ಇಂದಿನ ಇತಿಹಾಸ
ಜೂನ್ 04
ಭಾರಿ ಭಿಗಿಭದ್ರತಾ ವ್ಯವಸ್ಥೆ ಹೊಂದಿರುವ ವಿಶ್ವದ ನಾನಾ ಜೈಲುಗಳಿಂದ ಪರಾರಿಯಾಗುವ ಮೂಲಕ ಕುಖ್ಯಾತನಾದ ಚಾರ್ಲ್ಸ್ ಶೋಭ್ ರಾಜ್‌ಗೆ ನೇಪಾಳದ ಕಠ್ಮಂಡುವಿನ ಕೆಳಹಂತದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 2000 ನೇಪಾಳ ರೂಪಾಯಿ ದಂಡ ವಿಧಿಸಿತು
2009: ವಾಯವ್ಯ ಹಿಮಾಲಯ ಭಾಗದಲ್ಲಿ ಕಳೆದ 100 ವರ್ಷಗಳ ಅವಧಿಯಲ್ಲಿ ಸರಾಸರಿ ಉಷ್ಣತೆ 1.4 ಡಿ.ಸೆ. ಏರಿಕೆಯಾಗಿದ್ದು, ಇದು ಜಗತ್ತಿನ ಬೇರಾವುದೇ ಭೂಪ್ರದೇಶದಲ್ಲಿ ಆಗಿರುವ ತಾಪಮಾನ ಹೆಚ್ಚಳಕ್ಕಿಂತ ಅಧಿಕ. ಜಗತ್ತಿನ ಬೇರೆ ಭೂಭಾಗಗಳ ಉಷ್ಣತೆಯಲ್ಲಿ 0.5ರಿಂದ 1.1 ಡಿ.ಸೆ.ನಷ್ಟು ಏರಿಕೆಯಾಗಿದ್ದರೆ ಹಿಮಾಲಯದಲ್ಲಿ ಅದಕ್ಕಿಂತ ಹೆಚ್ಚಿನ ಏರಿಕೆಯಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಪುಣೆ ವಿ.ವಿ.ಯ ಭೂಗರ್ಭಶಾಸ್ತ್ರ ವಿಭಾಗಗಳು ನಡೆಸಿದ ಅಧ್ಯಯನ ತಿಳಿಸಿತು. ವಾಯವ್ಯ ಹಿಮಾಲಯದಲ್ಲಿ ಕಳೆದ ಮೂರು ದಶಕಗಳಿಂದ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ ತೀವ್ರ ಏರಿಕೆಯಾಗುತ್ತಿರುವುದು ಅಧ್ಯಯನದಿಂದ ಬಯಲಾಗಿರುವ ಮತ್ತೊಂದು ಗಮನಾರ್ಹ ಸಂಗತಿ. ಈ ಪ್ರದೇಶದಲ್ಲಿ ಹಿಮಹಾಸು ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥರಾಗಿದ್ದ ಡಿಆರ್‌ಡಿಓ ಎಂ.ಆರ್.ಭೂತಿಯಾನಿ ತಿಳಿಸಿದರು. ಇದರಿಂದಾಗಿ ರಾಷ್ಟ್ರದಲ್ಲಿ ಮುಂಗಾರು ಮಳೆ ಪ್ರಮಾಣ ಕ್ಷೀಣಿಸುವ ಜತೆಗೆ ಚಳಿಗಾಲದ ಅವಧಿ ಕೂಡ ಮೊಟಕಾಗಿದೆ. ಮುಂಚೆ ಚಳಿಗಾಲದಲ್ಲಿ ವಸುಂಧರೆಯನ್ನು ಮುಸುಕುತ್ತಿದ್ದ ಮಂಜು ಈಗ ಹಿಂದಿನಷ್ಟು ದಟ್ಟವಾಗಿಲ್ಲ. ಒಟ್ಟಾರೆ ಈ ತಾಪಮಾನ ಏರಿಕೆಯಿಂದ ಜೀವವೈವಿಧ್ಯದ ಮೇಲೆಯೇ ದುಷ್ಪರಿಣಾಮವಾಗಿದೆ ಎಂದು ಭೂತಿಯಾನಿ ಹೇಳಿದರು. ಕೈಗಾರಿಕೀಕರಣ, ಹೆಚ್ಚಿದ ಮಾನವ ಚಟುವಟಿಕೆಗಳೇ ಉಷ್ಣತೆ ಏರಿಕೆಗೆ ಕಾರಣ ಎಂದು ಅಧ್ಯಯನ ಅಭಿಪ್ರಾಯಪಟ್ಟಿತು. ಬ್ರಿಟನ್ನಿನ ರಾಯಲ್ ಮೆಟಿರಿಯಾಲಾಜಿಕಲ್ ಸೊಸೈಟಿಯು ಹೊರತರುವ ಜಾಗತಿಕ ಹವಾಮಾನ ನಿಯತಕಾಲಿಕದಲ್ಲಿ ಅಧ್ಯಯನದ ವಿವರ ಪ್ರಕಟಿಸಲಾಯಿತು.
2009: ತನ್ನ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ಸಾಮೂಹಿಕ ದಾಳಿ ಜನಾಂಗೀಯ ದ್ವೇಷಕ್ಕೆ ಸಂಬಂಧಿಸಿದ್ದು ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿತು. ಈ ಮುನ್ನ ಇಂತಹ ದಾಳಿಗಳನ್ನು ಖಂಡಿಸಿದರೂ, ಇದಕ್ಕೆ ಜನಾಂಗೀಯ ದ್ವೇಷ ಕಾರಣವಲ್ಲ ಎಂದೇ ಅಲ್ಲಿನ ಸರ್ಕಾರ ಪ್ರತಿಪಾದಿಸಿತ್ತು.
ಭಾರತದಲ್ಲಿರುವ ಆಸ್ಟ್ರೇಲಿಯಾದ ಹೈ ಕಮಿಷನರ್ ಜಾನ್ ಮೆಕಾರ್ತಿ ಅವರು, 'ಈ ದಾಳಿಗಳಲ್ಲಿ ಜನಾಂಗೀಯ ದ್ವೇಷದ ಲಕ್ಷಣ ಕಂಡುಬಂದಿದೆ' ಎಂದು ಹೇಳಿದರು. ಸಾಗರೋತ್ತರ ಭಾರತೀಯ ವ್ಯವಹಾರ ಸಚಿವ ವಯಲಾರ್ ರವಿ ಅವರನ್ನು ಭೇಟಿ ಮಾಡಿದ್ದ ಮೆಕಾರ್ತಿ, ಭಾರತೀಯ ವಿದ್ಯಾರ್ಥಿಗಳ ಮೇಲಿನ ದಾಳಿ ತಡೆಗೆ ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಕಳೆದ ತಿಂಗಳೊಂದರಲ್ಲೇ ಆಸ್ಟ್ರೇಲಿಯಾದಲ್ಲಿ 8 ಭಾರತೀಯ ವಿದ್ಯಾರ್ಥಿಗಳು ಹಲ್ಲೆಗೆ ಒಳಗಾಗಿದ್ದರು.
2009: ಲೋಕಸಭೆಯ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ನಾಯಕರಾಗಿ ಪಕ್ಷದ ಅಧ್ಯಕ್ಷ ಮತ್ತು ಕೃಷಿ ಸಚಿವ ಶರದ್ ಪವಾರ್ ಆಯ್ಕೆಯಾದರು. ಉಪನಾಯಕರಾಗಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಪ್ರಫುಲ್ ಪಟೇಲ್ ಮತ್ತು ಮುಖ್ಯ ಸಚೇತಕರಾಗಿ ಸಂಜೀವ್ ನಾಯಕ್ ಅವರನ್ನು ಆಯ್ಕೆಮಾಡಲಾಯಿತು.
2009: ಬೆಲ್‌ಗ್ರೇಡ್ (ಟಾನ್‌ಜುಂಗ್): ಕೋಸ್ಟಲಾಕ್ ಸಮೀಪದ ಪ್ರಾಚ್ಯ ಉದ್ಯಾನದಲ್ಲಿ ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಿಂದಿನದು ಎಂದು ಅಂದಾಜಿಸಲಾದ ಅಸ್ಥಿಪಂಜರವೊಂದು ಪತ್ತೆಯಾಯಿತು. ಐದು ಮೀಟರ್ ಉದ್ದ ಮತ್ತು 10 ಟನ್ ತೂಗುವ ಈ ಅಸ್ಥಿಪಂಜರ ದಕ್ಷಿಣ ಮಹಾಗಜ ಪ್ರಬೇಧಕ್ಕೆ ಸೇರಿದ್ದು ಎಂದು ಅಂದಾಜು ಮಾಡಲಾಯಿತು. ಹತ್ತು ಲಕ್ಷ ವರ್ಷಗಳ ಹಿಂದೆ ಇಂಥ ಮಹಾಗಜಗಳು ಉತ್ತರ ಆಫ್ರಿಕಾದಿಂದ ಯೂರೋಪಿನತ್ತ ವಲಸೆ ಹೋಗಿದ್ದವು ಎಂದು ಭಾವಿಸಲಾಗಿದ್ದು, 27 ಅಡಿ ಆಳದಲ್ಲಿ ಈ ಅಸ್ಥಿ ಪತ್ತೆಯಾಯಿತು ಎಂದು ಉದ್ಯಾನದ ನಿರ್ದೇಶಕ ಮಯೋಮಿರ್ ಕೊರಾಕ್ ತಿಳಿಸಿದರು.
2009: ಭಾರಿ ಭಿಗಿಭದ್ರತಾ ವ್ಯವಸ್ಥೆ ಹೊಂದಿರುವ ವಿಶ್ವದ ನಾನಾ ಜೈಲುಗಳಿಂದ ಪರಾರಿಯಾಗುವ ಮೂಲಕ ಕುಖ್ಯಾತನಾದ ಚಾರ್ಲ್ಸ್ ಶೋಭ್ ರಾಜ್‌ಗೆ ನೇಪಾಳದ ಕಠ್ಮಂಡುವಿನ ಕೆಳಹಂತದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು 2000 ನೇಪಾಳ ರೂಪಾಯಿ ದಂಡ ವಿಧಿಸಿತು. ನಕಲಿ ಪಾಸ್‌ಪೋರ್ಟ್ ಬಳಸಿ ಇಲ್ಲಿಗೆ ಆಗಮಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು. ಆದರೆ ಆತ ಇದಕ್ಕೆ ಮುನ್ನವೇ ಕೊಲೆ ಪ್ರಕರಣ ಒಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.
2009: ದಾವಣಗೆರೆಯ 'ಗ್ರೀನ್ ಇಂಡಿಯಾ ವಾಲಂಟೀರ್ಸ್ ಫಾರ್ ಎನ್ವಿರಾನ್ಮೆಂಟ್' ಹಾಗೂ ವಿದ್ಯಾಸಾಗರ ಕಾನ್ವೆಂಟ್ ವತಿಯಿಂದ ನೀಡಲಾಗುವ ಪಂಪಾಪತಿ ಪರಿಸರ ಪ್ರಶಸ್ತಿಗೆ ಈ ವರ್ಷ ಬೆಂಗಳೂರಿನ ಸಹಕಾರ ನಗರದ ಪರಿಸರ ಪ್ರೇಮಿ ಎಂ.ಎಸ್. ಸುರೇಶ್‌ಕುಮಾರ್ ಅವರನ್ನು ಆಯ್ಕೆಮಾಡಲಾಯಿತು. ಸಹಕಾರ ನಗರದ ಎರಡೂವರೆ ಕಿ.ಮೀ. ರೈಲುಮಾರ್ಗದ ಎರಡೂ ಬದಿ ಒಂದು ಸಾವಿರ ಗಿಡನೆಟ್ಟು, ಪ್ರತಿ ಮರಕ್ಕೂ ಶ್ರೇಷ್ಠ ಕನ್ನಡಿಗರ ಹೆಸರಿಟ್ಟು ಪರಿಸರ ಹಾಗೂ ಕನ್ನಡದ ಪ್ರೀತಿ ಬೆಳೆಸಿದ ಸುರೇಶ್‌ಗೆ ಪಂಪಾಪತಿ ಪ್ರಶಸ್ತಿ ಒಲಿಯಿತು.
2008: ಧಾರವಾಡ ಹಾಗೂ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಕಾರ್ಯಾರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿತು. ಗಗನಕುಸುಮ ಎಂದೇ ಭಾವಿಸಲಾಗಿದ್ದ ಈ ಪೀಠಗಳ ಆರಂಭಕ್ಕೆ ಹೈಕೋರ್ಟ್ ಪೂರ್ಣಪೀಠದ ಮುದ್ರೆ ಬಿದ್ದಿದ್ದು, ಈ ಸಂಬಂಧ ಈದಿನ ಅಧಿಸೂಚನೆ ಹೊರ ಬಿದ್ದಿತು. ಪೀಠಗಳ ಕಾರ್ಯಾರಂಭಕ್ಕೆ ಜುಲೈ 7ರ ಮುಹೂರ್ತ ನಿಗದಿ ಪಡಿಸಲಾಯಿತು. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ವಕೀಲರ ಸುದೀರ್ಘ ಹೋರಾಟಕ್ಕೆ ಐದು ದಶಕಗಳ ನಂತರ (54 ವರ್ಷ) ನಂತರ ಫಲ ಸಿಕ್ಕಿದಂತಾಯಿತು.
2008: ಅಮೆರಿಕದ ಸೆನೆಟರ್ ಬರಾಕ್ ಒಬಾಮಾ ಅವರು ಅಂತಿಮವಾಗಿ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. ಇದರೊಂದಿಗೆ ರಾಷ್ಟ್ರದ ಮೊತ್ತ ಮೊದಲ ಕರಿಯ ಅಧ್ಯಕ್ಷರಾಗುವ ಗುರಿಯೆಡೆಗೆ ಅವರು ಚಾರಿತ್ರಿಕ ಹೆಜ್ಜೆ ಇರಿಸಿದರು. ಅಧ್ಯಕ್ಷೀಯ ಹುದ್ದಗೆ ಒಬಾಮಾ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಹಿಲರಿ ಕ್ಲಿಂಟನ್ ಉಪಾಧ್ಯಕ್ಷ ಹುದ್ದೆಯೆಡೆಗೆ ತಮ್ಮ ದೃಷ್ಟಿ ನೆಟ್ಟರು. ಒಬಾಮಾ ಅವರ ವಿಜಯವು ಅರಿಜೋನಾದ ರಿಪಬ್ಲಿಕನ್ ಸೆನೆಟರ್ ಜಾನ್ ಮೆಕ್ಕೈನ್ ಅವರ ಜೊತೆಗೆ ಐದು ತಿಂಗಳ ವಾಕ್ ಸಮರಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿತು.
2008: ಯುನೈಟೆಡ್ ಅರಬ್ ಎಮಿರೇಟ್ಸಿನಲ್ಲಿ (ಯುಎಇ) ಹೋಟೆಲ್ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ನಿರ್ಮಾಣ ಹಂತದಲ್ಲಿದ್ದ ಛಾವಣಿ ಕುಸಿದು ಮೂವರು ಭಾರತೀಯ ಕಾರ್ಮಿಕರು ಮೃತರಾದರು.
2008: ದಿನಕ್ಕೊಂದು ಲೋಟ ಕೆಂಪು ವೈನ್ ಕುಡಿಯುವುದರಿಂದ ಹೃದಯಕ್ಕೆ ರಕ್ಷಣೆ ಒದಗುವುದು, ಜೊತೆಗೆ ವಯಸ್ಸಾಗುವುದನ್ನು ತಡೆಗಟ್ಟಬಹುದೆಂದು ಸಂಶೋಧನೆಯೊಂದು ತಿಳಿಸಿತು. ಕೆಂಪು ವೈನ್ ತಯಾರಿಕೆಯಲ್ಲಿ ಬಳಸುವ ಕೆಂಪು ದ್ರಾಕ್ಷಿಯ ತೊಗಟೆಯಲ್ಲಿನ ಅಂಶವೊಂದು ವಯಸ್ಸಾಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡರು. ಕೆಂಪು ದ್ರಾಕ್ಷಿಯ ತೊಗಟೆಯಲ್ಲಿನ ಈ ಅಂಶ ಕ್ಯಾನ್ಸರ್ ತಡೆಯುವುದು, ಅಲ್ಲದೇ ಉರಿಯನ್ನು ಕಡಿಮೆ ಮಾಡುವುದು ಎಂಬುದನ್ನು ಈ ಮೊದಲೇ ಕಂಡುಕೊಳ್ಳಲಾಗಿತ್ತು. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಈ ಸಂಗತಿ ಧೃಡಪಟ್ಟಿದೆ ಎಂದು ಸಂಶೋಧಕರು ತಿಳಿಸಿದರು.
2008: ದೇಶದಾದ್ಯಂತ ವ್ಯಾಪಕ ವಿರೋಧದ ನಡುವೆಯೂ ಯುಪಿಎ ನೇತೃತ್ವದ ಕೇಂದ್ರ ಸಕರ್ಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಸಿತು. ಇಂಧನ ಕಂಪೆನಿಗಳ ನಷ್ಟದ ಭಾರ ಕಡಿಮೆ ಮಾಡಲು, ದೇಶದಲ್ಲಿನ ಚಿಲ್ಲರೆ ಮಾರಾಟದ ಪ್ರತಿ ಲೀಟರ್ ಪೆಟ್ರೋಲಿಗೆ ರೂ 5, ಡೀಸೆಲ್ಗೆ ರೂ 3 ಮತ್ತು ಅಡುಗೆ ಅನಿಲಕ್ಕೆ ರೂ 50 ರಷ್ಟು ಹೆಚ್ಚಳವನ್ನು ಈದಿನ ಮಧ್ಯರಾತ್ರಿಯಿಂದ ಮಾಡಲಾಯಿತು
2008: ವಿವಿಧೆಡೆಗಳಲ್ಲಿ ಸಿಡಿಲಿಗೆ ಏಳು ಮಂದಿ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ಘಟನೆ ಜಾರ್ಖಂಡಿನ ಡುಮಕ್ನಲ್ಲಿ ಸಂಭವಿಸಿತು.
2008: ನೇಪಾಳದಲ್ಲಿ ದೊರೆ ಪಟ್ಟದಿಂದ ಪದಚ್ಯುತಗೊಂಡ ಮೇಲೆ ತಮ್ಮ ವಂಶಜರು ವಂಶಪಾರಂಪರ್ಯವಾಗಿ ನೆಲೆಸುತ್ತಾ ಬಂದಿದ್ದ `ನಾರಾಯಣಹಿತಿ' ಅರಮನೆ ತೊರೆದ ಜ್ಞಾನೇಂದ್ರ ಅವರಿಗೆ ಕಠ್ಮಂಡುವಿನ ಹೊರವಲಯದಲ್ಲಿನ ನಾಗಾರ್ಜುನ ಅರಮನೆಯಲ್ಲಿ ನೆಲೆಸಲು ಸರ್ಕಾರ ಒಪ್ಪಿಗೆ ಕೊಟ್ಟಿತು. ಜ್ಞಾನೇಂದ್ರ ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಮಾಡುವ ತನಕ ನಾಗಾರ್ಜುನ ಅರಮನೆಯಲ್ಲಿ ನೆಲೆಸಲು ಮಾವೊವಾದಿಗಳು ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳ, ಸರ್ಕಾರದ ಒಪ್ಪಿಗೆಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದರು.
2007: ಸಾಲುಮರದ ತಿಮ್ಮಕ್ಕ, ಡಾ. ವಿಜಯ್ ಅಂಗಡಿ, ಎಂ.ಆರ್. ಪ್ರಭಾಕರ ಮತ್ತು ಕೇಶವ ಹೆಗಡೆ ಕೊರ್ಸೆ ಸೇರಿದಂತೆ ನಾಲ್ಕು ಮಂದಿ ಗಣ್ಯರು ಹಾಗೂ ನಾಲ್ಕು ಸಂಸ್ಥೆಗಳು 2007-08ನೇ ಸಾಲಿನ `ಪರಿಸರ ಪ್ರಶಸ್ತಿ'ಗೆ ಆಯ್ಕೆಯಾದವು.
2007: ಬಂಜರು ಭೂಮಿಯಲ್ಲಿ ಹಸಿರುಕ್ಕಿಸಿರುವ ಬೀದರ್ ಅರಣ್ಯ ಅಭಿವೃದ್ಧಿ ಸಂಸ್ಥೆ ಮತ್ತು ಕೈಯಿಂದ ಹಣ ಖರ್ಜು ಮಾಡಿ ಚನ್ನರಾಯಪಟ್ಟಣದಲ್ಲಿ ನೂರಾರು ಮರಗಳನ್ನು ಬೆಳೆಸಿದ ಸಿ.ಎನ್. ಅಶೋಕ ಅವರು 2005ರ ಸಾಲಿನ ಕೇಂದ್ರ ಸರ್ಕಾರದ `ಇಂದಿರಾ ಪ್ರಿಯದರ್ಶಿನಿ' ಪ್ರಶಸ್ತಿಗೆ ಆಯ್ಕೆಯಾದರು.
2007: ಹೆಚ್ಚುತ್ತಿರುವ ಜಗ ತಾಪ ಏರಿಕೆ ಪರಿಣಾಮವಾಗಿ ಅಪರೂಪದ ಕೆಲವು ಜೀವ ಸಂಕುಲಗಳು ನಶಿಸುವ ಅಂಚಿಗೆ ತಲುಪಿವೆ. ನ್ಯೂಜಿಲೆಂಡ್ ನೆಲದಲ್ಲಿ ಮಾತ್ರ ಕಂಡು ಬರುವ ಡೈನೋಸಾರ್ ಯುಗಕ್ಕೆ ಸೇರಿದ ಅಪರೂಪದ ಸರೀಸೃಪ ಸಂತಾನೋತ್ಪತ್ತಿ ನಿಲ್ಲಿಸಿದೆ. ಆಮೆ, ಓತಿಕ್ಯಾತ ಇತ್ಯಾದಿ ಜೀವಿಗಳೂ, ಅವುಗಳಲ್ಲೂ ವಿಶೇಷವಾಗಿ ಓತಿಕ್ಯಾತಗಳು ವಿನಾಶದ ಅಂಚಿನತ್ತ ಸಾಗುತ್ತಿವೆ. ಅವುಗಳ ಮೊಟ್ಟೆಗಳಿಂದ ಗಂಡು ಸಂತಾನ ಮಾತ್ರ ಹುಟ್ಟುತ್ತಿದ್ದು ಇದಕ್ಕೆ ಜಗ ತಾಪ ಏರಿಕೆ ಕಾರಣ ಎಂದು ವೆಲ್ಲಿಂಗ್ಟನ್ ವಿಜ್ಞಾನಿಗಳು ಪ್ರಕಟಿಸಿದರು.
2007: ಧಾರವಾಡ ಸಮೀಪದ ಬೇಲೂರಿನಲ್ಲಿ ಟಾಟಾ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದ ಐಶಾರಾಮಿ ಮತ್ತು ಸಣ್ಣ ಬಸ್ ಹಾಗೂ ಲಘು ವಾಣಿಜ್ಯ ವಾಹನ ಉತ್ಪಾದನಾ ಘಟಕ್ಕೆ ಈಗಾಗಲೇ ನೀಡಲಾದ 600 ಎಕರೆ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 300 ಎಕರೆ ನೀಡುವ ಮೂಲಕ ಕರ್ನಾಟಕ ಸಚಿವ ಸಂಪುಟ ಈ ಯೋಜನೆಗೆ ಅನುಮತಿ ನೀಡಿತು.
2007: ಕುಡಿದು ವಾಹನ ಚಲಾಯಿಸಿದ ತಪ್ಪಿಗಾಗಿ 10 ದಿನಗಳ ಕಾಲ ಸಂಚಾರ ನಿರ್ವಹಣೆಯಲ್ಲಿ ಪೊಲೀಸರಿಗೆ ನೆರವಾಗುವಂತೆ ನವದೆಹಲಿಯ ವ್ಯಕ್ತಿಯೊಬ್ಬನಿಗೆ ಆಜ್ಞಾಪಿಸುವ ಮೂಲಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌತಮ್ ಮನನ್ ಇತಿಹಾಸ ನಿರ್ಮಿಸಿದರು. ದಕ್ಷಿಣ ದೆಹಲಿಯ ದೀಪಕ್ ಗುಪ್ತನಿಗೆ ಫೆಬ್ರುವರಿ 16ರಂದು ಕುಡಿದು ವಾಹನ ಚಲಾಯಿಸಿದ್ದಕ್ಕೆ ಈ ಶಿಕ್ಷೆ ನೀಡಲಾಯಿತು.
2006: ಅಸ್ವಸ್ಥಗೊಂಡು ಎರಡು ದಿನಗಳ ಹಿಂದೆ ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಾದ ರಾಹುಲ್ ಮಹಾಜನ್ ಮೂತ್ರದಲ್ಲಿ ಕೊಕೇನ್ ಪತ್ತೆಯಾಗಿದ್ದು ಮದ್ಯ ಹಾಗೂ ಮಾದಕ ದ್ರವ್ಯಗಳ ಮಿಶ್ರಣವೇ ವಿವೇಕ ಮೊಯಿತ್ರಾ ಸಾವು ಹಾಗೂ ರಾಹುಲ್ ಅಸ್ವಾಸ್ಥ್ಯಕ್ಕೆ ಕಾರಣ ಎಂದು ವೈದ್ಯಕೀಯ ವರದಿಗಳು ತಿಳಿಸಿದವು.
2006: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರ ನೆರಳಿನಂತೆಯೇ ಇದ್ದ ವಿವೇಕ್ ಮೊಯಿತ್ರ ಅವರ ಅಂತ್ಯಕ್ರಿಯೆ ಮುಂಬೈಯಲ್ಲಿ ನಡೆಯಿತು. ಮಹಾಜನ್ ಅವರ ಅಂತ್ಯಕ್ರಿಯೆ ಮೇ 4ರಂದು ನಡೆದರೆ, ಒಂದು ತಿಂಗಳ ನಂತರ ಅದೇ ದಿನಾಂಕದಂದು ಮೈತ್ರ ಅವರೂ ಚಿತೆಯೇರುವಂತಾದುದು ವಿಧಿ ವಿಲಾಸ. 39 ವರ್ಷ ವಯಸ್ಸಿನ ಮೊಯಿತ್ರ ಅವರು ಜೂನ್ 2ರಂದು ನಸುಕಿನ ವೇಳೆಯಲ್ಲಿ ದೆಹಲಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವಿಷಪ್ರಾಶನಕ್ಕೆ ಒಳಗಾಗಿ ಮೃತರಾದರು. ಕಳೆದ 22 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದ ಮೊಯಿತ್ರ ಮೊದಲಿಗೆ ಗೋಪಿನಾಥ ಮುಂಡೆ ಹಾಗೂ ನಂತರ ಪ್ರಮೋದ್ ಮಹಾಜನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.
1997: ಅಜಿತ್ ಭಾರಿಹೋಕ್ ನೇತೃತ್ವದ ವಿಶೇಷ ನ್ಯಾಯಾಲಯವು ಸೇಂಟ್ ಕಿಟ್ಸ್ ಹಗರಣದಲ್ಲಿ ಆಪಾದಿತರಾಗಿದ್ದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಕೆ.ಕೆ. ತಿವಾರಿ ಅವರನ್ನು ಅರೋಪಮುಕ್ತಗೊಳಿಸಿತು. ನರಸಿಂಹರಾವ್ ವಿರುದ್ಧ ಹೂಡಲಾಗಿದ್ದ ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಿಟ್ಸ್ ಪ್ರಕರಣವೂ ಒಂದು. ಜಾರ್ಖಂಡ್ ಮುಕ್ತಿ ಮೋರ್ಚಾ ಹಗರಣ ಮತ್ತು ಲಖೂಬಾಯಿ ಪಾಠಕ್ ಹಗರಣ - ಇವು ನರಸಿಂಹರಾವ್ ವಿರುದ್ಧ ಹೂಡಲಾದ ಇತರ ಎರಡು ಭ್ರಷ್ಟಾಚಾರ ಪ್ರಕರಣಗಳು.
1989: ಚೀನಾದ ಪಡೆಗಳು ಪ್ರಜಾಪ್ರಭುತ್ವ ಪರ ಚಳವಳಿಗಾರರನ್ನು ದಮನ ಮಾಡುವ ಸಲುವಾಗಿ ಬೀಜಿಂಗಿನ ಟಿಯನಾನ್ ಮನ್ ಚೌಕದಲ್ಲಿ ಚಳವಳಿಗಾರರಿಗೆ ಮುತ್ತಿಗೆ ಹಾಕಿದವು. ಈ ದಮನ ಕಾರ್ಯಾಚರಣೆಯಲ್ಲಿ ಸುಮಾರು 2600 ಜನ ಸತ್ತು, 10,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
1959: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಮದ್ರಾಸಿನ (ಈಗಿನ ಚೆನ್ನೈ) ವಿವೇಕಾನಂದ ಕಾಲೇಜಿನಲ್ಲಿ ಸ್ವತಂತ್ರ ಪಕ್ಷದ ಸ್ಥಾಪನೆ ಮಾಡಿದರು.
1955: ಸಾಹಿತಿ ಶಕುಂತಳಾ ಭಟ್ ಜನನ.
1955: ಭಾರತದ ಕಬ್ಬಿಣ ಮತ್ತು ಉಕ್ಕು ಸಚಿವಾಲಯ ಸ್ಥಾಪನೆ.
1953: ಗಾಯಕಿ ಡಾ.ಆರ್. ಎನ್. ಶ್ರೀಲತಾ ಅವರು ಆರ್. ಕೆ. ನಾರಾಯಣಸ್ವಾಮಿ- ಸಾವಿತ್ರಮ್ಮ ದಂಪತಿಯ ಮಗಳಾಗಿ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ ಜನಿಸಿದರು.
1947: ಸಾಹಿತಿ ಸಂಶೋಧಕ ವೀರಣ್ಣ ರಾಜೂರ ಅವರು ಬಸಪ್ಪ- ಫಕೀರಮ್ಮ ದಂಪತಿಯ ಪುತ್ರನಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಈದಿನ ಜನಿಸಿದರು.
1936: ಭಾರತೀಯ ಚಲನಚಿತ್ರ ತಾರೆ ನೂತನ್ ಸಮರ್ಥ (1936-1991) ಜನ್ಮದಿನ.
1932: ರಾಮಕೃಷ್ಣ ಪರಮಹಂಸರ ಅನುಯಾಯಿ ಮಹೇಂದ್ರನಾಥ ಗುಪ್ತ ನಿಧನ.
1903: ಗಾಂಧೀಜಿ ಅವರು `ಇಂಡಿಯನ್ ಒಪೀನಿಯನ್' ಪತ್ರಿಕೆ ಆರಂಭಿಸಿದರು.
1872: ಇಂಗ್ಲಿಷ್ ರಸಾಯನ ವಿಜ್ಞಾನ ತಜ್ಞ ಆಗಸ್ಟಸ್ ಚೆಸ್ ಬ್ರೊ ತಾನು ಅಭಿವೃದ್ಧಿ ಪಡಿಸಿದ `ಪೆಟ್ರೋಲಿಯಂ ಜೆಲ್ಲಿಗಾಗಿ ಪೇಟೆಂಟ್ ಪಡೆದ. 1859ರಲ್ಲಿ ಪೆನ್ಸಿಲ್ವೇನಿಯಾ ಮತ್ತು ಟಿಟ್ಸುವಿಲ್ನಲ್ಲಿ ಹೊರಚಿಮ್ಮಿದ ತೈಲಕ್ಕೆ ಗಾಯಗಳನ್ನು ಗುಣಪಡಿಸುವ ಗುಣ ಇದೆ ಎಂದು ಕಾರ್ಮಿಕರು ಪತ್ತೆ ಹಚ್ಚಿದ್ದನ್ನು ಅನುಸರಿಸಿ ಸಂಶೋಧನೆ ನಡೆಸಿದ ಈತ 1870ರಿಂದ `ವ್ಯಾಸಲೀನ್' ಎಂಬ ಟ್ರೇಡ್ ಮಾರ್ಕಿನಲ್ಲಿ ತಾನು ಕಂಡು ಹಿಡಿದ `ಪೆಟ್ರೋಲಿಯಂ ಜೆಲ್ಲಿ'ಯ ಉತ್ಪಾದನೆ ಆರಂಭಿಸಿದ.
1783: ಅನ್ನೋನೆಯ ಮಾರುಕಟ್ಟೆ ಪ್ರದೇಶದಲ್ಲಿ ಮಾಂಟೆಗೋಲ್ಫಿಯರ್ ಸಹೋದರರಾದ ಜೋಸೆಫ್ ಮೈಕೆಲ್ ಮತ್ತು ಜಾಕ್ವೆಸ್ ಎಟಿನ್ ಮೊತ್ತ ಮೊದಲ `ಏರ್ ಹಾಟ್ ಬಲೂನಿನ' (ಬಿಸಿಗಾಳಿ ಬಲೂನ್) ಸಾರ್ವಜನಿಕ ಪ್ರದರ್ಶನ ನಡೆಸಿದರು. ಬಲೂನ್ 3000 ಅಡಿಗಳಷ್ಟು ಎತ್ತರಕ್ಕೆ ಏರಿ 10 ನಿಮಿಷಗಳ ಕಾಲ ಆಕಾಶದಲ್ಲಿ ಉಳಿಯಿತು. ನಂತರ ಒಂದೂವರೆ ಮೈಲು ದೂರ ಸಾಗಿ ನೆಲಕ್ಕೆ ಇಳಿಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment