Monday, May 10, 2010

'ಸ್ನೇಹ ಸಂಪತ್ತು' ಬಿಡುಗಡೆಯಾಯಿತು..

'ಸ್ನೇಹ ಸಂಪತ್ತು' ಬಿಡುಗಡೆಯಾಯಿತು..

'ಸ್ನೇಹದ ತಿರುಳು' ಹಿಡಿದಿಟ್ಟಿರುವ ಈ ಪುಸ್ತಕದ ಹೆಸರು 'ಸ್ನೇಹ ಸಂಪತ್ತು.' 9 ಮೇ 2010ರ ಭಾನುವಾರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನ 'ಗಾಂಧಿ ನೆಹರೂ ರಂಗಮಂದಿರದಲ್ಲಿ ಚಿತ್ರನಟಿ ಭಾರತಿ ವಿಷ್ಣು ವರ್ಧನ್ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಿದಾಗ ಅಲ್ಲಿ ಧ್ವನಿವರ್ಧಕದಲ್ಲಿ ಮೊಳಗಿದ ಸಂಗೀತ ಬಿಟ್ಟಿರೆ ಇದ್ದುದು ನೀರವ ಮೌನ.

ಲೇಖಕ ಎಂ. ನರಸಿಂಹ ಮೂರ್ತಿ ಅವರು ವಿಷ್ಣು ಗೆಳೆಯರ ಬಳಗವನ್ನು ಸಂಪರ್ಕಿಸಿ ಅವರು ಹೇಳಿದ ಅನುಭವಗಳ ಆಧಾರದಲ್ಲಿ ರಚಿಸಿದ ಈ ಕೃತಿ ಕನ್ನಡದ ಖ್ಯಾತ ನಟ ದಿವಂಗತ ವಿಷ್ಣು ವರ್ಧನ್ ಅವರ ವೈಯಕ್ತಿಕ ಬದುಕಿನ ಹಲವಾರು ಮುಖಗಳನ್ನು ತೆರೆದಿಡುತ್ತದೆ. ಕೆಲ ತಿಂಗಳುಗಳ ಹಿಂದೆ ಅಗಲಿದ ವಿಷ್ಣು ವರ್ಧನ್ ಅವರ ವೈಯಕ್ತಿಕ ಜೀವನದ ಬಗ್ಗೆ ಬಂದ ಬಹುಶಃ ಮೊದಲ ಪುಸ್ತಕ ಇದು.

ಸಭಾಂಗಣದಲ್ಲಿ ನೆರೆದಿದ್ದ ಸಂಪತ್ ಕುಮಾರ ಯಾನೆ ವಿಷ್ಣು ವರ್ಧನ್ ಗೆಳೆಯರ ಬಳಗ, ಅಭಿಮಾನಿಗಳ ಬಳಗ ಸಮಾರಂಭದ ಬಳಿಕ ಭಾರತಿ ವಿಷ್ಣು ವರ್ಧನ್ ಅವರಿಂದ ಪುಸ್ತಕದಲ್ಲಿ 'ಆಟೋಗ್ರಾಫ್' ಪಡೆದುಕೊಂಡು ಈ ಸಮಾರಂಭದ ನೆನಪಿನ ಕ್ಷಣವನ್ನು ತಮ್ಮ ತಮ್ಮ ಪುಸ್ತಕಗಳಲ್ಲಿಯೇ ಭದ್ರ ಪಡಿಸಿಕೊಂಡರು.

ಭಾರತಿ ವಿಷ್ಣು ವರ್ಧನ್ ಮತ್ತು ಚಿತ್ರನಟ ಸುಂದರರಾಜ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ವಿಷ್ಣು ವರ್ಧನ್ ಅವರೊಂದಿಗೆ ಇದ್ದ ಹಲವಾರು ಗೆಳೆಯರು, ಗೆಳತಿಯರು, ಚಿತ್ರ ನಟ, ನಟಿಯರು ತಮ್ಮ ಪ್ರೀತಿ,ಅನುಭವಗಳನ್ನು ಈ ಕೃತಿಯೊಳಗೆ ದಾಖಲಿಸುವ ಮೂಲಕ ನಿಜಕ್ಕೂ ಸ್ನೇಹ ಸಾರ್ಥಕ್ಯ ಮೆರೆದಿದ್ದಾರೆ. ಅವರ ನೆನಪು, ನಿಮ್ಮೆಲ್ಲರ ಸ್ನೇಹ ಸಂಪತ್ತು ಚಿರಾಯುವಾಗಿರಲಿ’ ಎಂದು ಹಾರೈಸಿದರು.

ವಿಷ್ಣು ವರ್ಧನ್ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಸುಂದರ, ಆಕರ್ಷಕ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಸಂತಸ, ದುಃಖ ಪ್ರತಿಯೊಂದನ್ನೂ ಹಂಚಿಕೊಳ್ಳಬಯಸುತ್ತಿದ್ದ ಅವರು 'ಸ್ನೇಹಲೋಕ'ವನ್ನು ನಿರ್ಮಿಸಿದ್ದರು' ಎಂದು ನೆನಪು ಮಾಡಿಕೊಂಡರು ಸುಂದರರಾಜ್.

ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ.ಮಹೇಶ್ ಜೋಶಿ, ನಟ ಕೂದವಳ್ಳಿ ಚಂದ್ರಶೇಖರ್, ಖ್ಯಾತ ಇತಿಹಾಸ ತಜ್ಞ ನಂಜರಾಜ ಅರಸು, ಕೃತಿಯ ಲೇಖಕ ಎಂ.ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಲೀಲಾವತಿ, ಸಂಸ್ಥೆಯ ಗೌರವ ಅಧ್ಯಕ್ಷ ಆನಂದ್ ಇನ್ನಿತರರು ಉಪಸ್ಥಿತರಿದ್ದರು.

ನ್ಯಾಷನಲ್ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಗಿರಿನಗರದ ಮಾಧ್ಯಮ ಕ್ರಿಯೇಷನ್ಸ್ ಜಂಟಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.



No comments:

Advertisement