Sunday, October 11, 2009

ಇಂದಿನ ಇತಿಹಾಸ History Today ಅಕ್ಟೋಬರ್ 11

ಇಂದಿನ ಇತಿಹಾಸ

ಅಕ್ಟೋಬರ್ 11


ಕಾಶ್ಮೀರದ ಪ್ರಪ್ರಥಮ ರೈಲು ಸೇವೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದರೊಂದಿಗೆ ಕಠಿಣ ಭೌಗೋಳಿಕ ಪರಿಸರ ಹಾಗೂ ಪ್ರತಿಕೂಲ ಹವಾಮಾನ ಒಡ್ಡಿದ ಸವಾಲುಗಳನ್ನು ಎದುರಿಸಿ ರೈಲ್ವೇ ಸೇವೆ ಆರಂಭಿಸಲು ದಶಕಗಳಿಂದ ನಡೆಸಿದ್ದ ಮಾರ್ಗ ನಿರ್ಮಾಣ ಯತ್ನ ಹಾಗೂ ರೈಲ್ವೇ ಸಂಚಾರದ ಕಾಶ್ಮೀರಿ ಜನರ ಕನಸು ನನಸಾಯಿತು.

ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (1902-1979) ಹಾಗೂ ಬಾಲಿವುಡ್ಡಿನ ಖ್ಯಾತ ಚಿತ್ರನಟ ಅಮಿತಾಭ್ ಬಚ್ಚನ್ ಅವರ ಜನ್ಮದಿನವಿದು. ಜೆ.ಪಿ. ಎಂದೇ ಖ್ಯಾತರಾದ ಜಯಪ್ರಕಾಶ್ ನಾರಾಯಣ್ ಅವರು 1902ರ ಅಕ್ಟೋಬರ್ 11ರಂದು ಜನಿಸಿದರು. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಹೆಸರು ಮಾಡಿದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹುಟ್ಟಿದ್ದು 1942ರ ಅಕ್ಟೋಬರ್ 11ರಂದು.

2014: ನವದೆಹಲಿ : ತಮ್ಮ ಕನಸಿನ ಗ್ರಾಮೀಣಾಭಿವೃದ್ಧಿ ಯೋಜನೆಯಾದ ‘ಸಂಸದರ ಆದರ್ಶ ಗ್ರಾಮ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಲಾಗಿರುವ  ಮಹತ್ವಾ­ಕಾಂಕ್ಷೆಯ ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಸಂಸದನೂ ಕನಿಷ್ಠ ಮೂರು ಗ್ರಾಮ­ಗಳನ್ನು ಮಾದರಿ ಗ್ರಾಮಗಳನ್ನಾಗಿ ಸಮಗ್ರವಾಗಿ ಅಭಿವೃದ್ಧಿ­ಪಡಿಸಬೇಕು ಎಂದು ಸಲಹೆ ನೀಡಿದರು. ಲೋಕನಾಯಕ ಜಯಪ್ರಕಾಶ ನಾರಾಯಣ್ ಜನ್ಮದಿನದಂದು ಚಾಲನೆ ಪಡೆದ ಯೋಜನೆಯನ್ನು ಮೊದಲು ದೆಹಲಿ, ಲಖನೌ ಅಥವಾ ಗಾಂಧಿನಗರದಲ್ಲಿ  ಪ್ರಾಯೋಗಿಕವಾಗಿ ಅನುಷ್ಠಾನ­ಗೊಳಿಸಲಾಗುವುದು. ಬಳಿಕ ದೇಶದ ಉಳಿದೆಡೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಮೋದಿ 14 ರಂದು ವಾರಾಣಸಿಗೆ:  ಪ್ರಧಾನಿ ನರೇಂದ್ರ ಮೋದಿ ಅವರು ಅ.೧೪ರಂದು ತಮ್ಮ ಕ್ಷೇತ್ರವಾದ ವಾರಾಣಸಿಗೆ ಮುಂದಿನ ವಾರ ಹೋಗಿ ತಾವು ಅಭಿವೃದ್ಧಿ­ಪಡಿಸಲು ಉದ್ದೇಶಿಸಿ­ರುವ ಗ್ರಾಮವನ್ನು ಆಯ್ಕೆ ಮಾಡುವರು. ಸ್ವಾತಂತ್ರೋತ್ಸವದಂದು ದೆಹಲಿಯ ಕೆಂಪುಕೋಟೆ ಮೇಲೆ ಮೊದಲ ಬಾರಿಗೆ ಧ್ವಜರೋಹಣ ಮಾಡಿದ ಬಳಿಕ ಪ್ರಧಾನಿ ಈ ಯೋಜನೆಯನ್ನು ಘೋಷಿಸಿದ್ದರು. ‘ಬದಲಾಗುತ್ತಿರುವ ಸಮಾಜ ದೊಂದಿಗೆ ಗ್ರಾಮಗಳು ಬದಲಾಗಬೇಕು. ಪ್ರತಿ ಗ್ರಾಮಸ್ಥನೂ ತನ್ನ ಗ್ರಾಮದ ಪರಿಸರ ಮತ್ತು ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುವಂತಾಗಬೇಕು. ಆ ದಿಸೆಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ’ ಎಂದು ಪ್ರಧಾನಿ ಸಲಹೆ ಮಾಡಿದರು. ‘ಇಡೀ ದೇಶವನ್ನು ಸುತ್ತಾಡಿದ ಬಳಿಕ ನನಗಾದ ಅನುಭವ ಎಂದರೆ ಜನರ ಸಹಭಾಗಿತ್ವ ಇಲ್ಲದೇ ಈ ರಾಷ್ಟ್ರದಲ್ಲಿ ಯಾವ ಯೋಜನೆಯೂ ಯಶಸ್ವಿ­ಯಾ­ಗುವುದಿಲ್ಲ.  ಜನರ ಪಾಲ್ಗೊಳ್ಳುವಿಕೆ­ಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ’ ಎಂದರು. ‘ಇದು ಹಣದ ಯೋಜನೆ ಅಲ್ಲ. ಜನ ಹಿತದ ಯೋಜನೆ. ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾವಣೆ ಮಾಡಿ­ಬಿಡುತ್ತೇನೆ ಎಂದು ನಾನು ಹೇಳುವುದಿಲ್ಲ. ಈ ಯೋಜನೆಯಿಂದಲೇ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಿ ಬಿಡುತ್ತವೆ ಎಂದೂ ಹೇಳುವುದಿಲ್ಲ.  ಮೊದಲು ಕೆಲಸ ಮಾಡೋಣ. ಕಾಲ­ಕ್ರಮೇಣ ಬದಲಾವಣೆ ಮತ್ತು ಅಭಿವೃದ್ಧಿ ತಾವಾಗಿಯೇ  ಗೋಚರಿಸುತ್ತವೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಯ ಮುಖ್ಯಾಂಶಗಳು
* ಮಹಾತ್ಮ ಗಾಂಧಿ ಅವರ ‘ಸ್ವರಾಜ್’ ಅನ್ನು ‘ಸುರಾಜ್’ (ಉತ್ತಮ ಆಡಳಿತ) ಆಗಿ ಪರಿವರ್ತಿಸುವ ಆಶಯವನ್ನು ಆಧರಿಸಿ ಯೋಜನೆಯ ನೀಲನಕ್ಷೆ ಸಿದ್ಧ
* ಯಾವುದೇ ಸಂಸದ ತನ್ನದೇ ಗ್ರಾಮವನ್ನು ಅಥವಾ ತನ್ನ ಪತ್ನಿಯ ತವರು ಗ್ರಾಮವನ್ನು ಆಯ್ದುಕೊಳ್ಳಬಾರದು
* 543 ಲೋಕಸಭಾ ಸದಸ್ಯರು, 250 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 793 ಸಂಸದರು.
* ಬಯಲು ಸೀಮೆಯಲ್ಲಿ ಮೂರು ಸಾವಿರದಿಂದ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಬೇಕು
* ಗುಡ್ಡಗಾಡು ಪ್ರದೇಶದಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಬೇಕು
* ಗ್ರಾಮಸ್ಥರ ವೈಯಕ್ತಿಕ ಅಭಿವೃದ್ಧಿ, ಗ್ರಾಮಗಳಲ್ಲಿನ ಮಾನವ ಸಂಪನ್ಮೂಲ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಗೆ ಒತ್ತು
* ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಅಭಿವೃದ್ಧಿ ಯೋಜನೆ
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಹಣದ ಬಳಕೆ
* ಯೋಜನೆಯ ಅನುಷ್ಠಾನ ಮೇಲ್ವಿಚಾರಣೆಗೆ ರಾಷ್ಟ್ರ ಮಟ್ಟದಲ್ಲಿ ಎರಡು ಸಮಿತಿಗಳ ರಚನೆ
* 2016ರ ವೇಳೆಗೆ ಪ್ರತಿ ಸಂಸದರಿಂದ ತಲಾ ಒಂದರಂತೆ 800 ಗ್ರಾಮಗಳ ಅಭಿವೃದ್ಧಿ ಗುರಿ
* 2019ರ ವೇಳೆಗೆ 2400 ಗ್ರಾಮಗಳ ಅಭಿವೃದ್ಧಿ ಗುರಿ

ಮಾವನ ಊರು ಬೇಡ
ಸಂಸದರು ತಮ್ಮ ಕ್ಷೇತ್ರದ ಯಾವು­ದಾ­ದರೂ ಮೂರು ಗ್ರಾಮ­­ಗಳನ್ನು ಈ ಯೋಜನೆಗೆ ಆಯ್ಕೆ ಮಾಡಿ­ಕೊಳ್ಳಲು ಸ್ವತಂತ್ರರು. ಆದರೆ ನಿಮ್ಮದೇ ಗ್ರಾಮ ಅಥವಾ  ಪತ್ನಿಯ ಗ್ರಾಮ ಬೇಡ. ನಾವು 800 ಸಂಸದರಿ­ದ್ದೇವೆ. ಪ್ರತಿ­ಯೊಬ್ಬರೂ  3 ಗ್ರಾಮ­­ಗಳನ್ನು ಆಯ್ಕೆ ಮಾಡಿ­ಕೊಂಡಲ್ಲಿ 2019ರ ವೇಳೆಗೆ 2400 ಮಾದರಿ ಗ್ರಾಮಗಳನ್ನು ರೂಪಿಸ­ಬಹುದು. ಇದನ್ನೇ ಎಲ್ಲ ಶಾಸಕರು ಅನುಸರಿಸಿದರೆ ಆರೇಳು ಸಾವಿರ ಗ್ರಾಮಗಳು ಅಭಿವೃದ್ಧಿ ಕಾಣುತ್ತವೆ. –ಪ್ರಧಾನಿ ನರೇಂದ್ರ ಮೋದಿ

2008: ಕಾಶ್ಮೀರದ ಪ್ರಪ್ರಥಮ ರೈಲು ಸೇವೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದರೊಂದಿಗೆ ಕಠಿಣ ಭೌಗೋಳಿಕ ಪರಿಸರ ಹಾಗೂ ಪ್ರತಿಕೂಲ ಹವಾಮಾನ ಒಡ್ಡಿದ ಸವಾಲುಗಳನ್ನು ಎದುರಿಸಿ ರೈಲ್ವೇ ಸೇವೆ ಆರಂಭಿಸಲು ದಶಕಗಳಿಂದ ನಡೆಸಿದ್ದ ಮಾರ್ಗ ನಿರ್ಮಾಣ ಯತ್ನ ಹಾಗೂ ರೈಲ್ವೇ ಸಂಚಾರದ ಕಾಶ್ಮೀರಿ ಜನರ ಕನಸು ನನಸಾಯಿತು. ಪ್ರಧಾನಿ ಭೇಟಿಯ ವಿರುದ್ಧ ಪ್ರತ್ಯೇಕತಾವಾದಿಗಳು ನೀಡಿದ್ದ ಬಂದ್ ಕರೆ ಹಾಗೂ ಇಬ್ಬರನ್ನು ಬಲಿ ತೆಗೆದುಕೊಂಡು ಇತರ 75 ಮಂದಿ ಗಾಯಗೊಳ್ಳಲು ಕಾರಣವಾದ ಕಣಿವೆಯ ಹಿಂಸಾತ್ಮಕ ಪ್ರತಿಭಟನೆ ಹಾಗೂ ಗೋಲಿಬಾರ್ ಹಿನ್ನೆಲಯಲ್ಲಿ ಏರ್ಪಡಿಸಲಾಗಿದ್ದ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆಯ ಮಧ್ಯೆ ಪ್ರಧಾನಿಯವರು ನೌಗಮ್ನಲ್ಲಿ ಹೂಗಳಿಂದ ಸಿಂಗರಿಸಲಾಗಿದ್ದ ರೈಲುಗಾಡಿಗೆ ಹಸಿರು ಧ್ವಜ ತೋರಿಸಿದರು.

2008: 'ಪರಸ್ಪರ ಒಪ್ಪಲಾದ 123 ಒಪ್ಪಂದದ ಪಠ್ಯ'ಕ್ಕೆ ಮಾತ್ರ ತಾವು ಬದ್ಧ ಎಂಬ ಭಾರತದ ಘೋಷಣೆಯೊಂದಿಗೆ ಭಾರತ ಮತ್ತು ಅಮೆರಿಕ ಚಾರಿತ್ರಿಕ `ಪರಮಾಣು ಒಪ್ಪಂದ'ಕ್ಕೆ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದವು. 2005ರಲ್ಲಿ ಆರಂಭಗೊಂಡ ಕಠಿಣ ಪ್ರಕ್ರಿಯೆ ಈ ಒಪ್ಪಂದದೊಂದಿಗೆ ಮುಕ್ತಾಯಗೊಂಡು, ಪರಮಾಣು ಕ್ಷೇತ್ರದಲ್ಲಿ 34 ವರ್ಷಗಳಿಂದ ಕಾಡುತ್ತಿದ್ದ ಪ್ರತ್ಯೇಕತೆಯಿಂದ ಭಾರತ ಮುಕ್ತಗೊಂಡಿತು. ಅಮೆರಿಕದ ವಿದೇಶಾಂಗ ಇಲಾಖೆಯ ಬೆಂಜಮಿನ್ ಫ್ರಾಂಕ್ಲಿನ್ ಕೊಠಡಿಯಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರು ದ್ವಿಪಕ್ಷೀಯ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು.

2008: ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಹೊಸ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಭಾರತದ ಮೊದಲ ವಿಕೆಟ್ ಪತನಗೊಂಡ ಬಳಿಕ ದ್ರಾವಿಡ್ ಕ್ರೀಸಿಗೆ ಆಗಮಿಸಿದಾಗ ಹೊಸ ದಾಖಲೆಯ ಒಡೆಯರಾಗಿದ್ದರು. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ನೂರನೇ ಟೆಸ್ಟ್ ಪಂದ್ಯ ಇದು. ವಿಶ್ವದ ಯಾವುದೇ ಬ್ಯಾಟ್ಸ್ ಮನ್ ಈವರೆಗೆ ನೂರು ಟೆಸ್ಟ್ಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದಿರಲಿಲ್ಲ. ತವರೂರ ಪ್ರೇಕ್ಷಕರೆದುರು ಈ ಸಾಧನೆ ಮಾಡುವ ಅವಕಾಶ ದ್ರಾವಿಡ್ ಅವರಿಗೆ ಲಭಿಸಿತು. ಒಂದೆರಡು ಬಾರಿ ದ್ರಾವಿಡ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕ್ರೀಸಿಗೆ ಇಳಿದಿದ್ದರು. ಅದನ್ನು ಬಿಟ್ಟರೆ ಅವರಿಗೆ ಮೂರನೇ ಕ್ರಮಾಂಕ `ಖಾಯಂ' ಆಗಿತ್ತು. 51 ರನ್ ಗಳಿಸಿ ಪೆವಿಲಿಯನ್ ಸೇರುವ ಮೊದಲು ಅವರು ಮತ್ತೊಂದು ದಾಖಲೆಯನ್ನು ಸರಿಗಟ್ಟಿದರು. ಇದು ಸ್ವದೇಶದಲ್ಲಿ ಡ್ರಾವಿಡ್ ಗಳಿಸಿದ 23ನೇ ಟೆಸ್ಟ್ ಅರ್ಧ ಶತಕ. ಸುನಿಲ್ ಗಾವಸ್ಕರ್ ಅವರೂ 23 ಅರ್ಧಶತಕ ಗಳಿಸಿದ್ದರು.

2008: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಲಿಂಗಕಾಮಿಗಳು ಒಂದೊಂದೇ ವಿಜಯ ದಾಖಲಿಸಿದರು. ಕನೆಕ್ಟಿಕಟ್ ಪ್ರಾಂತ್ಯದ ಸುಪ್ರೀಂಕೋರ್ಟ್ `ಸಲಿಂಗಕಾಮಿಗಳಿಗೆ ಮದುವೆಯಾಗುವ ಹಕ್ಕು ಇದೆ' ಎಂದು ಈದಿನ ತೀರ್ಪು ನೀಡಿತು. ಅಮೆರಿಕದ ಮೆಸ್ಯಾಚುಸೆಟ್ಸ್ ಮತ್ತು ಕ್ಯಾಲಿಫೋರ್ನಿಯಾ ಪ್ರಾಂತ್ಯಗಳಲ್ಲಿ ಈ ಮೊದಲೇ ಇಂತಹ ಮದುವೆಗೆ ಕಾನೂನಿನ ಮಾನ್ಯತೆ ನೀಡಲಾಗಿತ್ತು. ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಕನೆಕ್ಟಿಕಟ್ ಮೂರನೇ ಪ್ರಾಂತ್ಯವಾಗಿ ಪಟ್ಟಿಗೆ ಸೇರ್ಪಡೆಯಾಯಿತು.

2008: `ಪುಟ್ಟದಾಗಿರುವುದೆಲ್ಲಾ ಸುಂದರ' (ಸ್ಮಾಲ್ ಈಸ್ ಬ್ಯೂಟಿಫುಲ್ ) ಎಂಬುದು ಇಂಗ್ಲಿಷಿನ ಒಂದು ಜನಪ್ರಿಯ ಉಲ್ಲೇಖ. ಇದರಲ್ಲಿ ನಂಬಿಕೆ ಇಟ್ಟಿರುವ ಜಪಾನಿನ ಆಟಿಕೆ ತಯಾರಿಕೆ ಕಂಪನಿಯೊಂದು ಪ್ರಪಂಚದಲ್ಲೇ ಅತಿ ಪುಟ್ಟದಾದ ಕೇವಲ ಹೆಬ್ಬೆರಳಿನಷ್ಟು ಗಾತ್ರದ ನಡೆದಾಡಬಲ್ಲ ರೋಬೊ (ಯಂತ್ರಮಾನವ) ತಯಾರಿಸಿದ್ದನ್ನು ಬಹಿರಂಗ ಪಡಿಸಿತು. `ರೋಬೋ- ಕ್ಯು' ಎಂಬ ಹೆಸರು ಹೊತ್ತ ಎರಡು ಕಾಲುಗಳ ಈ ಆಟಿಕೆಯು 3.4 ಸೆಂ.ಮೀ. ಉದ್ದವಿದೆ. ಇದರಲ್ಲಿ ಅಡಕಗೊಳಿಸಲಾದ ಬುದ್ಧಿಮತ್ತೆಯು ತನ್ನ ಹಾದಿಗೆ ಅಡ್ಡಬರುವ / ಇರುವ ಅಡೆತಡೆಗಳನ್ನು ಸ್ವಯಂಚಾಲಿತವಾಗಿ ಪತ್ತೆ ಹಚ್ಚ ಬಲ್ಲುದು. ಹೀಗಾಗಿ ಎಂತಹ ಜನಸಂದಣಿಯ ಪ್ರದೇಶದಲ್ಲೂ ಈ ರೋಬೊ ಸ್ವತಂತ್ರವಾಗಿ ನಡೆದಾಡಬಲ್ಲುದು. ಇದಕ್ಕೆ ತೆರಿಗೆ ಹೊರತುಪಡಿಸಿ 3500 ಯೆನ್ (29 ಡಾಲರ್) ದರ ನಿಗದಿ ಮಾಡಲಾಯಿತು. ಈ ಆಟಿಕೆ ರೋಬೊದೊಳಗೆ ಅತಿ ನೇರಳೆ ಸಂವೇದನಾ ಕೋಶಗಳನ್ನು (ಇನ್ ಫ್ರಾರೆಡ್ ಸೆನ್ಸಾರ್ಸ್) ಅಳವಡಿಸಲಾಗಿದ್ದು, ನಿಯಂತ್ರಕವನ್ನು ಬಳಸಿದರೆ ಫುಟ್ ಬಾಲಿನಂತಹ ಕ್ರೀಡೆಯನ್ನೂ ಇದರಿಂದ ಆಡಿಸಬಹುದು ಎಂದು ವಿವರಿಸಲಾಯಿತು.. ಜಪಾನಿನಲ್ಲಿ ನಡೆದ ರೋಬೊ ಮೇಳದಲ್ಲಿ ಇದನ್ನು ಪ್ರದರ್ಶಿಸಲಾಯಿತು.

2008: ವೀಣಾ ಬನ್ನಂಜೆ ಅವರ ಅಕ್ಕಮಹಾದೇವಿ ದ್ವೈತ ವಚನ ಸಾಹಿತ್ಯ ವಿಮರ್ಶೆ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟಿನ 2007ನೇ ಸಾಲಿನ ಕಾವ್ಯಾನಂದ ಪುರಸ್ಕಾರ ದೊರಕಿತು.

2007: ಬ್ರಿಟನ್ನಿನ ಖ್ಯಾತ ಮಹಿಳಾ ಸಾಹಿತಿ ಡೊರಿಸ್ ಲೆಸ್ಸಿಂಗ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಐದು ದಶಕಗಳಿಂದ ಸಾಹಿತ್ಯ ಕೃಷಿ ನಡೆಸಿದ ಲೆಸ್ಸಿಂಗ್ ಅವರು ಮಹಿಳಾವಾದ, ರಾಜಕೀಯ ಮತ್ತು ಆಫ್ರಿಕದಲ್ಲಿ ತಮ್ಮ ಬಾಲ್ಯದ ಅನುಭವಗಳ ಕುರಿತು ಹಲವು ಕಾದಂಬರಿಗಳನ್ನು ರಚಿಸಿದವರು. ಮುಂದಿನ ವಾರ 88 ವರ್ಷ ತುಂಬಲಿರುವ ಡೊರಿಸ್ ನೊಬೆಲ್ ಪ್ರಶಸ್ತಿ ಪಡೆದ ಹನ್ನೊಂದನೇ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. `ಮಹಿಳಾ ಬರಹಗಾರ್ತಿಯಾಗಿ ಲೆಸ್ಸಿಂಗ್ ಅವರು ತಮ್ಮ ಅನುಭವಗಳನ್ನು, ಭವಿಷ್ಯದ ಹಿನ್ನೆಲೆಯಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ' ಎಂದು ನೊಬೆಲ್ ಪ್ರಶಸ್ತಿ ಪ್ರಕಟಿಸಿದ ಸ್ವೀಡಿಷ್ ಅಕಾಡೆಮಿ ಹೇಳಿತು. `ದಿ ಗೋಲ್ಡನ್ ನೋಟ್ ಬುಕ್' ಲೆಸ್ಸಿಂಗ್ ಅವರ ಶ್ರೇಷ್ಠ ಕೃತಿ. 1949 ರಲ್ಲಿ ಅವರು `ದಿ ಗ್ರಾಸ್ ಈಸ್ ಸಿಂಗಿಂಗ್' ಕೃತಿಯೊಂದಿಗೆ ತಮ್ಮ ಸಾಹಿತ್ಯ ಜೀವನವನ್ನು ಆರಂಭಿಸಿದ್ದರು.

2007: ಆಸ್ಟ್ರೇಲಿಯದ ಸಿಡ್ನಿ ನಗರ ಸತತ 12ನೇ ಸಲ ವಿಶ್ವದ ಅತ್ಯುತ್ತಮ ನಗರ ಎಂಬ ಕೀರ್ತಿಗೆಪಾತ್ರವಾಯಿತು. ವಿಶ್ವದ ಹೆಸರಾಂತ ಪ್ರವಾಸಿ ನಿಯತಕಾಲಿಕವೊಂದುರ ಓದುಗರು ಈ ಆಯ್ಕೆ ಮಾಡಿದರು.

2007: ಹಸಿರು ಮನೆ ಅನಿಲದ ಪರಿಣಾಮವಾಗಿ ಓಜೋನ್ ಪದರದ ರಂದ್ರ ಹಿಗ್ಗುತ್ತಿದೆ. ಇದರಿಂದ ಭೂಮಿ ಮುಂಚಿಗಿಂತ ಹೆಚ್ಚು ಹಸಿ, ಅಂಟಾಗುತ್ತಿದೆ. ವಿಶುವೃತ್ತದ ಪ್ರದೇಶದಲ್ಲಿ ಇನ್ನಷ್ಟು ಬಲವಾದ ಚಂಡಮಾರುತ, ಬಿಸಿಯೇರುವಿಕೆ, ಮಳೆಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದರು.

2007: ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ 2007ರ ಸೆಪ್ಟೆಂಬರ್ 6ರಂದು ವಾಲಿ ನಿಂತು ಅಪಾಯಕ್ಕೆ ಸಿಲುಕಿದ್ದ ಚೀನಾ ಮೂಲದ ಚಾಂಗ್-ಲೆ-ಮೆನ್ ಹಡಗು, ತಿಂಗಳ ಬಳಿಕ ತವರಿಗೆ ಯಾನ ಆರಂಭಿಸಲಿದೆ ಎಂದು ಅಧಿಕಾರಿಗಳು ಪ್ರಕಟಿಸಿದರು. ಅದಿರು ತುಂಬಿ ಸಮತೋಲನ ತಪ್ಪಿದ ಹಡಗು ಕಡೆಗೂ `ರಕ್ಷಣಾ' ಕಾರ್ಯದಿಂದ ವಿಮೋಚನೆ ಪಡೆಯಿತು. ಹಲವು ಬಾರಿ ಗಾಳಿ ಸುದ್ದಿಯಾಗಿ ಮೀನುಗಾರರ ಕೆಂಗಣ್ಣಿಗೂ ಗುರಿಯಾಗಿದ್ದ ಈ `ಚೀನಿ ಕನ್ಯೆ' (ಹಡಗನ್ನು `ಶಿ' ಎಂದು ಸಂಬೋಧಿಸುವುದು) ಸುರಕ್ಷಿತವಾಗಿ ವಾಪಸಾಗಲಿದೆ. 'ಡೆನ್ ಡೆನ್ ಹಡಗು' ಮುಳುಗಡೆ ದುರಂತದ ಕೇವಲ 75 ದಿನಗಳಲ್ಲೇ ಇದೇ ಸ್ಥಳದಲ್ಲಿ ಚಾಂಗ್-ಲೆ-ಮೆನ್ ಲಂಬಕ್ಕಿಂತ 16 ಡಿಗ್ರಿ ವಾಲಿ, ತಳ ಮರಳಿನಲ್ಲಿ ಹೂತುಹೋಗಿ ಮುಳುಗಡೆಯ ಅಪಾಯ ಎದುರಿಸಿತ್ತು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ನಾವಿಕರಿದ್ದ ಈ ಹಡಗು, ಮಂಗಳೂರಿನ ಎನ್ನೆಂಪಿಟಿ ಬಂದರಿನಿಂದ 11,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಸಿಂಗಪುರ ಮಾರ್ಗವಾಗಿ ಚೀನಾಕ್ಕೆ ಹೊರಟಿತ್ತು. ಆದರೆ ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಅವಘಡ ಸಂಭವಿಸಿತ್ತು. ಸಿಂಗಪುರ ಮೂಲದ (ಡಚ್ ತಜ್ಞರೂ ಸೇರಿ) ವಿದೇಶಿ ವಿಮೋಚನಾ ತಂಡವು ಸ್ಥಳೀಯ ಯೋಜಕಾ ಸಂಸ್ಥೆಯ ನೆರವಿನೊಂದಿಗೆ ಕೇವಲ ಏಳು ದಿನಗಳಲ್ಲಿ ಹಡಗಿನ ರಕ್ಷಣೆ ಮಾಡಿದ್ದರು. ಅಲ್ಲದೇ ಸೆ.13ರಂದು ಆಳ ಸಮುದ್ರಕ್ಕೆ ಎಳೆದೊಯ್ದಿದ್ದರು. ಸುಮಾರು 2ಕೋಟಿ ರೂಪಾಯಿಯಷ್ಟು ವಿಮೋಚನಾ ವೆಚ್ಚವೂ ತಗುಲಿತ್ತು.

2007: ಮನೆ, ಬಸ್ ನಿಲ್ದಾಣ, ವಿಧಾನಸೌಧ, ಲೋಕಸಭಾ ಕಟ್ಟಡ, ವಿಮಾನ ನಿಲ್ದಾಣ, ಬಂದರು, ವಾಯುನೆಲೆ, ನೌಕಾನೆಲೆ ಮುಂತಾದ ಕಡೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ಹಾಗೂ ಅಪರಿಚಿತರು ಪ್ರವೇಶಿಸಿದರೆ ತಕ್ಷಣವೇ ಎಚ್ಚರಿಕೆಯನ್ನು ನೀಡುವ ತಂತ್ರಜ್ಞಾನವನ್ನು ಕನ್ನಡಿಗರೊಬ್ಬರ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ಸಿಂಗಪುರದ ಸಂಸ್ಥೆಯೊಂದು ಪ್ರಕಟಿಸಿತು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಎಸ್. ಶೇಖರ್ ಸಿಂಗಪುರದ ನ್ಯಾನೋಸಾಫ್ಟ್ ಟೆಕ್ನಾಲಜಿ ಸಂಸ್ಥೆಯಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು ಇಸ್ರೇಲಿನ ಡಾ. ಆಫಲ್ ಮಿಲ್ಲರ್ ಅವರ ಜೊತೆಗೂಡಿ ಸುರಕ್ಷತಾ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಿದರು. ಐವಿಎಸ್-1000, ಐವಿಎಸ್-3000 ಹಾಗೂ ಐವಿಎಸ್-5000 ಎಂಬ ಯಂತ್ರಗಳನ್ನು ಸಿದ್ಧಪಡಿಸಲಾಗಿದ್ದು ಈ ಯಂತ್ರಗಳನ್ನು ಕೈಗಾರಿಕೆ ಕಟ್ಟಡಗಳು, ವಿಮಾನ ನಿಲ್ದಾಣ, ನೌಕಾನೆಲೆ, ಬಂದರು, ಪೊಲೀಸ್ ಇಲಾಖೆ, ಅಪಾರ್ಟ್ ಮೆಂಟುಗಳು, ಬ್ಯಾಂಕು, ವಾಣಿಜ್ಯ ಸಂಕೀರ್ಣ, ಅಣೆಕಟ್ಟು ಮುಂತಾದ ಕಡೆ ಅಳವಡಿಸಿದರೆ ಸೂಕ್ತ ಸುರಕ್ಷತೆ ಒದಗಿಸುತ್ತದೆ ಎಂಬುದು ಶೇಖರ್ ಅಭಿಪ್ರಾಯ.

2007: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ವೇಳೆಯಲ್ಲಿ ಸಹ ಆಟಗಾರ ಮೊಹಮ್ಮದ್ ಆಸಿಫ್ ಮೇಲೆ ಹಲ್ಲೆ ನಡೆಸಿದ್ದ ಪಾಕಿಸ್ಥಾನ ತಂಡದ ವೇಗದ ಬೌಲರ್ ಶೋಯಬ್ ಅಖ್ತರ್ ಅವರಿಗೆ 13 ಏಕದಿನ ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಜೊತೆಗೆ 34 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಶಿಸ್ತು ಸಮಿತಿಯು ಈ ನಿರ್ಧಾರ ಕೈಗೊಂಡಿತು. ಅಖ್ತರ್ ತಂಡದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಸಮಿತಿ ಹೇಳಿತು.

2007: ಪ್ರಮುಖ ಖಾಸಗಿ ದೂರವಾಣಿ ಸೇವಾ ಕಂಪೆನಿ ಏರ್ಟೆಲ್, ಅಂತರ್ಜಾಲ ಸೇವೆಯನ್ನು ಪರಿಣಾಮಕಾರಿಯಾಗಿ ಪೂರೈಸುವ ಉದ್ದೇಶದಿಂದ ಪ್ರತಿ ಸೆಕೆಂಡಿಗೆ 8 ಮೆಗಾಬೈಟ್ (ಎಂಬಿಪಿಎಸ್) ಸಾಮರ್ಥ್ಯದ ಮಾಹಿತಿ ರವಾನೆ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಭಾರ್ತಿ ಏರ್ ಟೆಲ್ ಲಿಮಿಟೆಡ್ಡಿನ ಬ್ರಾಡ್ ಬ್ಯಾಂಡ್ ಮತ್ತು ಟೆಲಿಫೋನ್ ಸರ್ವೀಸಸ್ ಅಧ್ಯಕ್ಷ ಅತುಲ್ ಬಿಂದಾಲ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೊಂದು ವಿಶ್ವದರ್ಜೆ ಮಟ್ಟದ ಸೇವೆಯಾಗಿದ್ದು, ಅಧಿಕ ಸಾಮರ್ಥ್ಯದ ಅಂತರ್ಜಾಲ ಸೇವೆ ಒದಗಿಸುತ್ತಿರುವ ದೇಶದ ಪ್ರಥಮ ಖಾಸಗಿ ಕಂಪೆನಿ ಎನ್ನುವ ಹೆಗ್ಗಳಿಕೆಗೆ ಏರ್ ಟೆಲ್ ಪಾತ್ರವಾಗಿದೆ ಎಂದು ಅವರು ಹೇಳಿದರು. ಈ ಹೊಸ ಅಂತರ್ಜಾಲ ಸೇವೆಯಿಂದ ಏಕಕಾಲಕ್ಕೆ ಆಟ, ಚಿತ್ರ ವೀಕ್ಷಣೆ ಮತ್ತು ಮಾಹಿತಿ ಪಡೆಯುವ ಕಾರ್ಯವನ್ನು ಅತಿ ವೇಗವಾಗಿ ಮಾಡಬಹುದು. ಇದು ಏಕಕಾಲಕ್ಕೆ ಆನ್ ಲೈನ್ ಆಟ, ಸಂಗೀತ ಆಲಿಸುವುದು, ಚಿತ್ರ ವೀಕ್ಷಣೆ (ಕಲಿಕೆ, ಕೆಲಸ ಮತ್ತು ಆಟ ಆಡುವ) ಅವಕಾಶವನ್ನು ನೀಡುತ್ತದೆ.

2007: ಉತ್ತರಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಸಮೀಪ ಬಸ್ಸೊಂದು ಅಲಕನಂದಾ ನದಿಗೆ ಉರುಳಿ, ಅದರಲ್ಲಿ ಪ್ರಯಾಣಿಸುತ್ತಿದ್ದ 41 ಜನ ಬದರಿನಾಥ ಯಾತ್ರಿಗಳು ಮೃತರಾದರು. ಎಲ್ಲ ಯಾತ್ರಾರ್ಥಿಗಳು ಒರಿಸ್ಸಾದವರಾಗಿದ್ದು ಬದರಿನಾಥ ದರ್ಶನ ಪಡೆದು ಹೃಷಿಕೇಶಕ್ಕೆ ವಾಪಸಾಗುತ್ತಿದ್ದರು. ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್ ಉರುಳಿ 100 ಅಡಿಗಳಷ್ಟು ಕೆಳಗೆ ಹರಿಯುತ್ತಿದ್ದ ಅಲಕನಂದಾ ನದಿಯಲ್ಲಿ ಬಿದ್ದಿತು.

2007: ರೈತರಿಗೆ ವರದಾನವಾಗಬಲ್ಲ ಹೊಸ ಭೂಸ್ವಾಧೀನ ನೀತಿಯನ್ನು ಪ್ರಕಟಿಸಿದ ಕೇಂದ್ರ ಸರ್ಕಾರ, ಇದಕ್ಕಾಗಿ ಮರು ವಸತಿ ಹಾಗೂ ಮರು ನೆಲೆ ರಾಷ್ಟ್ರೀಯ ನೀತಿ-2007ಕ್ಕೆ ಒಪ್ಪಿಗೆ ನೀಡಿತು. 2003ರ ಕಾಯ್ದೆ ಬದಲಿಗೆ ಇದು ಅಸ್ತಿತ್ವಕ್ಕೆ ಬರುವುದು. ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಈ ಕುರಿತು ತೀರ್ಮಾನ ತೆಗೆದುಕೊಂಡು, ರೈತರ ಹಿತರಕ್ಷಣೆ ಕಾಪಾಡಲು ಬದ್ಧತೆ ವ್ಯಕ್ತಪಡಿಸಿತು. ಹೊಸ ನೀತಿಯನ್ನು ಜಾರಿಗೆ ತರುವ ಉದ್ದೇಶದಿಂದ 1894ರ ಭೂಸ್ವಾಧೀನ ಕಾಯಿದೆಗೆ ಶೀಘ್ರ ತಿದ್ದುಪಡಿ ತರಲಾಗುವುದು. ಇದರ ಅನ್ವಯ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರು ಯೋಜನೆ ಸ್ಥಳದ ಹತ್ತಿರವೇ ಪರ್ಯಾಯ ಭೂಮಿ ಪಡೆಯುವರು. ಜೊತೆಗೆ, ಅವರಿಗೆ ಅಲ್ಲಿ ಕೆಲಸವನ್ನೂ ನೀಡಲಾಗುವುದು. ಒಂದು ವೇಳೆ ಸಾಕಷ್ಟು ಪರ್ಯಾಯ ಭೂಮಿ ಲಭ್ಯವಿಲ್ಲದಿದ್ದರೆ, ಕಳೆದುಕೊಂಡ ಭೂಮಿಗೆ ನಗದು ಪರಿಹಾರ ದೊರೆಯುವುದು. ಕೃಷಿ ಭೂಮಿಗಿಂತ ಬಂಜರು ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಈ ರೀತಿ ವಶಪಡಿಸಿಕೊಂಡ ಭೂಮಿಯಲ್ಲಿ ಐದು ವರ್ಷದೊಳಗೆ ಉದ್ಯಮ ಪ್ರಾರಂಭವಾಗದಿದ್ದರೆ ಅದು ವಾಪಸ್ ಸರ್ಕಾರದ ವಶಕ್ಕೆ ಹೋಗುವುದು.

2006: `ಅಮರ ಕೋಲ್ಕತ್ತಾ' ಮತ್ತು `ಈಸ್ಟರ್ನ್ ಹಾರಿಜನ್' ಎಂಬ ಎರಡು ಪಾಕ್ಷಿಕ ನಿಯತಕಾಲಿಕಗಳನ್ನು ಅನುಕ್ರಮವಾಗಿ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾರತೀಯ ಜನಸಂಖ್ಯೆ ಹೆಚ್ಚಿರುವ ಕೆನಡಾದ ಟೊರೆಂಟೊದಲ್ಲಿ ಕೋಲ್ಕತ್ತಾದ ಮಹಿಳಾ ಉದ್ಯಮಿ ಬೂಬೂನ್ ಬಿಸ್ವಾಸ್ ಆರಂಭಿಸಿದರು. ದುರ್ಗಾ ಪೂಜೆಯ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು. ಬಿಸ್ವಾಸ್ ಅವರು ತಮ್ಮ ಪತಿಯೊಂದಿಗೆ ಕೆನಡಾಕ್ಕೆ ವಲಸೆ ಬಂದವರು.

2006: ಮುಸ್ತಾಖ್ ಶೇಖ್ ಅವರು ಬರೆದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೀವನ ಕುರಿತಾದ `ಸ್ಟಿಲ್ ರೀಡಿಂಗ್ ಖಾನ್' ಪುಸ್ತಕವನ್ನು ಮುಂಬೈಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕವು 460 ಪುಟಗಳನ್ನು ಒಳಗೊಂಡಿದೆ.

2006: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಫ್ರಾನ್ಸ್ ಸರ್ಕಾರವು ತನ್ನ ದೇಶದ ಅತ್ಯುನ್ನತ ಗೌರವವಾದ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಲೀಜನ್ ಆಫ್ ಆನರ್' ನ್ನು ಪ್ರಕಟಿಸಿತು.

2001: ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರಿಗೆ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.

1995: ಕ್ಲೋರೋಫ್ಲುರೋಕಾರ್ಬನ್ ಗಳು (ಸಿಎಫ್ ಸಿ) ಭೂಮಿಯ ಓಝೋನ್ ಪದರವನ್ನು ತಿಂದು ಹಾಕುತ್ತಿವೆ ಎಂದು ಎಚ್ಚರಿಸುವ ನಿಟ್ಟಿನಲ್ಲಿ ಮಾಡಿದ ರಾಸಾಯನಿಕ ಕ್ಷೇತ್ರದ ಸಾಧನೆಗಾಗಿ ಅಮೆರಿಕದ ಮಾರಿಯೋ ಮೊಲೀನಾ, ಶೆರ್ ವೂಡ್ ರಾಲೆಂಡ್ ಮತ್ತು ಡಚ್ ವಿಜ್ಞಾನಿ ಪೌಲ್ ಕ್ರಟ್ಜೆನ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. ಒಂದು ದಶಕಕ್ಕೂ ಮೊದಲೇ ಅಂಟಾರ್ಕ್ಟಿಕ್ ಓಝೋನ್ ಪದರದಲ್ಲಿ ತೂತು ಪತ್ತೆಯಾಗಿತ್ತು. ಈ ವಿಜ್ಞಾನಿಗಳ ಸಂಶೋಧನೆಯು ಓಝೋನ್ ಪದರವನ್ನು ರಕ್ಷಿಸಲು ಸಿಎಫ್ ಸಿಗಳ ಹೊಗೆಯನ್ನು ನಿಯಂತ್ರಿಸಬೇಕೆಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ತೀವ್ರಗೊಳ್ಳಲು ಸ್ಫೂರ್ತಿ ನೀಡಿತು.

1984: ಬಾಹ್ಯಾಕಾಶ ನೌಕೆ ಚಾಲೆಂಜರಿನ ಗಗನಯಾನಿ ಕಾಥಿ ಸುಲ್ಲಿವಾನ್ ಅವರು ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಅಮೆರಿಕನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1981: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ ಪಡುಕೋಣೆ ಅವರು ಕ್ವಾಲಾಲಂಪುರದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ವಿಶ್ವಕಪ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪಡುಕೋಣೆ ಅವರು ಪುರುಷರ ಸಿಂಗಲ್ಸ್ ಫೈನಲಿನಲ್ಲಿ ಚೀನಾದ ಅಗ್ರಮಾನ್ಯ ಆಟಗಾರ ಹ್ಯಾನ್ ಜಿಯಾನ್ ಅವರನ್ನು 15-10, 18-16ರಲ್ಲಿ ಪರಾಭವಗೊಳಿಸಿದರು.

1968: ಮೊತ್ತ ಮೊದಲ ಮಾನವ ಸಹಿತ ಅಪೋಲೊ 7 ಗಗನನೌಕೆಯನ್ನು ಗಗನಕ್ಕೆ ಹಾರಿಸಲಾಯಿತು. ವಾಲ್ಲಿ ಸಚಿರ್ರಾ, ಡಾನ್ ಫಾಲ್ಟನ್ ಐಸೆಲ್ ಮತ್ತು ಆರ್. ವಾಲ್ಟರ್ ಕನ್ಹಿಂಗಾಮ್ ಅವರು ಈ ಗಗನ ನೌಕೆಯಲ್ಲಿ ಇದ್ದರು.

1900: ಖ್ಯಾತ ಸಾಹಿತಿ ಭಾಸ್ಕರ ಆನಂದ ಸಾಲೆತ್ತೂರು (11-10-1900ರಿಂದ 18-12-1963) ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸಾಲೆತ್ತೂರು ಗ್ರಾಮದಲ್ಲಿನಾರಾಯಣ ರಾಯರು- ಪಾರ್ವತಿ ದಂಪತಿಯು ಮಗನಾಗಿ ಜನಿಸಿದರು.

No comments:

Advertisement