ಇಂದಿನ ಇತಿಹಾಸ
ಏಪ್ರಿಲ್ 12
ಕನ್ನಡ ಚಿತ್ರರಂಗದ ಧ್ರುವತಾರೆ, ಕನ್ನಡಿಗರ ಆರಾಧ್ಯದೈವ ಡಾ. ರಾಜ್ ಕುಮಾರ್ (77) ಅವರು ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು 45 ಪೌರಾಣಿಕ, 15 ಐತಿಹಾಸಿಕ, 4 ಬಾಂಡ್ ಚಿತ್ರಗಳು ಮತ್ತು 143 ಸಾಮಾಜಿಕ ಚಿತ್ರಗಳು ಸೇರಿದಂತೆ ಒಟ್ಟು 207 ಚಿತ್ರಗಳಲ್ಲಿ ನಟಿಸಿದ್ದರು.
2008: ಬೆಂಗಳೂರು ನಗರದ ಶಿವ ಮ್ಯೂಸಿಕಲ್ಸಿನ ಮಾಲೀಕ ಸಿ. ನಟರಾಜ್ ಹಾಗೂ ಪುತ್ರ ವಿನೋದ್ ಬರೊಬ್ಬರಿ 11 ಅಡಿಗಳ ತಂಬೂರಿ ನಿರ್ಮಿಸಿ ಸಂಗೀತ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಮಾಡಿದರು. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಉಭಯಗಾನ ವಿಧುಷಿ ಶ್ಯಾಮಲಾ ಜಿ.ಭಾವೆ ಈ ತಂಬೂರಿಯನ್ನು ಅನಾವರಣಗೊಳಿಸಿದರು. ಸಾಧಾರಣ ತಂಬೂರಿಗಿಂತ ಮೂರು ಪಟ್ಟು ಉದ್ದವಿದ್ದ ಈ ತಂಬೂರಿಯನ್ನು ಬಿಲುವಾರ (ರೇನ್ ಟ್ರಿ) ಮರದಿಂದ ತಯಾರಿಸಲಾಗಿದ್ದು, 10 ಅಡಿ ಸುತ್ತಳತೆ ಮತ್ತು 3 ಅಡಿ ಎತ್ತರವಿದೆ. ಎದೆ ಹಲಗೆಯ ಮೇಲೆ ಲಕ್ಷ್ಮೀ, ಸರಸ್ವತಿ, ಗಣಪತಿ ಚಿತ್ರ ಕೆತ್ತಲಾಗಿದೆ. ತಂತಿಗಳ ಶ್ರುತಿ ಏರಿಳಿಸುವ ಮಣಿಯ ಜಾಗದಲ್ಲಿ ಹುಲಿ ಚಿತ್ರವನ್ನು ರಚಿಸಲಾಗಿದೆ. ಸುಮಾರು ಒಂದು ವರ್ಷದ ಅವಧಿಯಲ್ಲಿ ಇದನ್ನು ತಯಾರು ಮಾಡಲಾಗಿದೆ. ಒಟ್ಟು 150 ಕೆ.ಜಿ. ತೂಕವಿರುವ ಈ ತಂಬೂರಿಯ ಮೇಲೆ ಮೈಸೂರು ದಸರಾ ಬಿಂಬಿಸುವ ಚಿತ್ರಗಳ ಕೆತ್ತನೆ ಇದೆ. ಕೊನೆ ಭಾಗದಲ್ಲಿ ಅಶೋಕ ಚಕ್ರದ ಚೆಂದದ ಕೆತ್ತನೆ ಇದೆ. ಬುರುಡೆಯಲ್ಲಿ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾ ಶಾಸ್ತ್ರಿಗಳ ಸುಂದರ ಚಿತ್ರಗಳಿವೆ. ಸಂಗೀತ ಪ್ರೇಮಿಗಳಿಗೆ ವಿಶಿಷ್ಟವಾದುದನ್ನು ನೀಡಬೇಕು ಎಂಬ ಉದ್ದೇಶದಿಂದ ಈ ರೀತಿಯ ಪ್ರಯತ್ನ ಮಾಡಲಾಗಿದೆ ಎಂಬುದು ನಟರಾಜ್ ಹೇಳಿಕೆ.
2008: ರಾಷ್ಟ್ರೀಯ ಪ್ರಾಯೋಗಿಕ ಅರ್ಥಶಾಸ್ತ್ರ ಸಂಶೋಧನಾ ಸಮಿತಿಯ (ಎನ್ ಸಿ ಎ ಇ ಆರ್) ಎಂಟನೇ ಅಧ್ಯಕ್ಷರಾಗಿ ಇನ್ಫೊಸಿಸ್ ಸಹ-ಅಧ್ಯಕ್ಷ ನಂದನ್ ನಿಲೇಕಣಿ ಆಯ್ಕೆಯಾದರು. ಹಾಲಿ ಅಧ್ಯಕ್ಷ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮಾಜಿ ಗವರ್ನರ್ ಬಿಮಲ್ ಜಲನ್ ಸ್ಥಾನಕ್ಕೆ ನಿಲೇಕಣಿ ಆಯ್ಕೆಯಾದರು.
2008: ಆಪ್ಘಾನಿಸ್ಥಾನದ ದಕ್ಷಿಣ ಪ್ರಾಂತ್ಯದ ನಿಮ್ರೋಜಿಯಲ್ಲಿ ಈದಿನ ಬೆಳಗ್ಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಗಡಿ ಪ್ರದೇಶದ ರಸ್ತೆ ನಿರ್ಮಾಣ ಸಂಸ್ಥೆಯ ಮೂವರು ಭಾರತೀಯ ಉದ್ಯೋಗಿಗಳು ಮೃತರಾಗಿ ಐವರು ಗಾಯಗೊಂಡರು.
2008: ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆದಿರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಕಟಿತ 42 ಸ್ಥಾನಗಳಲ್ಲಿ ಸಿಪಿಎನ್ ಮಾವೋವಾದಿಗಳು ಈಗಾಗಲೇ 26 ಸ್ಥಾನಗಳನ್ನು ಗೆದ್ದು, 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆ ಮೂಡಿಸಿದರು. ಎರಡೂವರೆ ಶತಮಾನಗಳಷ್ಟು ಹಳೆಯದಾದ ಅರಸೊತ್ತಿಗೆಯ ವಿರುದ್ಧ ದಶಕದ ಕಾಲ ಹೋರಾಟ ನಡೆಸಿರುವ ಮಾವೋವಾದಿಗಳು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸಂವಿಧಾನಾತ್ಮಕ ಚುನಾವಣಾ ಹೋರಾಟದಲ್ಲಿ ಭಾಗವಹಿಸಿದ್ದು ಜಗತ್ತಿನಾದ್ಯಂತ ಕುತೂಹಲ ಮೂಡಿಸಿತ್ತು. ದಶಕದ ಕಾಲ ಮಾವೋವಾದಿಗಳ ಸಶಸ್ತ್ರ ಹೋರಾಟದ ಸಂದರ್ಭದಲ್ಲಿ ಸುಮಾರು 14,000 ಮಂದಿ ಸಾವನ್ನಪ್ಪಿದ್ದರು.
2007: ಸ್ವದೇಶೀ ನಿರ್ಮಿತ `ಅಗ್ನಿ- 3' ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಒರಿಸ್ಸಾ ಕರಾವಳಿಯ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನೆರವೇರಿತು. `ಅಗ್ನಿ' ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ಈ ಅಣ್ವಸ್ತ್ರ ವಾಹಕ ಕ್ಷಿಪಣಿಯು 3500 ಕಿ.ಮೀ. ದೂರದಲ್ಲಿರುವ ವೈರಿ ನೆಲೆಗಳನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.
2007: ಅಪರೂಪದ ದೊಡ್ಡ ಕೊಕ್ಕಿನ ಇಂಪಾಗಿ ಕೂಗುವ ಇಂಚರ ಹಕ್ಕಿಯನ್ನು 140 ವರ್ಷಗಳ ನಂತರ ಕೋಲ್ಕತಾದ ಪಕ್ಷಿ ವೀಕ್ಷಕರ ತಂಡವೊಂದು ಕೋಲ್ಕತಾದಿಂದ 10 ಕಿ.ಮೀ. ದೂರದ ನರೇಂದ್ರಪುರ ಬಳಿ ಪತ್ತೆ ಹಚ್ಚಿತು. ಈ ಹಿಂದೆ 1867ರಲ್ಲಿ ಹಿಮಾಚಲ ಪ್ರದೇಶದ ಸಟ್ಲೆಜ್ ಕಣಿವೆಯಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ನಂತರ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ತುಂಬ ಈ ವಿರಳವಾದ ಈ ಪಕ್ಷಿ ಕಳೆದುಹೋಗಿದೆ ಎಂದೇ ಭಾವಿಸಲಾಗಿತ್ತು ಎಂದು ಮುಂಬೈಯ ಬಾಂಬೆ ನೈಸರ್ಗಿಕ ಇತಿಹಾಸ ಸಂಸ್ಥೆಯ ಸಂಶೋಧಕರ ತಂಡ ತಿಳಿಸಿತ್ತು.
2007: ಡಾ. ರಾಜ್ ಕುಮಾರ್ ನೆನಪಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುವುದಕ್ಕಾಗಿ ಕುಟುಂಬದ ಸದಸ್ಯರನ್ನು ಒಳಗೊಂಡ ಟ್ರಸ್ಟ್ ಸ್ಥಾಪಿಸಲಾಗುವುದು ಎಂದು ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರು ರಾಜ್ ಕುಮಾರ್ ಅವರ ಪ್ರಥಮ ಪುಣ್ಯ ತಿಥಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸಿದರು.
2006: ಕನ್ನಡ ಚಿತ್ರರಂಗದ ಧ್ರುವತಾರೆ, ಕನ್ನಡಿಗರ ಆರಾಧ್ಯದೈವ ಡಾ. ರಾಜ್ ಕುಮಾರ್ (77) ಅವರು ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು 45 ಪೌರಾಣಿಕ, 15 ಐತಿಹಾಸಿಕ, 4 ಬಾಂಡ್ ಚಿತ್ರಗಳು ಮತ್ತು 143 ಸಾಮಾಜಿಕ ಚಿತ್ರಗಳು ಸೇರಿದಂತೆ ಒಟ್ಟು 207 ಚಿತ್ರಗಳಲ್ಲಿ ನಟಿಸಿದ್ದರು.
2006: ಭಾರತ ಪ್ರವಾಸದಲ್ಲಿದ್ದ ಜರ್ಮನಿಯ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ರಾಜಸ್ಥಾನದ ಬಿ.ಎಚ್. ಮೊಹಂತಿ ಎಂಬ ಆರೋಪಿಗೆ, ಅಪರಾಧ ಸಂಭವಿಸಿದ ಕೇವಲ 22 ದಿನಗಳಲ್ಲಿ ಕ್ಷಿಪ್ರ ವಿಚಾರಣೆ ನಡೆಸಿದ ರಾಜಸ್ಥಾನದ ಅಲ್ವಾರಿನ ತ್ವರಿತ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆರ್. ಕೆ. ಮಹೇಶ್ವರಿ ಅವರು ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 10,000 ರೂಪಾಯಿಗಳ ದಂಡ ವಿಧಿಸಿ ಮಹತ್ವದ ಸಾಧನೆ ಮಾಡಿದರು.
2006: ಕರ್ನಾಟಕ ಸರ್ಕಾರವು 2006ನೇ ಸಾಲಿನ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರನ್ನು ಆಯ್ಕೆ ಮಾಡಿತು.
2006: ಮುಂಬೈಯಲ್ಲಿ ಮಹಾರಾಷ್ಟ್ರ ವಿಧಾನಸಭೆಯು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಮನ್ಜಿತ್ ಸಿಂಗ್ ಸೇಥಿ ಅವರಿಗೆ ಕೆಳಮನೆಯ ವಿಶೇಷ ಹಕ್ಕುಗಳ ಚ್ಯುತಿಗಾಗಿ 90 ದಿನಗಳ ಸೆರೆವಾಸವನ್ನು ವಿಧಿಸಿತು. ರಾಜ್ಯ ಸರ್ಕಾರವು 2005ರಲ್ಲಿ ಡ್ಯಾನ್ಸ್ ಬಾರುಗಳನ್ನು ನಿಷೇಧಿಸಲು ಕೈಗೊಂಡ ನಿರ್ಧಾರವನ್ನು ವಿರೋಧಿಸುವುದಾಗಿ ಬೆದರಿಕೆ ಹಾಕುವ ಮೂಲಕ ಮನ್ಜಿತ್ ಸಿಂಗ್ ಅವರು ವಿಧಾನಸಭೆಯ ಸದಸ್ಯರ ವಿಶೇಷ ಹಕ್ಕುಗಳಿಗೆ ಚ್ಯುತಿ ತರುವ ಅಪರಾಧ ಎಸಗಿದ್ದರು. ಈ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಸುಧೀರ್ ಕಳುಹಿಸಿದ್ದ ಹಕ್ಕುಚ್ಯುತಿ ನೋಟಿಸನ್ನು ಅಂಗೀಕರಿಸಿದ ಸದನವು ಅದನ್ನು ಹಕ್ಕುಚ್ಯುತಿ ಸಮಿತಿಗೆ ಕಳುಹಿಸಿತ್ತು.
2006: ನವದೆಹಲಿಯಲ್ಲಿ ರಾಜ್ಯಸಭೆಗೆ ನೇಮಕಗೊಂಡ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಸೇರಿದಂತೆ ನಾಲ್ಕು ಮಂದಿ ರಾಜ್ಯಸಭಾ ಸದಸ್ಯರು ಸದನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಭೈರೋನ್ ಸಿಂಗ್ ಶೆಖಾವತ್ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಜೇಠ್ಮಲಾನಿ ಅವರು ಈ ಮೊದಲು 1988, 1994 ಮತ್ತು 2000ದಲ್ಲಿ ಮೂರು ಬಾರಿ ಮೇಲ್ಮನೆಗೆ ಆಯ್ಕೆಯಾಗಿದ್ದರು. ಬನ್ವಾರಿ ಲಾಲ್ ಕಂಚಲ್, ವೀರಪಾಲ್ ಸಿಂಗ್ (ಸಮಾಜವಾದಿ ಪಕ್ಷ), ರುದ್ರನಾರಾಯಣ ಪಾಣಿ ಅವರು ಪ್ರಮಾಣ ವಚನ ಸ್ವೀಕರಿಸಿದ ಇತರ ಮೂವರು ಸದಸ್ಯರು.
1961: ಭೂಮಿಯಿಂದ ವೊಸ್ತೋಕ್ -1 ಗಗನನೌಕೆಯ ಉಡ್ಡಯನ. ಇದರ ಮೂಲಕ ಬಾಹ್ಯಾಕಾಶಕ್ಕೆ ನೆಗೆದ ರಷ್ಯದ ಗಗನಯಾನಿ ಯೂರಿ ಗಗಾರಿನ್ ಪ್ರಪ್ರಥಮ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಬಾಹ್ಯಾಕಾಶದಲ್ಲಿ 108 ನಿಮಿಷಗಳ ಕಾಲ ತೇಲಾಡಿದರು.
1948: ಪಂಡಿತ್ ಜವಾಹರಲಾಲ್ ನೆಹರೂ ಅವರು ಒರಿಸ್ಸಾದ ನೂತನ ರಾಜಧಾನಿ ಭುವನೇಶ್ವರದಲ್ಲಿ ಹಿರಾಕುಡ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿದರು.
1945: ಅಮೆರಿಕಾದ 32ನೇ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ 63ನೇ ವಯಸ್ಸಿನಲ್ಲಿ ಮೃತರಾದರು. ಉಪಾಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅಧ್ಯಕ್ಷರಾದರು.
1926: ಕಲಾವಿದ ಮುನಿವೆಂಕಟಪ್ಪ ಜನನ.
1922: ನಾಟಕರಂಗದ ಆತ್ಮೀಯರಲ್ಲಿ `ಐನೋರು' ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ರಂಗಭೂಮಿ ನಟ ಎಸ್. ಎಂ. ವೀರಭದ್ರಪ್ಪ (12-4-1922ರಿಂದ 27-2-1966) ಅವರು ಚಿತ್ರದುರ್ಗದಲ್ಲಿ ಜನಿಸಿದರು.
1917: ಮುಲವಂತರಾಯ್ ಹಿಮ್ಮತ್ ಲಾಲ್ `ವಿನೂ' ಮಂಕಡ್ (1917-1978) ಹುಟ್ಟಿದ ದಿನ. ಭಾರತೀಯ ಕ್ರಿಕೆಟ್ ಆಟಗಾರರಾದ ಇವರು ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಕೆಯೊಂದಿಗೆ ಶತಕವನ್ನೂ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವ್ಯಕ್ತಿ.
1913: ಕಲಾವಿದ ಜಿ. ಆರ್. ದಾಸಪ್ಪ ಜನನ.
1903: ಜಾನ್ ಟಿಂಬರ್ ಜೆನ್ (1903-1994) ಹುಟ್ಟಿದ ದಿನ. ಡಚ್ ಆರ್ಥಿಕ ತಜ್ಞರಾದ ಇವರು `ಇಕೊನೋಮೆಟ್ರಿಕ್ ಮಾಡೆಲ್' ಗಳನ್ನು ಅಭಿವೃದ್ಧಿ ಪಡಿಸಿದರು. 1969ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೀಡಲಾದ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ರಾಗ್ನರ್ ಪ್ರಿಶ್ ಜೊತೆಗೆ ಜಂಟಿಯಾಗಿ ಇವರಿಗೂ ಲಭಿಸಿತು.
1888: ಫ್ರೆಂಚ್ ವೃತ್ತಪತ್ರಿಕೆಯೊಂದು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಮೃತನಾದ ಸುದ್ದಿ ಪ್ರಕಟಿಸಿತು. ಜನರ ಜೀವ ತೆಗೆಯುವ ಸ್ಫೋಟಕಗಳನ್ನು ಶೋಧಿಸಿದ್ದಕ್ಕೆ ಆತನನ್ನು ಪತ್ರಿಕೆ `ಸಾವಿನ ವರ್ತಕನ ನಿಧನ' ಎಂದು ವರ್ಣಿಸಿ ಈ ಸುದ್ದಿ ಪ್ರಕಟಿಸಿತ್ತು. ಆದರೆ ನಿಜವಾಗಿ ಸತ್ತದ್ದು ಆಲ್ ಫ್ರೆಡ್ ಸಹೋದರ ಲುಡ್ ವಿಗ್ ನೊಬೆಲ್. ಪತ್ರಿಕೆ ತನ್ನ ಬಗ್ಗೆ ಬರೆದ ವರದಿಯಿಂದ ವಿಚಲಿತನಾದ ಆಲ್ಫ್ರೆಡ್ ತನ್ನ ಬಗ್ಗೆ ಉಂಟಾದ ಸಾರ್ವಜನಿಕ ಅಭಿಪ್ರಾಯ ಬದಲಿಸಲು ಇಚ್ಛಿಸಿದ. ಇದರ ಪರಿಣಾಮವಾಗಿಯೇ ಹುಟ್ಟಿತು `ನೊಬೆಲ್ ಪ್ರಶಸ್ತಿ'.
1801: ರಣಜಿತ್ ಸಿಂಗ್ ತನ್ನನ್ನು ಪಂಜಾಬಿನ ಮಹಾರಾಜ ಎಂಬುದಾಗಿ ಘೋಷಿಸಿಕೊಂಡ. ಆತ ಸಿಖ್ ಗುರುಗಳ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಿದ್ದಲ್ಲದೆ ಸಿಖ್ ಕಾಮನ್ ವೆಲ್ತ್ ಎಂಬ ಹೆಸರಿನಲ್ಲಿ ತನ್ನ ಆಡಳಿತವನ್ನು ಮುಂದುವರೆಸಿದ.
1606: ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ ಲ್ಯಾಂಡ್ ಧ್ವಜವಾಗಿ `ಯೂನಿಯನ್ ಜ್ಯಾಕ್'ನ್ನು ಅಂಗೀಕರಿಸಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment