Friday, March 5, 2010

ಇಂದಿನ ಇತಿಹಾಸ History Today ಮಾರ್ಚ್ 05

ಇಂದಿನ ಇತಿಹಾಸ

ಮಾರ್ಚ್ 05

ಭಾರತೀಯ ವಾಯುಪಡೆಯ ಬೃಹತ್ ವಿಮಾನ ಇಲ್ಯೂಷಿನ್- 76 (ವಾಯುಪಡೆಯಿಂದ ಮರು ನಾಮಕರಣಗೊಂಡಿರುವ 'ಗಜರಾಜ್')ನ ಸಹ ಪೈಲಟ್ ಆಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು (ಸ್ಕ್ವಾಡ್ರನ್ ಲೀಡರ್ ವೀಣಾ ಸಹರನ್) ಆಯ್ಕೆಯಾದರು. ಈ ಮೂಲಕ ದೇಶದ ಮಹಿಳೆಯರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯಿತು.

2009: ಗೆಲ್ಲುವ ಸಾಮರ್ಥ್ಯದ ಎದುರು ನಂಬಿಕೊಂಡು ಬಂದ ತತ್ವಕ್ಕೆ ಮಂಡಿ ಊರಿದ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರ ಮಕ್ಕಳು, ಸೋದರ-ಸೋದರಿಯರೆಲ್ಲಾ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದರು. ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಪಕ್ಷದ ಹನ್ನೊಂದು ಅಭ್ಯರ್ಥಿಗಳ ಪಟ್ಟಿಯಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ಮಗ ಶಿವಕುಮಾರ್ ಉದಾಸಿ, ಶಾಸಕ ಉಮೇಶ್ ಕತ್ತಿಯವರ ಸೋದರ ರಮೇಶ್ ಕತ್ತಿ ಮತ್ತು ಸಚಿವ ಶ್ರೀರಾಮುಲು ಸೋದರಿ ಜೆ.ಶಾಂತಿ ಸೇರಿದರು. ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಮಾಜಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಪಡೆದರು.

2009: ವಿವಾದ ಹಾಗೂ ಚರ್ಚೆಗೆ ಗ್ರಾಸವಾದ ಶಾಂತಿದೂತ ಗಾಂಧಿ ಅವರ ವಸ್ತುಗಳ ಹರಾಜನ್ನು ಕೈಬಿಟ್ಟು ಅವುಗಳನ್ನು ಭಾರತಕ್ಕೆ ಕೊಡುಗೆಯಾಗಿ ಕೊಡಲು ತಾನು ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಅವುಗಳ ಮಾಲೀಕ ಜೇಮ್ಸ್ ಓಟಿಸ್ ಹೇಳಿದರು. ಭಾರತ ತನ್ನ ಬಡವರ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲು ಹಾಗೂ ಈ ವಸ್ತುಗಳನ್ನು ಅಂತಾ ರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರದರ್ಶಿಸಲು ಭಾರತದ ರಾಜತಾಂತ್ರಿಕರು ಒಪ್ಪಿಕೊಂಡಿದ್ದಾರೆ, ನನ್ನ ಪ್ರಸ್ತಾವಗಳಿಗೆ ಒಪ್ಪಿಕೊಂಡದ್ದಕ್ಕೆ ಪ್ರತಿಯಾಗಿ ನಾನು ಹರಾಜು ರದ್ದು ಮಾಡುವ ತೀರ್ಮಾನಕ್ಕೆ ಬಂದೆ ಎಂದು ಜೇಮ್ಸ್ ವಿವರಿಸಿದರು.

2009: ಅಂಧರು ಹಾಗೂ ನಿಮ್ನ ದೃಷ್ಟಿವುಳ್ಳವರಿಗೆ ಅರಿವು ಮೂಡಿಸಲು ವೆಬ್‌ಸೈಟ್‌ ಒಂದನ್ನು ಪ್ರಾರಂಭಿಸಲಾಗಿದೆ, ಇದು ದೇಶದಲ್ಲೇ ಮೊದಲು ಎಂದು ಇದಕ್ಕಾಗಿ ತೊಡಗಿಸಿಕೊಂಡ ಸ್ಕೋರ್ ಫೌಂಡೇಶನ್ ಸ್ವಯಂ ಸೇವಾಸಂಸ್ಥೆ ನವದೆಹಲಿಯಲ್ಲಿ ಪ್ರಕಟಿಸಿತು. ವೆಬ್‌ಸೈಟನ್ನು ಅಂಧರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅರಿವು ಮೂಡಿಸಲು ರೂಪಿಸಲಾಗಿದೆ. ಅಂಧರ ಸಮಸ್ಯೆ ಅವರ ಅಂಧತ್ವವಲ್ಲ. ಅವರ ಕುಟುಂಬದ, ಸಮಾಜದ ಮನೋಭಾವ ಮತ್ತು ಆಲೋಚನೆ ಎಂದು ಸ್ಕೋರ್ ಫೌಂಡೇಶನ್ ಸ್ವಯಂ ಸೇವಾಸಂಸ್ಥೆ ಮುಖ್ಯಸ್ಥ ಜಾರ್ಜ್ ಅಬ್ರಹಾಂ ವೆಬ್‌ಸೈಟ್ ಬಿಡುಗಡೆ ಸಂದರ್ಭದಲ್ಲಿ ಹೇಳಿದರು. ಈ ವೆಬ್ ಸೈಟ್ ಸಾಫ್ಟ್‌ವೇರನ್ನು ಅಮೆರಿಕದಿಂದ 800 ಡಾಲರಿಗೆ ಕೊಂಡುಕೊಳ್ಳಲಾಗಿದೆ. ಈ ಸ್ವಯಂಸೇವಾ ಸಂಸ್ಥೆ ರೇಡಿಯೋ ಕಾರ್ಯಕ್ರಮವನ್ನೂ ಬಿತ್ತರಿಸುತ್ತಿದ್ದು ಆಕಾಶವಾಣಿಯ 30 ನಿಲಯಗಳಿಂದ ಪ್ರಸಾರ ಮಾಡಲಾಗುತ್ತಿದೆ. ದೇಶದಲ್ಲಿ 16 ದಶಲಕ್ಷ ಮಂದಿ ಅಂಧರಿದ್ದು 28 ದಶಲಕ್ಷ ಮಂದಿ ನಿಮ್ನ ದೃಷ್ಟಿಯವರಿದ್ದಾರೆ.

2009: ಭಾರತೀಯ ವಾಯುಪಡೆಯ ಬೃಹತ್ ವಿಮಾನ ಇಲ್ಯೂಷಿನ್- 76 (ವಾಯುಪಡೆಯಿಂದ ಮರು ನಾಮಕರಣಗೊಂಡಿರುವ 'ಗಜರಾಜ್')ನ ಸಹ ಪೈಲಟ್ ಆಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾದರು. ಈ ಮೂಲಕ ದೇಶದ ಮಹಿಳೆಯರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಯಿತು. ಸ್ಕ್ವಾಡ್ರನ್ ಲೀಡರ್ ವೀಣಾ ಸಹರನ್, ರಷ್ಯಾ ನಿರ್ಮಿತ ಈ ವಿಮಾನವನ್ನು 40 ಗಂಟೆಗಳು ಹಾರಾಡಿಸಿದ ಬಳಿಕ ಪೂರ್ಣ ಪ್ರಮಾಣದ ಪೈಲಟ್ ಆಗುವರು. 'ಇದೊಂದು ಮಹತ್ವದ ಸಾಧನೆ. ಇತ್ತೀಚೆಗಷ್ಟೇ ಐಎಲ್- 76 ವಿಮಾನವನ್ನು ಚಲಾಯಿಸಿರುವ ನಾನು ಪರಿಣತಿ ಹೊಂದುವ ಎರಡನೇ ಹಂತದ ತರಬೇತಿಯನ್ನು ಎದುರು ನೋಡುತ್ತಿದ್ದೇನೆ. ಮಹಿಳಾ ಅಧಿಕಾರಿಗಳಿಗೆ ವಾಯುಪಡೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ' ಎಂದು 27 ವರ್ಷದ ವೀಣಾ ಪ್ರತಿಕ್ರಿಯಿಸಿದರು. ಜೈಪುರ ಮೂಲದ ಅವರ ತಂದೆ ಸೇನಾಪಡೆಯಲ್ಲಿ ಕರ್ನಲ್. ವೀಣಾ ಅವರು ಆಗ್ರಾದ ಸೇನಾ ನೆಲೆಯಲ್ಲಿ ಎರಡು ತಿಂಗಳ ಮೂಲ ತರಬೇತಿ ಪೂರೈಸಿ ಹೆಚ್ಚಿನ ತರಬೇತಿಗಾಗಿ ನಾಗಪುರಕ್ಕೆ ಬಂದರು. ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದ ವೀಣಾ, 2002ರಿಂದ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಒಂದೂವರೆ ದಶಕದ ಹಿಂದೆ ವಾಯುಪಡೆಗೆ ಮಹಿಳೆಯರ ನಿಯೋಜನೆ ಆರಂಭವಾದಾಗಿನಿಂದಲೂ ಐಎಲ್- 76 ವಿಮಾನವನ್ನು ಚಲಾಯಿಸುವ ಅವಕಾಶ ಮಹಿಳೆಯರಿಗೆ ಮುಕ್ತವಾಗಿತ್ತು. ಆದರೆ ಹೆಚ್ಚಿನ ಪರಿಣತಿ ಬೇಡುವ ಈ ಹುದ್ದೆಗೆ ಈವರೆಗೂ ಯಾರೂ ಆಯ್ಕೆಯಾಗಿರಲಿಲ್ಲ. ನಾಲ್ಕು ಬಗೆಯ ವಿಮಾನಗಳನ್ನು ಚಲಾಯಿಸಿರುವ ವೀಣಾ ಅವರ ಕಠಿಣ ಪರಿಶ್ರಮಕ್ಕೆ ಐಎಲ್‌ನ ಅವಕಾಶ ದೊರಕಿತು.

2008: ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ಕರ್ನಾಟಕದ ರಾಜಕಾರಣಕ್ಕೆ ಮರಳಲು ನಿರ್ಧರಿಸುವುದರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸುದೀರ್ಘಾವಧಿಯ ಊಹಾಪೋಹದ ಆಟಕ್ಕೆ ತೆರೆ ಎಳೆದರು. ಕಾಂಗ್ರೆಸ್ ಪಕ್ಷದೊಳಗಿನ `ಅತಿರಥ-ಮಹಾರಥ'ರ ಕಡುವಿರೋಧದ ಹೊರತಾಗಿಯೂ ಸೋನಿಯಾ ಗಾಂಧಿ ಅವರು ಕೃಷ್ಣ ಅವರ ಇಷ್ಟಾರ್ಥವನ್ನು ನೆರವೇರಿಸಿಕೊಟ್ಟರು. ಈದಿನ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ತಿಳಿಸಿದ ಕೃಷ್ಣ ನಂತರ ಅಧಿಕೃತವಾಗಿ ತಮ್ಮ ರಾಜೀನಾಮೆಯನ್ನು ಕಳುಹಿಸಿಕೊಟ್ಟರು.

2008: ಎರಡು ದಶಕಗಳ ಹಿಂದೆ ಎಳೆಯ ಬಾಲಕನೊಬ್ಬನನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಳ್ಳಲು ಯತ್ನಿಸಿದರೆಂಬ ಆರೋಪ ಎದುರಿಸುತ್ತಿದ್ದ ಶ್ರೀ ಸಿದ್ದಗಂಗಾ ಮಠಕ್ಕೆ ಸೇರಿದ್ದ ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಮಠದಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನು 1986ರಲ್ಲಿ ಪೊಲೀಸರಿಗೆ ದೂರು ನೀಡಿ, ಅದರಲ್ಲಿ ಗೌರಿಶಂಕರ ಸ್ವಾಮಿಗಳು ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರೆಂದು ಆರೋಪಿಸಿದ್ದನು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ 1998ರ ನವೆಂಬರಿನಲ್ಲಿ ಸ್ವಾಮಿಗಳನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಬಂದ ಮೇಲ್ಮನವಿಯ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಗೌರಿಶಂಕರ ಸ್ವಾಮಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂಪಾಯಿಗಳ ದಂಡ ವಿಧಿಸಿ 2004ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಗೌರಿಶಂಕರ ಸ್ವಾಮಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಮೂರ್ತಿಗಳಾದ ಎಸ್ ಬಿ ಸಿನ್ಹಾ, ಎಚ್ ಎಸ್ ಬೇಡಿ ಅವರನ್ನು ಒಳಗೊಂಡ ನ್ಯಾಯಪೀಠವು ಗೌರಿಶಂಕರ ಸ್ವಾಮಿಗಳು ನಿರ್ದೋಷಿ ಎಂದು ತೀರ್ಪು ನೀಡಿ, ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತು.

2008: ಖ್ಯಾತ ಮೊಸಳೆ ಸಂರಕ್ಷಕ ಸ್ಟೀವ್ ಇರ್ವಿನ್ ಅವರ ಪತ್ನಿ ಟೆರ್ರಿ ಅವರು ಸಾಲ ಮರುಪಾವತಿಗೆ ಸಂಬಂಧಿಸಿದ ಕಾನೂನು ಸಮರದ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಸುಮಾರು 2.3ದಶಲಕ್ಷ ಡಾಲರ್ ಮೊತ್ತಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿ ಮಾಡದ ಕಾರಣ ಇರ್ವಿನ್ ಅವರ ಪತ್ನಿ ವಿರುದ್ಧ ಕಳೆದ ತಿಂಗಳು ಸಾಲ ವಸೂಲಾತಿ ಸಂಸ್ಥೆ ( ಅಲಿಸ್ಸಾ ಟ್ರೆಸರಿ ಸರ್ವೀಸ್) ದಾವೆ ಹೂಡಿತ್ತು. ಸಿಂಗಪುರ ಮೂಲದ ಬ್ಯಾಂಕ್, ಇರ್ವಿನ್ ಹಾಗೂ ಟೆರ್ರಿ ಅವರು ಸ್ಥಾಪಿಸಲು ಉದ್ದೇಶಿಸಿದ್ದ ವನ್ಯಜೀವಿ ಧಾಮಕ್ಕೆ ಹಣಕಾಸು ನೆರವು ನೀಡಿತ್ತು. 2006 ರಲ್ಲಿ ಟಿವಿ ಧಾರಾವಾಹಿ ಚಿತ್ರೀಕರಣದ ವೇಳೆ ಇರ್ವಿನ್ ಮೃತರಾಗಿದ್ದರು.

2008: ಪಾಕಿಸ್ಥಾನದಲ್ಲಿ 1999ರಲ್ಲಿ ಸಂಭವಿಸಿದ ನಾಲ್ಕು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾದ ಆರೋಪದ ಮೇಲೆ ಮರಣದಂಡನೆ ಎದುರಿಸುತ್ತಿರುವ ಭಾರತದ ಸರಬ್ಜಿತ್ ಸಿಂಗ್ ಅವರಿಗೆ ಕ್ಷಮಾದಾನ ನೀಡಲು ಅಧ್ಯಕ್ಷ ಪರ್ವೇಜ್ ಮುಷರಫ್ ನಿರಾಕರಿಸಿದರು. ಸರಬ್ಜಿತ್ ಸಿಂಗ್ ಅವರನ್ನು ಭಾರತದ ಗೂಢಚಾರ ಮಂಜಿತ್ ಸಿಂಗ್ ಎಂದೇ ಪಾಕಿಸ್ಥಾನ ಭಾವಿಸಿದೆ. ಲಾಹೋರ್ ಮತ್ತು ಮುಲ್ತಾನಿನಲ್ಲಿ ಸಂಭವಿಸಿದ ಸ್ಫೋಟಗಳ ಹಿಂದೆ ಮಂಜಿತ್ ಸಿಂಗ್ ಕೈವಾಡವಿತ್ತೆಂದು ಆರೋಪಿಸಲಾಗಿದೆ. ಕೋರ್ಟ್ ಇದನ್ನು ಎತ್ತಿ ಹಿಡಿದು ಮರಣದಂಡನೆ ವಿಧಿಸಿದೆ. ತನಗೆ ಕ್ಷಮಾದಾನ ನೀಡಬೇಕು ಎಂದು ಸರಬ್ಜಿತ್ ಸಿಂಗ್ ಅಧ್ಯಕ್ಷ ಮುಷರಫ್ ಅವರಿಗೆ ಮನವಿ ಮಾಡಿದ್ದರು. `ಸಂಪೂರ್ಣ ಪರಿಶೀಲನೆ ಬಳಿಕ ಕ್ಷಮಾದಾನದ ಅರ್ಜಿಯನ್ನು ಅಧ್ಯಕ್ಷರು ತಿರಸ್ಕರಿಸಿದರು' ಎಂದು ಪಾಕಿಸ್ಥಾನದ ಸುದ್ದಿಸಂಸ್ಥೆ ಎನ್ ಎನ್ ಐ ತಿಳಿಸಿತು.

2008: ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿರುವಂತೆಯೇ ಸಂಸದೀಯ ಸಮಿತಿಯು ಈ ಎರಡು `ಹೊಸ ವಿಮಾನ ನಿಲ್ದಾಣ'ಗಳನ್ನು ಅಭಿವೃದ್ಧಿ ಪಡಿಸಿರುವ ಖಾಸಗಿ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ಪುನರ್ ಪರಿಷ್ಕರಣೆ ಮಾಡಿ, ಹಳೆಯ ವಿಮಾನ ನಿಲ್ದಾಣಗಳನ್ನೂ ಉಳಿಸಿಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. `ಈ ಎರಡೂ ನಗರಗಳಲ್ಲಿ ಇರುವ ಹಳೆಯ ವಿಮಾನ ನಿಲ್ದಾಣಗಳನ್ನು ಮುಚ್ಚುವುದು ಅಥವಾ ಇನ್ನಷ್ಟು ಸುಧಾರಿಸುವ ಬಗ್ಗೆ ತೀರ್ಮಾನಿಸಲು ಸರ್ಕಾರಕ್ಕೆ ಇನ್ನೂ ಸಮಯವಿದ್ದು, ಪರಿಷ್ಕೃತ ಒಪ್ಪಂದದ ಮೂಲಕ ಹಳೆಯ ವಿಮಾನ ನಿಲ್ದಾಣಗಳನ್ನು ಉಳಿಸಿಕೊಳ್ಳಬಹುದು' ಎಂದೂ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಮುಖ್ಯಸ್ಥರಾದ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಹೇಳಿದರು.

2007: ಪೈಲಟ್ ರಹಿತ ಯುದ್ಧ ವಿಮಾನ `ಲಕ್ಷ್ಯ'ದ ಪರೀಕ್ಷಾರ್ಥ ಪ್ರಯೋಗವನ್ನು ಭಾರತವು ಬಾಲಸೋರ್ ಸಮೀಪದ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಸಿತು. ಬೆಂಗಳೂರಿನ ವಿಮಾನ ಅಭಿವೃದ್ಧಿ ಸಂಸ್ಥೆಯಲ್ಲಿ (ಎಡಿಇ) ಸಿದ್ಧ ಪಡಿಸಲಾಗಿರುವ ಈ ವಿಮಾನ ಪೈಲಟ್ಗಳಿಲ್ಲದೆಯೇ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.

2007: ಬೊಫೋರ್ಸ್ ಪ್ರಕರಣದ ಆರೋಪಿ ಒಟ್ಟಾವಿಯೊ ಕ್ವಟ್ರೋಚಿ ಹಸ್ತಾಂತರ ಕೋರಿ ಭಾರತ ಸರ್ಕಾರವು ಸಲ್ಲಿಸಿದ 250 ಪುಟಗಳ ದಾಖಲೆಯು ಕ್ರಮಬದ್ಧವಾಗಿದೆ ಎಂದು ನಿರ್ಧರಿಸಿದ ಅರ್ಜೆಂಟೀನಾ ಸರ್ಕಾರವು ಅದನ್ನು ಮಿಸಿಯೊನೆಸ್ ಪ್ರಾಂತದ ಎಲ್ ಡೊರಾಡೊದಲ್ಲಿನ ಫೆಡರಲ್ ಕೋರ್ಟಿಗೆ ಕಳುಹಿಸಲು ನಿರ್ಧರಿಸಿತು. ಪ್ರಾಸೆಕ್ಯೂಷನ್ ನಿರ್ದೇಶಕ ಎಸ್. ಕೆ. ಶರ್ಮಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕೇಶವ ಮಿಶ್ರ ಅವರನ್ನು ಒಳಗೊಂಡ ದ್ವಿಸದಸ್ಯ ಸಿಬಿಐ ತಂಡವು ಹಸ್ತಾಂತರಕ್ಕೆ ಸಂಬಂಧಿಸಿದ ಕೋರಿಕೆ ಹಾಗೂ ದಾಖಲೆಗಳನ್ನು ಕಳೆದ ವಾರ ಅರ್ಜೆಂಟೀನಾ ಸರ್ಕಾರಕ್ಕೆ ಸಲ್ಲಿಸಿತ್ತು.

2007: ಜೆಮ್ ಶೆಡ್ ಪುರದ ಜೆಎಂಎಂ ಸಂಸತ್ ಸದಸ್ಯ ಸುನೀಲ್ ಮಹತೋ ಅವರ ಕೊಲೆ ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಸಿತು.

1997: ಮುಂಬೈಯ ಪಾಂಡುರಂಗ ಶಾಸ್ತ್ರಿ ಅಠವಳೆ ಅವರನ್ನು ಧಾರ್ಮಿಕ ಪ್ರಗತಿಗಾಗಿ ನೀಡಲಾಗುವ 1997ರ `ಜಾನ್ ಎಂ.ಟಿ. ಟೆಂಪ್ಲೆಟನ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 12 ಲಕ್ಷ ಡಾಲರುಗಳು.

1995: ಭಾರತ ಮತ್ತು ಚೀನಾ ಹೊಸ ಗಡಿ ರೇಖೆಯನ್ನು ಗುರುತಿಸಿದವು. ಮಿಲಿಟರಿ ಅಧಿಕಾರಿಗಳ ಮಾತುಕತೆಗೆ ನೆರವಾಗಲು ಸಿಕ್ಕಿಂನ ನಾಥೂಲಾ ಪ್ರದೇಶವನ್ನು ಗುರುತಿಸಲಾಯಿತು.

1990: ಭೋಪಾಲಿನಲ್ಲಿ 1984ರಲ್ಲಿ ಸಂಭವಿಸಿದ ಭೀಕರ ವಿಷಾನಿಲ ದುರಂತದಲ್ಲಿ ತೊಂದರೆಗೆ ಒಳಗಾದ 5 ಲಕ್ಷ ಜನರಿಗೆ 360 ಕೋಟಿ ರೂಪಾಯಿಗಳ ನೆರವನ್ನು ಸರ್ಕಾರ ಘೋಷಿಸಿತು.

1953: ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ (1922-53) ಹಾಗೂ ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ (1941-53) ಜೋಸೆಫ್ ಸ್ಟಾಲಿನ್ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಇವರು ಸುಮಾರು ಕಾಲು ದಶಕ ಕಾಲ ಸೋವಿಯತ್ ಒಕ್ಕೂಟದ ಪ್ರಶ್ನಾತೀತ ನಾಯಕರಾಗಿ ಮೆರೆದರು.

1940: ಮಹಾತ್ಮಾ ಗಾಂಧಿಯವರು ಸೆಗಾಂವ್ ಗ್ರಾಮಕ್ಕೆ `ಸೇವಾ ಗ್ರಾಮ' ಎಂಬುದಾಗಿ ಮರುನಾಮಕರಣ ಮಾಡಿದರು.

1916: ಬಿಜೊಯಾನಂದ `ಬಿಜು' ಪಟ್ನಾಯಕ್ (1916-1997) ಹುಟ್ಟಿದರು. ಎರಡನೇ ಜಾಗತಿಕ ಯುದ್ಧದಲ್ಲಿಪಾಲ್ಗೊಂಡ್ದಿದ ಭಾರತದ ಈ ವಿಮಾನ ಚಾಲಕ, ಸ್ವಾತಂತ್ರ್ಯ ಹೋರಾಟಗಾರರೂ, ವಾಣಿಜ್ಯ ವಿಮಾನ ಉದ್ಯಮಿಯೂ ಆಗಿದ್ದರು. 1961-63 ಮತ್ತು
1990-95ರ ಅವಧಿಗಳಲ್ಲಿ ಎರಡು ಬಾರಿ ಒರಿಸ್ಸಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

1913: ಕಿರಾಣ ಘರಾಣ ಸಂಗೀತ ಪದ್ಧತಿಗೆ ದೊಡ್ಡ ಕೀರ್ತಿ ತಂದ ಡಾ. ಗಂಗೂಬಾಯಿ ಹಾನಗಲ್ ಅವರು ಚಿಕ್ಕೂರಾವ್ ನಾಡಗೀರ- ಅಂಬಾಬಾಯಿ ದಂಪತಿಯ ಮಗಳಾಗಿ ಧಾರವಾಡದ ಶುಕ್ರವಾರ ಪೇಟೆಯಲ್ಲಿ ಜನಿಸಿದರು. ತಾಯಿ ಅಂಬಾಬಾಯಿ ಅವರೇ ಇವರಿಗೆ ಸಂಗೀತದ ಗುರು ಹಾಗೂ ಎಲ್ಲ ಸಾಧನೆಗಳ ಪ್ರೇರಕ ಶಕ್ತಿ. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ, ರೂ-ಇ-ಗಜಲ್, ಬೇಗಂ ಅಕ್ತರ್ ಪ್ರಶಸ್ತಿ ಇತ್ಯಾದಿ ಸೇರಿದಂತೆ ಇವರಿಗೆ ಲಭಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.

1912: ಕಥೆಗಾರ್ತಿ ಕೊಡಗಿನ ಗೌರಮ್ಮ ಅವರು ಹುಟ್ಟಿದ ದಿನ. ವಕೀಲ ಹಾಗೂ ಪ್ಲಾಂಟರ್ ಆಗಿದ್ದ ಎನ್.ಎಸ್. ರಾಮಯ್ಯ ಮತ್ತು ನಂಜಕ್ಕ ದಂಪತಿಯ ಮಗಳಾಗಿ ಜನಿಸಿದ ಗೌರಮ್ಮ 1939ರ ಏಪ್ರಿಲ್ 13ರಂದು ನಿಧನರಾದರು. 1931ರಿಂದ 1939ರ ಅವಧಿಯಲ್ಲಿ ಅವರು 21 ಸದಭಿರುಚಿಯ, ಮನದಾಳದ ಅನಿಸಿಕೆಗಳ ಚಿತ್ರ ಕೊಡುವ ಕಥೆಗಳನ್ನು ರಚಿಸಿ ಹೆಸರು ಪಡೆದರು.

1851: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1730: ಆಂಟನಿ ಲೌಮೆಟ್ ಡೆ ಲಾ ಮೋತ್ ಕಾಡಿಲ್ಯಾಕ್ (1658-1730) ಹುಟ್ಟಿದ. ಫ್ರೆಂಚ್ ಯೋಧ, ಸಂಶೋಧಕ ಹಾಗೂ ಫೆಂಚ್ ಉತ್ತರ ಅಮೆರಿಕಾದ ಆಡಳಿತಗಾರನಾದ ಈತ ಡೆಟ್ರಾಯಿಟ್ ನಗರದ ಸ್ಥಾಪಕ. ಸಿಟಿ ಆಫ್ ಕಾಡಿಲ್ಯಾಕ್, ಕಾಡಿಲ್ಯಾಕ್ ಮೌಂಟನ್, ಕಾಡಿಲ್ಯಾಕ್ ಆಟೋಮೊಬೈಲ್ ಇವುಗಳಿಗೆಲ್ಲ ಈತನ ಹೆಸರನ್ನೇ ಇಡಲಾಗಿದೆ.

1512: ಗೆರಾರ್ಡಸ್ ಮರ್ಕೇಟರ್ (1512-1594) ಹುಟ್ಟಿದ ದಿನ. ನಕಾಶೆಗಾರನಾದ ಈತ ನಕಾಶೆಗಳ ಸಂಗ್ರಹಕ್ಕೆ `ಅಟ್ಲಾಸ್' ಎಂಬ ಶಬ್ದವನ್ನು ಅನುಷ್ಠಾನಕ್ಕೆ ತಂದ. ಈತನ ಅತ್ಯಂತ ಪ್ರಮುಖ ಸಂಶೋಧನೆ `ನಕಾಶೆ' (ಮ್ಯಾಪ್). ಮುಂದೆ ಇದು ಮರ್ಕೇಟರ್ ಪ್ರೊಜೆಕ್ಷನ್ ಎಂದೇ ಖ್ಯಾತಿ ಪಡೆಯಿತು.

No comments:

Advertisement