ಇಂದಿನ ಇತಿಹಾಸ
ಮೇ 06
ಅಮೆರಿಕದ ಟೆಕ್ಸಾಸ್ ನಿವಾಸಿ 33 ವರ್ಷದ ಶಿಕ್ಷಕಿ ಜೂಡಿ ಟ್ರುನೆಲ್ ವಿಶ್ವದಾದ್ಯಂತ ಹರಡಿದ ಹಾಗೂ ಭಾರಿ ಭೀತಿ ಹುಟ್ಟಿಸಿದ ಹಂದಿಜ್ವರಕ್ಕೆ ಬಲಿಯಾದ ಮೊದಲ ಅಮೆರಿಕದ ಮಹಿಳೆ ಎನ್ನಲಾಯಿತು. ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ಈದಿನ ಈ ವಿಷಯವನ್ನು ದೃಢಪಡಿಸಿದರು.
2009: ಅಮೆರಿಕದ ಟೆಕ್ಸಾಸ್ ನಿವಾಸಿ 33 ವರ್ಷದ ಶಿಕ್ಷಕಿ ಜೂಡಿ ಟ್ರುನೆಲ್ ವಿಶ್ವದಾದ್ಯಂತ ಹರಡಿದ ಹಾಗೂ ಭಾರಿ ಭೀತಿ ಹುಟ್ಟಿಸಿದ ಹಂದಿಜ್ವರಕ್ಕೆ ಬಲಿಯಾದ ಮೊದಲ ಅಮೆರಿಕದ ಮಹಿಳೆ ಎನ್ನಲಾಯಿತು. ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ಈದಿನ ಈ ವಿಷಯವನ್ನು ದೃಢಪಡಿಸಿದರು.
2009: ಈಸ್ಟ್ರೋ ಜೆನ್ ಒಂದು ಲೈಂಗಿಕ ಚೋದಕ (ಹಾರ್ಮೋನ್) ಅಷ್ಟೇ ಅಲ್ಲ; ಶ್ರವಣ ನಿಯಂತ್ರಣ ಸೇರಿದಂತೆ ಹಲವು ಇನ್ನಿತರ ಕಾರ್ಯಗಳಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ವಾಷಿಂಗ್ಟನ್‌ನಲ್ಲಿ ಪ್ರತಿಪಾದಿಸಿದರು. ಈಸ್ಟ್ರೋಜೆನ್ ವಹಿಸುವ ಪಾತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಶ್ರವಣ ದೋಷ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಹೊಸ ಮಾರ್ಗಗಳೇ ತೆರೆದುಕೊಳ್ಳಲಿವೆ ಎಂದೂ ವಿಜ್ಞಾನಿಗಳು ಹೇಳಿದರು. 'ಮಿದುಳು ಶ್ರವಣ ಮಾಹಿತಿಯನ್ನು ಸ್ವೀಕರಿಸಿ- ಸಂಸ್ಕರಿಸುವಲ್ಲಿ ಈಸ್ಟ್ರೋ ಜೆನ್ ಮಹತ್ವದ ಪಾತ್ರ ವಹಿಸುತ್ತದೆಂಬುದನ್ನು ನಾವು ಸಾಬೀತು ಮಾಡುತ್ತೇವೆ. ಈವರೆಗಿನ ಯಾವ ಅಧ್ಯಯನವೂ ಈ ಅಂಶವನ್ನು ಗುರುತಿಸಿರಲಿಲ್ಲ' ಎಂದು ರೊಚೆಸ್ಟರ್ ವಿ.ವಿ.ಯ ಸಹಾಯಕ ಪ್ರೊಫೆಸರ್ ರ್ಯಾಫೆಲ್ ಪಿನಾಡ್ ಹೇಳಿದರು. ಮಿಲಿ ಸೆಕೆಂಡಿನೊಳಗೆ ಶ್ರವಣ ಸಂಕೇತಗಳನ್ನು ಸಂಸ್ಕರಿಸಲು ನೆರವಾಗುವ ಈಸ್ಟ್ರೋಜೆನ್ ಹೊಸ ವಿಷಯಗಳ ಕಲಿಕೆ ಮತ್ತು ನೆನಪು ರೂಪುಗೊಳ್ಳುವಲ್ಲೂ ಮುಖ್ಯಪಾತ್ರ ವಹಿಸುತ್ತದೆ. ಪುರುಷರು ಮತ್ತು ಮಹಿಳೆಯರ ಸಂವೇದನಾ ವ್ಯವಸ್ಥೆ ಚುರುಕಾಗಿರಲು ಈ ಚೋದಕ ಸೂಕ್ತ ಪ್ರಮಾಣದಲ್ಲಿರಬೇಕು' ಎಂದು ರಾಫೆಲ್ ಹೇಳಿದರು. ನರ ವಿಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕದಲ್ಲಿ ಈ ಸಂಶೋಧನೆ ಕುರಿತು ಸವಿಸ್ತಾರವಾಗಿ ಲೇಖನ ಪ್ರಕಟಗೊಂಡಿತು.
2009: ಸ್ವಾತ್ ಕಣಿವೆಯಲ್ಲಿ ಪಾಕಿಸ್ಥಾನ ಸೇನಾಪಡೆಗಳು ತಾಲಿಬಾನ್ ಉಗ್ರರನ್ನು ಗುರಿಯಾಗಿಸಿ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 100 ಜನರು ಬಲಿಯಾದರು. ಇವರಲ್ಲಿ 60 ತಾಲಿಬಾನ್ ಉಗ್ರರು ಹಾಗೂ 35 ನಾಗರಿಕರು ಎಂದು ಸೇನಾ ಅಧಿಕಾರಿಗಳು ತಿಳಿಸಿದರು. ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾವಿರಾರು ನಾಗರಿಕರು ಸ್ವಾತ್ ಜಿಲ್ಲೆಯಿಂದ ಪಲಾಯನಗೈದರು.
2009: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ತಂದೆ ವೈ.ಎಸ್. ರಾಜರೆಡ್ಡಿ ಅವರ ಹತ್ಯೆಯ ಸಂಬಂಧ ರಾಜ್ಯದ ಹೈಕೋರ್ಟ್ ಹನ್ನೊಂದು ಮಂದಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಈ ಎಲ್ಲ ಆರೋಪಿಗಳು ಪ್ರಮುಖ ವಿರೋಧ ಪಕ್ಷ ತೆಲಗು ದೇಶಂ ಕಾರ್ಯಕರ್ತರು. 2006ರ ಸೆ.29ರಂದು ಹೈಕೋರ್ಟ್ ಇವರಿಗೆ ಶಿಕ್ಷೆ ವಿಧಿಸಿತ್ತು. ಪರ್ಲಾ ಸೋಮಶೇಖರ ರೆಡ್ಡಿ, ಪರ್ಲಾ ಶೇಷ ರೆಡ್ಡಿ, ಪರ್ಲಾ ರಾಮಾಂಜನೇಯ ರೆಡ್ಡಿ, ಪರ್ಲಾ ರಾಮಕೃಷ್ಣ ರೆಡ್ಡಿ, ಅಣ್ಣಾ ರೆಡ್ಡಿ ಸಾಂಬಶಿವ ರೆಡ್ಡಿ, ಅಣ್ಣಾ ರೆಡ್ಡಿ ಶ್ರೀನಿವಾಸ ರೆಡ್ಡಿ, ಅಣ್ಣಾ ರೆಡ್ಡಿ ದಾಸಿರೆಡ್ಡಿಗಾರಿ ಲಕ್ಷ್ಮಿರೆಡ್ಡಿ, ಪಲ್ಲೆ ವೆಂಕಟರಾಮಿ ರೆಡ್ಡಿ, ವಡ್ಡರಪು ಓಬಯ್ಯ, ರಾಗಿಪಿಂಡಿ ಸುಧಾಕರ ರೆಡ್ಡಿ ಮತ್ತು ಪೋರೆಡ್ಡಿ ವಿಶ್ವನಾಥ ರೆಡ್ಡಿ ಆರೋಪಿಗಳು. 1998ರ ಮೇ 23ರಲ್ಲಿ ತಮ್ಮ ತೋಟದ ಮನೆಯಿಂದ ಕಾರಿನಲ್ಲಿ ಪುಲಿವೆಂದುಲಕ್ಕೆ ಹಿಂತಿರುಗುತ್ತಿದ್ದಾಗ 75 ವರ್ಷದ ರಾಜ ರೆಡ್ಡಿ ಅವರನ್ನು ಬಾಂಬ್ ದಾಳಿಯಲ್ಲಿ ತವರೂರಾದ ಕಡಪ ಜಿಲ್ಲೆಯಲ್ಲಿ ಕೊಲ್ಲಲಾಗಿತ್ತು.
2009: 'ಪ್ರಜಾವಾಣಿ'ಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಜಿ.ಎನ್.ರಂಗನಾಥ್ ರಾವ್ ಅವರನ್ನು 2009ನೇ ಸಾಲಿನ ಖಾದ್ರಿ ಶಾಮಣ್ಣ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2008: ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ನಾಟಕೀಯ ದೃಶ್ಯಗಳು ಮತ್ತು ಸಮಾಜವಾದಿ ಪಕ್ಷ ಸದಸ್ಯರ ಭಾರಿ ಪ್ರತಿಭಟನೆಯ ಮಧ್ಯೆ ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯು ಸಂಸತ್ತು ಹಾಗೂ ರಾಜ್ಯ ವಿಧಾನಮಂಡಲಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿಯನ್ನು ಕಲ್ಪಿಸಿದೆ. ಸಚಿವ ಸಂಪುಟವು ಹಿಂದಿನ ದಿನ ರಾತ್ರಿ ಒಪ್ಪಿಗೆ ಸಂವಿಧಾನ (108ನೇ ತಿದ್ದುಪಡಿ) ಮಸೂದೆ 2008ಕ್ಕೆ ಒಪ್ಪಿಗೆ ನೀಡಿತ್ತು. ಮಹಿಳಾ ಮೀಸಲು ಮಸೂದೆ ಮಂಡಿಸಿದ್ದನ್ನು ಕಾಂಗ್ರೆಸ್, ಎಡಪಕ್ಷಗಳು ಹಾಗೂ ವಿರೋಧ ಪಕ್ಷವಾದ ಬಿಜೆಪಿ ಸ್ವಾಗತಿಸಿದವು. ಆದರೆ, ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಹಾಗೂ ಯುಪಿಎ ಸರ್ಕಾರದ ಭಾಗವಾಗಿರುವ ಆರ್ಜೆಡಿ ಮಸೂದೆಯನ್ನು ಈಗಿರುವ ಸ್ವರೂಪದಲ್ಲೇ ಅಂಗೀಕರಿಸುವುದನ್ನು ವಿರೋಧಿಸಿದವು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಕಲ್ಪಿಸುವ ಮಹಿಳಾ ಮೀಸಲು ಮಸೂದೆಯ ಹಾದಿ ಬಹು ಏಳುಬೀಳಿನದ್ದು. 12 ವರ್ಷಗಳ ಹಿಂದೆಯೇ ಮಸೂದೆಯ ಕರಡು ಸಿದ್ಧವಾಗಿದ್ದರೂ, ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಅಂಗೀಕಾರ ಪಡೆಯಲು ಈ ಹಿಂದೆ ಮೂರು ಸರ್ಕಾರಗಳು ನಡೆಸಿದ್ದ ಯತ್ನಗಳು ವಿಫಲವಾಗಿದ್ದವು. ಮಸೂದೆ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಈ ಸರ್ಕಾರಗಳು ನಡೆಸಿದ ಕಸರತ್ತುಗಳು ವ್ಯರ್ಥವಾದವು. 12 ವರ್ಷಗಳ ಹಿಂದೆ 1996ರ ಸೆಪ್ಟೆಂಬರಿನಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದಾಗ 81ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆನಂತರ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಮುಂದೆ ಇಡಲಾಯಿತು. 11ನೇ ಲೋಕಸಭೆ ವಿಸರ್ಜನೆಯಾದ ಕಾರಣ ಮಸೂದೆ ರದ್ದಾಯಿತು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸಲು 84ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. 12ನೇ ಲೋಕಸಭೆ ವಿಸರ್ಜನೆಯಾದುದುರಿಂದ ಆ ಬಾರಿಯೂ ಮಸೂದೆ ರದ್ದಾಯಿತು. 1999ರ ಡಿಸೆಂಬರ್ 23ರಂದು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆ ಮಂಡಿಸಲಾಯಿತು. ಆದರೆ, ವಿವಿಧ ಪಕ್ಷಗಳ ನಡುವೆ ಒಮ್ಮತಾಭಿಪ್ರಾಯ ಮೂಡದೇ ಮಸೂದೆ ಅಂಗೀಕಾರವಾಗಲಿಲ್ಲ. ಆದರೆ, ಮಸೂದೆ ರದ್ದಾಗದಂತೆ ಇದೇ ಮೊದಲ ಬಾರಿ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
2008: ರಾಹುಲ್ ಗಾಂಧಿ ಸುತ್ತ `ದುಷ್ಟಕೂಟ' ಸುತ್ತುವರೆದಿದೆ ಎಂದು ಆಪಾದಿಸಿ ಹಿರಿಯ ಕಾಂಗ್ರೆಸ್ ನಾಯಕ ಅಖಿಲೇಶ್ ದಾಸ್ ಅವರು ಪಕ್ಷ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರೊಂದಿಗೆ ಕಾಂಗ್ರೆಸ್ ಭಾರಿ ಹೊಡೆತವೊಂದನ್ನು ಅನುಭವಿಸಿತು. ಅಖಿಲೇಶ್ ದಾಸ್ ಅವರನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ರಾಜ್ಯಸಭೆಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ದಾಸ್ ಅವರು ರಾಜ್ಯಸಭೆಯಲ್ಲಿ ಸದನ ಸಮಾವೇಶಗೊಳ್ಳುತಿದ್ದಂತೆಯೇ ನಾಟಕೀಯವಾಗಿ ಸಭಾಪತಿ ಹಮೀದ್ ಅನ್ಸಾರಿ ಅವರತ್ತ ತೆರಳಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ, `ನನಗೆ ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಾಸ ಇಲ್ಲ' ಎಂದು ಸದನದಲ್ಲಿ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು.
2008: ಬಾಂಬೆ ಹೈಕೋರ್ಟಿನಲ್ಲಿ ಈದಿನ ಅಪರೂಪದ ಅತಿಥಿ `ಕೋತಿ' ಪ್ರತ್ಯಕ್ಷವಾಗಿ ನ್ಯಾಯಮೂರ್ತಿಗಳಿಂದ ಹಿಡಿದು ಸಿಬ್ಬಂದಿವರೆಗೆ ಎಲ್ಲರೂ ಬೇಸ್ತು ಬಿದ್ದರು. ಮಧ್ಯಾಹ್ನ 1.20ರ ವೇಳೆಯಲ್ಲಿ ಈ ಕೋತಿ ನ್ಯಾಯಾಲಯದ ಅತ್ಯಂತ ಮೇಲಿನ ಮಹಡಿಯ ಛಾವಣಿಯ ಒಳಭಾಗದಲ್ಲಿ ತುತ್ತ ತುದಿಯಲ್ಲಿ ಆರಾಮವಾಗಿ ಆಸೀನವಾಗಿತ್ತು. ಈ ಮಹಡಿಯಲ್ಲಿ ನ್ಯಾಯಮೂರ್ತಿಗಳ ಕೊಠಡಿಗಳಿದ್ದವು. ಸಿಬ್ಬಂದಿಗೆ ಈ ಕೋತಿಯನ್ನು ಅಲ್ಲಿಂದ ಎಬ್ಬಿಸಿ ಓಡಿಸಲು ಸಾಧ್ಯವಾಗದೇ ಹೋದಾಗ, ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತು. ಎರಡು ಗಂಟೆಗಳ ಸತತ ಯತ್ನದ ಬಳಿಕ ಮಂಗವನ್ನು ಹಿಡಿದು ದೂರಕ್ಕೆ ಒಯ್ಯಲು ಸಾಧ್ಯವಾಯಿತು. ಕೋತಿ ಹೇಗೆ ಕಟ್ಟಡದ ಒಳಭಾಗ ಪ್ರವೇಶಿಸಿತು ಎಂದು ಪತ್ತೆ ಹಚ್ಚಲು ಅಗ್ನಿಶಾಮಕ ಅಧಿಕಾರಿಗಳಿಗೂ ಸಾಧ್ಯವಾಗಲಿಲ್ಲ. ಹೈಕೋರ್ಟಿನ ಸುತ್ತ ದೊಡ್ಡ ಮರಗಳಿದ್ದರೂ ಯಾವುದೇ ಮರದ ಕೊಂಬೆ ಕಟ್ಟಡದ ಬಳಿಗೆ ಚಾಚಿಲ್ಲ, ಹಾಗಿರುವಾಗ ಕೋತಿ ಹೇಗೆ ಒಳಗೆ ಬಂತು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯಿತು.
2008: ಭಾರತೀಯ ಮಧ್ಯಮ ವರ್ಗದ ಅತ್ಯುತ್ತಮ ಆಹಾರ ಸೇವನೆಯೂ ಜಾಗತಿಕ ಆಹಾರ ಸಮಸ್ಯೆಯ ಕಾರಣಗಳಲ್ಲಿ ಒಂದು ಎಂದು ಜಾರ್ಜ್ ಬುಷ್ ನೀಡಿದ ಹೇಳಿಕೆಯ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಆಘಾತಕಾರಿ ಹೇಳಿಕೆಯೊಂದನ್ನು ನೀಡಿ, `ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಿನಗಳಲ್ಲಿ ಭಾರತವು ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ' ಎಂದು ಹೇಳಿತು. ಹವಾಮಾನ ವೈಪರೀತ್ಯವು ಆಹಾರ ಬೆಳೆಗಳ ಉತ್ಪಾದನೆಯ ಮೇಲೆ ತೀವ್ರವಾದ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿರುವ ಡಬ್ಲ್ಯು ಎಚ್ ಒ ವರದಿಯು `ಇದರಿಂದಾಗಿ ಭಾರತದಲ್ಲಿ ಪೌಷ್ಠಿಕಾಂಶ ಭರಿತ ಆಹಾರದ ಕೊರತೆ ಹೆಚ್ಚಾಗಲಿದೆ' ಎಂದು ಹೇಳಿತು. ಇದೇ ಕಾರಣದಿಂದ ಗಂಗಾನದಿಯಲ್ಲಿ ನೀರಿನ ಕೊರತೆಯೂ ಉಂಟಾಗಲಿದೆ. ಇದರಿಂದಾಗಿ ಗಂಗಾ ತಪ್ಪಲು ಪ್ರದೇಶದಲ್ಲಿ ತೇವಾಂಶ ಕಡಿಮೆಯಾಗಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದೂ ಈ ವರದಿ ಹೇಳಿತು.
2008: ವಿನಾಶಕಾರಿ `ನರ್ಗಿಸ್' ಚಂಡಮಾರುತದಿಂದ ತತ್ತರಿಸಿದ ಮ್ಯಾನ್ಮಾರಿನಲ್ಲಿ (ಬರ್ಮಾ) ಈದಿನ ಸಂಜೆ ಹೊತ್ತಿಗೆ ಸಾವಿನ ಸಂಖ್ಯೆ 25 ಸಾವಿರ ಮೀರಿತು. ಸುನಾಮಿ ನಂತರ ದಕ್ಷಿಣ ಏಷ್ಯಾ ಭಾಗ ಕಂಡ ಅತ್ಯಂತ ಭೀಕರ ಪ್ರಕೃತಿ ವಿಕೋಪ ಇದು. ಸುನಾಮಿಯ ಸಂದರ್ಭದಲ್ಲೂ ವಿದೇಶಿ ಸಹಾಯಕ್ಕೆ ಕೈಚಾಚದ ದೇಶದ ಸೇನಾ ಆಡಳಿತ ಈ ಬಾರಿ ಅಂತಾರಾಷ್ಟ್ರೀಯ ಸಹಾಯ ಯಾಚಿಸಿತು. ಭಾರತ ಸಹಿತ ಹಲವು ದೇಶಗಳಿಂದ ಪರಿಹಾರ ಸಾಮಗ್ರಿಗಳು ಹರಿದುಬರತೊಡಗಿದವು. ಮ್ಯಾನ್ಮಾರಿನಲ್ಲಿ ಜನಸಂಖ್ಯೆ ಹೆಚ್ಚಿ ಕಾಂಡ್ಲಾ ಕಾಡುಗಳನ್ನು ಕಡಿದು ಅಲ್ಲಿ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿ ತಲೆ ಎತ್ತಿದ್ದು, ಚಂಡಮಾರುತದಿಂದ ಸಂರಕ್ಷಣೆ ನೀಡುವ ನೈಸರ್ಗಿಕ ಕಾಂಡ್ಲಾ ಕಾಡುಗಳ ನಾಶದ ಪರಿಣಾಮವಾಗಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ ಎಂದು 'ಆಸಿಯಾನ್' ಪ್ರಾದೇಶಿಕ ವಿಭಾಗವು ಸಿಂಗಪುರದಲ್ಲಿ ಅಭಿಪ್ರಾಯಪಟ್ಟಿತು.
2008: ಪೌರಾಣಿಕ ಮಹತ್ವದ ರಾಮಸೇತುವಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ದೊರಕುತ್ತದೆ ಎಂದು ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರು ಸುಪ್ರೀಂಕೋರ್ಟ್ ಮುಂದೆ ಹೇಳಿದರು. ಲಕ್ಷಾಂತರ ಜನರಿಂದ ಪೂಜಿಸಲ್ಪಡುವ ನಿರ್ಮಾಣಗಳಿಗೆ ಸಂವಿಧಾನದ 25ನೇ ವಿಧಿ ಅಡಿ ರಕ್ಷಣೆ ಕಲ್ಪಿಸಲಾಗಿದೆ. ರಾಮನಿಂದ ನಿರ್ಮಾಣವಾಗಿದೆ ಎಂದು ನಂಬಲಾದ ಈ ಸೇತುವೆಯನ್ನು ಪೂಜಿಸುವ ಸುದೀರ್ಘ ಪರಂಪರೆ ದೇಶದಲ್ಲಿ ಇದೆ ಎಂದು ಸೊರಾಬ್ಜಿ ಅವರು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್. ವಿ. ರವೀಂದ್ರನ್ ಹಾಗೂ ಜೆ. ಎಂ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠದ ಮುಂದೆ ಪ್ರತಿಪಾದಿಸಿದರು. ರಾಮಸೇತುವಿಗೆ ಹಾನಿ ಮಾಡಿದಲ್ಲಿ ನಿರ್ದಿಷ್ಟ ಧರ್ಮದ ಜನರ ಭಾವನೆಗೆ ಸರ್ಕಾರ ಘಾಸಿ ಮಾಡಿದಂತೆ ಆಗುತ್ತದೆ. ಹಾಗಾಗಿ 2,087 ಕೋಟಿ ರೂಪಾಯಿ ವೆಚ್ಚದ ಸೇತುಸಮುದ್ರಂ ಯೋಜನೆಯನ್ನು ನಿಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಸೊರಾಬ್ಜಿ ಮನವಿ ಮಾಡಿದರು. ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ರಾಮಸೇತು ಧ್ವಂಸಗೊಳಿಸುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದ ಕೆಲವರ ಪರವಾಗಿ ಸೊರಾಬ್ಜಿ ವಾದಿಸಿದರು.
2007: ಜಗತ್ತಿನ ಅತಿದೊಡ್ಡ ಉಕ್ಕಿನ ಹಕ್ಕಿ ಸೂಪರ್ ಜಂಬೋ ಎ-380 ನವದೆಹಲಿಯಲ್ಲಿ ಭಾರತದ ನೆಲವನ್ನು ಸ್ಪರ್ಶಿಸಿತು. ಕಿಂಗ್ ಫಿಶರ್ ಏರ್ ಲೈನ್ಸಿನ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಜಂಬೋ ಭಾರತದ ನೆಲಕ್ಕೆ ಬಂದಿಳಿಯಿತು. 80 ಅಡಿ ಉದ್ದದ ಈ ವಿಮಾನದಲ್ಲಿ 850 ಜನಕ್ಕೆ ಕೂರಲು ಸೌಲಭ್ಯಗಳಿವೆ. ಆದರೆ ಮೂರು ವರ್ಗಗಳಲ್ಲಿ 550 ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿರಂತರವಾಗಿ 15,000 ಕಿ.ಮೀ. ದೂರವನ್ನು ಒಂದೇ ಸಲಕ್ಕೆ ಕ್ರಮಿಸಬಲ್ಲುದು. 300 ದಶಲಕ್ಷ ಡಾಲರ್ ಬೆಲೆಯ ಈ ಸೂಪರ್ ಜಂಬೋ ವಿಮಾನಕ್ಕೆ ರೋಲ್ಸ್ ರಾಯ್ಸ್ ಕಂಪೆನಿ ಎಂಜಿನ್ ಸಿದ್ಧ ಪಡಿಸಿದೆ. ಕಿಂಗ್ ಫಿಶರ್ ಸಂಸ್ಥೆಯು ಇಂತಹ ಐದು ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ.
2007: ಭಾರತದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ದುಬೈಯ ದೋಹಾದಲ್ಲಿ ತನ್ನ ಮೊತ್ತ ಮೊದಲ ಶಾಖೆಯನ್ನು ಆರಂಭಿಸಿತು.
2007: ಸೊಹ್ರಾಬ್ದುದೀನ್ ಷೇಕ್ ನನ್ನು ನಕಲಿ ಎನ್ಕೌಂಟರಿನಲ್ಲಿ ಕೊಂದ ಆರೋಪಕ್ಕೆ ಒಳಗಾಗಿ ಬಂಧಿತರಾದ 12 ದಿನಗಳ ಬಳಿಕ ಗುಜರಾತ್ ಸರ್ಕಾರವು ತನ್ನ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತು.
2007: ಸಂಗೀತ ವಿದುಷಿ, ಸಮಾಜ ಸೇವಕಿ ಚೊಕ್ಕಮ್ಮ ಎನ್. ಎನ್. ಅಯ್ಯಂಗಾರ್ ಅವರು ಬೆಂಗಳೂರಿನಲ್ಲಿ ನಿಧನರಾದರು. ಪಿಟೀಲು ಚೌಡಯ್ಯ ಮತ್ತು ವಿದ್ವಾನ್ ದೇವೇಂದ್ರಪ್ಪ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಚೊಕ್ಕಮ್ಮ ಅನೇಕ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಚೊಕ್ಕಮ್ಮ ಅವರು ಹಿರಿಯ ಅಧಿಕಾರಿ ದಿವಂಗತ ಎನ್. ನರಸಿಂಹ ಅಯ್ಯಂಗಾರ್ ಅವರ ಪತ್ನಿ.
2007: ಬಲಪಂಥೀಯ ಧುರೀಣ ನಿಕೋಲಸ್ ಸರ್ಕೋಜಿ ಅವರು ಪ್ರಾನ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಹರಿದ್ವಾರದ ನ್ಯಾಯಾಲಯವೊಂದರ ಆದೇಶದ ಅನುಸಾರ ಮುಂಬೈ ಪೊಲೀಸರು ವಿವಾದಾತ್ಮಕ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದರು. ತಮ್ಮ ಕಲಾಕೃತಿಯಲ್ಲಿ ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಸಲ್ಲಿಸಲಾಗಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ಮೇಲಿಂದಮೇಲೆ ಸಮನ್ಸ್ ಕಳುಹಿಸಿದ್ದರೂ ಹುಸೇನ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.
2007: ಚೀನಾದ ಉತ್ತರ ಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿ 20 ಮಂದಿ ಮೃತರಾದರು. ಜಗತ್ತಿನಲ್ಲೇ ಅತಿದೊಡ್ಡ ಗಣಿಗಾರಿಕೆ ಸಂಸ್ಥೆಯ ಪುಡೆಂಗ್ ಮೈನ್ ನಲ್ಲಿ ಈ ಸ್ಫೋಟ ಸಂಭವಿಸಿತು. ಈ ಸಂದರ್ಭದಲ್ಲಿ 125 ಕಾರ್ಮಿಕರಿದ್ದು, 95 ಮಂದಿ ಅಪಾಯದಿಂದ ಪಾರಾದರು.
2006: ಕನ್ನಡ ಚಲನಚಿತ್ರ ರಂಗಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ತಂದುಕೊಟ್ಟಿದ್ದ `ಸಂಸ್ಕಾರ' ಚಿತ್ರದ ನಿರ್ದೇಶಕ ಟಿ. ಪಟ್ಟಾಭಿರಾಮರೆಡ್ಡಿ (87) ಅವರು ದೀರ್ಘಕಾಲದ ಅನಾರೋಗ್ಯದಿಂದ ಈದಿನ ಬೆಳಗಿನ ಜಾವ 3.30ರ ವೇಳೆಗೆ ಮಲ್ಯ ಆಸ್ಪತೆಯಲ್ಲಿ ನಿಧನರಾದರು. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1919ರ ಫೆಬ್ರುವರಿ 2ರಂದು ಜನಿಸಿದ ಪಟ್ಟಾಭಿ `ಸಂಸ್ಕಾರ'ದ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಸಮಾನಾಂತರ ಚಿತ್ರಗಳ ಹೊಸ ಯುಗಕ್ಕೆ ನಾಂದಿ ಹಾಡಿದವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರಿಗೆ ರಾಜ್ಯಸರ್ಕಾರ 2005ರಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧಾರಿತ `ಸಂಸ್ಕಾರ' ಗಿರೀಶ ಕಾರ್ನಾಡ್, ಪಿ. ಲಂಕೇಶ್ ಮತ್ತಿತರರಿಗೆ ಚಿತ್ರರಂಗ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ರೆಡ್ಡಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಅವರು `ಸಂಸ್ಕಾರ' ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿದ್ದರು. `ಚಂಡಮಾರುತ', `ಶೃಂಗಾರಮಾಸ', `ದೇವರ ಕಾಡು' ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ಇತರ ಕನ್ನಡ ಚಿತ್ರಗಳು.
2006: ಸಿಡಿಸಿದರೆ ದಾಳಿಕೋರನನ್ನು 40 ನಿಮಿಷ ಕಾಲ ನಿಶ್ಚೇತನಗೊಳಿಸುವ `ಒಲೆವೋ ಝ್ಯಾಪ್' ಎಂಬ ಸ್ವಯಂರಕ್ಷಣಾ ಸ್ಪ್ರೇಯನ್ನು ಸಂಸತ್ ಸದಸ್ಯ ಎಚ್.ಟಿ. ಸಾಂಗ್ಲಿಯಾನ ಬಿಡುಗಡೆ ಮಾಡಿದರು. ಕ್ಲಿಯರಾಕ್ ಎಂಟರ್ ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಸಾಧನವನ್ನು ತಯಾರಿಸಿದೆ.
2006: ಹನ್ನೆರಡು ವರ್ಷಗಳ ಬಳಿಕ ಹಾಸನ- ಮಂಗಳೂರು ರೈಲ್ವೇ ಮಾರ್ಗವನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಯಿತು. ರೈಲ್ವೆ ಹಳಿಯನ್ನು ಮೀಟರ್ ಗೇಜ್ ನಿಂದ ನ್ಯಾರೋ ಗೇಜಿಗೆ ಪರಿವರ್ತಿಸುವ ಸಲುವಾಗಿ 1994ರಲ್ಲಿ ಈ ರೈಲುಮಾರ್ಗದ ಸೇವೆಯನ್ನು ನಿಲ್ಲಿಸಲಾಗಿತ್ತು.
2006: ಸಿಂಗಪುರದ ನಿರ್ಣಾಯಕ ಸಂಸದೀಯ ಚುನಾವಣೆಯಲ್ಲಿ ಆಳುವ ಪೀಪಲ್ಸ್ ಆಕ್ಷನ್ ಪಾರ್ಟಿ(ಪಿಎಪಿ) 82 ಸ್ಥಾನಗಳನ್ನು ಗೆದ್ದು ಭಾರಿ ಬಹುಮತ ಗಳಿಸಿತು. ವಿರೋಧ ಪಕ್ಷಕ್ಕೆ 2 ಸ್ಥಾನಗಳು ಮಾತ್ರ ಲಭಿಸಿದವು.
1947: ಕಲಾವಿದ ಮಹಾದೇವ ಪಾಂಚಾಲ್ ಜನನ.
1946: ಖ್ಯಾತ ಭಾರತೀಯ ವಕೀಲ ಭುಲಾಭಾಯಿ ದೇಸಾಯಿ (1877-1946) ತಮ್ಮ 68ನೇ ವಯಸ್ಸಿನಲ್ಲಿ ಮುಂಬೈಯಲ್ಲಿ ಮೃತರಾದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಾರತ ರಾಷ್ಟ್ರೀಯ ಸೇನೆಯ (ಐ ಎನ್ ಎ) ಅಧಿಕಾರಿಗಳನ್ನು ಬ್ರಿಟಿಷ್ ಸರ್ಕಾರ 1945ರಲ್ಲಿ ವಿಚಾರಣೆಗೆ ಗುರಿಪಡಿಸಿದಾಗ ಐ ಎನ್ ಎ ಅಧಿಕಾರಿಗಳ ಪರವಾಗಿ ವಾದಿಸುವ ಮೂಲಕ ದೇಸಾಯಿ ವ್ಯಾಪಕ ಪ್ರಸಿದ್ಧಿ ಪಡೆದರು.
1935: ಕಲಾವಿದ ರಾಮಚಂದ್ರಮೂರ್ತಿ ನವರತ್ನ ಜನನ.
1928: ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ. ನಾಡಿಗ್ ಅವರು ಕೃಷ್ಣಸ್ವಾಮಿ ರಾವ್- ರಾಧಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.
1923: ಕಲಾವಿದ ಚೆನ್ನಬಸವಯ್ಯ ಗುಬ್ಬಿ ಜನನ.
1861: ಮೋತಿಲಾಲ್ ನೆಹರೂ (1861-1931) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕ, ಸ್ವರಾಜ್ ಪಕ್ಷದ ಸಹ ಸಂಸ್ಥಾಪಕರಾದ ಇವರು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ.
1856: ರಾಬರ್ಟ್ ಎಡ್ವಿನ್ ಪಿಯರೆ (1856-1920) ಹುಟ್ಟಿದ ದಿನ. ಅಮೆರಿಕದ ಸಂಶೋಧಕನಾದ ಈ ಭೂ ಶೋಧಕ 1909ರಲ್ಲಿ ಪ್ರಪ್ರಥಮ ಬಾರಿಗೆ ಉತ್ತರ ಧ್ರುವವನ್ನು ತಲುಪಿದ.
1542: ಫ್ರಾನ್ಸಿಸ್ ಝೇವಿಯರ್ ಮೊತ್ತ ಮೊದಲ ಕ್ರೈಸ್ತ ಪ್ರಚಾರಕನಾಗಿ ಗೋವಾಕ್ಕೆ ಆಗಮಿಸಿದ. ಆಧುನಿಕ ಕಾಲದ ಮಹಾನ್ ರೋಮನ್ ಕ್ಯಾಥೋಲಿಕ್ ಪ್ರಚಾರಕ ಎಂಬ ಹೆಗ್ಗಳಿಕೆ ಗಳಿಸಿರುವ ಈತ ಭಾರತ, ಮಲಯ ಹಾಗೂ ಜಪಾನಿನಲ್ಲಿ ಕ್ರೈಸಮತವನ್ನು ಪಸರಿಸಿದವರಲ್ಲಿ ಪ್ರಮುಖ ವ್ಯಕ್ತಿ.
No comments:
Post a Comment