Thursday, September 17, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 11

ಇಂದಿನ ಇತಿಹಾಸ

ಸೆಪ್ಟೆಂಬರ್ 11


 ಶಿಕಾಗೋದ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮೀ ವಿವೇಕಾನಂದರು ತಮ್ಮ ಪ್ರಥಮ ಭಾಷಣವನ್ನು ಮಾಡಿದರು. 'ಸಹೋದರ ಸಹೋದರಿಯರೇ' ಎಂಬ ಶಬ್ಧಗಳೊಂದಿಗೆ ಅವರು ಆರಂಭಿಸಿದ ಈ ಭಾಷಣ ಇಡೀ ಪ್ರಪಂಚದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಅವರ ಈ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಮತ್ತೊಮ್ಮೆ ವಿಶ್ವ ವ್ಯಾಪಕತೆ ಪಡೆದುಕೊಂಡಿತು.

2008: `ಬ್ರಹ್ಮಾಂಡ' ಸೃಷ್ಟಿ ಪುನರಾವರ್ತನೆ ವೀಕ್ಷಿಸಲು ವಿಜ್ಞಾನಿಗಳು `ಮಹಾಸ್ಫೋಟ' ನಡೆಸಿದ ಬೆನ್ನಲ್ಲೇ, ಅಮೆರಿಕದ ಅಬ್ರಹಾಂ ಸ್ಟ್ರೂಕ್ಸ್ ನೇತೃತ್ವದ ವಿಜ್ಞಾನಿಗಳ ತಂಡ ತಮ್ಮ ಪ್ರಯೋಗಾಲಯದಲ್ಲಿ `ಕೃತಕ ಮರ' ಬೆಳೆಸಿ ದಾಖಲೆ ಮಾಡಿದ್ದನ್ನು ಬಹಿರಂಗಪಡಿಸಿದರು. `ಮರದ ಉಸಿರಾಟವನ್ನೇ ತದ್ರೂಪಗೊಳಿಸಿ, ಅತಿ ಹೆಚ್ಚು ಎತ್ತರದ ಟೊಂಗೆಗಳಿಗೆ ತೇವಾಂಶ ಸರಬರಾಜು ಮಾಡುವ ಯತ್ನವನ್ನೂ ತಂಡ ಮಾಡಿದ್ದು, ಇದು ವಿನೂತನ ಪ್ರಯೋಗ. `ವಿಶ್ವದಲ್ಲೇ ಮೊದಲ ಕೃತಕ ಮರ (ಸಿಂಥೆಟಿಕ್ ಟ್ರೀ)' ಎಂಬ ಹೆಗ್ಗಳಿಕೆಗೆ ಈ ಮರ ಪಾತ್ರವಾಯಿತು. ಸಂಶೋಧಕರು ಸಸ್ಯ-ಮರಗಳು ಲೋಮನಾಳಗಳ ಮೂಲಕ ಉಸಿರಾಟ ನಡೆಸುವ ಸಿದ್ಧಾಂತವನ್ನೇ ಈ ಪ್ರಯೋಗಕ್ಕೆ ಬಳಸಿಕೊಂಡಿದ್ದು `ಇದೊಂದು ಭೌತವಿಜ್ಞಾನದ ಪ್ರಕ್ರಿಯೆ, ಇದಕ್ಕೆ ಜೈವಿಕ ಶಕ್ತಿ ಅಗತ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.

2007: ಸ್ವಾತಂತ್ರ್ಯ ಹೋರಾಟದ ವೀರ ವನಿತೆ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ ಅವರ ಪಂಚಲೋಹದ ಪ್ರತಿಮೆಯನ್ನು ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ದೆಹಲಿಯ ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಿದರು. ಮೀರಜಿನ ಶಿಲ್ಪಿ  ವಿಜಯ ಗುಜ್ಜರ್ ಕೆತ್ತಿರುವ ತಲಾ 13.7 ಅಡಿ ಎತ್ತರ ಮತ್ತು ಉದ್ದದ ಈ ಅಶ್ವಾರೋಹಿ ರಾಣಿ ಚೆನ್ನಮ್ಮನ ಆಕರ್ಷಕ ಪ್ರತಿಮೆಯ ತೂಕ ಹತ್ತು ಟನ್. ಸುಮಾರು ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ರಚನೆಗೊಂಡ ಈ ಪ್ರತಿಮೆಯು ಮಹೇಂದ್ರ ಕಂಠಿ ಕಾರ್ಯಾಧ್ಯಕ್ಷರಾಗಿರುವ  ಮತ್ತು ಡಾ.ಸರೋಜಿನಿ ಶಿಂತ್ರಿ ಅಧ್ಯಕ್ಷರಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸಮಿತಿಯ ಕೊಡುಗೆ. ರಾಜ್ಯ ಸರ್ಕಾರ ಇದಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ ನೀಡಿತ್ತು.

2007: ಹದಿನಾರು ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಮೊಬೈಲ್ ಬಳಸುವಂತಿಲ್ಲ. `ಮೊಬೈಲ್ ಬಳಕೆಯಿಂದ ಅವರ ಮನಸ್ಸು ಮತ್ತು ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹಾಗೂ ಆರೋಗ್ಯ ಸಚಿವ ಆರ್.ಅಶೋಕ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು. `ಮೊಬೈಲ್ ಬಳಕೆಯಿಂದ ಮಕ್ಕಳ ಕಿವಿ, ಮೆದುಳು, ಹೃದಯ ಮತ್ತಿತರ ಅಂಗಗಳಿಗೆ ಹಾನಿಯಾಗುತ್ತದೆ.  ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಗೂ ದಾರಿಯಾಗುತ್ತದೆ. ತತ್ ಕ್ಷಣ ಕೆಟ್ಟ ಪರಿಣಾಮ ಗೊತ್ತಾಗಿ ಬಿಡುವುದಿಲ್ಲ. ನಿಧಾನಗತಿಯಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ ಎಂಬುದು ತಜ್ಞರ ಅಭಿಮತ ಎಂದು ಅವರು ತಿಳಿಸಿದರು.

2007: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರವಾಲ್ ಅವರ ವಿರುದ್ಧ ಸತತವಾಗಿ ಬರೆದು ಪ್ರಕಟಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ಆರೋಪದ ಮೇಲೆ `ಮಿಡ್ ಡೇ' ಪತ್ರಿಕೆಯ ಸಂಪಾದಕ, ಪ್ರಕಾಶಕ, ಸ್ಥಾನಿಕ ಸಂಪಾದಕ ಹಾಗೂ ವ್ಯಂಗ್ಯಚಿತ್ರಗಾರನನ್ನು ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ಆರೋಪಿಗಳು ನ್ಯಾಯಾಂಗ ನಿಂದನೆ ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳಿದ್ದು ಸುಪ್ರೀಂಕೋರ್ಟ್ ನ್ಯಾಯಪೀಠ ವಿಧಿಸಿದ್ದ ಲಕ್ಷಣರೇಖೆಯನ್ನು ದಾಟಿ ಬರವಣೆಗೆಗಳನ್ನು ಪ್ರಕಟಿಸಿರುವುದಾಗಿ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಮತ್ತು ಬಿ.ಎನ್. ಚತುರ್ವೇದಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.

2007: ಟೆಹರಾನಿನಲ್ಲಿ ಈದಿನ ಮುಕ್ತಾಯಗೊಂಡ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್ ಶಿಪ್ನಲ್ಲಿ ಭಾರತದ ತಾನಿಯಾ ಸಚ್ ದೇವ್ ಪ್ರಶಸ್ತಿ ಗಳಿಸಿದರು. ಅವರು ಚೀನಾದ ಜು. ವೆಂಜನ್ ವಿರುದ್ಧ ಡ್ರಾ ಸಾಧಿಸಿ ಈ ಹಿರಿಮೆಯನ್ನು ತಮ್ಮದಾಗಿಸಿಕೊಂಡರು.

2007: ಭಾರತೀಯ ವಾಯುಪಡೆಯ `ಕಿರಣ್' ತರಬೇತಿ ವಿಮಾನ ಬೆಳಗಿನ ಜಾವ ಹೈದರಾಬಾದ್ ನಗರದ ಹೊರವಲಯದಲ್ಲಿ ಹಕೀಂಪೇಟೆ ವಾಯುಪಡೆ ಅಕಾಡೆಮಿಯಿಂದ 10 ಕಿ.ಮೀ. ದೂರದ ಬಯಲಿನಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮ ಪೈಲಟ್ ಜಗತ್ (33) ಹಾಗೂ ಯು.ಸಿ.ಪತಿ (26) ಎಂಬ ಇಬ್ಬರು ಪೈಲಟ್ ಗಳು ಸಾವಿಗೀಡಾದರು. ಎಂದಿನ ತರಬೇತಿಯಲ್ಲಿದ್ದಾಗ ಈ ದುರಂತ ಸಂಭವಿಸಿತು.

2007: ಜೋಹಾನ್ಸ್ ಬರ್ಗಿನಲ್ಲಿ ನಡೆದ ನಾಲ್ಕನೇ ಐಸಿಸಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಭಾರತೀಯ ಮಹಿಳಾ ಕ್ರಿಕೆಟ್ ಕ್ರೀಡಾಪಟು ಜುಲನ್ ಗೋಸ್ವಾಮಿ ಅವರು ವರ್ಷದ ಮಹಿಳಾ ಕ್ರಿಕೆಟ್ ಕ್ರೀಡಾಪಟು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತದ ಹಿರಿಮೆಯನ್ನು ಎತ್ತಿ ಹಿಡಿದರು. ಐಸಿಸಿ ಪ್ರಶಸ್ತಿಗಳು ಕ್ರಿಕೆಟ್ ಕ್ಷೇತ್ರದ ಆಸ್ಕರ್ ಪ್ರಶಸ್ತಿ ಎಂದೇ ಪರಿಗಣಿತವಾಗಿವೆ. ಆಸ್ಟ್ರೇಲಿಯಾದ ಕ್ಯಾಪ್ಟನ್ ರಿಕಿ ಪಾಂಟಿಂಗ್ ಸತತ ಎರಡನೇ ಬಾರಿಗೆ ವರ್ಷದ ಕ್ರಿಕೆಟ್ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದುಕೊಂಡರು. ವರ್ಷದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ಅವರಿಗೆ ಲಭಿಸಿತು. ಇಂಗ್ಲೆಂಡಿನಲ್ಲಿ ಕಳೆದ ವರ್ಷ ನಡೆದ ಮಹಿಳಾ ಕ್ರಿಕೆಟ್ ಟೆಸ್ಟಿನಲ್ಲಿ ಮೊದಲ ಬಾರಿಗೆ ಭಾರತ ಇಂಗ್ಲೆಂಡನ್ನು ಸೋಲಿಸಿದಾಗ ಜುಲನ್ ಗೋಸ್ವಾಮಿ ಅವರು 10 ವಿಕೆಟ್ಟುಗಳನ್ನು ಬಗಲಿಗೆ ಹಾಕಿಕೊಂಡು ಅಪೂರ್ವ ಸಾಧನೆ ಮೆರೆದಿದ್ದರು.

2006: ಟಿಚ್ಯೋನ್ ಎಂಬ ಸಂಸ್ಥೆ ಅಭಿವೃದ್ಧಿ ಪಡಿಸಿದ ಸುಧಾರಿತ, ಅತ್ಯಂತ ಸರಳವಾದ ಲಿಪ್ಯಂತರ ತಂತ್ರಾಂಶ `ಕ್ವಿಲ್ ಪ್ಯಾಡ್' ನ್ನು ಕೇಂದ್ರ ಯೋಜನಾ ಖಾತೆ ಸಚಿವ ಎಂ.ವಿ. ರಾಜಶೇಖರನ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಕ್ವಿಲ್ ಪ್ಯಾಡ್ `ಸ್ವಂತ ಬುದ್ಧಿ' ಇರುವ ತಂತ್ರಾಂಶ. ಇಂಗ್ಲಿಷ್ ಲಿಪಿಯಲ್ಲಿ ಕನ್ನಡವನ್ನು ಬರೆಯಲು ತಡಕಾಡಬೇಕಿಲ್ಲ. ಇಂಗ್ಲಿಷ್ ಅಕ್ಷರಗಳನ್ನು ಪೋಣಿಸಿದ ಕೂಡಲೇ ಕನ್ನಡದಲ್ಲಿನ ಅದಕ್ಕೆ ಅರ್ಥ ಬರುವ ಪದವನ್ನು ಹುಡುಕಿ ಮುದ್ರಿಸುತ್ತದೆ ಈ ತಂತ್ರಜ್ಞಾನ. ಹಿಂದಿ, ತಮಿಳು, ತೆಲಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಬಗೆಯ ತಂತ್ರಜ್ಞಾನ ರೂಪಿಸಲಾಗಿದೆ. ಕನ್ನಡದಲ್ಲಿ ಇದೇ ಮೊದಲಿಗೆ ಬಿಡುಗಡೆಯಾಯಿತು. ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಕುಳಿತ ಗೆಳೆಯನ ಜೊತೆ ಈ ತಂತ್ರಾಂಶ ಬಳಸಿ ಶುದ್ಧ ಕನ್ನಡದಲ್ಲೇ `ಹರಟೆ' (ಚಾಟ್) ಹೊಡೆಯಬಹುದು ಎನ್ನತ್ತಾರೆ ಕ್ವಿಲ್ಪ್ಯಾಡ್ ರೂವಾರಿಗಳಲ್ಲಿ ಒಬ್ಬರಾದ ಕನ್ನಡಿಗ ರಾಮ್ ಪ್ರಕಾಶ್. http://quillpad.in/kannada ಅಂತರ್ಜಾಲದಲ್ಲಿ ಕ್ವಿಲ್ ಪ್ಯಾಡ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದರವರು. (ಫೋನ್: 080-41311932).

2006: ಸ್ವಿಜರ್ಲೆಂಡಿನ ಅಗ್ರ ಶ್ರೇಯಾಂಕಿತ ರೋಜರ್ ಫೆಡರರ್ ಅವರು ನ್ಯೂಯಾರ್ಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಓಪನ್ ಟೆನಿಸ್ ಟೂರ್ನಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಸತತ ಮೂರನೇ ಬಾರಿಗೆ ಗೆದ್ದುಕೊಂಡರು. ಆಂಡಿ ರಾಡಿಕ್ ಅವರನ್ನು ಫೆಡರರ್ 6-2, 6-7, 61ರ ಅಂತರದಲ್ಲಿ ಮಣಿಸಿದರು.

2006: ಕಳೆದ ಮಾರ್ಚ್ 31ರಂದು ಕೊನೆಗೊಂಡ 2005-06ನೇ ಹಣಕಾಸು ವರ್ಷದಲ್ಲಿ (ಮಾರ್ಚ್ 31ರ ವೇಳೆಗೆ) ಭಾರತದ ವಿದೇಶೀ ಸಾಲ 125.2 ಶತಕೋಟಿ ಡಾಲರುಗಳಷ್ಟಾಗಿತ್ತು ಎಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿತು. 2004-05ರ ಹಣಕಾಸು ವರ್ಷದ ಅಂತ್ಯಕ್ಕೆ ಸಾಲದ ಮೊತ್ತ 123.2 ಶತಕೋಟಿ ಡಾಲರುಗಳಾಗಿದ್ದವು. ಒಂದು ವರ್ಷದಲ್ಲಿ ಹೆಚ್ಚಿದ ವಿದೇಶೀ ಸಾಲದ ಮೊತ್ತ 2 ಶತಕೋಟಿ ಡಾಲರುಗಳು.

2006: ಸುಮಾರು 100 ವರ್ಷಗಳ ಇತಿಹಾಸ ಹೊಂದಿದ್ದ ಬೆಂಗಳೂರು ಜನರಲ್ ಕಾರಿಯಪ್ಪ ರಸ್ತೆಯ (ರೆಸಿಡೆನ್ಸಿ ರಸ್ತೆ) `ಕ್ಯಾಷ್ ಫಾರ್ಮೆಸಿ' ಕಟ್ಟಡ (1908-2006) ಇತಿಹಾಸದ ಪುಟಗಳನ್ನು ಸೇರಿತು. 12 ವರ್ಷಗಳ ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಕಟ್ಟಡವನ್ನು ಈದಿನ ಕೆಡವಲಾಯಿತು. ಈ ಜಾಗದಲ್ಲಿ ಪ್ರೆಸ್ಟೀಜ್ ಸಮೂಹದ ಸಂಸ್ಥೆ ಮೂರು ಮಹಡಿಗಳ ಕಟ್ಟಡ ನಿರ್ಮಿಸಲಿದ್ದು ಅದರ ತಳಮಹಡಿಯಲ್ಲಿ `ಹೊಸ ಕ್ಯಾಷ್ ಫಾರ್ಮೆಸಿ' ತಲೆ ಎತ್ತುವುದು.

2006: ತಮಿಳು ಚಿತ್ರರಂಗದ ಯಶಸ್ವಿ ಜೋಡಿ ಸೂರ್ಯ ಮತ್ತು ಜ್ಯೋತಿಕಾ ಈದಿನ ಚೆನ್ನೈಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸತಿ ಪತಿಗಳಾದರು. ಸೂರ್ಯ ಅವರು ಖ್ಯಾತ ತಮಿಳು ನಟ ಶಿವಕುಮಾರ್ ಪುತ್ರ. ಜ್ಯೋತಿಕಾ ಅವರು ನಟಿ ನಗ್ಮಾ ಅವರ ಸಹೋದರಿ. ಇವರಿಬ್ಬರೂ ಚಿತ್ರರಂಗದಲ್ಲಿ ಭಾರಿ ಬೇಡಿಕೆಯಲ್ಲಿ ಇರುವ ಕಲಾವಿದರು. ಉಪೇಂದ್ರ ಅಭಿನಯದ `ನಾಗರಹಾವು' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲೂ ಜ್ಯೋತಿಕಾ ನಟಿಸಿದ್ದಾರೆ.

2006: ಖ್ಯಾತ ಉರ್ದು ಕವಿ ಸಯೀದ್ ಖಾನ್ (83) ಅವರ ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ  ಭೋಪಾಲಿನಲ್ಲಿ ನಿಧನರಾದರು. ಮಧ್ಯ ಪ್ರದೇಶ ಸರ್ಕಾರದ `ಇಕ್ಬಾಲ್ ಪ್ರಶಸ್ತಿ', ಮಧ್ಯಪ್ರದೇಶ ಉರ್ದು ಅಕಾಡೆಮಿಯ `ಮೀರ್ ಟಾಕಿ ಮೀರ್' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದರು.

2006:  ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಪ್ರೊಫೆಸರ್ ರಮಣಲಾಲ್ ಜೋಷಿ ಅವರು ಅಹಮದಾಬಾದಿನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಗುಜರಾತ್ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಗುಜರಾತ್ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ರಮಣಲಾಲ್ ಜೋಷಿ ಅವರು ಗುಜರಾತಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಂದಾಗಿ ಅಪಾರ ಜನಮನ್ನಣೆ ಗಳಿಸಿದವರು. ಮೆಹ್ಸಾನಾ ಜಿಲ್ಲೆಯ ವಿಜಾಪುರ ತಾಲ್ಲೂಕಿನ ಹೀರ್ ಪುರ ಗ್ರಾಮದಲ್ಲಿ 1926ರ ಮೇ ತಿಂಗಳಲ್ಲಿ ಜನಿಸಿದ ಜೋಷಿ ಅವರು ಖ್ಯಾತ ಸಾಹಿತಿ ಉಮಾಶಂಕರ ಜೋಷಿಯಂತಹವರ ಮಾರ್ಗದರ್ಶನ ಪಡೆದಿದ್ದರು.

2001: ಜಗತ್ತಿನ ಇತಿಹಾಸದಲ್ಲೇ ಅತಿ ಭೀಕರ ಭಯೋತ್ಪಾದಕ ದಾಳಿ ನಡೆದ ದಿನ ಇದು. ಎರಡು ಅಪಹೃತ ಅಮೆರಿಕನ್ ವಿಮಾನಗಳನ್ನು ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆಸಲಾಯಿತು. ಇದೇ ವೇಳೆಗೆ ಇನ್ನೊಂದು ಅಪಹೃತ ವಿಮಾನವನ್ನು ವಾಷಿಂಗ್ಟನ್ನಿನಲ್ಲಿ ಪೆಂಟಗಾನ್ ಗೆ ಡಿಕ್ಕಿ ಹೊಡೆಸಲಾಯಿತು. ರಾಜಧಾನಿ ಮತ್ತು ಶ್ವೇತಭವನದಿಂದ ಜನರನ್ನು ತೆರವುಗೊಳಿಸಲಾಯಿತು. ಸುಮಾರು 3000ಕ್ಕೂ ಹೆಚ್ಚು ಜನ ಹತರಾದರು. ಅಧ್ಯಕ್ಷ ಬುಷ್ ಅವರು ಈ ಕೃತ್ಯವನ್ನು `ಅಮೆರಿಕ ವಿರುದ್ಧ ಸಮರ' ಎಂದು ಬಣ್ಣಿಸಿದರು. ಆಫ್ಘಾನಿಸ್ಥಾನದಲ್ಲಿ ನೆಲೆ ಹೊಂದಿದ್ದ ಮುಲ್ಲಾ ಒಮರ್ ಮತ್ತು ಒಸಾಮಾ ಬಿನ್ ಲಾಡೆನ್ ನೇತೃತ್ವದ `ಅಲ್ ಖೈದಾ' ಭಯೋತ್ಪಾದಕ ಸಂಘಟನೆ ಈ ದಾಳಿಗಳನ್ನು ಯೋಜಿಸಿತ್ತು.

1998: ಅಧ್ಯಕ್ಷ ಕ್ಲಿಂಟನ್ ಮೇಲಿನ ಲೈಂಗಿಕ ದುರ್ವರ್ತನೆ, ನ್ಯಾಯಾಧೀಶರ ವಿರುದ್ಧ ಮಾಡಲಾದ ಆಪಾದನೆಗಳು ಹಾಗೂ ನ್ಯಾಯದಾನಕ್ಕೆ ಅಡ್ಡಿ ಕುರಿತ ಕೆನ್ನೆತ್ ಸ್ಟಾರ್ ಅವರ ವರದಿಯನ್ನು ಅಮೆರಿಕನ್ ಕಾಂಗ್ರೆಸ್ ಬಿಡುಗಡೆ ಮಾಡಿತು.

1973: ಚಿಲಿಯ ಅಧ್ಯಕ್ಷ ಸಾಲ್ವಡೋರ್ ಅಲ್ಲೆಂಡೆ ಅವರ ಸರ್ಕಾರವನ್ನು ಸೇನಾ ಕ್ರಾಂತಿ ಒಂದರಲ್ಲಿ ಕಿತ್ತೆಸೆಯಲಾಯಿತು. ಸಾಲ್ವಡೋರ್ ಅವರು ಸೇನಾ ದಾಳಿಯ ಸಂದರ್ಭದಲ್ಲಿ ಅಧ್ಯಕ್ಷೀಯ ಅರಮನೆಯಲ್ಲಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆದರೆ 1990ರಲ್ಲಿ ಸಮಾಧಿಯೊಂದರಿಂದ ಅವರ ಕಳೇಬರವನ್ನು ಹೊರತೆಗೆದು  ಸ್ಯಾಂಟಿಯಾಗೋದಲ್ಲಿ ಅಧಿಕೃತವಾಗಿ ಸಮಾಧಿ ಮಾಡುವವರೆಗೆ ಆತ್ಮಹತ್ಯೆಯ ವಿಚಾರವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲಿಲ್ಲ.

1967: ಸಿಕ್ಕಿಂ- ಟಿಬೆಟ್ ಗಡಿಯಲ್ಲಿ ಚೀನಾ ಮತ್ತು ಭಾರತ ರಕ್ಷಣಾ ಪಡೆಗಳ ಭಾರಿ ಪ್ರಮಾಣದ ಗುಂಡಿನ ಘರ್ಷಣೆ.

1956: ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಮೃತಪಟ್ಟರೆ ಎಂಬ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ನೇತಾಜಿ ತನಿಖಾ ಸಮಿತಿಯ ಅಭಿಪ್ರಾಯವನ್ನು ಲೋಕಸಭೆಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಪ್ರಕಟಿಸಿದರು. 1945ರ ಆಗಸ್ಟ್ 15ರಂದು ಫಾರ್ಮೋಸಾದಲ್ಲಿನ ತೈಹೋಕು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಮೃತರಾದದ್ದು ನಿಜ,  ಟೋಕಿಯೋದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಚಿತಾಭಸ್ಮ ನೇತಾಜಿ ಅವರದ್ದೇ ಎಂದು ನೇತಾಜಿ ಸುಭಾಶ್ ಚಂದ್ರ ಬೋಸ್ ತನಿಖಾ ಸಮಿತಿ ನಿರ್ಧಾರಕ್ಕೆ ಬಂದಿದೆ. ಸಮಿತಿಯು ಸಂಗ್ರಹಿಸಿರುವ ಸಾಕ್ಷ್ಯಾಧಾರಗಳ ಹಿನ್ನೆಲಯಲ್ಲಿ ಈ ತೀರ್ಮಾನವನ್ನು ಅಂಗೀಕರಿಸಬೇಕು ಎಂಬುದು ಸರ್ಕಾರದ ಭಾವನೆ ಎಂದು ನೆಹರೂ ಹೇಳಿದರು.

1948: ಹೈದರಾಬಾದ್ ರಾಜ್ಯಕ್ಕೆ ಭಾರತ ಸರ್ಕಾರದ ಪಡೆಗಳ ಪ್ರವೇಶ.

1948: ಪಾಕಿಸ್ಥಾನದ ಮೊದಲ ಗವರ್ನರ್ ಜನರಲ್ ಮಹಮ್ಮದ್ ಆಲಿ ಜಿನ್ನಾ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು. ಭಾರತದ ವಿಭಜನೆಗೆ ಇವರೇ ಕಾರಣರೆಂದು ವ್ಯಾಪಕವಾಗಿ ನಂಬಲಾಗಿದೆ.

1913: ಖ್ಯಾತ ಸಾಹಿತಿ ಗೌರೀಶ ಕಾಯ್ಕಿಣಿ ಜನನ.

1906: ದಕ್ಷಿಣ ಆಫ್ರಿಕದಲ್ಲಿನ ವರ್ಣಭೇದ ನೀತಿ ವಿರೋಧಿಸಿ ಜೋಹಾನ್ಸ್ ಬರ್ಗಿನ ಎಂಪೈರ್ ಥಿಯೇಟರ್ ಮುಂದೆ 3000 ಭಾರತೀಯರನ್ನು ಸೇರಿಸಿಕೊಂಡು ಗಾಂಧೀಜಿ ಅವರು `ಸತ್ಯಾಗ್ರಹ' ಎಂಬ ಹೊಸ ಬಗೆಯ ಪ್ರತಿಭಟನೆ ಆರಂಭಿಸಿದರು. ಗಾಂಧೀಜಿ ಮೊದಲಿಗೆ ಈ ಹೋರಾಟವನ್ನು `ಪರೋಕ್ಷ ಪ್ರತಿರೋಧ' (ಪ್ಯಾಸೀವ್ ರೆಸಿಸ್ಟೆನ್ಸ್) ಎಂದು ಕರೆಯುತ್ತಿದ್ದರು. ಆದರೆ ಪ್ಯಾಸೀವ್ ರೆಸಿಸ್ಟೆನ್ಸಿನಲ್ಲಿ ಪ್ರತಿಭಟಿಸುವವರು ದುರ್ಬಲರೆಂಬ ಸೂಚನೆ ಇತ್ತು, ಜೊತೆಗೆ ಅದು ಹಿಂಸೆಗೂ ತಿರುಗಲೂ ಅವಕಾಶವಿತ್ತು. ಇದನ್ನು ನಿವಾರಿಸಲು ಈ ಹೋರಾಟಕ್ಕೆ ಹೊಸ ಹೆಸರು ಇಡಲು ಅಪೇಕ್ಷಿಸಿದ ಗಾಂಧೀಜಿ ಹೆಸರು ಸೂಚಿಸಿದವರಿಗೆ ಬಹುಮಾನ ಕೊಡುವ ಸ್ಪರ್ಧೆ ಇಟ್ಟರು. ಆಗ ಹೊರಹೊಮ್ಮಿದ ಹೆಸರೇ 'ಸತ್ಯಾಗ್ರಹ'. ಮಗನ್ ಲಾಲ್ ಗಾಂಧಿ ಎಂಬ ವ್ಯಕ್ತಿಗೆ ಈ ಬಹುಮಾನ ಲಭಿಸಿತು. ಮಗನ್ ಲಾಲ್ ಸೂಚಿಸಿದ `ಸದಾಗ್ರಹ' ಪದವನ್ನು ಗಾಂಧೀಜಿ `ಸತ್ಯಾಗ್ರಹ' ಎಂದು ಬದಲಿಸಿಕೊಂಡರು. `ಸತ್ಯವು ಪ್ರೀತಿಯನ್ನೂ ಆಗ್ರಹವು ಬಲವನ್ನೂ ಸೂಚಿಸುತ್ತದೆ. ಒಟ್ಟಾರೆಯಾಗಿ ಸತ್ಯಾಗ್ರಹ ಎಂದರೆ ಅಹಿಂಸೆ ಹಾಗೂ ಸತ್ಯದಿಂದ ಹುಟ್ಟಿದ ಪ್ರೀತಿಯ ಮೂಲಕ ನಡೆಸುವ ಹೋರಾಟ. ಉಪವಾಸ ಈ ಹೋರಾಟದ ಮುಖ್ಯ ಅಂಗ ಎಂದು ಗಾಂಧೀಜಿ ಬಣ್ಣಿಸಿದರು.

1893: ಶಿಕಾಗೋದ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮೀ ವಿವೇಕಾನಂದರು ತಮ್ಮ ಪ್ರಥಮ ಭಾಷಣವನ್ನು ಮಾಡಿದರು. 'ಸಹೋದರ ಸಹೋದರಿಯರೇ' ಎಂಬ ಶಬ್ಧಗಳೊಂದಿಗೆ ಅವರು ಆರಂಭಿಸಿದ ಈ ಭಾಷಣ ಇಡೀ ಪ್ರಪಂಚದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಅವರ ಈ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಮತ್ತೊಮ್ಮೆ ವಿಶ್ವ ವ್ಯಾಪಕತೆ ಪಡೆದುಕೊಂಡಿತು.

1877: ಸಾಹಿತಿ ತೋನ್ಸೆ ಮಂಗೇಶರಾಯರ ಜನ್ಮದಿನ.

1862: ಸಂಸ್ಕೃತ, ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಹಳೆಗನ್ನಡ ವಿದ್ವಾಂಸ ಎಸ್. ಜಿ. ನರಸಿಂಹಾಚಾರ್
(11-9-1862ರಿಂದ 22-12-1907) ಅವರು ಅಳಸಿಂಗಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನದ ಪ್ರಥಮಾಧ್ಯಕ್ಷರಾಗಿದ್ದ ಅವರು ಗದಾಯುದ್ಧ, ಮಲ್ಲಿನಾಥ ಪುರಾಣ, ಲೀಲಾವತಿ ಪ್ರಬಂಧ, ಕರ್ನಾಟಕ ಪಂಚತಂತ್ರ ಇತ್ಯಾದಿ ಗ್ರಂಥಗಳಲ್ಲದೆ ಶಾಲಾ ಪಠ್ಯಗಳಾದ ಷಟ್ಪದಿ ಕಾವ್ಯಗಳು, ಘೋಷಿತ ಪ್ರಿಯ, ಸಮಾಗಮಂ, ಗೋಲ್ಡ್ ಸ್ಮಿತ್ ನ `ದಿ ಹರ್ಮಿಟ್', 9 ವೀರಪುಂಗವರ ವೃತ್ತಾಂತ ಇತ್ಯಾದಿಗಳನ್ನು ರಚಿಸಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement