನನೌಕೆ ವೆನೆರಾ 3 ಬಾಹ್ಯಾಕಾಶಕ್ಕೆ ಏರಿತು. 1966ರ ಮಾರ್ಚ್ 1 ರಂದು ಇದು ಶುಕ್ರಗ್ರಹಕ್ಕೆ ತಲುಪಿ ಅಲ್ಲಿಂದ ಇನ್ನೊಂದು ಗ್ರಹವನ್ನು ತಲುಪಿದ ಮೊದಲ ಮಾನವ ರಹಿತ ಬಾಹ್ಯಾಕಾಶ ನೌಕೆ ಎನಿಸಿಕೊಂಡಿತು.
1956: ಮಣಿಪುರ ಸಂಸ್ಥಾನಕ್ಕೆ ಭಾರತದ ಆರು ಶಾಸನಗಳನ್ನು ಅನ್ವಯಿಸಲು ಅವಕಾಶ ನೀಡುವ `ಸಿ' ವಿಭಾಗದ ಸಂಸ್ಥಾನಗಳ (ಶಾಸನಗಳ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿತು.
1949: ಮಹಾತ್ಮಾ ಗಾಂಧಿ ಅವರನ್ನು ಕೊಲೆಗೈದುದಕ್ಕಾಗಿ ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಲಾಯಿತು.
1947: ಸಾಹಿತಿ ಹಿ.ಶಿ. ರಾಮಚಂದ್ರಗೌಡ ಜನನ.
1945: ಸಾಹಿತಿ ಟಿ. ಜಯಶೀಲ ಜನನ.
1907: `ಹಚ್ಚೇವು ಕನ್ನಡದ ದೀಪ' ರಚನಕಾರ ದುಂಡಪ್ಪ ಸಿದ್ದಪ್ಪ ಕರ್ಕಿ (15-11-1907ರಿಂದ 16-1-1984) ಅವರು ಸಿದ್ದಪ್ಪ್ಪ-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಜನಿಸಿದರು.
1904: `ಸೇಫ್ಟಿ ರೇಜರ್' ಗಾಗಿ ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರಿಗೆ ಪೇಟೆಂಟ್ ನೀಡಲಾಯಿತು.
1738: ಸರ್ ವಿಲಿಯಮ್ ಫ್ರೆಡರಿಕ್ ಹರ್ಶೆಲ್ (1738-1822) ಹುಟ್ಟಿದ ದಿನ. ಜರ್ಮನ್ ಸಂಜಾತ ಈ ಬ್ರಿಟಿಷ್ ಖಗೋಳತಜ್ಞ ಯುರೇನಸ್ ಗ್ರಹವನ್ನು ಕಂಡು ಹಿಡಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment