Wednesday, October 14, 2009

ಇಂದಿನ ಇತಿಹಾಸ History Today ಅಕ್ಟೋಬರ್ 14

ಇಂದಿನ ಇತಿಹಾಸ

ಅಕ್ಟೋಬರ್ 14

ಹಿರಿಯ ಪತ್ರಕರ್ತ ಎಂ. ವಿ. ಕಾಮತ್ ಅವರಿಗೆ ಕೋಯಿಕೋಡಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಅವರು ವಿ. ಎಂ. ಕೊರಾಟ್ ಪ್ರಶಸ್ತಿ ನೀಡಿ ಗೌರವಿಸಿದರು. ತಪಸ್ಯ ಕಲಾ ಸಾಹಿತ್ಯ ವೇದಿಕೆ ಸ್ಥಾಪಿಸಿರುವ ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಫಲಕ ಹೊಂದಿದೆ.

2008: ಮ್ಯೂಚುವಲ್ ಫಂಡ್ಗಳ ನಗದು ಹಣದ ಅಗತ್ಯ ಪೂರೈಸಲು ಮತ್ತು ಹಣ ಬಿಡುಗಡೆ ಒತ್ತಡ ನಿವಾರಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಅಲ್ಪಾವಧಿ ಸಾಲದ ರೂಪದಲ್ಲಿ ರೂ 20 ಸಾವಿರ ಕೋಟಿಗಳಷ್ಟು ಬಿಡುಗಡೆ ಮಾಡಲು ನಿರ್ಧರಿಸಿತು. ಹಣಕಾಸು ಮಾರುಕಟೆಯಲ್ಲಿ ಉದ್ಭವಿಸಿದ ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣ ಬಿಡುಗಡೆಯ ಒತ್ತಡ ನಿವಾರಿಸಿಕೊಳ್ಳಲು ಈ ಕ್ರಮವು ಫಂಡ್ಗಳಿಗೆ ಗಮನಾರ್ಹವಾಗಿ ನೆರವಾಗುವುದು.

2008: ಉತ್ತರ ಭಾರತದ ಐದು ರಾಜ್ಯಗಳಲ್ಲಿ ನವೆಂಬರ್ 14ರಿಂದ ಡಿ.4ರ ನಡುವೆ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ನಿರ್ಧರಿಸಿ ದಿನಾಂಕಗಳನ್ನು ಪ್ರಕಟಿಸಿತು.. ಆದರೆ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ಜಮ್ಮು - ಕಾಶ್ಮೀರದಲ್ಲಿ ತತ್ ಕ್ಷಣಕ್ಕೆ ಚುನಾವಣೆ ನಡೆಸದಿರಲು ಆಯೋಗ ತೀರ್ಮಾನಿಸಿತು. ಛತ್ತೀಸ್ಘಡ, ಮಧ್ಯಪ್ರದೇಶ, ದೆಹಲಿ, ಮಿಜೋರಾಂ ಮತ್ತು ರಾಜಸ್ಥಾನಗಳಲ್ಲಿ ಚುನಾವಣೆ ನಡೆಯುವುದು.

2008: ಕೀಲ್ಲಿನೋಚಿ ಪಟ್ಟಣದ ಮೇಲೆ ಹತೋಟಿ ಸಾಧಿಸಲು ನಡೆದ ಭೀಕರ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ ಮೂವರು ಯೋಧರು ಹಾಗೂ 38 ಮಂದಿ ಎಲ್ ಟಿ ಟಿ ಇ ಉಗ್ರರು ಹತರಾದರು. ಕೀಲ್ಲಿನೋಚಿ ಪಟ್ಟಣವನ್ನು ಭದ್ರತಾ ಪಡೆಗಳು ಸುತ್ತುವರೆದದ್ದರಿಂದ ಅಪಾರ ಪ್ರಮಾಣದ ಹಾನಿ ಅನುಭವಿಸಿದ ಎಲ್ಟಿಟಿಇ ಕದನವನ್ನು ತೀವ್ರಗೊಳಿಸಿದ್ದರಿಂದ ಸಾವು ನೋವುಗಳು ಹೆಚ್ಚಿದವು..

2008: ಹಿರಿಯ ಪತ್ರಕರ್ತ ಎಂ. ವಿ. ಕಾಮತ್ ಅವರಿಗೆ ಕೋಯಿಕೋಡಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಅವರು ವಿ. ಎಂ. ಕೊರಾಟ್ ಪ್ರಶಸ್ತಿ ನೀಡಿ ಗೌರವಿಸಿದರು. ತಪಸ್ಯ ಕಲಾ ಸಾಹಿತ್ಯ ವೇದಿಕೆ ಸ್ಥಾಪಿಸಿರುವ ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಫಲಕ ಹೊಂದಿದೆ.

2007: ದ್ವಿಪಕ್ಷೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಅಭಿವೃದ್ಧಿಗೆ ಕೊಡುಗೆ ನೀಡಿದ ರಷ್ಯಾದ ನಾಲ್ವರು ವಿಜ್ಞಾನಿಗಳಿಗೆ ಭಾರತವು ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ರಷ್ಯಾ ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಮಂಡಳಿಯ ಉಪಾಧ್ಯಕ್ಷೆ ಗೊರಿ ಮಾರ್ಚುಕ್ ರಷ್ಯಾದ ವಿಜ್ಞಾನ ಅಕಾಡೆಮಿಯ (ಆರ್ ಎ ಎಸ್) ಅಧ್ಯಕ್ಷ ಯುರಿ ಒಸಿಪೊವ್, ಆರ್ ಎ ಎಸ್ ನ ಅಜೈವಿಕ ರಾಸಾಯನಿಕ ಸಂಸ್ಥೆಯ ಎಫ್. ಖುಜ್ನೇತ್ಸೊವ್ ಮತ್ತು ಕಂಪ್ಯೂಟರ್ ಏಯ್ಡೆಡ್ ಡಿಸೈನಿನ ಒಲೆಗ್ ಬೆಲೊಟ್ಸೆರ್ ಅವರಿಗೆ ಪ್ರಶಸ್ತಿ ಲಭಿಸಿತು.

2007: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ವಾಡೋ ಅಂತಾರಾಷ್ಟ್ರೀಯ ಕರಾಟೆ ಸಂಸ್ಥೆ ಆಯೋಜಿಸಿದ ಸುಜುಕಿ ಕಪ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನ ಮಹಿಳೆಯರ ಬ್ಲ್ಯಾಕ್ ಬೆಲ್ಟ್ `ಕುಮಿಟೆ' (45-50 ಕೆ.ಜಿ.) ವಿಭಾಗದಲ್ಲಿ ಚಾಕಚಕ್ಯತೆಯ ಪ್ರದರ್ಶನ ನೀಡಿದ ತಾರಾ ಲೋಲನಾಥ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಆಗಿ ಹೊರಹೊಮ್ಮಿದರು.

2007: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಸೇನಾ ಕ್ರೀಡಾಕೂಟದ ನಾಲ್ಕನೇ ಅಧ್ಯಾಯವು ರಾಷ್ಟ್ರಪತಿ ಹಾಗೂ ಭಾರತೀಯ ಸೇನೆಯ ಪ್ರಧಾನ ದಂಡನಾಯಕಿ ಪ್ರತಿಭಾ ಪಾಟೀಲ್ ಅವರ `ಕ್ರೀಡಾಕೂಟ ಆರಂಭವಾಗಿದೆ' ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ಸಡಗರದೊಂದಿಗೆ ಆರಂಭಗೊಂಡಿತು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚಿತ್ತಾಕರ್ಷಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾತ್ಮಕ ಕಾರ್ಯಕ್ರಮಗಳು ಹಾಗೂ ಸೇನಾ ಪಡೆಯ ಶಕ್ತಿ ಪ್ರದರ್ಶನ ಗಚ್ಚಿಬೌಳಿಯ ಜಿ.ಎಂ.ಸಿ.ಬಾಲಯೋಗಿ ಕ್ರೀಡಾಂಗಣದಲ್ಲಿ ಸೇರಿದ್ದ ಸಹಸ್ರಾರು ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

2007: ಗುಜರಾತಿನ ಪಂಚಮಹಲಿನ ಪಾವಗಡ ಬೆಟ್ಟದ ಮೇಲಿನ ಪ್ರಸಿದ್ಧ ಮಹಾಕಾಳಿ ದೇವಸ್ಥಾನದ ಮಾರ್ಗದಲ್ಲಿ ಕಾಲ್ತುಳಿತದಿಂದ 15 ಭಕ್ತರು ಸಾವನ್ನಪ್ಪಿ , ಅನೇಕರು ಗಾಯಗೊಂಡರು. 2004ರಲ್ಲಿಯೂ ಇಲ್ಲಿ ಇಂತಹುದೇ ದುರಂತ ಸಂಭವಿಸಿ 9 ಮಂದಿ ಮೃತರಾಗಿದ್ದರು. ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಬೆಳಗ್ಗೆ ಸುಮಾರು 6 ಲಕ್ಷ ಭಕ್ತರು ದೇವಿ ದರ್ಶನಕ್ಕಾಗಿ ಸೇರಿದ್ದರು. ಬೆಟ್ಟದ ಇಕ್ಕಟ್ಟಾದ ಪಾಟಿಯಾಪುಲ್ ಬಳಿ ದಾರಿಯಲ್ಲಿ ಇಳಿಯುವವರು ಮತ್ತು ಹತ್ತುವವರ ನೂಕುನುಗ್ಗಲಿನಿಂದ ಈ ದುರಂತ ಸಂಭವಿಸಿತು.

2007: ಪಂಜಾಬಿನ ಲೂಧಿಯಾನದ ಶಿಂಗಾರ್ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ರಾತ್ರಿ ಬಾಂಬ್ ಸ್ಫೋಟ ಸಂಭವಿಸಿ ಆರು ಜನರು ಸತ್ತು ಇತರ 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ವಿವಾಹ ಬಾಹಿರ ಮತ್ತು ಅಕ್ರಮ ಸಂಬಂಧದಿಂದ ಹುಟ್ಟಿದ ಮಗು ಕೂಡ ತಂದೆಯಿಂದ ನಿರ್ವಹಣಾ ಭತ್ಯೆ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಅಪರಾಧ ದಂಡ ಸಂಹಿತೆ ಸೆಕ್ಷನ್ 125 ರ ಅನ್ವಯ ವಿವಾಹ ಬಾಹಿರ ಸಂಬಂಧದ ಮೂಲಕ ಜನಿಸುವ ಮಗುವಿಗೆ ತಂದೆ ನಿರ್ವಹಣಾ ಭತ್ಯೆ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಸ್.ಬಿ.ಸಿನ್ಹ ಹಾಗೂ ಹರ್ಜಿತ್ ಸಿಂಗ್ ಬೇಡಿ ಅವರನ್ನು ಒಳಗೊಂಡ ಪೀಠವು ಅಕ್ಟೋಬರ್ 12 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತು. ಈ ಸಂಬಂಧ ಡಿಂಪಲ್ ಗುಪ್ತಾ ಎಂಬುವವರು ತಮ್ಮ ತಾಯಿ ನರೇನ್ ದೇಸಾಯಿ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಅರ್ಜಿಯನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ತಳ್ಳಿಹಾಕಿತ್ತು. ಹೈಕೋರ್ಟ್ ಆದೇಶ ಬದಿಗಿರಿಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತು. ತಂದೆ ರಾಜೀವ್ ಗುಪ್ತ ಹಾಗೂ ತಾಯಿ ನರೇನ್ ದೇಸಾಯಿ ಹಿಮಾಚಲ ಪ್ರದೇಶದಲ್ಲಿ ಒಟ್ಟಿಗೆ ವಾಸವಾಗಿದ್ದಾಗ ತಾವು ಜನಿಸಿದ್ದು, ಈ ಹಿನ್ನೆಲೆಯಲ್ಲಿ ರಾಜೀಪ್ ಗುಪ್ತಾ ತಮಗೆ ನಿರ್ವಹಣಾ ವೆಚ್ಚ ನೀಡಬೇಕೆಂದು ಡಿಂಪಲ್ ಕೋರಿದ್ದರು. ನರೇನ್ ದೇಸಾಯಿ ರಾಮ್ ಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವಾಗಲೇ ಗರ್ಭವತಿ ಆಗಿದ್ದರು. ಆದರೆ ರಾಜೀವ್ ಗುಪ್ತ ಗರ್ಭಪಾತ ಮಾಡಿಸಿಕೊಳ್ಳುವಂತೆ ಆಕೆಗೆ ಬಲವಂತ ಮಾಡಿದ್ದರು. ವೈದ್ಯರು ಇದಕ್ಕೆ ಒಪ್ಪಿರಲಿಲ್ಲ ಎಂದು ಕೋರ್ಟಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

2007: ಅಮೆರಿಕದಿಂದ ಭಾರತಕ್ಕೆ ಆಮದಾಗುತ್ತಿರುವ ಸೇಬಿನ ಹಣ್ಣಿನಲ್ಲಿ ಸುಮಾರು 184 ಬಗೆಯ ಕೀಟಗಳು ಪತ್ತೆಯಾಗಿರುವುದಾಗಿ ಬ್ರಿಟನ್ ಮೂಲದ ಅಂತಾರಾಷ್ಟ್ರೀಯ ಕೃಷಿ ಸಂಘಟನೆ ಎಚ್ಚರಿಸಿತು. ಈ ಸಂಘಟನೆಯ ವರದಿ ಪ್ರಕಾರ, ಅಮೆರಿಕದಲ್ಲಿ ಬೆಳೆಯುವ ಸೇಬಿನಲ್ಲಿ 184 ಕ್ರಿಮಿ- ಕೀಟಗಳಿದ್ದು, ಇವುಗಳಲ್ಲಿ 94 ಕ್ರಿಮಿ-ಕೀಟಗಳನ್ನು ಫೈಟೋ ಸ್ಯಾನಿಟರಿ (ಸಸ್ಯ ಸಂಬಂಧಿ ರೋಗ ಪರೀಕ್ಷೆ) ಎಂಬ ಪರೀಕ್ಷೆಗೆ ಒಳಪಡಿಸಿ, ಇವುಗಳಿಂದ ಆಹಾರ ಸುರಕ್ಷತೆಗೆ ಏನಾದರೂ ತೊಂದರೆಯಾಗುತ್ತದೆಯೇ ಎಂಬುದನ್ನೂ ಅರಿಯಬೇಕೆಂದು ವರದಿ ಹೇಳಿತು. ವಿಶ್ವದಾದ್ಯಂತ ಸೇಬಿನಲ್ಲಿ 381 ಕ್ರಿಮಿ-ಕೀಟಗಳು ಕಂಡುಬಂದಿದೆ. ಅದರಲ್ಲಿ 111 ಕ್ರಿಮಿ-ಕೀಟಗಳು ಭಾರತದ ಸೇಬುಗಳಲ್ಲಿ ಇರುವುದಾಗಿ ಗೊತ್ತಾಗಿದೆ. ಇಂಥ ಕ್ರಿಮಿ-ಕೀಟಯುಕ್ತ ಹಣ್ಣುಗಳು ದೇಶದೊಳಕ್ಕೆ ಆಮದಾಗುವುದನ್ನು ತಡೆಯಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಪರ್ಕ ನಿಷೇಧ ವಿಭಾಗವನ್ನು ಮತ್ತಷ್ಟು ಚುರುಕುಗೊಳಿಸಬೇಕು. ಮಾತ್ರವಲ್ಲ, ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಸಸ್ಯ ಸಂರಕ್ಷಣಾ ಸಂಸ್ಥೆ ಹಣ್ಣುಗಳಲ್ಲಿ ಹೊಸ ಹೊಸ ಕ್ರಿಮಿ-ಕೀಟಗಳು ಉತ್ಪತ್ತಿಯಾಗುತ್ತಿರುವುದನ್ನು ಗುರುತಿಸಬೇಕು ಎಂದು ಎಂದು ಕೃಷಿ ಮತ್ತು ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಇಲಾಖೆಯ ನಿರ್ದೇಶಕ ಎಸ್. ದೇವ್ ಹೇಳಿದರು.

2006: ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ ಮೂನ್ ಅಧಿಕೃತವಾಗಿ ನಿಯುಕ್ತಿಗೊಂಡರು. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ 192 ಸದಸ್ಯ ರಾಷ್ಟ್ರಗಳು ಬಾನ್ ಆಯ್ಕೆಯನ್ನು ಸಮರ್ಥಿಸಿದವು. ಬಾನ್ ಅವಿರೋಧವಾಗಿ ವಿಶ್ವಸಂಸ್ಥೆಯ ಚುಕ್ಕಾಣಿ ಹಿಡಿದರು. ಇದಕ್ಕೂ ಮುನ್ನ ನಡೆದ ಪೂರಕ ಚುನಾವಣೆಗಳಲ್ಲಿ ಭಾರತದ ಶಶಿ ತರೂರ್ ಸೇರಿದಂತೆ ಇತರ ಸ್ಪರ್ಧಿಗಳನ್ನು ಬಾನ್ ಹಿಂದೆ ಹಾಕಿದ್ದರು.

2006: ಟೋಕಿಯೋ ಕರಾವಳಿ ಪ್ರದೇಶದಲ್ಲಿ ಬೆಳಗಿನ ಜಾವ ಭೂಕಂಪ ಸಂಭವಿಸಿತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ಇತ್ತು.

2006: ಕೊಲೆ ಬೆದರಿಕೆ ಹಾಕಿ ವಿಮಾನ ಅಪಹರಿಸಿದ್ದ ಪೀಟರ್ ಡಫ್ಫಿ ಎಂಬ ಅಪಹರಣಕಾರ ಏರ್ ಇಂಡಿಯಾದ ಮಾಜಿ ಪೈಲಟ್ ಉಮೇಶ ಸಕ್ಸೇನಾ ಅವರನ್ನು ಮುಂಬೈ ಹೊರವಲಯದ ಅವರ ಮನೆಯಲ್ಲಿ ಭೇಟಿ ಮಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಕೊಟ್ಟ ಮಾತನ್ನು ಈಡೇರಿಸಿದ. ಈ ವ್ಯಕ್ತಿ 1981ರ ನವೆಂಬರ್ 25ರಂದು 44 ಮಂದಿ ಕೂಲಿ ಸಿಪಾಯಿಗಳೊಂದಿಗೆ ವಿಮಾನಕ್ಕೆ ಮುತ್ತಿಗೆ ಹಾಕಿ ಸಕ್ಸೇನಾ ಅವರಿಗೆ ಕೊಲೆ ಬೆದರಿಕೆ ಹಾಕಿ 79 ಜನ ಪ್ರಯಾಣಿಕರ ಸಹಿತವಾಗಿ ಅವರು ಚಲಾಯಿಸುತ್ತಿದ್ದ ವಿಮಾನವನ್ನು ಸೀಷೆಲ್ಸ್ ವಿಮಾನ ನಿಲ್ದಾಣದಿಂದ ಡರ್ಬಾನಿಗೆ ಅಪಹರಿಸಿದ್ದ. ಡರ್ಬಾನಿನಲ್ಲಿ ವಿಮಾನದಿಂದ ಇಳಿದ ಬಳಿಕ ಭವಿಷ್ಯದಲ್ಲಿ ಒಂದು ದಿನ ಮತ್ತೆ ಭೇಟಿ ಮಾಡುವುದಾಗಿ ಸಕ್ಸೇನಾಗೆ ಮಾತು ನೀಡಿದ್ದ. ಆತ ವಿಮಾನ ಅಪಹರಣ ಕೃತ್ಯಕ್ಕಾಗಿ ದಕ್ಷಿಣ ಆಫ್ರಿಕಾದ ಸೆರೆಮನೆಯಲ್ಲಿ 20 ತಿಂಗಳ ಸೆರೆವಾಸ ಅನುಭವಿಸಿದ್ದ.

2004: ನಟ ಲೋಕೇಶ್ ನಿಧನ.

2004: ನಟಿ ನಿರೂಪಾ ರಾಯ್ ನಿಧನ.

2004: ಆರೆಸ್ಸೆಸ್ ಧುರೀಣ ದತ್ತೋಪಂತ ಠೇಂಗಡಿ ನಿಧನ.

1998: ಭಾರತೀಯ ಆರ್ಥಿಕತಜ್ಞ , ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಮಾಸ್ಟರ್, ಅಮರ್ತ್ಯಸೇನ್ ಅವರು ಅರ್ಥಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಗೆದ್ದುಕೊಂಡರು.

1997: ಅರುಂಧತಿ ರಾಯ್ ಅವರು ಸಾಹಿತ್ಯಕ್ಕಾಗಿ ನೀಡಲಾಗುವ `ಬೂಕರ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. ಅವರ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕಕ್ಕೆ ಈ ಪ್ರಶಸ್ತಿ ಬಂತು.

1991: ಬರ್ಮಾದ (ಈಗಿನ ಮ್ಯಾನ್ಮಾರ್) ವಿರೋಧ ಪಕ್ಷದ ನಾಯಕಿ ಅಂಗ್ ಸಾನ್ ಸು ಕೀ ಅವರು ತಮ್ಮ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಮಾಡಿದ ಹೋರಾಟಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದರು.

1983:ಡಾ. ಐ.ಜಿ. ಪಟೇಲ್ ಅವರು ಲಂಡನ್ನಿನ ಸ್ಕೂಲ್ ಆಫ್ ಇಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸಿನ ನಿರ್ದೇಶಕರಾಗಿ (ಡೈರೆಕ್ಟರ್) ನೇಮಕಗೊಂಡರು.

1980: ಕ್ರಿಕೆಟಿಗ ಎಸ್.ಎನ್. ಬ್ಯಾನರ್ಜಿ ನಿಧನ.

1971: ಸಾಹಿತಿ ಡಾ. ಸಂತೋಷ ಕುಮಾರ ಶೆಟ್ಟಿ ಜನನ.

1964: ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದರು.

1960: ಸಾಹಿತಿ ಎಸ್. ಮಂಜುನಾಥ್ ಜನನ.

1956: ಬಿ.ಆರ್. ಅಂಬೇಡ್ಕರ್ ಅವರು ನಾಗಪುರದಲ್ಲಿ ಮಹರ್ ಸಮುದಾಯಕ್ಕೆ ಸೇರಿದ ತಮ್ಮ 2 ಲಕ್ಷ ಮಂದಿ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಸೇರ್ಪಡೆಯಾದರು.

1947: ಎರಡನೇ ಜಾಗತಿಕ ಸಮರ ಕಾಲದ ಫೈಟರ್ ಪೈಲಟ್ ಚುಕ್ ಯೀಗರ್ ಅವರು ಶಬ್ದಕ್ಕಿಂತಲೂ ವೇಗವಾಗಿ ಸಾಗಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಕೆಟ್ ಚಾಲಿತ ಬೆಲ್ ಎಕ್ಸ್ ಎಸ್-1 ಏರ್ ಪ್ಲೇನ್ ಮೂಲಕ ಕ್ಯಾಲಿಫೋರ್ನಿಯಾದ ಮುರಾಕ್ ಡ್ರೈ ಲೇಕ್ ಮೇಲಿನಿಂದ ಹಾರಿ ಅವರು ಈ ಸಾಧನೆ ಮಾಡಿದರು.

1945: ಸಾಹಿತಿ ಮಾಲತಿ ರಾಮದಾಸ್ ಜನನ.

1944: ಜರ್ಮನ್ ಫೀಲ್ಡ್ ಮಾರ್ಷಲ್ ಎರ್ವಿನ್ ರೊಮ್ಮೆಲ್ ಆತ್ಮಹತ್ಯೆ ಮಾಡಿಕೊಂಡ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ವಿರುದ್ಧ ಒಳಸಂಚು ಆಪಾದನೆಗೆ ಗುರಿಯಾಗಿ ಮರಣದಂಡನೆ ಎದುರಿಸುವುದಕ್ಕೆ ಬದಲಾಗಿ ಆತ್ಮಹತ್ಯೆ ಲೇಸು ಎಂದು ಭಾವಿಸಿ ಆತ ಈ ಕೃತ್ಯ ಎಸಗಿದ.

1938: ಖ್ಯಾತ ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಜಾನಪದ ತಜ್ಞ ಸಿಂಪಿ ಲಿಂಗಣ್ಣ ಮತ್ತು ಸೊಬಲವ್ವ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ ಜನಿಸಿದರು.

1884: ಭಾರತೀಯ ಕ್ರಾಂತಿಕಾರಿ ಲಾಲಾ ಹರ ದಯಾಳ್ (1884-1939) ಜನ್ಮದಿನ.

No comments:

Advertisement