Saturday, December 6, 2008

ಇಂದಿನ ಇತಿಹಾಸ History Today ಡಿಸೆಂಬರ್ 06

ಇಂದಿನ ಇತಿಹಾಸ

ಡಿಸೆಂಬರ್ 6
ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. 

2007:  ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮತಗಟ್ಟೆಯ ಚುನಾವಣಾ ಕರ್ತವ್ಯಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿತು. ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಸ್.ಬಿ. ಸಿನ್ಹಾ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, `ಆದರೆ ರಜೆಯ ಅವಧಿ ಮತ್ತು ಬೋಧನೇತರ ದಿನಗಳಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳಿಗೆ ನಿಯೋಜಿಸಬಹುದು' ಎಂದು ಅಭಿಪ್ರಾಯಪಟ್ಟಿತು. ಬೋಧನಾ ಅವಧಿಗಳಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಆದರೆ ಕಾನೂನಿನಲ್ಲಿ ಅವಕಾಶವಿರುವಂತೆ ಶಿಕ್ಷಕೇತರ ವರ್ಗವನ್ನು ಶಾಲಾ ಕೆಲಸದ ಅವಧಿ ಅಥವಾ ಯಾವುದೇ ಸಮಯದಲ್ಲಾದರೂ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. ಲೋಕಸಭೆ, ವಿಧಾನಸಭೆ, ನಗರಾಡಳಿತ, ಗುರುದ್ವಾರ ಮಂಡಳಿ ಮುಂತಾದ ಆಡಳಿತ ಸಂಸ್ಥೆಗಳ ಚುನಾವಣಾ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಜನಸಂಖ್ಯಾ ಗಣತಿ, ಮಲೇರಿಯಾ, ಪರಿಸರ ಮಾಲಿನ್ಯ ಮತ್ತಿತರ ಕ್ಷೇತ್ರಗಳ ಸಮೀಕ್ಷೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರವು ಸುತ್ತೋಲೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸೇಂಟ್ ಮೇರೀಸ್ ಶಾಲೆಯು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇಂತಹ ಕೆಲಸಗಳಿಂದ ಅಪೂರ್ಣ ಬೋಧನೆ, ತರಗತಿಗೆ ವಿದ್ಯಾರ್ಥಿಗಳ ಗೈರು, ಕೆಟ್ಟಫಲಿತಾಂಶ, ಗುಣಮಟ್ಟವಿಲ್ಲದ ಶಿಕ್ಷಣ ಮುಂತಾದ ದುಷ್ಪರಿಣಾಮಗಳನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

2007: ವೈರಿ ಕ್ಷಿಪಣಿಗಳನ್ನು ಆಗಸದಲ್ಲೇ ನಾಶ ಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಬಂಗಾಳ ಕೊಲ್ಲಿಯಲ್ಲಿ ದೇಶೀಯವಾಗಿ ನಿರ್ಮಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2ನೇ ಬಾರಿ ಪರೀಕ್ಷೆಗೆ ಒಡ್ಡಿತು. ಈ ಪ್ರಾಯೋಗಿಕ ಪರೀಕ್ಷೆ ಕರಾರುವಾಕ್ಕಾಗಿ ನಡೆದು `ಡಿ ಆರ್ ಡಿ ಒ' ವಿಜ್ಞಾನಿಗಳ ಮುಖದಲ್ಲಿ ಸಂತಸ ಮೂಡಿತು. ಪರೀಕ್ಷೆಯ ಅಂಗವಾಗಿ ಮೊದಲು ಮಾರ್ಪಡಿಸಿದ ಪೃಥ್ವಿ ಕ್ಷಿಪಣಿಯನ್ನು ಬಾಲಸೋರಿನ  ಚಂಡಿಪುರದಿಂದ ಹಾರಿಸಲಾಯಿತು. ಅದನ್ನು ಆಗಸದಲ್ಲೇ ನಾಶಪಡಿಸಲು 2 ನಿಮಿಷ 40 ಸೆಕೆಂಡ್ ನಂತರ ಪಕ್ಕದ ಭದ್ರಕ್ ಜಿಲ್ಲೆಯ ವೀಲ್ಹರ್ ದ್ವೀಪದಿಂದ ಮತ್ತೊಂದು ಕ್ಷಿಪಣಿಯನ್ನು (ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ) ಹಾರಿಬಿಡಲಾಯಿತು. 

 2007: `ಅಕ್ರಮ- ಸಕ್ರಮ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಡಿಸೆಂಬರ್ 10ರಂದು ಹೈಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುವುದು' ಎಂದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು. ಇದರಿಂದಾಗಿ ಸಕ್ರಮ ಚೆಂಡು ಮತ್ತೆ ನ್ಯಾಯಾಲಯಕ್ಕೆ ಹೊರಳಿದಂತಾಯಿತು.

2007: ರಕ್ತ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನೂತನ ಯೋಜನೆಯನ್ನು `ಡಾಬರ್ ಆಂಕ್ವೆಸ್ಟ್' ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿತು. ಸಂಸ್ಥೆಯು ಆಯ್ದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಳ್ಳುವುದು. ಆದರೆ ಯೋಜನೆಯನ್ನು ಮೂರನೇ ಸಂಸ್ಥೆ ಜಾರಿ ತರಲಿದ್ದು ಆ ಸಂಸ್ಥೆಯೇ ರೋಗಿಗಳನ್ನು ಗುರುತಿಸುವುದು. ಪ್ರಸ್ತುತ ರೋಗ ಪತ್ತೆಗೆ ಸಂಬಂಧಿಸಿದ ಎಲ್ಲ ನಾಲ್ಕು ಪರೀಕ್ಷೆಗಳಿಗೆ ಸುಮಾರು 24 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಡಿ 10,200 ರೂಪಾಯಿಗಳಿಗೆ ಎಲ್ಲ ನಾಲ್ಕೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.

2007: ಧರ್ಮಪುರಿಯಲ್ಲಿ 2000ರ ಫೆಬ್ರುವರಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪಕ್ಷದ ಮೂವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ಮದ್ರಾಸ್ ಹೈಕೋರ್ಟ್ ಕಾಯಂಗೊಳಿಸಿತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಬಸ್ಸಿಗೆ 2000ದ ಫೆಬ್ರುವರಿಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಧರ್ಮಪುರಿಯಲ್ಲಿ ಬೆಂಕಿ ಹಚ್ಚಿದ್ದರು. ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರು. ಆಗ ವಿಶ್ವ ವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸಜೀವ ದಹನ ಗೊಂಡಿದ್ದರು.

 2007: ಜರ್ಮನಿ ಮೂಲದ ವಿಶ್ವದ ಅತಿ ದೊಡ್ಡ ಖಾಸಗಿ ಕೈಗಾರಿಕಾ ಸಂಸ್ಥೆ ಬಾಷ್, ಭಾರತದಲ್ಲಿನ ತನ್ನ ವಿವಿಧ ಕಾರ್ಯಾಚರಣೆಗಳಲ್ಲಿ ರೂ 850 ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿತು. ಇದರಿಂದ ಭಾರತದಲ್ಲಿನ ಬಾಷ್ ನ ಒಟ್ಟು ಹೂಡಿಕೆಯು 2010ನೇ ಇಸ್ವಿ ಹೊತ್ತಿಗೆ ರೂ 2,650 ಕೋಟಿಗಳಷ್ಟಾಗಲಿದೆ. ಮೋಟಾರ್ ಇಂಡಸ್ಟ್ರೀಸ್ ಕಂಪೆನಿಯು ಲಿಮಿಟೆಡ್ (ಮೈಕೊ) ಹೆಸರನ್ನು ಬಾಷ್ ಲಿಮಿಟೆಡ್ ಎಂದು ಬದಲಾಯಿಸಲು ಮೈಕೊದ ನಿರ್ದೇಶಕ ಮಂಡಳಿಯು ನಿರ್ಧರಿಸಿತು.

2007: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ಮುಂದಿನ ದಿನಗಳು ನ್ಯಾನೊ ತಂತ್ರಜ್ಞಾನದ್ದಾಗಿದ್ದು, ಇದಕ್ಕೆ ಸರ್ಕಾರ, ಸಮಾಜ ಸಜ್ಜಾಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ದೇಶದ ಪ್ರಥಮ ನ್ಯಾನೊ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮೇಳನವನ್ನು ಉದ್ಘಾಟಿಸಿದರು.

2006: ರಸ್ತೆಬದಿ ಜಗಳ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ಸಿಂಗ್ ಸಿಧು ಅವರಿಗೆ ಪಂಜಾಬ್- ಹರಿಯಾಣ  ಹೈಕೋರ್ಟ್ ಮೂರು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಮತ್ತೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

2006: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಜನ ಪ್ರತಿನಿಧಿಗಳನ್ನು ಕಾನೂನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2006: ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್. ಬಿ. ವಸಂತರಾಜಯ್ಯ ಅವರನ್ನು 2006-07ರ ಸಾಲಿನ `ಚಾವುಂಡರಾಯ ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತು. 15ಕ್ಕೂ ಅಧಿಕ ಜೈನ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ.

2006: ಫಿಜಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಷಿ, ಸಂಸತ್ ವಿಸರ್ಜಿಸುವ ಮೂಲಕ ತಮ್ಮ ಹಿಡಿತ ಭದ್ರಗೊಳಿಸಿದರು.

2005: ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. ಧ್ವಜದ ಮೇಲೆ ಕಸೂತಿ ಅಥವಾ ಮುದ್ರಣ ಮಾಡುವಂತಿಲ್ಲ. ಗೃಹಖಾತೆಯ ರಾಜ್ಯಸಚಿವ ಮಾಣಿಕ್ ರಾವ್ ಗವಿಟ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

2005: ಸಿಲಿಕಾನ್ ಲೋಹದ ಅಸ್ಪಟಿಕ ರೂಪ (ಎಮಾರ್ಫಸ್ ಸಿಲಿಕಾನ್) ಪತ್ತೆ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸುಬೇಂದು ಗುಹಾ ಅವರು ಇಂಧನ ಕ್ಷೇತ್ರದ ಪ್ರತಿಷ್ಠಿತ 2005ನೇ ಸಾಲಿನ ಜಾಗತಿಕ ತಂತ್ರಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ವಿಶ್ವತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. 

2005: ಕೇಂದ್ರ ಸಂಪುಟಕ್ಕೆ ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಕೇಂದ್ರ ದ ಖಾತಾ ರಹಿತ ಸಚಿವ ಕೆ. ನಟವರ್ಸಿಂಗ್ ಅವರು ನವದೆಹಲಿಯಲ್ಲಿ ನಡುರಾತ್ರಿ  ಪ್ರಕಟಿಸಿದರು. ವೋಲ್ಕರ್ ವರದಿ ಹಿನ್ನೆಲೆಯಲ್ಲಿ ಭುಗಿಲೆದ್ದ ಭಾರೀ ವಿವಾದದ ಹಿನ್ನೆಲೆಯಲ್ಲಿ ಇದಕ್ಕೆ ಮೊದಲು ಅವರು ವಿದೇಶಾಂಗ ಖಾತೆಯನ್ನು ಕಳೆದುಕೊಂಡಿದ್ದರು. ಡಿಸೆಂಬರ್ 5 ರ ರಾತ್ರಿ ಕಾಂಗ್ರೆಸ್ ಪಕ್ಷದ ಚಾಲನಾ ಸಮಿತಿಯಿಂದ ಕಿತ್ತು ಹಾಕಲಾಯಿತು. ಕ್ರೊಯೇಷಿಯಾ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ಅವರು ಆಹಾರಕ್ಕಾಗಿ ತೈಲ ಪ್ರಕರಣದ ಮುಖ್ಯ ಫಲಾನುಭವಿ ನಟವರ್ ಸಿಂಗ್ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ನಟವರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧಪಕ್ಷಗಳು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಾ ಬಂದಿದ್ದವು.

2005: ಇರಾನಿನ ಟೆಹರಾನಿನಲ್ಲಿ ಸೇನೆಯ ಸರಕುಸಾಗಣೆ ವಿಮಾನ 10 ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ 119 ಜನ ಅಸುನೀಗಿದರು. ಪತ್ರಕರ್ತರೇ ಅಧಿಕ ಸಂಖ್ಯೆಯಲ್ಲಿದ್ದ ವಿಮಾನದೊಳಗಿನ 94 ಮಂದಿ ಸತ್ತರೆ, ಕಟ್ಟಡದಲ್ಲಿದ್ದ 25 ಮಂದಿ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಪತ್ರಕರ್ತರು ಬಂಡಾ ಅಬ್ಬಾಸ್ ಪಟ್ಟಣಕ್ಕೆ ಸೇನಾ ಕವಾಯತು ವರದಿಗಾಗಿ ಹೊರಟಿದ್ದರು.

2005: ಪರಿಸರ ಶಿಕ್ಷಣಕ್ಕೆ ಆಂದೋಲನದ ರೂಪ ನೀಡಿದ ಮೈಸೂರಿನ ಪಕ್ಷಿ ತಜ್ಞ ಕೆ. ಮನು ಅವರಿಗೆ ಹಸಿರು ಶಿಕ್ಷಕ ಪ್ರಶಸ್ತಿ ಘೋಷಿಸಲಾಯಿತು. ಪ್ರತಿಷ್ಠಿತ ಸ್ಯಾಂಚುರಿ ಏಷ್ಯಾ ಪತ್ರಿಕೆ ಮತ್ತು ಎಬಿಎನ್ ಆಮ್ರೊ ಬ್ಯಾಂಕಿನ ಸಹಯೋಗದಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2005: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಿಂದೂಸೇನೆ ಉದಯ. ಭಜರಂಗದಳದಿಂದ ಶಿವಸೇನೆ ಸೇರಿ ಅಲ್ಲಿಂದಲೂ ಹೊರಬಂದ ಪ್ರಮೋದ್ ಮುತಾಲಿಕ್ ಈ ಸೇನೆಯ ಅಧ್ಯಕ್ಷರಾಗಿದ್ದು ಗಾಜಿನಮನೆಯಲ್ಲಿ ಹೊಸ ಪಕ್ಷದ ಉದಯವನ್ನು ಘೋಷಿಸಿದರು. 

2001: ಕಾರುಗಳಲ್ಲಿ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವವರು ಸೀಟ್ ಬೆಲ್ಟ್ಗಳನ್ನು ಧರಿಸುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1992: ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರಗೊಳ್ಳುತ್ತಾ ನಡೆದ ಸರಣಿ ಘಟನೆಗಳು ಈ ದಿನ ಅಯೋಧ್ಯೆಯಲ್ಲಿ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಕಟ್ಟಡ ಧ್ವಂಸದೊಂದಿಗೆ ಪರ್ಯವಸಾನಗೊಂಡವು.

1956: ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ಸರ್ಕಾರದ ಪ್ರಥಮ ಕಾನೂನು ಸಚಿವರಾಗಿದ್ದರು. ಈ ದಿನವನ್ನು ಮಹಾರಾಷ್ಟ್ರದಲ್ಲಿ `ಮಹಾಪರಿನಿವರ್ಾಣ ದಿನ' ಆಗಿ ಆಚರಿಸಲಾಗುತ್ತದೆ.

1955: ಸಾಹಿತಿ ಪೂರ್ಣಿಮಾ ರಾಮಣ್ಣ ಜನನ.

1949: ಸಾಹಿತಿ ಶಿವಳ್ಳಿ ಕೆಂಪೇಗೌಡ ಜನನ.

1947: ಸಾಹಿತಿ ಡಾ. ಡಿ.ಎಸ್. ಜಯಪ್ಪ ಗೌಡರ ಜನನ.

1934: ಪ್ರಾಧ್ಯಾಪಕ, ಜಾನಪದ ತಜ್ಞ, ಮಹಾದೇವಯ್ಯ ಅವರು ರುದ್ರಯ್ಯ- ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು.

1898: ಜರ್ಮನ್ ಸಂಜಾತ ಛಾಯಾಗ್ರಾಹಕ ಆಲ್ ಫ್ರೆಡ್ ಐಸೆನ್ ಸ್ಟೇಟ್ (1898-1995) ಹುಟ್ಟಿದ ದಿನ. `ಲೈಫ್' ಪತ್ರಿಕೆಗೆ ಇವರು ಒದಗಿಸುತ್ತಿದ್ದ ಛಾಯಾಚಿತ್ರಗಳು ಅಮೆರಿಕಾದ `ಫೊಟೋ ಜರ್ನಲಿಸಂ'ನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1877: ಅಮೆರಿಕನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್  ಅವರಿಂದ ಮೊತ್ತ ಮೊದಲ ಧ್ವನಿ ಮುದ್ರಣ ನಡೆಯಿತು. ನ್ಯೂ ಜೆರ್ಸಿಯ ವೆಸ್ಟ್ ಆರೆಂಜಿನಲ್ಲಿ ನಡೆದ ಪ್ರದರ್ಶನದಲ್ಲಿ ಎಡಿಸನ್ ಫೋನೋಗ್ರಾಫ್ ಎದುರು `ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್' ಹಾಡಿದಾಗ ಅದು ಮುದ್ರಣಗೊಂಡು ನಂತರ ಪುನಃ ಆಲಿಸಲು ಸಾಧ್ಯವಾಯಿತು. 

1823:  ಈ ದಿನ ಜರ್ಮನ್ ಭಾಷಾ ತಜ್ಞ ಮ್ಯಾಕ್ಸ್ ಮುಲ್ಲರ್ (1823-1900) ಜನ್ಮದಿನ. `ದಿ ಸೇಕ್ರೆಡ್ ಬುಕ್ಸ್ ಆಫ್ ಈಸ್ಟ್' ನ್ನು ಸಂಪಾದಿಸಿದ್ದು ಇವರ ಮಹತ್ತರ ಸಾಧನೆ. `ಋಗ್ವೇದ' ಸಂಪಾದಿಸಿದ ಹೆಗ್ಗಳಿಕೆಯೂ ಇವರಿಗಿದೆ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement