Thursday, January 1, 2009

ಸಮುದ್ರಮಥನ 17: ಜ್ಞಾನಾರ್ಜನೆಯ ಸುತ್ತ ಒಂದು ಸುತ್ತು

ಸಮುದ್ರಮಥನ 17:

ಜ್ಞಾನಾರ್ಜನೆಯ ಸುತ್ತ ಒಂದು ಸುತ್ತು

ನಮಗೊಂದು ಅದ್ಭುತ ವಾದ ವಿಷಯ ಗೊತ್ತಾದರೆ, ಗಹನವಾದ ರಹಸ್ಯವನ್ನು ಭೇದಿಸಲು ಸಾಧ್ಯವಾದರೆ, ಅದರ ಮರ್ಮವನ್ನು ಅವಿವೇಕಿಗಳ ಕೈಯ್ಯಲ್ಲಿ ಇಡಬಾರದು. ಅದನ್ನು ಸ್ವೀಕರಿಸಲು ಯಾರೂ ಸಿಗದೇ ಸತ್ತರೂ ಅಡ್ಡಿ ಇಲ್ಲ, ಅವರ ಕೈಗೆ ಮಾತ್ರ ಕೊಡಬಾರದು.

'ಜ್ಞಾನವನ್ನು ಗಳಿಸುವುದು' ಇಂದು ಇಂದಿನ ಬಹು ಚರ್ಚೆಯ ವಿಷಯ. ಜ್ಞಾನಸಂಪನ್ನ, ವಿದ್ಯಾವಂತ ಅಂತೆಲ್ಲ ಅನ್ನಿಸಿಕೊಳ್ಳಲು ಹೆಚ್ಚು-ಹೆಚ್ಚು ಮಾಹಿತಿ ಸಂಗ್ರಹ ಮಾಡಬೇಕೆಂಬ ವಾತಾವರಣ ಗಾಢವಾಗಿ ಏರ್ಪಟ್ಟಿದೆ. ಅದು ನಿಜವಾಗಿಯೂ ಹಾಗೆಯೇ? ಎಂಬುದು ಚರ್ಚೆಗೆ  ಒಳಪಡಬೇಕಾದ ವಿಷಯ.

ಒಂದು ಒಳ್ಳೆಯ ಉದ್ಯೋಗವನ್ನು ಹೊಂದಲು, ಮತ್ತೊಬ್ಬರನ್ನು ಪ್ರಭಾವಿಸಲು ಮಾತ್ರ ಜ್ಞಾನದ ಬಳಕೆ ಆಗುತ್ತಿದೆ. ಶಿಕ್ಷಣ ವಲಯದಲ್ಲಿ ಮಾತೊಂದಿದೆ. ಈಗ ಕೊಡುತ್ತಿರುವ ಶಿಕ್ಷಣದ ಜತೆಯಲ್ಲಿ ನೈತಿಕ ಶಿಕ್ಷಣದ ಅನಿವಾರ್ಯತೆಯೂ ಇದೆ. ಅಂದರೆ ಹೆಚ್ಚು-ಹೆಚ್ಚು ಮಾಹಿತಿಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ ಕಾರ್ಯ ನೈತಿಕತೆ ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಯಿತು. ಹಾಗಾಗಿ ಶಾಲಾ ಕಾಲೇಜುಗಳಿಂದ ತಯಾರಾಗಿ ಹೊರಬರುತ್ತಿರುವವರು 'ವಿದ್ಯಾವಂತರೇ'? ಎಂದು ಅನಿಸದೇ ಇರದು.

ಒಟ್ಟಾರೆ ಅಖಂಡ ಭೂಮಂಡಲದ ಧ್ಯೇಯ ಧೋರಣೆಗಳನ್ನು ನೋಡಿದಾಗ ಸಂದೇಹ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ವೈಜ್ಞಾನಿಕ ರಂಗದ ಸಂಶೋಧನೆಯ ನಿರ್ವಹಣೆಯನ್ನೇ ನೋಡಿ. ಯಾವ ಸಂಶೋಧನೆಯನ್ನು ಎಲ್ಲಿ, ಹೇಗೆ, ಯಾಕೆ, ಯಾರಿಗಾಗಿ ಮಾಡಬೇಕು, ಅದರ ಅನಿವಾರ್ಯತೆ ವಾಸ್ತವಿಕವೇ (ಹೆಚ್ಚಾಗಿ) ಒಂದನ್ನೂ ನೋಡುವುದಿಲ್ಲ. ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು, ತಮ್ಮ ಜಾನಸಂಪತ್ತನ್ನು ವಿಶ್ವರಂಗದಲ್ಲಿ ಸಾಬೀತುಗೊಳಿಸಲು ಬಳಕೆಯಾಗುತ್ತದೆ. ಇಲ್ಲಿ ಆಟಂಬಾಂಬನ್ನು ಸಂಶೋಧಿಸಿದ ವಿಜ್ಞಾನಿಯ ಪಶ್ಚಾತ್ತಾಪವನ್ನು ಸ್ಮರಿಸಬಹುದು. ಆಗ ಪಶ್ಚಾತ್ತಾಪಪಟ್ಟು ಏನೂ ಪ್ರಯೋಜನವಾಗಲಿಲ್ಲ ಎಂಬುದು ಮತ್ತೊಂದು ವಿಷಯ. ಏಕೆಂದರೆ ಅದನ್ನಾಗಲೇ ಅವಿವೇಕಿಗಳ ಕೈಯ್ಯಲ್ಲಿ ಇಟ್ಟಾಗಿತ್ತು. 

ಈ ನಡೆ ನಮ್ಮ ಭೂಮಿಯ ಉಳಿವಿಗೆ, ಬೆಳವಣಿಗೆಗೆ ತರವಲ್ಲ. ಅದಕ್ಕಾಗಿ, ನಮ್ಮ ಸ್ಮೃತಿಕಾರರು ಹೇಳುವ ಮಾತೊಂದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು, ಅಂತೆಯೇ ನಡೆಯಬೇಕು ಎಂಬುದು ನಮ್ಮ ಆಶಯ.

ನಮಗೊಂದು ಅದ್ಭುತವಾದ ವಿಷಯ ಗೊತ್ತಾದರೆ, ಗಹನವಾದ ರಹಸ್ಯವನ್ನು ಭೇದಿಸಲು ಸಾಧ್ಯವಾದರೆ, ಅದರ ಮರ್ಮವನ್ನು ಅವಿವೇಕಿಗಳ ಕೈಯ್ಯಲ್ಲಿ ಇಡಬಾರದು. ಅದನ್ನು ಸ್ವೀಕರಿಸಲು ಯಾರೂ ಸಿಗದೇ ಸತ್ತರೂ ಅಡ್ಡಿ ಇಲ್ಲ, ಅವರ ಕೈಗೆ ಮಾತ್ರ ಕೊಡಬಾರದು.

ವಿದ್ಯಾ ಬೀಜವನ್ನು ಮರುಭೂಮಿಯಲ್ಲಿ, ಬಂಡೆಯ ಮೇಲೆ ಬಿತ್ತಿದರೆ ಏನು ಪ್ರಯೋಜನ? ಅದನ್ನು ಬಿತ್ತುವ ಮೊದಲು ಜಾಗ ಪ್ರಶಸ್ತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರವೇ ಕೊಡುವ ಕಾರ್ಯಕ್ಕೆ ಮುಂದಾಗಬೇಕು. ಹಾಗೆ ಪರಾಮರ್ಷಿಸದೇ ಪ್ರಶಸ್ತವಾಗಿಲ್ಲದೆಡೆ ವಿದ್ಯೆಯನ್ನು ಹರಿಸಿದರೆ ವಿದ್ಯೆ ಕಷ್ಟಪಡುತ್ತಾಳೆ ಮತ್ತು ಅವಳು ಪಟ್ಟ ಕಷ್ಟ ಶಾಪವಾಗಿ ಪರಿಣಮಿಸುತ್ತದೆ.

ಆದ್ದರಿಂದ ವಿದ್ಯೆಯನ್ನು ಗಳಿಸುವ ಭರದಲ್ಲಿ ಕೇವಲ ಮಾಹಿತಿ ಸಂಗ್ರಹಕ್ಕೆ ಕಟ್ಟುಬೀಳಬೇಡಿ. ಮಾಹಿತಿ ಮರ್ಮಕ್ಕೆ ಮಾರ್ಗವಾಗಿರಲಿ. ಅದಕ್ಕೆ ನಿಮ್ಮ ಮೈ-ಮನಗಳನ್ನು ಹಸನುಗೊಳಿಸಿಕೊಳ್ಳಿ. ಎಲ್ಲರಿಗೂ ಒಳ್ಳೆಯದಾಗಲಿ. 

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ 
 

No comments:

Advertisement