ಇಂದಿನ ಇತಿಹಾಸ
ನವೆಂಬರ್ 16
2007: ಕಲೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ನೀಡಲಾಗುವ ಪ್ರತಿಷ್ಠಿತ ದಯಾವತಿ ಮೋದಿ ಪ್ರಶಸ್ತಿಯನ್ನು ಖ್ಯಾತ ಚಿತ್ರ ಕಲಾವಿದ ಅಕ್ಬರ್ ಪದಂಸೀ ಅವರಿಗೆ ಪ್ರಕಟಿಸಲಾಯಿತು. ಸಮಕಾಲೀನ ಭಾರತೀಯ ಚಿತ್ರ ಪರಂಪರೆಗೆ ಪದಂಸೀ ಅವರು ಸಲ್ಲಿಸಿರುವ ಸೇವೆಗಾಗಿ ಅವರನ್ನು ಆಯ್ಕೆ ಮಾಡಲಾಯಿತು.
2007: ನವೆಂಬರ್ 15ರ ರಾತ್ರಿ ಬಾಂಗ್ಲಾದೇಶದ ದಕ್ಷಿಣದ ಕರಾವಳಿ ತೀರಕ್ಕೆ ಅಪ್ಪಳಿಸಿದ ಭಯಾನಕ `ಸಿದ್ರ್' ಚಂಡಮಾರುತಕ್ಕೆ ಸಿಲುಕಿ 550ಕ್ಕೂ ಹೆಚ್ಚು ಜನ ಮೃತರಾಗಿ, 3,000ಕ್ಕೂ ಹೆಚ್ಚು ಮೀನುಗಾರರು, ನಾವಿಕರು ನಾಪತ್ತೆಯಾದರು. ಬಂಗಾಳ ಕೊಲ್ಲಿಯ ಉತ್ತರ ಭಾಗದಿಂದ ಬಾಂಗ್ಲಾ ಪ್ರವೇಶಿಸಿದ ಚಂಡಮಾರುತ 15 ಕರಾವಳಿ ಜಿಲ್ಲೆಗಳಲ್ಲಿ ರುದ್ರನರ್ತನ ಮಾಡಿತು. ಗಂಟೆಗೆ 240 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಪ್ರಬಲ ಗಾಳಿ, 15 ಅಡಿ ಎತ್ತರದ ಸಮುದ್ರದ ಅಲೆಗಳು ಸುನಾಮಿಯನ್ನು ನೆನಪಿಸಿದವು.
2007: ಒಡಂಬಡಿಕೆ ಪತ್ರ ಎಂಬ `ಮೂಗುದಾರ'ದ ಮೂಲಕ ಸರ್ಕಾರವನ್ನು ನಿಯಂತ್ರಿಸಲು ಉದ್ದೇಶಿಸಿದ ಜೆ.ಡಿ (ಎಸ್) ನಾಯಕ ಎಚ್. ಡಿ. ದೇವೇಗೌಡರ ಕಾರ್ಯತಂತ್ರಕ್ಕೆ ಮಣಿಯದಿರಲು ಬಿಜೆಪಿ ನಿರ್ಧರಿಸಿತು. ನವದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇಪ್ಪತ್ತೊಂದು ತಿಂಗಳುಗಳ ಹಿಂದೆ ಉಭಯ ಪಕ್ಷಗಳ ನಡುವೆ ಯಾವ ಬಗೆಯ ಕೊಡು-ಕೊಳ್ಳುವಿಕೆ ಆಧಾರದಲ್ಲಿ ಮೈತ್ರಿ ಏರ್ಪಟ್ಟಿತ್ತೋ ಅದನ್ನಷ್ಟೇ ಪಾಲಿಸಿಕೊಂಡು ಹೋಗಬೇಕೆಂಬ ಒಮ್ಮತದ ಅಭಿಪ್ರಾಯವನ್ನು ಪಕ್ಷದ ನಾಯಕರು ಸಭೆಯಲ್ಲಿ ವ್ಯಕ್ತ ಪಡಿಸಿದರು.
2007: ಪಾಕಿಸ್ಥಾನದ ಸೇನಾ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಅವರ ಬೆಂಬಲಿಗ, 57 ವರ್ಷದ ಮೊಹಮ್ಮದಿಯಾ ಸೂಮ್ರೊ ದೇಶದ ಹಂಗಾಮಿ ಪ್ರಧಾನಿಯಾಗಿ ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು.
2007: ಗೃಹ ಬಂಧನದಲ್ಲಿದ್ದ ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ, ಮಾನವ ಹಕ್ಕುಗಳ ಧುರೀಣೆ ಆಸ್ಮಾ ಜಹಾಂಗೀರ್ ಮತ್ತಿತರ ಬಂಧಿತ ಮಹಿಳಾ ಮುಖಂಡರನ್ನು ಪಾಕಿಸ್ಥಾನದ ಸೇನಾ ಆಡಳಿತ ಬಿಡುಗಡೆ ಮಾಡಿತು. ತುರ್ತು ಪರಿಸ್ಥಿತಿ ತೆರವುಗೊಳಿಸುವಂತೆ ಪರ್ವೇಜ್ ಮುಷರಫ್ ಅವರನ್ನು ಒತ್ತಾಯಿಸಲು ಅಮೆರಿಕದ ಪ್ರತಿನಿಧಿಯಾಗಿ ರಕ್ಷಣಾ ಇಲಾಖೆ ಜಂಟಿ ಕಾರ್ಯದರ್ಶಿ ಜಾನ್ ನೆಗ್ರೊಪೊಂಟೆ ಅವರು ಲಾಹೋರಿಗೆ ಆಗಮಿಸುವ ಕೇವಲ ಒಂದು ಗಂಟೆ ಮೊದಲು ಈ ಮುಖಂಡರನ್ನು ಬಿಡುಗಡೆ ಮಾಡಲಾಯಿತು. ನವೆಂಬರ್ 13 ರಂದು ಬೆನಜೀರ್ ಭುಟ್ಟೊ ಅವರಿಗೆ ಏಳು ದಿನಗಳ ಗೃಹ ಬಂಧನದ ಆದೇಶ ಜಾರಿಯಾಗಿತ್ತು. ಆದರೆ, ಅಮೆರಿಕ ಪ್ರತಿನಿಧಿ ಆಗಮನದ ಹಿನ್ನೆಲೆಯಲ್ಲಿ ಏಳುದಿನಗಳ ಮೊದಲೇ ಅವರನ್ನು ಮುಕ್ತಗೊಳಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಆಸ್ಮಾ ಜಹಾಂಗೀರ್ ಅವರನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ದಿನದಿಂದಲೇ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
2007: ವಿಶ್ವದ ಮೊತ್ತ ಮೊದಲ ತದ್ರೂಪಿ ಕುರಿ `ಡಾಲಿ' ರೂಪಿಸಿದ ವಿಜ್ಞಾನಿಗಳು ಈಗ ಇದೇ ಮೊದಲ ಬಾರಿಗೆ ಜಗತ್ತಿನ ಮೊತ್ತ ಮೊದಲ ಮಂಗನ ಭ್ರೂಣದ ತದ್ರೂಪಿ ರೂಪಿಸುವಲ್ಲಿ ಸಫಲರಾಗಿರುವುದಾಗಿ ಪ್ರಕಟಿಸಿದರು. ಈ ವಿಜ್ಞಾನಿಗಳ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ದೇಹದ ಯಾವುದೇ ಅಂಗಾಂಶದ ಜೀವಕೋಶಗಳನ್ನು ಪಡೆಯಬಹುದು. ಇದರಿಂದ ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯೂ ಸಾಧ್ಯವಾಗಲಿದೆ. `ನೇಚರ್' ಪತ್ರಿಕೆಯಲ್ಲಿ ಈ ಕುರಿತ ವರದಿಯನ್ನು ಪ್ರಕಟಿಸಲಾಗಿದೆ. ಅದರ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ಪಡೆಯುವ ಹೊಸ ಜೀವಕೋಶಗಳನ್ನು ತಮ್ಮ ಕಾರ್ಯಕ್ಷಮತೆ ಕಳೆದುಕೊಂಡ ಜೀವಕೋಶಗಳ ಬದಲಿಗೆ ಅಳವಡಿಸುವುದರಿಂದ ಮಾನವ ದೇಹ ಅಂತಹ ಕೋಶಗಳನ್ನು ತಿರಸ್ಕರಿಸುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.
2006: 1300 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯದ ಮಧ್ಯಮಗಾಮಿ `ಹತ್ಪ್ 5 (ಘೋರಿ) ಅಣ್ವಸ್ತ್ರ ಪ್ರಕ್ಷೇಪಣಾ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಇಂಧನಶಕ್ತಿಯಿಂದ ಉಡಾವಣೆಗೊಂಡು ಬಳಿಕ ಗುರುತ್ವಾಕರ್ಷಣ ಶಕ್ತಿಯಿಂದಲೇ ವೈರಿಪಾಳಯವನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
2006: ಬೆಂಗಳೂರಿನ ಹವ್ಯಾಸಿ ಪತ್ರಕರ್ತೆ ಭಾರತಿ ಘನಶ್ಯಾಮ್ ಅವರಿಗೆ ಪ್ರತಿಷ್ಠಿತ ಥಾಮ್ಸನ್ ಪ್ರತಿಷ್ಠಾನ ಪ್ರಶಸ್ತಿ ಲಭಿಸಿತು. ಎಚ್ ಐವಿ/ ಏಡ್ಸ್ ಕುರಿತು ಉದಯವಾಣಿಯಲ್ಲಿ ಬರೆದ ಲೇಖನಕ್ಕೆ ಈ ಪ್ರಶಸ್ತಿ ಬಂದಿತು.
2004: ಖ್ಯಾತ ಛಾಯಾಗ್ರಾಹಕ ಗೌರಿಶಂಕರ ನಿಧನ.
2001: ದಕ್ಷಿಣ ಆಫ್ರಿಕಾದ ಸನ್ಸಿಟಿಯಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಶ್ವಸುಂದರಿ ಕಿರೀಟ ಧರಿಸುವ ಮೂಲಕ ನೈಜೀರಿಯಾದ 18 ವರ್ಷದ ತರುಣಿ ಅಗ್ಬಾನಿ ಡರೇಗೊ ಸ್ಪರ್ಧೆಯ 51 ವರ್ಷಗಳ ಇತಿಹಾಸದಲ್ಲೇ `ವಿಶ್ವ ಸುಂದರಿ' ಎನಿಸಿಕೊಂಡ ಮೊತ್ತ ಮೊದಲ ಕರಿಯ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2000: ಕಮ್ಯೂನಿಸ್ಟ್ ವಿಯೆಟ್ನಾಂಗೆ ಭೇಟಿ ನೀಡಿದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷ ಎಂಬ ಹೆಗ್ಗಳಿಕೆ ಬಿಲ್ ಕ್ಲಿಂಟನ್ ಅವರದಾಯಿತು.
1990: ಚಂದ್ರಶೇಖರ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವಾಸಮತ ಗೊತ್ತುವಳಿಯಲ್ಲಿ ಜಯ.
1988: ಪಾಕಿಸ್ಥಾನದಲ್ಲಿ ಹನ್ನೊಂದು ವರ್ಷಗಳ ಬಳಿಕ ನಡೆದ ಮೊದಲ ಮುಕ್ತ ಚುನಾವಣೆಯಲ್ಲಿ
ಬೆನಜೀರ್ ಭುಟ್ಟೋಗೆ ಗೆಲುವು.
1981: ಅಮೆರಿಕನ್ ಚಿತ್ರನಟ ವಿಲಿಯಂ ಹೋಲ್ಡನ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು. `ಸನ್ ಸೆಟ್ ಬುಲೆವಾರ್ಡ್' ಚಿತ್ರದ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.
1973: ಭಾರತದ ಬ್ಯಾಡ್ಮಿಂಟನ್ ಪಟು ಪುಯೆಲ್ಲ ಗೋಪಿಚಂದ್ ಹುಟ್ಟಿದ ದಿನ. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಎರಡನೇ ಭಾರತೀಯ ಇವರು. ಮೊದಲಿಗೆ ಈ ಚಾಂಪಿಯನ್ ಶಿಪ್ ಗೆದ್ದದ್ದು ಪ್ರಕಾಶ್ ಪಡುಕೋಣೆ.
1960: ಹಾಲಿವುಡ್ಡಿನ ಖ್ಯಾತ ನಟ ಕ್ಲಾರ್ಕ್ ಗ್ಯಾಬಲ್ 59ನೇ ವಯಸ್ಸಿನಲ್ಲಿ ಮೃತರಾದರು. `ಕಿಂಗ್ ಆಫ್ ಹಾಲಿವುಡ್' ಎಂದೇ ಪ್ರಖ್ಯಾತರಾಗಿದ್ದ ಇವರು `ಗಾನ್ ವಿದ್ ದಿ ವಿಂಡ್' ಚಿತ್ರದಲ್ಲಿ ಮಾಡಿದ್ದ ರೆಟ್ ಬಟ್ಲರ್ ಪಾತ್ರದಿಂದ ಜನಪ್ರಿಯರಾಗಿದ್ದರು.
1947: ಸಾಹಿತಿ ವಿಜಯಾ ನಾಗರಾಜ್ ಜನನ.
1942: ಸಾಹಿತಿ ಕೋ.ಲ. ರಂಗನಾಥರಾವ್ ಜನನ.
1933: ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಮೊದಲ ಬಾರಿಗೆ ರಾಜತಾಂತ್ರಿಕ ಬಾಂಧ್ಯವಗಳನ್ನು ಸ್ಥಾಪಿಸಿಕೊಂಡವು.
1930: ಭಾರತೀಯ ಈಜುಗಾರ ಮಿಹಿರ್ ಸೆನ್ (1930-1997) ಹುಟ್ಟಿದ ದಿನ. 1958ರಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷ್ಯನ್ ಎಂಬ ಹೆಗ್ಗಳಿಕೆ ಇವರದು. ಪಾಕ್ ಜಲಸಂಧಿ, ಗಿಬ್ರಾಲ್ಟರ್ ಜಲಸಂಧಿ, ಪನಾಮಾ ಕಾಲುವೆ ಇತ್ಯಾದಿಗಳನ್ನೂ ಇವರು ಈಜಿದ್ದಾರೆ.
1916: ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಮಾನವ ಶಾಸ್ತ್ರದ ಅದ್ವೈರ್ಯು ಪ್ರೊ. ಎಂ.ಎನ್. ಶ್ರೀನಿವಾಸ್ ಅವರು ನರಸಿಂಹಾಚಾರ್ ಪುತ್ರನಾಗಿ ಮೈಸೂರಿನ ಬಳಿಯ ಅರಕೆರೆ ಗ್ರಾಮದಲ್ಲಿ ಜನಿಸಿದರು.
1835: ಬ್ರಿಟಿಷರೊಂದಿಗೆ ಹೋರಾಡುತ್ತಾ ರಣರಂಗದಲ್ಲಿ ಮಡಿದ ಭಾರತದ ವೀರ ಯೋಧೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ
(1835-1858) ಹುಟ್ಟಿದ ದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment