Saturday, October 31, 2009

ಇಂದಿನ ಇತಿಹಾಸ History Today ಅಕ್ಟೋಬರ್ 30

ಇಂದಿನ ಇತಿಹಾಸ

ಅಕ್ಟೋಬರ್ 30

ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

2008: ಅಸ್ಸಾಂನ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 61 ಮಂದಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡರು. ಭಾರತದ ಈ ಈಶಾನ್ಯ ರಾಜ್ಯದಲ್ಲಿ ಕೇವಲ ಒಂದು ಗಂಟೆ ಅವಧಿಯೊಳಗೆ ಒಂದರ ನಂತರ ಒಂದರಂತೆ 13 ಬಾಂಬುಗಳು ಸ್ಫೋಟಗೊಂಡವು. ಗುವಾಹಟಿ ನಗರದ ಜನನಿಬಿಡ ಮಾರುಕಟ್ಟೆ ಪ್ರದೇಶ ಮತ್ತು ಬರ್ಪೆಟಾ, ಕೋಕ್ರಜಾರ್ ಹಾಗೂ ಬೋಂಗಿಯಾಗಾಂವ್ ಜಿಲ್ಲೆಗಳಲ್ಲಿ ಏಕಕಾಲದಲ್ಲೇ ಈ ಬಾಂಬುಗಳು ಸ್ಫೋಟಿಸಿದವು.

2008: `ಚಂದ್ರಯಾನ-1' ಯಶಸ್ಸಿಗೆ ಕಾರಣರಾದ ಇಬ್ಬರು ವಿಜ್ಞಾನಿಗಳಾದ ಡಾ. ಎಸ್.ಕೆ.ಶಿವಕುಮಾರ್, ಎಂ.ಅಣ್ಣಾದೊರೈ, ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇನ್ಫೋಸಿಸ್ಸಿನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಟಿ.ವಿ.ಮೋಹನ್ ದಾಸ್ ಪೈ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 89 ಮಂದಿ ಗಣ್ಯರಿಗೆ 2008ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.

2008: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾತೃಭಾಷೆಯ ಜೊತೆಗೆ, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಅಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. 1994-95ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಅಂಗೀಕೃತವಾಗಿರುವ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿವರೆಗೆ ಮತ್ತು 2002-03ರಲ್ಲಿ ಅಂಗೀಕೃತವಾಗಿರುವ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆ ಆಗಿರಬೇಕು ಎಂಬ 2002ರ ಸರ್ಕಾರಿ ಆದೇಶವನ್ನು ರದ್ದು ಮಾಡಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇಂಗ್ಲಿಷ್ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಅಂಗೀಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ವ್ಯಾಸಂಗ ಮಾಡಲು ಅನುಮತಿ ನೀಡಬಹುದು. ಇಲ್ಲದಿದ್ದರೆ ಅಂತಹ ಶಾಲೆಗಳನ್ನು ಮುಚ್ಚಬೇಕು ಎಂದು ಸರ್ಕಾರದ 2002ರ ಆದೇಶವನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅನೂರ್ಜಿತಗೊಳಿಸಿದರು. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ 1994ರ ಸರ್ಕಾರದ ಆದೇಶದ ಕುರಿತು ಪೂರ್ಣಪೀಠ ಕಳೆದ ಜುಲೈ ತಿಂಗಳಿನಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ 2002ನೇ ಸಾಲಿನ ಈ ಆದೇಶವನ್ನು ರದ್ದು ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. 2002ರ ಮೇ 30ರಂದು ಸರ್ಕಾರ ಹೊರಡಿಸಿದ್ದ ಆದೇಶದ ರದ್ದತಿ ಕೋರಿ ಬೆಂಗಳೂರಿನ ಸೇಂಟ್ ಫಿಲೋಮಿನಾಸ್ ಇಂಗ್ಲಿಷ್ ಸ್ಕೂಲ್ ಸೇರಿದಂತೆ ರಾಜ್ಯದ ಹಲವಾರು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಯಿತು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟದ 129 ಶಾಸಕರು ಸಲ್ಲಿಸಿದ ವೈಯಕ್ತಿಕ ಪ್ರಮಾಣ ಪತ್ರವನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್, ಎರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಜಂಟಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲರು ಈ ವಿಷಯ ತಿಳಿಸಿದರು. ರಾಜಭವನದ ಈ ಬೆಳವಣಿಗೆಯಿಂದಾಗಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಒಂದು ರೀತಿಯ ಸಮಾಧಾನ ಕಂಡುಬಂದಿತು.

2007: ವಾಯುಭಾರ ಕುಸಿತದಿಂದಾಗಿ ಐದು ದಿನಗಳಿಂದ ಭಾರಿ ಹಿಂಗಾರು ಮಳೆಗೆ ಸಿಲುಕಿದ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಾದ ಕಡಪಾ, ನೆಲ್ಲೂರು, ಪ್ರಕಾಶಮ್ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 20 ಜನರು ಸಾವಿಗೀಡಾದರು.

2007: ವಿಶ್ವಕಪ್ ಫುಟ್ ಬಾಲ್ ಟೂರ್ನಿಗೆ ಆತಿಥ್ಯ ವಹಿಸಬೇಕೆಂಬ ಬ್ರೆಜಿಲ್ ದೇಶದ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. 2014ರ ವಿಶ್ವಕಪ್ ಟೂರ್ನಿ ದಕ್ಷಿಣ ಅಮೆರಿಕದ ಈ ದೇಶದಲ್ಲಿ ನಡೆಯುವುದು ಖಚಿತಗೊಂಡಿತು. ಬ್ರೆಜಿಲ್ ಸಲ್ಲಿಸಿದ್ದ ಬಿಡ್ ಗೆ ಕಳೆದ ವಾರವೇ ಫಿಫಾ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿತ್ತು. ವಿಶ್ವದ ಅತಿದೊಡ್ಡ ಕ್ರೀಡಾಮೇಳವನ್ನು ಸಂಘಟಿಸುವ ಅವಕಾಶ ಬ್ರೆಜಿಲ್ಲಿಗೆ ಲಭಿಸುವುದು ಆಗಲೇ ಖಚಿತವಾಗಿತ್ತು. ಇತರ ಯಾವುದೇ ದೇಶಗಳು ಬಿಡ್ ಸಲ್ಲಿಸಿರಲಿಲ್ಲ. 1950ರಲ್ಲಿ ಬ್ರೆಜಿಲಿನಲ್ಲಿ ಕೊನೆಯದಾಗಿ ವಿಶ್ವಕಪ್ ಟೂರ್ನಿ ನಡೆದಿತ್ತು. ಇದೀಗ 64 ವರ್ಷಗಳ ಬಳಿಕ ಮತ್ತೊಮ್ಮೆ ಅವರಿಗೆ ಆತಿಥ್ಯ ವಹಿಸುವ ಅವಕಾಶ ಒದಗಿತು. ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ಗೆ ಲಭಿಸಿದ ಈ ಅವಕಾಶವನ್ನು ಯಾರಾದರೂ ಕಿತ್ತುಕೊಳ್ಳಬಹುದೇ ಎಂಬ ಪ್ರಶ್ನೆಗೆ ಫಿಫಾ ಅಧ್ಯಕ್ಷ ಸೆಪ್ ಬಾಟ್ಲರ್, `ಇಲ್ಲ. ಹಾಗಾಗಲು ಸಾಧ್ಯವಿಲ್ಲ. ಬ್ರೆಜಿಲ್ ಈ ಅವಕಾಶದಿಂದ ವಂಚಿತವಾಗಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಯಾರೂ ಸ್ಪರ್ಧೆ ನೀಡುತ್ತಿಲ್ಲ' ಎಂದು ಜ್ಯೂರಿಚ್ಚಿನಲ್ಲಿ ಉತ್ತರಿಸಿದರು.

2007: ನಾಲ್ಕುನೂರು ವರ್ಷಗಳಷ್ಟು ದೀರ್ಘಕಾಲ ಬದುಕಿದ್ದ ಜೀವಿಯೊಂದು ಬ್ರಿಟನ್ ವಿಜ್ಞಾನಿಗಳಿಗೆ ಕರಾವಳಿಯ ಐಸ್ ಲ್ಯಾಂಡಿನಲ್ಲಿ ದೊರಕಿತು. ಈ ಜೀವಿ ಕಪ್ಪೆ ಚಿಪ್ಪಿನಲ್ಲಿ ಬದುಕುತ್ತಿತ್ತು. ವಿಜ್ಞಾನಿಗಳು ಈ ಪುರಾತನ ಜೀವಿಯ ಆಯಸ್ಸಿನ ಹಿಂದಿರುವ ಗುಟ್ಟನ್ನು ರಟ್ಟು ಮಾಡಲು ಮುಂದಾದರು. ವಿಜ್ಞಾನಿಗಳ ಪ್ರಕಾರ ಜೀವಿಯ ವಯಸ್ಸು 405ರಿಂದ 410 ವರ್ಷಗಳು. ಜೀವಿಗೆ ಮಿಂಗ್ ಎಂದು ಹೆಸರಿಡಲಾಯಿತು. ಮಿಂಗ್ ಎನ್ನುವುದು ಚೀನಾದ ಒಂದು ಸಾಮ್ರಾಜ್ಯದ ಹೆಸರು. ಜೀವಿ ಹುಟ್ಟುವಾಗ ಆ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು ಎಂಬುದು ವಿಜ್ಞಾನಿಗಳ ವಿವರಣೆ. ಮರಗಳ ವಯಸ್ಸನ್ನು ಅಳೆದಂತೆ ಈ ಜೀವಿಯ ವಯಸ್ಸನ್ನು ಆ ಜೀವಿಯ ಕಪ್ಪೆಚಿಪ್ಪಿನ ಮೇಲಿನ ಗೆರೆಗಳನ್ನು ಆಧರಿಸಿ ಅಂದಾಜಿಸಲಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ `ಮಿಂಗ್' ಲಭ್ಯವಾಗುವುದಕ್ಕೆ ಮುನ್ನ 1982ರಲ್ಲಿ 220 ವರ್ಷ ಬದುಕಿದ್ದ ಜೀವಿಯೊಂದು ಸಿಕ್ಕಿತ್ತು. ಆಮೆಗಳೂ ಸುದೀರ್ಘ ವರ್ಷಗಳ ಕಾಲ ಬದುಕಿದ ಉದಾಹರಣೆಗಳಿವೆ.

2006: ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ತನ್ನ ಜಲಾನಯನ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನ ಅಮೆರಿಕದ ಪ್ರತಿಷ್ಠಿತ `ಜಿಮ್ಮಿ ಅಂಡ್ ರೋಸಲಿನ್ ಪಾರ್ಟ್ನರ್ ಶಿಪ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯ ಮೊತ್ತ 10,000 ಅಮೆರಿಕನ್ ಡಾಲರುಗಳು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕದಿಂದ ಹೊರಗಿನ ಜಂಟಿ ಕಾರ್ಯಕ್ರಮವೊಂದಕ್ಕೆ ನೀಡಿರುವುದು ಇದೇ ಮೊದಲು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಸಮುದಾಯಗಳು ಪಾಲ್ಗೊಳ್ಳುವಂತೆ ಮಾಡಿ ಜನರನ್ನು ತಲುಪುವಂತಹ ವಿಶೇಷ ಕಾರ್ಯಕ್ರಮ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವಾರ್ಷಿಕ ಕಾರ್ಟರ್ ಪಾರ್ಟ್ನರ್ ಶಿಪ್ ಯೋಜನೆಯು ಈ ಪ್ರಶಸ್ತಿಯನ್ನು ನೀಡುತ್ತದೆ. ನೆರೆಯ ಹಳ್ಳಿಯೊಂದರಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೇ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸಮೀಕ್ಷೆ ನಡೆಸಿ, ಕಾಲುವೆ, ಬದುಗಳನ್ನು ನಿರ್ಮಿಸಿ ನೀರು ಇಂಗಲು ವ್ಯವಸ್ಥೆ ಮಾಡಿದ್ದಲ್ಲದೆ 10,000 ಗಿಡಗಳನ್ನೂ ನೆಟ್ಟು ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ. ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ಗೆದ್ದಿರುವ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ರಮವಾಗಿ 3000 ಅಮೆರಿಕನ್ ಡಾಲರ್ ಹಾಗೂ 2000 ಅಮೆರಿಕನ್ ಡಾಲರುಗಳನ್ನು ಪಡೆದಿವೆ. ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸಾಕ್ಷರತೆ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಉತ್ತರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕಾಗಿ ಈ ಪ್ರಶಸ್ತಿ ಬಂದಿದೆ.

2006: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟ ಹಂತಕ ಸಂತೋಷ ಕುಮಾರ್ ಸಿಂಗ್ ಗೆ ದೆಹಲಿ ಹೈಕೋರ್ಟ್ ಮರಣದಂಡನೆ ವಿಧಿಸಿತು. ನ್ಯಾಯಮೂರ್ತಿಗಳಾದ ಆರ್. ಎಸ್. ಸೋಧಿ ಮತ್ತು ಪಿ.ಕೆ. ಭಾಸಿನ್ ಅವರ ಪೀಠವು ಹಂತಕ ಸಂತೋಷನನ್ನು ಸಾಯುವ ತನಕ ಗಲ್ಲಿಗೆ ಏರಿಸಬೇಕು ಎಂದು ಆದೇಶ ನೀಡಿತು. 1996ರ ಜನವರಿ 3ರಂದು ಸಹಪಾಠಿ ಪ್ರಿಯದರ್ಶಿನಿ ಮನೆಗೆ ಬಂದ ಸಂತೋಷ ಕುಮಾರ್ ಸಿಂಗ್ ಆಕೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ.

2006: ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ರಂಗಬಳಗದವರಿಂದ ಗೋಕರ್ಣದ ಓಂ ಬೀಚಿನಲ್ಲಿ `ಆವರ್ತನ' ನಾಟಕ ಪ್ರದರ್ಶನಗೊಂಡಿತು. ಮಾನಸಾ ಹೆಗಡೆ ರಚಿಸಿ, ಕೆ.ಆರ್. ಪ್ರಕಾಶ ನಿರ್ದೇಶಿಸಿದ ಈ ನಾಟಕದ ಪ್ರದರ್ಶನ ಸಮುದ್ರದ ತೆರೆಗಳ ಮಧ್ಯೆ ನಡೆದು ಇದನ್ನು ಒಂದು ಅಪರೂಪದ ಪ್ರಯೋಗವನ್ನಾಗಿಸಿತು.

2005: ಜಗತ್ತಿನ ಅತ್ಯಂತ ಪುರಾತನ ಖಗೋಲ ವೀಕ್ಷಣಾಲಯ ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿ ಪತ್ತೆಯಾಯಿತು. 4300 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಇದನ್ನು ಖಗೋಲ ವಿದ್ಯಮಾನ ವೀಕ್ಷಣೆ ಹಾಗೂ ಧಾರ್ಮಿಕ ಬಲಿ ಪದ್ಧತಿಗೂ ಬಳಸಲಾಗುತ್ತಿತ್ತು ಎಂಬುದು ಪುರಾತತ್ವ ಸಂಶೋಧಕರ ವರದಿ.

2005: ತಾವು ಕಲಿತ ಶಾಲೆಯಲ್ಲಿಯೇ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮುಂದಿನ 15 ವರ್ಷಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಮುಂಬೈಯ ಕನ್ನಡತಿ ಸಿ.ಆರ್. ಶ್ಯಾಮಲ ತಮ್ಮ 70ನೇ ವಯಸ್ಸಿನಲ್ಲಿ ಪಿ. ಎಚ್. ಡಿ. ಪದವಿ ಪಡೆದುಕೊಂಡರು. ಅವರು ಆಯ್ದುಕೊಂಡಿದ್ದ ವಿಷಯ `ಪೂರ್ವ ಕರ್ನಾಟಕದ ಪಾಳೆಯಗಾರರು'. ಡಾ. ವಿಶ್ವನಾಥ ಕಾರ್ನಾಡ್ ಹಾಗೂ ಡಾ. ಶ್ರೀನಿವಾಸ ಹಾವನೂರು ಮಾರ್ಗದರ್ಶಕರಾಗಿದ್ದರು.

1996: ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

1996: ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಶಿವಸೇನೆಯ ಮೊದಲ ಸಭೆ.

1990: ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯತ್ತ ಹೊರಟಿದ್ದ ಕರ ಸೇವಕರನ್ನು ತಡೆಯಲು ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಹಲವರ ಸಾವು.

1956: ಭಾರತದ ಪ್ರಪ್ರಥಮ ಪಂಚತಾರಾ ಡಿಲಕ್ಸ್ ಹೋಟೆಲ್ `ಅಶೋಕ' ನವದೆಹಲಿಯ್ಲಲಿ ಉದ್ಘಾಟನೆಗೊಂಡಿತು.

1945: ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಮೂಲ ರಾಷ್ಟ್ರಗಳ ಪೈಕಿ ಒಂದಾಗಿ ವಿಶ್ವಸಂಸ್ಥೆಗೆ ಸೇರ್ಪಡೆಯಾಯಿತು.

1928: ಆರ್ಯ ಸಮಾಜದ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರು ಲಾಹೋರಿನಲ್ಲಿ ಸೈಮನ್ ಕಮೀಷನ್ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾಗ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡರು. ಇದೇ ಗಾಯಗಳ ಪರಿಣಾಮವಾಗಿ ಅವರು ನವೆಂಬರ್ 17ರಂದು ಮೃತರಾದರು.

1909: ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ (1909-66) ಜನ್ಮದಿನ. ಭಾರತೀಯ ಪರಮಾಣು ಯೋಜನೆಗೆ ಅಡಿಗಲ್ಲನ್ನು ಇಟ್ಟ ಭಾಭಾ 1966ರಲ್ಲಿ ಸ್ವಿಸ್ ಆಲ್ಪ್ಸ್ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಸುನೀಗಿದರು.

1895: ಜರ್ಮನ್ ಬ್ಯಾಕ್ಟೀರಿಯಾ ತಜ್ಞ ಗೆರ್ಹಾರ್ಡ್ ಡೊಮಾಗ್ಕ್ (1895-1964) ಜನ್ಮದಿನ. ಪ್ರೊಟೆನ್ ಸಿಲ್ ನ ಬ್ಯಾಕ್ಟೀರಿಯಾ ನಿರೋಧಿ ಪರಿಣಾಮಗಳ ಕುರಿತ ಸಂಶೋಧನೆಗಾಗಿ ಅವರಿಗೆ 1939ರಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಆದರೆ ನಾಝಿ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಲು ಅವಕಾಶ ನೀಡಲಿಲ್ಲ. ಈ ರೀತಿ ನಿರಾಕರಿಸಿದ್ದು ನೊಬೆಲ್ ಪ್ರಶಸ್ತಿಗಳ ಚರಿತ್ರೆಯಲ್ಲಿ ಇದೇ ಪ್ರಥಮವೆನ್ನಿಸಿತು. ನಂತರ 1947ರಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

1888: ಮೊದಲ ಬಾಲ್ ಪಾಯಿಂಟ್ ಪೆನ್ ಗೆ ಹಕ್ಕುಸ್ವಾಮ್ಯ.

1883: ಆರ್ಯ ಸಮಾಜದ ಸ್ಥಾಪಕ, ಸಮಾಜ ಸುಧಾರಕ ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿ (1824-83) ಅವರು ನಿಧನರಾದರು.

No comments:

Advertisement