Wednesday, June 16, 2010

ಇಂದಿನ ಇತಿಹಾಸ History Today ಜೂನ್ 10

ಇಂದಿನ ಇತಿಹಾಸ

ಜೂನ್ 10


ಕಕ್ಷೆಗೆ ಏರಿದ ಅತಿ ಹೆಚ್ಚು ಭಾರದ ಗಗನ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟ್ಲಾಂಟಿಸ್ ಗಗನನೌಕೆಯು ಬಾಹ್ಯಾಕಾಶದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿತು.

2009: ಮೈಸೂರು ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ. ಚಂದ್ರಲೇಖಾ ಗುರ್ಜರ್ (54) ಅವರನ್ನು ಕಾಲೇಜಿನ ವ್ಯವಸ್ಥಾಪಕ ಪುಟ್ಟಣ್ಣ ಎಂಬಾತ ಹಾಡಹಗಲೇ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಘಟನೆ ನಡೆಯಿತು. ಎಂದಿನಂತೆ ತರಗತಿ ಮುಗಿಸಿ ಬೆಳಿಗ್ಗೆ 10.45ರ ಸುಮಾರಿಗೆ ಸಿಬ್ಬಂದಿ ಕೊಠಡಿಗೆ ತೆರಳಿದ ಚಂದ್ರಲೇಖ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಠಡಿಯಲ್ಲಿ ಯಾರೂ ಇರಲಿಲ್ಲ. ಕೂಡಲೇ ಒಳಹೋದ ಪುಟ್ಟಣ್ಣ ಚಾಕುವಿನಿಂದ ಚಂದ್ರಲೇಖ ಅವರ ಕುತ್ತಿಗೆ ಭಾಗಕ್ಕೆ ಏಕಾಏಕಿ ಇರಿದಾಗ ಚಂದ್ರಲೇಖ  ಕುಸಿದು ಬ್ದಿದು ಸ್ಥಳದಲ್ಲೇ ಸಾವನ್ನಪ್ಪಿದರು.

2009: ವಿಶ್ವದ ಮೊದಲ ಸೌರ ಶಕ್ತಿ ಚಾಲಿತ  ರೂ 2799 ಬೆಲೆಯ ಮೊಬೈಲ್ ಫೋನನ್ನು ಭಾರತೀಯ ಮಾರುಕಟ್ಟೆಗೆ  ಎಲೆಕ್ಟ್ರಾನಿಕ್ಸ್ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ಈದಿನ ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಈ ಹ್ಯಾಂಡ್‌ಸೆಟ್ 'ಸೋಲಾರ್ ಗುರು'ವನ್ನು ಸೌರಶಕ್ತಿ ಬಳಸಿ ಬಳಕೆದಾರರು ಚಾರ್ಜ್ ಮಾಡಿಕೊಳ್ಳಬಹುದು. ವಿದ್ಯುತ್ ಸರಬರಾಜು ನಿಯಮಿತವಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ಗ್ರಾಹಕರ  ಅಗತ್ಯಗಳನ್ನು ಗಮನಿಸಿ 'ಸೋಲಾರ್ ಗುರು' ಅಭಿವೃದ್ಧಿಪಡಿಸಲಾಗಿದೆ ಎಂದು ಸ್ಯಾಮ್‌ಸಂಗ್‌ನ ಭಾರತದ ಮುಖ್ಯಸ್ಥ (ಮೊಬೈಲ್ ವಿಭಾಗ) ಸುನಿಲ್ ದತ್ ಹೇಳಿದರು. ಈ ಹ್ಯಾಂಡ್‌ಸೆಟ್ಟಿನಲ್ಲಿ  ಎಫ್‌ಎಂ ರೇಡಿಯೊ, ಎಂಪಿ3 ರಿಂಗ್ ಟೋನ್‌ಗಳು, ಗೇಮ್‌ಗಳು ಹಾಗೂ ಟಾರ್ಚ್‌ಲೈಟ್ ಅಡಕವಾಗಿದ್ದವು.

2009:  ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರು ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಯದ್ವಾತದ್ವ ಗುಂಡು ಹಾರಿಸಿದಾಗ ಗಾಯಗೊಂಡಿದ್ದ 10 ವರ್ಷದ ಹುಡುಗಿಯೊಬ್ಬಳು ಆರೋಪಿ ಅಜ್ಮಲ್ ಕಸಾಬ್‌ನನ್ನು ಗುರುತಿಸಿದಳು. ಇದೇ ಸಂದರ್ಭದಲ್ಲಿ ತನ್ನ ಮಗಳ ಭವಿಷ್ಯ ಹಾಳುಮಾಡಿದ ಕಸಾಬ್‌ನನ್ನು ಗಲ್ಲಿಗೇರಿಸಿ ಎಂದು ಆಕೆಯ ತಂದೆ ಕೂಗಾಡಿದ ಪ್ರಸಂಗ  ನಡೆಯಿತು. ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರ ನ್ಯಾಯಾಲಯದಲ್ಲಿ ಅತ್ಯಂತ ಭಾವನಾತ್ಮಕ ವಾತಾವರಣ  ನೆಲೆಸಿತ್ತು.  ಬಲಗಾಲಿಗೆ ಗಾಯವಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ದೇವಿಕಾ ರೋತ್ವಾನ್ ಊರುಗೋಲು ಸಹಾಯದಿಂದ ಸಾಕ್ಷಿಯ ಕಟಕಟೆಗೆ ಬಂದು ಮೂವರು ಆರೋಪಿಗಳ ಪೈಕಿ ನಿರ್ದಿಷ್ಟವಾಗಿ ಕಸಾಬ್‌ನನ್ನು ಗುರುತು ಹಿಡಿದು ಬೆಟ್ಟು ಮಾಡಿದಳು. ಆರೋಪಿಯನ್ನು ಗುರುತಿಸುವ ಸರದಿ ಆಕೆಯ ತಂದೆ ರೋತ್ವಾನ್‌ಗೆ ಬಂದಾಗ ಅವರು ಭಾವಾವೇಶಕ್ಕೆ ಒಳಗಾದರು. 'ನನ್ನ ಮಗಳಿಗೆ ತೊಂದರೆ ಮಾಡಿದ ಇವನನ್ನು ಗಲ್ಲಿಗೇರಿಸಲೇಬೇಕು' ಎಂದು ಅವರು ಕಿರುಚಿದರು. ನ್ಯಾಯಾಧೀಶರು ಸಮಾಧಾನಗೊಳ್ಳುವಂತೆ ಕೇಳಿದಾಗ, 'ತೊಂದರೆಗೆ ಒಳಗಾದವರಿಗೆ ಮಾತ್ರ ಈ ನೋವು ಅರ್ಥವಾಗುತ್ತದೆ' ಎಂದರು. 'ಇಂತಹ ವ್ಯಕ್ತಿಗಳಿಗೆ ದಯೆ ಎಂಬುದಿದೆಯೇ, ಈತನಿಗೂ ಹೆತ್ತವರು ಇಲ್ಲವೇ? ಇದು ನನ್ನ ಮಗಳ ಜೀವನದ ಪ್ರಶ್ನೆ' ಎಂದು ರೋತ್ವಾನ್ ಆರೋಪಿಯನ್ನು ಉಲ್ಲೇಖಿಸಿ ಹೇಳಿದಾಗ ಎದುರುತ್ತರ ನೀಡುವವರು ಯಾರೂ ಇರಲಿಲ್ಲ.

2009: ನಕ್ಸಲ್‌ಪೀಡಿತ ಜಾರ್ಖಂಡಿನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸೆರ್ದೆಂಗಾ-ಅರುಂಗಾ ಗ್ರಾಮದಲ್ಲಿ ಮಾವೋವಾದಿ ನಕ್ಸಲೀಯರು ಹುದುಗಿಸಿದ್ದ ನೆಲಬಾಂಬ್ ಸ್ಫೋಟಗೊಂಡು 11 ಮಂದಿ ಪೊಲೀಸರು ಮೃತರಾಗಿ ಇತರ ಆರು ಮಂದಿ ಗಾಯಗೊಂಡರು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನೊಳಗೊಂಡ ಜಂಟಿ ತಂಡವೊಂದು ನಕ್ಸಲ್ ಪೀಡಿತ ಸರಂದಾ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ತಪಾಸಣೆ ನಡೆಸಿ ಮಿನಿ ಟ್ರಕ್ಕಿನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿತು. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 2002 ರಿಂದ ಈಚೆಗೆ ನಕ್ಸಲೀಯರು ಪೊಲೀಸರ ಮೇಲೆ ನಡೆಸಿದ ನಾಲ್ಕನೇ ಅತಿ ದೊಡ್ಡ ದಾಳಿ ಇದು. 2002ರಲ್ಲಿ ಮೋಹರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕಿಲ್‌ಸೋಯ್ ಎಂಬಲ್ಲಿ ನಡೆದ ದುಷ್ಕೃತ್ಯದಲ್ಲಿ 17 ಮಂದಿ ಪೊಲೀಸರು, 2004ರಲ್ಲಿ ಗುವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಿವಾದಲ್ಲಿ 29 ಮಂದಿ ಪೊಲೀಸರು ಹಾಗೂ 2007ರಲ್ಲಿ ಜೆರೈಕೆಲಾದಲ್ಲಿ 11 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಮೃತರಾಗಿದ್ದರು.

 2009: ನೀವು ಗಣಿತದಲ್ಲಿ ಹೆಚ್ಚು ಅಂಕ ಗಳಿಸ ಬಯಸಿರುವ ವಿದ್ಯಾರ್ಥಿಗಳೇ? ಹಾಗಿದ್ದರೆ ನಿಮಗೊಂದು ಕಿವಿಮಾತು ಇಲ್ಲಿದೆ: ಅದೆಂದರೆ 'ನೀವು ನಿರಾತಂಕವಾಗಿ ನಿದ್ರೆ ಮಾಡಿ'! ಇದು ಯಾರೋ ಕುಂಭಕರ್ಣನ ವಂಶಸ್ಥರು ನೀಡಿರುವ ಪುಕ್ಕಟೆ ಸಲಹೆಯಲ್ಲ; ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯ ಹಲವರ ಪಾಲಿಗೆ 'ಕಬ್ಬಿಣದ ಕಡಲೆ' ಆಗಿರುವ ಗಣಿತದಲ್ಲಿ ಹೆಚ್ಚು ಅಂಕ ಗಳಿಸುವವರಿಗೂ ಉತ್ತಮ ನಿದ್ರೆಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ನಡೆಸಿದ ಸಂಶೋಧನೆ ಬಹಿರಂಗಪಡಿಸಿದ ಸತ್ಯ. ಅದರ ಪ್ರಕಾರ ಗಣಿತದಲ್ಲಿ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ನಿದ್ರಾ ಗುಣಮಟ್ಟ ಅತ್ಯುತ್ತಮವಾಗಿದೆ. ಯಾರು ನಿದ್ರೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಾ ಬರುವರೋ ಗಣಿತದ ಬಗೆಗಿನ ಅವರ ಸಾಮರ್ಥ್ಯವೂ ಹೆಚ್ಚುತ್ತಾ ಬರುತ್ತದೆ. 'ನಿದ್ರಾಹೀನತೆ ಹದಿವಯಸ್ಕರಿಗೆ ಸಾಕಷ್ಟು ತೊಂದರೆ ತಂದೊಡ್ಡುತ್ತದೆ' ಎಂಬುದು ವಿಶ್ವವಿದ್ಯಾನಿಲಯದ ಜೆನ್ನಿಫರ್ ಕಸಿನ್ಸ್ ಅಭಿಮತ.

  2009: ದಕ್ಷಿಣ ಇರಾಕ್‌ನ ಧಿಖಾರ್ ಪ್ರಾಂತ್ಯದ ನಸಿರಿಯಾಹ್ ಮಾರ್ಕೆಟ್‌ನಲ್ಲಿ ಸಂಭವಿಸಿದ ಕಾರ್‌ಬಾಂಬ್ ಸ್ಫೋಟದಲ್ಲಿ ಮಹಿಳೆ, ಮಕ್ಕಳು ಸೇರಿದಂತೆ 30 ಮಂದಿ ಮೃತರಾಗಿ 70 ಮಂದಿ ಗಾಯಗೊಂಡರು.

2009:  ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ರಾಜ್ಯದ ಮೂವರು ವ್ಯಕ್ತಿಗಳು ಮತ್ತು ಮೂರು ಸಂಸ್ಥೆಗಳನ್ನು ಪರಿಸರ ಇಲಾಖೆಯ 'ರಾಜ್ಯ ಪರಿಸರ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು. ದಾವಣಗೆರೆಯ ಬಾಪೂಜಿ ಎಂಜಿನಿ ಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಮಂಜಪ್ಪ, ಬೆಂಗಳೂರು ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕಿ ಸುಮಂಗಳ ಎಸ್.ಮುಮ್ಮಿ ಗಟ್ಟಿ, ಕೊಡಗು ಜಿಲ್ಲೆಯ ಗೋಣಿಕೊಪ್ಪದ ಉರಗ ತಜ್ಞ 'ಸ್ನೇಕ್' ಸತೀಶ್, ಗದಗದ ಕಪೋತಗಿರಿ ಶ್ರೀನಂದಿವೀರಿ ಮಹಾಸಂಸ್ಥಾನ ಮಠ, ಟಿ.ಕೆ.ಪಟೇಲ್ ಬೆನಕಟ್ಟಿ ಚಾರಿಟೆಬಲ್ ಟ್ರಸ್ಟ್, ಹೊಸನಗರ ತಾಲ್ಲೂಕಿನ ಕರ್ನಾಗಿರಿಯ ಗ್ರಾಮ ಭಾರತಿ ಟ್ರಸ್ಟ್-ಗಳಿಗೆ ರಾಜ್ಯ ಪರಿಸರ ಪ್ರಶಸ್ತಿ ಲಭಿಸಿತು. ರಾಜ್ಯದ ಜೀವ ವೈವಿಧ್ಯ ಸಂರಕ್ಷಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಕಾರ್ಕಳದ ಪ್ರಾಧ್ಯಾಪಕ ಪ್ರಭಾಕರ ಆಚಾರ್, ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟಿನ ಅಧ್ಯಕ್ಷ ಸೋಮನಾಥ ನಾಯಕ್, ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜುಗಳಿಗೆ ಜೀವ ವೈವಿಧ್ಯ ಪ್ರಶಸ್ತಿಯನ್ನು ಘೋಷಿಸಲಾಯಿತು.

2008: ಕಾರ್ಟೋಮ್ ವಿಮಾನ ನಿಲ್ದಾಣದಲ್ಲಿ ಸೂಡಾನಿಗೆ ಸೇರಿದ ವಿಮಾನವೊಂದು ಇಳಿಯುತ್ತಿದ್ದಂತೆ ಬೆಂಕಿಗಾಹುತಿಯಾಗಿ ನೂರಾರು ಪ್ರಯಾಣಿಕರು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ  ಸಂಭವಿಸಿತು. ವಿಮಾನ ಇಳಿಯುತ್ತಿದ್ದ ಸಂದರ್ಭದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಬೀಸುತ್ತಿತ್ತು. ಈ  ವಾತಾವರಣದಲ್ಲಿ ಇಳಿಯುತ್ತಿದ್ದಾಗ ವಿಮಾನದ ಎಂಜಿನ್ನಿಗೆ ಬೆಂಕಿ ತಗುಲಿತು. ಈ ನತದೃಷ್ಟ ವಿಮಾನದಲ್ಲಿ 203 ಪ್ರಯಾಣಿಕರಿದ್ದರು.

2007: ಇಂಗ್ಲೆಂಡಿನ ಶೆಫಿಲ್ಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜೇಶ ಮೆಹ್ತಾ ನಿರ್ಮಾಣದ `ರಂಗ ದೆ ಬಸಂತಿ' ಉತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 11 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ರಾಣಿ ಮುಖರ್ಜಿ ಅತ್ಯುತ್ತಮ ನಟಿ (ಕಭಿ ಅಲ್ವಿದಾ ನಾ ಕೆಹನಾ), ಹೃತಿಕ್ ರೋಷನ್ ಅತ್ಯುತ್ತಮ ನಟ (ಕೃಷ್), ರಾಜಕುಮಾರ್ ಹೀರಾನಿ ಶ್ರೇಷ್ಠ ನಿರ್ದೇಶಕ ( ಲಗೇ ರಹೋ ಮುನ್ನಾ ಭಾಯಿ) ಪ್ರಶಸ್ತಿ ಗಳಿಸಿದರು.

2007: ಆಪ್ಘಾನಿಸ್ಥಾನದ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರಗಾಮಿಗಳು ಕಾಬೂಲಿನಲ್ಲಿ ರಾಕೆಟ್ ದಾಳಿ ನಡೆಸಿದರು. ಆದರೆ ಕರ್ಜೈ ಅವರು ಅಪಾಯದಿಂದ ಪಾರಾದರು.

2007: ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸಿದ್ದಕ್ಕಾಗಿ ಖ್ಯಾತ ಪಾಪ್ ಗಾಯಕ ಜಾರ್ಜ್ ಮೈಕೆಲ್ ಮತ್ತು ಅಮೆರಿಕದ ರಿಯಾಲಿಟಿ ಶೋ ತಾರೆ ಪ್ಯಾರಿಸ್ ಹಿಲ್ಟನ್ ಸೆರೆವಾಸದ ಶಿಕ್ಷೆಗೆ ಗುರಿಯಾದರು. ಮೈಕೆಲ್ ಗೆ ಲಂಡನ್ನಿನ ಬ್ರೆಂಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 100 ತಾಸು ಸಮಾಜ ಸೇವೆ ಕೈಗೊಳ್ಳುವಂತೆ ವಿಶೇಷ ಶಿಕ್ಷೆ ವಿಧಿಸಿತು. ಎರಡು ವರ್ಷಗಳ ಕಾಲ ವಾಹನ ಓಡಿಸದಂತೆ ಅವರ ಮೇಲೆ ನಿಷೇಧ ವಿಧಿಸಿತು. ಮದ್ಯಪಾನ ಮಾಡಿ ವಾಹನ ಓಡಿಸಿದ ಪ್ರಕರಣದ ಸಂಬಂಧ ಗೃಹ ಬಂಧನದಲ್ಲಿದ್ದ ಪ್ಯಾರಿಸ್ ಹಿಲ್ಟನಳನ್ನು (26) ನ್ಯಾಯಾಲಯದ ಆದೇಶದ ಮೇರೆಗೆ ಲಾಸ್ ಏಂಜೆಲಿಸ್ ನಲ್ಲಿ ಸೆರೆಮನೆಗೆ ಕಳುಹಿಸಲಾಯಿತು.

2007: ಕಕ್ಷೆಗೆ ಏರಿದ ಅತಿ ಹೆಚ್ಚು ಭಾರದ ಗಗನ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟ್ಲಾಂಟಿಸ್ ಗಗನನೌಕೆಯು ಬಾಹ್ಯಾಕಾಶದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿತು.

2007: ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಪಾದರು ಕುಂದಾಪುರದ ಖಾರ್ವಿಕೇರಿ ಹೊಳೆಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ವಿವಿಧ ಭಂಗಿಗಳಲ್ಲಿ ಈಜುವ ಮೂಲಕ ದಾಖಲೆ ನಿರ್ಮಿಸಿದರು. ಗಂಗೊಳ್ಳಿ ಸಮುದ್ರ ಕಿನಾರೆಯಿಂದ ಕುಂದಾಪುರ ಸಂಗಮ್ ಪರಿಸರದ ಖಾರ್ವಿಕೇರಿ ಹೊಳೆಯವರೆಗೆ ಸುಮಾರು 25 ಕಿ.ಮೀ. ದೂರವನ್ನು ಕೈಕಾಲುಗಳಿಗೆ ಸಂಕೋಲೆ ತೊಟ್ಟು ಈಜಿ ಶಹಬ್ಬಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡಿನಲ್ಲಿ ದಾಖಲಾದ ಖಾರ್ವಿಕೇರಿಯ ಬಾಲಕ ಮಾಸ್ಟರ್ ಹರ್ಷಿತ್ ಜೊತೆ ಸ್ವಾಮೀಜಿ ಈ ಸಾಹಸ ಮಾಡಿದರು.

 2006: ಹಳೆಯ ಪಠ್ಯಪುಸ್ತಕಗಳಲ್ಲಿದ್ದ ಪ್ರಾಚೀನ ಭಾರತದ ಗೋಮಾಂಸ ಭಕ್ಷಣೆ ಹವ್ಯಾಸಗಳಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯು (ಎನ್ಸಿಇಆರ್ಟಿ) ಹೊಸದಾಗಿ ಪ್ರಕಟಿಸಿರುವ ಪಠ್ಯಪುಸ್ತಕಗಳಿಂದ ಕೈಬಿಟ್ಟಿತು. 6 ಮತ್ತು 11ನೇ ತರಗತಿಗಳ ಇತಿಹಾಸ ಪಠ್ಯಗಳಲ್ಲಿ ಈ ಉಲ್ಲೇಖಗಳಿದ್ದವು.

2006: ತಮ್ಮ ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕಾಗಿ ನೈಸ್ ಕಂಪೆನಿ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಬೆಂಗಳೂರಿನ ಕನಕಪುರ- ಕೆಂಗೇರಿ ಮಾರ್ಗದ ಹೆಮ್ಮಿಗೆಪುರದ ಬಳಿ ರಸ್ತೆ ಅಗೆದು ಬಿಎಂಐಸಿ ಯೋಜನೆ ಕಾಮಗಾರಿಯನ್ನು ನಿಲ್ಲಿಸಿದರು.

1961: ಕಲಾವಿದ ಡಿ.ಎಸ್. ಚೌಗಲೆ ಜನನ.

1961: ಕಲಾವಿದೆ ಮಂಜುಳಾ ಗುರುರಾಜ್ ಜನನ.

1956: ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಜನ್ಮದಿನ. 1980ರಲ್ಲಿ ಇವರು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದುಕೊಂಡ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1955: ಕಲಾವಿದ ಫಕೀರೇಶ ಕಣವಿ ಜನನ.

1948: ಸಾಹಿತಿ ದೇವನೂರು ಮಹಾದೇವ ಜನನ.

1944: ನಾಟ್ಸಿಗಳು ಫ್ರಾನ್ಸಿನ ಒರಾಡೌರ್-ಸುರ್-ಗ್ಲೇನ್ ಎಂಬ ಗ್ರಾಮವನ್ನು ಧ್ವಂಸ ಮಾಡಿದರು. ಲಿಮೋಜಿಸ್ ಗೆ ಸಮೀಪದ ಈ ಗ್ರಾಮದ ಎಲ್ಲ 652 ಜನರನ್ನು ಕೊಠಡಿಯೊಂದರ ಒಳಗೆ ಕೂಡಿಹಾಕಿ ಬೆಂಕಿ ಹಚ್ಚಲಾಯಿತು. ಬದುಕಿ ಉಳಿದವರನ್ನು ಮೆಷಿನ್ ಗನ್ನಿನಿಂದ ಗುಂಡು ಹಾರಿಸಿ ಕೊಲ್ಲಲಾಯಿತು..

1942: ತಮ್ಮ ನಾಯಕ ರಿನ್ಹಾರ್ಡ್ ಹೀಡ್ರಿಚ್ ಹತ್ಯೆಯ ಸೇಡು ತೀರಿಸಲು ನಾಟ್ಸಿಗಳು ಜೆಕಾಸ್ಲಾವಕಿಯಾದ ಲಿಡೀಸ್ ಗ್ರಾಮವನ್ನು ಧ್ವಂಸ ಮಾಡಿದರು. ಜನರ ಕಗ್ಗೊಲೆಗೈದು ನಂತರ ಗ್ರಾಮಕ್ಕೆ ಬೆಂಕಿ ಹಚ್ಚಿ ಅಳಿದು ಉಳಿದುದರ ನಾಶಕ್ಕಾಗಿ ಡೈನಮೈಟ್ ಇಡಲಾಯಿತು. 1947ರಲ್ಲಿ ಇದರ ಸಮೀಪ ಹೊಸ ಗ್ರಾಮ ನಿರ್ಮಿಸಿ ಮೂಲ ಗ್ರಾಮದ ನೆನಪಿಗಾಗಿ ಒಂದು ಮ್ಯೂಸಿಯಂ, ಸ್ಮಾರಕ ಮತ್ತು ಗುಲಾಬಿ ತೋಟವನ್ನು ನಿರ್ಮಿಸಲಾಯಿತು.

1938: ಭಾರತೀಯ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಜನ್ಮದಿನ.

1937: ಕವಿ, ನಾಟಕಕಾರ, ವಾಗ್ಮಿ `ಜೀವಿ' ಎಂದೇ ಖ್ಯಾತರಾಗಿದ್ದ ಗುರುನಾಥ ವಿಠ್ಠಲ ರಾವ್ ಕುಲಕರ್ಣಿ ಅವರು ವಿಠ್ಠಲರಾವ್ ರಾಮಚಂದ್ರರಾವ್ ಕುಲಕರ್ಣಿ- ರುಕ್ಮಿಣಿ ಬಾಯಿ ದಂಪತಿಯ ಪುತ್ರನಾಗಿ ವಿಜಾಪುರದ ಡೊಮ್ನಾಳದಲ್ಲಿ ಜನಿಸಿದರು.

1937: ಸಾಹಿತಿ ವೇಣುಗೋಪಾಲ ಸೊರಬ ಜನನ.

1922: ಗಾಯಕ, ಸಂಗೀತಜ್ಞ, ವಾಗ್ಗೇಯಕಾರ ಎಂ.ಆರ್. ಶಂಕರಮೂರ್ತಿ ಅವರು ರಾಮಕೃಷ್ಣಯ್ಯ- ನಂಜಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಮುದಲಾಪುರದಲ್ಲಿ ಜನಿಸಿದರು.

1920: ಸಾಹಿತಿ ಎನ್. ಪ್ರಹ್ಲಾದರಾವ್ ಜನನ.

1832: ಸರ್ ಎಡ್ವಿನ್ ಅರ್ನಾಲ್ಡ್ ಜನ್ಮದಿನ. ಪೂನಾದ (ಈಗಿನ ಪುಣೆ) ಬ್ರಿಟಿಷ್ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಇವರು  ಕವಿ ಹಾಗೂ ವಿದ್ವಾಂಸರು. ಗೌತಮ ಬುದ್ಧನ ಬದುಕು ಹಾಗೂ ಬೋಧನೆಗಳನ್ನು ವಿವರಿಸುವ `ದಿ ಲೈಟ್ ಆಫ್ ಏಷ್ಯ' ಕೃತಿ ಇವರ ಪ್ರಮುಖ ಗ್ರಂಥ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement