Wednesday, February 3, 2010

ಇಂದಿನ ಇತಿಹಾಸ History Today ಜನವರಿ 04

ಇಂದಿನ ಇತಿಹಾಸ

ಜನವರಿ 04

ಕಠ್ಮಂಡುವಿನ ಐತಿಹಾಸಿಕ ಪಶುಪತಿನಾಥ ದೇವಸ್ಥಾನದ ವಿವಾದವನ್ನು ರಾಜಕೀಯಕರಣಗೊಳಿಸದಂತೆ ನೇಪಾಳದ ಪದಚ್ಯುತ ದೊರೆ ಜ್ಞಾನೇಂದ್ರ ಜನರಲ್ಲಿ ಮನವಿ ಮಾಡಿದರು. ಮಾವೊವಾದಿ ಸರ್ಕಾರದಿಂದ ಪದಚ್ಯುತಗೊಳ್ಳುವ ಮುನ್ನ ದೇವಾಲಯದ ಪೋಷಕರಾಗಿದ್ದ ಅವರು, ಹೊಸದಾಗಿ ಹುಟ್ಟಿಕೊಂಡ ವಿವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

2009: ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರು 'ಯಾವುದೇ ದೇಶಕ್ಕೆ ಸೇರದವರು' ಎಂಬ ಪಾಕಿಸ್ಥಾನದ ವಾದವನ್ನು ಗೃಹ ಸಚಿವ ಪಿ. ಚಿದಂಬರಮ್ ಅವರು ಸ್ಪಷ್ಟವಾಗಿ ಅಲ್ಲಗಳೆದರು. ಶಂಕಿತ ದಾಳಿಕೋರರನ್ನು ಭಾರತದ ವಶಕ್ಕೆ ನೀಡುವುದು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪುನರುಚ್ಚರಿಸಿತು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡ ಇದೆ ಎನ್ನುವುದಕ್ಕೆ ಅಮೆರಿಕದ ಫೆಡರಲ್ ತನಿಖಾ ತಂಡವು (ಎಫ್‌ಬಿಐ) ತಾನು ಕಲೆಹಾಕಿರುವ ಸಾಕ್ಷ್ಯಾಧಾರಗಳನ್ನು ಪಾಕಿಸ್ಥಾನಕ್ಕೆ ನೀಡಿತು. 'ಮುಂಬೈ ಮುತ್ತಿಗೆ'ಯ ಸ್ವರೂಪ ಮತ್ತು ಸಂಚಿನ ತೀವ್ರತೆ ಗಮನಿಸಿದರೆ ಉಗ್ರರಿಗೆ ಪಾಕಿಸ್ಥಾನವೇ ನೆರವಾಗಿರುವುದು ದೃಢಪಟ್ಟಿದೆ. ಪಾಕಿಸ್ಥಾನ ಮತ್ತೊಮ್ಮೆ ಇಂತಹ ದುಃಸ್ಸಾಹಸಕ್ಕೆ ಕೈ ಹಾಕಿದರೆ ಅದು ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ಚಿದಂಬರಮ್ ಎಚ್ಚರಿಕೆ ನೀಡಿದರು.

2009: ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆದ ಮೂರನೇ ಸುತ್ತಿನ ಮಾತುಕತೆಯೂ ವಿಫಲವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾರಿಗಳು ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದವು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬ್ರಹ್ಮ ದತ್ ಅವರು ಅಖಿಲ ಭಾರತ ಟ್ರಕ್ ಸಾರಿಗೆ ಕಾಂಗ್ರೆಸ್ ಜತೆಗೆ ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿತು. ಡೀಸೆಲ್ ಬೆಲೆ ಇಳಿಕೆ, ಟೋಲ್ ತೆರಿಗೆ ರದ್ದು, 'ಕ್ಯಾರಿಯರ್ಸ್‌ ಕಾಯ್ದೆ'ಯ ತಿದ್ದುಪಡಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಈ ಮುಷ್ಕರಕ್ಕೆ ಕರೆ ನೀಡಿತ್ತು.

2009: ಕಠ್ಮಂಡುವಿನ ಐತಿಹಾಸಿಕ ಪಶುಪತಿನಾಥ ದೇವಸ್ಥಾನದ ವಿವಾದವನ್ನು ರಾಜಕೀಯಕರಣಗೊಳಿಸದಂತೆ ನೇಪಾಳದ ಪದಚ್ಯುತ ದೊರೆ ಜ್ಞಾನೇಂದ್ರ ಜನರಲ್ಲಿ ಮನವಿ ಮಾಡಿದರು. ಮಾವೊವಾದಿ ಸರ್ಕಾರದಿಂದ ಪದಚ್ಯುತಗೊಳ್ಳುವ ಮುನ್ನ ದೇವಾಲಯದ ಪೋಷಕರಾಗಿದ್ದ ಅವರು, ಹೊಸದಾಗಿ ಹುಟ್ಟಿಕೊಂಡ ವಿವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಧಾರ್ಮಿಕ ಸೌಹಾರ್ದದ ಕಾರಣಕ್ಕಾಗಿಯೇ ವಿಶ್ವದಲ್ಲಿ ಮಾನ್ಯತೆ ಪಡೆದಿರುವ ನೇಪಾಳ, ಅದನ್ನು ಮುಂದುವರಿಸಿಕೊಂಡು ಹೋಗಬೇಕು. ದೇವಸ್ಥಾನದ ದೈನಂದಿನ ಆಚರಣೆಗಳು, ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಹಿಂದೊಮ್ಮೆ ಭಗವಾನ್ ವಿಷ್ಣುವಿನ ಅವತಾರವೆಂದೇ ಜನರು ಪರಿಗಣಿಸುತ್ತಿದ್ದ ಆಗಿನ ದೊರೆ ಜ್ಞಾನೇಂದ್ರ ಹೇಳಿಕೆಯಲ್ಲಿ ಕೋರಿದರು.

2009: ಶ್ರೀಲಂಕಾ ಸೇನಾ ಪಡೆಯು ಎಲ್‌ಟಿಟಿಇ ಬಂಡುಕೋರರ ರಾಜಕೀಯ ರಾಜಧಾನಿ ಕೀಲಿನೋಚ್ಚಿ ವಶಪಡಿಸಿಕೊಂಡ ಬಳಿಕ ಉತ್ತರದಲ್ಲಿರುವ ಇನ್ನೊಂದು ಭದ್ರನೆಲೆ ಎಲಿಫೆಂಟ್ ಪಾಸ್ ಸ್ವಾಧೀನ ಪಡಿಸಿಕೊಳ್ಳಲು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿತು. ಕೀಲಿನೋಚ್ಚಿ ಕೊಲಂಬೊದಿಂದ 350 ಕಿ.ಮೀ ಅಂತರದಲ್ಲಿದ್ದರೆ, ಎಲಿಫೆಂಟ್‌ ಪಾಸ್ ಕೀಲಿನೋಚ್ಚಿಯಿಂದ 12 ಕಿ.ಮೀ ದೂರದಲ್ಲಿ ಜಾಫ್ನಾ-ಕ್ಯಾಂಡಿ ಮುಖ್ಯ ಹೆದ್ದಾರಿಯ ಬಳಿಯ ಜಾಗ. ಲಂಕಾಪಡೆ ಕೀಲಿನೋಚ್ಚಿ ಹಾಗೂ ಪರಂತನ್‌ನಿಂದ ಇನ್ನಷ್ಟು ಮುಂದೆ ಕಾರ್ಯಾಚರಣೆ ನಡೆಸಿದ್ದು ಎಲಿಫೆಂಟ್‌ ಪಾಸ್‌ನಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ ಎಂದು ಸೇನಾ ಮೂಲಗಳು ಹೇಳಿದವು. 2000ರ ಏಪ್ರಿಲಿನಲ್ಲಿ ಸೇನಾನೆಲೆ ಎಲಿಫೆಂಟ್‌ ಪಾಸ್ ಅನ್ನು ಎಲ್‌ಟಿಟಿಇ ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಂತರದ ದಿನಗಳಲ್ಲಿ ಇದು ಉಗ್ರರ ಭದ್ರ ನೆಲೆಯಾಗಿ ಮಾರ್ಪಟ್ಟಿತ್ತು.

2008: ವಿದ್ಯುತ್ ಚಾಲಿತ ಕಳೆಕೊಚ್ಚುವ ನೂತನ ಯಂತ್ರವನ್ನು ದಾವಣಗೆರೆ ಜಿಲ್ಲೆ ಶಾಮನೂರಿನ ಬಿ.ಆರ್. ಬಸವರಾಜ್ ಶೋಧಿಸಿದ್ದು, ಕಡಿಮೆ ವೆಚ್ಚದಲ್ಲಿ ಸಾಮಾನ್ಯ ರೈತರೂ ಬಳಸಬಹುದು ಎಂದು ರೈತ ಎಸ್.ಎಂ. ಪ್ರಭುದೇವಯ್ಯ ದಾವಣಗೆರೆಯಲ್ಲಿ ಬಹಿರಂಗಪಡಿಸಿದರು. ಈಗಾಗಲೇ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಚಾಲಿತ ಯಂತ್ರ ಅಧಿಕ ಬೆಲೆ ಹಾಗೂ ವೆಚ್ಚದಾಯಕವಾಗಿದ್ದು, ಅದಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾದ ಈ ನೂತನ ಸಾಧನವನ್ನು ಅತ್ಯಂತ ಕಡಿಮೆ ಬೆಲೆಗೆ ರೈತರಿಗೆ ನೀಡಲಾಗುವುದು ಎಂದು ಅವರ ವಿವರಿಸಿದರು. 230 ವೋಲ್ಟೇಜ್, 700 ವ್ಯಾಟ್ ಸಾಮರ್ಥ್ಯ ಹಾಗೂ 10 ಸಾವಿರ ಆರ್ ಪಿ ಎಂ ಸಾಮರ್ಥ್ಯ ಹೊಂದಿರುವ ಯಂತ್ರಕ್ಕೆ ವೇಗನಿಯಂತ್ರಕ ಅಳವಡಿಸಲಾಗಿದ್ದು, ಅನುಕೂಲಕ್ಕೆ ತಕ್ಕಂತೆ ವೇಗ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಗೆ ಒಂದು ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಪೆಟ್ರೋಲ್ ಚಾಲಿತ ಯಂತ್ರದ ಬೆಲೆ ಪ್ರಸ್ತುತ 26 ಸಾವಿರ ರೂ ಇದ್ದರೆ, ಅದಕ್ಕಿಂತಲೂ ಅತ್ಯುತ್ತಮವಾಗಿರುವ ವಿದ್ಯುತ್ ಚಾಲಿತ ಯಂತ್ರವನ್ನು ಕೇವಲ 9 ಸಾವಿರ ರೂಪಾಯಿ ಬೆಲೆಗೆ ಒದಗಿಸಲಾಗುತ್ತಿದೆ. ಅಲ್ಲದೆ ಯಂತ್ರಕ್ಕೆ ಸ್ಟೀಲ್ ಬ್ಲೇಡ್, ವೈರ್ ರೋಪ್ ಬಳಸಲಾಗಿದ್ದು, ಗ್ರೈಂಡಿಂಗ್ ಅಳವಡಿಸಲಾಗಿದೆ. ದಿನಕ್ಕೆ ಎರಡು ಎಕರೆ ಕಳೆಕೊಚ್ಚುವ ಶಕ್ತಿ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಡೇರಿ ಡಿಪ್ಲೋಮಾ ಓದಿರುವ ಸಾಮಾನ್ಯ ರೈತರಾದ ಬಸವರಾಜ್ ಈ ಹಿಂದೆ ಮಿನಿ ಡ್ರಿಲ್ಲರ್, ನೀರಿನ ಟ್ಯಾಂಕ್ ತುಂಬಿದ ತಕ್ಷಣ ಗಂಟೆ ಬಾರಿಸುವ ಯಂತ್ರಗಳ ಶೋಧನೆ ಮಾಡಿದ್ದಾರೆ.

2008: ಹೋಮ ಮಾಡುವ ಮೂಲಕ ಜಗತಾಪವನ್ನು (ಜಾಗತಿಕ ತಾಪಮಾನವನ್ನು) ತಗ್ಗಿಸಬಹುದೇ? ಪರಿಸರ ಸಂರಕ್ಷಣೆ ಸಾಧ್ಯವೇ? ಹೌದು ಎಂಬುದು ಅಗ್ನಿ ಹೋತ್ರ ಹೋಮದ ಬಗ್ಗೆ ಸಂಶೋಧನಾ ಮಹಾ ಪ್ರಬಂಧ ರಚಿಸಿ, ಪಿಎಚ್.ಡಿ ಪದವಿ ಪಡೆದಿರುವ ಡಾ.ಪೂರ್ತಿ ಆಚಾರ್ಯ ಸ್ಪಷ್ಟ ನುಡಿ. `ಹಿಮಾಚಲ ಪ್ರದೇಶದ ಉದ್ಗೀತ ಸಾಧನಾ ಸ್ಥಲಿ ಎಂಬಲ್ಲಿ 2001ರಿಂದ 2004ರವರೆಗಿನ ಅವಧಿಯಲ್ಲಿ ತಾವು ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಸೋಯಾಬಿನ್ ಗಿಡಗಳಿಗೆ ಹೋಮದ ಬೂದಿಯನ್ನು ಗೊಬ್ಬರವಾಗಿ ಹಾಕಿದಾಗ ಅವು ಅತ್ಯುತ್ತಮವಾಗಿ ಬೆಳೆದವು' ಎಂದು ಡಾ. ಆಚಾರ್ಯ ಬೆಂಗಳೂರಿನಲ್ಲಿ ಈದಿನ ವಿವರಿಸಿದರು. `ಸಹಾಯಕ ಅನಿಲಗಳು ಮತ್ತು ಶಬ್ಧ ಶಕ್ತಿಯನ್ನು ಬಿಡುಗಡೆ ಮಾಡುವ ಹೋಮದಿಂದ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಬಹುದು. ಪರಿಸರ ಮಾಲಿನ್ಯದಿಂದಾಗಿ ಬೀಳುತ್ತಿರುವ ಆಮ್ಲ ಮಳೆ ಮತ್ತು ವಿಷಯುಕ್ತ ಅನಿಲಗಳ ಅಪಾಯವನ್ನು ಹೋಮದಿಂದ ತಡೆ ಗಟ್ಟಬಹುದು' ಎಂದು ವಿವರಿಸಿದರು. ಸಂಶೋಧನೆಗೆ ಮಾರ್ಗದರ್ಶನ ಮಾಡಿದ ವೇದ ವಿದ್ವಾಂಸ ಆಚಾರ್ಯ ನರೇಶ್ ಅವರು `ವೇದಗಳು ಯಾವುದೇ ಧರ್ಮಕ್ಕೆ ಸೀಮಿತವಲ್ಲ, ಪ್ರಪಂಚದ ಎಲ್ಲ ಜನರು ಅವುಗಳ ಪ್ರಯೋಜನ ಪಡೆಯಬಹುದು. ಪ್ರತಿ ಮನೆಯಲ್ಲಿ ಪ್ರತಿ ದಿನ ಹೋಮ ಮಾಡಿದರೆ ಆರೋಗ್ಯ ಮತ್ತು ಪರಿಸರ ವೃದ್ಧಿಯಾಗುತ್ತದೆ' ಎಂದು ವಿವರಿಸಿದರು.

2008: ಪರಿಸರವಾದಿ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಉಲ್ಲಾಸ್ ಕಾರಂತ್ ಅವರು ನಗರದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ಫೆಲೊ ಆಗಿ ನೇಮಕಗೊಂಡರು.

2008: ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಸ್ವಿಟ್ಜರ್ಲೆಂಡಿನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಮೇಲೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯು (ಐಟಿಎಫ್) ಎರಡು ವರ್ಷಗಳ ನಿಷೇಧ ಹೇರಿತು. 27ರ ಹರೆಯದ ಹಿಂಗಿಸ್ ಕಳೆದ ವರ್ಷದ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ ನಿಷೇಧಿತ ಕೊಕೇನ್ ಸೇವಿಸಿ ಸಿಕ್ಕಿ ಬಿದ್ದಿದ್ದರು. ಸ್ವಿಸ್ ಆಟಗಾರ್ತಿ ಉದ್ದೀಪನ ಮದ್ದು ಸೇವಿಸಿದ್ದು ತನಿಖೆಯ ವೇಳೆ ಸಾಬೀತಾಗಿತ್ತು. ಹಿಂಗಿಸ್ ಅವರು ತನಿಖೆಯಿಂದ ಹೊರಬಿದ್ದ ತೀರ್ಪನ್ನು ಪ್ರಶ್ನಿಸಿದ್ದರು. ಅಲ್ಲದೆ, ತನ್ನ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಐಟಿಎಫ್ ಎರಡು ವರ್ಷ ನಿಷೇಧ ಹೇರಿತು. ನಿಷೇಧ ಶಿಕ್ಷೆ 2007ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ ಎಂದು ಐಟಿಎಫ್ ಹೇಳಿತು. `ಸ್ವಿಸ್ ಮಿಸ್' ಖ್ಯಾತಿಯ ಹಿಂಗಿಸ್ 2007ರ ನವೆಂಬರಿನಲ್ಲಿ ವೃತ್ತಿಪರ ಟೆನಿಸ್ಸಿಗೆ ನಿವೃತ್ತಿ ಘೋಷಿಸಿದ್ದರು. ಆದ್ದರಿಂದ ಈ ನಿಷೇಧ ಶಿಕ್ಷೆ ಅವರ ಮೇಲೆ ವಿಶೇಷ ಪರಿಣಾಮ ಬೀರಲು ಸಾಧ್ಯವಿಲ್ಲ. ಹಿಂಗಿಸ್ ಐದು ಗ್ರ್ಯಾಂಡ್ ಸ್ಲಾಮ್ ಟೂರ್ನಿ ಒಳಗೊಂಡಂತೆ ಒಟ್ಟು 43 ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವದ ಮಾಜಿ ಅಗ್ರ ರ್ಯಾಂಕಿಂಗಿನ ಆಟಗಾರ್ತಿ ಗಾಯದ ಕಾರಣ ಮೂರು ವರ್ಷಗಳ ಕಾಲ ಟೆನಿಸ್ಸಿನಿಂದ ದೂರ ಉಳಿದಿದ್ದರು. 2006ರಲ್ಲಿ ಮತ್ತೆ ಕಣಕ್ಕಿಳಿದ ಅವರು ನಿವೃತ್ತಿ ಪ್ರಕಟಿಸುವ ಮೊದಲು ಮೂರು ಪ್ರಶಸ್ತಿಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದರು.

2007: ವಿದೇಶ ಪ್ರವಾಸ ಮಾಡಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಪರ್ಯಾಯ ಪೀಠಾರೋಹಣ ಹಾಗೂ ಅವರಿಂದ ಕೃಷ್ಣ ಪೂಜೆಗೆ ತಡೆಯಾಜ್ಞೆ ಕೋರಿ ಉಡುಪಿ ಶಿರಿಬೀಡಿನ ನಿವಾಸಿಗಳಾದ ಸಿ.ಎಚ್. ನಾಗರಾಜರಾವ್ ಹಾಗೂ ಹರೀಶ್ ಭಟ್ ಅವರು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಿದರು. ಇದರೊಂದಿಗೆ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದ್ದ ಪರ್ಯಾಯ ವಿವಾದ ನ್ಯಾಯಾಲಯ ಮೆಟ್ಟಿಲೇರಿತು. ಪರ್ಯಾಯ ವಿಚಾರದಲ್ಲಿ ಸಾರ್ವಜನಿಕರಿಗೆ ಅಹವಾಲು ಮಂಡಿಸಲು ಅವಕಾಶ ನೀಡಬೇಕು ಹಾಗೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ನಡೆಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಪ್ರತ್ಯೇಕವಾಗಿ ಮನವಿ ಮಾಡಿದರು. ಈ ಪ್ರಕರಣದ ಪ್ರತಿವಾದಿಗಳಾಗಿ ಪುತ್ತಿಗೆ ಸ್ವಾಮೀಜಿ ಅವರ ಜತೆಗೆ ದ್ವಂದ್ವ ಮಠದ ಕೃಷ್ಣಾಪುರ ಸ್ವಾಮೀಜಿ ಅವರ ಹೆಸರನ್ನೂ ಸೇರಿಸಲಾಯಿತು. ಆದರೆ ಕೃಷ್ಣಾಪುರ ಸ್ವಾಮೀಜಿ ಅವರ ವಿರುದ್ಧ ಯಾವುದೇ ಆಕ್ಷೇಪಗಳು ದಾಖಲಾಗಲಿಲ್ಲ.

2008: ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಹರಭಜನ್ ಸಿಂಗ್ `ಭಜ್ಜಿ' ವಿರುದ್ಧ ಆಸ್ಟ್ರೇಲಿಯಾ ತಂಡದ ಆಟಗಾರ ಆಂಡ್ರೂ ಸೈಮಂಡ್ಸ್ ಅವರು ವೈಯಕ್ತಿಕ ಅವಹೇಳನ ಹಾಗೂ ಜನಾಂಗೀಯ ನಿಂದನೆಯ ಆರೋಪ ಮಾಡಿದರು. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈದಿನ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್ಗಳ ಸರಣಿಯ ಎರಡನೇ ಹಣಾಹಣಿಯ ಮೂರನೇ ದಿನದಾಟದ ಸಂದರ್ಭದಲ್ಲಿ ತಮ್ಮನ್ನು ಹರಭಜನ್ ನಿಂದಿಸಿದರು ಎಂದು ಕಾಂಗರೂಗಳ ನಾಡಿನ ಕ್ರಿಕೆಟಿಗ ದೂರಿದರು. ಸೈಮಂಡ್ಸ್ ಈ ವಿಷಯವನ್ನು ನಾಯಕ ರಿಕಿ ಪಾಂಟಿಂಗ್ ಗೆ ತಿಳಿಸಿದರು. ಪಾಂಟಿಂಗ್ ಅವರು ಕ್ಷೇತ್ರದ ಅಂಪೈರ್ಗಳಾದ ಮಾರ್ಕ್ ಬೆನ್ಸನ್ ಹಾಗೂ ಸ್ಟೀವ್ ಬಕ್ನರ್ ಗಮನಕ್ಕೆ ತಂದರು. ಅಂಪೈರ್ಗಳು ಘಟನೆಯ ವಿವರವನ್ನು ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಅವರಿಗೆ ನೀಡಿದರು. ಫ್ರಾಕ್ಟರ್ ಅವರು ಪ್ರಕರಣವನ್ನು ವಿಚಾರಣಗೆ ಪರಿಗಣಿಸಿದರು.

2008: 2007-08ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ 7895 ಹುದ್ದೆಗಳ ಪೈಕಿ ಎಲ್ಲ ಜಿಲ್ಲೆಗಳಲ್ಲಿ ಶೇ ಒಂದರಷ್ಟನ್ನು ಅಂಧ ಅಭ್ಯರ್ಥಿಗಳಿಗೆ ಮೀಸಲಿಟ್ಟು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. 2007ರ ಜುಲೈ 30ರ ಅಧಿಸೂಚನೆ ಪ್ರಕಾರ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸೂಚಿಸಿತು. ಇದರಿಂದಾಗಿ ತಮ್ಮ ಹಕ್ಕಿಗಾಗಿ ಅನೇಕ ತಿಂಗಳ ಕಾಲ ಹೋರಾಟ ನಡೆಸುತ್ತಿದ್ದ ಅಂಧ ಅಭ್ಯರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅಂಗವಿಕಲ ಅಧಿನಿಯಮದ ಪ್ರಕಾರ ಶಿಕ್ಷಕರ ಹುದ್ದೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಬೇಕು. ಈ ಮೀಸಲಾತಿಯಲ್ಲಿ ಶೇ 1ರಷ್ಟನ್ನು ಅಂಧರಿಗೆ ಇಡಬೇಕು. ಆದರೆ ಅದನ್ನು ಪಾಲಿಸದ ಸರ್ಕಾರ, ತಮ್ಮನ್ನು ಅವಕಾಶದಿಂದ ವಂಚಿಸಿದೆ ಎಂದು ಅಖಿಲ ಕರ್ನಾಟಕ ಅಂಧ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘವು ದೂರಿತ್ತು.

2008: ಮುಸ್ಲಿಮೇತರ ಧಾರ್ಮಿಕ ಪುಸ್ತಗಳಲ್ಲಿ `ಅಲ್ಲಾ' ಪದ ಬಳಸುವಂತಿಲ್ಲ. ಇದು ಈ ದೇಶದಲ್ಲಿರುವ ಮುಸ್ಲಿಮರಲ್ಲಿ ಗೊಂದಲ ಉಂಟುಮಾಡುತ್ತದೆ ಎಂದು ಮಲೇಷ್ಯಾ ಸರ್ಕಾರ ಹೇಳಿತು. ಇತರ ಧಾರ್ಮಿಕ ಪುಸ್ತಕಗಳಲ್ಲಿ `ಸೊಲಾಟ್' (ಮುಸ್ಲಿಮರ ಪ್ರಾರ್ಥನೆ), `ಕಾಬಾ' (ಪ್ರಾರ್ಥನೆ ಮಾಡುವ ದಿಕ್ಕು) ಹಾಗೂ `ಬೈತುಲ್ಲಾ' (ದೇವರ ಮನೆ) ಪದಗಳನ್ನೂ ಬಳಸುವಂತಿಲ್ಲ ಎಂದೂ ಸರ್ಕಾರ ತಿಳಿಸಿದೆ.

2007: ಕಾರವಾರದ ಐ ಎನ್ ಎಸ್ ನೌಕಾನೆಲೆಯಲ್ಲಿ `ಐ ಎನ್ ಎಸ್ ಶಾರ್ದೂಲ' ನೌಕೆಯನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಲ್ಯಾಂಡಿಂಗ್ ಶಿಪ್ ಅಪ್ಪಟ ಭಾರತೀಯ ತಾಂತ್ರಿಕತೆಯ ಪ್ರಥಮ ಹಡಗು. ಯುದ್ಧ ಮಾತ್ರವಲ್ಲ, ಚಂಡಮಾರುತ, ಸುನಾಮಿ, ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಜೀವ ರಕ್ಷಣೆಗೆ ಇದನ್ನು ಬಳಸಬಹುದು.

2007: ರಾಜ್ಯದ ಕುರಿಗಳಿಗೆ ವಿಮೆ ಒದಗಿಸುವ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಜನಶ್ರೀ' ಯೋಜನೆಗೆ ಉಪ ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ ಅವರು ಕುರಿಗಾರರಿಗೆ ವಿಮಾಪತ್ರ ನೀಡುವ ಮೂಲಕ ಗುಲ್ಬರ್ಗದಲ್ಲಿ ಚಾಲನೆ ನೀಡಿದರು.

2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಗೆ ವಿಧಿಸಲಾದ ಮರಣದಂಡನೆ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಅವರ ಇಬ್ಬರು ಸಹಚರರಿಗೆ ವಿಧಿಸಬೇಕಿದ್ದ ಗಲ್ಲು ಶಿಕ್ಷೆಯನ್ನು ಇರಾಕ್ ಸರ್ಕಾರ ಮುಂದೂಡಿತು.

2007: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಾಜಿ ಆಡಳಿತ ನಿರ್ದೇಶಕ ಎನ್. ಶ್ರೀನಿವಾಸನ್ ಅವರು ಇಟಲಿ ಗಣರಾಜ್ಯವು ನೀಡುವ ಅಗ್ರ ಪ್ರಶಸ್ತಿ `ನೈಟ್' ಪದವಿಗೆ ಭಾಜನರಾದರು. ಭಾರತ ಮತ್ತು ಇಟಲಿ ನಡುವಣ ಸ್ನೇಹ ಮತ್ತು ಸಹಕಾರಕ್ಕಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಇಟಲಿಯಲ್ಲಿ ವಿಶೇಷ ಹೆಸರು ಗಳಿಸಿರುವ ವ್ಯಕ್ತಿಗೆ ನೀಡಲಾಗುತ್ತದೆ. ಪುರಸ್ಕಾರ ಆಯ್ಕೆಗೆ 16 ಜನ ಸದಸ್ಯರ ಸಮಿತಿ ಇದ್ದು ದೇಶದ ಪ್ರಧಾನಿ ಮತ್ತು ಅಧ್ಯಕ್ಷರಿಗೆ ಪುರಸ್ಕೃತರನ್ನು ಆಯ್ಕೆ ಮಾಡಿ ತಿಳಿಸುತ್ತದೆ.

2007: ಭಾರತೀಯ ರಾಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಸಿಟಿ) ಉಪ ನಿರ್ದೇಶಕರಾದ ಡಾ. ಎಸ್. ಚಂದ್ರಶೇಖರ್ ಅವರು ಈ ಸಾಲಿನ ರಾಜೀವ ಗೋಯಲ್ ಪ್ರಶಸ್ತಿಗೆ ಆಯ್ಕೆಯಾದರು.

2007: ತೀವ್ರ ಆತಂಕ ಮೂಡಿಸಿರುವ, ನೊಯಿಡಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬರ್ಬರ ಸರಣಿ ಹತ್ಯೆ ಪ್ರಕರಣಗಳ ಬಗೆಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಎಸ್ ಎಸ್ ಪಿ ಆರ್ .ಕೆ. ಎಸ್. ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಿತು. ಕೃತ್ಯದ ಬಗೆಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಒತ್ತಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರೂ ದನಿಗೂಡಿಸಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದರು.

2006: ಆಂಧ್ರಪ್ರದೇಶ ಸರ್ಕಾರವು ರಾಜ್ಯದ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 5ರಷ್ಟು ಮೀಸಲಾತಿ ಕಲ್ಪಿಸಿದ್ದನ್ನು ರದ್ದುಪಡಿಸಿ ಹೈಕೋರ್ಟ್ ಸಂವಿಧಾನ ಪೀಠವು 2005 ನವೆಂಬರ್ 7ರಂದು ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು.

2006: ಅರಬ್ ರಾಷ್ಟ್ರಗಳ ಒಕ್ಕೂಟದ (ಯುಎಇ) ಉಪಾಧ್ಯಕ್ಷ, ದುಬೈ ರಾಜಮನೆತನಕ್ಕೆ ಸೇರಿದ ಶೇಖ್ ಮಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ ಅವರು ಆಸ್ಟ್ರೇಲಿಯಾದಲ್ಲಿ ಮೃತರಾದರು.

2006: ಕನ್ನಡ ಚಿತ್ರ ನಿರ್ಮಾಪಕ ಕೆ.ಆರ್. ಶ್ರೀನಿವಾಸನ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ರಾಮ್ ಕುಮಾರ್ ಅಭಿನಯದ ಸೂರ್ಯಪುತ್ರ, ಜಗ್ಗೇಶ್ ಅಭಿನಯದ ಜಗತ್ ಕಿಲಾಡಿ ಹಾಗೂ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಮಹಾ ಎಡಬಿಡಂಗಿ ಚಿತ್ರಗಳನ್ನು ಅವರು ನಿರ್ಮಿಸಿದ್ದರು.

2006: ಕನ್ನಡ ನಟ, ನಿರ್ಮಾಪಕ ಪ್ರಸನ್ನಕುಮಾರ್ (46) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಸಿಂಹದ ಮರಿ ಸೈನ್ಯ, ಆಶಾ, ತಪ್ಪಿದ ತಾಳ, ಅಜಿತ್, ಚದುರಂಗ, ಮಕ್ಕಳ ಸೈನ್ಯ, ಪ್ರೀತ್ಸೋದ್ ತಪ್ಪಾ ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಗಂಡಂದ್ರೆ ಗಂಡು, ಚದುರಂಗ ಚಿತ್ರಗಳ ಪಾಲುದಾರರೂ ಆಗಿದ್ದರು.

2006: ಕಾದಂಬರಿಗಾರ್ತಿ ಅಶ್ವಿನಿ (ಶ್ರೀಮತಿ ಎಂ.ವಿ. ಕನಕಮ್ಮ) ಅವರು 2006ನೇ ಸಾಲಿನ ಪದ್ಮ ಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದರು. ಸರೋಜಾದೇವಿ ಅವರು ತಮ್ಮ ಪುತ್ರಿ ಬಿ. ಭುವನೇಶ್ವರಿ ಸ್ಮರಣಾರ್ಥ ಈ ಪ್ರಶಸ್ತಿ ಸ್ಥಾಪಿಸ್ದಿದಾರೆ.

2001: ಭಾರತದ ಹಗುರ ಯುದ್ಧ ವಿಮಾನ ಬೆಂಗಳೂರಿನಲ್ಲಿ ತನ್ನ ಚೊಚ್ಚಲ ಹಾರಾಟ ನಡೆಸಿತು. ಇದರೊಂದಿಗೆ ಸ್ವಂತ ಸೂಪರ್ ಸಾನಿಕ್ ವಿಮಾನವನ್ನು ವಿನ್ಯಾಸಗೊಳಿಸಿದ ವಿಶೇಷ ರಾಷ್ಟ್ರಗಳ ಕೂಟಕ್ಕೆ ಭಾರತವೂ ಸೇರ್ಪಡೆಗೊಂಡಿತು.

1994: ಭಾರತೀಯ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರು ನಿಧನರಾದರು.

1965: ಎಲಿಯೆಟ್ ಎಂದೇ ಖ್ಯಾತರಾಗಿದ್ದ ಥಾಮಸ್ ಸ್ಟೀಯರ್ನ್ಸ್ ತಮ್ಮ 76ನೇ
ವಯಸ್ಸಿನಲ್ಲಿ ನಿಧನರಾದರು.

1960: ನೊಬೆಲ್ ವಿಜೇತ ಫ್ರೆಂಚ್ ಸಾಹಿತಿ ಆಲ್ಬರ್ಟ್ ಕಾಮು ಅವರು ಕಾರು ಅಪಘಾತದಲ್ಲಿ ನಿಧನರಾದರು.

1958: ರಷ್ಯದ `ಸ್ಪುಟ್ನಿಕ್' ಉಪಗ್ರಹ 92 ದಿನಗಳ `ಬಾಹ್ಯಾಕಾಶ ವಾಸ'ದ ಬಳಿಕ ಭೂಮಿಗೆ ಉರಿದು ಬಿತ್ತು. ಭೂಕಕ್ಷೆಗೆ ತೆರಳಿದ ಮೊತ್ತ ಮೊದಲ ಮಾನವ ನಿರ್ಮಿತ ವಸ್ತು ಇದು.

1957: ವೃತ್ತಿಯಿಂದ ಮನಃಶಾಸ್ತ್ರ ಪ್ರವಾಚಕರೂ, ಪ್ರವೃತ್ತಿಯಿಂದ ಸುಗಮ ಸಂಗೀತಗಾರರೂ ಆದ ಡಾ. ಆರ್. ಗೋಪಾಲಕೃಷ್ಣ ಅವರು ರಾಮಸ್ವಾಮಿ- ಜಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ಭಾರತದಾದ್ಯಂತ `ಶಾಸನ ಉಲ್ಲಂಘನೆ ದಿನ'ವಾಗಿ ಆಚರಿಸಲಾಯಿತು. 1934ರ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು ಭಾರತ ಸರ್ಕಾರ ಕಾಯ್ದೆಯ ಚೌಕಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಿದಾಗ ಈ ಕಾನೂನು ಭಂಗ ಚಳವಳಿ ಕೊನೆಗೊಂಡಿತು.

1931: ಖಿಲಾಫತ್ ಧುರೀಣ ಮೌಲಾನಾ ಮಹಮ್ಮದ್ ಅಲಿ ಅವರು ತಮ್ಮ 52ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮೊದಲ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳಲು ಲಂಡನ್ನಿಗೆ ತೆರಳಿದ್ದರು.

1931: ಭಾರತೀಯ ಚಿತ್ರ ನಟಿ ನಿರುಪಾ ರಾಯ್ ಹುಟ್ಟಿದ ದಿನ.

1918: ಕಲಾವಿದ ಎ.ಕೆ. ಧರ್ಮಾಧಿಕಾರಿ ಜನನ.

1896: ಕನ್ನಡದ ಖ್ಯಾತ ಸಾಹಿತಿ ಶಂಕರ ಬಾಳ ದೀಕ್ಷಿತ ಜೋಶಿ (4-1-1896- 28-9-1991) (ಶಂ.ಬಾ. ಜೋಶಿ) ಈ ದಿನ ಜನಿಸಿದರು. ಹುಟ್ಟೂರು: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು. ಅಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ. ಚಿಕ್ಕಂದಿನಲ್ಲಿಯೇ ತಂದೆಯ ಸಾವು. ಅಣ್ಣನ ಆಶ್ರಯ. ಪುಣೆಗೆ ಪಯಣ. ಓದಿನ ಹಠ. ಪುನಃ ಧಾರವಾಡಕ್ಕೆ. ಟ್ರೈನಿಂಗ್ ಕಾಲೇಜಿನಲ್ಲಿ ರ್ಯಾಂಕ್. ಚಿಕ್ಕೋಡಿಯಲ್ಲಿ ಶಿಕ್ಷಕ ವೃತ್ತಿ. ತಿಲಕರ ಭೇಟಿ, ಪ್ರಭಾವದಿಂದ ಖಾದಿಯ ಹುಚ್ಚು. ಪತ್ರಿಕೆಗಳಿಗೆ ಲೇಖನ. ಕರ್ಮವೀರದ ಸಂಪಾದಕತ್ವ. 1915-1930ರವರೆಗೆ ಸಂಸ್ಕತ- ಇಂಗ್ಲಿಷ್ ಅಧ್ಯಯನ. 1930ರಿಂದ 1969ರವರೆಗೆ ಅವಿಶ್ರಾಂತ ಬರವಣಿಗೆ. ಕರ್ನಾಟಕ ಇತಿಹಾಸ, ಕನ್ನಡ ಭಾಷಾ ಶಾಸ್ತ್ರ, ಜಾನಪದ ಸಾಹಿತ್ಯ, ಧಾರ್ಮಿಕ ಗ್ರಂಥಗಳ ಜೊತೆಗೆ ಹಲವಾರು ಗ್ರಂಥಗಳ ಅನುವಾದ. ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಕನ್ನಡದ ನೆಲೆ, ಕಂನುಡಿಯ ಹುಟ್ಟು, ಮಕ್ಕಳ ಒಡಪುಗಳು, ಸೌಂದರ್ಯ ವಿಚಾರ, ಸಾತತ್ಯ ಮತ್ತು ಸತ್ಯ, ಭಗವದ್ ಗೀತೆ, ಶಿವರಹಸ್ಯ, ಹಾಲುಮತ ದರ್ಶನ, ಋಗ್ವೇದ ಸಾರ- ನಾಗಪ್ರತಿಮಾ ವಿಚಾರ, ಬುಧನ ಜಾತಕ ಇತ್ಯಾದಿ ಕೃತಿಗಳ ರಚನೆ. ಪ್ರಶಸ್ತಿಗಳು: 1981ರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್. ಅಧ್ಯಯನ ಗ್ರಂಥ ಸದಾಕಾಲವೂ ಅಧ್ಯಯನ ನಿರತರಾಗಿದ್ದ ಶಂಬಾ ಅವರಿಗೆ ಅರ್ಪಿಸಲಾಗಿದ್ದ ಗೌರವ ಗ್ರಂಥ. ನಿಧನದ ಬಳಿಕ ಇವರಿಗೆ ಅರ್ಪಿಸಲಾದ ಗ್ರಂಥ ಶಂಬಾ ಸ್ಮತಿ ಗ್ರಂಥ.

1884: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದ್ರ ಸೇನ್ ಅವರು ತಮ್ಮ 45ನೇ ವಯಸ್ಸಿನಲ್ಲಿ ನಿಧನರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement