Tuesday, May 4, 2010

ಇಂದಿನ ಇತಿಹಾಸ History Today ಮೇ 04


ಇಂದಿನ ಇತಿಹಾಸ

ಮೇ 04

ಸೇನಾ ಮುಖ್ಯಸ್ಥನನ್ನು ವಜಾ ಮಾಡುವ ಮಾವೋವಾದಿ ಸರ್ಕಾರದ ನಿರ್ಧಾರವನ್ನು ಅಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿತು. ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಸೇನಾ ದಂಡ ನಾಯಕ ರುಕ್ಮಾಂಗದ ಕಟ್ವಾಲ್ ಅವರಿಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಿರ್ದೇಶಿಸಿದ ಬೆನ್ನಲ್ಲೇ ಪ್ರಚಂಡ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.

2009: ಸೇನಾ ಮುಖ್ಯಸ್ಥನನ್ನು ವಜಾ ಮಾಡುವ ಮಾವೋವಾದಿ ಸರ್ಕಾರದ ನಿರ್ಧಾರವನ್ನು ಅಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನಿ ಪ್ರಚಂಡ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದರೊಂದಿಗೆ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಿಸಿತು. ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ಸೇನಾ ದಂಡ ನಾಯಕ ರುಕ್ಮಾಂಗದ ಕಟ್ವಾಲ್ ಅವರಿಗೆ ಹುದ್ದೆಯಲ್ಲಿ ಮುಂದುವರೆಯುವಂತೆ ನಿರ್ದೇಶಿಸಿದ ಬೆನ್ನಲ್ಲೇ ಪ್ರಚಂಡ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು.

2009: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ರಾಕೇಶ್ ಮೋಹನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವ ವಿದ್ಯಾಲಯದಲ್ಲಿರುವ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರದಲ್ಲಿ ಸಲಹಾ ಪ್ರೊಫೆಸರ್ ಆಗಿ ಅವರು ನಿಯೋಜಿತರಾದ ಹಿನ್ನೆಲೆಯಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದರು ಎಂದು ಆರ್‌ಬಿ ಐ ತಿಳಿಸಿತು.

2009: ಭಾರತ ರಾಷ್ಟ್ರೀಯ ವಿಮಾನಯಾನ ಕಂಪೆನಿ ಲಿಮಿಟೆಡ್ (ಎನ್‌ಎಸಿಐಎಲ್- ಏರ್‌ಇಂಡಿಯಾ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಅರವಿಂದ್ ಜಾಧವ್ ಅಧಿಕಾರ ವಹಿಸಿಕೊಂಡರು. ಜಾಧವ್ ಅವರು ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1978ರಲ್ಲಿ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಸೇರಿದ ಜಾಧವ್ ಅವರು ಕರ್ನಾಟಕ ಕೇಡರ್‌ಗೆ ಸೇರಿದವರು.

2008: ಪಾನಮತ್ತನಾಗಿದ್ದ ಕಾರು ಚಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತನಾಗಿ ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಶಾಂಪುರ ಮುಖ್ಯ ರಸ್ತೆಯ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಬಳಿ ನಡೆಯಿತು. ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಚಾಲಕ ಅಕ್ಬರ್ ಖಾನನನ್ನು ಹಿಗ್ಗಾಮುಗ್ಗಾ ಥಳಿಸಿ ಕಾರನ್ನು ಜಖಂಗೊಳಿಸಿದರು.

2008: ಒರಿಸ್ಸಾದಲ್ಲಿ ಬಿಸಿಲ ಧಗೆ ಅಸಹನೀಯವಾಗಿ, ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್ಸಿಗೆ ಏರಿತು. ಬಿಸಿಲ ಝಳಕ್ಕೆ ಇಬ್ಬರು ಸಾವನ್ನಪ್ಪಿದರು. ಇದರೊಂದಿಗೆ ಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿತು.

2008: ಹಿಮಾಲಯದ ತಪ್ಪಲಿನ `ತಂಪು' ಊರೆಂದೇ ಹೆಸರಾಗಿರುವ ಶಿಮ್ಲಾದಲ್ಲಿ ಉಷ್ಣಾಂಶ 28.7 ಸೆಲ್ಸಿಯಸ್ಸಿಗೆ ಏರಿತು. ಈ ಋತುವಿನಲ್ಲಿ ಇಲ್ಲಿ ಕಂಡು ಬಂದ ಅತ್ಯಧಿಕ ಉಷ್ಣಾಂಶ ಇದು.

2008: ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೆಕೊಳಲಿನ ಮಂಜುನಾಥ ಲೇಔಟ್ ಸಮೀಪ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಆರೆಸ್ಸೆಸ್ ಕಾರ್ಯಕರ್ತರು ಮಾಂಸದ ಮಳಿಗೆಯೊಂದಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ನಂತರ ಸ್ಥಳಕ್ಕೆ ಬಂದ ಪೊಲೀಸರು ಪರವಾನಗಿ ಇಲ್ಲದೆ ಮಾಂಸದ ಅಂಗಡಿ ನಡೆಸುತ್ತಿದ್ದ ವೈಟ್ ಫೀಲ್ಡಿನ ನಾಲ್ವರನ್ನು ಬಂಧಿಸಿದರು.

2008: ಬ್ರಿಟನ್ನಿನಲ್ಲಿ ರೆಸ್ಟೋರೆಂಟ್ ಒಂದರ ಮಾಲೀಕರಾದ ಭಾರತೀಯ ಮೂಲದ ರಾಜ್ ರಾಣಾ ಅವರಿಗೆ ಲಂಡನ್ನಿನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆಯುವ ಸತ್ಕಾರಕೂಟಕ್ಕೆ ಇಂಗ್ಲೆಂಡಿನ ರಾಣಿ ಆಹ್ವಾನಿಸಿದರು. `ಇತಿಹಾಸ್' ಎಂಬ ರೆಸ್ಟೋರೆಂಟಿನ ಮಾಲೀಕ ರಾಣಾ ಅವರು ಸಮಕಾಲೀನ ಬ್ರಿಟನ್-ಭಾರತೀಯ ರೆಸ್ಟೋರೆಂಟ್ ಉದ್ಯಮಕ್ಕೆ 3.2 ಬಿಲಿಯನ್ ಪೌಂಡ್ ಹಣವನ್ನು ದೇಣಿಗೆ ನೀಡಿದ್ದರು. ಅವರ `ಇತಿಹಾಸ್' ರೆಸ್ಟೋರೆಂಟ್ ಬ್ರಿಟನ್ನಿನ ಉತ್ತಮ ರೆಸ್ಟೋರೆಂಟಿಗಾಗಿ ನೀಡಲಾಗುವ 2007-08ರ ಸಾಲಿನ `ಕೊಬ್ರಾ ಗುಡ್ ಕರ್ರಿ ಪ್ರಶಸ್ತಿ'ಯನ್ನೂ ಗೆದ್ದುಕೊಂಡಿತ್ತು. ಈ ಅವಿಸ್ಮರಣೀಯ ಘಟನೆಯನ್ನು ನೆನಪಿಟ್ಟುಕೊಳ್ಳಲು ರಾಣಾ ಒಡೆತನದ `ಇತಿಹಾಸ್' ಅಂದು `ಕುಂಭ್ ಮಲಾಯಿ' ಎಂಬ ವಿಶೇಷ ಖಾದ್ಯ ತಯಾರಿಸುವುದಾಗಿ ಪ್ರಕಟಿಸಿತು.

2008: ಪೂರ್ವ ಜರ್ಮನಿಯ ಅತಿ ಭಯಾನಕ ಸ್ಟಾಸಿ ಪೊಲೀಸ್ ಗುಪ್ತ ದಳದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವುದು ನೋವಿನ ವಿಚಾರವಾದರೂ 9 ಮಂದಿ ತಜ್ಞರು ಎರಡು ದಶಕಗಳ ಕಾಲ ಅತ್ಯಂತ ಶ್ರಮಪಟ್ಟು ಲಕ್ಷಾಂತರ ಕಾಗದದ ತುಂಡುಗಳನ್ನು ಜೋಡಿಸಿ ಮಾಹಿತಿ ಸಂಗ್ರಹಿಸಿದರು. 1989ರಲ್ಲಿ ಬರ್ಲಿನ್ ಗೋಡೆ ಉರುಳಿತು. ನಂತರವೂ ಕಮ್ಯೂನಿಸ್ಟ್ ಸರ್ಕಾರ ನಡೆಸಿದ ದೌರ್ಜನ್ಯ ಜನರ ಎದೆ ನಡುಗಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಟಾಸಿ ಪೊಲೀಸ್ ಗುಪ್ತ ದಳದ ಸಿಬ್ಬಂದಿ ಗೌಪ್ಯ ಕಡತಗಳನ್ನು ನಾಶಪಡಿಸಲು ಆರಂಭಿಸಿದರು. ಆದರೆ ನಾಗರಿಕರ ಸಮಿತಿ ಸದಸ್ಯರು ಈ ಪೊಲೀಸ್ ಕಚೇರಿಗೆ ನುಗ್ಗಿ ಎಲ್ಲ ಕಡತಗಳು ನಾಶವಾಗದಂತೆ ನೋಡಿಕೊಂಡರು. ಹರಿದು ಚೂರು ಮಾಡಲಾಗಿದ್ದ ಕಾಗದಗಳ ತುಣುಕಿನ 15,500 ಚೀಲಗಳನ್ನು ವಶಪಡಿಸಿಕೊಂಡಿದ್ದರು. 1995ರಿಂದ ಬವೇರಿಯಾದ ನ್ಯೂರೆಂಬರ್ಗಿನಲ್ಲಿ ತಜ್ಞರು ಹರಿದ ಕಾಗದದ ಚೂರುಗಳನ್ನು ಸರಿಯಾಗಿ ಜೋಡಿಸಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಮಗ್ನರಾದರು.

2007: ಮಂಡ್ಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ ಅವರ `ತತ್ರಾಣಿ' ಕವನ ಸಂಕಲನಕ್ಕೆ 2007ರ ಸಾಲಿನ ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ ಲಭಿಸಿತು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರತಿವರ್ಷ ಒಬ್ಬ ಕವಿಗೆ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತದೆ.

2007: ಅಮೆರಿಕದ `ಟೈಮ್' ನಿಯತಕಾಲಿಕವು ಪ್ರಕಟಿಸಿದ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತೀಯರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಹಾಗೂ ಪೆಪ್ಸಿ ಕಂಪೆನಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಸೇರ್ಪಡೆಯಾದರು. ಪಟ್ಟಿಯಲ್ಲಿ ಅಲ್ ಖೈದಾ ನಾಯಕ ಬಿನ್ ಲಾಡೆನ್ ಹೆಸರಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೈಬಿಡಲಾಯಿತು.

2007: ಗೋಕಾಕ ನಗರ ಹೊರವಲಯದ ರಿದ್ದಿ-ಸಿದ್ದಿ ಕಾರ್ಖಾನೆಯಲ್ಲಿ ರಾತ್ರಿ ಬಾಯ್ಲರ್ ಸ್ಫೋಟಿಸಿದ ಪರಿಣಾಮವಾಗಿ ಇಬ್ಬರು ಮೃತರಾಗಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ವಿರೋಧಿಸಿ 89 ದಿನಗಳಿಂದ ನಡೆಸುತ್ತಿದ್ದ ಚಳವಳಿಯನ್ನು ಸ್ಥಗಿತಗೊಳಿಸಲು ಮಂಡ್ಯ ಜಿಲ್ಲೆ ರೈತರು ತೀರ್ಮಾನಿಸಿದರು. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕರ್ನಾಟಕದ ವಿವಿಧ ಕನ್ನಡಪರ ಸಂಘಟನೆಗಳು ನವದೆಹಲಿಯ ಜಂತರ್- ಮಂತರ್ ಎದುರು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದವು.

2007: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯ ಅಭಿವೃದ್ಧಿ ಸಲುವಾಗಿ ಬೆಂಗಳೂರು ಮಹಾನಗರಾಭಿವೃದ್ಧಿ ಪ್ರಾಧಿಕಾರವು `ಮಾಸ್ಟರ್ ಪ್ಲಾನ್' ಸಿದ್ಧಪಡಿಸಿತು.

2007: ಭೂಮಿಯ ತಾಪ ಏರಿಕೆ ಹಾಗೂ ಹವಾಮಾನ ಬದಲಾವಣೆಯನ್ನು ನಿಯಂತ್ರಿಸಲು ಒಮ್ಮತದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಬ್ಯಾಂಕಾಕಿನಲ್ಲಿ ನಡೆದ ವಿಶ್ವಸಂಸ್ಥೆ ಸಮ್ಮೇಳನ ನಿರ್ಧರಿಸಿತು. ವಿಶ್ವಸಂಸ್ಥೆಯು ಮುಂದಿಟ್ಟ ವರದಿಯನ್ನು 120ಕ್ಕೂ ಹೆಚ್ಚು ರಾಷ್ಟ್ರಗಳ 2000ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಒಪ್ಪಿಕೊಂಡರು.

2006: ದೇಶದ ಭರವಸೆಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ, ಬಿಜೆಪಿಯ ಸಂಘಟನಾ ಚತುರ ಮತ್ತು ಕಾರ್ಯತಂತ್ರ ನಿಪುಣ ಪ್ರಮೋದ ಮಹಾಜನ್ (56) ಅವರ ಅಂತ್ಯಕ್ರಿಯೆ ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

2006: ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಕಸ್ಟಮ್ಸ್ ಇಲಾಖೆ ಅನುಮತಿ ನೀಡಿತು. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಬೇಕು ಎಂಬ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು.

2006: ಅಮೆರಿಕದಲ್ಲಿ 3000ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ 2001 ಸೆಪ್ಟೆಂಬರ 11ರ ಭಯೋತ್ಪಾದನಾ ದಾಳಿಯ ಸಂಚುಕೋರ ಮೊರಾಕ್ಕೋ ಮೂಲದ ಅಲ್ ಖೈದಾ ಸಂಘಟನೆಗೆ ಸೇರಿದ ಝಕ್ರಿಯಾಸ್ ಮೌಸಾವಿಗೆ ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಅಮೆರಿಕ ನ್ಯಾಯಮೂರ್ತಿಗಳ ಪೀಠ ನಿರ್ಧರಿಸಿತು.

2006: ಸಾನ್ ಸಾಲ್ವಡೋರಿನ ಹಣ್ಣು ಹಣ್ಣು ಮುದುಕಿ ಕ್ರೂಜ್ ಹೆರ್ನಾಂಡೆಸ್ ರಿವಾಸ್ ತನ್ನ 128ನೇ ಜನ್ಮದಿನವನ್ನು ಆಚರಿಸಿದರು. 1878ರಲ್ಲಿ ಜನಿಸಿದ ಈಕೆಗೆ 13 ಮಕ್ಕಳು, 60 ಮೊಮ್ಮಕ್ಕಳು. ಮಕ್ಕಳ ಪೈಕಿ ಬದುಕಿ ಉಳಿದವರು ಐವರು ಮಾತ್ರ.

2006: ಭಾರತದ ಗಗನಯಾನಿ ಕಲ್ಪನಾ ಚಾವ್ಲಾ ಅವರು ಗಗನಯಾನ ದುರಂತದಲ್ಲಿ ಮಡಿದ ಮೂರು ವರ್ಷಗಳ ಬಳಿಕ, ಭಾರತೀಯ ಮೂಲದ ಇನ್ನೊಬ್ಬ ಅಮೆರಿಕನ್ ಮಹಿಳಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಫ್ಲೈಟ್ ಎಂಜಿನಿಯರ್ ಆಗಿ ತನ್ನ ಚೊಚ್ಚಲ ಪಯಣ ಮಾಡುವರು ಎಂದು ನಾಸಾ ಪ್ರಕಟಿಸಿತು.

2006: ಆದಾಯ ಮೂಲ ಮೀರಿದ ಆಸ್ತಿ, ಪಾಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಹಾಗೂ ಸಂಸತ್ ಸದಸ್ಯರಾಗಿರುವ ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ ಸೇರಿದ 6 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 24 ನಿವಾಸಗಳು ಹಾಗೂ ಇತರ ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ಚೌಟಾಲಾ ಮತ್ತು ಅವರ ಕುಟುಂಬಕ್ಕೆ ಸೇರಿದ 1467 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿದ್ದು, ಆದಾಯ ಮೂಲ ಮೀರಿದ ಆಸ್ತಿಪಾಸ್ತಿಗೆ ಸಂಬಂಧಿಸಿದ ಹಲವಾರು ದಾಖಲೆಗಳು ಪತ್ತೆಯಾದವು. ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಉತ್ತರಾಂಚಲ ಹಾಗೂ ಚಂಡೀಗಢದಲ್ಲಿರುವ ಚೌತಾಲಾ ಅವರ ನಿವಾಸ ಹಾಗೂ ತೋಟದ ಮನೆಗಳ ಮೇಲೆ ದಾಳಿ ನಡೆಯಿತು. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅವ್ಯವಹಾರದ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಸಿಬಿಐಗೆ ಅಕ್ರಮ ಆಸ್ತಿ ಕುರಿತು ಮಾಹಿತಿ ದೊರಕಿತ್ತು.

2006: ವೋಲ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ 1.50 ಕೋಟಿ ರೂಪಾಯಿ ಲಂಚವನ್ನು ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರಿಗೆ ಪಾವತಿ ಮಾಡಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್ ಡಿಟಿವಿ ವರದಿ ಮಾಡಿತು.

1935: ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಡಾ. ಸುಮತೀಂದ್ರ ನಾಡಿಗ್ ಅವರು ರಾಘವೇಂದ್ರರಾವ್- ಸುಬ್ಬಮ್ಮ ದಂಪತಿಯ ಮಗನಾಗಿ ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಈದಿನ ಜನಿಸಿದರು.

1913: ಭಾರತದ ಮೊತ್ತ ಮೊದಲ ಸಂಪೂರ್ಣ ದೇಸೀ ಚಲನಚಿತ್ರ `ರಾಜಾ ಹರಿಶ್ಚಂದ್ರ' ಮುಂಬೈಯ ಕೊರೊನೇಷನ್ ಸಿನಿಮಾದಲ್ಲಿ ಬಿಡುಗಡೆಯಾಯಿತು. ಭಾರತೀಯ ಚಿತ್ರೋದ್ಯಮದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರು ಈ ಚಿತ್ರವನ್ನು ನಿರ್ಮಿಸಿದವರು.

1854: ಭಾರತದ ಮೊತ್ತ ಮೊದಲ ಅಂಚೆಚೀಟಿಯನ್ನು ಕಲಕತ್ತಾದಲ್ಲಿ (ಇಂದಿನ ಕೊಲ್ಕತ) ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅರ್ಧ `ಆಣೆ' ಬೆಲೆಯ ಈ ಅಂಚೆಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಚಿತ್ರವನ್ನು ಮುದ್ರಿಸಲಾಗಿತ್ತು.

1799: ಮೈಸೂರಿನ ದೊರೆ ಟಿಪ್ಪುಸುಲ್ತಾನ್ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷರ ಜೊತೆಗೆ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಅಸುನೀಗಿದರು. ಈ ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ನೇತೃತ್ವವನ್ನು ಲಾರ್ಡ್ ಮೋರಿಂಗ್ಟನ್ ವಹಿಸಿದ್ದ.

1555: ಕಾಲಜ್ಞಾನಿ ನಾಸ್ಟ್ರಡಾಮಸ್ ತನ್ನ `ಸೆಂಚುರೀಸ್' ಕೃತಿಯನ್ನು ಪ್ರಕಟಿಸಿದ. ಈ ಕೃತಿ 350 ಚೌಪದಿಗಳನ್ನು ಒಳಗೊಂಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಈ ಗ್ರಂಥದ ಎರಡನೇ ಆವೃತ್ತಿಯನ್ನು ನಾಸ್ಟ್ರಡಾಮಸ್ ಎರಡನೇ ಹೆನ್ರಿಗೆ ಅರ್ಪಿಸಿದ. ಹೆನ್ರಿಯ ಸಾವಿನ ಬಗ್ಗೆ ಈ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದ.

1494: ಕ್ರಿಸ್ಟೋಫರ್ ಕೊಲಂಬಸ್ ಜಮೈಕಾ ದ್ವೀಪವನ್ನು ಪತ್ತೆಹಚ್ಚಿದ.

No comments:

Advertisement