Saturday, December 12, 2009

ಇಂದಿನ ಇತಿಹಾಸ History Today ನವೆಂಬರ್ 22

ಇಂದಿನ ಇತಿಹಾಸ

ನವೆಂಬರ್ 22

ಕಲರ್ಸ್‌ ಟಿವಿಯಲ್ಲಿ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದ  'ಬಿಗ್ ಬಾಸ್' ರಿಯಾಲಿಟಿ ಶೋದ ಅಂತಿಮ ಸುತ್ತಿನಲ್ಲಿ ಅಶುತೋಷ್ ಕೌಶಿಕ್ ವಿಜಯಿಯಾದರು. ರಿಯಾಲಿಟಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ಹಾಗೂ ಸ್ಪರ್ಧಾಳುಗಳ ಹಾಜರಿಯಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ಅಶುತೋಷ್ ಹೆಸರು ಮಹಾರಾಷ್ಟ್ರದ ಲೋನಾವಾಲಾದಲ್ಲಿ ಈ ವಿಚಾರ ಪ್ರಕಟಿಸಿದರು

2014:  ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧವಾದ ಕಂಬಳವನ್ನು ದ.ಕ. ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿತು. ಆದೇಶದಲ್ಲಿ ಕಂಬಳವನ್ನು ಆಯೋಜಿಸುವುದು ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆ 1960ರ ಸೆಕ್ಷನ್ 3ರ ಉಲ್ಲಂಘನೆಯಾಗುತ್ತದೆ ಹಾಗಾಗಿ ಕಂಬಳವನ್ನು ನಿಷೇಧಿಸಿರುವುದಾಗಿ ತಿಳಿಸಲಾಯಿತು. ಪಶು ಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆ ಸುಪ್ರೀಂಕೋರ್ಟ್ 2014ರ ಮೇ 7ರಂದು ನೀಡಿದ್ದ ಆದೇಶ ಮತ್ತು ಭಾರತೀಯ ಪ್ರಾಣಿ ಸಂರಕ್ಷಣಾ ಸಮಿತಿಯ ನಿರ್ದೇಶನದಂತೆ ನಿಷೇಧವನ್ನು ಹೇರಲಾಯಿತು. ಹಿಂದಿನ ವಾರ ಉಡುಪಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಂಬಳವನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿದ್ದರೆ ಕಂಬಳ ಆಯೋಜಕರ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಶು ಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ತಿಪ್ಪೇಸ್ವಾಮಿ ತಿಳಿಸಿದರು. ಈಮಧ್ಯೆ ರಾಜ್ಯ ಸರ್ಕಾರ ಕಂಬಳವನ್ನು ನಿಷೇಧಿಸದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿತು. ಕಂಬಳ ಕರಾವಳಿ ಭಾಗದ ಸಂಸ್ಕೃತಿಯ ಪ್ರತೀಕ, ಇದನ್ನು ಆಯೋಜಿಸುವುದರಿಂದ ಪ್ರಾಣಿಗಳಿಗೆ ಯಾವುದೇ ಹಿಂಸೆ ಉಂಟಾಗುವುದಿಲ್ಲ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು

2014:ನವದೆಹಲಿ: ದೆಹಲಿಯ ಜಾಮಾ ಮಸೀದಿ ನೂತನ ಮೌಲ್ವಿಯಾಗಿ ಪುತ್ರ ಶಬಾನ್ ಬುಖಾರಿಗೆ ಶಾಹಿ ಇಮಾಮ್​ಸಯ್ಯದ್ ಅಹ್ಮದ್ ಬುಖಾರಿ ಅಧಿಕಾರ ಹಸ್ತಾಂತರಿಸಿದರು.
ಜಾಮಾ ಮಸೀದಿ ವಕ್ಪ್ ಆಸ್ತಿಯೆಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, ನೂತನ ಮೌಲ್ವಿ ನೇಮಕಕ್ಕೆ ಮಾನ್ಯತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡದ್ದರೂ ಶಾಹಿ ಇಮಾಮ್ ಈದಿನ ಅಧಿಕಾರ ಹಸ್ತಾಂತರ ಮಾಡಿದರು.



2014: ಬೀಜಿಂಗ್
: ಪತ್ನಿ ಅನುಭವಿಸುವ ಪ್ರಸವ ವೇದನೆಯನ್ನು ಕಡೆಗಣಿಸುವ ಪುರುಷರಿಗಾಗಿ ಚೀನಾದ ಆಸ್ಪತ್ರೆಯೊಂದರಲ್ಲಿ ವಿಶಿಷ್ಟ ವ್ಯವಸ್ಥೆ ಜಾರಿಗೆ ತಂದಿತು. ಪುರುಷರಿಗೂ ಪ್ರಸವ ವೇದನೆಯ ಕಷ್ಟ ತಿಳಿಸಲು
ಚೀನಾದ ಶಾಂಗ್ಡೊಂಗ್ ಪ್ರಾಂತದಲ್ಲಿರುವ ಐಮಾ ಮೆಟರ್ನಿಟಿ ಆಸ್ಪತ್ರೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇದರ ಮೂಲಕ ಪುರುಷರೂ ಪ್ರಸವದ ವೇಳೆ ಮಹಿಳೆಯರಿಗಾಗುವ ನೋವಿನ ಅನುಭವ ಪಡೆದುಕೊಳ್ಳಬಹುದು. ವಾರದಲ್ಲಿ ಎರಡು ದಿನ ವಿಶಿಷ್ಠ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದಕ್ಕೆ ಆಸ್ಪತ್ರೆ ಯಾವುದೇ ಶುಲ್ಕವನ್ನು ಸ್ವೀಕರಿಸುತ್ತಿಲ್ಲ. ಪ್ರಸವಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ಹಲವು ಮಹಿಳೆಯರು ತಮ್ಮ ಪತಿ ತಮಗಾಗುವ ಪ್ರಸವ ವೇದನೆಯನ್ನು ಕಡೆಗಣಿಸುತ್ತಾರೆ. ಸಹಾನುಭೂತಿಯನ್ನೂ ತೋರಿಸುತ್ತಿಲ್ಲ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಕ್ರಮ ಕೈಗೊಂಡಿತು. ನೋವಿನ ಅನುಭವ ಹೇಗಾಗುತ್ತದೆ? ಪುರುಷರ ಹೊಟ್ಟೆ ಭಾಗದಲ್ಲಿ ಸಣ್ಣ ಉಪಕರಣವೊಂದನ್ನು ಅಳವಡಿಸಲಾಗುತ್ತದೆ. ಡಿವೈಸ್ ಮೂಲಕ ವಿದ್ಯುತ್ ಹರಿಸಲಾಗುತ್ತದೆ. ಇದರಿಂದ ಪುರುಷರಿಗೆ ಮಹಿಳೆಯರಿಗಾಗುವಂತೆ ನೋವು ಕಾಣಿಸಿಕೊಳ್ಳಲಿದೆ. 5 ನಿಮಿಷಗಳ ಕಾಲ ವಿದ್ಯುತ್ ಹರಿಸಲಾಗುತ್ತದೆ. ವಿದ್ಯುತ್ ಹರಿವಿಗೆ 1ರಿಂದ 10ರವರೆಗೆ ಸ್ಕೇಲ್ ನಿಗದಿಪಡಿಸಲಾಗಿದ್ದು, ಈಗಾಗಲೇ ಸಾಕಷ್ಟು ಪುರುಷರು ಪರೀಕ್ಷೆಗೊಳಪಟ್ಟಿದ್ದಾರೆ. ಇದರಿಂದ ಪುರುಷರ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.

2008: ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಎ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೃಷಿ ಮಿಷನ್ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಅಧಿಕಾರೇತರ ಸದಸ್ಯರಾಗಿ ಶಿವಮೊಗ್ಗದ ಪ್ರಗತಿಪರ ರೈತ ಡಾ. ಪ್ರಫುಲ್ಲಚಂದ್ರ, ಹುನಗುಂದದ ಮಲ್ಲಣ್ಣ ನಾಗರಾಳ್, ಬಾಗಲಕೋಟೆಯ ಬೆನಕಟ್ಟೆಯ ಎಸ್.ಎನ್. ಅಮಟಪ್ಪನವರ್, ಗುಲ್ಬರ್ಗದ ಬಸವರಾಜ ಜೀವಣಗಿ, ಬೆಳಗಾವಿಯ ಶರದ್ ಪೈ, ರಾಯಚೂರಿನ ಪ್ರೊ. ಸಿ.ಪಾಟೀಲ್, ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತ ಕುಲಪತಿಗಳಾದ ಡಾ.ಮಹದೇವಪ್ಪ ಹಾಗೂ ಡಾ. ಎಸ್.ಬಿಸಲಯ್ಯ, ಗುಲ್ಬರ್ಗದ ಬಸವರಾಜ ಇಂಗಿನ್, ಬಿಎಐಎಫ್‌ನ ಜಿ.ಎನ್.ಎಸ್.ರೆಡ್ಡಿ, ಲಕ್ಷ್ಮೀಶ ತೋಳ್ಪಾಡಿ, ಕೋಲಾರದ ಪಾಪಮ್ಮ ಅವರನ್ನು ಸರ್ಕಾರ ನೇಮಿಸಿತು.

2008:  ಕಲರ್ಸ್‌ ಟಿವಿಯಲ್ಲಿ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದ  'ಬಿಗ್ ಬಾಸ್' ರಿಯಾಲಿಟಿ ಶೋದ ಅಂತಿಮ ಸುತ್ತಿನಲ್ಲಿ ಅಶುತೋಷ್ ಕೌಶಿಕ್ ವಿಜಯಿಯಾದರು. ರಿಯಾಲಿಟಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ಹಾಗೂ ಸ್ಪರ್ಧಾಳುಗಳ ಹಾಜರಿಯಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ಅಶುತೋಷ್ ಹೆಸರು ಮಹಾರಾಷ್ಟ್ರದ ಲೋನಾವಾಲಾದಲ್ಲಿ ಈ ವಿಚಾರ ಪ್ರಕಟಿಸಿದರು. ಕೊಡಗು ಮೂಲದ ರೂಪದರ್ಶಿ ಜುಲ್ಫಿ ಸಯ್ಯದ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ರಾಜಾ ಚೌಧುರಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

2008:  ಮಲೇಷ್ಯಾದಲ್ಲಿ ಕೆಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ 'ಯೋಗ ನಿಷೇಧ' ವಿಷಯವು ನಿರ್ಣಾಯಕ ಹಂತಕ್ಕೆ ಬಂದಿತು. ಅಲ್ಲಿನ ಅತ್ಯುಚ್ಚ ಇಸ್ಲಾಮ್ ಸಮಿತಿಯು ಈದಿನದಿಂದ ಅನ್ವಯವಾಗುವಂತೆ ಯೋಗದ ಮೇಲೆ ನಿಷೇಧ ವಿಧಿಸಿತು. ರಾಷ್ಟ್ರೀಯ ಫತ್ವಾ ಮಂಡಲಿ ಧಾರ್ಮಿಕ ಆದೇಶವನ್ನು ಹೊರಡಿಸಿ ಯೋಗದ ಆಚರಣೆಯಲ್ಲಿ ತೊಡಗಲು ಮುಸ್ಲಿಮರಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಎಂದು ಹೇಳಿತು. ಯೋಗವು ಕೇವಲ ಅಂಗಸಾಧನೆಯನ್ನು ಮಾತ್ರ ಒಳಗೊಂಡಿಲ್ಲ. ದೈವ ಪೂಜೆ ಹಾಗೂ ಮಂತ್ರ ಪಠಣವನ್ನೂ ಅದು ಒಳಗೊಂಡಿದ್ದು, ಇಸ್ಲಾಮಿನಲ್ಲಿ ಅವಕ್ಕೆ ಅವಕಾಶವಿಲ್ಲ ಎಂದೂ ಆದೇಶದಲ್ಲಿ ವಿವರಿಸಲಾಯಿತು.  2.7 ಕೋಟಿ ಜನಸಂಖ್ಯೆಯ ಈ ರಾಷ್ಟ್ರದ ಮೂರನೇ ಎರಡು ಭಾಗದಷ್ಟು ಜನ ಮುಸ್ಲಿಮರಾಗಿದ್ದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾದ ಯೋಗಾಭ್ಯಾಸದ ಪ್ರಭಾವದೆಡೆಗೆ ಇಸ್ಲಾಮ್ ಧರ್ಮೀಯರು ಹೆಚ್ಚೆಚ್ಚು ಆಕರ್ಷಿತರಾಗಬಹುದು ಎಂಬ ಚಿಂತೆಯೇ ಫತ್ವಾ ಮಂಡಳಿಯ ಈ ನಿರ್ಧಾರಕ್ಕೆ ಕಾರಣವೆಂದು ವಿಶ್ಲೇಷಿಸಲಾಯಿತು. ಈ ಮಧ್ಯೆ, 'ಸಿಸ್ಟರ್ಸ್‌ ಇನ್ ಇಸ್ಲಾಮ್' ಎಂಬ ಸರ್ಕಾರೇತರ ಸಂಘಟನೆಯೊಂದು ಫತ್ವಾ ಮಂಡಳಿಯ ನಿಲುವನ್ನು ವಿರೋಧಿಸಿತು. ಫತ್ವಾ ಮಂಡಲಿಯು ರಾಷ್ಟ್ರದ ಮಹಿಳೆಯರನ್ನು, ವಿಶೇಷವಾಗಿ ಮುಸ್ಲಿಮ್ ಸ್ತ್ರೀಯರನ್ನು ಮುಂಚಿನಿಂದಲೂ ತಾರತಮ್ಯ ದೃಷ್ಟಿಯಿಂದ ಹಾಗೂ ಭೋಗದ ವಸ್ತುವೆಂಬಂತೆಯೇ ನೋಡಿಕೊಂಡು ಬಂದಿದೆ ಎಂದು ಸಂಘಟನೆ ಟೀಕಿಸಿತು.

2008: ಒಂದು ಕಾಲದ ವೈರಿಯಾಗಿದ್ದ ಲಿಬಿಯಾಕ್ಕೆ 36 ವರ್ಷಗಳ ನಂತರ ರಾಯಭಾರಿಯನ್ನು ಕಳುಹಿಸಲು ಅಮೆರಿಕ ಸೆನೆಟ್ ಒಪ್ಪಿಗೆ ನೀಡಿತು. ಅಮೆರಿಕದ ಹಿರಿಯ ರಾಯಭಾರಿ ಜಿನಿ ಕ್ರೆಟ್ಜ್ ಅವರನ್ನು ಈ ಸ್ಥಾನಕ್ಕೆ ಸೆನೆಟ್ ನಿಯೋಜಿಸಿತು.

2007: `ಕರ್ನಾಟಕದಲ್ಲಿ ಯಾರ ಜೊತೆಗೂಡಿಯೂ ಸರ್ಕಾರ ರಚಿಸುವುದಿಲ್ಲ, ವಿಧಾನಸಭೆ ವಿಸರ್ಜನೆ ಖಂಡಿತ. ಇದು ಸ್ಫಟಿಕದಷ್ಟು ಸ್ಪಷ್ಟ.' ಎಂಬುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ನವದೆಹಲಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಾರಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು. `ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ನವೆಂಬರ್ 21ರಂದು ಮಂಡಿಸಲಾಗಿದೆ. ಅಲ್ಲಿ ಅಂಗೀಕಾರ ಸಿಕ್ಕಿದ ನಂತರ ವಿಧಾನಸಭೆ ವಿಸರ್ಜನೆಯಾಗಲಿದೆ. ಅದಕ್ಕೆ ಮತ್ತೊಮ್ಮೆ ಸಂಪುಟ ಸಭೆ ಸೇರುವ ಅಗತ್ಯವೂ ಇಲ್ಲ' ಎಂದು ಸಿಂಘ್ವಿ ಸ್ಪಷ್ಟ ಪಡಿಸಿದರು.

2007: ಕೊಪ್ಪಳದ ವಸಂತ ಕುಷ್ಟಗಿ, ಚಿತ್ರದುರ್ಗದ ಬಿ.ಎಲ್.ವೇಣು, ನಂಜನಗೂಡಿನ ಮುಳ್ಳೂರು ನಾಗರಾಜ್, ಮೈಸೂರಿನ ಡಾ. ಕೆ.ವಿ.ನಾರಾಯಣ ಹಾಗೂ ಧಾರವಾಡದ ಹೇಮಾ ಪಟ್ಟಣಶೆಟ್ಟಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಈ ವಿಚಾರವನ್ನು ಪ್ರಕಟಿಸಿದರು.

2007: ಕೆಳ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾರುವೇಷದ ಕಾರ್ಯಾಚರಣೆ ನಡೆಸಿ ಪ್ರಸಾರ ನಡೆಸಿದ ಖಾಸಗಿ ದೂರದರ್ಶನ ವಾಹಿನಿ ಹಾಗೂ ಅದರ ವರದಿಗಾರ ಬೇಷರತ್ ಕ್ಷಮಾಪಣೆ ಕೇಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನು ಒಳಗೊಂಡ ಪೀಠವು ಪ್ರತಿವಾದಿಗಳು ಸಲ್ಲಿಸಿದ ಪ್ರಮಾಣ ಪತ್ರದ ಬಗ್ಗೆ ಸಂತೃಪ್ತರಾಗದೆ ಪ್ರಕರಣದ ಬಗ್ಗೆ  4 ವಾರಗಳ ನಂತರ ವಿಚಾರಣೆ ನಡೆಸಲು ಸೂಚಿಸಿತು. ಜೀ ಟಿವಿ 2004ರಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸಿ `ಕ್ಯಾಶ್ ಫಾರ್ ವಾರಂಟ್ ಸ್ಕಾಮ್' ಕಾರ್ಯಕ್ರಮ ಬಿತ್ತರಿಸಿತ್ತು. ಅದರಲ್ಲಿ ಅಹಮದಾಬಾದಿನ ಮೂವರು ವಕೀಲರು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ, ಅಂದಿನ ಅಪೆಕ್ಸ್ ಕೋರ್ಟಿನ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಮತ್ತು ಹಿರಿಯ ವಕೀಲ ದಿ.ಆರ್.ಕೆ. ಜೈನ್ ವಿರುದ್ಧ ಜಾಮೀನು ವಾರಂಟ್ ಪಡೆಯಲು ರೂ.40,000 ಲಂಚ ಪಡೆದಿರುವ ಬಗ್ಗೆ ಬಿತ್ತರಿಸಲಾಗಿತ್ತು. 

2007: ಉತ್ತರ ಅಮೆರಿಕದಲ್ಲಿ ಕೃತಜ್ಞತಾ ಸ್ಮರಣೆ ದಿನ ಆಚರಿಸಲಾಯಿತು. ಸುಗ್ಗಿಯ ಹಿನ್ನೆಲೆಯ ಈ ಸಂಭ್ರಮದ ಹಬ್ಬ `ಥ್ಯಾಂಕ್ಸ್ ಗಿವಿಂಗ್' ಆಚರಣೆ ಎಂದೇ ಪ್ರಸಿದ್ಧಿ ಪಡೆದಿದೆ. ಈ ಸಂಬಂಧ ಒಂದು ದಿನ ಮೊದಲು ನೆವಾಡಾದಲ್ಲಿನ ಇಗರ್ಜಿಯೊಂದರಲ್ಲಿ (ಚರ್ಚ್) ನಡೆದ ಆರಾಧನೆಯ ಸಂದರ್ಭದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸಲಾಯಿತು. ನೆವಾಡಾದ ರಿನೋ ಪ್ರದೇಶದಲ್ಲಿರುವ ಎಪಿಸ್ಕೋಪಲ್ ಇಗರ್ಜಿಯಲ್ಲಿ ಆರಾಧನೆ ನಡೆದಾಗ ಪಾದ್ರಿ ರಜನ್ ಜೇಡ್ ಅವರು, ಋಗ್ವೇದ, ಉಪನಿಷತ್ ಹಾಗೂ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು.

2007: ಸುಸ್ತಿದಾರರಿಂದ ಸಾಲ ವಸೂಲಿಗೆ ನೇಮಿಸಿಕೊಂಡ ಖಾಸಗಿ ಸಂಸ್ಥೆಯು ಕಾರು ಜಪ್ತಿ ಮಾಡಿಕೊಂಡದ್ದಕ್ಕಾಗಿ ಪುಣೆಯ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯವು, ಸಾಲ ಪಡೆದ ಮಹಿಳೆಗೆ ರೂ 1 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿಗೆ ಆದೇಶಿಸಿತು. ಬ್ಯಾಂಕಿನ ಗ್ರಾಹಕರಾಗಿರುವ ರೇಣು ಭಂಡ್ವಾಳಕರ್ ಅವರಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ ಈ ಮೊತ್ತದ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಸೂಚಿಸಿತು. ಸಾಲ ವಸೂಲಿಗೆ ತಾವು ನೀಡಿದ್ದ ಸಲಹೆಯನ್ನು ಬ್ಯಾಂಕ್ ಸಮರ್ಪಕವಾಗಿ ಪಾಲಿಸಿರಲಿಲ್ಲ. ತಮ್ಮ ಉಳಿತಾಯ ಖಾತೆಯಿಂದ ಸಾಲದ ಮೊತ್ತ ಮರು ಪಾವತಿ ಮಾಡಿಕೊಳ್ಳಲು ನೀಡಿದ್ದ ಚೆಕ್ಕುಗಳನ್ನು ಸರಿಯಾಗಿ ಬಳಸದ ಕಾರಣಕ್ಕೆ ತಾವು ಸುಸ್ತಿದಾರರಾಗಬೇಕಾಯಿತು. ಇದೇ ನೆಪ ಮುಂದಿಟ್ಟುಕೊಂಡು ಸಾಲ ವಸೂಲಿ ಏಜೆಂಟರು ತಮ್ಮ ಕಾರನ್ನು ಜಪ್ತಿ ಮಾಡಿಕೊಂಡಿದ್ದರು. ಅದರಲ್ಲಿ ಲ್ಯಾಪ್ ಟಾಪ್ ಅಳವಡಿಸಲಾಗಿತ್ತು ಎಂದು ರೇಣು ಅವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿ 9 ಕಾರ್ಮಿಕರು ಮೃತರಾಗಿ 12 ಮಂದಿ ಗಂಭೀರವಾಗಿ ಗಾಯಗೊಂಡರು.

2006: ಕ್ಯಾನ್ಸರ್ ಅಥವಾ ಅಣು ವಿಕಿರಣ ಕಾಯಿಲೆಗೆ ಆಯುರ್ವೇದದ `ತ್ರಿಫಲ' ಚೂರ್ಣ ರಾಮಬಾಣ ಎಂದು ಮುಂಬೈಯ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿ ಎ ಆರ್ ಸಿ) ಜೊತೆಗೆ ಈ ಹಿಂದೆ ಕೆಲಸ ಮಾಡಿದ್ದ ಖ್ಯಾತ ವಿಕಿರಣ ಜೀವ ಶಾಸ್ತ್ರಜ್ಞ ಎಂ.ಪಿ. ಮಿಶ್ರ ಪ್ರತಿಪಾದಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಐದನೇ ಅಂತಾರಾಷ್ಟ್ರೀಯ `ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಕನಿಷ್ಠ ಪ್ರಮಾಣದ ವಿಕಿರಣ ಪರಿಣಾಮ' (ಲೋ ಡೋಸ್ ರೇಡಿಯೇಷನ್ ಎಫೆಕ್ಟ್ಸ್ ಆನ್ ಹ್ಯೂಮನ್ ಹೆಲ್ತ್ ಮತ್ತು ಎನ್ವಿರಾನ್ ಮೆಂಟ್) ಸಮಾವೇಶದಲ್ಲಿ ಈ ವಿಚಾರ ತಿಳಿಸಿದರು. ತ್ರಿಫಲ ಚೂರ್ಣವು ಅಳಲೆ, ನೆಲ್ಲಿ ಹಾಗೂ ತಾರೆ ಕಾಯಿಗಳ ಸಮ ಪ್ರಮಾಣದ ಮಿಶ್ರಣದಿಂದ ತಯಾರಾಗುವ ಚೂರ್ಣ. ಈ ಚೂರ್ಣಕ್ಕೆ ಕ್ಯಾನ್ಸರಿನಂತಹ ಮಾರಣಾಂತಿಕ ರೋಗ ನಿವಾರಿಸುವ ಶಕ್ತಿ ಇದೆ. ಅದು ದೇಹದ ರೋಗ ನಿರೋಧಕ ಶಕ್ತಿ ವರ್ಧಕ. ಅದು ಬೇಧಿ ನಿವಾರಕ ಟಾನಿಕ್ ಅಷ್ಟೇ ಅಲ್ಲ, ಶೀತ, ಜ್ವರ, ಗ್ಯಾಸ್ಟ್ರಿಕ್ ಹಾಗೂ ಅಲರ್ಜಿಯಂತಹ ಇತರ ಕಾಯಿಲೆಗಳಿಗೂ ಸಿದ್ಧೌಷಧ. ತ್ರಿಫಲ ಔಷಧದ ಮತ್ತೊಂದು ವಿಶೇಷ ಗುಣವೆಂದರೆ, ಮನುಷ್ಯನ ದೇಹದೊಳಗೆ ಇದು ಹೊಕ್ಕ ಕೂಡಲೇ, ರೋಗಗ್ರಸ್ತ ಹಾಗೂ ಆರೋಗ್ಯಯುತ ಜೀವಕೋಶಗಳನ್ನು ಗುರುತಿಸುತ್ತದೆ. ರೋಗಗ್ರಸ್ತವಾದವುಗಳನ್ನು ಕೊಂದು, ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತದೆ. ಆರೋಗ್ಯಯುತ ಜೀವಕೋಶಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಮಿಶ್ರ ವಿವರಣೆ. ಡಾ. ಮಿಶ್ರ, ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಸೈನಿಕರಿಗೆ ಅಣುವಿಕಿರಣದಿಂದ ಉಂಟಾಗುವ ತೊಂದರೆ ನಿವಾರಣೆ ಹಾಗೂ ಅವರ ದೇಹಕ್ಕೆ ಬಂದೆರಗುವ ರೋಗಗಳನ್ನು ಶಮನಗೊಳಿಸಲು ಔಷಧ ಕಂಡು ಹಿಡಿಯವ ಯೋಜನೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ತ್ರಿಫಲದಲ್ಲಿ ಇಂಥ ಶಕ್ತಿಯುತ ಔಷಧವಿದೆ ಎಂದು ಕಂಡು ಹಿಡಿದಿರುವ ಡಾ.ಸಂಧ್ಯಾ ಅವರು ಈ ಯೋಜನೆಯ ಸದಸ್ಯರಲ್ಲಿ ಒಬ್ಬರು.

2006: ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗಿರುವ ಕನ್ನಡದ ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ಸಿಂಡಿಕೇಟ್ ಸಭೆ ನಿರ್ಧರಿಸಿತು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿದ್ದರಿಂದ ಒಂಬತ್ತು ಕಾರ್ಮಿಕರು ಮೃತರಾಗಿ 12 ಮಂದಿ ಗಾಯಗೊಂಡರು.

2006: ಚಲನಚಿತ್ರಗಳ ಹಂಚಿಕೆದಾರ, `ಟ್ರಿಣ್ ಟ್ರಿಣ್' ಚಿತ್ರದ ನಿರ್ಮಾಪಕ ಎ.ಎನ್. ರಂಗಸ್ವಾಮಿ (57) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ ಅಸೀಮಾ ಚಟರ್ಜಿ (90) ಕೋಲ್ಕತ್ತಾದಲ್ಲಿ ನಿಧನರಾದರು. ಶುದ್ಧ ರಸಾಯನಶಾಸ್ತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಸೀಮಾ, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಪದ್ಮಭೂಷಣ ವಿಜೇತರೂ ಆಗಿದ್ದ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು.

2005: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು)- ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತ ಗಳಿಸುವ ಮೂಲಕ ಲಾಲೂ ಪ್ರಸಾದ್ ಯಾದವ್ ಅವರ 15 ವರ್ಷಗಳ `ಲಾಲೂ ಯುಗ'ಕ್ಕೆ ಮಂಗಳ ಹಾಡಿತು.

2005: ಹಿರಿಯ ಬಾಲಿವುಡ್ ಚಿತ್ರ ನಿರ್ದೇಶಕ, `ನಗೀನಾ' ಹಾಗೂ `ನಿಗಾಹೇಂ' ಚಿತ್ರಗಳ ಖ್ಯಾತಿಯ ಹರ್ಮೇಶ್ ಮಲ್ಹೋತ್ರಾ (66) ಅವರು ಮುಂಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಪಾಕಿಸ್ಥಾನದ ಖುಸಬ್ ಪ್ರಾಂತ್ಯದಲ್ಲಿ ಜನಿಸಿದ್ದ ಮಲ್ಹೋತ್ರಾ ದೇಶವಿಭಜನೆ ಬಳಿಕ ಆಗ್ರಾಕ್ಕೆ ವಲಸೆ ಬಂದಿದ್ದರು. ಪದವಿ ಪಡೆದ ನಂತರ ಚಿತ್ರೋದ್ಯಮದಲ್ಲಿ ಭವಿಷ್ಯ ಅರಸಿ ಮುಂಬೈಗೆ ಬಂದಿದ್ದರು. 70ರ ದಶಕದಲ್ಲಿ ಬಿಡುಗಡೆಯಾದ `ಬೇಟಿ' ಅವರ ಚೊಚ್ಚಲ ಚಿತ್ರ. ಸಂಜಯಖಾನ್ ಮತ್ತು ನಂದಾ ಇದರಲ್ಲಿ ನಟಿಸಿದ್ದರು. 1972ರಲ್ಲಿ ತಮ್ಮದೇ ಆದ ಎಚ್.ಎಂ. ಪ್ರೊಡಕ್ಷನ್ಸ್ ಸ್ಥಾಪಿಸಿ `ಗದ್ದಾರ್' ಚಿತ್ರ ನಿರ್ದೇಶಿಸಿದರು. ರಿಷಿ ಕಪೂರ್, ಶ್ರೀದೇವಿ ಹಾಗೂ ಅಮರೇಶಪುರಿ ನಟಿಸಿದ `ನಗೀನಾ' ಚಿತ್ರ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು. ನಂತರ ಅದರ ಮುಂದಿನ ಭಾಗವಾಗಿ `ನಿಗಾಹೇಂ' ಬಂತು. ಗೋವಿಂದ ನಟಿಸಿದ `ದುಲ್ಹೆ ರಾಜಾ' ಕೂಡಾ ಅವರ ಯಶಸ್ವಿ ಚಿತ್ರಗಳ ಪೈಕಿ ಒಂದು.

2005: ಹಿರಿಯ ಪತ್ರಕರ್ತ ಎಂ. ಮಲ್ಲಿಕಾರ್ಜುನಯ್ಯ ಬೆಂಗಳೂರಿನಲ್ಲಿ ನಿಧನರಾದರು. 'ಪೊಲೀಸ್ ನ್ಯೂಸ್' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಅವರು 'ಆದರ್ಶ ಗಂಡ ಹೆಂಡತಿ' ಮಾಸಪತ್ರಿಕೆ, ಮುಂಬೈಯಲ್ಲಿ `ಕರ್ನಾಟಕ ಮಲ್ಲ' ದಿನಪತ್ರಿಕೆ ಹಾಗೂ ಮಂಗಳೂರಿನಲ್ಲಿ `ಮಂಗಳೂರು ಮಿತ್ರ' ಸಂಜೆ ಪತ್ರಿಕೆ ಆರಂಭಿಸಿ ಯಶಸ್ಸು ಪಡೆದಿದ್ದರು.

1990: ಬ್ರಿಟನ್ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.

2000: ಜೆಕ್ ಓಟಗಾರ ಎಮಿಲ್ ಝಾಟೊಪೆಕ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 5000 ಮತ್ತು 10,000 ಮೀಟರ್ ಓಟಗಳಲ್ಲಿ ಭಾಗವಹಿಸಿ ಅವರು ದಾಖಲೆ ನಿರ್ಮಿಸಿದ್ದರು.

1986: ಕಾನ್ಪುರದಲ್ಲಿ ನಡೆದ ಶ್ರೀಲಂಕಾ ಜೊತೆಗಿನ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 34ನೇ ಟೆಸ್ಟ್ ಸೆಂಚುರಿ (176) ಸಿಡಿಸಿದರು.

1967: ಜರ್ಮನಿಯ ಟೆನಿಸ್ ಆಟಗಾರ ಬೋರಿಸ್ ಬೆಕರ್ ಹುಟ್ಟಿದ ದಿನ. ವಿಂಬಲ್ಟನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಕಿರಿಯ ಟೆನಿಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

1963: ಅಮೆರಿಕಾದ ಅಧ್ಯಕ್ಷ ಕೆನಡಿ ಅವರನ್ನು ಡಲ್ಲಾಸಿನಲ್ಲಿ ಮೋಟಾರು ವಾಹನ ರ್ಯಾಲಿಯಲ್ಲಿಪಾಲ್ಗೊಂಡ್ದಿದಾಗ ಕೊಲೆಗೈಯಲಾಯಿತು. ಟೆಕ್ಸಾಸಿನ ಗವರ್ನರ್ ಜಾನ್ ಬಿ. ಕೊನ್ನಾಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಶಂಕಿತ ವ್ಯಕ್ತಿ ಲೀ ಹಾರ್ವೇ ಓಸ್ವಾಲ್ಡನನ್ನು ಬಂಧಿಸಲಾಯಿತು. ಉಪಾಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ಅಮೆರಿಕದ 36ನೇ ಅಧ್ಯಕ್ಷರಾದರು.

1956: ಸಾಹಿತಿ ಅಕ್ಕಮಹಾದೇವಿ ಜನನ.

1939: ಖ್ಯಾತ ಸಂಶೋಧಕ, ಅನುವಾದಕ, ಪ್ರೊ. ಬಾಲಚಂದ್ರ ಜಯಶೆಟ್ಟಿ ಅವರು ಭೀಮಣ್ಣ- ಜಯಮ್ಮ ದಂಪತಿಯ ಮಗನಾಗಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಜನಿಸಿದರು.

1919: ಸಾಹಿತಿ ಸೀತಮ್ಮ ನಂಜೇಗೌಡ ಜನನ.

1902: ಸಾಹಿತಿ ಚುಳುಕಿ ಗೋವಿಂದ ವೆಂಕಟೇಶ ಜನನ.

1774: ಯೋಧ ಹಾಗೂ ಬಂಗಾಳದ ಮೊತ್ತ ಮೊದಲ ಬ್ರಿಟಿಷ್ ಆಡಳಿತಗಾರ ರಾಬರ್ಟ್ ಕ್ಲೈವ್ ತನ್ನ 49 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿಗಳಲ್ಲಿ ಈತನೂ ಒಬ್ಬ.


(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement