'ಸಯಾಮಿ ಅವಳಿಗಳು'
ಮತ್ತು ಪರಮಾಧಿಕಾರ..!
ತಹಶೀಲ್ದಾರರನ್ನು 'ತಾಲೂಕು ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಎಂತಹುದು? ಜಿಲ್ಲಾಧಿಕಾರಿಗಳಿಗೆ 'ಜಿಲ್ಲಾ ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಪರಮಾಧಿಕಾರ ಅಲ್ಲವೇ?
-ನೆತ್ರಕೆರೆ ಉದಯಶಂಕರ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕನ್ ಜಾಯಿನ್ಡ್ ಟ್ವಿನ್ಸ್ (Conjoined Twins) ಅಂದರೆ ಸಯಾಮಿ ಅವಳಿಗಳು ಇದ್ದಂತೆ. ಅವರನ್ನು ಪರಸ್ಪರ ಬೇರ್ಪಡಿಸುವುದು ಬಹಳ ಕಷ್ಟ..!
ಕೆಲವೇ ದಿನಗಳ ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಭೇಟಿ ಮಾಡಿದ್ದಾಗ ಅವರ ಬಾಯಿಯಿಂದ ಹೊರಬಂದಿದ್ದ ಮಾತುಗಳಿವು.
ಮೊನ್ನೆ 23 ಜೂನ್ 2010ರ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೆಗ್ಡೆಯವರು ಈ ಮಾತನ್ನು ಸ್ವಲ್ಪ ಬದಲಾಯಿಸಿ 'ರಾಜಕಾರಣಿಗಳೆಲ್ಲ ಒಂದೇ ಪಾಠಶಾಲೆಯ ಮಕ್ಕಳು' ಎಂದು ಹೇಳಿದರು.
ಲೋಕಾಯುಕ್ತರಿಗೆ ಪರಮಾಧಿಕಾರ ನೀಡುತ್ತೇವೆ ಎಂಬುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ರಾಜ್ಯದ ಬಿಜೆಪಿ ಧುರೀಣರು ಈಗ ಹಠಾತ್ತನೆ ರಾಗ ಬದಲಾಯಿಸಿದ್ದು ನೋಡುವಾಗ ಲೋಕಾಯುಕ್ತರ ಮಾತುಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಹಾದು ಹೋಗುತ್ತದೆ.
ಮುಖ್ಯಮಂತ್ರಿಗಳು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಕರ್ತರ ಸಂವಾದದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾಗ ಅಪ್ಪಿತಪ್ಪಿಯೂ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡುವ ಬಗ್ಗೆ ತುಟಿ ಬಿಚ್ಚಲಿಲ್ಲ.
ಅದೇ ಹೊತ್ತಿನಲ್ಲಿ ಕೆಲವು ಪತ್ರಕರ್ತ ಮಿತ್ರರ ಜೊತೆಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ 'ಪರಮಾಧಿಕಾರ ಅಂದರೆ ಏನು? ಸ್ವತಃ ನೋಟಿಸ್ ನೀಡಿ, ವಿಚಾರಣೆ ನಡೆಸಿ, ಸ್ವತಃ ತೀರ್ಪು ನೀಡುವ ಅಧಿಕಾರವೇ? ಇಂತಹ ಅಧಿಕಾರದಿಂದ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ?' ಎಂದು ಪ್ರಶ್ನಿಸಿದ್ದರು.
ಈಗ ಸಚಿವ ರಾಮಚಂದ್ರ ಗೌಡ ಅವರು ಇದೇ ಧಾಟಿಯಲ್ಲಿ ಮಾತನಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಒಟ್ಟಾರೆಯಾಗಿ ಪರಮಾಧಿಕಾರ ನೀಡುವುದು ಇವರೆಲ್ಲರಿಗೆ ಈಗ ಅಲರ್ಜಿಯ ವಿಚಾರ..!
ಬಿಜೆಪಿಯ ಕಥೆ ಹೀಗಾದರೆ ಇತರ ಪಕ್ಷಗಳು ಸಾಚಾಗಳೇನೂ ಅಲ್ಲ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಲೋಕಾಯುಕ್ತರಿಗೆ ಒಮ್ಮೆ ಇಂತಹ ಅಧಿಕಾರ ಕೊಟ್ಟಿದ್ದರು. ಆದರೆ ನಂತರ ಬಂದ ಸರ್ಕಾರ ಅದನ್ನು ಹಿಂತೆಗೆದುಕೊಂಡಿತು. ಆ ಬಳಿಕ ರಾಜ್ಯವನ್ನು ಎರಡು ದಶಕಗಳ ಕಾಲ ಆಳಿದ ಕಾಂಗ್ರೆಸ್ಸು, ಜನತಾದಳ ಸರ್ಕಾರಗಳಾದರೂ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಬಹುದಾಗಿತ್ತಲ್ಲ?
ಅಧಿಕಾರದಲ್ಲಿ ಇದ್ದಾಗ ತೆಪ್ಪಗೆ ಇದ್ದು, ವಿರೋಧ ಪಕ್ಷಗಳ ಸ್ಥಾನಕ್ಕೆ ಬಂದು ಕೂತೊಡನೆ ಎಲ್ಲ ರಾಜಕೀಯ ಪಕ್ಷಗಳಿಗೂ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂಬುದು ನೆನಪಾಗುತ್ತದೆ. ಮತ್ತೆ ಅಧಿಕಾರಕ್ಕೆ ಬಂದೊಡನೆ ಈ ವಿಚಾರದಲ್ಲಿ 'ಜಾಣ ಮರೆವು' ಆವರಿಸಿ ಬಿಡುತ್ತದೆ.
ಈಗ ಅಧಿಕಾರ ಪೀಠದಲ್ಲಿ ಕುಳಿತಿರುವ ಬಿಜೆಪಿಗೆ ಆಗಿರುವುದೂ ಇದೇ. ಏಕೆ ಎಂದರೆ....
ಅಧಿಕಾರಿಗಳನ್ನು ಹಾಗೂ ಸರ್ಕಾರಿ ಯಂತ್ರದ ಸಿಬ್ಬಂದಿಯನ್ನು ಬಿಟ್ಟು ಇವರಾರಿಗೂ ಆಡಳಿತ ನಡೆಸಲು ಬರುವುದಿಲ್ಲ. ಹಾಗಾಗಿ ಸದಾಕಾಲ ಅಧಿಕಾರಿಗಳು, ಆಡಳಿತ ಯಂತ್ರದ ಸಿಬ್ಬಂದಿಯೊಂದಿಗೆ ರಾಜಕಾರಣಿಗಳದ್ದು 'ನೀ ನನಗಿದ್ದರೆ ನಾ ನಿನಗೆ' ಎಂಬ ಹಾಡು..!
ಅದಕ್ಕಾಗಿಯೇ ಹೆಗ್ಡೆಯವರು ಹೇಳಿದ್ದು 'ಇವರು ಕನ್ ಜಾಯಿನ್ಡ್ ಟ್ವಿನ್ಸ್' ಅಂತ.
ಪ್ರಜಾಪ್ರಭುತ್ವದಲ್ಲಿ ಆಡಳಿತಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಅಂಗಗಳು ಇರುವುದು ಸುಗಮ ಆಡಳಿತಕ್ಕಾಗಿ ಅಷ್ಟೇ ಅಲ್ಲ, ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಅವರ ಜುಟ್ಟು ಹಿಡಿಯುವಂತಿರಬೇಕು ಎಂಬ ಕಾರಣಕ್ಕಾಗಿ. ಆದರೆ ಈ ಮೂಲಭೂತ ತತ್ವ ನಮಗೆ ಮರೆತೇ ಹೋಗಿದೆ ಎಂದರೆ ತಪ್ಪಿಲ್ಲವೇನೋ!
'ಪರಮಾಧಿಕಾರ'ದ ಪ್ರಶ್ನೆ ಬಂದಾಗ ರಾಜಕಾರಣಿಗಳು ಲೋಕಾಯುಕ್ತರಿಗೆ ಅದನ್ನು ಕೊಡಲು ಏಕೆ ಹಿಂದೇಟು ಹೊಡೆಯುತ್ತಾರೆ ಗೊತ್ತೆ? ಬೇರೆ ಯಾವುದಕ್ಕೂ ಅಲ್ಲ, ಲೋಕಾಯುಕ್ತರ ಚಾಟಿ ಬೀಸುವುದು ಅಧಿಕಾರಿಗಳ, ರಾಜಕಾರಣಿಗಳ ದುರಾಡಳಿತ, ಭ್ರಷ್ಟತೆಯ ವಿರುದ್ಧ ಎಂಬ ಕಾರಣಕ್ಕಾಗಿ.
ಅಂದರೆ ಲೋಕಾಯುಕ್ತರಿಗೆ ಪರಮಾಧಿಕಾರ ಇದ್ದರೆ ದುರಾಡಳಿತ ನಡೆಸುವ ಆಡಳಿತಾಂಗದ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಮಾತ್ರವೇ ಅಲ್ಲ ಅವರಿಗೆ ರಕ್ಷಕರಾಗಿ ನಿಲ್ಲುವ ರಾಜಕಾರಣಿಗಳ ಆಟಗಳಿಗೂ 'ಅಂಕೆ' ಬೀಳುತ್ತದೆ.
ಲೋಕಾಯುಕ್ತರ ನೇರ ಪ್ರಹಾರ ಭ್ರಷ್ಟ ಅಧಿಕಾರಿ - ಸಿಬ್ಬಂದಿ ಮತ್ತು ರಾಜಕಾರಣಿಗಳ ಮೇಲೆಯೇ ಹೊರತು ಸಾರ್ವಜನಿಕರ ಮೇಲೆ ಅಲ್ಲ. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಲೋಕಾಯುಕ್ತ ವ್ಯವಸ್ಥೆ ಮಾಡಿಕೊಡುತ್ತದೆ.
ಗಮನಿಸಬೇಕಾದ ಮಹತ್ವದ ವಿಷಯ ಏನೆಂದರೆ ಒಬ್ಬರಿಗೇ ನೋಟಿಸ್ ನೀಡುವ, ವಿಚಾರಣೆ ನಡೆಸುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಕೊಟ್ಟು ಬಿಟ್ಟರೆ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಈ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಬರುವುದು ಅವರ ವಿರುದ್ಧ ಚಾಟಿ ಬೀಡುವ ಲೋಕಾಯುಕ್ತರಿಗೆ ಈ 'ಅಧಿಕಾರ' ನೀಡಬೇಕು ಎಂಬ ಆಗ್ರಹ ಬಂದಾಗ ಮಾತ್ರ.
ಆದರೆ ಇದೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ 'ಇಂತಹ ಪರಮ ಅಧಿಕಾರವನ್ನು' ಅಧಿಕಾರಿಗಳೇ ಹೊಂದಿರುವ ನಿದರ್ಶನ ಇಲ್ಲವೇ?
ತಹಶೀಲ್ದಾರರನ್ನು 'ತಾಲೂಕು ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಎಂತಹುದು? ಜಿಲ್ಲಾಧಿಕಾರಿಗಳಿಗೆ 'ಜಿಲ್ಲಾ ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಪರಮಾಧಿಕಾರ ಅಲ್ಲವೇ? ಇದೇ ರೀತಿಯಾಗಿ ವಿಶೇಷ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತಿತರ ವರ್ಗದ ಅಧಿಕಾರಿಗಳಿಗೂ 'ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ನೋಟಿಸ್ ನೀಡುವ, ವಿಚಾರಣೆ ನಡೆಸುವ ಮತ್ತು ತೀರ್ಪು ನೀಡುವ ಅಧಿಕಾರವನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕೊಟ್ಟಿಲ್ಲವೇ?
ತಕರಾರುಗಳು ಎದ್ದಾಗ ಅವುಗಳನ್ನು ಇತ್ಯರ್ಥ ಪಡಿಸಲು 'ನ್ಯಾಯಾಂಗ' ಎಂಬ ಪ್ರತ್ಯೇಕ ವ್ಯವಸ್ಥೆಯೇ ಇದ್ದರೂ, ಆಡಳಿತಾಂಗದ ಈ ಕೆಲವು ಅಧಿಕಾರಿಗಳಿಗೆ 'ನ್ಯಾಯಾಂಗದ' ಅಧಿಕಾರವನ್ನೂ ಕೊಟ್ಟಿರುವುದು, ಅವರಿಗೆ ತನಿಖೆ - ವಿಚಾರಣೆ ನಡೆಸುವ ಮತ್ತು ತೀರ್ಪು ನೀಡುವ 'ಪರಮಾಧಿಕಾರ' ಕೊಟ್ಟದ್ದನ್ನು ಸೂಚಿಸುವುದಿಲ್ಲವೇ?
ಉದಾಹರಣೆಗೆ: ಯಾರಾದರೂ ತಾನು ಖರೀದಿಸಿದ ಕೃಷಿಭೂಮಿಯನ್ನು ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಸುತ್ತಾರೆ ಎಂದಿಟ್ಟುಕೊಳ್ಳಿ. ಅಂತಹ ಸಂದರ್ಭದಲ್ಲಿ ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ ಎಂಬುದಾಗಿ ನೋಟಿಸ್ ನೀಡಿ, ವಿಚಾರಣೆ ನಡೆಸಿ ಆ ತಪ್ಪಿಗಾಗಿ ಆಸ್ತಿಯನ್ನೇ ಮುಟ್ಟುಗೋಲು ಹಾಕಿರುವುದಾಗಿ ತೀರ್ಫು ನೀಡುವ ಅಧಿಕಾರ ಅಸಿಸ್ಟೆಂಟ್ ಕಮೀಷನರ್, ಜಿಲ್ಲಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ... ಎಂಬ ಅಧಿಕಾರಿ ವರ್ಗಕ್ಕೆ ಉಂಟಲ್ಲ?
ಇದಕ್ಕೆ ಏನಂತ ಹೆಸರು? ಪರಮಾಧಿಕಾರ ಅಲ್ಲವೇ?
ಇವರೆಲ್ಲರೂ ತಮ್ಮ ಪರಮಾಧಿಕಾರ ಚಲಾಯಿಸುವುದು ಅಧಿಕಾರಿಗಳು, ಆಡಳಿತ ಯಂತ್ರದ ಸಿಬ್ಬಂದಿಯ ಮೇಲೆ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕರ ಮೇಲೆ.
ಅಂದರೆ ಸಾಮಾನ್ಯ ನಾಗರಿಕರ ಮೇಲೆ ಈ ರೀತಿ ಅಧಿಕಾರ ಚಲಾಯಿಸುವ ಪರಮಾಧಿಕಾರವನ್ನು ಆಡಳಿತ ವರ್ಗದ ಒಂದು ವರ್ಗಕ್ಕೆ ನೀಡಿರುವುದು ನಮ್ಮ ರಾಜಕಾರಣಿಗಳಿಗೆ 'ಸಹಜ ನ್ಯಾಯ'ಕ್ಕೆ ವಿರುದ್ಧ ಎಂದು ಅನ್ನಿಸುವುದಿಲ್ಲ. ಆದರೆ ಇದೇ ಆಡಳಿತ ವರ್ಗದ ಅಧಿಕಾರಿಗಳು ಅಥವಾ ಸಿಬ್ಬಂದಿಯ ದುರಾಡಳಿತ, ಕರ್ತವ್ಯ ಲೋಪ, ಭ್ರಷ್ಟಾಚಾರ ವಿರುದ್ಧ ತನಿಖೆ- ವಿಚಾರಣೆ ನಡೆಸುವ ಲೋಕಾಯುಕ್ತರು ಅವರನ್ನು ದಂಡಿಸುವ 'ಪರಮ' ಅಧಿಕಾರ ಬೇಕು ಎಂದು ಕೇಳಿದಾಗ ಮಾತ್ರ ಅದು 'ಸಹಜ ನ್ಯಾಯ'ಕ್ಕೆ ವಿರುದ್ಧ ಆಗಿ ಬಿಡುತ್ತದೆ..!
ಅಧಿಕಾರ ಎಂಬ ಆಡಳಿತದ ಪರಮ 'ದಂಡಾಸ್ತ್ರ'ವನ್ನು ಹೊಂದಿರುವ ರಾಜಕಾರಣಿ, ಅಧಿಕಾರಿಗಳಿಗೆ ಅದೇ ಅಸ್ತ್ರವನ್ನು ತಮ್ಮ ಜುಟ್ಟು ಹಿಡಿದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಯತ್ನಿಸುವವರಿಗೆ ಕೊಡಲು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ರಾಜಕಾರಣಿಗಳ ಬಾಯಿಗಳಿಂದ ಹೊರಬೀಳುತ್ತಿರುವ ಈ 'ಮುತ್ತುಗಳೇ' ತೋರಿಸಿಕೊಡುತ್ತಿವೆ.
ಹೌದು.. ತಮ್ಮ ಸಯಾಮಿ ಅವಳಿಗಳನ್ನು ರಕ್ಷಿಸಲಾಗದಿದ್ದರೆ ರಾಜಕಾರಣಿಗಳು ಬದುಕಿ ಬಾಳುವುದಾದರೂ ಹೇಗೆ?
ಹೀಗಾಗಿಯೇ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರಂತಹ ಪ್ರಾಮಾಣಿಕರಿಗೆ 'ಪರಮಾಧಿಕಾರ' ಕೊಡಲು ಅಧಿಕಾರಸ್ಥ ರಾಜಕಾರಣಿಗಳಿಗೆ 'ಕಷ್ಟ' ಆಗುತ್ತಿರುವುದು.
ಭ್ರಷ್ಟರನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಿದ ಬಳಿಕ ಇಂತಹ ಬೇರ್ಪಡಿಸಲಾಗದ 'ಸಯಾಮಿ' ಅವಳಿಗಳ ಮುಂದೆ ವರದಿ ಸಲ್ಲಿಸಿ ಏನೂ ಮಾಡಲಾಗದೆ ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಇನ್ನೂ ಮುಂದುವರೆಯುವುದು ಬೇಡವೆಂದೇ ಹೆಗ್ಡೆಯವರು 'ಅಧಿಕಾರವಿಲ್ಲದ' ಹುದ್ದೆಗೆ ರಾಜೀನಾಮೆ ಕೊಟ್ಟಿರುವುದು.
ಲೋಕಾಯುಕ್ತರ ಪ್ರಕರಣ ರಾಜಕಾರಣಿ- ಅಧಿಕಾರಿ ಸಿಬ್ಬಂದಿಯ ಕಣ್ತೆರೆಸಿದರೆ ಲಾಭವಾಗುವುದು ಅವರ ಬಳಿ ದೂರು ನೀಡಿದ ಒಂದಷ್ಟು ಕಕ್ಷಿದಾರರಿಗೆ ಅಷ್ಟೇ ಅಲ್ಲ, ಒಂದು ಪ್ರಾಮಾಣಿಕ, ಪಾರದರ್ಶಕ ವ್ಯವಸ್ಥೆಗೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಈಗ ಎಂದಿಗಿಂತ ಹೆಚ್ಚು ಇದೆ..!
No comments:
Post a Comment