Monday, March 15, 2010

ಇಂದಿನ ಇತಿಹಾಸ History Today ಫೆಬ್ರುವರಿ 09

ಇಂದಿನ ಇತಿಹಾಸ

ಫೆಬ್ರುವರಿ 09

ಭಾರತದ ಸ್ವಾತಂತ್ರ್ಯ ಚಳವಳಿಯ ತೀವ್ರಗಾಮಿ ಬಣದ ನೇತಾರ ಸುಭಾಶ್ ಚಂದ್ರ ಬೋಸ್ ಅವರನ್ನು ಬಂಧನದಲ್ಲಿ ಇರಿಸಿದ್ದ ಮ್ಯಾನ್ಮಾರಿನ (ಹಿಂದಿನ ಬರ್ಮಾ)ಮಾಂಡಲೆಯ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು. ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು.

2009: ಭಾರತದ ಸ್ವಾತಂತ್ರ್ಯ ಚಳವಳಿಯ ತೀವ್ರಗಾಮಿ ಬಣದ ನೇತಾರ ಸುಭಾಶ್ ಚಂದ್ರ ಬೋಸ್ ಅವರನ್ನು ಬಂಧನದಲ್ಲಿ ಇರಿಸಿದ್ದ ಮ್ಯಾನ್ಮಾರಿನ (ಹಿಂದಿನ ಬರ್ಮಾ)ಮಾಂಡಲೆಯ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು. ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಬಂದೀಖಾನೆಯನ್ನು ನೆಲಸಮ ಮಾಡಲಾಯಿತು. ನೇತಾಜಿ ಅವರನ್ನು 1923ರಲ್ಲಿ ಈ ಜೈಲಿನಲ್ಲಿ ಬ್ರಿಟಿಷ್ ಸರ್ಕಾರ ಬಂಧಿಸಿ ಇಟ್ಟಿತ್ತು. ಆಗ ಅವರು ಇಲ್ಲಿಂದ ತಮ್ಮ ಅತ್ತಿಗೆ ಭೀವಾವತಿ ದೇವಿ (ಶರತ್ ಚಂದ್ರ ಬೋಸ್ ಪತ್ನಿ) ಅವರಿಗೆ ಕೆಲವು ಪತ್ರಗಳನ್ನು ಬರೆದಿದ್ದರು.

2009: ಜಗತ್ತನ್ನು ಪರಿವರ್ತಿಸಬಲ್ಲ 10ಮಂದಿ ಪ್ರಭಾವಿಗಳ ಪೈಕಿ ಭಾರತ ಮೂಲದ ಅಮೆರಿಕದ ಲೂಸಿಯಾನಾದ ಗವರ್ನರ್ ಬಾಬ್ಬಿ ಜಿಂದಾಲ್ (37) ಕೂಡ ಒಬ್ಬರು ಎಂಬುದಾಗಿ ಬ್ರಿಟನ್ನಿನ ಪ್ರಕಾಶಕ ಸಂಸ್ಥೆ 'ದಿ ನ್ಯೂ ಸ್ಟೇಟ್ಸ್‌ಮನ್ ಅಂಡ್ ಸೊಸೈಟಿ' ಹೇಳಿತು. ಈ ಪಟ್ಟಿಯಲ್ಲಿ ಭಾರತದ ರೆಜಿನಾ ಪಾಪಾ ಅವರ ಹೆಸರೂ ಸೇರಿತು.. ತಮಿಳುನಾಡಿನ ಅಲಗಪ್ಪಾ ವಿಶ್ವವಿದ್ಯಾಲಯಲ್ಲಿ 1988ರಲ್ಲಿ ಭಾರತದ ಪ್ರಥಮ ಮಹಿಳಾ ಅಧ್ಯಯನ ವಿಭಾಗವನ್ನು ತೆರೆದ ಖ್ಯಾತಿಯ ರೆಜಿನಾ ಪಾಪಾ ಅವರು ಬಾಂಗ್ಲಾದೇಶ ಮೂಲದ ಮಹಿಳೆಯರಿಗಾಗಿರುವ ಏಷ್ಯಾ ವಿಶ್ವವಿದ್ಯಾಲಯದ (ಎಯುಎಂ) ಸ್ಥಾಪನೆಯಲ್ಲಿ ತೊಡಗಿಸಿಕೊಂಡವರು. ಪಟ್ಟಿಯಲ್ಲಿರುವ ಇತರರೆಂದರೆ, ಬ್ರಿಟಿಷ್ ವಕೀಲರಾದ ಚುಕಾ ಉಮುನ್ನಾ (30), ಚೀನಾದ ಸಂಗೀತ ಸಂಯೋಜಕ ಕ್ಸಿಯಾನ್ ಝಂಗ್ (35), ಲೇಖಕ ಹಾಗೂ ಅಮೆರಿಕದ ಜ್ಞಾಪಕ ಶಕ್ತಿ ಪ್ರವೀಣ ಜೋಶುವಾ ಫೊಯೆರ್ (25), ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಥೇನ್ ಡೊನಾಲ್ಡ್, ಟೆಹರಾನ್‌ನ ಮೇಯರ್ ಮಹಮ್ಮದ್ ಬಖರ್ ಖಲೀಬಾ, ಬ್ರಿಟಿಷ್ ಟೆನಿಸ್‌ಪಟು ಲೌರಾ ರ್ಗ್ಸಾನ್, ದಕ್ಷಿಣ ಆಫ್ರಿಕಾದ ನೂತನ ವಿರೋಧ ಪಕ್ಷವಾದ ಕಾಂಗ್ರೆಸ್ ಆಫ್ ದಿ ಪೀಪಲ್‌ನ ಅಧ್ಯಕ್ಷ ಮೊಸಿಯುವಾ ಲೆಕೋಟಾ ಮತ್ತು ಪರಿಸರ ಸಂರಕ್ಷಣೆಗಾಗಿ ಕಾನೂನು ಸಮರ ಸಾರುತ್ತಿರುವ ಅಮೆರಿಕದ 'ಕೆಟ್ಲ್ ಅರ್ಥ್' ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಥೋರ್ಟನ್.

2009: ಸಹಕಾರ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಇಂತಹ ಸಂಘಗಳು ಹಾಗೂ ಬ್ಯಾಂಕ್‌ಗಳಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಧನಸಹಾಯ ಮಾಡುವುದಿಲ್ಲ ಹಾಗೂ ಸರ್ಕಾರದ ಅಧೀನಕ್ಕೆ ಇವು ಒಳಪಡುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಇವುಗಳು ಸರ್ಕಾರಿ ಸಂಸ್ಥೆಗಳಂತೆ ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುತ್ತದೆ ಎನ್ನುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಎನ್.ಕುಮಾರ್ ತಮ್ಮ ತೀರ್ಪಿನಲ್ಲಿ ಹೇಳಿದರು. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ತಮ್ಮನ್ನು ಹೊರಗಿಡುವಂತೆ ಕೋರಿ, ಸಹಕಾರ ಸಂಘ ಹಾಗೂ ಬ್ಯಾಂಕುಗಳು ಎರಡು ವರ್ಷಗಳಿಂದ ನಡೆಸಿದ್ದ ಕಾನೂನು ಸಮರಕ್ಕೆ ಈ ಆದೇಶದಿಂದ ಈಗ ತೆರೆ ಬಿದ್ದಂತಾಯಿತು. ಬೆಂಗಳೂರಿನ ಕನ್ನಿಕಾಪರಮೇಶ್ವರಿ, ಪೂರ್ಣಪ್ರಜ್ಞ, ಭಾರತ್ ಅರ್ಥ್ ಮೂವರ್ಸ್‌ ಸೇರಿದಂತೆ ಅನೇಕ ಸಹಕಾರ ಸಂಘ ಹಾಗೂ ಬ್ಯಾಂಕುಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿ ಬಯಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಬಿ.ಮುನಿಕೃಷ್ಣಪ್ಪ ಸೇರಿದಂತೆ ಕೆಲವರು, ಮಾಹಿತಿ ಹಕ್ಕು ಕಾಯ್ದೆ ಅಡಿ, ಅದನ್ನು ನೀಡುವಂತೆ ಕೋರಿದ್ದರು. ಆದರೆ ತಾವು ಈ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ, ಅದನ್ನು ನೀಡಲಾಗದು ಎಂದು ಸೊಸೈಟಿ ಹಾಗೂ ಬ್ಯಾಂಕ್ ತಿಳಿಸಿತ್ತು.

2009: ತಮ್ಮ ಅಧಿಕಾರಾವಧಿಯ ಕೊನೆ ಗಳಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿ ಹಿಂದೊಮ್ಮೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ, ಮತ್ತೆ ಕೋರ್ಟ್ ತರಾಟೆಗೆ ಒಳಗಾಯಿತು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತಿಮ್ಮಪ್ಪನಗುಡಿ ವಲಯದಲ್ಲಿ 127.48 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಬಿನಿ ಮಿನರಲ್ಸ್ ಲಿಮಿಟೆಡ್ ಕಂಪೆನಿಗೆ ನೀಡಿದ ಅನುಮತಿಯನ್ನು ರದ್ದು ಮಾಡಿ, ನ್ಯಾಯಮೂರ್ತಿ ಎನ್.ಕುಮಾರ್ ಆದೇಶಿಸಿದರು. 'ಅನರ್ಹ ಕಂಪೆನಿಯೊಂದಕ್ಕೆ ನಿಯಮಬಾಹಿರ ಹಾಗೂ ವಿವೇಚನಾರಹಿತವಾಗಿ ಗಣಿಗಾರಿಕೆಗೆ ಅಂದಿನ ಮುಖ್ಯಮಂತ್ರಿಗಳು ಶಿಫಾರಸು ಮಾಡಿದ್ದರ ಹಿಂದೆ ಬೇರೆಯೇ ಉದ್ದೇಶ ಅಡಗಿದೆ' ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದರು. ನಿಯಮದ ಪ್ರಕಾರ ಸ್ಟೀಲ್ ಉತ್ಪಾದನೆ ಮಾಡುವವರಿಗೆ ಮಾತ್ರ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಹುದು. ಆದರೆ ನಿಯಮವನ್ನು ಗಾಳಿಗೆ ತೂರಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರ, ತನ್ನ ಅಧಿಕಾರದ ಕೊನೆ ಕ್ಷಣದಲ್ಲಿ ಈ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಿರುವುದಾಗಿ ದೂರಿ ಸನ್ವಿಕ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಈ ವಿವಾದಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಕರೆದಿದ್ದ ಸಂದರ್ಭದಲ್ಲಿ ಸನ್ವಿಕ್ ಕಂಪೆನಿ ಕೂಡ ಅರ್ಜಿ ಸಲ್ಲಿಸಿತ್ತು. 2007ರ ಫೆಬ್ರುವರಿ 2ರಂದು ಅರ್ಜಿದಾರರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದರು. ಆದರೆ ಏಳು ತಿಂಗಳು ಕಳೆದರೂ ಯಾವುದೇ ಉತ್ತರ ಸರ್ಕಾರದಿಂದ ಬಂದಿರಲಿಲ್ಲ.

2008: ನಾಗಪುರ, ಮಹಾರಾಷ್ಟ್ರ (ಪಿಟಿಐ): ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಗಾಂಧಿವಾದಿ ಬಾಬಾ ಆಮ್ಟೆ ಅವರು ಚಂದ್ರಾಪುರ ಜಿಲ್ಲೆಯ ವರೊರಾದಲ್ಲಿರುವ ತಮ್ಮ `ಆನಂದವನ' ಆಶ್ರಮದಲ್ಲಿ ಈದಿನ ಬೆಳಗಿನ ಜಾವ 4.15ಕ್ಕೆ ನಿಧನರಾದರು. ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ ಬಾಬಾ ಅವರಿಗೆ 94 ವರ್ಷ ವಯಸ್ಸಾಗಿತ್ತು. ಮುರಳೀಧರ ದೇವಿದಾಸ್ ಬಾಬಾ ಆಮ್ಟೆ ಕುಷ್ಠರೋಗಿಗಳ ಪುನರ್ವಸತಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದವರು. ಗಾಂಧಿ ಮಾರ್ಗದಲ್ಲಿ ನಡೆದ ಅವರು ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಾಬಾ ಪುತ್ರ ವಿಕಾಸ್ ಆಮ್ಟೆ ವೈದ್ಯರು. ಮತ್ತೊಬ್ಬ ಮಗ ಪ್ರಕಾಶ ಕೂಡ ವೈದ್ಯರಾಗಿದ್ದು ಅವರು ವಿದರ್ಭದ ಗುಡ್ಡಗಾಡಿನ ಬುಡಕಟ್ಟು ಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಮತ್ತೊಬ್ಬ ಮಗಳು ಶೀತಲ್. ಕುಷ್ಠರೋಗಿಗಳ ಪಾಲಿಗೆ ಸೂರ್ಯನಂತಿದ್ದ, ಪರಿಸರವಾದಿಗಳ ಪಾಲಿಗೆ ಟಾನಿಕ್ಕಿನಂತಿದ್ದ ಬಾಬಾ ಆಮ್ಟೆ ಭಾರತ ಕಂಡ ಬಹು ದೊಡ್ಡ ಸಮಾಜ ಸುಧಾರಕ, ಪರಿಸರವಾದಿ. 1914ರ ಡಿಸೆಂಬರ್ 26 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಇವರು ಆರಂಭದಲ್ಲಿ ವಕೀಲ ವೃತ್ತಿ ನಡೆಸಿ ನಂತರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟರು. ಈ ಅವಧಿಯಲ್ಲಿ ಗಾಂಧೀಜಿ ಅವರ ಆಶ್ರಮ ಸೇವಾಗ್ರಾಮದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಬಾಬಾ, ಅಲ್ಲಿ ವಿನೋಭಾ ಭಾವೆ, ರವೀಂದ್ರನಾಥ ಟಾಗೂರ್ ಮೊದಲಾದವರ ಪ್ರಭಾವಕ್ಕೆ ಒಳಗಾದರು. ಮುಂದೆ ಕುಷ್ಠರೋಗಿಗಳತ್ತ ತಮ್ಮ ಗಮನ ಹರಿಸಿದ ಆಮ್ಟೆ ಕುಷ್ಠರೋಗಿಗಳ ಆರೈಕೆಗಾಗಿಯೇ ತಮ್ಮ ಬದುಕನ್ನು ಮೀಸಲಿಟ್ಟರು. ಮೊದಲು ವರೋರಾ ಸುತ್ತಮುತ್ತಲಿನ ಕುಷ್ಠರೋಗಿಗಳಿಗಾಗಿ 11 ಚಿಕಿತ್ಸಾಲಯಗಳನ್ನು ತೆರದರು. ನಂತರ `ಆನಂದವನ' ಎಂಬ ಆಶ್ರಮವನ್ನು ಆರಂಭಿಸಿದರು. ಈ ಮಂದಿರದಲ್ಲಿ ಈಗ 5 ಸಾವಿರ ಕುಷ್ಠರೋಗಿಗಳು ಆರೈಕೆ ಪಡೆಯುತ್ತಿದ್ದಾರೆ. ಹಲವು ಪರಿಸರ ಚಳವಳಿಗಳನ್ನು ಹುಟ್ಟು ಹಾಕಿದ ಬಾಬಾ ಜನತೆಯ್ಲಲಿ ಪರಿಸರದ ಬಗೆಗೆ ಅರಿವು ಮೂಡಿಸುವ ಸಲುವಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 1985ರಲ್ಲಿ ಬೃಹತ್ ಜಾಥಾ ಕೈಗೊಂಡರು. ನಂತರ ಅಸ್ಸಾಮಿನಿಂದ ಗುಜರಾತ್ ವರೆಗೆ 1988ರಲ್ಲಿ ಇಂತಹುದೇ ಜಾಥಾ ನಡೆಸಿದರು. ನರ್ಮದಾ ನದಿಯ ಸರ್ದಾರ್ ಸರೋವರ ಜಲಾಶಯದಂತಹ ಬೃಹತ್ ಅಣೆಕಟ್ಟೆಗಳ ನಿರ್ಮಾಣಕ್ಕೆ ಕಡು ವಿರೋಧ ವ್ಯಕ್ತಪಡಿಸಿದವರಲ್ಲಿ ಬಾಬಾ ಕೂಡ ಒಬ್ಬರು. ಇಂತಹ ಮಹಾನ್ ಚೇತನಕ್ಕೆ ಸಂದಿರುವ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಪದ್ಮಶ್ರೀ (1971), ಮ್ಯಾಗ್ಸೆಸೆ ಪ್ರಶಸ್ತಿ (1985), ಪದ್ಮವಿಭೂಷಣ (1986) ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ಗಾಂಧಿ ಶಾಂತಿ ಪ್ರಶಸ್ತಿ (2000) ಅವರಿಗೆ ಸಂದ ಕೆಲವು ಪ್ರಮುಖ ಗೌರವಗಳು.

2008: ದೇಶದಾದ್ಯಂತ ಸಂಚಲನವುಂಟು ಮಾಡಿದ ಅಂತಾರಾಷ್ಟ್ರೀಯ ಮಟ್ಟದ ಬಹುಕೋಟಿ ಮೊತ್ತದ ಕಿಡ್ನಿ ಕಸಿ ಹಗರಣದ ಪ್ರಮುಖ ಆರೋಪಿ ಡಾ.ಅಮಿತ್ ಕುಮಾರನನ್ನು ನೇಪಾಳದಿಂದ ಭಾರತಕ್ಕೆ ಭಾರಿ ಭದ್ರತೆಯಲ್ಲಿ ಕರೆತರಲಾಯಿತು. 40ವರ್ಷದ ಈ ಆರೋಪಿಯನ್ನು ಏರ್ ಇಂಡಿಯಾ ವಿಮಾನದಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಸಂಜೆ ಕರೆತಂದು ನಂತರ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು. ತಲೆ ತಪ್ಪಿಸಿಕೊಂಡಿದ್ದ ಸಂತೋಷ್ ರಾವುತ್ ಯಾನೆ ಡಾ.ಅಮಿತ್ ಕುಮಾರನನ್ನು ನೇಪಾಳದ ಚಿತ್ವಾನ್ ಜಿಲ್ಲೆಯ ವೈಲ್ಡ್ ಲೈಫ್ ಕ್ಯಾಂಪ್ ಎಂಬ ರೆಸಾರ್ಟಿನಲ್ಲಿ ಆತನ ಸಹಚರ ಮನೀಷ್ ಸಿಂಗ್ ಜೊತೆಗೆ ಹಿಂದಿನ ದಿನ ಸಂಜೆ 5 ಗಂಟೆಗೆ ಬಂಧಿಸಲಾಗಿತ್ತು. ಜ.28ರಿಂದ ಈತ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ. ಮೂಲಗಳ ಪ್ರಕಾರ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಇವರ ಜೊತೆಯಲ್ಲಿದ್ದ ಮತ್ತೊಬ್ಬ ಆರೋಪಿ ಪರಾರಿಯಾದ ಬಂಧಿತರಿಂದ 1.45 ಲಕ್ಷ ಯುರೊಗಳು 18,900 ಅಮೆರಿಕನ್ ಡಾಲರುಗಳು ಹಾಗೂ 9.36 ಲಕ್ಷ ಮೊತ್ತದ ಡಿಮಾಂಡ್ ಡ್ರಾಫ್ಟ್ ವಶಪಡಿಸಿಕೊಳ್ಳಲಾಯಿತು.

2008: ದೃಶ್ಯ, ಶ್ರವ್ಯ, ಜನಪದ ಹಾಗೂ ಪ್ರದರ್ಶಕ ಕಲೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಸಂಜಯನಗರದ ಕೆ.ಇ.ಬಿ. ಬಡಾವಣೆಯಲ್ಲಿ ಸುಸಜ್ಜಿತ `ಚಂದ್ರಪ್ರಿಯ' ರಂಗಮಂದಿರಕ್ಕೆ ಚಾಲನೆ ನೀಡಲಾಯಿತು. 200 ಆಸನಗಳ ವ್ಯವಸ್ಥೆ ಹೊಂದಿರುವ ಈ ರಂಗಮಂದಿರದ ಕಟ್ಟಡವನ್ನು ಬೆಂಗಳೂರಿನ ಶ್ರೀಭವಾನಿ ಟ್ರಸ್ಟ್ ನೀಡಿದ್ದು ಧ್ವನಿ, ಬೆಳಕಿನ ಉಪಕರಣಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸಿತು. ಮೈಸೂರಿನ ಅವಧೂತ ದತ್ತಪೀಠದ ದತ್ತ ವಿಜಯಾನಂದ ಸ್ವಾಮೀಜಿ ರಂಗಮಂದಿರ ಉದ್ಘಾಟಿಸಿದರು. ಕಲಾಶಾಲೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಭಾನುವಾರದ ಅಭಿನಯ ತರಗತಿಯನ್ನು ಚಲನಚಿತ್ರ ಕಲಾವಿದ ಹಾಗೂ ಚಿತ್ರನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಉದ್ಘಾಟಿಸಿದರು. ನಂತರ ನಡೆದ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಗೆ `ರಂಗಾಭರಣ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

2007: ಹಿಂದಿನ ದಿನವಷ್ಟೇ ಎಫ್ -16 ವಿಮಾನ ಹಾರಿಸಿ ದಾಖಲೆ ಮೆರೆದಿದ್ದ ಉದ್ಯಮಿ ರತನ್ ಟಾಟಾ ಅವರು ಈದಿನ ಅಮೆರಿಕ ವಾಯುಪಡೆಯ `ಬೋಯಿಂಗ್ ಎಫ್ -18 ಸೂಪರ್ ಹಾರ್ನೆಟ್ ಚಾಲನೆ ಮಾಡಿ, 10,000 ಅಡಿಗಳಿಗೂ ಎತ್ತರದಲ್ಲಿ 1300 ಕಿ.ಮೀ. ವೇಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದರು. ಎರಡು ಎಂಜಿನ್ ಹೊಂದಿರುವ ಎಫ್ 18 ವಿಮಾನ ಬಹುಕಾರ್ಯ ನಿರ್ವಹಿಸಬಲ್ಲ ಜೆಟ್ ಫೈಟರ್. ಅಮೆರಿಕ ವಾಯುಪಡೆ ಯೋಧರಿಗೆ ತರಬೇತಿ ನೀಡಲು ಇದನ್ನು ಬಳಸಲಾಗುತ್ತದೆ.

2007: ವೆಸ್ಟ್ ಇಂಡೀಸ್ ಕ್ರಿಕೆಟಿಗ ಮಾರ್ಲೋನ್ ಸ್ಯಾಮ್ಯುಯೆಲ್ ಅವರು ಬುಕ್ಕಿಯೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಬಗ್ಗೆ ಪೊಲೀಸರು ನೀಡಿರುವ ವರದಿ ಸಂಬಂಧ ತನಿಖೆ ನಡೆಸಲು ನಾಗಪುರಕ್ಕೆ ವಿಶೇಷ ತಂಡವೊಂದನ್ನು ಕಳುಹಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತೀರ್ಮಾನಿಸಿತು.

2007: ದೇಶೀಯ ಕ್ರೀಡಾಪಟುಗಳ ಸಾಮರ್ಥ್ಯವನ್ನು ಒರೆಗೆ ಹಚ್ಚುವ 33ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಗುವಾಹಟಿಯಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ರಾಷ್ಟ್ರೀಯ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.

2007: ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಮೈಕೆಲ್ ಲೋಪೆಜ್ ಅಲೆಜ್ರಿಯಾ ಅವರು ಮೂರನೇ ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಮೂರು ಬಾರಿಯ ಬಾಹ್ಯಾಕಾಶ ನಡಿಗೆಗಳಲ್ಲಿ ಕೊನೆಯಾದ ಈ ನಡಿಗೆಯಲ್ಲಿ 6.40 ನಿಮಿಷ ಕಾಲ ಬಾಹ್ಯಾಕಾಶ ಸುತ್ತಾಟದ ಬಳಿಕ ಅವರು ಬಾಹ್ಯಾಕಾಶ ನೌಕೆಗೆ ವಾಪಸಾದರು. ಈ ನಡಿಗೆಯೊಂದಿಗೆ ಅತಿ ಹೆಚ್ಚು ಸಮಯ ಬಾಹ್ಯಾಕಾಶ ನಡೆಗೆ ಮಾಡಿದ ಅಮೆರಿಕ ಗಗನಯಾತ್ರಿ (50 ಗಂಟೆ 32 ನಿಮಿಷ) ಎಂಬ ಹೆಗ್ಗಳಿಕೆಗೆ ಲೋಪೆಜ್ ಪಾತ್ರರಾದರು. ರಷ್ಯದ ಅನಾತೊಲಿ ಸೊಲೊವ್ಯೂವ್ ಅವರ ವಿಶ್ವದಾಖಲೆ ಮುರಿಯಲು ಲೋಪೆಜ್ ಇನ್ನೂ 24 ಗಂಟೆ ಕಾಲ ಬಾಹ್ಯಾಕಾಶದಲ್ಲಿ ನಡೆದಾಡಬೇಕು. ಮಹಿಳಾ ಗಗನಯಾತ್ರಿಗಳ ಪೈಕಿ ಸುನೀತಾ ವಿಲಿಯಮ್ಸ್ ಅವರು ಈಗಾಗಲೇ ಬಾಹ್ಯಾಕಾಶ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

2007: ಮೋಹಕ ನಟಿ ಮರ್ಲಿನ್ ಮನ್ರೋಳಂತೆಯೇ ಆಗಬೇಕೆಂದು ಬಯಸಿದ್ದ ಹಾಲಿವುಡ್ ನಟಿ ಅನ್ನಾ ನಿಕೋಲೆ ಸ್ಮಿತ್ 39ನೆಯ ವಯಸ್ಸಿನಲ್ಲಿ ಫ್ಲೋರಿಡಾದ ಹೋಟೆಲ್ ಒಂದರಲ್ಲಿ ಮೃತರಾದರು. ನಟನೆಯಲ್ಲಿ ಮರ್ಲಿನ್ ಮನ್ರೋಗೆ ಸರಿಗಟ್ಟಲಾಗದಿದ್ದರೂ ಸಾವಿನಲ್ಲಿ ಅಕೆಗೆ ಸರಿಸಮ ಎನಿಸಿಕೊಂಡರು.

2007: ವಿಶ್ವಸಂಸ್ಥೆಯ ಅಧೀನ ಮಹಾ ಕಾರ್ಯದರ್ಶಿ ಶಶಿ ತರೂರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.. ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಏರಲು ವಿಫಲ ಸ್ಪರ್ಧೆ ನಡೆಸಿದ್ದರು.

2007: ಕಾವೇರಿ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದಂತೆ ಸರ್ವಪಕ್ಷ ಸಭಯಲ್ಲಿ ವ್ಯಕ್ತವಾಗುವ ಅಭಿಪ್ರಾಯಕ್ಕೆ ಬದ್ಧವಾಗಲು ಕರ್ನಾಟಕ ರಾಜ್ಯ ಸಚಿವ ಸಂಪುಟ ನಿರ್ಧರಿಸಿತು.

2006: ಹಿಂದಿ ಚಿತ್ರರಂಗದ ಹಿರಿಯ ನಟಿ ನಾದಿರಾ (74) ಮುಂಬೈಯಲ್ಲಿ ನಿಧನರಾದರು. 1950ರಲ್ಲಿ ಮೆಹಬೂಬ್ ಖಾನ್ ನಿರ್ಮಿಸಿದ ಆನ್ ಚಿತ್ರದೊಂದಿಗೆ ಬಾಲಿವುಡ್ಡಿಗೆ ಕಾಲಿಟ್ಟ ನಾದಿರಾ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಶ್ರೀ 420 ಚಿತ್ರದ ಮುಡ್ ಮುಡ್ ಕೆ ನ ದೇಖ್ ಹಾಡಿನಿಂದ ಅತ್ಯಂತ ಜನಪ್ರಿಯರಾದರು. ಮೂಲತಃ ಬಾಗ್ದಾದಿನ ಯಹೂದಿಯಾದ ನಾದಿರಾ ಅವರ ಮೂಲ ಹೆಸರು ಫ್ಲಾರೆನ್ಸ್ ಸಾಲ್ ಎಜಿಲ್. ಚಿಕ್ಕಂದಿನಲ್ಲಿ ಮುದ್ದಿನಿಂದ ಪರ್ಹಾತ್ ಎಂದು ಕರೆಸಿಕೊಳ್ಳುತ್ತಿದ್ದ ಅವರು ಅವಿವಾಹಿತರು. ಆಕೆಯ ಒಬ್ಬ ಸಹೋದರ ಇಸ್ರೇಲಿನಲ್ಲಿ ಇದ್ದಾರೆ.

2006: ಬ್ಯಾಟರಿ ಚಾಲಿತ ಮೋಟಾರಿನಿಂದ ಕೆಲಸ ಮಾಡುವ, ಪೆಟ್ರೋಲ್ ಬೇಡದ ಯೊಬೈಕ್ಸ್ ಹೆಸರಿನ ಪರಿಸರ ಸ್ನೇಹಿ ಬೈಕಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಬ್ಯಾಟರಿಯಿಂದ ಓಡುವ ಈ ಬೈಕ್ ಮಾದರಿಯಲ್ಲೇ ತ್ರಿಚಕ್ರ ಹಾಗೂ ಹೈಬ್ರಿಡ್ ಬಸ್ಸುಗಳನ್ನೂ ಶೀಘ್ರದಲ್ಲೇ ರಸ್ತೆಗೆ ಬಿಡುವುದಾಗಿ ಗುಜರಾತಿನ ಎಲೆಕ್ಟ್ರೋಥರ್ಮ್ (ಇಂಡಿಯಾ) ಲಿ. ಅಧ್ಯಕ್ಷ ಆಡಳಿತ ನಿರ್ದೇಶಕ ಮುಖೇಶ ಭಂಡಾರಿ ಪ್ರಕಟಿಸಿದರು. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 40ರಿಂದ 70 ಕಿ.ಮೀ. ಓಡಬಲ್ಲ ಈ ಬೈಕ್ ಓಡಿಸಲು ಪೆಟ್ರೋಲ್ ಬೇಕಿಲ್ಲ. ಪರವಾನಗಿ ಅಥವಾ ನೋಂದಣಿ ರಗಳೆ ಇಲ್ಲ.

1999: ಖ್ಯಾತ ಬ್ರಿಟಿಷ್ ಕಾದಂಬರಿಕಾರ, ತತ್ವಜ್ಞಾನಿ ಡೇಮ್ ಜೀನ್ ಐರಿಸ್ ಮುರ್ಡೊಕ್ (1919-1999) ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

1995: ಅಮೆರಿಕನ್ ಸೆನೆಟರ್ ಜೇಮ್ಸ್ ವಿಲಿಯಂ ಫುಲ್ ಬ್ರೈಟ್ ನಿಧನರಾದರು. ಇವರು `ಫುಲ್ ಬ್ರೈಟ್ ಸ್ಕಾಲರ್ ಶಿಪ್' ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವಾಂಸರ ವಿನಿಮಯ ಕಾರ್ಯಕ್ರಮವನ್ನು ಆರಂಬಿಸಿದ್ದರು.

1969: ಕಲಾವಿದ ರಜನಿ ರಘುನಾಥ ಕುಲಕರ್ಣಿ ಜನನ.

1953: ಕಲಾವಿದ ಗೀತಾ ಸದನಂದ ಜವಡೇಕರ ಜನನ.

1940: ಜೋಸೆಫ್ ಮೈಕೆಲ್ ಕೊಯುಟ್ಟೀ ಹುಟ್ಟಿದರು. ದಕ್ಷಿಣ ಆಫ್ರಿಕಾದ ಬರಹಗಾರರಾದ ಇವರು 1983ರಲ್ಲಿ ಬೂಕರ್ ಪ್ರಶಸ್ತಿ ಗೆದ್ದಿದ್ದರು.

1932: ಕಲಾವಿದ ಶ್ರೀನಿವಾಸರಾವ್ ಜನನ.

1931: ಭಾರತದ ರಾಜಧಾನಿಯಾಗಿ ನವದೆಹಲಿಯನ್ನು ಈದಿನ ಉದ್ಘಾಟಿಸಲಾಯಿತು. ಬ್ರಿಟಿಷರು ನವದೆಹಲಿಯನ್ನು ದೇಶದ ನೂತನ ರಾಜಧಾನಿಯನ್ನಾಗಿ ಮಾಡಿಕೊಂಡರು. 1912ರಲ್ಲಿ ದೇಶದ ರಾಜಧಾನಿಯನ್ನು ದೆಹಲಿಯಿಂದ ಕಲ್ಕತ್ತಾಕ್ಕೆ (ಈಗಿನ ಕೋಲ್ಕತ) ವರ್ಗಾಯಿಸಲಾಗಿತ್ತು.

1925: ಕಲಾವಿದ ನರಸಿಂಹಮೂರ್ತಿ ದಾಸ್ ಸಿ.ವಿ. ಜನನ.

1923: ನಾರ್ಮನ್ ಎಡ್ವರ್ಡ್ ಶಮ್ ವೇ ಹುಟ್ಟಿದ ದಿನ. ಅಮೆರಿಕನ್ ಸರ್ಜನ್ ಆದ ಇವರು 1968ರಲ್ಲಿ ಅಮೆರಿಕದಲ್ಲಿ ಮೊತ್ತ ಮೊದಲ ಬಾರಿಗೆ ವಯಸ್ಕ ವ್ಯಕ್ತಿಗೆ ಹೃದಯ ಕಸಿ ಮಾಡಿದವರು.

1919: ಕಲಾವಿದ ಕೆ.ಎಸ್. ಛಾಯಾಪತಿ ಜನನ.

1914: ವೃತ್ತಿ ರಂಗಭೂಮಿ, ನಾಟಕ ಹಾಗೂ ಸಿನಿಮಾ ರಂಗದಲ್ಲಿ ಸಾಹಿತಿ, ನಟ, ನಿರ್ದೇಶಕರಾಗಿ ದುಡಿದು ಜನಪ್ರಿಯತೆ ಗಳಿಸಿದ ಹುಣಸೂರು ಕೃಷ್ಣಮೂರ್ತಿ (9-2-1914ರಿಂದ 13-1-1989) ರಾಜಾರಾಯರು- ಪದ್ಮಾವತಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ನಾಟಕ ಕಂಪೆನಿಗಳಲ್ಲಿ ನಟನಾಗಿ, ಸಾಹಿತಿಯಾಗಿ ಸೇವೆ ಸಲ್ಲಿಸಿದ ಅವರು ನಂತರ ಚಿತ್ರರಂಗಕ್ಕೆ ಇಳಿದು ಹಲವಾರು ಚಿತ್ರಗಳ ತಯಾರಿಕೆಯಲ್ಲಿ ಎಲ್ಲ ಪ್ರಕಾರಗಳಲ್ಲೂ ದುಡಿದರು. ಈ ಅನುಭವದ ಆಧಾರದಲ್ಲಿ ಹಲವಾರು ಚಿತ್ರಗಳ ನಿರ್ದೇಶನದ ಹೊಣೆಯನ್ನೂ ಹೊತ್ತರು. ಕೃಷ್ಣಗಾರುಡಿ ಇವರ ಪ್ರಥಮ ನಿರ್ದೇಶನದ ಚಿತ್ರ. ನಂತರ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ, 400ಕ್ಕೂ ಹೆಚ್ಚು ಅರ್ಥಗರ್ಭಿತ ಗೀತೆಗಳನ್ನು ರಚಿಸಿದ ಹುಣಸೂರು, ರಾಜ್ಯ ಸರ್ಕಾರ ಸ್ಥಾಪಿಸಿದ `ಪುಟ್ಟಣ್ಣ ಕಣಗಾಲ್' ಪ್ರಶಸ್ತಿ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

1900: ಅಮೆರಿಕದ ಡ್ವೈಟ್ ಡೇವಿಸ್ ಅವರು ಟೆನಿಸ್ ಆಟಕ್ಕಾಗಿ `ಡೇವಿಸ್ ಕಪ್'ನ್ನು ಸ್ಥಾಪಿಸಿದರು. ಇದು ಅಧಿಕೃತವಾಗಿ `ಇಂಟರ್ ನ್ಯಾಷನಲ್ ಲಾನ್ ಟೆನಿಸ್ ಚಾಲೆಂಜ್ ಟ್ರೋಫಿ' ಎಂದೇ ಖ್ಯಾತಿ ಪಡೆದಿದೆ. ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ತಂಡಗಳ ನಡುವಣ ಸ್ಪರ್ಧೆಗಾಗಿ ಈ ಟ್ರೋಫಿಯನ್ನು ನೀಡಲಾಯಿತು. ಪಂದ್ಯದಲ್ಲಿ ಡೇವಿಸ್ ಸ್ವತಃ ವಿಜೇತ ಅಮೆರಿಕನ್ ತಂಡಗಳ ಪರವಾಗಿ ಆಡಿದ್ದರು. 1912ರಿಂದ ಡೇವಿಸ್ ಕಪ್ ಟೂರ್ನಮೆಂಟ್ ಇಂಟರ್ ನ್ಯಾಷನಲ್ ಲಾನ್ ಟೆನಿಸ್ ಫೆಡರೇಷನ್ ಉಸ್ತುವಾರಿಯಲ್ಲಿ ನಡೆಯುತ್ತಿದ್ದು ಈಗ ನಿಜವಾದ ಅಂತಾರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ.

1846: ವಿಲ್ಹೆಲ್ಮ್ ಮೇಬ್ಯಾಕ್ (1846-1929) ಹುಟ್ಟಿದ ದಿನ. ಜರ್ಮನ್ ಎಂಜಿನಿಯರ್ ಆದ ಈತ ಮೊತ್ತ ಮೊದಲ ಮರ್ಸಿಡಸ್ ಆಟೋಮೊಬೈಲುಗಳ ವಿನ್ಯಾಸಕಾರನಾಗಿದ್ದ.

1773: ವಿಲಿಯಂ ಹೆನ್ರಿ ಹ್ಯಾರಿಸನ್ (1773-1841) ಹುಟ್ಟಿದ. ಅಮೆರಿಕದ ಒಂಬತ್ತನೇ ಅಧ್ಯಕ್ಷನಾದ ಈತ ಒಂದು ತಿಂಗಳ ಬಳಿಕ ಮೃತನಾಗಿ ಹುದ್ದೆಯಲ್ಲಿದ್ದಾಗಲೇ ಮೃತನಾದ ಮೊದಲ ಅಧ್ಯಕ್ಷ ಎನಿಸಿಕೊಂಡ.

1404: ಬೈಝಾಂಟೈನಿನ ಕೊನೆಯ ಚಕ್ರವರ್ತೆ 11ನೇ ಕಾನ್ ಸ್ಟಾಂಟಿನ್ (1404-1453) ಹುಟ್ಟಿದ. ಕಾನ್ ಸ್ಟಾಂಟಿನೋಪಲ್ ರಕ್ಷಣೆಗಾಗಿ ಒಟ್ಟೋಮಾನ್ ಟರ್ಕರ ವಿರುದ್ಧ ನಡೆದ ಅಂತಿಮ ಹೋರಾಟದಲ್ಲಿ ಈತ ಅಸು ನೀಗಿದ.

No comments:

Advertisement