ಬೆಂಗಳೂರು: ರಾಜ್ಯಪಾಲರ ಸಲಹೆ ಮೇರೆಗೆ ಈದಿನ (14 ಅಕ್ಟೋಬರ್ 2010) ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ನಡೆದ ಎರಡನೇ ವಿಶ್ವಾಸ ಮತಯಾಚನೆಯಲ್ಲಿ 106 ಮತಗಳನ್ನು ಗಳಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಬಹುಮತವನ್ನು ಸಾಬೀತು ಪಡಿಸಿತು.
ಅಕ್ಟೋಬರ್ 11ರಂದು ನಡೆದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ತೀವ್ರ ಗೊಂದಲ, ಪ್ರತಿಭಟನೆ ಮಧ್ಯೆ ಧ್ವನಿ ಮತದ ಮೂಲಕ ಯಡಿಯೂರಪ್ಪ ಅವರು ಗೆದ್ದಿರುವುದಾಗಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಪ್ರಕಟಿಸಿದ್ದರು. ಆದರೆ ಈದಿನ ಸಂಪೂರ್ಣ ಶಾಂತಿಯುತ ವಾತಾವರಣದಲ್ಲಿ ಕಲಾಪ ನಡೆದು ವಿಶ್ವಾಸಮತ ಪರವಾಗಿ 106 ಮತಗಳು ಬಂದರೆ, ವಿರುದ್ದವಾಗಿ 100 ಮತಗಳು ಬಂದವು.
ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಈದಿನದ ವಿಶ್ವಾತ ಮತ ಯಾಚನೆಯನ್ನು ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಮುಂದೂಡಬೇಕು ಎಂದು ಮನವಿ ಮಾಡಿದರು.
ಆದರೆ ವಿಧಾನ ಸಭಾಧ್ಯಕ್ಷರು ವಿರೋಧ ಪಕ್ಷ ನಾಯಕರ ಮನವಿಯನ್ನು ತಳ್ಳಿ ಹಾಕಿದರು. ವಿಧಾನಸಭಾಧ್ಯಕ್ಷರ ಸೂಚನೆಯ ಮೇರೆಗೆ ಒಂದು ವಾಕ್ಯದ ವಿಶ್ವಾಸ ಮತ ಯಾಚನೆಯ ನಿರ್ಣಯವನ್ನು ಮುಖ್ಯಮಂತ್ರಿ ಮಂಡಿಸಿದರು.
ವಿಧಾನಸಭಾಧ್ಯಕ್ಷರು ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದಾಗ ವಿರೋಧಿ ಸದಸ್ಯರು ಮತವಿಭಜನೆಗೆ ಆಗ್ರಹ ಮಾಡಿದ್ದನ್ನು ಅನುಸರಿಸಿ ನಿರ್ಣಯವನ್ನು ಮತ ವಿಭಜನೆಗೆ ಹಾಕಲಾಯಿತು. ನಿರ್ಣಯದ ಪರ ಹಾಗೂ ವಿರುದ್ಧ ಮತ ಚಲಾಯಿಸಿದವರ ತಲೆ ಎಣಿಕೆಯ ಬಳಿಕ ಸಭಾಧ್ಯಕ್ಷರು ಫಲಿತಾಂಶವನ್ನು ಪ್ರಕಟಿಸಿ, ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಬಿಜೆಪಿಯಿಂದ ಅನರ್ಹಗೊಂಡಿದ್ದ 11 ಮಂದಿ ಹಾಗೂ ಐವರು ಪಕ್ಷೇತರರು ಕಲಾಪದಲ್ಲಿ ಪಾಲ್ಗೊಂಡಿರಲಿಲ್ಲ. ಜನತಾದಳದ ಅಶ್ವಥ್ ಹಾಗೂ ಬಿಜೆಪಿಯ ಮಾನಪ್ಪ ವಜ್ಜಲ್ ಗೈರು ಹಾಜರಾಗಿದ್ದರು.
1 comment:
ಅಭಿನಂದನೆಗಳು. ಇನ್ನಾದರೂ ಜನಹಿತ ಸಲುವಾಗಿ ಕೆಲಸ ಮಾಡುತ್ತೀರಾ?- ಪ್ರಜ್ಞಾ
Post a Comment