Friday, July 31, 2015

ಇಂದಿನ ಇತಿಹಾಸ ಜುಲೈ 31 History Today

ಇಂದಿನ ಇತಿಹಾಸ
ಜುಲೈ 31


2015: ನವದೆಹಲಿ: ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಪ್ರಾಬಲ್ಯದ ಪ್ರದೇಶದಲ್ಲಿ ಜುಲೈ 29ರಂದು ಅಪಹರಿಸಲಾಗಿದ್ದ ನಾಲ್ವರು ಭಾರತೀಯರ ಪೈಕಿ ಇಬ್ಬರು ಕನ್ನಡಿಗರನ್ನು ಈದಿನ 31 ಜುಲೈ 2015ರಂದು ಬಿಡುಗಡೆ ಮಾಡಲಾಯಿತು.  ‘ಲಿಬಿಯಾದಲ್ಲಿ ಅಪಹರಿಸಲಾಗಿದ್ದ ಭಾರತೀಯರ ಪೈಕಿ ಲಕ್ಷ್ಮೀಕಾಂತ್ ಮತ್ತು ವಿಜಯ್ ಕುಮಾರ್ ಅವರ ಬಿಡುಗಡೆ ಮಾಡಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ತಿಳಿಸಲು ಸಂತೋಷವಾಗಿದೆ. ಇನ್ನಿಬ್ಬರ ಬಿಡುಗಡೆಗಾಗಿ ಯತ್ನಿಸುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಸಂಜೆ ಟ್ವೀಟ್ ಮಾಡಿದರು. ಇಬ್ಬರು ಕನ್ನಡಿಗರು ಸೇರಿದಂತೆ 4 ಮಂದಿ ದಕ್ಷಿಣ ಭಾರತೀಯರನ್ನು ಲಿಬಿಯಾದಲ್ಲಿ 29ರಂದು ಅಪಹರಿಸಲಾಗಿತ್ತು. ಉಗ್ರಗಾಮಿಗಳಿಂದ ಅಪಹರಣಗೊಂಡ ಕನ್ನಡಿಗರ ಪೈಕಿ ಲಕ್ಷ್ಮೀಕಾಂತ್ ರಾಯಚೂರಿನವರಾಗಿದ್ದು, ವಿಜಯಕುಮಾರ್ ಬೆಂಗಳೂರಿನವರು ಎಂದು ಹೇಳಲಾಗಿತ್ತು. ಇನ್ನಿಬ್ಬರನ್ನು ಹೈದರಾಬಾದ್​ನ ಬಲರಾಂ ಮತ್ತು ಶ್ರೀಕಾಕುಲಂನ ಗೋಪಾಲಕೃಷ್ಣ ಎಂಬದಾಗಿ ಗುರುತಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದ್ದವು. ಟ್ರಿಪೋಲಿ ಮತ್ತು ಟ್ಯುನಿಸ್​ನಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಇವರನ್ನ್ನು ಅಪಹರಿಸಲಾಗಿತ್ತು. ನಾಲ್ವರ ಪೈಕಿ ಮೂವರು ಲಿಬಿಯಾದ ಸೆರ್ಟೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಒಬ್ಬರು ಅದೇ ವಿಶ್ವವಿದ್ಯಾಲಯದ ಜುಫ್ರಾ ಶಾಖೆಯಲ್ಲಿ ನೌಕರ ಎಂದು ಸರ್ಕಾರ ತಿಳಿಸಿತ್ತು.

2015: ನ್ಯೂಯಾರ್ಕ್: ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್ ರೋಗಿಗಳಿಗೆ ರೊಬೋಟ್ ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತೀಯ ಮೂಲದ ಅಮೆರಿಕನ್ ಸರ್ಜನ್ ಗಿಲ್ ನೇತೃತ್ವದ ತಂಡ ಮಹತ್ವದ ಸಾಧನೆ ಮಾಡಿರುವುದಾಗಿ ಪ್ರಕಟಿಸಿತು. ಲಾಸ್ ಏಂಜೆಲಿಸ್​ನ ಯುಎಸ್​ಸಿ ಇನ್​ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯುಎಸ್​ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿತು.. ಡಾ. ಇಂದೇರ್​ಬಿರ್ ಎಸ್. ಗಿಲ್ ಈ ತಂಡದ ನಾಯಕರು. ಹೃದಯವನ್ನು ಮರು ಸಂರ್ಪಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೇ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದಾಗ ಈ ಸರ್ಜರಿಯೇ ಮದ್ದು, ಬೇರೆ ದಾರಿಯಿಲ್ಲ. ಸಾಮಾನ್ಯವಾಗಿ ‘ಇನ್​ಫೆರಿಯರ್ ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್ಜರಿಯನ್ನು ದೊಡ್ಡ ಗಾಯವನ್ನು ಪ್ರಾಥಮಿಕವಾಗಿಯೇ ಮಾಡಿ ಮಾಡಬೇಕಾಗುತ್ತದೆ. ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಓಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದು ಎಂದು ಯುಎಸ್​ಸಿ ಇನ್​ಸ್ಟಿಟ್ಯೂಟ್​ನ ಡಾ. ಇಂದೇರ್​ಬಿರ್ ಎಸ್. ಗಿಲ್ ವಿವರಿಸುತ್ತಾರೆ. ಕೇವಲ 4ರಿಂದ 10 ರೋಗಿಗಳಿಗೆ ಅಥವಾ ಕಿಡ್ನಿ ಕ್ಯಾನ್ಸರ್ ಸಂದರ್ಭದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಸ್ಯೆಯಾದಾಗ ಸರ್ಜರಿಯೊಂದೇ ದಾರಿ. ಈ ಕ್ಲಿಷ್ಟ ಸರ್ಜರಿಯನ್ನು ಕೇವಲ 7 ಸಣ್ಣ ಗಾಯ ಹಾಗೂ 4 ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹುದೊಡ್ಡ ಸಾಧನೆ ಎಂಬುದು ಡಾ. ಗಿಲ್ ಹೇಳಿಕೆ. ತಂಡವು ಈವರೆಗೆ ಮೂತ್ರನಾಳದ ಕ್ಯಾನ್ಸರ್ ಮತ್ತು 3ನೇ ಹಂತದ ಥ್ರೋಂಬಿ ತಲುಪಿದ 9 ರೋಗಿಗಳಿಗೆ ಈ ‘ರೊಬೋಟ್ ಐವಿಸಿ ಥ್ರೊಂಬೊಕ್ಟೊಮಿ’ ನಡೆಸಿದೆ. ಏಳು ತಿಂಗಳ ಬಳಿಕ ಗಮನಿಸಿದಾಗ ಇವರೆಲ್ಲರೂ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸಲಿಲ್ಲ’ ಎಂದು ಅವರು ನುಡಿದರು. ಬೆನ್ನಹುರಿಯಲ್ಲಿ ಗಡ್ಡೆ ಬೆಳೆದ ಒಬ್ಬ ರೋಗಿಗೆ ಮುಂದಿನ ಸರ್ಜರಿ ನಡೆಸಬೇಕಾಯಿತು ಎಂದು ಅವರು ಹೇಳಿದರು.  ‘ಹೆಪ್ಪುಗಟ್ಟಿದ್ದನ್ನು ತೆಗೆಯುವುದರ ಜೊತೆಗೆ ವ್ಯಾಧಿಪೀಡಿತ ಕಿಡ್ನಿಯನ್ನೂ ತೆಗೆದುಹಾಕಬೇಕಾದ್ದರಿಂದ ಮುಂದಿನ ಸಮಸ್ಯೆಗಳಾಗದಂತೆ ಸರ್ಜನ್ ಮೊದಲು ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆಯಬೇಕು, ಮತ್ತು ರಕ್ತ ಮುಂದಕ್ಕೆ ಪ್ರವಹಿಸದಂತೆ ತಡೆಗಟ್ಟಬೇಕು. ಈ ಎಲ್ಲಾ ಸರ್ಜರಿ ಅಗತ್ಯಗಳನ್ನು ಸಂಪೂರ್ಣವಾಗಿ ರೊಬೋಟ್ ಬಳಸಿ ಯಾವುದೇ ತೆರೆದ ಗಾಯ ಇಲ್ಲದೆಯೇ ಮಾಡಲಾಗಿದೆ’ ಎಂದು ಅವರು ವಿವರಿಸಿದರು. ‘ನಮ್ಮ ಅನುಭವ ಇನ್ನೂ ಪ್ರಾಥಮಿಕವಾದುದಾಗಿದ್ದರೂ, ಭವಿಷ್ಯದಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗಬಲ್ಲುದು ಎಂಬುದು ನಮ್ಮ ನಂಬಿಕೆ’ ಎಂದು ಜರ್ನಲ್ ಆಫ್ ಯುರೋಲಜಿಯಲ್ಲಿ ಪ್ರಕಟಗೊಂಡಿರುವ ಪ್ರಬಂಧದಲ್ಲಿ ಗಿಲ್ ವಿಶ್ವಾಸ ವ್ಯಕ್ತ ಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮತ್ತು ಇತರ 8 ಮಂದಿಯ ವಿರುದ್ಧ ವಿಶೇಷ ನ್ಯಾಯಾಲಯವು  ದೋಷಾರೋಪ ಹೊರಿಸಿತು. ಪ್ರಕರಣದಲ್ಲಿ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತು ಜಾರ್ಖಂಡ್​ನ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ. ಬಸು ಅವರ ವಿರುದ್ಧವೂ ನ್ಯಾಯಾಲಯ ದೋಷಾರೋಪ ಹೊರಿಸಿತು. ರಾಜ್ಯದ ರಾಜ್ಹರಾ ಪಟ್ಟಣದ ವಿನಿ ಐಯರ್ನ್ ಅಂಡ್ ಸ್ಟೀಲ್ ಉದ್ಯೋಗ್ ಲಿಮಿಟೆಡ್ (ವಿಐಎಸ್​ಯುುಎಲ್) ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಮಂಜೂರಾತಿ ಮಾಡಿದ್ದಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಒಟ್ಟು 9 ಜನರ ವಿರುದ್ಧ ಆರೋಪಗಳಿದ್ದವು. ಕಲ್ಲಿದ್ದಲು ಗಣಿ ನಿಕ್ಷೇಪ ಹಂಚಿಕೆ ಮಾಡುವಂತೆ ಕೋಡಾ, ಗುಪ್ತಾ ಮತ್ತಿತರರು ಸಂಚು ಹೂಡಿದ್ದರು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಆಪಾದಿಸಿತ್ತು. ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದಾ ಮತ್ತು ಇತರ 6 ಮಂದಿ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತು.

2008: `ಏಷ್ಯಾದ ನೊಬೆಲ್ ಪ್ರಶಸ್ತಿ' ಎಂದೇ ಬಿಂಬಿತವಾದ ಪ್ರತಿಷ್ಠಿತ `ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಈ ಬಾರಿ ಭಾರತದ `ಲೋಕೋಪಕಾರಿ ವೈದ್ಯ ದಂಪತಿ' ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರ ಮುಡಿಗೇರಿತು. ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರೇಮನ್ ಮ್ಯಾಗ್ಸೇಸೆ' ಪ್ರಶಸ್ತಿ ಪ್ರತಿಷ್ಠಾನವು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ತಿಳಿಸಿತು

2007: ನಟ ಸಂಜಯ್ ದತ್ ಗೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೊನೆಗೂ ಸಾಧ್ಯವಾಗಲಿಲ್ಲ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸಂಜಯ್ ಗೆ, ವಿಶೇಷ ಟಾಡಾ ನ್ಯಾಯಾಲಯ ಈದಿನ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25,000 ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿತು. ಸಂಜಯ್ ದತ್ ಮೇಲಿನ ಆರೋಪ ಹಾಗೂ ವಿಚಾರಣೆಯ ವಿವರ ಇಲ್ಲಿದೆ: ಏಪ್ರಿಲ್ 19, 1993: ಮಾರಿಷಸ್ಸಿನಿಂದ ಆಗಮಿಸಿದ ತತ್ ಕ್ಷಣ ವಿಮಾನ ನಿಲ್ದಾಣದಲ್ಲೇ ಪೊಲೀಸರಿಂದ ಬಂಧನ. ಏಪ್ರಿಲ್ 28: ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ದತ್. ಮೇ 5: ಬಾಂಬೆ ಹೈಕೋರ್ಟಿನಿಂದ ಮಧ್ಯಂತರ ಜಾಮೀನು. ನವೆಂಬರ್ 4: ಸಂಜಯ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ. ಜುಲೈ 4, 1994: ವಿಚಾರಣಾ ನ್ಯಾಯಾಲಯದಿಂದ ಜಾಮೀನು ರದ್ದು, ಮತ್ತೆ ಬಂಧನ. ಸೆಪ್ಟೆಂಬರ್ 11, 1995: ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯ. ಅಕ್ಟೋಬರ್ 16, 1995: ಸುಪ್ರೀಂಕೋರ್ಟಿನಿಂದ ಜಾಮೀನು. ಅಕ್ಟೋಬರ್ 18, 1995: ಹದಿನಾರು ತಿಂಗಳ ನಂತರ ಜೈಲಿನಿಂದ ಬಿಡುಗಡೆ. ಜುಲೈ 31, 2007: ಸಂಜಯ್ ದತ್ ಗೆ 6 ವರ್ಷ ಕಠಿಣ ಶಿಕ್ಷೆ ಪ್ರಕಟ. 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಸತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂಗತ ಜಗತ್ತಿನ ವ್ಯಕ್ತಿಗಳು ನೀಡಿದ್ದ ಶಸ್ತ್ರಾಸ್ತ್ರಗಳನ್ನು ಪಡೆದಿದ್ದ ಆರೋಪ ಬಾಲಿವುಡ್ ಚಿತ್ರನಟ ಸಂಜಯ್ ದತ್ ಮೇಲಿತ್ತು. ಸಂಜಯ್ ದತ್ ಗೆ ಎಕೆ-56 ರೈಫಲ್ ಹೊಂದಲು ನೆರವಾದ ಆರೋಪಿ ಯೂಸುಫ್ ನಲ್ ವಲ್ಲಾಗೆ ಐದು ವರ್ಷಗಳ ಸಜೆ ಮತ್ತು ಇನ್ನೊಬ್ಬ ಆರೋಪಿ ಕೇಸರಿ ಅಡ್ಜಾನಿಯಾಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಧೀಶ ಪಿ.ಡಿ. ಖೋಡೆ ವಿಧಿಸಿದರು.

2007: ಸೂರ್ಯ ಮುಳುಗದ ಸಾಮ್ರಾಜ್ಯ ಎಂಬುದಾಗಿ ಹೆಸರು ಪಡೆದಿದ್ದ ಇಂಗ್ಲೆಂಡಿನ ನಾಟಿಂಗ್ ಹ್ಯಾಮಿನ ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ಈದಿನ ರಾಹುಲ್ ದ್ರಾವಿಡ್ ಪಡೆ `ಟೀಮ್ ಇಂಡಿಯಾ' ಇಂಗ್ಲೆಂಡನ್ನು 1-0 ಅಂತರದಲ್ಲಿ ಪರಾಭವಗೊಳಿಸಿ ಸರಣಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿತು.

2007: ಆಂಧ್ರಪ್ರದೇಶದ ಸುಂಡೂರಿನಲ್ಲಿ 1991ರಲ್ಲಿ ನಡೆದ ದಲಿತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸ್ಥಳೀಯ ನ್ಯಾಯಾಲಯ 56 ಮಂದಿ ತಪ್ಪಿತಸ್ಥರೆಂದು ಘೋಷಿಸಿ, ಇತರ 123 ಮಂದಿಯನ್ನು ಖುಲಾಸೆಗೊಳಿಸಿತು. 1991 ರ ಆಗಸ್ಟ್ 6 ರಂದು ಗುಂಟೂರು ಜಿಲ್ಲೆಯಿಂದ 20 ಕಿ.ಮೀ. ದೂರದಲ್ಲಿರುವ ಸುಂಡೂರು ಗ್ರಾಮದಲ್ಲಿ ಎಂಟು ದಲಿತರನ್ನು ಹತ್ಯೆ ಮಾಡಲಾಗಿತ್ತು. ಸುಂಡೂರ್ ಹತ್ಯಾಕಾಂಡ ಎಂದೇ ಖ್ಯಾತಿ ಪಡೆದ ಈ ಪ್ರಕರಣದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಸಣ್ಣ ಮಟ್ಟಿನ ಹೊಡೆದಾಟ ಮತ್ತು ಮಾತಿನ ಚಕಮಕಿ ಎಂಟು ಮಂದಿ ದಲಿತರ ಹತ್ಯೆಯಲ್ಲಿ ಪರ್ಯವಸಾನಗೊಂಡಿತ್ತು.

2007: ಜೈಲಿನಲ್ಲಿ ಬಂಧಿಸಿಟ್ಟ ಉಗ್ರರನ್ನು ಬಿಡುಗಡೆ ಮಾಡಲು ಆಫ್ಘಾನಿಸ್ಥಾನ ಸರ್ಕಾರಕ್ಕೆ ನೀಡ್ದಿದ ಗಡುವು ಅಂತ್ಯಗೊಂಡದ್ದರಿಂದ, ತಾಲಿಬಾನ್ ಉಗ್ರರು ದಕ್ಷಿಣ ಕೊರಿಯಾದ ಒತ್ತೆಯಾಳು ಒಬ್ಬರನ್ನು ಗುಂಡಿಟ್ಟು ಕೊಂದರು. ಇದಕ್ಕೆ ಮೊದಲೇ ಒಬ್ಬ ಒತ್ತೆಯಾಳನ್ನು ಹತ್ಯೆ ಮಾಡಲಾಗಿತ್ತು. ಆಫ್ಘಾನಿಸ್ಥಾನದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದ 23 ಜನ ದಕ್ಷಿಣ ಕೊರಿಯಾ ನಾಗರಿಕರನ್ನು ತಾಲಿಬಾನ್ ಉಗ್ರರು ಜುಲೈ 19ರಂದು ಅಪಹರಿಸಿದ್ದರು. ಈ ಗುಂಪಿನಲ್ಲಿ 16 ಜನ ಮಹಿಳೆಯರಿದ್ದರು. ಕೊರಿಯಾ ತಂಡದ ನಾಯಕನನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

2006: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಡ ನಾಗರಿಕರನ್ನು ಪ್ರೇರೇಪಿಸಿದ ಮಾಹಿತಿ ಹಕ್ಕು ಆಂದೋಲನದ ಮುಂಚೂಣಿಯಲ್ಲಿರುವ ದೆಹಲಿ ಮೂಲದ `ಪರಿವರ್ತನ್' ನಾಗರಿಕ ಆಂದೋಲನ ಸಂಸ್ಥೆಯ ಮುಖ್ಯಸ್ಥ ಅರವಿಂದ ಕೇಜರಿವಾಲ (38) ಅವರು ಪ್ರಸ್ತುತ ವರ್ಷದ `ರೇಮನ್ ಮ್ಯಾಗ್ಸೆಸೆ' ಪ್ರಶಸ್ತಿಗೆ ಆಯ್ಕೆಯಾದರು. ಇವರ ಜೊತೆಗೆ ಸಂದುಕ್ ರುಯಿತ್ (ನೇಪಾಳ), ಎಕ್ ಸೊನ್ ಚಾನ್ (ಕಾಂಬೋಡಿಯಾ), ಪಾರ್ಕ್ ವಾನ್ ಸೂನ್ (ದಕ್ಷಿಣ ಕೊರಿಯ) ಹಾಗೂ ಇಗೇನಿಯಾ ದುರಾನ್ ಅಪೊಸ್ತೊಲ್ ಮತ್ತು ಅಂಟೋನಿಯೊ ಮೆಲೊಟೊ (ಇಬ್ಬರೂ ಫಿಲಿಪ್ಪೀನ್ಸ್ನವರು) ಅವರು `ಏಷ್ಯಾದ ನೊಬೆಲ್ ಪಾರಿತೋಷಕ' ಎಂದೇ ಖ್ಯಾತಿ ಪಡೆದಿರುವ ಈ ಪ್ರಶಸ್ತಿಗೆ ಆಯ್ಕೆಯಾದರು.

2006: ನಾಲ್ಕು ತಿಂಗಳ ರಾಜಕೀಯ ಬಿರುಗಾಳಿಗೆ ತೆರೆ ಎಳೆಯುವ ಉದ್ದೇಶದ ವಿವಾದಾತ್ಮಕ `ಲಾಭದ ಹುದ್ದೆ' ಮಸೂದೆಯನ್ನು ಲೋಕಸಭೆಯು ಈದಿನ ಪ್ರತಿಪಕ್ಷ ಸದಸ್ಯರ ತೀವ್ರ ವಿರೋಧದ ಮಧ್ಯೆ ಮೂಲ ಸ್ವರೂಪದಲ್ಲಿಯೇ ಮತ್ತೆ ಅಂಗೀಕರಿಸಿತು. 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮತ್ತು ಅನರ್ಹತೆ ಭೀತಿ ಎದುರಿಸುತ್ತಿದ್ದ 40 ಸಂಸದರನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ಮಸೂದೆಯನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಸಂಸತ್ತಿಗೆ ವಾಪಸ್ ಕಳುಹಿಸಿದ್ದರು. ಈ ಮಸೂದೆಯನ್ನು ಅದೇ ಸ್ವರೂಪದಲ್ಲಿ ಸಂಸತ್ತು 230-71 ಮತಗಳ ಅಂತರದೊಂದಿಗೆ ಅಂಗೀಕರಿಸಿತು.

2006: ಮೈಸೂರಿನ ತನ್ನ ಆವರಣದಲ್ಲಿ `ನಾಸ್ಡಾಕ್' ಶಾಖೆಯನ್ನು ತೆರೆಯುವ ಮೂಲಕ ಅಮೆರಿಕದ `ನಾಸ್ಡಾಕ್' ಷೇರು ಮಾರುಕಟ್ಟೆಯನ್ನು ಅಮೆರಿಕದಿಂದ ಹೊರಗೆ ಆರಂಭಿಸಿದ ಏಷ್ಯ- ಫೆಸಿಫಿಕ್ ಪ್ರದೇಶದ ಮೊತ್ತ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಪಾತ್ರವಾಯಿತು. ಮೈಸೂರನ್ನು ಬಿಟ್ಟರೆ ಅಮೆರಿಕದಿಂದ ಹೊರಗೆ `ನಾಸ್ಡಾಕ್' ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆ ಇರುವುದು ಲಂಡನ್ ಮತ್ತು ದಾವೋಸ್ ಗಳಿಗೆ ಮಾತ್ರ. `ನಾಸ್ಡಾಕ್' ಅತ್ಯಂತ ದೊಡ್ಡದಾದ ಅಮೆರಿಕದ ಎಲೆಕ್ಟ್ರಾನಿಕ್ ಷೇರು ಮಾರುಕಟ್ಟೆಯಾಗಿದ್ದು 3200 ಕಂಪೆನಿಗಳು ಅದರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

2006: ಸೂರ್ಯಕಾಂತಿ ಕಳಪೆ ಬೀಜದಿಂದ ನಷ್ಟ ಅನುಭವಿಸಿದ ರೈತನಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬಹುರಾಷ್ಟ್ರೀಯ ಮಾನ್ಸಾಂಟೊ ಕಂಪೆನಿಗೆ ಆಂಕೋಲಾದ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿತು.

1997: ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್ಪಿ) ರಾಷ್ಟ್ರೀಯ ಪಕ್ಷಕ್ಕೆ ಮಾನ್ಯತೆ ನೀಡಲು ಚುನಾವಣಾ ಆಯೋಗ ಸಮ್ಮತಿಸಿತು.

1982: ಫ್ರಾನ್ಸಿನಲ್ಲಿ ಎರಡು ಬಸ್ಸು ಮತ್ತು ಹಲವು ಕಾರುಗಳ ಡಿಕ್ಕಿಯಾಗಿ 46 ಮಕ್ಕಳೂ ಸೇರಿದಂತೆ 53 ಜನ ಮೃತರಾದರು.

1925: ಇಂಗ್ಲೆಂಡಿನಲ್ಲಿ ನಿರುದ್ಯೋಗ ವಿಮೆ ಕಾಯಿದೆಗೆ ಅಂಗೀಕಾರ ನೀಡಲಾಯಿತು.

1916: ಸಾಹಿತಿ ಶಾರದಾ ಗೋಕಾಕ್ ಜನನ.

1903: ಮಧುರ ಚೆನ್ನ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಖ್ಯಾತಿ ಪಡೆದಿದ್ದ ಚೆನ್ನಮಲ್ಲಪ್ಪ ಗಲಗಲಿ (31-7-1903ರಿಂದ 15-8-1953) ಅವರು ಸಿದ್ದಲಿಂಗಪ್ಪ - ಅಂಬವ್ವ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯ ಹಿರೇಲೋಣಿಯಲ್ಲಿ ಜನಿಸಿದರು.

1861: ಅಸ್ಸಾಮಿನ ಚಿರಾಪುಂಜಿಯಲ್ಲಿ 19,300 ಮಿ.ಮೀ. ಮಳೆ ಸುರಿದದ್ದು ವಿಶ್ವ ದಾಖಲೆಯಾಯಿತು. (ಈಗ ಚಿರಾಪುಂಜಿಯ ಹೆಸರು 'ಸೊಹರಾ' ಎಂಬುದಾಗಿ ಬದಲಾಗಿದೆ).

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement