Friday, December 12, 2008

ಸಮುದ್ರ ಮಥನ 14: ಬದುಕಿನ ಸತ್ಯಂ ಶಿವಂ ಸುಂದರಂ...

ಸಮುದ್ರ ಮಥನ 14:

ಬದುಕಿನ ಸತ್ಯಂ ಶಿವಂ ಸುಂದರಂ...


ಹಾಗಾದಾಗ ಅದು ತುಂಬು  ಜೀವನವಾಗುತ್ತದೆ. ಅವರಿಗೆ ಅಯ್ಯೋ! ಇಲ್ಲಿರುವ ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲ ಎನ್ನುವ ಕೊರಗಾಗಲೀ, ಸಾವಿನ ಭಯವಾಗಲೀ ಯಾವೂದೂ ಇರುತ್ತಿರಲಿಲ್ಲ. ಅವರಿಗೆ ತಮ್ಮ ಜವಾಬ್ದಾರಿಯನ್ನು ಸಾರ್ಥಕವಾಗಿ ನಿರ್ವಹಿಸಿದ ತೃಪ್ತಿ ಇರುತ್ತಿತ್ತು. 


ಶಂಕರರ 'ಭಜಗೋವಿಂದಮ್...' ಭಜನೆ ಅರ್ಥಪೂರ್ಣವಾಗಿ ಜನಜನಿತವಾಗಿದೆ. ಅದರಲ್ಲೊಂದು ಕಡೆ 'ಬಾಲಸ್ತಾವತ್ ಕ್ರೀಡಾಸಕ್ತಃ | ತರುಣಸ್ತಾವತ್ ತರುಣೀರಕ್ತಃ | 
ವೃದ್ಧಸ್ತಾವತ್ ಚಿಂತಾಸಕ್ತಃ | ಕೋಪಿ ನ ಬ್ರಹ್ಮಣಿ ರಮತೇ ಚಿತ್ತಃ |' - ಬಾಲ್ಯ ಆಟದಲ್ಲಿ, ತಾರುಣ್ಯ ಪ್ರೇಮದಲ್ಲಿ, ಮುಪ್ಪು ಚಿಂತೆಯಲ್ಲಿ ಕಳೆದು ಹೋಗುತ್ತದೆ. ಬ್ರಹ್ಮವನ್ನು ತಿಳಿಯಲು ಯಾರೂ ಮನಸ್ಸನ್ನೇ ಮಾಡುವುದಿಲ್ಲ ಎಂದು ಬೇಸರಿಸುತ್ತಾರೆ.

ಅದರ ಹೊಡೆತ ಮುಪ್ಪಿನಲ್ಲಿ ಮುಖಕ್ಕೆ ರಾಚುತ್ತದೆ. ಆದರೆ, ಆಗ, ಏನೂ ಮಾಡಲಾಗದೇ ತೊಳಲಾಡುತ್ತಿರುತ್ತೇವೆ. ಸಾವಿನ ಮನೆಯಲ್ಲಿರುವಾಗ ಭಯದ ಭೀತಿ ಆವರಿಸಿರುತ್ತದೆ. ಆಗ, ಜೀವನ್ಮರಣಗಳ ಬಗ್ಗೆ ತಿಳಿಯಬೇಕಿತ್ತು, ಬ್ರಹ್ಮನ ಅನುಸಂಧಾನ ಮಾಡಬೇಕಿತ್ತು ಎಂದೆಲ್ಲ ಅನಿಸುತ್ತಿರುತ್ತದೆ. ಏನು ಮಾಡುವುದು? ಕಾಲ ಮಿಂಚಿರುತ್ತದೆ.

ಹಾಗಾಗಿ, ಬದುಕಲೊಂದು ಯೋಜನೆ ಬೇಕು. ಆ ಯೋಜನೆ ನಮ್ಮ ಹುಟ್ಟಿನ ಪೂರ್ವದಿಂದ ಆರಂಭಿಸಿ ಸಾವನ್ನು ಮೀರಿ ವ್ಯಾಪಿಸುವ ರೀತಿಯದ್ದಾದರೆ ಒಳ್ಳೆಯದು. ಅಷ್ಟಾಗದಿದ್ದರೆ, ಕನಿಷ್ಠ, ನಮ್ಮ ಜೀವಿತದ ಅವಧಿಯಲ್ಲಾದರೂ ಯೋಚಿತ ಉದ್ದೇಶಕ್ಕಾಗಿ, ಯೋಜಿತ ರೀತಿಯಲ್ಲಿ, ಸಾರ್ಥಕವಾಗಿ ಬದುಕಬೇಕಲ್ಲವೇ? (ಆರಂಭದಲ್ಲಿ ಶಿಸ್ತು, ಯೋಜನೆ, ಇವೆಲ್ಲ ಹೊರೆ ಎನಿಸಬಹುದು. ವಾಸ್ತವವಾಗಿ ಅದು ಹಾಗಿರುವುದಿಲ್ಲ. ಅರ್ಥವಾದರೆ ಬಹಳ ಆನಂದವಾಗುತ್ತದೆ. ನಂತರದ ಕಾರ್ಯ ಹೂ ಎತ್ತಿದಷ್ಟು ಹಗುರಾಗುತ್ತದೆ. ಅದರ ಕಂಪು ಮನಸ್ಸಿಗೆ ಮುದ ನೀಡುತ್ತದೆ). ಹಾಗೆ ಬದುಕಲು ರಾಮನ ಪರಂಪರೆ ಆದರ್ಶ ಎಂದೆನಿಸುತ್ತದೆ.

ಅವರ ಬಾಲ್ಯ ಕೇವಲ ಆಟದಲ್ಲಿ ಕಳೆದು ಹೋಗುತ್ತಿರಲಿಲ್ಲ. ಪಾಠದಿಂದಲೂ ತುಂಬಿರುತ್ತಿತ್ತು. ನಂತರ ಗುರುಕುಲದ ವಿದ್ಯಾಭ್ಯಾಸವೂ ಇತ್ತು. ಯೌವ್ವನಕ್ಕೆ ಕಾಲಿಡುತ್ತಿದ್ದ ಹಾಗೆ ವಿವಾಹ ಮತ್ತೊಂದಾಗುತ್ತಿತ್ತು. ಜೊತೆಯಲ್ಲಿಯೇ ರಾಜ್ಯಭಾರದ ಜವಾಬ್ದಾರಿ ಹೆಗಲೇರುತ್ತಿತ್ತು. ಅವರ ಮಕ್ಕಳು ಪ್ರಾಯ-ಪ್ರಬುದ್ಧರಾಗುತ್ತಿದ್ದ ಹಾಗೆ ತಮ್ಮ ಸಮಸ್ತ ಅಧಿಕಾರವನ್ನೂ ಅವರಿಗೆ ವಹಿಸುತ್ತಿದ್ದರು.

ನಂತರದ್ದು ತ್ಯಾಗಮಯ ಮುನಿವೃತ್ತಿ. ಬಾಲ್ಯದ ಶಿಕ್ಷಣಕ್ಕೆ ನಂತರದ ಅನುಭವವನ್ನು ಮಿಳಿತಗೊಳಿಸಿ ಸತ್ಯವನ್ನು ಅರಿಯುವ ಜೀವಿತದ ಭಾಗ ಅದು. ಹಾಗಾದಾಗ ಅದು ತುಂಬು ಜೀವನವಾಗುತ್ತದೆ. ಅವರಿಗೆ ಅಯ್ಯೋ! ಇಲ್ಲಿರುವ ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲ ಎನ್ನುವ ಕೊರಗಾಗಲೀ, ಸಾವಿನ ಭಯವಾಗಲೀ ಯಾವೂದೂ ಇರುತ್ತಿರಲಿಲ್ಲ. ಅವರಿಗೆ ತಮ್ಮ ಜವಾಬ್ದಾರಿಯನ್ನು ಸಾರ್ಥಕವಾಗಿ ನಿರ್ವಹಿಸಿದ ತೃಪ್ತಿ ಇರುತ್ತಿತ್ತು. 

ಹೀಗೆ, ನಿರ್ದಿಷ್ಟ ಕಾಲದಲ್ಲಿ ಬೀಳಬೇಕಾದ ಪಾಠ, ಆಗಬೇಕಾದ ಸಂಸ್ಕಾರ ಆದರೆ ಯಾವುದೂ ಅತಿರೇಕಕ್ಕೆ ಹೋಗುವುದಿಲ್ಲ. ಕಾಲವನ್ನು ಒಂದು ರೀತಿಯ ಅಮಲಿನಲ್ಲಿ ಕಳೆಯುವ, ಕಂಡ-ಕಂಡದ್ದರ ಹಿಂದೆ ಓಡುವ, ಪ್ರತಿಯೊಂದನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ, ಬಂದದ್ದನ್ನು ಬಿಡದಿರುವ, ಬಿಡಲು ಬಹಳ ದುಃಖಿಸುವ, ಹುಟ್ಟಿನಂತೆ ಸಹಜವಾದ ಸಾವನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿ ಬೆಳೆಯುವುದಿಲ್ಲ.

ತುಂಬು ಜೀವನದ ಲಾಭ ನಿತ್ಯ-ನಿರಂತರ. ಅದು ನಮಗೆ ಕಳೆದ ಕಾಲ ಬಗೆಗೆ ಕೊರಗಲು ಹಚ್ಚದೇ, ಬರುವ ಕಾಲದ ಬಗೆಗೆ ಆತಂಕಗೊಳಿಸದೇ, ಪ್ರತಿ ಕ್ಷಣದಲ್ಲಿ ಬದುಕಗೊಡುತ್ತದೆ. ಆಸ್ವಾದನೆಗೆ ಅವಕಾಶ ಕಲ್ಪಿಸುತ್ತದೆ. ಒಟ್ಟಾಗಿ, ಸತ್ತ ಬದುಕನ್ನು ಬದುಕುವ ಅನಿವಾರ್ಯತೆ ಎಂದೆಂದಿಗೂ ಎದುರಾಗುವುದಿಲ್ಲ.

ಇದರ ಕುರಿತಾಗಿ ಒಮ್ಮೆ ಯೋಚಿಸಿ. ಬದುಕಿನಲ್ಲಿ ಜೀವಂತಿಕೆ, ಲವಲವಿಕೆ ಎಲ್ಲವೂ ಸಂಪದ್ಭರಿತವಾಗಿರಲಿ. ಎಂದೆಂದಿಗೂ ಇದು ನಮ್ಮ ಆಶಯ.

ಸತ್ಯಂ ಶಿವಂ ಸುಂದರಂ...

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
 

No comments:

Advertisement